ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ – Kannada News | e PAN Card: how to apply for an e PAN using your Aadhaar e pan card.

ಪ್ಯಾನ್‌ ಕಾರ್ಡ್ (Pan Card) ಭಾರತೀಯ ಆದಾಯ ತೆರಿಗೆ ಇಲಾಖೆ ನೀಡುವ ಪ್ರಮುಖ ದಾಖಲೆಯಾಗಿದೆ. ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಸೇರಿದಂತೆ ಪ್ರಮುಖ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬೇಕೇ ಬೇಕು. ಆದಾಯ ತೆರಿಗೆ ಇಲಾಖೆಯೂ ಇ-ಪ್ಯಾನ್ ಸೌಲಭ್ಯವನ್ನು ಒದಗಿಸುತ್ತಿದೆ. ಆಧಾರ್ ಕಾರ್ಡ್ ಇದ್ದರೆ ನೀವು ಮನೆಯಿಂದಲೇ ತ್ವರಿತವಾಗಿ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.

ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಷ್ಯ ತಿಳಿದಿರಲಿ

  • ನಿಮ್ಮ ಆಧಾರ್ ಸಂಖ್ಯೆ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ.
  •  ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಆಗಿರಲೇ ಬೇಕು.
  • ನಿಮ್ಮ ಹೆಸರಿನಲ್ಲಿ ಇಲ್ಲಿಯವರೆಗೆ ಪ್ಯಾನ್ ಕಾರ್ಡ್ ಇರಬಾರದು.

ಇ-ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಆ ಬಳಿಕ ಇ-ಪ್ಯಾನ್ ಆಯ್ಕೆಯನ್ನು ಆರಿಸಿ.

ಹಂತ 3: ಹೊಸ ಇ-ಪ್ಯಾನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 5: ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಇಲ್ಲಿ ನಮೂದಿಸಿ.

ಹಂತ 6: ನಿಮ್ಮ ಆಧಾರ್ ವಿವರಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. ಎಲ್ಲವೂ ಸರಿಯಾಗಿದ್ದರೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 7: ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ.

ಹಂತ 8: ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಉಳಿಸಿ.

ಹಂತ 9: ಇ-ಪ್ಯಾನ್ ಜನರೇಟ್ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಇ-ಪ್ಯಾನ್ ಎಂದರೇನು?

ಉತ್ತರ: ಇ-ಪ್ಯಾನ್ ಕಾರ್ಡ್ ಪ್ಯಾನ್ ಕಾರ್ಡ್‌ನ ಡಿಜಿಟಲ್ ರೂಪವಾಗಿದೆ. ಇದು ಭೌತಿಕ ಕಾರ್ಡ್‌ನಷ್ಟೇ ಕಾನೂನು ಮಾನ್ಯತೆ ಹೊಂದಿದೆ.

ಪ್ರಶ್ನೆ: ಪ್ಯಾನ್ ಕಾರ್ಡ್ ಹೊಂದಿದ್ರೂ ಇ-ಪ್ಯಾನ್ ಕಾರ್ಡ್ ಪಡೆಯಬಹುದೇ?

ಉತ್ತರ: ಪ್ಯಾನ್ ಕಾರ್ಡ್ ಹೊಂದಿದ್ದರೆ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಾರದು.

ಪ್ರಶ್ನೆ: ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಉತ್ತರ: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ – Kannada News | Inflows into Equity mutual funds falls by 15pc in 2026 July, Large Cap Funds too see outflow

ನವದೆಹಲಿ, ಆಗಸ್ಟ್ 11: ಭಾರತೀಯ ಮ್ಯೂಚುವಲ್ ಫಂಡ್ ರಂಗದಲ್ಲಿ (Mutual Funds) ಜುಲೈ ತಿಂಗಳ ಹೂಡಿಕೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಈಕ್ವಿಟಿ (ಷೇರು ಆಧಾರಿತ) ಮ್ಯೂಚುವಲ್ ಫಂಡ್‌ಗಳಿಗೆ ಹರಿದುಬಂದ ನಿವ್ವಳ ಹೂಡಿಕೆಯು ಜೂನ್ ತಿಂಗಳಿಗೆ ಹೋಲಿಸಿದರೆ ಶೇಕಡಾ 15 ರಷ್ಟು ಕುಸಿತ ಕಂಡು ₹24,697 ಕೋಟಿಗೆ ತಲುಪಿದೆ. ಜೂನ್‌ನಲ್ಲಿ ಈ ಪ್ರಮಾಣವು ₹28,973 ಕೋಟಿಯಾಗಿತ್ತು.

ಲಾರ್ಜ್‌ಕ್ಯಾಪ್ ಫಂಡ್‌ಗಳಿಂದ ಹೂಡಿಕೆ ಹೊರಹರಿವು

ದೇಶದ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡುವ ಲಾರ್ಜ್‌ಕ್ಯಾಪ್ (Large-Cap) ಫಂಡ್‌ಗಳು ಜುಲೈನಲ್ಲಿ ₹1,322 ಕೋಟಿಗಳಷ್ಟು ನಿವ್ವಳ ಹೊರಹರಿವನ್ನು (ಹಣ ಹಿಂಪಡೆಯುವಿಕೆ) ಕಂಡಿವೆ.

ಕಳೆದ 30 ತಿಂಗಳುಗಳಲ್ಲಿ (ಡಿಸೆಂಬರ್ 2023 ರ ನಂತರ) ಲಾರ್ಜ್‌ಕ್ಯಾಪ್ ಫಂಡ್‌ಗಳಿಂದ ಹಣ ಹೊರಹೋಗಿರುವುದು ಇದೇ ಮೊದಲ ಬಾರಿಯಾಗಿದೆ. ಹೂಡಿಕೆದಾರರು ಬ್ಲೂಚಿಪ್ ಷೇರುಗಳಲ್ಲಿ ಲಾಭ ಕಾಯ್ದಿರಿಸಲು (Profit Booking) ಮುಂದಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?

ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್‌ಗೆ ಹೂಡಿಕೆದಾರರ ಒಲವು

ಲಾರ್ಜ್‌ಕ್ಯಾಪ್‌ನಿಂದ ಹಣ ಹೊರಹೋಗಿದ್ದರೂ, ಹೂಡಿಕೆದಾರರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪನಿಗಳ ಫಂಡ್‌ಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿದ್ದಾರೆ.

  • ಸ್ಮಾಲ್‌ಕ್ಯಾಪ್ ಫಂಡ್‌ಗಳು (Small-cap Funds) ಗರಿಷ್ಠ ಅಂದರೆ ₹7,768 ಕೋಟಿ ಹೂಡಿಕೆಯನ್ನು ಆಕರ್ಷಿಸಿ ಅಗ್ರಸ್ಥಾನದಲ್ಲಿವೆ (ಜೂನ್‌ಗೆ ಹೋಲಿಸಿದರೆ ಶೇ. 39 ಏರಿಕೆ).
  • ಮಿಡ್‌ಕ್ಯಾಪ್ ಫಂಡ್‌ಗಳು (Mid-cap Funds) ₹6,192 ಕೋಟಿ ಮತ್ತು ಫ್ಲೆಕ್ಸಿಕ್ಯಾಪ್ ಫಂಡ್‌ಗಳು ₹4,710 ಕೋಟಿ ಹೂಡಿಕೆಯನ್ನು ಪಡೆದುಕೊಂಡಿವೆ.

ಸ್ಥಿರತೆ ಕಾಯ್ದುಕೊಂಡ ಎಸ್‌ಐಪಿ

ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡುವ ಪ್ರವೃತ್ತಿ ಗಟ್ಟಿಯಾಗಿ ಮುಂದುವರಿದಿದೆ. ಜುಲೈನಲ್ಲಿ ಎಸ್‌ಐಪಿ ಕೊಡುಗೆಯ ಸಂಪೂರ್ಣ ಮೊತ್ತ ₹31,961 ಕೋಟಿಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆಯ ಸಮೀಪದಲ್ಲಿದೆ.

ಇದನ್ನೂ ಓದಿ: ಗೂಗಲ್ ಎಐ ಮೋಡ್… ನೀನೇ ಸಾಕಿದ ಗಿಳಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವಂತಾಗಿದೆ… ಯಾಕೆ?

ಡೆಟ್ (Debt) ಫಂಡ್‌ಗಳ ಚೇತರಿಕೆ

ಒಟ್ಟಾರೆ ಮ್ಯೂಚುವಲ್ ಫಂಡ್ ಉದ್ಯಮವು ಜುಲೈನಲ್ಲಿ ಭಾರಿ ಚೇತರಿಕೆ ಕಂಡಿದ್ದು, ₹2.36 ಲಕ್ಷ ಕೋಟಿಗಳಷ್ಟು ನಿವ್ವಳ ಹೂಡಿಕೆಯನ್ನು ದಾಖಲಿಸಿದೆ. ಇದಕ್ಕೆ ಮುಖ್ಯ ಕಾರಣ ಸಾಲ ಆಧಾರಿತ (Debt-oriented) ಯೋಜನೆಗಳಿಗೆ ಬೃಹತ್ ಪ್ರಮಾಣದಲ್ಲಿ (₹1.88 ಲಕ್ಷ ಕೋಟಿ) ಹಣ ಹರಿದುಬಂದಿರುವುದು.

ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ನಿರ್ವಹಿತ ಆಸ್ತಿ ಮೌಲ್ಯ

ಮ್ಯೂಚುವಲ್ ಫಂಡ್ ರಂಗದ ಒಟ್ಟು ನಿರ್ವಹಣೆಯಲ್ಲಿರುವ ಆಸ್ತಿ ಮೌಲ್ಯ (AUM) ಜೂನ್ ಅಂತ್ಯದಲ್ಲಿದ್ದ ₹82.22 ಲಕ್ಷ ಕೋಟಿಯಿಂದ ಜುಲೈ ಅಂತ್ಯಕ್ಕೆ ₹85.76 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೋಟೆಲ್, ಪಬ್- ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ: ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ – Kannada News | Karnataka Health Department Releases New guidelines For Hotel, Bar And restaurants Over violation food safety

ಬೆಂಗಳೂರು, (ಆಗಸ್ಟ್ 11): ಬೆಂಗಳೂರಿನ (Bengaluru) ಕೆಲ ಸ್ಟಾರ್ ಹೋಟೆಲ್​​​​​​ಗಳಲ್ಲಿ (Hotels) ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿದ್ದು, ಇದನ್ನು ಆಹಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ(guidelines) ಬಿಡುಗಡೆ ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಕ್ಸ್‌ಪೈರಿ ಫಂಗಸ್ ಫುಡ್‌ಗೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?

  • ಮಾಂಸಾಹರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
  • ವೆಜ್ ಆಹಾರ 65°C & ನಾನ್‌ವೆಜ್ ಆಹಾರ 70°C ತಾಪಾಮನದಲ್ಲಿ ಇಡಬೇಕು.
  • ಶೀತ ಆಹಾರ 5°C & ಫ್ರೋಜನ್ ಆಹಾರ -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಬೇಕು
  • ಅಡುಗೆ 25% TPC ಮೀರದಂತ ಎಣ್ಣೆಯನ್ನು ಆಹಾರಕ್ಕೆ ಬಳಸಬೇಕು.
  • ಕಚ್ಚಾ ಆಹಾರ, ಅರೆಬೆಂದ ಆಹಾರ ಮತ್ತು ಪೂರ್ಣವಾಗಿ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.
  • ವೆಜ್ ಮತ್ತು ನಾನ್‌ವೆಜ್ ಆಹಾರಕ್ಕೆ ಪ್ರತ್ಯೇಕ ಸಂಗ್ರಹಣೆ ಹಾಗೂ ನಿರ್ವಹಣೆ ಕಡ್ಡಾಯ.
  • ತಯಾರಿಸಿದ ಆಹಾರ ಮತ್ತೆ ಬಿಸಿ ಮಾಡುವಾಗ 75°C ತಾಪಮಾನ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಬಳಸಬೇಕು.
  • ಜೊತೆಗೆ FSSAI ಅಂಗೀಕೃತ ಪ್ರಮಾಣ ಪತ್ರ ಹೋಟೆಲ್ ಬಲ್ಲಿ ಪ್ರದರ್ಶನ ಮಾಡಬೇಕು.

ಹೀಗೆ ಹಲವು ಅಂಶಗಳ ಒಳಗೊಂಡ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.

ಇದನ್ನೂ ಓದಿ: 3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ!

ಇತ್ತೀಚಿನ ದಾಳಿಗಳಲ್ಲಿ ಸ್ಟಾರ್ ಹೋಟೆಲ್‌ಗಳ ಕಿಚನ್‌ಗಳಲ್ಲೇ ಅವಧಿ ಮೀರಿದ ಆಹಾರ, ಫಂಗಸ್ ಹಿಡಿದ ತರಕಾರಿ, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿವೆ. ಈ ಹಿನ್ನಲೆ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಹೋಟೆಲ್​ಗಳಲ್ಲಿ ಹಾಳಾದ ಆಹಾರ ಪದಾರ್ಥ ಪತ್ತೆ

ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣೆಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳನ್ನು ಪರಿಶೀಲಿಸಲಾಗಿದೆ. ಅಧಿಕಾರಿಗಳು 1,000 ಕೆಜಿಗೂ ಅಧಿಕ ಆಹಾರ ಮತ್ತು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜನರಿಗೆ ಫಂಗಸ್ ಇರುವ ಮತ್ತು ಎಕ್ಸ್‌ಪೈರಿಯಾದ ಆಹಾರ ನೀಡುತ್ತಿದ್ದುದು ಬಯಲಾಗಿದೆ. ಇದಕ್ಕಾಗಿ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಕಡಿವಾಣ ಹಾಕಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಳಿಗಳೂ ಸಹ ಜೀವ ಸಂಪತ್ತು, ಅಪಘಾತದಲ್ಲಿ ಸತ್ತರೂ ಪರಿಹಾರ ಕೊಡ್ಬೇಕು ಎಂದ ಕೋರ್ಟ್, ಏನಿದು ಕೇಸ್? – Kannada News | Chickens Are Livestock And Goods: Compensation Payable For Birds Killed In Road Accidents Say Karnataka HC

ಬೆಂಗಳೂರು, (ಆಗಸ್ಟ್ 11): ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಕೋಳಿಗಳು (Broiler chickens) ಅಪಘಾತದಲ್ಲಿ ಸಾವಿಗೀಡಾದರೆ, ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದು ಪರಿಗಣಿಸಬೇಕು ಎಂದು ಧಾರವಾಡ ಹೈಕೋರ್ಟ್ ಪೀಠ (Dharwad  High Court) ಅಭಿಪ್ರಾಯಪಟ್ಟಿದೆ. ಅಲ್ಲದೇ ಮೋಟಾರು ವಾಹನ ಕಾಯ್ದೆ ಅಡಿ ಕೋಳಿಗಳು ಸಹ ಸಾಕುಪ್ರಾಣಿಗಳ ವ್ಯಾಪ್ತಿಗೆ ಬರಲಿದ್ದು, ಅವುಗಳನ್ನು ಸರಕು ಎಂದು ಪರಿಗಣಿಸಿ ಮಾಲೀಕರಿಗೆ ಅಪಘಾತ ಪರಿಹಾರ ವಿಧಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 2(13) ರ ಪ್ರಕಾರ ‘ಸರಕು’ ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳೂ ಸಹ ಜೀವವಿರುವ ಪ್ರಾಣಿ/ಪಕ್ಷಿಗಳಾಗಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.ಅಲ್ಲದೆ, ಬಳ್ಳಾರಿಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ 4,51,000 ರೂಪಾಯಿಗಳ ಪರಿಹಾರ ಮೊತ್ತವನ್ನು ಹೈಕೋರ್ಟ್​​ ಎತ್ತಿಹಿಡಿದಿದೆ. ಆದರೆ, ನ್ಯಾಯಾಧಿಕರಣ ವಿಧಿಸಿದ್ದ ಶೇ.7ರಷ್ಟು ಬಡ್ಡಿದರವನ್ನು ಶೇ.6ಕ್ಕೆ ಇಳಿಸಿ ಆದೇಶಿಸಿದೆ.

ಇದನ್ನೂ ಓದಿ: ಹಸುಗಳಿಂದ ಟ್ರಾಫಿಕ್​​ ಜಾಮ್​​ ಆಗಿದ್ದಕ್ಕೆ ಅವುಗಳ ಮಾಲೀಕನ ಮೇಲೆ FIR!: ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ

ಅಪಘಾತದ ವೇಳೆ ವಾಹನದಲ್ಲಿದ್ದ ಕೋಳಿಗಳಿಗೆ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ಮಾಲೀಕ ಕೆ.ವೀರನಾರಾಯಣ ಸ್ವಾಮಿ ಮತ್ತು ಕೋಳಿಗಳಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ರಿಲಯನ್ಸ್‌ ಜನರಲ್ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಮೃತ ಕೋಳಿಗಳಿಗೂ ವಿಮಾ ಕಂಪನಿಯು ಪರಿಹಾರ ನೀಡುವ ಬಾಧ್ಯಸ್ಥನಾಗಿರಲಿದೆ ಎಂದು ಪೀಠ ಹೇಳಿದೆ.

ಅಪಘಾತದಲ್ಲಿ ಕೋಳಿಗಳು ಸತ್ತ ಕಾರಣ ಮಾಲೀಕನಿಗೆ 4.51 ಲಕ್ಷ ರೂ. ಪರಿಹಾರ ನೀಡುವಂತೆ ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ, ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳಡಿ ಜಾನುವಾರು ಎಂದರೆ ಎಮ್ಮೆ, ಹಸು, ಕುರಿ, ಮೇಕೆ ಮುಂತಾದ ವುಗಳು ಮಾತ್ರ ಬರುತ್ತವೆ. ಅದರಲ್ಲಿ ಕೋಳಿಗಳ ಹೆಸರಿಲ್ಲ ನಿಜ. ಆದರೆ, ಕಾಯ್ದೆ ಅಡಿ ಸರಕುಗಳು ಎಂದು ಗುರುತಿಸಲಾದ ವಿಭಾಗದಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಬರುತ್ತವೆ. ಆದ್ದರಿಂದ, ಕೋಳಿ ಕೂಡ ಪರಿಹಾರದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬಳ್ಳಾರಿಯ ಆಂಧ್ರಹಾಳ ಗ್ರಾಮದ ‘ಬಾಲಾಜಿ ಪೌಲ್ಟ್ರಿ ಫಾರ್ಮ್’ ಮಾಲೀಕರಾದ ಕೆ.ವೀರ ನಾರಾಯಣಸ್ವಾಮಿ ಅವರು 2013ರ ಜೂನ್ 18ರಂದು ಚಳ್ಳಕೆರೆ ಪೌಲ್ಟ್ರಿ ಫಾರ್ಮ್‌ನಿಂದ 2,250 ಬ್ರಾಯ್ಲರ್ ಕೋಳಿಗಳನ್ನು ಖರೀದಿಸಿ ಐಚರ್ ವಾಹನದಲ್ಲಿ ಸಾಗಿಸುತ್ತಿದ್ದರು. ಜೂನ್ 19ರಂದು ಮುಂಜಾನೆ 4 ಗಂಟೆ ಸುಮಾರಿಗೆ ಅಯ್ಯಗರಲಪಳ್ಳಿ – ಸೆಟ್ಟೂರು ರಸ್ತೆಯಲ್ಲಿ ವಾಹನ ಅಪಘಾತಕ್ಕೀಡಾಗಿ ಪಲ್ಟಿಯಾಯಿತು. ಪರಿಣಾಮ, ಸುಮಾರು 2,000 ಕೋಳಿಗಳು ಸ್ಥಳದಲ್ಲೇ ಸಾವಿಗೀಡಾದವು ಮತ್ತು 250 ಕೋಳಿಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗಿದ್ದರು.

ಅಪಘಾತದಲ್ಲಿ ಆದ ನಷ್ಟಕ್ಕಾಗಿ 5,90,000 ರೂ.ಗಳ ಪರಿಹಾರ ನೀಡಬೇಕು ಎಂದು ಕೋರಿ ವೀರ ನಾರಾಯಣಸ್ವಾಮಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕೋಳಿಗಳಿಗೂ ಪರಿಹಾರ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಮತ್ತು ಹೆಚ್ಚುವರಿ ಪರಿಹಾರ ಕೋರಿ ವೀರನಾರಾಯಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗೆ ಮುಜುಗರ: ಪ್ರವಚನ ಮಧ್ಯದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀಗಳು – Kannada News | Gavishiddeshwara Swamiji Embarrassed at Ballari Function; Halts Speech Mid Way

ಬಳ್ಳಾರಿ, ಆ.11: ಕೊಪ್ಪಳದ ಪ್ರಸಿದ್ದ ಶ್ರೀ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳಿಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೀವ್ರ ಮುಜುಗರ ಉಂಟಾದ ಘಟನೆ ನಡೆದಿದೆ. ವೇದಿಕೆಯಲ್ಲಿ ಉಂಟಾದ ಗದ್ದಲ ಹಾಗೂ ಮೈಕ್ ಕಿರಿಕಿರಿ ಹಿನ್ನೆಲೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿರುವುದು ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆರಂಭದಲ್ಲೇ ಮೈಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಾಗೂ ಗದ್ದಲ ಉಂಟಾಯಿತು. ಸ್ವಾಮೀಜಿ ಪ್ರವಚನ ನೀಡುತ್ತಿರುವಾಗಲೇ ವೇದಿಕೆಯಲ್ಲಿದ್ದವರು ಅತಿಥಿಗಳು ಹಾಗೂ ರಾಜಕೀಯ ನಾಯಕರ ಆಗಮನದ ಕುರಿತು ಪದೇಪದೇ ಮೈಕ್‌ನಲ್ಲಿ ಘೋಷಣೆ ಮಾಡುತ್ತಾ ಅಡ್ಡಿಪಡಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ವಾದ್ಯಮೇಳಗಳ ಸದ್ದು, ಬೆಂಬಲಿತರ ಕೂಗಾಟ ಹಾಗೂ ಧ್ವನಿವರ್ಧಕದ ಮ್ಯೂಸಿಕ್ ಹೆಚ್ಚಾಯಿತು. ಪ್ರವಚನಕ್ಕೆ ಪದೇಪದೇ ಅಡ್ಡಿಯಾಗಿದ್ದರಿಂದ ತೀವ್ರ ಅಸಮಾಧಾನಗೊಂಡ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿದರು. ಈ ವೇಳೆ ಸಚಿವ ಈಶ್ವರ ಖಂಡ್ರೆ ಅವರು ಶ್ರೀಗಳ ಆಶೀರ್ವಾದ ಪಡೆದು ಒಂದೆರಡು ಮಾತುಗಳನ್ನಾಡಿ ಕುಳಿತರು. ತಕ್ಷಣವೇ ಶ್ರೀಗಳು ಯಾರಿಗೂ ಕಾಯದೆ ನಿಧಾನವಾಗಿ ವೇದಿಕೆಯಿಂದ ನಿರ್ಗಮಿಸಿದರು. ಪೂಜ್ಯ ಸ್ವಾಮೀಜಿಗಳಿಗೆ ಸಾರ್ವಜನಿಕವಾಗಿ ಉಂಟಾದ ಈ ಮುಜುಗರದ ಘಟನೆ ಗವಿಮಠದ ಲಕ್ಷಾಂತರ ಭಕ್ತರಲ್ಲಿ ತೀವ್ರ ಬೇಸರ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒತ್ತಡದಿಂದ ಮುಕ್ತರಾಗಲು ಬಯಸಿದರೆ ಗಾರ್ಡನಿಂಗ್‌ ಹವ್ಯಾಸವನ್ನು ಬೆಳೆಸಿಕೊಳ್ಳಿ – Kannada News | Gardening hobby is beneficial for health

ಗಾರ್ಡನಿಂಗ್‌ (gardening) ಪ್ರಿಯರು ಬಾಲ್ಕನಿಗಳಲ್ಲಿ, ಮನೆಯ ಅಂಗಳದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡುವು ಮೂಲಕ ಸುಂದರ ಕೈತೋಟಗಳನ್ನು ನಿರ್ಮಿಸುತ್ತಾರೆ. ಜೊತೆಗೆ ಗಿಡಗಳಿಗೆ ನೀರು ಹಾಕುತ್ತಾ, ಗೊಬ್ಬರ ಹಾಕುತ್ತಾ, ಕಳೆಗಳನ್ನು ಕೀಳುತ್ತಾ ಒಂದಷ್ಟು ಸಮಯ ಕೈತೋಟದಲ್ಲಿಯೇ ಕಳೆಯುತ್ತಾರೆ. ತುಂಬಾ ಸಾಮಾನ್ಯವೆನಿಸುವ ಈ ಹವ್ಯಾಸವು  ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಯಮಿತ ತೋಟಗಾರಿಕೆ ಒತ್ತಡವನ್ನು ಕಡಿಮೆ ಮಾಡಲು, ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ನೀವು ಕೂಡ ಒತ್ತಡದಿಂದ ಮುಕ್ತಿ ಪಡೆಯಲು ಬಯಸಿದರೆ ಮನೆಯಲ್ಲಿ ಕೈತೋಟ ನಿರ್ಮಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಗಾರ್ಡನಿಂಗ್‌ ಹವ್ಯಾಸ ಆರೋಗ್ಯಕ್ಕೆ ಸಖತ್ ಪ್ರಯೋಜನಕಾರಿ:

ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ: ತೋಟಗಾರಿಕೆ, ಪ್ರತಿನಿತ್ಯ ಸಸ್ಯಗಳಿಗೆ ನೀರು ಹಾಕುವುದು, ಕಳೆಗಳನ್ನು ತೆಗೆಯುವುದು, ಬಗೆಬಗೆಯ ಸಸ್ಯಗಳನ್ನು ನೆಡುವುದು ಹೀಗೆ ಪ್ರತಿನಿತ್ಯ ಕೈತೋಟದ ಬಳಿ ಒಂದಷ್ಟು ಸಮಯ ಕಳೆಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಮನಸ್ಸು ನಿರಾಳವಾಗುತ್ತದೆ ಮತ್ತು ನಿಮಗೆ ಸಂತೋಷವನ್ನು ಕೂಡ ನೀಡುತ್ತದೆ.

ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ: ಪ್ರತಿನಿತ್ಯ ಸಸ್ಯಗಳು ಬೆಳೆಯುವುದನ್ನು ನೋಡುವುದು ಮತ್ತು ನೀವು ನೆಟ್ಟ ಗಿಡಮರಗಳು ಫಸಲು (ಹೂವುಗಳು, ಹಣ್ಣುಗಳು, ತರಕಾರಿ) ನೀಡುವುದನ್ನು ನೋಡುವುದು ತೃಪ್ತಿಕರ ಅನುಭವ ಮಾತ್ರವಲ್ಲ. ಇವು ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಜೀವನದಲ್ಲಿ ಸಂತೋಷವಾಗಿರಲು ಸಿಂಪಲ್‌ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಸಕ್ರಿಯವಾಗಿರಲು ಸಹಾಯ ಮಾಡುತ್ತದೆ: ತೋಟಗಾರಿಕೆಯನ್ನು ದೈಹಿಕ ಚಟುವಟಿಕೆಯ ಒಂದು ರೂಪವೆಂದು ಪರಿಗಣಿಸಬಹುದು. ಗಿಡಗಳನ್ನು ನೆಡುವುದು, ಮಣ್ಣನ್ನು ಅಗೆಯುವುದು, ಗೊಬ್ಬರ ಹಾಕುವುದು, ಕಳೆಗಳನ್ನು ಕೀಳುವುದು ಇವೆಲ್ಲವೂ ತೋಳುಗಳು ಮತ್ತು ಕಾಲುಗಳಿಗೆ ವ್ಯಾಯಾಮವನ್ನು ನೀಡುತ್ತದೆ. ಇವು ನಿಮ್ಮನ್ನು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.

ವಿಟಮಿನ್ ಡಿ ಪಡೆಯಲು ಸಹಾಯ ಮಾಡುತ್ತದೆ: ನಿಮ್ಮ ಕೈತೋಟದಲ್ಲಿ ನೀವು ಸಮಯವನ್ನು ಕಳೆಯುವ ಸಂದರ್ಭದಲ್ಲಿ ನೀವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತೀರಿ. ಆಗ ನಿಮ್ಮ ದೇಹಕ್ಕೆ ನೈಸರ್ಗಿಕವಾಗಿ ವಿಟಮಿನ್‌ ಡಿ ಸಿಗುತ್ತದೆ. ಈ ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಮೂಳೆಯ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರುಣಾಚಲ ಪ್ರದೇಶ ನಮ್ಮ ದೇಶದ ಅವಿಭಾಜ್ಯ ಅಂಗ; ಚೀನಾದ ಆಕ್ಷೇಪಕ್ಕೆ ಭಾರತ ತಿರುಗೇಟು – Kannada News | Inalienable part of India; Government hits back at China over Arunachal Pradesh mapping row

ನವದೆಹಲಿ, ಆಗಸ್ಟ್ 11: ಅರುಣಾಚಲ ಪ್ರದೇಶದ 27 ಪ್ರದೇಶಗಳನ್ನು ಭಾರತ ತನ್ನ ಅಧಿಕೃತ ನಕ್ಷೆಯಲ್ಲಿ ನಮೂದಿಸಿರುವುದಕ್ಕೆ ಚೀನಾ (China) ವ್ಯಕ್ತಪಡಿಸಿದ ಆಕ್ಷೇಪಕ್ಕೆ ಭಾರತ ತಿರುಗೇಟು ನೀಡಿದೆ. ಈ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಈ ಸತ್ಯವನ್ನು ಯಾವುದೇ ಶಕ್ತಿಯಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತವು ಗುಣಮಟ್ಟದ ಹೆಸರುಗಳನ್ನು ನಿಗದಿಪಡಿಸುವುದನ್ನು ಚೀನಾ ವಿರೋಧಿಸಿ, ಆ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮರುಸ್ಥಾಪಿಸಲು ಯತ್ನಿಸಿದ ಬೆನ್ನಲ್ಲೇ ಭಾರತ ಈ ತಿರುಗೇಟು ನೀಡಿದೆ.

ಎರಡೂ ದೇಶಗಳ ನಡುವೆ ಸಂಬಂಧ ಉತ್ತಮವಾಗಿರಬೇಕೆಂದರೆ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಭಾರತ ಪುನರುಚ್ಚರಿಸಿದೆ.

ಗಡಿ ವಿವಾದ ಅತ್ಯಂತ ಗಂಭೀರ ವಿಚಾರ ಎಂದ ವಿದೇಶಾಂಗ ಸಚಿವಾಲಯ:

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂಬುದನ್ನು ಚೀನಾದ ಜೊತೆಗಿನ ಪ್ರತಿಯೊಂದು ಮಾತುಕತೆಯಲ್ಲೂ ಒತ್ತಿಹೇಳುತ್ತಾ ಬಂದಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಚೀನಾ ಅರುಣಾಚಲ ಪ್ರದೇಶವನ್ನು “ಜಾಂಗ್ನನ್” (Zangnan) ಎಂದು ಕರೆಯುತ್ತದೆ. ಭಾರತ ಈ ವಾದವನ್ನು ಮೊದಲಿನಿಂದಲೂ ತಿರಸ್ಕರಿಸುತ್ತಾ ಬಂದಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್, ‘ಜಾಂಗ್ನನ್ ಪ್ರದೇಶ ಚೀನಾದ ಭೂಭಾಗ’ ಎಂದು ಹೇಳಿಕೊಂಡಿದ್ದರು.

ಇದಕ್ಕೆ ಉತ್ತರ ನೀಡಿರುವ ಭಾರತ, ಚೀನಾದ ಯಾವುದೇ ಆಕ್ಷೇಪಣೆಗಳು ಅರುಣಾಚಲ ಪ್ರದೇಶದ ಸ್ಥಾನಮಾನದ ಮೇಲೆ ಯಾವುದೇ ಪ್ರಭಾವ ಬೀರಲಾರವು ಎಂದು ಸ್ಪಷ್ಟಪಡಿಸಿದೆ. ಚೀನಾ ಪದೇ ಪದೇ ಅರುಣಾಚಲ ಪ್ರದೇಶದ ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಆದರೆ ಹೊಸ ಹೆಸರುಗಳನ್ನು ನೀಡುವುದರಿಂದ ಪ್ರಾದೇಶಿಕ ಸಾರ್ವಭೌಮತ್ವ ಬದಲಾಗುವುದಿಲ್ಲ ಎಂದು ಭಾರತ ಖಡಕ್ಕಾಗಿ ತಿಳಿಸಿದೆ.

27 ಸ್ಥಳಗಳನ್ನು ನಕ್ಷೆಯಲ್ಲಿ ಗುರುತಿಸಿದ ಭಾರತ:

ಭಾರತೀಯ ಸರ್ವೇಕ್ಷಣಾ ಇಲಾಖೆಯ (Survey of India) ಅಧಿಕೃತ ನಕ್ಷೆಗಳಲ್ಲಿ ಅರುಣಾಚಲ ಪ್ರದೇಶದ 27 ಪ್ರಮುಖ ಸ್ಥಳಗಳು ಮತ್ತು ಭೌಗೋಳಿಕ ಪ್ರದೇಶಗಳನ್ನು ಅವುಗಳ ಮಾನದಂಡ ಹೆಸರುಗಳೊಂದಿಗೆ ಭಾರತ ನಿಖರವಾಗಿ ಗುರುತಿಸಿದೆ. ಈ ಸ್ಥಳಗಳಲ್ಲಿ ತಾಂತ್ರಿಕ ಮತ್ತು ಐತಿಹಾಸಿಕವಾಗಿ ಮಹತ್ವದ ಜನವಸತಿ ಪ್ರದೇಶಗಳು, ಪರ್ವತ ಮಾರ್ಗಗಳು, ಸರೋವರ ಮತ್ತು ಯುದ್ಧ ಸ್ಮಾರಕಗಳು ಸೇರಿವೆ. 1959ರ ಭಾರತ-ಚೀನಾ ಉದ್ವಿಗ್ನತೆಯ ಕೇಂದ್ರಬಿಂದುವಾಗಿದ್ದ ಲಾಂಗ್ಜು ಮತ್ತು 1962ರ ಯುದ್ಧದ ಆರಂಭಿಕ ಹಂತಕ್ಕೆ ಸಂಬಂಧಿಸಿದ ಥಾಗ್ ಲಾ ಪ್ರದೇಶಗಳು ಇದರಲ್ಲಿವೆ.

ಇದನ್ನೂ ಓದಿ: ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಚೀನಾದ 250 ಫಿರಂಗಿಗಳ ನಿಯೋಜನೆ

ಅರುಣಾಚಲ ಪ್ರದೇಶದ ವಿಚಾರದಲ್ಲಿ ಮಾತಿನ ಚಕಮಕಿ ನಡೆದರೂ, ವಾಸ್ತವ ನಿಯಂತ್ರಣ ರೇಖೆಯಲ್ಲಿ (LAC) ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಎರಡೂ ದೇಶಗಳ ಸುದೀರ್ಘ ದ್ವಿಪಕ್ಷೀಯ ಬಾಂಧವ್ಯಕ್ಕೆ ಅತ್ಯಗತ್ಯ ಎಂದು ಭಾರತ ಒತ್ತಿಹೇಳಿದೆ. ಆಗಸ್ಟ್ 6ರಂದು ನವದೆಹಲಿಯಲ್ಲಿ ನಡೆದ ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯದ (WMCC) 36ನೇ ಸಭೆಯಲ್ಲೂ ಭಾರತ ಈ ನಿಲುವನ್ನು ಪುನರುಚ್ಚರಿಸಿತ್ತು.

ಅರುಣಾಚಲ ಪ್ರದೇಶದ ಪ್ರಮುಖ ಭೂಭಾಗಗಳು, ಪರ್ವತ ಮಾರ್ಗಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯ ನಕ್ಷೆಯಲ್ಲಿ ಸರಿಯಾದ ಹೆಸರುಗಳೊಂದಿಗೆ ಗುರುತಿಸುವುದು ಭಾರತದ ಸಾರ್ವಭೌಮ ಹಕ್ಕಾಗಿದೆ. ಚೀನಾ ಈ ಪ್ರದೇಶವನ್ನು ತನ್ನದೆಂದು ಪ್ರತಿಪಾದಿಸಲು ಪ್ರಯತ್ನಿಸುತ್ತಿದ್ದರೂ, ಭಾರತ ತಕ್ಕ ಉತ್ತರ ನೀಡುವ ಮೂಲಕ ಪ್ರಾದೇಶಿಕ ಸಾರ್ವಭೌಮತ್ವದ ವಿಚಾರದಲ್ಲಿ ತನ್ನ ದೃಢ ನಿಲುವನ್ನು ಪ್ರದರ್ಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಮಿಟೆರೊ ಮ್ಯುಮೆಂಟ್‌ಲೆ; ಇದು ಕಣ್ಮನ ಸೆಳೆಯುವ ಜಗತ್ತಿನ ಸುಂದರ ಸ್ಮಶಾನ – Kannada News | Italy: Cimiterio Monumentale is one of the world’s most beautiful monumental cemeteries.

ಸ್ಮಶಾನ (cemeteries) ಅಂದರೆ ಎಲ್ಲರಿಗೂ ಭಯ. ಹೀಗಾಗಿ ಈ ಸ್ಥಳದತ್ತ ಹೋಗುವುದು ಬಿಡಿ, ಆ ಕಡೆ ತಿರುಗಿ ಮುಖ ಮಾಡಲ್ಲ. ಆದರೆ ಈ ಸ್ಮಶಾನವನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ. ಹೌದು ಈ ಸ್ಮಶಾನವು ತನ್ನ ವಾಸ್ತುಶಿಲ್ಪ ಹಾಗೂ ಅಪ್ರತಿಮ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅದುವೇ ಇಟಲಿಯ ಮಿಲನ್ ನಗರದಲ್ಲಿರುವ (Milan, City in Italy) ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ. ಹಾಗಾದ್ರೆ ಈ ಸ್ಮಶಾನವನ್ನು ಜಗತ್ತಿನ ಸುಂದರವಾದ ಸ್ಮಶಾನ ಎನ್ನುವುದರ ಹಿಂದಿರುವ ಕಾರಣ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ: ಏನಿದರ ವಿಶೇಷತೆ?

ಇಟಲಿಯ ಮಿಲನ್ ನಗರದಲ್ಲಿರುವ ಈ ಸ್ಮಶಾನವನ್ನು ಮೊದಲ ಬಾರಿಗೆ ನೋಡಿದ್ರೆ ಅರಮನೆ, ಕಲಾ ವಸ್ತುಸಂಗ್ರಹಾಲಯ ಅಥವಾ ಪ್ರಾಚೀನ ಕಾಲದ ಭವ್ಯ ರೈಲು ನಿಲ್ದಾಣ ಎಂದುಕೊಳ್ತಾರೆ. ಆದರೆ ಈ ಸ್ಮಶಾನವು ಅದ್ಭುತ ವಾಸ್ತುಶಿಲ್ಪ, ಕಲ್ಲಿನ ಕೆತ್ತನೆಗಳು ಮತ್ತು ಅದ್ಭುತ ಶಿಲ್ಪಗಳಿಂದ ನಿರ್ಮಿಸಲ್ಪಟ್ಟಿದೆ. ಪ್ರಸಿದ್ಧ ಇಟಾಲಿಯನ್ ಶಿಲ್ಪಿಗಳು ಹಾಗೂ ವಾಸ್ತುಶಿಲ್ಪಿಗಳು ಕೆತ್ತಿದ ಪ್ರತಿಮೆಗಳು ಮತ್ತು ಸಮಾಧಿ ಛಾವಣಿಯ ರಚನೆಗಳನ್ನು ಇಲ್ಲಿ ಕಾಣಬಹುದು. ಈ ಸ್ಮಶಾನವನ್ನು 1866 ರಲ್ಲಿ ನಿರ್ಮಿಸಲಾಯಿತು. ಅನೇಕ ಪ್ರಸಿದ್ಧ ವ್ಯಕ್ತಿಗಳ ಸಮಾಧಿಗಳು ಇಲ್ಲಿವೆ. ಕಲಾ ಪ್ರೇಮಿಗಳು ಮತ್ತು ಇತಿಹಾಸಕಾರರಿಗೆ ಈ ಸ್ಥಳವು ಸ್ವರ್ಗದಂತಿದೆ.

ಇದನ್ನೂ ಓದಿ: ಅಪ್ಪನ ಚಿತೆ ಉರಿಯುತ್ತಿದ್ದಾಗ ಇನ್ನೂ ಎಷ್ಟು ಟೈಮ್ ಬೇಕೆಂದು ವಿಡಿಯೋ ಕಾಲ್​ನಲ್ಲಿ ಕೇಳಿದ ಮಗಳು

ಈ ಸ್ಮಶಾನದ ಹೊರಭಾಗದಲ್ಲಿ ತಾಜಾ ಹೂವಿನ ಅಂಗಡಿಗಳೂ ಇವೆ. ಇಲ್ಲಿಗೆ ಪ್ರವಾಸಿಗರು ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರು ಇಲ್ಲಿಗೆ ಬರುತ್ತಾರೆ. ಹೂವಿನ ಅಂಗಡಿಗಳಲ್ಲಿರುವ ವರ್ಣರಂಜಿತ ಮತ್ತು ಪರಿಮಳಯುಕ್ತ ಹೂವುಗಳನ್ನು ಖರೀದಿಸಿ ತಮ್ಮ ಅಗಲಿದ ವ್ಯಕ್ತಿಗಳ ಸಮಾಧಿಗೆ ಇಟ್ಟು ಗೌರವ ಸಲ್ಲಿಸುತ್ತಾರೆ. ಹೂವಿನ ಅಂಗಡಿಗಳು ಈ ಸ್ಮಶಾನ ಚಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ದಾಳಿಂಬೆ ಕದ್ದ ಕಳ್ಳರು: ಬರದ ನಡುವೆಯೂ ಬೆಳೆ ಬೆಳೆದ ರೈತ ಕಂಗಾಲು – Kannada News | Chikkaballapura Horror: Thieves Steal Pomegranates Worth 3 Lakh Overnight

2 ರಿಂದ 3 ಟನ್ ದಾಳಿಂಬೆ ಬೆಳೆ ಕದ್ದ ಕಳ್ಳರುImage Credit source: Tv9 Kannada

ಚಿಕ್ಕಬಳ್ಳಾಪುರ, ಆಗಸ್ಟ್​​ 11: ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಬೆಳೆಯನ್ನು ಕದ್ದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗ್ರಾಮದಲ್ಲಿ ನಡೆದಿದೆ. ರೈತ ಮಂಜುನಾಥ್‌ ಎಂಬವರ ಜಮೀನಿನಲ್ಲಿ ಕಳ್ಳರು ಕೈಚಳಕ ತೋರಿದ್ದು, ನೀರಿನ ಕೊರತೆಯ ನಡುವೆಯೂ ಹನಿ ಹನಿ ನೀರುಣಿಸಿ ತೋಟವನ್ನು ಕಾಪಾಡಿಕೊಂಡಿದ್ದ ರೈತನಿಗೆ ಭರಸಿಡಿಲು ಬಡಿದಂತಾಗಿದೆ. ಕಳುವಾಗಿರುವ 2 ರಿಂದ 3 ಟನ್ ದಾಳಿಂಬೆ ಬೆಳೆಯ ಮೌಲ್ಯ ಸುಮಾರು 3 ಲಕ್ಷ ರೂಪಾಯಿ ಎನ್ನಲಾಗಿದೆ.

ಪತ್ನಿ ಚಿನ್ನಾಭರಣ ಅಡವಿಟ್ಟು ಬೆಳೆ ಬೆಳೆದಿದ್ದ ರೈತ

ಸದ್ಯ ತೋಟದಲ್ಲೇ ದಾಳಿಂಬೆಗೆ ಕೆಜಿಗೆ 130 ರಿಂದ 150 ರೂಪಾಯಿ ಬೆಲೆ ಸಿಗುತ್ತಿತ್ತು. ಉತ್ತಮ ಬೆಲೆ ಹಿನ್ನೆಲೆ ಕಳ್ಳರ ಕಣ್ಣು ರೈತನ ಬೆಳೆಯ ಮೇಲೆ ಬಿದ್ದಿದೆ. ರೈತ ಮಂಜುನಾಥ್ ತಮ್ಮ ಪತ್ನಿಯ ಚಿನ್ನಾಭರಣಗಳನ್ನು ಅಡ ಇಟ್ಟು, ಸಾಲ ಮಾಡಿ ಬೆಳೆ ಬೆಳೆದಿದ್ದರು. ಮುಕ್ಕಾಲು ಎಕರೆಯಲ್ಲಿ ದಾಳಿಂಬೆ ಬೆಳೆಯಲು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದರು. ಸಾಲ ಮಾಡಿ ಬರದ ನಡುವೆಯೂ ಬೆಳೆ ಬೆಳೆಸಿ, ಅದನ್ನು ಮಾರಿ ಲಾಭ ಗಳಿಸುವ ಕನಸು ಕಂಡಿದ್ದರು. ಆದರೆ ಕೈಗೆ ಬಂದ ಫಸಲು ಕಳ್ಳರ ಪಾಲಾಗಿರುವುದರಿಂದ ರೈತ ಮಂಜುನಾಥ್ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು!

ಇನ್ನು ಘಟನೆ ಬೆನ್ನಲ್ಲೇ ಆರೋಪಿಗಳ ಬಂಧನಕ್ಕೆ ಸ್ಥಳೀಯ ರೈತರಿಂದ ದೊಡ್ಡ ಮಟ್ಟದ ಆಗ್ರಹ ಕೇಳಿಬಂದಿದೆ. ಶೀಘ್ರವೇ ಕಳ್ಳರನ್ನು ಹಿಡಿಯಬೇಕು. ಇಲ್ಲವಾದಲ್ಲಿ ಅವರು ಇದನ್ನೇ ಕಾಯಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ರೈತ ಮಂಜುನಾಥ್​​ ಅವರು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ: ಎಫ್‌ಎಸ್‌ಎಸ್‌ಎಐ ನಿಯಮ ಮೀರಿದ ಇಂದಿರಾ ಕ್ಯಾಂಟೀನ್ ಘಟಕಗಳಿಗೆ ನೋಟಿಸ್ – Kannada News | FSSAI Seals Indira Canteen Godown in Bengaluru Over Hygiene Lapses, Quality Concerns

ಬೆಂಗಳೂರು, ಆ.11: ಬೆಂಗಳೂರಿನ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶ ಹೊಂದಿರುವ ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಮನೆಗಳ ಮೇಲೆ ಇದೀಗ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಕಠಿಣ ನಿಗಾ ವಹಿಸಿದ್ದಾರೆ. ಇಂದು ಬೆಳಿಗ್ಗೆ ನಗರದ ಪ್ರಮುಖ ಮೂರು ಕೇಂದ್ರ ಅಡುಗೆ ಘಟಕಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಆಹಾರ ಸುರಕ್ಷತಾ ನಿಯಮಗಳ ಭಾರೀ ಉಲ್ಲಂಘನೆಯನ್ನು ಪತ್ತೆ ಹಚ್ಚಿದ್ದಾರೆ. ಆಹಾರ ಇಲಾಖೆಯ ತಪಾಸಣಾ ತಂಡವು ಬೆಂಗಳೂರಿನ ಗೊಟ್ಟಿಗೆರೆ, ಲಿಂಗರಾಜಪುರ ಮತ್ತು ಸಿಂಗಸಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ಕೇಂದ್ರ ಅಡುಗೆ ಘಟಕಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್​​ನಲ್ಲಿ ಪರಿಶೀಲನೆ ವೇಳೆ ಹೆಗ್ಗಣ ಮತ್ತು ಇಲಿಗಳು ಕಂಡುಬಂದ ಪರಿಣಾಮ ಕ್ಯಾಂಟೀನ್​​ ಸೀಜ್​ ಮಾಡಲಾಗಿತ್ತು. ಇದೀಗ ಈ ಲೋಪಕ್ಕೆ ಸಂಬಂಧಿಸಿದಂತೆ ಇಂದಿರಾ ಕ್ಯಾಂಟೀನ್‌ ಅಧಿಕಾರಿಗಳಿಗೆ ನೋಟಿಸ್​​​​​ ನೀಡಲಾಗಿದೆ.

ಬಳಸುವ ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಆಹಾರ ಪದಾರ್ಥಗಳ ಮಿಸ್‌ಬ್ರಾಂಡಿಂಗ್ ಮತ್ತು ಎಫ್‌ಎಸ್‌ಎಸ್‌ಎಐ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅಡುಗೆ ಘಟಕಗಳಲ್ಲಿ ಆಹಾರ ನಿರ್ವಹಣೆ ಅತ್ಯಂತ ಅಶುಚಿಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದೀಗ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಶುಚಿತ್ವ ಮತ್ತು ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಗೊಟ್ಟಿಗೆರೆ ಇಂದಿರಾ ಕ್ಯಾಂಟೀನ್ ಅಡುಗೆ ಘಟಕದ ಗೋದಾಮಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ. ಮೂರು ಅಡುಗೆ ಘಟಕಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ನ್ಯಾಯ ನಿರ್ಣಾಯಾಧಿಕಾರಿ ಮುಂದೆ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು!

ಮಾದರಿ ಪರೀಕ್ಷೆ:

ದಾಳಿ ವೇಳೆ ಬೇಳೆ, ಅರಿಶಿನ ಪುಡಿ, ಎಣ್ಣೆ, ಉಪ್ಪು ಮತ್ತು ಸಕ್ಕರೆಯಂತಹ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿಯಲ್ಲಿ ಗುಣಮಟ್ಟ ಕಳಪೆಯಾಗಿರುವುದು ಕಂಡುಬಂದಲ್ಲಿ, ಆಹಾರ ಉದ್ದಿಮೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ಸುರಕ್ಷಿತ, ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರ ಸಿಗುವಂತೆ ಮಾಡಲು ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version