ಉದ್ಯಮಿಯ ಪತ್ನಿಗೆ ನಿರಂತರ ಲೈಂಗಿಕ ಕಿರುಕುಳ; ಬಲವಂತವಾಗಿ ಮೂತ್ರ ಕುಡಿಸಿದ ಬಾಬಾ! – Kannada News | Pune Godman Abused Woman For Years Made Her to Drink His Urine

ಪುಣೆ, ಜೂನ್ 18: ಮೂಢನಂಬಿಕೆ ಮತ್ತು ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲವು ವರ್ಷಗಳ ಕಾಲ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ. ಉದ್ಯಮದಲ್ಲಿ ಯಶಸ್ಸು ಮತ್ತು ಹಣದ ಆಸೆ ತೋರಿಸಿ ಈ ಪಾಪಿ ದೇವಮಾನವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಬಲವಂತವಾಗಿ ತನ್ನ ಮೂತ್ರವನ್ನು ಕುಡಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆಯ ಪತಿ ಪುಣೆಯ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರ ವ್ಯವಹಾರದಲ್ಲಿ ಕೆಲವು ಆರ್ಥಿಕ ನಷ್ಟಗಳು ಉಂಟಾದಾಗ, ಪರಿಚಯಸ್ಥರ ಮೂಲಕ ಈ ‘ದೇವಮಾನವ’ನ ಸಂಪರ್ಕ ಸಿಕ್ಕಿತ್ತು. ಉದ್ಯಮದಲ್ಲಿ ಭಾರಿ ಲಾಭ ತಂದುಕೊಡುವುದಾಗಿ ಹಾಗೂ ಮನೆಯಲ್ಲಿ ಐಶ್ವರ್ಯ ವೃದ್ಧಿಸುವುದಾಗಿ ನಂಬಿಸಿದ ದೇವಮಾನವ ಮಾಟ-ಮಂತ್ರ, ಪೂಜೆಯ ನೆಪದಲ್ಲಿ ಆ ಉದ್ಯಮಿಯ ಕುಟುಂಬವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದನು.

ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತ ಪುಣೆಯ ವಾಗೋಲಿಯ ಉಬಾಲೆ ನಗರ ಪ್ರದೇಶದಲ್ಲಿ ‘ಮಾಡರ್ನ್ ಗುರುಕುಲ’ ಎಂಬ ಆಶ್ರಮವನ್ನು ನಡೆಸುತ್ತಿದ್ದನು. ಮಿಶ್ರಾ ಕಳೆದ ಹಲವು ವರ್ಷಗಳಿಂದ ಜನರನ್ನು ವಂಚಿಸಿ ಶೋಷಿಸುತ್ತಿದ್ದನು. ಸಂತ್ರಸ್ತ ಮಹಿಳೆ ಜೊತೆ 2010ರಲ್ಲಿ ಈತನ ಸಂಪರ್ಕವಾಗಿತ್ತು. 2010 ಮತ್ತು 2016ರ ನಡುವೆ ಈತ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿ, ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದನು ಮತ್ತು ಆಕೆಯ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಆ ವೀಡಿಯೊಗಳನ್ನು ಬಳಸಿಕೊಂಡು ಆಕೆ ಹಾಗೂ ಆಕೆಯ ಕುಟುಂಬಕ್ಕೆ ತನಗೆ ದೈವಿಕ ‘ಶಕ್ತಿಗಳು’ ಇವೆ ಎಂದು ಬೆದರಿಸಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು.

ಇದನ್ನೂ ಓದಿ: ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್‌ಐಆರ್ ಆಗುತ್ತೆ ಹುಷಾರ್!: ಕರ್ನಾಟಕ ಪೊಲೀಸ್ ಮುಖ್ಯಸ್ಥರ ಕಡಕ್ ಆದೇಶ

ಉದ್ಯಮದ ಏಳಿಗೆಗಾಗಿ ವಿಶೇಷ ರಹಸ್ಯ ಪೂಜೆಗಳನ್ನು ಮಾಡಬೇಕೆಂದು ನಂಬಿಸಿ, ಆ ಮಹಿಳೆಯನ್ನು ಹಲವು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು. ಇದಕ್ಕೆ ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ-ಮಾವಂದಿರು ಕೂಡ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಂತ್ರಿಕ ವಿಧಿವಿಧಾನಗಳ ಭಾಗವೆಂದು ಹೇಳಿ, ಮಹಿಳೆಗೆ ಬಲವಂತವಾಗಿ ಈ ದೇವಮಾನವನ ಮೂತ್ರವನ್ನು ಕುಡಿಸಲಾಗಿತ್ತು. ಇದನ್ನು ವಿರೋಧಿಸಿದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಪೂಜೆಗಳ ಹೆಸರಿನಲ್ಲಿ ಮಹಿಳೆಯ ಬಳಿಯಿದ್ದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಹಣವನ್ನು ಈ ಕೂಟ ಲೂಟಿ ಮಾಡಿದೆ. ದೀರ್ಘಕಾಲದ ಕಿರುಕುಳದಿಂದ ಬೇಸತ್ತ ಮಹಿಳೆ ಕೊನೆಗೆ ಧೈರ್ಯ ಮಾಡಿ ಪುಣೆಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆ ದೇವಮಾನವ, ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ-ಮಾವ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಶರಣಾಗುವುದಾಗಿ ಹೇಳಿದ್ದ ರೌಡಿ ಎನ್‌ಕೌಂಟರ್‌ಗೆ ಬಲಿ!

ಈ ಘಟನೆಯು ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿದ್ಯಾವಂತ ಕುಟುಂಬಗಳೂ ಇಂತಹ ಮೂಢನಂಬಿಕೆಗೆ ಬಲಿಯಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸರು ಮಿಶ್ರಾನ ಆಶ್ರಮದ ಮೇಲೆ ದಾಳಿ ನಡೆಸಿದಾಗ, ಅಲ್ಲಿನ ನೆಲದಡಿಯ ರಹಸ್ಯ ಕೋಣೆಯಿಂದ ಭಾರಿ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್‌ಗಳು, ಹಲವಾರು ಪೆನ್ ಡ್ರೈವ್‌ಗಳು ಮತ್ತು ಕ್ಯಾಸೆಟ್‌ಗಳು, 6.5 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ – Kannada News | Congress Leaders Press Conference over Karnataka MLC Results

ಬೆಂಗಳೂರು, ಜೂನ್​​ 18: ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟದ ಬೆನ್ನಲ್ಲೇ ಕಾಂಗ್ರೆಸ್​​ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆ ಶಿವಕುಮಾರ್​​, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ರಾಜ್ಯ ಉಸ್ತುವಾರಿ ರಣದೀಪ್​​ ಸುರ್ಜೇವಾಲಾ ಸೇರಿ ಪಕ್ಷದ ನಾಯಕರು ಭಾಗಿಯಾಗಿದ್ದಾರೆ. ವಿಧಾನಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​ನ ಐವರು ಅಭ್ಯರ್ಥಿಗಳು ಗೆದ್ದಿದ್ದು, ಪ್ರಥಮ ಸುತ್ತಿನ ಮತಗಳಲ್ಲೇ ಎಲ್ಲಾ ಅಭ್ಯರ್ಥಿಗಳು ವಿಜಯ ಕಂಡಿರುವ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವು ವರ್ಕ್ ಫ್ರಮ್ ಹೋಮ್ ಮಾಡುವವರಾ? ಹಾಗಿದ್ರೆ ನಿಮಗೂ ಕಾಡಬಹುದು ಒಂಟಿತನ! – Kannada News | Mental Health Challenges of Remote Work Every Employee Should Know

ಮನೆಯಿಂದಲೇ ಕೆಲಸ ಮಾಡುವುದು (Work From Home) ಅನೇಕರಿಗೆ ಅನುಕೂಲಕರವಾಗಿದ್ದರೂ ಕೂಡ ಇದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹೌದು, ಅಮೆರಿಕದ ಸಂಶೋಧಕರು ನಡೆಸಿದ ವಿಶ್ಲೇಷಣೆಯಲ್ಲಿ, ನಿರಂತರವಾಗಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಒಂಟಿತನ, ಆತಂಕ (Anxiety) ಮತ್ತು ಖಿನ್ನತೆ (Depression) ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ. ಹಾಗಾದರೆ ವರ್ಕ್ ಫ್ರಮ್ ಹೋಮ್ ಒಂಟಿತನವನ್ನು ಹೆಚ್ಚಿಸುತ್ತದೆಯೇ, ಇದಕ್ಕೆ ಪರಿಹಾರವೇನು, ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಂಟಿತನ ಹೆಚ್ಚಿಸುವ ವರ್ಕ್ ಫ್ರಮ್ ಹೋಮ್

ಅಧ್ಯಯನದ ಪ್ರಕಾರ, ಮನೆಯಿಂದ ಕೆಲಸ ಮಾಡುವವರು ಕಚೇರಿಗೆ ತೆರಳಿ ಕೆಲಸ ಮಾಡುವವರಿಗಿಂತ ಸುಮಾರು 58% ಹೆಚ್ಚು ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದಾರೆ. ಅಲ್ಲದೆ, ಅನೇಕರು ದಿನವಿಡೀ ಹೊಸ ವ್ಯಕ್ತಿಗಳನ್ನು ಭೇಟಿಯಾಗದೆ ಅಥವಾ ನೇರವಾಗಿ ಮಾತನಾಡದೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು, ಕಾಫಿ ಬ್ರೇಕ್‌ಗಳಲ್ಲಿ ಸಮಯ ಕಳೆಯುವುದು ಮತ್ತು ಸಾಮಾನ್ಯ ಸಾಮಾಜಿಕ ಸಂಪರ್ಕಗಳು ಮಾನಸಿಕ ನೆಮ್ಮದಿಗೆ ಸಹಾಯ ಮಾಡುತ್ತವೆ. ಆದರೆ, ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳು ಈ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಆತಂಕ ಮತ್ತು ಖಿನ್ನತೆ ಹೆಚ್ಚುವ ಅಪಾಯ

ದಿನವಿಡೀ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡುವುದು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ವಿಶೇಷವಾಗಿ ಮನೆಯಲ್ಲಿ ಒಬ್ಬರೇ ವಾಸಿಸುವ ಐಟಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿ ವಸತಿಗೃಹಗಳಲ್ಲಿ ಇರುವವರಲ್ಲಿ ಒಂಟಿತನ ಕಾಡುವ ಅಪಾಯ ಹೆಚ್ಚಾಗಿ ಕಂಡುಬಂದಿದೆ. ಇದರ ಪರಿಣಾಮವಾಗಿ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ದೇಹದ ಆರೋಗ್ಯದ ಮೇಲೂ ಪರಿಣಾಮ

ಮಾನಸಿಕ ಒಂಟಿತನವು ಕೇವಲ ಮನಸ್ಸಿನ ಸಮಸ್ಯೆಯಲ್ಲ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು. ನಿದ್ರಾಹೀನತೆ, ದೀರ್ಘಕಾಲದ ಒತ್ತಡ ಹಾಗೂ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಪರಿಹಾರವೇನು?

ತಜ್ಞರ ಪ್ರಕಾರ, ‘ಹೈಬ್ರಿಡ್ ವರ್ಕ್ ಮಾದರಿ’ ಉತ್ತಮ ಆಯ್ಕೆಯಾಗಬಹುದು. ವಾರದಲ್ಲಿ ಕೆಲವು ದಿನ ಕಚೇರಿಯಲ್ಲಿ ಮತ್ತು ಉಳಿದ ದಿನ ಮನೆಯಿಂದ ಕೆಲಸ ಮಾಡುವುದು ಒಳ್ಳೆಯದು. ಇದರ ಜೊತೆಗೆ, ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳು ವಾರಾಂತ್ಯಗಳಲ್ಲಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಬೇಕು. ಕ್ರೀಡೆ, ಹವ್ಯಾಸಗಳು ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗುತ್ತದೆ. ವರ್ಕ್ ಫ್ರಮ್ ಹೋಮ್ ಸೌಲಭ್ಯಕರವಾದರೂ, ಸಾಮಾಜಿಕ ಸಂಪರ್ಕ ಕಡಿಮೆಯಾದರೆ ಒಂಟಿತನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೆಲಸದ ಜೊತೆಗೆ ಸಾಮಾಜಿಕ ಜೀವನಕ್ಕೂ ಸಮಾನ ಮಹತ್ವ ನೀಡುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ನ​​ ಐವರು, ಬಿಜೆಪಿಯ ಇಬ್ಬರ ಗೆಲುವು, ಸೋಲುಂಡ ಜೆಡಿಎಸ್​​ನ ಗೋವಿಂದರಾಜು – Kannada News | Karnataka MLC Results: Congress Wins 5 Seats, BJP Bags 2 as JDS Suffers Defeat Amid Cross Voting

ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟImage Credit source: Tv9 Kannada

ಬೆಂಗಳೂರು, ಜೂನ್​​ 18: ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದು, ಬಿಜೆಪಿ ಮತ್ತು ಜೆಡಿಎಸ್​​ನಿಂದ ಕ್ರಾಸ್​​ ವೋಟಿಂಗ್​​ ಆಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್​ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್​ಗೆ 32 ಮತಗಳು ಬಂದಿದ್ದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರ 14 ಮತಗಳು ಬಿದ್ದಿವೆ.

ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ?

  • ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ 14 ಮತಗಳು
  • ಕಾಂಗ್ರೆಸ್​​ನ ಬಿ.ಕೆ. ಹರಿಪ್ರಸಾದ್​​ಗೆ 30 ಮತಗಳು
  • ಕಾಂಗ್ರೆಸ್​ನ ತಿಪ್ಪಣ್ಣಪ್ಪ ಕಮಕನೂರುಗೆ 30 ಮತಗಳು
  • ಕಾಂಗ್ರೆಸ್​ನ ಪಿ.ವಿ.ಮೋಹನ್​ಗೆ 29 ಮತಗಳು
  • ಕಾಂಗ್ರೆಸ್​ನ ಬಿ.ಎಸ್.ಶಿವಣ್ಣಗೆ 30 ಮತಗಳು
  • ಕಾಂಗ್ರೆಸ್​ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್​ಗೆ 32 ಮತ
  • ಬಿಜೆಪಿ ಅಭ್ಯರ್ಥಿ ಆರ್.ರಘುಗೆ 29 ಮತಗಳು
  • ಬಿಜೆಪಿ ಅಭ್ಯರ್ಥಿ ಲಿಂಗರಾಜು ಪಾಟೀಲ್​ಗೆ 27 ಮತಗಳು

ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ 5 ಸ್ವಾರಸ್ಯಕರ ಘಟನೆಗಳಿವು

ಎಲಿಮಿನೇಷನ್ ರೌಂಡ್​ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಶಿವರಾಂ ಹೆಬ್ಬಾರ್, ಎಸ್​.ಟಿ.ಸೋಮಶೇಖರ್ ಹೊರತುಪಡಿಸಿ  ಬಿಜೆಪಿಯ 3 ಮತ್ತು ಜೆಡಿಎಸ್​ನ 6 ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆಗೊಂಡಿದೆ. ಹೀಗಾಗಿ ಲಿಂಗರಾಜ ಪಾಟೀಲ್ ಗೆಲುವಿನ ಕೋಟಾ ತಲುಪಿರಲಿಲ್ಲ. ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್​ಗೆ ಕೇವಲ 27 ಮತಗಳು ಸಿಕ್ಕಿದ್ದವು. ಜೆಡಿಎಸ್​ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್​ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ ಸಿಕ್ಕಿದೆ.

ಒಂದು ಮತ ಅಸಿಂಧು

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ.
ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:57 pm, Thu, 18 June 26

Source link

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಬಯೋಪಿಕ್ ಮಾಡಲಿರುವ ರಾಮ್ ಗೋಪಾಲ್ ವರ್ಮಾ? – Kannada News | Ram Gopal Varma likely to do biopic of Mumbai Encounter Specialist Daya Nayak

ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಹಾಗೂ ರಿಯಲಿಸ್ಟಿಕ್ ಕ್ರೈಂ ಸಿನಿಮಾಗಳ ಮೂಲಕವೇ ಸೆನ್ಸೇಷನ್ ಸೃಷ್ಟಿಸಿದ್ದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma), ಈಗ ಮುಂಬೈ ಅಂಡರ್‌ವರ್ಲ್ಡ್ ಇತಿಹಾಸದ ಮತ್ತೊಂದು ರೋಚಕ ಪುಟವನ್ನು ತೆರೆಗೆ ತರಲು ಸಜ್ಜಾಗುತ್ತಿದ್ದಾರೆ. ಮುಂಬೈನ ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ (Daya Nayak) ಅವರ ಜೀವನಾಧಾರಿತ ಚಿತ್ರವನ್ನು ನಿರ್ದೇಶಿಸಲು ಆರ್‌ಜಿವಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಈ ಬಯೋಪಿಕ್ ಸದ್ಯ ಆರಂಭಿಕ ಹಂತದಲ್ಲಿದ್ದು, ಚಿತ್ರಕಥೆ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ.

ಮುಂಬೈ ಪೊಲೀಸ್ ಇತಿಹಾಸದಲ್ಲೇ ದಯಾ ನಾಯಕ್ ಅವರ ಜರ್ನಿ ಅತ್ಯಂತ ಚರ್ಚೆಯಾದ ವಿಷಯವಾಗಿದೆ. ಮಿಡ್-ಡೇ ವರದಿಯ ಪ್ರಕಾರ, ನಿರ್ಮಾಪಕರು ಈ ಚಿತ್ರವನ್ನು ಕೇವಲ ಬಯೋಪಿಕ್ ಆಗಿ ಮಾಡಬೇಕೇ ಅಥವಾ ಆರ್‌ಜಿವಿ ಅವರದ್ದೇ ಸೂಪರ್ ಹಿಟ್ ‘ಕಂಪನಿ’ ಸಿನಿಮಾದ ಸೀಕ್ವೆಲ್ ಆಗಿ ಪ್ರಸ್ತುತಪಡಿಸಬೇಕೇ ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.

2010ರಲ್ಲೇ ಆರ್‌ಜಿವಿ ಅವರು ‘ಕಂಪನಿ 2’ ಮಾಡುವ ಆಲೋಚನೆ ಹೊಂದಿದ್ದರು. ಅದರಲ್ಲಿ ಗ್ಯಾಂಗ್‌ಸ್ಟರ್‌ಗಳ ಬದಲು ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳ ಕಥೆಯ ಮೇಲೆಯೇ ಹೆಚ್ಚು ಗಮನ ಹರಿಸಲು ಪ್ಲಾನ್ ಮಾಡಲಾಗಿತ್ತು. ಹಾಗಾಗಿ, ಈಗ ಮೂಡಿಬರಲಿರುವ ದಯಾ ನಾಯಕ್ ಬಯೋಪಿಕ್‌ಗೆ ಖುದ್ದು ದಯಾ ನಾಯಕ್ ಅವರನ್ನೇ ಸಲಹೆಗಾರರನ್ನಾಗಿ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಸಖತ್ ಆ್ಯಕ್ಟಿವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳನ್ನು ಅನೌನ್ಸ್ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರಗಳಲ್ಲಿ ‘ಸಿಂಡಿಕೇಟ್’ ಪ್ರಮುಖವಾಗಿದೆ. ಇದೊಂದು ಜಾಗತಿಕ ಭಯೋತ್ಪಾದನೆ ಮತ್ತು ಕ್ರೈಂ ನೆಟ್‌ವರ್ಕ್ ಆಧಾರಿತ ಅತ್ಯಂತ ಭಯಾನಕ ಸಿನಿಮಾವಾಗಲಿದ್ದು, ‘ಧುರಂಧರ್’ ಚಿತ್ರದ ಮೇಕಿಂಗ್ ಶೈಲಿಯಿಂದ ಪ್ರೇರಿತವಾಗಿರಲಿದೆ.

ಇದನ್ನೂ ಓದಿ: ನನ್ನ ಯಶಸ್ಸಿಗೆ ದಾವುದ್ ಇಬ್ರಾಹಿಂ ಕಾರಣ: ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ

‘ಸಿಂಡಿಕೇಟ್’ ಸಿನಿಮಾವನ್ನು ಆದಿತ್ಯ ಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಧುರಂಧರ್ 2 ನೋಡಿದ ಮೇಲೆ ನನ್ನ ಹಳೇ ಸಿನಿಮಾಗಳು ಏನೇನೂ ಅಲ್ಲ ಅನಿಸಿತು, ಸಿಂಡಿಕೇಟ್ ನನ್ನ ಹೊಸ ಸಿನಿಮಾ. ಹೊಸ ಇತಿಹಾಸ ಸೃಷ್ಟಿಸಲಿದೆ’ ಎಂದು ಆರ್‌ಜಿವಿ ಹೇಳಿಕೊಂಡಿದ್ದಾರೆ. ಅಲ್ಲದೇ, ‘ಸಿಂಡಿಕೇಟ್’ ಸಿನಿಮಾದ ಶೂಟಿಂಗ್ ಮುಗಿದ ಬೆನ್ನಲ್ಲೇ ಅವರ ‘ಸರ್ಕಾರ್ 4’ ಸಿನಿಮಾ ಸೆಟ್ಟೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ENG vs NZ: 18 ವರ್ಷಗಳ ನಂತರ ಕಿವೀಸ್ ತಂಡದಿಂದ ಸಿಡಿಯಿತು ಅಪರೂಪದ ಶತಕ – Kannada News | Glenn Phillips’ Maiden Test Ton Breaks 18 Year NZ Record Against England

ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (New Zealand vs England) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ದಿ ಓವಲ್​ನಲ್ಲಿ ನಡೆಯುತ್ತಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ನ್ಯೂಜಿಲೆಂಡ್ ತಂಡ, ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್ ಕಲೆಹಾಕಿದೆ. ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡ 188 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ನಂತರ, 7 ನೇ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್ (Glenn Phillips) ಅದ್ಭುತ ಶತಕ ಬಾರಿಸುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕರೆದೊಯ್ದರು. ಮಾತ್ರವಲ್ಲದೆ ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 18 ವರ್ಷಗಳ ನಂತರ ಅಪರೂಪದ ದಾಖಲೆಯನ್ನು ನಿರ್ಮಿಸಿದರು.

7ನೇ ಕ್ರಮಾಂಕದಲ್ಲಿ ಬಂದು ಶತಕ ಬಾರಿಸಿದ ಫಿಲಿಪ್ಸ್

ಗ್ಲೆನ್ ಫಿಲಿಪ್ಸ್ ಅವರ ಈ ಶತಕ ಎರಡು ಕಾರಣಗಳಿಗಾಗಿ ವಿಶೇಷವಾಗಿದೆ. ಮೊದಲನೆಯದಾಗಿ, ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 133 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 18 ಬೌಂಡರಿಗಳನ್ನು ಬಾರಿಸಿದರು. ಇದಲ್ಲದೆ, 18 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

ಇದಕ್ಕೂ ಮೊದಲು ಅಂದರೆ 2008 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಾಕೋಬ್ ಓರಾಮ್ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಕೇವಲ ನಾಲ್ಕು ಕಿವೀಸ್ ಬ್ಯಾಟ್ಸ್‌ಮನ್‌ಗಳು ಮಾತ್ರ ಟೆಸ್ಟ್ ಶತಕ ಬಾರಿಸಿದ್ದಾರೆ. 1973 ರಲ್ಲಿ ವಿಕ್ ಪೊಲಾರ್ಡ್, 1986 ರಲ್ಲಿ ಜಾನ್ ಬ್ರೇಸ್‌ವೆಲ್, 2008 ರಲ್ಲಿ ಜಾಕೋಬ್ ಓರಾಮ್ ಮತ್ತು ಈಗ 2026 ರಲ್ಲಿ ಗ್ಲೆನ್ ಫಿಲಿಪ್ಸ್ 7ನೇ ಕ್ರಮಾಂಕದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಬೆನ್ ಸ್ಟೋಕ್ಸ್​ಗೆ ಗೇಟ್​ ಪಾಸ್; 4 ವರ್ಷಗಳ ಬಳಿಕ ಜೋ ರೂಟ್​ಗೆ ಟೆಸ್ಟ್ ನಾಯಕತ್ವ

ಫಿಲಿಪ್ಸ್​ಗೆ ನೆರವಾದ ಬಾಲಂಗೋಚಿಗಳು

ಡ್ಯಾರಿಲ್ ಮಿಚೆಲ್ ಔಟಾದ ನಂತರ ಕ್ರೀಸ್‌ಗೆ ಬಂದ ಗ್ಲೆನ್ ಫಿಲಿಪ್ಸ್, ಬ್ಲಂಡೆಲ್ ಅವರೊಂದಿಗೆ ಕೇವಲ 52 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವನ್ನಾಡಿದರು. ಇದರಲ್ಲಿ ಫಿಲಿಪ್ಸ್ 36 ರನ್‌ಗಳ ಕೊಡುಗೆ ನೀಡಿದರು. ಫಿಲಿಪ್ಸ್ ಮತ್ತು ಬ್ಲಂಡೆಲ್ 90 ಎಸೆತಗಳಲ್ಲಿ 75 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಬ್ಲಂಡೆಲ್ ಔಟಾದ ನಂತರ ಫಿಲಿಪ್ಸ್, ಜೇಮಿಸನ್ ಅವರೊಂದಿಗೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಹಾಗೆಯೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು 82 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಫಿಲಿಪ್ಸ್, ಕೈಲ್ ಜೇಮಿಸನ್ ಅವರೊಂದಿಗೆ ಕೇವಲ 96 ಎಸೆತಗಳಲ್ಲಿ 87 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:58 pm, Thu, 18 June 26

Source link

ಮರಾಠಿ ಸಿನಿಮಾದ 42 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ ಶಾರುಖ್ ಖಾನ್ – Kannada News | Shah Rukh Khan waves of 42 lakh rs loan of Marathi movie Deool Band 2

ಶಾರುಖ್ ಖಾನ್ (Shah Rukh Khan) ಅವರನ್ನು ಕಿಂಗ್ ಖಾನ್ ಎಂದು ಕರೆಯಲಾಗುತ್ತದೆ. ಇದೀಗ ಅವರು ತಮ್ಮ ಹೆಸರಿಗೆ ತಕ್ಕಂತೆ ರಾಜರ ಹೃದಯ ವೈಶಾಲ್ಯ, ಉದಾರತೆ ಮೆರೆದಿದ್ದಾರೆ. ಸಿನಿಮಾದ ತಾಂತ್ರಿಕತೆಗೆ ಸಂಬಂಧಿಸಿದ ಉದ್ಯಮಗಳನ್ನು ಹೊಂದಿರುವ ಶಾರುಖ್ ಖಾನ್ ಇದೀಗ ಮರಾಠಿ ಸಿನಿಮಾ ಒಂದರ 42 ಲಕ್ಷ ರೂಪಾಯಿ ಬಾಕಿ ಹಣವನ್ನು ಮನ್ನಾ ಮಾಡಿದ್ದು, ತಮಗೆ ಹಣಕ್ಕಿಂತಲೂ ಸಿನಿಮಾ ಮುಖ್ಯ ಎಂದು ತೋರಿಸಿದ್ದಾರೆ. ಮರಾಠಿ ಚಿತ್ರರಂಗದ ‘ದೇವೂಲ್ ಬಂದ್ 2’ ಚಿತ್ರಕ್ಕೆ ಸಂಬಂಧಿಸಿದಂತೆ, ಶಾರುಖ್ ಅವರ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸುಮಾರು 42 ಲಕ್ಷ ರೂಪಾಯಿಗಳ ಬಾಕಿಯನ್ನು ಮನ್ನಾ ಮಾಡಿದೆ. ಶಾರುಖ್ ಅವರ ಈ ನಡೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಮರಾಠಿ ಸಿನಿಮಾ ‘ದೇವೂಲ್ ಬಂದ್ 2’ ತನ್ನ ಕಂಟೆಂಟ್​ ಇಂದಾಗಿ ಸಖತ್ ಹಿಟ್ ಆಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಮರಾಠಿ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಆದರೆ ಈ ಸಿನಿಮಾದ ಚಿತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳು ಮತ್ತು ವಿತರಣೆಯ ವಿಷಯದಲ್ಲಿ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಸಂಸ್ಥೆಗೆ ಹಣ ಬಾಕಿ ಇತ್ತು. ಈ ಸಿನಿಮಾದ ನಿರ್ದೇಶಕ ಪ್ರವೀಣ್ ತರ್ಡೆ ಅವರ ಕಠಿಣ ಪರಿಶ್ರಮ ಮತ್ತು ಮರಾಠಿ ಚಿತ್ರರಂಗದ ಮೇಲಿನ ಗೌರವದಿಂದ ಶಾರುಖ್ ಖಾನ್ ಅವರು 42 ಲಕ್ಷ ರೂಪಾಯಿ ಬಾಕಿಯನ್ನು ಮನ್ನಾ ಮಾಡಿದ್ದಾರೆ. ಯಾವುದೇ ರೀತಿಯ ಕಾನೂನು ವಿವಾದಗಳಿಗೆ ಹೋಗದೆ, ಮರಾಠಿ ನಿರ್ಮಾಪಕರಿಗೆ ನೆರವಾಗಲು ರೆಡ್ ಚಿಲ್ಲೀಸ್ ಸಂಸ್ಥೆಯು ಈ ಬಾಕಿಯನ್ನು ರದ್ದುಗೊಳಿಸಿದೆ.

ಇದನ್ನೂ ಓದಿ:ಶಾರುಖ್ ಖಾನ್ ಅಲಭ್ಯತೆ; ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರವೇ ಡಿಲೀಟ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರತಂಡ, ಶಾರುಖ್ ಖಾನ್ ಅವರ ಈ ಸಹಾಯವು ಮರಾಠಿ ಚಿತ್ರರಂಗಕ್ಕೆ ದೊಡ್ಡ ಬೆಂಬಲ ನೀಡಿದಂತಾಗಿದೆ ಎಂದು ತಿಳಿಸಿದೆ. ಪ್ರವೀಣ್ ತರ್ಡೆ ಅವರು ಶಾರುಖ್ ಖಾನ್ ಅವರ ಈ ಉದಾರ ಗುಣಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸ್ಟಾರ್ ನಟನೊಬ್ಬ ಸಣ್ಣ ಚಿತ್ರರಂಗದ ತಂಡಕ್ಕೆ ನೀಡಿದ ಈ ಸಹಕಾರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

‘ದೇವೂಲ್ ಬಂದ್ 2’ ಸಿನಿಮಾವು ದೇವರು ಮತ್ತು ಭಕ್ತರ ನಡುವಿನ ಕತೆಯನ್ನು ಒಳಗೊಂಡಿದೆ. ಜೀವನದಲ್ಲಿ ನೊಂದ ಯುವತಿಯೊಬ್ಬರು ದೇವರ ಮೇಲೆ ಸಿಟ್ಟಾಗಿ ದೇವಸ್ಥಾನದ ಕಡೆ ಕಲ್ಲು ಎಸೆಯುತ್ತಾಳೆ. ಆಗ ಖುದ್ದು ದೇವರು (ಸ್ವಾಮಿ ಸಮರ್ಥ್) ಪ್ರತ್ಯಕ್ಷವಾಗಿ ಆಕೆಗೆ ಕಾಣುತ್ತಾರೆ. ಆ ಬಳಿಕ ಆ ಇಬ್ಬರೂ ಒಟ್ಟಿಗೆ ಒಂದು ಪಯಣ ಮಾಡುತ್ತಾರೆ. ಈ ವೇಳೆ ನಡೆಯುವ ತಮಾಷೆ, ಸಂದೇಶಗಳು, ಸನ್ನಿವೇಶಗಳ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೇ ತಿಂಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾ ಈ ವರೆಗೆ 85 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ – Kannada News | Father’s Day 2026: Here is a list of gifts you can give to your father on Father’s Day

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ (Father) ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಮಕ್ಕಳ ಪಾಲಿನ ಈ ಸೂಪರ್‌ ಹೀರೋಗಳನ್ನು ಸಂಭ್ರಮಿಸಲು, ಅಪ್ಪಂದಿರ ಪ್ರೀತಿ, ತ್ಯಾಗವನ್ನು ಸ್ಮರಿಸಲು ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯರ ಪಾಲಿಗಂತೂ ತುಂಬಾನೇ ವಿಶೇಷವಾದ ದಿನ. ಅನೇಕ ಜನರು ತಮ್ಮ ತಂದೆಯ ಸಲುವಾಗಿ ಈ ದಿನವನ್ನು ಸ್ಪೆಷಲ್‌ ಆಗಿ ಆಚರಿಸುತ್ತಾರೆ. ಈ ಬಾರಿ ಫಾದರ್ಸ್‌ ಡೇಯನ್ನು ಜೂನ್‌ 21 ರಂದು ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಪ್ರೀತಿಯ ತಂದೆಯ ಮುಖದಲ್ಲಿ ನಗು ತರಿಸಲು ಬಯಸಿದರೆ ಈ ಕೆಲವೊಂದು ವಿಶೇಷ ಉಡುಗೊರೆಗಳನ್ನು ನೀಡಿ.

ಫಾದರ್ಸ್‌ ಡೇ ದಿನ ತಂದೆಗೆ  ನೀಡಬಹುದಾದ ಉಡುಗೊರೆಗಳ ಪಟ್ಟಿ:

ನಿಮ್ಮ ತಂದೆಯೊಂದಿಗೆ ಸಮಯ ಕಳೆಯಿರಿ: ನೀವು ಎಷ್ಟೇ ದುಬಾರಿ ಉಡುಗೊರೆಯನ್ನು ಖರೀದಿಸಿದರೂ, ನಿಮ್ಮ ತಂದೆಗೆ ನೀವು ನೀಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ನಿಮ್ಮ ಸಮಯ. ಇಂದಿನ ಒತ್ತಡದ ಜೀವನದಲ್ಲಿ, ಹೆತ್ತವರೊಂದಿಗೆ ಸಮಯ ಕಳೆಯಲು ಯಾಗಿಗೂ ಟೈ ಇಲ್ಲ. ಹೀಗಿರುವಾಗ ಒಂದು ದಿನ ಬಿಡುವು ತೆಗೆದುಕೊಂಡು ತಂದೆ ತಾಯಿಯ ಜೊತೆ ಪಿಕ್ನಿಕ್‌ಗೆ ಹೋಗಿ ಅಮೂಲ್ಯ ಸಮೈವನ್ನು ಕಳೆಯಿರಿ. ಇಲ್ಲವೇ ಫಿಲ್ಮ್‌ಗೆ ಹೋಗಿ, ಇಲ್ಲವೇ ಮನೆಯಲ್ಲಿಯೇ ಇದ್ದು ನಿಮ್ಮ ತಂದೆಗೆ ಅವರಿಷ್ಟದ ಅಡುಗೆಗಳನ್ನು ನಿಮ್ಮ ಕೈಯಾರೆ ಮಾಡಿ ಉಣಬಡಿಸಿ, ಸ್ನೇಹಿತರಂತೆ ತಂದೆಯೊಂದಿಗೆ ಮನಬಿಚ್ಚಿ ಮಾತನಾಡಿ, ಖಂಡಿತವಾಗಿ ಈ ವಿಷಯ ನಿಮ್ಮ ತಂದೆಗೆ ತುಂಬಾ ಖುಷಿಯನ್ನು ನೀಡುತ್ತದೆ.

ಅವರು ಆನಂದಿಸುವ ವಿಷಯಗಳಿಗೆ ಸಮಯ ಮೀಸಲಿಡಿ: ತಂದೆಯಂದಿರು ಹೆಚ್ಚಾಗಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿಯೇ ಕಳೆದುಹೋಗುತ್ತಾರೆ. ಹೀಗಿರುವಾಗ ತಂದೆಯಂದಿರ ದಿನದಂದು, ಅವರು ಆನಂದಿಸುವ ಕೆಲಸಗಳನ್ನು ಮಾಡಲು ಅವರಿಗೆ ಅವಕಾಶ ನೀಡಿ. ಅವರು ವಿಶ್ರಾಂತಿ ಪಡೆಯಲಿ, ಅವರ ನೆಚ್ಚಿನ ಪುಸ್ತಕ, ಸಂಗೀತ ಅಥವಾ ಹವ್ಯಾಸಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಅವರಿಗೆ ನೀವು ಸಹಾಯ ಮಾಡಿ.

ಹಳೆಯ ಸ್ನೇಹಿತರನ್ನು ಭೇಟಿ ಮಾಡಿಸಿ: ಕುಟುಂಬದ ಜವಾಬ್ದಾರಿಗಳಿಂದಾಗಿ, ತಂದೆಯಂದಿರು ಸ್ನೇಹಿತರಿಂದ ದೂರವಿರುತ್ತಾರೆ, ಅವರಿಗೆ ಅವರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ಸಹ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅಪ್ಪಂದಿರ ದಿನದಂದು  ನಿಮ್ಮ ತಂದೆಯ  ಕ್ಲೋಸ್‌ ಫ್ರೆಂಡ್ಸ್‌, ಶಾಲಾ, ಕಾಲೇಜು ಸ್ನೇಹಿತರನ್ನು ಒಟ್ಟು ಸೇರಿಸಿ ಅವರಿಗಾಗಿ ಒಂದು ಸ್ನೇಹ ಕೂಟವನ್ನು ಆಯೋಜಿಸಿ. ಹಲವು ವರ್ಷಗಳ ನಂತರ ತಂದೆ ತಮ್ಮ ಹಳೆಯ ಸ್ನೇಹಿತರನ್ನು ನೋಡಿದಾಗ ಅವರ ಮುಖದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ನಗು ಯಾವುದೇ ದುಬಾರಿ ಉಡುಗೊರೆಗಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ.

ಇದನ್ನೂ ಓದಿ: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ಆರೋಗ್ಯ ಸಂಬಂಧಿತ ಉಡುಗೊರೆಗಳು: ವಯಸ್ಸಾದಂತೆ, ಅಪ್ಪಂದಿರಿಗೆ ವಿಶ್ರಾಂತಿ ಹೆಚ್ಚು ಬೇಕಾಗುತ್ತದೆ. ಅವರು ದೀರ್ಘ ದಿನದ ನಂತರ ದಣಿದಿದ್ದಾಗ, ಅವರಿಗೆ ರೆಸ್ಟ್‌ ಪಡೆಯಲು ನೀವು ಅವರಿಗೆ ಫೂಟ್ ಮಸಾಜ್ ಯಂತ್ರ ಅಥವಾ ಉತ್ತಮ ಮಸಾಜ್ ದಿಂಬನ್ನು ಉಡುಗೊರೆಯಾಗಿ ನೀಡಬಹುದು. ಸ್ಮಾರ್ಟ್ ವಾಚ್‌ ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಮಸಾಜ್ ಸೆಷನ್, ಆಕ್ಯುಪ್ರೆಶರ್ ಥೆರಪಿ ಅಥವಾ ಉತ್ತಮ ಕ್ಷೇಮ ಕೇಂದ್ರದಲ್ಲಿ ಯೋಗ/ಧ್ಯಾನ ತರಗತಿಗೆ ಒಂದು ತಿಂಗಳ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡಬಹುದು.  ಈ ಉಡುಗೊರೆಗಳು ಅವರು ತಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವಂತೆ ಮಾಡುತ್ತದೆ.

ನೆನಪುಗಳನ್ನು ಮರಳಿ ತರುವ ಉಡುಗೊರೆಗಳು: ನಿಮ್ಮ ತಂದೆಯ ಬಾಲ್ಯದ ಫೋಟೋಗಳು, ತಂದೆ ಅವರ ಸಹೋದರ, ಸಹೋದರಿಯರೊಂದಿಗಿರುವ ಫೋಟೋ ಅಥವಾ ನಿಮ್ಮ ಕುಟುಂಬದ ಮರೆಯಲಾದ ಕ್ಷಣದ ಫೋಟೋಗಳನ್ನು ಫೋಟೋ ಫ್ರೇಮ್‌ ಹಾಕಿಸಿ ತಂದೆಗೆ ಉಡುಗೊರೆಯಾಗಿ ನೀಡಬಹುದು.

ಪ್ರತಿದಿನ ಉಪಯೋಗಕ್ಕೆ ಬರುವ ವಸ್ತುಗಳು: ನಿಮ್ಮ ತಂದೆಗೆ ಅವರು ಪ್ರತಿದಿನ ಬಳಸುವ ವಸ್ತುಗಳನ್ನು ಸಹ ನೀವು ಗಿಫ್ಟ್‌ ಆಗಿ ನೀಡಬಹುದು. ವಾಚ್‌, ಶೇವಿಂಗ್‌ ಕಿಟ್, ಬಟ್ಟೆ, ವಾಕಿಂಗ್‌ ಶೂ, ಪರ್ಫ್ಯೂಮ್‌ ಇತ್ಯಾದಿ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಅಪ್ಪನಿಗೆ ಓಡಾಡಲು ದ್ವಿಚಕ್ರ ವಾಹನವನ್ನೂ ಗಿಫ್ಟ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ – Kannada News | India’s defence production and exports see big increase in 2025 26, says minister Rajnath Singh

ನವದೆಹಲಿ, ಜೂನ್ 18: ಭಾರತದ ರಕ್ಷಣಾ ಕ್ಷೇತ್ರ ಮಿಂಚಿನ ಸಂಚಾರ ನಡೆಸುತ್ತಿದೆ. ಸರ್ಕಾರದ ‘ಸ್ವಾವಲಂಬಿ ಭಾರತ’ (Aatmanirbhar Bharat) ಯೋಜನೆಗೆ ಭಾರಿ ಯಶಸ್ಸು ಸಿಕ್ಕಿದೆ. ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆಯು 2025-26ರ ಹಣಕಾಸು ವರ್ಷದಲ್ಲಿ (FY26) ಸಾರ್ವಕಾಲಿಕ ದಾಖಲೆಯಾದ ₹1.78 ಲಕ್ಷ ಕೋಟಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದ್ದನ್ನು ತಿಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು, ರಕ್ಷಣಾ ಕ್ಷೇತ್ರದ ಉತ್ಪಾದನೆ, ರಫ್ತು ಇತ್ಯಾದಿ ಸಾಧನೆಗಳನ್ನು ಹಂಚಿಕೊಂಡಿದ್ದಾರೆ.

ಶೇ. 15.6 ರಷ್ಟು ಹೆಚ್ಚಿದ ರಕ್ಷಣಾ ಉತ್ಪಾದನೆ

ಕಳೆದ ಹಣಕಾಸು ವರ್ಷಕ್ಕೆ (2024-25) ಹೋಲಿಸಿದರೆ ಭಾರತದ ರಕ್ಷಣಾ ಉತ್ಪಾದನೆಯು ಈ ಬಾರಿ ಶೇ. 15.6 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಕಳೆದ ವರ್ಷ ಡಿಫೆನ್ಸ್ ಪ್ರೊಡಕ್ಷನ್​ನ ಮೊತ್ತವು ₹1.54 ಲಕ್ಷ ಕೋಟಿಯಷ್ಟಿತ್ತು. ಈಗ ಅದು ₹1.78 ಲಕ್ಷ ಕೋಟಿ ತಲುಪಿದೆ.

ದೀರ್ಘಾವಧಿಯ ಪ್ರಗತಿಯನ್ನು ಗಮನಿಸಿದರೆ, 2020-21ರ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ಉತ್ಪಾದನೆ ₹84,643 ಕೋಟಿಯಷ್ಟಿತ್ತು. ಅಲ್ಲಿಂದ ಇಂದಿನವರೆಗೆ ಅಂದರೆ ಕೇವಲ 5 ವರ್ಷಗಳಲ್ಲಿ ಉತ್ಪಾದನೆಯು ಶೇ. 110 ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು 2013-14ರ ಸಾಲಿಗೆ (₹43,746 ಕೋಟಿ) ಹೋಲಿಸಿದರೆ ಇದು ಸರಿಸುಮಾರು 4 ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ

ಖಾಸಗಿ ವಲಯದ ಸಾರ್ವಕಾಲಿಕ ದಾಖಲೆಯ ಕೊಡುಗೆ

ರಕ್ಷಣಾ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಷ್ಟೇ ಅಲ್ಲದೆ, ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಯೂ ಹೆಚ್ಚಾಗಿದೆ. ರಕ್ಷಣಾ ಕ್ಷೇತ್ರದಲ್ಲಿನ ಒಟ್ಟು ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪಾಲು ಶೇ. 76ರಷ್ಟಿದೆ. ಖಾಸಗಿ ವಲಯದ ಕೊಡುಗೆ ಶೇ. 24 ಮಾತ್ರವೇ ಇದೆ. ಆದರೂ ಕೂಡ ಇತಿಹಾಸದಲ್ಲೇ ಈ ಸೆಕ್ಟರ್​ನ ಗರಿಷ್ಠ ಸಾಧನೆ ಎನಿಸಿದೆ. ಪ್ರೈವೇಟ್ ಸೆಕ್ಟರ್ ಕಂಪನಿಗಳ ಡಿಫೆನ್ಸ್ ಪ್ರೊಡಕ್ಷನ್​ನ ಒಟ್ಟು ಮೊತ್ತ ₹42,000 ಕೋಟಿಯಷ್ಟಿದೆ.

ದಾಖಲೆ ಬರೆದ ರಕ್ಷಣಾ ರಫ್ತು

ದೇಶೀಯವಾಗಿ ಉತ್ಪಾದನೆ ಹೆಚ್ಚಿರುವುದು ಭಾರತದ ರಫ್ತು ಸಾಮರ್ಥ್ಯವನ್ನೂ (Defence Exports) ಬಲಪಡಿಸಿದೆ. 2025-26ರ ಸಾಲಿನಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ದಾಖಲೆಯ ₹38,424 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳಿಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ.

ಇದನ್ನೂ ಓದಿ: 2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?

ರಕ್ಷಣಾ ಇಲಾಖೆ, ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು (DPSUs), ಖಾಸಗಿ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳ ಜಂಟಿ ಪರಿಶ್ರಮದಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪೂರಕ ನೀತಿಗಳು ಮತ್ತು ರಫ್ತು ಸಾಮರ್ಥ್ಯದೊಂದಿಗೆ ಈ ವಲಯವು ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಷ ಸೇವಿಸಿ ಶಾಲಾ ಮುಖ್ಯಶಿಕ್ಷಕ ಆತ್ಮಹತ್ಯೆ ಪ್ರಕರಣ: ಐವರು ಶಿಕ್ಷಕರು ಸೇರಿ 10 ಮಂದಿ ವಿರುದ್ಧ ಎಫ್​​ಐಆರ್​ – Kannada News | Davanagere Headmaster Death Case: FIR Registered Against 10 for Alleged Caste Harassment and Mental Torture

ಮೃತ ಮುಖ್ಯ ಶಿಕ್ಷಕ ಜಯಪ್ಪImage Credit source: Tv9 Kannada

ದಾವಣಗೆರೆ, ಜೂನ್​​ 18: ವಿಷ ಸೇವಿಸಿ ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಪ್ರಕರಣ ಸಂಬಂಧ ಐವರು ಶಿಕ್ಷಕರು, ಬಿಸಿಯೂಟದ ನಾಲ್ವರು ಅಡುಗೆ ಸಿಬ್ಬಂದಿ, ಸಿಆರ್​​ಪಿ, ಬಿಆರ್​ಪಿ ಸೇರಿದಂತೆ 10 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ,ಮಹಾಂತೇಶ್ ಗೌಳಿ, ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಸೇರಿದಂತೆ 10 ಜನರ ವಿರುದ್ಧ ಮಲೆಬೆನ್ನೂರು ಠಾಣೆಗೆ ಜಯಪ್ಪ ಪತ್ನಿ ಅಂಜನಮ್ಮ ದೂರು ನೀಡಿದ್ದರು.

ಅಂಜನಮ್ಮ ದೂರಿನಲ್ಲಿ ಏನಿದೆ?

ಕಳೆದ 10 ತಿಂಗಳಿಂದ ಕೊಕ್ಕನೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿ ಜಯಪ್ಪಗೆ ನಿತ್ಯವೂ ಹಿಂಸೆ ನೀಡಲಾಗುತ್ತಿತ್ತು. ನಾವು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಜಾತಿ ನಿಂದನೆ ಮಾಡುತ್ತಿದ್ದರು. ಈ ವಿಚಾರವನ್ನು ಹತ್ತಾರು ಸಲ ಪತಿ ಜಯಪ್ಪ ತನಗೆ ಹೇಳಿದ್ದರು. ಇವರು ನೀಡಿದ ಮಾನಸಿಕ ಹಿಂಸೆಯೇ ತನ್ನ ಪತಿ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಅಂಜಿನಮ್ಮ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು; ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!

ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ನಡುವೆ ಒಳಜಗಳದ ಆರೋಪ ಕೇಳಿಬಂದಿತ್ತು. ಸಹಶಿಕ್ಷಕರು, ಅಡುಗೆ ಸಹಾಯಕರು ಮತ್ತು ಮುಖ್ಯ ಶಿಕ್ಷಕನ ನಡುವೆ ಮನಸ್ಥಾಪದ ಹಿನ್ನೆಲೆ ಎಸ್​​ಡಿಎಂಸಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಸಭೆ ಸೇರಿದ್ದ ವೇಳೆ ಶಾಲಾ ಶೌಚಾಲಯಕ್ಕೆ ಹೋಗಿ ಮುಖ್ಯ ಶಿಕ್ಷಕ ಜಯಪ್ಪ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version