9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ – Kannada News | India’s WTC 2027 Final qualification scenario

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಲೆಕ್ಕಾಚಾರಗಳು ಶುರುವಾಗಿದೆ.ಪ್ರಸ್ತುತ ಸಮೀಕರಣಗಳ ಪ್ರಕಾರ, ಭಾರತ ತಂಡವು ತನ್ನ ಮುಂದಿನ 9 ಪಂದ್ಯಗಳಲ್ಲೂ ಜಯ ಸಾಧಿಸಿದರೆ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಫೈನಲ್‌ಗೆ ಲಗ್ಗೆ ಇಡಬಹುದು. ಆದರೆ, ಈ ಹಾದಿ ಅಷ್ಟು ಸುಲಭವಲ್ಲ, ಇಲ್ಲಿ ಟೀಮ್ ಇಂಡಿಯಾದ ಎದುರಾಳಿಗಳ ಬಲಿಷ್ಠತೆಯನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಟೀಮ್ ಇಂಡಿಯಾದ ಪ್ರಸ್ತುತ ಸ್ಥಿತಿ:

ಸದ್ಯದ ಅಂಕಪಟ್ಟಿಯಲ್ಲಿ ಭಾರತ 48.15% ಪಾಯಿಂಟ್ಸ್ ಪರ್ಸೆಂಟೇಜ್ (PCT) ನೊಂದಿಗೆ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಕನಿಷ್ಠ 60% ಪ್ಲಸ್ PCT ಸುರಕ್ಷಿತ ವಲಯ. ಇದನ್ನು ತಲುಪಲು ಭಾರತ ತಂಡಕ್ಕೆ ಈಗ ಉಳಿದಿರುವುದು ಕೇವಲ 9 ಟೆಸ್ಟ್ ಪಂದ್ಯಗಳು ಮಾತ್ರ.

  • ಉಳಿದಿರುವ ಪಂದ್ಯಗಳು: 9 ಟೆಸ್ಟ್
  • ಅಗತ್ಯವಿರುವ ಗೆಲುವುಗಳು: ಕನಿಷ್ಠ 7 ಪಂದ್ಯಗಳು.

ಮುಂದಿರುವ ಸವಾಲುಗಳು:

  • ಶ್ರೀಲಂಕಾ ಪ್ರವಾಸ (ಆಗಸ್ಟ್ 2026): ಲಂಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧಿಸಲೇಬೇಕು.
  • ನ್ಯೂಝಿಲೆಂಡ್ ಪ್ರವಾಸ (ನವೆಂಬರ್ 2026): ಕಿವೀಸ್ ನಾಡಿನಲ್ಲಿ 2 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಬೇಕು.
  • ಬಾರ್ಡರ್-ಗವಾಸ್ಕರ್ ಟ್ರೋಫಿ (ಜನವರಿ-ಫೆಬ್ರವರಿ 2027): ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ಗಳ ಮಹಾಸಮರ. ಕಾಂಗರೂಗಳನ್ನು ಧೂಳೀಪಟ ಮಾಡುವುದು ಅನಿವಾರ್ಯ.

ಟೀಮ್ ಇಂಡಿಯಾ ಲೆಕ್ಕಾಚಾರ:

ಭಾರತ ಸದ್ಯದ ಸ್ಥಿತಿಯಿಂದ ಸುಮಾರು 60% PCT ಸುರಕ್ಷಿತ ವಲಯ ತಲುಪಲು ಇನ್ನುಳಿದ 9 ಟೆಸ್ಟ್ ಪಂದ್ಯಗಳಿಂದ ಕನಿಷ್ಠ 78 ಪಾಯಿಂಟ್ಸ್ ಗಳಿಸಬೇಕು. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಿಯಮದಂತೆ ಪ್ರತಿ ಗೆಲುವಿಗೆ 12 ಪಾಯಿಂಟ್ಸ್ ಮತ್ತು ಡ್ರಾ ಸಾಧಿಸಿದರೆ 4 ಪಾಯಿಂಟ್ಸ್ ಸಿಗುತ್ತವೆ. ಅದರಂತೆ ಟೀಮ್ ಇಂಡಿಯಾದ ಲೆಕ್ಕಾಚಾರ ಈ ಕೆಳಗಿನಂತಿದೆ…

  • 9 ಗೆಲುವು (74% PCT): ಇನ್ನುಳಿದ ಎಲ್ಲಾ 9 ಪಂದ್ಯಗಳನ್ನೂ ಗೆದ್ದರೆ ಭಾರತ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.
  • 8 ಗೆಲುವು + 1 ಸೋಲು (68.5% PCT): ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಹಾಗೂ 1 ಸೋಲನುಭವಿಸಿದರೂ ಫೈನಲ್ ತಲುಪುವ ಸಾಧ್ಯತೆ ಶೇ. 99ರಷ್ಟಿರುತ್ತದೆ.
  • 7 ಗೆಲುವು + 2 ಸೋಲು (63% PCT): ಟೀಮ್ ಇಂಡಿಯಾ ಮುಂದಿನ 9 ಮ್ಯಾಚ್​ಗಳಲ್ಲಿ 2 ಸೋಲುಂಡು, 7 ರಲ್ಲಿ ಜಯ ಸಾಧಿಸಿದರೂ 63% PCT ಯೊಂದಿಗೆ ಫೈನಲ್​ಗೇರಬಹುದು.
  • 6 ಗೆಲುವು + 2 ಡ್ರಾ + 1 ಸೋಲು (59% PCT):  ಟೀಮ್ ಇಂಡಿಯಾ ಮುಂದಿನ 9 ಮ್ಯಾಚ್​ಗಳಲ್ಲಿ 2 ಡ್ರಾ ಹಾಗೂ 1 ಪಂದ್ಯದಲ್ಲಿ ಸೋಲು ಕಂಡರೆ, ಫೈನಲ್​ ಹಾದಿ ಕಠಿಣವಾಗುತ್ತದೆ. ಅಂದರೆ 59% PCT ಯೊಂದಿಗೆ ಫೈನಲ್​ಗೆ ತಲುಪಬೇಕಿದ್ದರೆ ಅಂಕ ಪಟ್ಟಿಯಲ್ಲಿ ಮೇಲಿರುವ ಇತರ ತಂಡಗಳು (ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಇತ್ಯಾದಿ) ತಮ್ಮ ಪಂದ್ಯಗಳಲ್ಲಿ ಸೋಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕಾಗುತ್ತದೆ.

ಇದನ್ನೂ ಓದಿ: ರಾಕಿ ಎಂಟ್ರಿ… 136 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾ ಮುಂದಿರುವ ಹಾದಿ ಕೇವಲ ಕಠಿಣವಲ್ಲ, ಅಕ್ಷರಶಃ ಮುಳ್ಳಿನ ಹಾಸಿಗೆಯಾಗಿದೆ. ರೋಹಿತ್-ಕೊಹ್ಲಿ ಯುಗದ ನಂತರದ ಈ ಪರಿವರ್ತನಾ ಹಂತದಲ್ಲಿ, ಗಂಭೀರ್ ಅವರ ತಂತ್ರಗಾರಿಕೆ ಹಾಗೂ ಶುಭ್‌ಮನ್ ಗಿಲ್ ಅವರ ನಾಯಕತ್ವಕ್ಕೆ ಇದಕ್ಕಿಂತ ದೊಡ್ಡ ಸವಾಲು ಮತ್ತೊಂದಿಲ್ಲ. ಪ್ರತಿ ಪಂದ್ಯವೂ ‘ಡು ಆರ್ ಡೈ’ ಎಂಬಂತಾಗಿರುವ ಈ ಪರಿಸ್ಥಿತಿಯಲ್ಲಿ ಯುವ ಭಾರತ ಪಡೆ ಇತಿಹಾಸ ಸೃಷ್ಟಿಸಿ, ಲಂಡನ್‌ನ ‘ದಿ ಓವಲ್’ ಮೈದಾನಕ್ಕೆ ಲಗ್ಗೆ ಇಡುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

Source link

ಹೇಮಾವತಿ ಕೆನಾಲ್ ವಿವಾದ: ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ – Kannada News | Hemavathi Linking Canal Row: Farmers Protest by Lying in Front of DyCM Parameshwara’s Car

ತುಮಕೂರು, ಆಗಸ್ಟ್​​ 12: ತುಮಕೂರಿನಲ್ಲಿ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿವಾದ ತಾರಕಕ್ಕೇರಿದ್ದು,
ಕಾಮಗಾರಿ ಸಂಬಂಧ ಪರ-ವಿರೋಧ ಹೋರಾಟಗಳು ತೀವ್ರಗೊಂಡಿವೆ. ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಕುಣಿಗಲ್ ರೈತರು, ಬರ ವೀಕ್ಷಣೆಗಾಗಿ ತೆರಳುತ್ತಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶೀಘ್ರದಲ್ಲೇ ಕಾಮಗಾರಿ ಆರಂಭ ಮಾಡೊದಾಗಿ ಭರವಸೆ ನೀಡುವ ಮೂಲಕ ಡಿಸಿಎಂ ರೈತರ ಮನವೊಲಿಸಿದ್ದು, ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಯೋಧ್ಯೆ ಮಂದಿರಕ್ಕೆ ಬೇಕಾಗಿದ್ದಾರೆ ‘ಕಟ್ಟಾ ಹಿಂದೂ’ ಸಿಇಒ: ಜನಿವಾರ ಧರಿಸುತ್ತೀರಾ, ಸಸ್ಯಾಹಾರಿಯೇ? ಗೂಗಲ್ ಫಾರ್ಮ್‌ನಲ್ಲಿ ಧಾರ್ಮಿಕ ಪ್ರಶ್ನೆ – Kannada News | Ram Janmabhoomi Trust CEO Search: Hinduism and Lifestyle Key Interview Factors

ಅಯೋಧ್ಯೆ, ಆ.12: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಮಂಗಳವಾರ ನಡೆದ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಅವರ ಆಡಳಿತಾತ್ಮಕ ಅನುಭವದ ಜೊತೆಗೆ ಧಾರ್ಮಿಕ ಆಚರಣೆ, ಜೀವನಶೈಲಿ ಮತ್ತು ಹಿಂದುತ್ವದ ಆಧಾರದ ಮೇಲೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ.

ಸುಮಾರು 5,200 ಅರ್ಜಿಗಳ ಪೈಕಿ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಸಂದರ್ಶನಕ್ಕೆ ಹಾಜರಾಗುವ ಮುನ್ನ ಎಲ್ಲಾ ಅಭ್ಯರ್ಥಿಗಳಿಗೆ 34 ಅಂಶಗಳ ಗೂಗಲ್ ಫಾರ್ಮ್ ಭರ್ತಿ ಮಾಡಲು ಸೂಚಿಸಲಾಗಿತ್ತು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅಭ್ಯರ್ಥಿಗಳಿಗೆ ವೈಯಕ್ತಿಕ ಹಾಗೂ ಧಾರ್ಮಿಕ ಜೀವನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿದೆ.

  • ನೀವು ಶಿಕಾ (ಜಟಾ/ಕುಡುಮಿ) ಇಟ್ಟುಕೊಳ್ಳುತ್ತೀರಾ? ಜನಿವಾರ (ಪವಿತ್ರ ದಾರ) ಧರಿಸುತ್ತೀರಾ?
  • ನೀವು ಶುದ್ಧ ಸಸ್ಯಾಹಾರಿಯೇ ಅಥವಾ ಮಾಂಸಹಾರ ಸೇವಿಸುತ್ತೀರಾ?
  • ಮದ್ಯಪಾನ ಸೇವಿಸುತ್ತೀರಾ ಅಥವಾ ಪೂರ್ಣವಾಗಿ ಮಧ್ಯವರ್ಜಿತರೇ?
  • ನೀವು ಕಟ್ಟಾ ಹಿಂದೂವೇ? ಶ್ರೀರಾಮನ ಮೇಲೆ ನಿಮಗಿರುವ ಭಕ್ತಿ ಎಂಥದ್ದು?
  • ಹಿಂದೂ ಧಾರ್ಮಿಕ ಸಂಪ್ರದಾಯದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ನೀವು ಸಿದ್ಧರಿದ್ದೀರಾ?
  • ಈ ಹಿಂದೆ ಎಲ್ಲಿ ಕೆಲಸ ಮಾಡಿದ್ದೀರಿ? ಬೃಹತ್ ಪ್ರಮಾಣದ ಜನಸ್ತೋಮ/ಸಮುದಾಯವನ್ನು ನಿರ್ವಹಿಸಿದ ಅನುಭವವಿದೆಯೇ? ನಿಮ್ಮ ಕುಟುಂಬದ ಹಿನ್ನೆಲೆ ಏನು?

ಇದನ್ನೂ ಓದಿ: ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ

ಆಯ್ಕೆಯಾದ 18 ಅಭ್ಯರ್ಥಿಗಳಲ್ಲಿ ನಾಲ್ವರು ವಿಶ್ರಾಂತ ಐಎಎಸ್ ಅಧಿಕಾರಿಗಳು, ಐಪಿಎಸ್ ಹಾಗೂ ಸೇನಾ ಮಾಜಿ ಅಧಿಕಾರಿಗಳು ಸೇರಿದ್ದಾರೆ. ಮಂಗಳವಾರ 8 ಅಭ್ಯರ್ಥಿಗಳು ಮುಖಾಮುಖಿ ನೇರ ಸಂದರ್ಶನಕ್ಕೆ ಹಾಜರಾಗಿದ್ದು, ಪ್ರತಿಯೊಬ್ಬರ ಸಂದರ್ಶನ 1 ರಿಂದ 2 ಗಂಟೆಗಳ ಕಾಲ ನಡೆಯಿತು.ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಹಾಗೂ ಸುರೇಶ್ ಹಾವರೆ ಅವರನ್ನೊಳಗೊಂಡ ಉನ್ನತ ಸಮಿತಿಯು ಈ ಸಂದರ್ಶನ ನಡೆಸುತ್ತಿದೆ. ಆಯ್ಕೆ ಸಮಿತಿಯು ಸೆಪ್ಟೆಂಬರ್ 2 ರೊಳಗೆ 3 ಪ್ರಮುಖ ಹೆಸರುಗಳನ್ನು ಟ್ರಸ್ಟ್‌ಗೆ ಶಿಫಾರಸು ಮಾಡಲಿದ್ದು, ಅದರಲ್ಲಿ ಒಬ್ಬರನ್ನು ಅಂತಿಮ ಸಿಇಒ ಆಗಿ ಆಯ್ಕೆ ಮಾಡಲಾಗುತ್ತದೆ.

ಇತ್ತೀಚೆಗೆ ರಾಮಮಂದಿರದ ದೇಣಿಗೆ ಹಣದ ದುರುಪಯೋಗ ಮತ್ತು ಆರ್ಥಿಕ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಆಡಳಿತ ಹಾಗೂ ಹಣಕಾಸು ನಿರ್ವಹಣೆಯನ್ನು ಪಾರದರ್ಶಕವಾಗಿ ನಡೆಸಲು ಈ ಪೂರ್ಣಕಾಲಿಕ ಸಿಇಒ ಹುದ್ದೆಯನ್ನು ಸೃಷ್ಟಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಗ್ಗೆ ನಟಿಯ ಟಾಕ್ಸಿಕ್ ನುಡಿ, ‘ಜಾಗ ಖಾಲಿ ಮಾಡಿಸುವೆ’ ಎಂದು ಯಶ್​​ಗೆ ಎಚ್ಚರಿಕೆ – Kannada News | Rishika Singh criticized Yash for intimate scenes in Toxic trailer

ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಟ್ರೈಲರ್ ಅನ್ನು ಪ್ರೇಕ್ಷಕರು ಬಹುವಾಗಿ ಕೊಂಡಾಡುತ್ತಿದ್ದಾರೆ. ನಿಜವಾಗಿಯೂ ಹಾಲಿವುಡ್ ಲೆವೆಲ್ ಎಂದರೆ ಇದು ಎನ್ನುತ್ತಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾನಲ್ಲಿ ನಟಿಸಿರುವ ಐದೂ ಜನ ನಟಿಯರು ಸಹ ಭಾಗಿ ಆಗಿದ್ದರು. ಎಲ್ಲರೂ ವೇದಿಕೆ ಏರಿ ಸಿನಿಮಾದ ಬಗ್ಗೆ ಖುಷಿ ಹಂಚಿಕೊಂಡರು, ಯಶ್ ಜೊತೆಗೆ ನಟಿಸಿದ್ದು ಅದ್ಭುತ ಅನುಭವ ಎಂದರು. ಆದರೆ ಇದೀಗ ಕನ್ನಡದ ನಟಿಯೊಬ್ಬರು ‘ಟಾಕ್ಸಿಕ್’ ಬಗ್ಗೆ ತಗಾದೆ ತೆಗೆದಿದ್ದಾರೆ. ‘ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ ಎಂದು ಯಶ್​​ ಅನ್ನುದ್ದೇಶಿಸಿ ಡೈಲಾಗ್ ಹೊಡೆದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟಿ ರಿಷಿಕಾ ಸಿಂಗ್, ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಟ್ರೈಲರ್ ಬಗ್ಗೆ ಋಣಾತ್ಮಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎಚ್ಚರಿಕೆ ಕೊಡುವ ರೀತಿಯಲ್ಲಿ ಟ್ರೈಲರ್​​ನ ವಿಮರ್ಶೆಯನ್ನು ನಟಿ ರಿಷಿಕಾ ಮಾಡಿದ್ದಾರೆ.

‘ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ, ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಂಗೆ ಇಷ್ಟ ಆಗ್ಲಿಲ್ಲ ನಿನ್ನ ಹೊಸ ಗಂಧ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ‘ಟಾಕ್ಸಿಕ್’’ ಎಂದು ರಿಷಿಕಾ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?

ರಿಷಿಕಾ ಅವರ ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ರಿಷಿಕಾರನ್ನು ಟ್ರೋಲ್ ಮಾಡುತ್ತಿದ್ದು, ಅವರ ಅಭಿಪ್ರಾಯ ತಪ್ಪು ಎಂದಿದ್ದಾರೆ. ‘ಖುದ್ದು ನಟಿಯರೇ ವೇದಿಕೆಗೆ ಬಂದು ತಮಗೆ ಯಶ್ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದಿದ್ದಾರೆ. ಚಿತ್ರತಂಡದ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ. ಹಾಗಿದ್ದಮೇಲೆ ಇವರಿಗೇನು ಸಮಸ್ಯೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು, ‘ನಟಿಯರು ಒಪ್ಪಂದದ ಪ್ರಕಾರ ಒಪ್ಪಿಯೇ, ಸಂಭಾವನೆ ಪಡೆದು ಅವರ ಮಿತಿಗಳ ನಡುವೆಯೇ ನಟಿಸಿದ್ದಾರೆ. ಅದರ ಬಗ್ಗೆ ಪ್ರಶ್ನೆ ಮಾಡುವುದು ಏಕೆ?’ ಎಂದಿದ್ದಾರೆ.

ಇನ್ನು ಕೆಲವರು ನಟಿ ರಿಷಿಕಾ ಅವರು ಸಿನಿಮಾನಲ್ಲಿ ನಟಿಸುವಾಗ ಧರಿಸಿದ್ದ ಬಿಕಿನಿ ಸೀನ್​​ಗಳ ಸ್ಕ್ರೀನ್​​ ಶಾಟ್​​ಗಳನ್ನು ಹಂಚಿಕೊಂಡಿದ್ದಾರೆ. ಕೆಲ ಹಾಟ್ ಫೋಟೊಗಳನ್ನು ಹಂಚಿಕೊಂಡು, ‘ಇದು ಸಂಸ್ಕಾರವೇ?’ ಎಂದು ಪ್ರಶ್ನಿಸಿದ್ದಾರೆ. ಯಶ್ ಅವರನ್ನು ಪ್ರಶ್ನಿಸಿದ್ದಕ್ಕೆ, ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ ಎಂದಿದ್ದಕ್ಕೆ ಕೆಲ ಯಶ್ ಅಭಿಮಾನಿಗಳು ಆಕ್ರೋಶದ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.

ರಿಷಿಕಾ ಸಿಂಗ್ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ದುನಿಯಾ ವಿಜಿ ಜೊತೆಗೆ 2011 ರಲ್ಲಿ ಬಂದ ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ತುಂಟರು’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಮೊದಲ ಬಿಗ್​​ಬಾಸ್​​ನಲ್ಲಿ ಅವರು ಸ್ಪರ್ಧಿ ಸಹ ಆಗಿದ್ದರು. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ನಟ ಆದಿತ್ಯ ಅವರ ಸಹೋದರಿ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:05 am, Wed, 12 August 26

Source link

ರಾಕಿ ಎಂಟ್ರಿ… 136 ವರ್ಷಗಳ ಹಳೆಯ ದಾಖಲೆ ಧೂಳೀಪಟ! – Kannada News | Rocky Flintoff’s Entry Shatters 136 Year Old Historic Record!

ಈ ಶತಕದೊಂದಿಗೆ ರಾಕಿ ಫ್ಲಿಂಟಾಫ್ (18 ವರ್ಷ, 126 ದಿನಗಳು) ಲಂಕಾಷೈರ್ ಕ್ರಿಕೆಟ್ ಕ್ಲಬ್ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೋಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಾನ್ ಕ್ರಾಸ್​ಲ್ಯಾಂಡ್ ಹೆಸರಿನಲ್ಲಿತ್ತು. (PC: Lancashire CCC)

Source link

ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ಪ್ರಧಾನಿ ಮೋದಿ – Kannada News | Youth Are Not Just India’s Future, But Its Greatest Present Strength: PM Modi on International Youth Day

ನವದೆಹಲಿ, ಆಗಸ್ಟ್​​ 12: ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ಯುವಜನತೆಯ ಅಗತ್ಯವಿದೆ ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು (ಆಗಸ್ಟ್​​ 12) ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆ ಯಂಗ್​​ ಜನರೇಷನ್​​ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿಯೂ ಆಗಿದ್ದಾರೆ. ತಮ್ಮ ಸಂವೇದನಾಶೀಲತೆ, ಸೇವಾ ಮನೋಭಾವ ಮತ್ತು ಸಾಮರ್ಥ್ಯದ ಮೂಲಕ ಅವರು ವಿಶ್ವದಾದ್ಯಂತ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮೋದಿ ಪೋಸ್ಟ್​​ನಲ್ಲಿ ಏನಿದೆ?

ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್, ಪ್ರಸಾದಯತಿ ಯೋ ಲೋಕಂ ತಂ ಲೋಕೋಽನುಪ್ರಸೀದತಿ ಎಂಬ ಸಾಲುಗಳಿರುವ ಶ್ಲೋಕವನ್ನು ಮೋದಿ ಹಂಚಿಕೊಂಡಿದ್ದಾರೆ. ದೃಷ್ಟಿ, ಮನಸ್ಸು, ಮಾತು ಮತ್ತು ಕಾರ್ಯ ಈ ನಾಲ್ಕು ಮಾರ್ಗಗಳ ಮೂಲಕ ಜನರ ಮನ ಗೆಲ್ಲುವ ವ್ಯಕ್ತಿಗೆ ಪ್ರತಿಯಾಗಿ ಸಮಾಜವು ವಿಶ್ವಾಸ, ಗೌರವ ಮತ್ತು ಸದ್ಭಾವನೆಯನ್ನು ನೀಡುತ್ತದೆ ಎಂಬುದು ಇದರ ಅರ್ಥವಾಗಿದೆ.

ಇದನ್ನೂ ಓದಿ:  ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್

ಗುರಿ ಸಾಧಿಸಲು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಯುವಕರು ತಾವು ಮಾಡುವ ಸಣ್ಣ ಕೆಲಸಗಳು ಸಹ ನಾಳೆ ದೇಶದ ಭವಿಷ್ಯವನ್ನು ನಿರ್ಣಯಿಸುತ್ತವೆ. ದೇಶದ ಯುವಶಕ್ತಿ ಇಂದು ಕೇವಲ ಕನಸು ಕಾಣುತ್ತಿಲ್ಲ, ಬದಲಿಗೆ ದೇಶವನ್ನು ಆರ್ಥಿಕ ಹಾಗೂ ತಾಂತ್ರಿಕವಾಗಿ ಸ್ವಾವಲಂಬನೆಯತ್ತ ಕೊಂಡೊಯ್ಯುವ ಮೂಲಕ ಸ್ವತಃ ನಿರ್ಮಿಸುತ್ತಿದ್ದಾರೆ. ಹೊಸ ತಂತ್ರಜ್ಞಾನ, ನಾವೀನ್ಯತೆ (Innovation) ಮತ್ತು ದೇಶದ ಆರ್ಥಿಕ ಸ್ವಾವಲಂಬನೆಯಲ್ಲಿ ಯುವಕರ ಪಾತ್ರ ನಿರ್ಣಾಯಕ ಎಂದು ಕೂಡ ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:15 am, Wed, 12 August 26

Source link

Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ! – Kannada News | Indian Independence Year Is It 79th Or 80th Independence Day? All You Need To Know in Kannada

ಭಾರತ ಸ್ವಾತಂತ್ರ್ಯ ದಿನImage Credit source: Pratik Chorge/HT via Getty Images

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ದಿನ 1947ರ ಆಗಸ್ಟ್ 15. ಪ್ರತಿವರ್ಷ ಆಗಸ್ಟ್ 15ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ 2026ರ ಸ್ವಾತಂತ್ರ್ಯ ದಿನವನ್ನು 79ನೇ ಅಥವಾ 80ನೇ ಸ್ವಾತಂತ್ರ್ಯ ದಿನ ಎಂದು ಕರೆಯಬೇಕೇ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

2026ರಲ್ಲಿ ಭಾರತ ಎಷ್ಟನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ?

2026ರ ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. 1947ರ ಆಗಸ್ಟ್ 15ರಂದು ದೇಶದ ಮೊದಲ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಹೀಗಾಗಿ 1947ರ ಆಚರಣೆಯನ್ನು ಮೊದಲನೆಯದು ಎಂದು ಪರಿಗಣಿಸಿದರೆ, 2026ರ ಆಗಸ್ಟ್ 15 80ನೇ ಸ್ವಾತಂತ್ರ್ಯ ದಿನವಾಗುತ್ತದೆ.

ಸರಳವಾಗಿ ಲೆಕ್ಕ ಹಾಕುವುದಾದರೆ:

2026 – 1947 = 79 ವರ್ಷ

ಇದು ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಪೂರ್ಣಗೊಂಡಿರುವ 79 ವರ್ಷಗಳ ಅವಧಿ. ಆದರೆ 1947ರ ಆಗಸ್ಟ್ 15ರ ಆಚರಣೆಯನ್ನು ಮೊದಲ ಸ್ವಾತಂತ್ರ್ಯ ದಿನವೆಂದು ಪರಿಗಣಿಸುವುದರಿಂದ 2026ರ ಆಚರಣೆ 80ನೇ ಸ್ವಾತಂತ್ರ್ಯ ದಿನವಾಗುತ್ತದೆ.

79 ವರ್ಷ ಪೂರ್ಣ, 80ನೇ ಸ್ವಾತಂತ್ರ್ಯ ದಿನ:

ಇದನ್ನು ಇನ್ನಷ್ಟು ಸರಳವಾಗಿ ಅರ್ಥಮಾಡಿಕೊಳ್ಳುವುದಾದರೆ, 1947ರಿಂದ 2026ರವರೆಗೆ ಭಾರತವು ಸ್ವಾತಂತ್ರ್ಯ ಪಡೆದಿರುವುದಕ್ಕೆ 79 ವರ್ಷಗಳು ಪೂರ್ಣಗೊಳ್ಳುತ್ತವೆ. ಆದರೆ ಸ್ವಾತಂತ್ರ್ಯ ದಿನದ ಆಚರಣೆಗಳ ಸಂಖ್ಯೆಯನ್ನು ಎಣಿಸಿದಾಗ 1947ರ ಮೊದಲ ಆಚರಣೆಯಿಂದ ಆರಂಭಿಸಿ 2026ರಲ್ಲಿ 80ನೇ ಆಚರಣೆ ನಡೆಯುತ್ತದೆ.

ಉದಾಹರಣೆಗೆ, 1947ರಲ್ಲಿ ಮೊದಲ ಸ್ವಾತಂತ್ರ್ಯ ದಿನ, 1948ರಲ್ಲಿ ಎರಡನೇ ಸ್ವಾತಂತ್ರ್ಯ ದಿನ, 1949ರಲ್ಲಿ ಮೂರನೇ ಸ್ವಾತಂತ್ರ್ಯ ದಿನ ಹೀಗೆ ಮುಂದುವರಿದು 2025ರಲ್ಲಿ 79ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಇದೀಗ 2026ರಲ್ಲಿ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ.

2026ರ ಸ್ವಾತಂತ್ರ್ಯ ದಿನದ ಮಹತ್ವ:

2026ರ ಆಗಸ್ಟ್ 15 ಭಾರತಕ್ಕೆ ವಿಶೇಷ ದಿನವಾಗಿದೆ. ದೇಶವು ಸ್ವಾತಂತ್ರ್ಯ ಪಡೆದ ನಂತರ 79 ವರ್ಷಗಳನ್ನು ಪೂರ್ಣಗೊಳಿಸಿ 80ನೇ ಸ್ವಾತಂತ್ರ್ಯ ದಿನದ ಸಂಭ್ರಮಕ್ಕೆ ಕಾಲಿಡುತ್ತಿದೆ. ದೇಶಾದ್ಯಂತ ರಾಷ್ಟ್ರಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಹೀಗಾಗಿ “2026ರಲ್ಲಿ ಭಾರತಕ್ಕೆ 79 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಂಡಿದೆ” ಎನ್ನುವುದು ಸರಿಯಾದ ಹೇಳಿಕೆ. ಆದರೆ “2026ರ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ” ಎನ್ನುವುದು ಸ್ವಾತಂತ್ರ್ಯ ದಿನದ ಆಚರಣೆಯ ಕ್ರಮಾಂಕದ ದೃಷ್ಟಿಯಿಂದ ಸರಿಯಾದದ್ದು.

ಇದನ್ನೂ ಓದಿ: ಜೀವನದಲ್ಲಿ ಸಂತೋಷವಾಗಿರಲು ಈ ಸಿಂಪಲ್‌ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಈ ವರ್ಷದ ಪ್ರಮುಖ ಧ್ಯೇಯವಾಕ್ಯ (Theme):

ಈ ವರ್ಷದ ಆಚರಣೆಯು “ವಿಕಸಿತ ಭಾರತ@2047 ಕ್ಕಾಗಿ ಯುವಶಕ್ತಿ” (Yuva Shakti for Viksit Bharat@2047) ಎಂಬ ಪ್ರಮುಖ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಇದು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವಜನರ ಪಾತ್ರ, ತಂತ್ರಜ್ಞಾನ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಸರಳವಾಗಿ ನೆನಪಿಟ್ಟುಕೊಳ್ಳಲು: 2026ರಲ್ಲಿ ನಾವು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿರುವುದು 80ನೇ ಸ್ವಾತಂತ್ರ್ಯ ದಿನಾಚರಣೆ, ಆದರೆ ಭಾರತೀಯರಾಗಿ ನಾವು ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡು ಪೂರ್ಣಗೊಳಿಸಿರುವುದು 79 ವರ್ಷಗಳು!

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Elephant Day 2026: ಅರಣ್ಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಆನೆಗಳ ಪಾತ್ರ ಅಪಾರ – Kannada News | World Elephant Day 2026: What is the significance of World Elephant Day?

ಗಾತ್ರದಲ್ಲಿ ದೈತ್ಯವಾಗಿದ್ದರೂ ಆನೆಗಳು (Elephant) ತುಂಬಾ ಸೌಮ್ಯ ಸ್ವಭಾವದ ಪ್ರಾಣಿ. ಅಷ್ಟೇ ಅಲ್ಲದೆ ಇವು ಬುದ್ಧಿವಂತ ಹಾಗೆಯೇ ಸಂಘಜೀವಿಯೂ ಹೌದು. ಕುಟುಂಬದೊಂದಿಗೆ ಒಟ್ಟಾಗಿ ಜೀವಿಸುವ ಆನೆಗಳು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂದು ಅರಣ್ಯ ನಾಶ, ವಿದ್ಯುತ್‌ ಅಪಘಾತ, ರೈಲ್ವೆ ಅಪಘಾತ ಇತ್ಯಾದಿ ಕಾರಣಗಳಿಂದ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ಗಜರಾಜನ ಸಂತತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ಗುರುತಿಸುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆನೆ ದಿನದ ಇತಿಹಾಸವೇನು?

2011ರಲ್ಲಿ ಸಿಮ್ಸ್ ಮತ್ತು ಎಲಿಫೆಂಟ್ ಇಂಟ್ರಡಕ್ಷನ್ ಫೌಂಡೇಶನ್ ವಿಶ್ವ ಆನೆ ದಿನವನ್ನು ಆಚರಿಸಲು ನಿರ್ಧರಿಸಿತು. ಹಾಗೂ ಆಗಸ್ಟ್ 12, 2012 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುವ ವಿಶ್ವ ಆನೆ ದಿನದ ಮುಖ್ಯ  ಉದ್ದೇಶವು ಆನೆಗಳನ್ನು ರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವುದಾಗಿದೆ. ಇದರೊಂದಿಗೆ ಆನೆಗಳ ಸಂರಕ್ಷಣಾ ಕ್ರಮಗಳು, ಪುನರ್ವಸತಿ, ಅವುಗಳ ಉತ್ತಮ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಆನೆಗಳ ಅಕ್ರಮ ಸಾಗಣೆಯನ್ನು ತಡೆಯುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಆನೆಗಳ ಪಾತ್ರವೇನು?

ಆನೆಗಳನ್ನು ಸಾಮಾನ್ಯವಾಗಿ ಕಾಡಿನ “ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು” ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ವಾಸಿಸುವ ಇತರ ವನ್ಯಜೀವಿಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಆನೆಗಳು ಸಹಾಯ ಮಾಡುತ್ತದೆ. ಆನೆಗಳು ಹಿಂಡುಗಳಲ್ಲಿ ನಡೆಯುತ್ತದೆ, ಇದು ದಟ್ಟವಾದ ಕಾಡುಗಳ ಮೂಲಕ ದಾರಿ ಮಾಡುತ್ತದವೆ, ಇದು ಇತರ ಪ್ರಾಣಿಗಳಿಗೆ ತುಂಬಾ ಸಹಾಯವಾಗುತ್ತದೆ. ಅಲ್ಲದೆ ಆನೆಗಳು ಮರಗಳು ಮತ್ತು ಪೊದೆಗಳಿಗೆ ಹಾನಿ ಮಾಡುವ ಮೂಲಕ ಸಸ್ಯವರ್ಗದ ಹರಡುವಿಕೆಗೆ ಕೊಡುಗೆ ನೀಡುತ್ತವೆ.

ಆನೆಗಳ ಉಪಸ್ಥಿತಿಯು ಹಸಿರುಮನೆ ಅನಿಲಗಳನ್ನು ಉತ್ತಮವಾಗಿ ಹೀರಿಕೊಳ್ಳುವ ದೊಡ್ಡ ಮರಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ. ಅರಣ್ಯ ಆನೆಗಳು ಉಷ್ಣವಲಯದ ಕಾಡುಗಳನ್ನು ಹಲವು ವಿಧಗಳಲ್ಲಿ ರಕ್ಷಿಸುತ್ತವೆ. ಅವುಗಳ ಆಹಾರ ಪದ್ಧತಿಗಳು ಹೆಚ್ಚಿನ ಇಂಗಾಲದ ಸಾಂದ್ರತೆಯಿರುವ ಮರಗಳು ಮಾತ್ರ ಬೆಳೆಯಲು ಅವಕಾಶ ನೀಡುತ್ತವೆ. ಆನೆಗಳು ಈ ಕಡಿಮೆ ಇಂಗಾಲದ ಸಾಂದ್ರತೆಯ ಸಸ್ಯ ಮತ್ತು ಮರಗಳ ಎಲೆಗಳನ್ನು ಹೆಚ್ಚಾಗಿ ತಿನ್ನುತ್ತವೆ, ಇದರಿಂದಾಗಿ ಹೆಚ್ಚಿನ ಇಂಗಾಲದ ಸಾಂದ್ರತೆಯ ಸಸ್ಯಗಳು ಅಭಿವೃದ್ಧಿ ಹೊಂದಲು ಹೆಚ್ಚಿನ ಅವಕಾಶವನ್ನು ನೀಡುತ್ತವೆ. ಹೌದು ಆನೆಗಳು ಕಾಡಿನಲ್ಲಿಆಹಾರಕ್ಕಾಗಿ ಅಳೆದಾಡುತ್ತಾ, ಅವು ಕಡಿಮೆ ಇಂಗಾಲ ಸಾಂದ್ರತೆಯಿರುವ ಸಣ್ಣ ಮರದ ಎಲೆಗಳನ್ನು ತಿಂದು ಆ ಮರಗಳನ್ನು ತುಳಿದು ಹಾಕುತ್ತವೆ. ಇದರಿಂದಾಗಿ ದೊಡ್ಡ ಮತ್ತು ಹೆಚ್ಚಿನ ಇಂಗಾಲ ಸಾಂದ್ರತೆಯ ಮರಗಳು ಬೆಳೆಯಲು ಸಾಕಷ್ಟು ಸ್ಥಳಾವಕಾಶ ಮತ್ತು ಸೂರ್ಯನ ಬೆಳಕು ದೊರೆಯುತ್ತದೆ. ಹೀಗೆ ಆನೆಗಳ ಚಟುವಟಿಕೆಗಳು ಅರಣ್ಯ ಪರಿಸರ ವ್ಯವಸ್ಥೆಯ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಭಾರತದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ?

ಭಾರತವು ಶೇಕಡಾ 50 ಕ್ಕಿಂತ ಹೆಚ್ಚು ಏಷ್ಯನ್‌ ಆನೆಗಳ ಸಂತತಿಗೆ ನೆಲೆಯಾಗಿದ್ದು, ಇವುಗಳನ್ನು ರಕ್ಷಿಸುವಲ್ಲಿ ಭಾರತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಭಾರತ ಸರ್ಕಾರದ ‘ಪ್ರಾಜೆಕ್ಟ್ ಎಲಿಫೆಂಟ್’ (1992) ಅಡಿಯಲ್ಲಿ, ದೇಶದಲ್ಲಿ 33 ಆನೆ ಮೀಸಲು ಪ್ರದೇಶಗಳು ಮತ್ತು 150 ಕ್ಕೂ ಹೆಚ್ಚು ಆನೆ ಕಾರಿಡಾರ್‌ಗಳನ್ನು ಸ್ಥಾಪಿಸಲಾಗಿದೆ. ಭಾರತದ ಮೊದಲ ಡಿಎನ್‌ಎ ಆಧಾರಿತ ವೈಜ್ಞಾನಿಕ ಆನೆ ಗಣತಿಯ ಪ್ರಕಾರ (ಅಕ್ಟೋಬರ್ 2025 ರಲ್ಲಿ ಬಿಡುಗಡೆಯಾದ ವರದಿ), ದೇಶದಲ್ಲಿ ಒಟ್ಟು 22,446  ಕಾಡು ಆನೆಗಳು ಇವೆಯೆಂದು ದಾಖಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನ ಘಾಟ್‌ಕೋಪರ್‌ನಲ್ಲಿ ಭಾರಿ ಭೂಕುಸಿತ: ಇಬ್ಬರು ಬಲಿ, ನಾಲ್ಕೈದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ – Kannada News | Ghatkopar Landslide: Heavy Mumbai Rains Cause Fatal Mudslide, Rescue Ops Underway

ಮುಂಬೈ, ಆ.12 : ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮುಸಲಧಾರ ಮಳೆಗೆ ಭಾರಿ ಭೂಕುಸಿತ ಉಂಟಾಗಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ನಾಲ್ಕರಿಂದ ಐದು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ NDRF, ಮುಂಬೈ ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ನೀಡಿದ ಮಾಹಿತಿಯಂತೆ, ಘಾಟ್‌ಕೋಪರ್‌ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾಲ್ ಬಳಿ ಮುಂಜಾನೆ ಸುಮಾರು 3:48ರ ವೇಳೆಗೆ ಗುಡ್ಡದ ಒಂದು ಭಾಗ ಕುಸಿದು ಬಿದ್ದಿದೆ.

ಬೆಟ್ಟದ ಮಣ್ಣು ಮತ್ತು ಕಲ್ಲುಗಳು 2 ರಿಂದ 3 ಮನೆಗಳ ಮೇಲೆ ಬಿದ್ದಿದ್ದರಿಂದ, ನಿವಾಸಿಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು. ಘಟನಾ ಸ್ಥಳದಿಂದ ಈವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ತಪಾಸಣೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ದುರಂತದಲ್ಲಿ ಗಾಯಗೊಂಡಿದ್ದ 18 ವರ್ಷದ ಸೊಹೇಲ್ ಅನ್ಸಾರಿ (ತಲೆಗೆ ಗಾಯ) ಮತ್ತು 14 ವರ್ಷದ ಮೊಹಮ್ಮದ್ ಅನ್ಸಾರಿ (ಬೆನ್ನಿಗೆ ಗಾಯ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಗಣೇಶ್ ಶಿಂಧೆ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಾಟ್‌ಕೋಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕನಗರದಲ್ಲಿ ಭೂಕುಸಿತ ಸಂಭವಿಸಿದೆ. ಇದುವರೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಮಣ್ಣಿನಡಿಯಲ್ಲಿ ಇನ್ನು 3 ರಿಂದ 4 ಜನರು ಸಿಲುಕಿರುವ ಸಾಧ್ಯತೆಯಿದ್ದು, NDRF, ಪೊಲೀಸರು ಹಾಗೂ ಬಿಎಂಸಿ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.” ಎಂದು ಡಿಸಿಪಿ ಗಣೇಶ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು: ಮನೆಗಳಲ್ಲೇ ಇರುವಂತೆ ಸೂಚನೆ

ಮುಂಬೈ ಮೇಯರ್ ರಿತು ತಾವ್ಡೆ ಮತ್ತು ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಧಾಕ್ನೆ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯಕಾರಿ ಪ್ರದೇಶದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದೇನು? ವೀರಪ್ಪನ್​ಗೆ ಪಾರ್ವತಮ್ಮ ಹೇಳಿದ್ದೇನು? – Kannada News | Dr Rajkumar Kidnap, what happened on that night on July 30, 2000

ಭೀಮನ ಅಮವಾಸ್ಯೆ ಬಂತೆಂದರೆ ಆ ಕರಾಳ ರಾತ್ರಿಯ ನೆನಪು ಕನ್ನಡಿಗರಿಗೆ ಆಗಿಯೇ ಆಗುತ್ತದೆ. 26 ವರ್ಷಗಳ ಹಿಂದೆ 2000ರ ಭೀಮನ ಅಮಾವಾಸ್ಯೆಯ ದಿನದಂದೆ ಕನ್ನಡಿಗರ ಕಣ್ಮಣಿ ಡಾ ರಾಜ್​​ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಆ ನಂತರ 108 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡು ಅಂತಿಮವಾಗಿ ಬಿಡುಗಡೆ ಮಾಡಿದ್ದ. ಆದರೆ ಆ 108 ದಿನಗಳು ರಾಜ್​​ಕುಮಾರ್ ಕುಟುಂಬ, ಕನ್ನಡ ಚಿತ್ರರಂಗ, ಕರ್ನಾಟಕದ ಜನ ಸಾಕಷ್ಟು ನೋವು, ಆತಂಕಗಳನ್ನು ಅನುಭವಿಸಿದ್ದರು. ಅಂತಿಮವಾಗಿ ಎಲ್ಲವೂ ಸುಖಾಂತ್ಯವಾಯ್ತಾದರೂ, ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದು ಏನು? ಹೇಗೆ? ಪಾರ್ವತಮ್ಮ-ವೀರಪ್ಪನ್ ನಡುವೆ ನಡೆದ ಮಾತುಕತೆ ಏನು? ಮಾಹಿತಿ ಇಲ್ಲಿದೆ…

ವೀರಪ್ಪನ್​​ಗೆ ಡಾ ರಾಜ್​​ಕುಮಾರ್ ಅವರನ್ನು ಅಪಹರಿಸುವ ಉದ್ದೇಶವೇ ಇರಲಿಲ್ಲ. ಮೊದಲಿಗೆ ಆತ ಯೋಜಿಸಿದ್ದು ರಜನೀಕಾಂತ್​​ರನ್ನು ಅಪಹರಿಸಲು ಆದರೆ ಚೆನ್ನೈನಲ್ಲಿ ಸಿಎಂ ನಿವಾಸದ ಪಕ್ಕದಲ್ಲೇ ವಾಸವಾಗಿರುವ ರಜನೀಕಾಂತ್​ ಅನ್ನು ಅಪಹರಿಸಿ ಕಾಡಿಗೆ ತರುವುದು ಅಸಾಧ್ಯವೆಂದು ಆ ಯೋಜನೆಯನ್ನು ಕೈಬಿಟ್ಟ, ಆ ಬಳಿಕ ಆಗ ತಮಿಳುನಾಡು ಸಿಎಂ ಆಗಿದ್ದ ಕರುಣಾನಿಧಿಯ ಪುತ್ರ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆ ಮಾಡಲಾಯ್ತು. ಆದರೆ ಸ್ಟಾಲಿನ್ ಅದಾಗಲೇ ಚೆನ್ನೈನ ಮೇಯರ್ ಹಾಗೂ ಅವರ ಸುತ್ತಲೂ ಗನ್​​ಮ್ಯಾನ್​​ಗಳು ಇರುತ್ತಿದ್ದರು. ಹಾಗಾಗಿ ಆ ಯೋಚನೆಯನ್ನೂ ಕೈಬಿಟ್ಟ. ಕೊನೆಗೆ ಹೊಳೆದಿದ್ದು ರಾಜ್​​ಕುಮಾರ್ ಹೆಸರು. ವೀರಪ್ಪನ್ ಅಡಗುತಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಡಾ ರಾಜ್​​ಕುಮಾರ್ ಅವರ ದೊಡ್ಡ ಗಾಜನೂರಿನ ಮನೆ ಇತ್ತು. ಹಾಗಾಗಿ ರಾಜ್​​ಕುಮಾರ್ ಅಪಹರಣ ಸುಲಭ ಮತ್ತು ಲಾಭದಾಯಕ ಎಂದು ವೀರಪ್ಪನ್​​ಗೆ ಅನಿಸಿತ್ತು.

ರಾಜ್​ಕುಮಾರ್ ಅವರನ್ನು ಅಪಹರಿಸಲು ತನ್ನ ಜ್ಯೋತಿಷಿಗಳಿಂದ ಸಲಹೆಗಳನ್ನು ಸಹ ಪಡೆದಿದ್ದ. ಅಮವಾಸ್ಯೆಯಂದೇ ಅಪಹರಿಸುವುದು ಅವನ ಉದ್ದೇಶ ಆಗಿತ್ತು. ಅವನು ಅಂದುಕೊಂಡಂತೆ ಅದೇ ದಿನ ಅವರ ಕುಕೃತ್ಯ ಕೈಗೂಡಿತು. ತಮ್ಮ ಊರಿನಲ್ಲಿ ಕೊರೆಸಿದ್ದ ಬೋರ್​​ವೆಲ್​​ನಲ್ಲಿ ನೀರು ಬಂದ ಸುದ್ದಿ ತಿಳಿದ ಖುಷಿಯಲ್ಲಿ ರಾಜ್​​ಕುಮಾರ್ ಅವರು ದೊಡ್ಡ ಗಾಜನೂರಿಗೆ ಬಂದಿದ್ದರು. 2000ರ ಜುಲೈ 30ರಂದು ರಾತ್ರಿ ಊಟ ಮುಗಿಸಿ, ಆರಾಮವಾಗಿ ಕೂತಿದ್ದ ಸಮಯದಲ್ಲಿ ಬಂದೂಕುಗಳನ್ನು ಹಿಡಿದು ವೀರಪ್ಪನ್ ಸಹಚರರು ಮನೆಗೆ ಬಂದರು. ಮನೆಯಲ್ಲಿ ಪಾರ್ವತಮ್ಮ ರಾಜ್​​ಕುಮಾರ್, ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್, ಡ್ರೈವರ್ ಮತ್ತು ಪಾರ್ವತಮ್ಮ ಇದ್ದರು. ಜೊತೆಗೆ ಕೆಲವು ಕೆಲಸದವರು.

ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್​​ಕುಮಾರ್ ಅವರಿಂದ, ಹೇಗೆ ಗೊತ್ತೆ?

ಮೊದಲಿಗೆ ವೀರಪ್ಪನ್ ಸಹಚರರು ಮನೆಯೊಳಗೆ ಪ್ರವೇಶಿಸಿದರು. ಅದಾದ ಎರಡು ಮೂರು ನಿಮಿಷಗಳಲ್ಲಿ ವೀರಪ್ಪನ್ ಒಳಗೆ ಬಂದು ರಾಜ್​​ಕುಮಾರ್ ಅವರನ್ನುದ್ದೇಶಿಸಿ ‘ಅಯ್ಯ, ಹೊರಡೋಣ ಬನ್ನಿ’ ಎಂದ. ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ ನೀಡಿ, ಇದನ್ನು ಸಿಎಂ ಎಸ್​​ಎಂ ಕೃಷ್ಣ ಅವರಿಗೆ ಕೊಡಿ, ನನಗೆ ಏನು ಬೇಕೋ ಅವರಿಗೆ ತಿಳಿಯುತ್ತದೆ. ಅಯ್ಯನವರ ಬಗ್ಗೆ ಚಿಂತಿಸಬೇಡಿ ಅವರಿಗೆ ಏನೂ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದ.

ಆದರೆ ಭಯ, ಆತಂಕದಲ್ಲಿ ಗದ್ಗದಿತರಾದ ಪಾರ್ವತಮ್ಮನವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ರಾಜ್​​ಕುಮಾರ್ ಅವರಿಗೆ ಸಹಾಯವಾಗಿರುತ್ತದೆ ಎಂದು ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್ ಅವರನ್ನು ಜೊತೆಗೆ ಕಳಿಸಿದರು. ಡ್ರೈವರ್ ಅನ್ನೂ ಕರೆದೊಯ್ಯುವ ಉದ್ದೇಶ ವೀರಪ್ಪನ್​​ಗೆ ಇತ್ತು, ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಲು ಡ್ರೈವರ್ ಅವಶ್ಯಕತೆ ಇದ್ದ ಕಾರಣ ಅವನನ್ನು ಅಲ್ಲಿಯೇ ಬಿಟ್ಟು ಹೋದ ವೀರಪ್ಪನ್. ಹೋಗಬೇಕಾದರೆ ‘ಇಂದು ನಿನ್ನ ಸಮಯ ಚೆನ್ನಾಗಿದೆ, ನೀನು ಕರೆದುಕೊಂಡು ಹೋಗು, ನಾನು ಕರೆದುಕೊಂಡು ಬರುತ್ತೇನೆ’ ಎಂದು ವೀರಪ್ಪನ್​​ಗೆ ಹೇಳಿದ್ದಾಗಿ ಪಾರ್ವತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ವೀರಪ್ಪನ್ ರಾಜ್​​ಕುಮಾರ್ ಅವರನ್ನು ಕರೆದುಕೊಂಡು ಕತ್ತಲಲ್ಲಿ ಮರೆಯಾಗುತ್ತಿದ್ದಂತೆ ಇತ್ತ ಪಾರ್ವತಮ್ಮನವರು ಡ್ರೈವರ್ ಅನ್ನು ಕರೆದುಕೊಂಡು ಗಾಜನೂರಿನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಮೈಸೂರಿನಲ್ಲಿ ತಮ್ಮ ಪರಿಚಯದ ಜ್ಯೋತಿಷಿ ಬಾಷ್ಯಂಸ್ವಾಮಿ ಅವರ ಮನೆಗೆ ಹೋಗಿ, ಅಲ್ಲಿ, ರಾಜ್​​ಕುಮಾರ್ ಅವರ ವಿಷಯ ತಿಳಿಸಿ, ಭವಿಷ್ಯದ ಸಲಹೆ ಪಡೆದರು. ಅಲ್ಲಿಂದ ಹೊರಟು ನೇರವಾಗಿ ಸಿಎಂ ಎಸ್​ಎಂ ಕೃಷ್ಣ ಅವರ ಮನೆಯನ್ನು ಪಾರ್ವತಮ್ಮನವರು ತಲುಪಿದಾಗ ಬೆಳಿಗಿನ ಜಾವ ಮೂರು ಗಂಟೆ.

ಆ ಸಮಯದಲ್ಲಿ ಸಿಎಂ ಅವರನ್ನು ಎಬ್ಬಿಸಿ, ಅವರಿಗೆ ನಡೆದಿದ್ದೆಲ್ಲವನ್ನೂ ತಿಳಿಸಿ, ಅವರಿಗೆ ಕ್ಯಾಸೆಟ್ ನೀಡಿದರು. ಕೂಡಲೇ ಸಿಎಂ ಅವರು ಗೃಹ ಸಚಿವ ಖರ್ಗೆ, ಡಿಜಿಪಿ ದಿನಕರ್, ಗೃಹ ಕಾರ್ಯದರ್ಶಿ ಪ್ರಕಾಶ್, ಭಟ್ಟಾಚಾರ್ಯ, ಸಚಿವ ಸಗೀರ್ ಅಹ್ಮದ್ ಇನ್ನೂ ಕೆಲವರನ್ನು ಕರೆಸಿಕೊಂಡು ವೀರಪ್ಪನ್ ಕಳಿಸಿದ್ದ ಕ್ಯಾಸೆಟ್ ಕೇಳಿ ತುರ್ತು ಸಭೆ ನಡೆಸಿದರು. ಅಲ್ಲಿಂದ 108 ದಿನಗಳ ವರೆಗೆ ಸರ್ಕಾರ ಸತತ ಪ್ರಯತ್ನ ಮಾಡಿ ರಾಜ್​​ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version