ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಾಮಾಜಿಕ ಕಳಕಳಿ ಕೂಡ ಹೊಂದಿದ್ದಾರೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಜನರಲ್ಲಿ ಅವರು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ (Cleanliness Drive) ಭಾಗಿಯಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ವಿಧಾನ ಸೌಧದ ಮುಂಭಾಗ ಸ್ವಚ್ಛ ಮಾಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ. ಅನಿರುದ್ಧ ಜತ್ಕರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಕಸದ ರಾಶಿ ಕಂಡರೂ ಕೂಡ ಅದರ ವಿಡಿಯೋ ಪೋಸ್ಟ್ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಅನಿರುದ್ಧ್ ಅವರು ಮಾಡುತ್ತಾರೆ. ಅವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರು, ಮಾರ್ಚ್ 22: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ಇಂದು (ಮಾ.22)ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿರಣ್ (25) ಎಂಬ ಯುವಕನನ್ನು ದುಷ್ಕರ್ಮಿಗಳು ತಲೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ದ್ವೇಷಕ್ಕೆ ನಡೀತಾ ಕೊಲೆ?
ಕುಡಿದು ಗಲಾಟೆ ಮಾಡಿದ ಪ್ರಕರಣಗಳು ಸೇರಿದಂತೆ ಕೊಲೆಯಾದ ಕಿರಣ್ ವಿರುದ್ಧ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದು, ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಮುನ್ನರಾತ್ರಿ ಕೂಡ ಕಿರಣ್ ಕುಡಿದು ಗಲಾಟೆ ಮಾಡಿದ್ದು, ತಡರಾತ್ರಿವರೆಗೆ ವಾಗ್ವಾದ ನಡೆದ ಬಳಿಕ ಮುಂಜಾನೆ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲಿಸರು ಹೇಳಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಸ್ಥಳೀಯ ನಿವಾಸಿ ಗೋಪಾಲ್ ಮಾತನಾಡಿ, ಕಿರಣ್ ತನ್ನ ತಾಯಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ಕೊಲೆ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಚುರುಕುಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಜೋಳದಡಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಮೀನುಗಾರ ನಾಗರಾಜ್ (28) ದುರ್ಮರಣಕ್ಕೀಡಾದ ಘಟನೆ ನಡೆದಿದೆ. ನಸುಕಿನ ಜಾವ ಮೀನು ಹಿಡಿಯಲು ತೆರಳಿದ್ದ ನಾಗರಾಜ್, ಬೆಂಡ್ ಮೇಲೆ ಕುಳಿತು ಬಲೆ ಹಾಕುತ್ತಿದ್ದಾಗ ಬೃಹತ್ ಮೊಸಳೆ ದಾಳಿ ಮಾಡಲು ಮುಂದಾಗಿ ಬೆಂಡ್ ಕೆಡವಿದೆ. ನದಿಗೆ ಬಿದ್ದ ಆತ ಈಜಾಡಿ ಪಾರಾಗಲು ಯತ್ನಿಸಿದರೂ ಕಾಲಿಗೆ ಮೀನಿನ ಬಲೆ ಸಿಲುಕಿಕೊಂಡು ಹೊರಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಸ್ಥಳೀಯ ಮೀನುಗಾರರು ಕೂಗಿದ ಪರಿಣಾಮ ಮೊಸಳೆ ಪರಾರಿಯಾಗಿದ್ದು, ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಪ್ರಕರಣ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್ ನಂತಹ ಒಗಟಿನ ಚಿತ್ರಗಳೇ ಹಾಗೆ. ಕ್ಷಣಾರ್ಧದಲ್ಲಿ ಈ ಒಗಟು ಬಿಡಿಸಿ ಉತ್ತರ ಕಂಡುಕೊಳ್ಳಲು ಅಸಾಧ್ಯ. ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸಲು ಹೋಗಿ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಈ ಟ್ರಿಕ್ಕಿ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಪರೀಕ್ಷಿಸಲು ಸಹಾಯ ಮಾಡುತ್ತವೆ. ಈ ಉದ್ಯಾನವನದಲ್ಲಿ ಹೂವುಗಳ ನಡುವೆ ಗಂಟೆಯೊಂದಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟಾರಾಗಿದ್ರೆ ಕೇವಲ ಹತ್ತು ಒಳಗೆ ಈ ವಸ್ತುವನ್ನು ಪತ್ತೆ ಹಚ್ಚಿ ನೋಡೋಣ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನೋಡುವುದಕ್ಕೆ ಕಲರ್ ಫುಲ್ ಆಗಿದ್ದು, ತುಂಬಾನೇ ಟ್ರಿಕ್ಕಿಯಾಗಿದೆ. ಉದ್ಯಾನವನ ನೋಟವನ್ನು ತೋರಿಸುತ್ತದೆ. ಉದ್ಯಾನವನದಲ್ಲಿ ವರ್ಣರಂಜಿತ ಹೂವುಗಳಿವೆ. ಆದರೆ ಹೂವುಗಳ ಮಧ್ಯದಲ್ಲಿ ಒಂದು ಗಂಟೆಯೂ ಇದೆ. ಈ ಫೋಟೋದಲ್ಲಿರುವ ಸವಾಲು ಗಂಟೆ ಎಲ್ಲಿದೆ ಎಂದು ಪತ್ತೆ ಹಚ್ಚುವುದು. 10 ಸೆಕೆಂಡುಗಳ ಒಳಗೆ ಗಂಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಶಕ್ತಿಗೆ ಹ್ಯಾಟ್ಸ್ ಆಫ್ ಹೇಳುತ್ತೇವೆ.
ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಮರೆ ಮಾಡಲಾಗಿರುವ ಗಂಟೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ಹೂವುಗಳ ನಡುವೆ ಇರುವ ಈ ಗಂಟೆಯನ್ನು ಹುಡುಕಲು ನೀವು ಈ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸುವುದು ಉತ್ತಮ. ಇಷ್ಟು ಮಾಡಿದ ಮೇಲೆ ಈ ವಸ್ತುವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ಈ ಕೆಳಗಿನ ಚಿತ್ರದಲ್ಲಿ ಗಂಟೆಯನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, ಮಾರ್ಚ್ 22:ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಕಾಮಕಾಂಡ ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೋ ಎಂಬುವವರ ಮೂಲಕ ಇನ್ಸ್ಪೆಕ್ಟರ್ ಸಂದೇಶ್ ಬೆದರಿಕೆ ಹಾಕಿರೋದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನ ಸಂತ್ರಸ್ತೆ ಮನೆಗೆ ಕಳಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೀವಂತವಾಗಿ ಬಿಡುವುದಿಲ್ಲ ಎಂದೂ ತಿಳಿಸಿರೋದಾಗಿ ಆರೋಪಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದ್ದು, 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 2020ರಲ್ಲಿ ಸಂದೇಶ್ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.
ಮತ್ತೊಂದೆಡೆ ಬಗೆದಷ್ಟೂ ಸಂದೇಶ್ ಕಾಮಕಾಂಡ ಬಯಲಾಗುತ್ತಿದ್ದು, ಉಂಡು ಹೋದ ಕೊಂಡು ಹೋದ ಎಂಬ ಮಾತಿಗೆ ಪ್ರಕರಣ ಹೇಳಿ ಮಾಡಿಸಿದಂತೆ ಭಾಸವಾಗುತ್ತಿದೆ. ಅತ್ಯಾಚಾರ ಸಂತ್ರಸ್ತೆ ಶಿಕ್ಷಕಿ ಬಳಿ ಇನ್ಸ್ಪೆಕ್ಟರ್ 16 ಲಕ್ಷ ರೂಪಾಯಿ ಹಣವನ್ನೂ ಲಪಟಾಯಿಸಿದ್ದ ಎನ್ನಲಾಗಿದ್ದು, 13 ಲಕ್ಷ ನಗದು ಮತ್ತು 3,62,000 ರೂಪಾಯಿ ಹಣವನ್ನು ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವೇಣೂರು ಠಾಣೆಗೆ ಸಂತ್ರಸ್ತೆ ದಾಖಲೆಗಳನ್ನೂ ನೀಡಿದ್ದಾಳೆ ಎನ್ನಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದರೂ ಈಗ ಕೇಳಿಬಂದಿರುವ ಆರೋಪಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿವೆ.
ಬಾಗಲಕೋಟೆ, ಮಾರ್ಚ್ 22: ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೇಟಿ ಅವರ ದ್ವಿತೀಯ ಪುತ್ರ ಉಮೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆ ಬೆನ್ನಲ್ಲೇ ಉಮೇಶ್ ಮೇಟಿ ಅವರು ತಮ್ಮ ತಂದೆಯ ಮೇಲಿನ ಅನುಕಂಪ ಮತ್ತು ಅವರ ಮೇಲಿನ ಪ್ರೀತಿಗೆ ಮತದಾರರು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಚ್.ವೈ. ಮೇಟಿ ಅವರು ಮಾಡಿರುವ ಅನೇಕ ಜನಪರ ಕೆಲಸಗಳು, ವಿಶೇಷವಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಯಂತಹ ಐತಿಹಾಸಿಕ ಕಾರ್ಯಗಳನ್ನು ಸ್ಮರಿಸಿದ ಅವರು ತಂದೆ ನೆನೆದು ಭಾವುಕರಾದ ಪ್ರಸಂಗವೂ ನಡೆದಿದೆ.
ಶಿಮ್ಲಾ, ಮಾರ್ಚ್ 22: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗಿದೆ. ಮಂಡಿ ಜಿಲ್ಲೆಯ ಕೋಟ್ಲಿ ಹಳ್ಳಿಯಲ್ಲಿ ಭೂಕುಸಿತ ಉಂಟಾಗಿದೆ. ಬಂಡೆ, ಮಣ್ಣು ಎಲ್ಲವೂ ರಸ್ತೆಗೆ ಅಡ್ಡವಾಗಿ ಬಿದ್ದಿವೆ. ಎರಡು ದಿನಗಳ ಹಿಂದಷ್ಟೇ ಕುಲ್ಲುವಿನ ಪಾರ್ವತಿ ಕಣಿವೆಯಲ್ಲಿ, ಘಾಟಿಗಢದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದರಿಂದ ಮಣಿಕರಣ್-ಬರ್ಶೈನಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಜಚ್ನಿಯಲ್ಲಿ ಮಣ್ಣು ಕುಸಿತ ಸಂಭವಿಸಿ ಭುಂತರ್-ಮಣಿಕರಣ್ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದೀಗ ಕೋಟ್ಲಿಯಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ (Renu Desai) ಅವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನಾನು ಮೋದಿಜಿಯ ಹೆಮ್ಮೆಯ ಅಂಧಭಕ್ತೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾ ಆರಂಭದಲ್ಲಿ ಬರುವ ಭಗವದ್ಗೀತೆಯ ಶ್ಲೋಕವನ್ನು (ಅಧ್ಯಾಯ 2, ಶ್ಲೋಕ 47) ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಸಿನಿಮಾ ನೋಡಿ. ಅವರ ಕಾರಣದಿಂದಲೇ ನಾವು ಮನೆಯಲ್ಲಿ ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
‘ಧುರಂಧರ್ 2’ ಸಿನಿಮಾದ ಒಂದು ದೃಶ್ಯದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ (ಬಡೇ ಸಾಹಬ್ ಪಾತ್ರ), ‘ಈ ಚಾಯ್‌ವಾಲಾ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮವರಲ್ಲಿ ಭಯ ಹೆಚ್ಚಾಗಿದೆ’ ಎಂದು ಹೇಳುವ ಸಂಭಾಷಣೆಯಿದೆ. ಈ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿರುವ ರೇಣು ದೇಸಾಯಿ, ‘ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿಜಿಯ ಹೆಮ್ಮೆಯ ಅಂಧಭಕ್ತೆ ನಾನು’ ಎಂದು ಬರೆದುಕೊಳ್ಳುವ ಮೂಲಕ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕರು ಈ ಸಿನಿಮಾವನ್ನು ಒಂದು ಪ್ರೊಪಗಾಂಡ ಎಂದು ಕರೆದಿದ್ದಾರೆ. ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬರುತ್ತಿವೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
2025ರ ಸೂಪರ್ ಹಿಟ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಕೊಂಡಿದ್ದಾರೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ.
ಉಡುಪಿ, ಮಾರ್ಚ್ 22: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಡಾನಿಡಿಯೂರು (Udupi)ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ತಾನು ಸಲ್ಲಿಸಿದ ಸಿಂಗಲ್ ಲೇಔಟ್ ಅರ್ಜಿಗೆ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ ಎಂದು ಭಟ್ ಆರೋಪಿಸಿದ್ದಾರೆ.
ಶಾಸಕರ ಒತ್ತಡದಿಂದಲೇ ಅನುಮತಿ ಸಿಗುತ್ತಿಲ್ಲವೆಂದ ರಘುಪತಿ ಭಟ್
2024ರ ಮಾರ್ಚ್ 20ರಂದು ಅರ್ಜಿ ಸಲ್ಲಿಸಿದ್ದರೂ, ಮೂರು ತಿಂಗಳಲ್ಲಿ ಸಿಗಬೇಕಿದ್ದ ಅನುಮತಿ ಎರಡು ವರ್ಷವಾದರೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶಾಸಕರ ಒತ್ತಡದಿಂದಲೇ ಅನುಮತಿ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದಲ್ಲದೆ, ಹೈಕೋರ್ಟ್ 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಎನ್ನುವುದು ಅವರ ಮತ್ತೊಂದು ಆಕ್ಷೇಪ. ಸಿ.ಆರ್.ಝೆಡ್, ಜೋನ್ ಚೇಂಜ್ ಹಾಗೂ ಕಮರ್ಷಿಯಲ್ ಕನ್ವರ್ಷನ್ ಸೇರಿದಂತೆ ಅಗತ್ಯ ಅನುಮತಿಗಳು ಈಗಾಗಲೇ ಲಭಿಸಿದ್ದರೂ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಕ್ರಿಯೆ ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಶಾಸಕನ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ನಿರಂತರ ಧರಣಿ ನಡೆಸುವುದಾಗಿ ರಘುಪತಿ ಭಟ್ ಘೋಷಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ಇದು ರಾಜಕೀಯ ಹೋರಾಟವಲ್ಲ, ವೈಯಕ್ತಿಕ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಎಂದು ಹೇಳಿಕೊಂಡಿದ್ದಾರೆ.
ಉಡುಪಿಯಲ್ಲಿ ಇಂತಹ ರಾಜಕೀಯ ದ್ವೇಷದ ಘಟನೆಗಳು ಹಿಂದೆ ಕಂಡಿಲ್ಲ ಎಂದ ಅವರು, ಬೇರೆ ಪಕ್ಷದವರಾದರೂ ವೈಯಕ್ತಿಕ ಉದ್ಯಮಕ್ಕೆ ಅಡ್ಡಿಪಡಿಸುವ ಸಂಪ್ರದಾಯ ಇಲ್ಲ ಎಂದಿದ್ದಾರೆ. ಇನ್ನು, ಯಶ್ ಪಾಲ್ ಸುವರ್ಣ ಶಾಸಕರಾಗಲು ತಾನು ಸಹಕಾರ ನೀಡಿದ್ದೇನೆ ಎಂದು ಹೇಳಿದ ಭಟ್, ಈಗ ಅದೇ ವ್ಯಕ್ತಿಯಿಂದ ಅಡಚಣೆ ಎದುರಿಸುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ಮಾರ್ಚ್ 22: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಎಲ್ಪಿಜಿ ಪೂರೈಕೆಯನ್ನು ಶೇ 50ಕ್ಕೆ ಹೆಚ್ಚಿಸಿದೆ. ರೆಸ್ಟೋರೆಂಟ್, ಹೊಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಮುದಾಯ ಅಡುಗೆಮನೆಗಳಿಗೆ ಆದ್ಯತೆ ಕೊಟ್ಟು ಕಮರ್ಷಿಯಲ್ ಎಲ್ಪಿಜಿ ನಿಯೋಜನೆಯನ್ನು (LPG Allocation) ಶೇ. 20ಕ್ಕೆ ಏರಿಸಲಾಗಿದೆ. ಇದರೊಂದಿಗೆ ಒಟ್ಟು ನಿಯೋಜನೆ ಶೇ. 50ಕ್ಕೆ ಏರಿಕೆಯಾಗಿದೆ. ಅಂದರೆ, ಕಮರ್ಷಿಯಲ್ ಎಲ್ಪಿಜಿಗೆ ಇರುವ ಬೇಡಿಕೆ ಮತ್ತು ಅವಶ್ಯಕತೆಯ ಶೇ. 50ರಷ್ಟನ್ನು ಪೂರೈಸಲಾಗುತ್ತದೆ.
ಎಲ್ಪಿಜಿ ಬಿಕ್ಕಟ್ಟು ಉದ್ಭವವಾದಾಗ ಕಮರ್ಷಿಯಲ್ ಎಲ್ಪಿಜಿ ಪೂರೈಕೆಯನ್ನು ನಿಲ್ಲಿಸಲಾಯಿತು. ಗೃಹಬಳಕೆ ಗ್ಯಾಸ್ಗಳ ಸರಬರಾಜು ಮಾತ್ರ ಅಬಾಧಿತವಾಗಿತ್ತು. ನಂತರ, ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ಶೇ. 20ರಷ್ಟು ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು. ನಂತರ ಶೇ. 10 ಹೆಚ್ಚಿಸಲಾಯಿತು. ಇದೀಗ ಮತ್ತಷ್ಟು ಶೇ. 20 ಪೂರೈಕೆ ಹೆಚ್ಚಿಸಲಾಗಿದೆ.
ರೆಸ್ಟೋರೆಂಟ್, ಕ್ಯಾಂಟೀನ್ ಇತ್ಯಾದಿಗಳಿಗೆ ಈ ಕಮರ್ಷಿಯಲ್ ಎಲ್ಪಿಜಿ ಪೂರೈಕೆ ಆದ್ಯತೆ ಮೇಲೆ ಆಗುತ್ತದೆ. ಆಯಾ ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರ ನಿಗದಿ ಮಾಡಿದ ಬ್ಯುಸಿನೆಸ್ಗಳನ್ನು ಗುರುತಿಸಿ ಆ ಗ್ರಾಹಕರಿಗೆ ಸೀಮಿತ ಪ್ರಮಾಣದಲ್ಲಿ ಎಲ್ಪಿಜಿ ಪೂರೈಕೆ ಮಾಡುತ್ತವೆ.
ಪಿಎನ್ಜಿಗೆ ಒತ್ತು
ಸರ್ಕಾರವು ವಿವಿಧ ಕಮರ್ಷಿಯಲ್ ಕಂಪನಿಗಳಿಗೆ ಎಲ್ಪಿಜಿ ಬದಲು ಪಿಎನ್ಜಿಗೆ ವರ್ಗವಾಗುವಂತೆ ಉತ್ತೇಜಿಸುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಮರ್ಷಿಯಲ್ ಸಂಸ್ಥೆಗಳು ತೈಲ ಕಂಪನಿಗಳೊಂದಿಗೆ ಪಿಎನ್ಜಿ ಕನೆಕ್ಷನ್ಗೆ ನೊಂದಾಯಿಸಿಕೊಳ್ಳಬಹುದು.
ಎಲ್ಪಿಜಿ ಪೂರೈಕೆಯಲ್ಲಿ ಕೊರತೆ ಇಲ್ಲ ಎನ್ನುತ್ತಿದೆ ಸರ್ಕಾರ
ಸದ್ಯಕ್ಕೆ ಎಲ್ಪಿಜಿ ಪೂರೈಕೆ ಸ್ಥಿರವಾಗಿದ್ದು, ಎಲ್ಲಿಯೂ ಕೊರತೆ ಇಲ್ಲ ಎಂದು ಸರ್ಕಾರ ಹೇಳಿದೆ. ಪ್ಯಾನಿಕ್ ಬುಕಿಂಗ್ಗಳು ಕಡಿಮೆ ಆಗಿವೆ. ಪೆಟ್ರೋಲ್ ಮತ್ತು ಡೀಸಲ್ ಪೂರೈಕೆಯೂ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎಲ್ಪಿಜಿ ಸಿಲಿಂಡರ್ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಎಲ್ಪಿಜಿ ವಿತರಣೆ ಸರಿಯಾಗಿ ಆಗುತ್ತಿರುವುದನ್ನು ಖಚಿತಪಡಿಸಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ಸಮಿತಿ ಮತ್ತು ಕಂಟ್ರೋಲ್ ರೂಮ್ಗಲನ್ನು ಸ್ಥಾಪಿಸಿವೆ.
ಹಿಂದೂ ಸಂಪ್ರದಾಯದ ಪ್ರಕಾರ, ವಾರದ ಮೊದಲ ದಿನವಾದ ಭಾನುವಾರವನ್ನು ರವಿವಾರ ಅಥವಾ ಭಾನುವಾರ ಎಂದು ಕರೆಯಲಾಗುತ್ತದೆ. ‘ರವಿ’ ಮತ್ತು ‘ಭಾನು’ ಎಂಬ ಪದಗಳು ಸೂರ್ಯನಿಗೆ ಸಮಾನಾರ್ಥಕಗಳಾಗಿವೆ. ಪ್ರಾಚೀನ ಕಾಲದಲ್ಲಿ ನಮ್ಮ ಋಷಿಮುನಿಗಳು ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಆಧರಿಸಿ ಸಮಯವನ್ನು ಲೆಕ್ಕಹಾಕುತ್ತಿದ್ದರು. ಋಗ್ವೇದದಲ್ಲಿ “ಸೂರ್ಯ ಆತ್ಮ ಜಗತಸ್ಥಶ್ಚ” ಎಂದು ವರ್ಣಿಸಲಾಗಿದೆ, ಅಂದರೆ ಈ ಸೃಷ್ಟಿಯಲ್ಲಿರುವ ಚಲಿಸುವ ಮತ್ತು ಚಲಿಸದ ಸಮಸ್ತ ಜೀವಿಗಳ ಆತ್ಮವೇ ಸೂರ್ಯ. ಸೂರ್ಯನಿಲ್ಲದೆ ಈ ಭೂಮಿಯ ಮೇಲೆ ಜೀವಸಂಕುಲ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಆದ್ದರಿಂದಲೇ ಸೂರ್ಯನನ್ನು ನಾವು ಕಣ್ಣಿಗೆ ಕಾಣುವ ‘ಪ್ರತ್ಯಕ್ಷ ದೈವ’ ಎಂದು ಆರಾಧಿಸುತ್ತೇವೆ.
ಭಾನುವಾರವು ಕೇವಲ ವಿಶ್ರಾಂತಿ ಪಡೆಯುವ ರಜಾದಿನವಲ್ಲ, ಬದಲಾಗಿ ಇದು ದೇಹವನ್ನು ಶುದ್ಧೀಕರಿಸುವ ಉಪವಾಸದ ದಿನವಾಗಿದೆ. ನಮ್ಮ ದೇಹದಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ‘ಜಠರಾಗ್ನಿ’ ಎಂದು ಕರೆಯಲಾಗುತ್ತದೆ ಮತ್ತು ಈ ಅಗ್ನಿಯು ಆಕಾಶದಲ್ಲಿರುವ ಸೂರ್ಯನ ಪ್ರಖರತೆಯೊಂದಿಗೆ ನೇರ ಸಂಬಂಧ ಹೊಂದಿದೆ. ವಾರವಿಡೀ ಸತತವಾಗಿ ಕೆಲಸ ಮಾಡುವ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಂದು ದಿನದ ವಿಶ್ರಾಂತಿ ಅತ್ಯಗತ್ಯ. ಭಾನುವಾರದಂದು ಲೌಕಿಕ ಕೆಲಸಗಳನ್ನು ಬದಿಗಿಟ್ಟು ಉಪವಾಸ ಅಥವಾ ಮಿತಾಹಾರದ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಿದಾಗ, ಸೂರ್ಯನ ಶಕ್ತಿಯು ನೇರವಾಗಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದು ವಾರವಿಡೀ ಹಾನಿಗೊಳಗಾದ ಜೀವಕೋಶಗಳನ್ನು (Cells) ಪುನಶ್ಚೇತನಗೊಳಿಸಲು ಮತ್ತು ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಪವಿತ್ರ ದಿನದಂದು ಕೆಲವು ವಿಶಿಷ್ಟ ಅಭ್ಯಾಸಗಳನ್ನು ಅನುಸರಿಸುವುದು ಬಹಳ ಪ್ರಯೋಜನಕಾರಿ. ಮೊದಲನೆಯದಾಗಿ, ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕೂ ಮುನ್ನ ಎಚ್ಚರಗೊಳ್ಳುವುದು ಅತ್ಯುತ್ತಮ. ಈ ಸಮಯದಲ್ಲಿ ಗಾಳಿಯು ಅತ್ಯಂತ ತಾಜಾ ಮತ್ತು ಪ್ರಾಣಶಕ್ತಿಯಿಂದ ಕೂಡಿರುತ್ತದೆ. ಸ್ನಾನದ ನಂತರ, ಉದಯಿಸುತ್ತಿರುವ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಅರ್ಪಿಸುವುದು (ಸೂರ್ಯ ಅರ್ಘ್ಯ) ಶ್ರೇಷ್ಠವಾದುದು. ಬೀಳುವ ನೀರಿನ ಧಾರೆಗಳ ಮೂಲಕ ಸೂರ್ಯನನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುವುದಲ್ಲದೆ, ಮನಸ್ಸಿನಲ್ಲಡಗಿರುವ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಇದರೊಂದಿಗೆ ಎಳೆಯ ಬಿಸಿಲಿನಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಬೆನ್ನುಮೂಳೆಯು ಬಲಗೊಳ್ಳುತ್ತದೆ ಮತ್ತು ದೇಹದಲ್ಲಿನ ಆಲಸ್ಯವು ದೂರವಾಗಿ ಚೈತನ್ಯ ಮೂಡುತ್ತದೆ.
ಆಹಾರ ಮತ್ತು ಆಧ್ಯಾತ್ಮಿಕ ಚಿಂತನೆಯ ವಿಷಯಕ್ಕೆ ಬಂದರೆ, ಭಾನುವಾರ ಸಾತ್ವಿಕ ಜೀವನಕ್ಕೆ ಒತ್ತು ನೀಡಬೇಕು. ಸಾಧ್ಯವಾದರೆ ಒಂದು ಹೊತ್ತಿನ ಊಟವನ್ನು ಬಿಟ್ಟು ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡುವುದು ಉತ್ತಮ. ಉಪವಾಸ ಸಾಧ್ಯವಾಗದಿದ್ದರೆ ಮಾಂಸಾಹಾರವನ್ನು ತ್ಯಜಿಸಿ, ಕಡಿಮೆ ಉಪ್ಪಿನಿಂದ ಕೂಡಿದ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಇದರ ಜೊತೆಗೆ ಶಾಂತವಾಗಿ ಕುಳಿತು ಹತ್ತು ನಿಮಿಷಗಳ ಕಾಲ ‘ಗಾಯತ್ರಿ ಮಂತ್ರ’ ಪಠಿಸುವುದು ಅಥವಾ ‘ಆದಿತ್ಯ ಹೃದಯ’ ಸ್ತೋತ್ರವನ್ನು ಕೇಳಿಸಿಕೊಳ್ಳುವುದು ಮೆದುಳಿನ ನರಗಳನ್ನು ಉತ್ತೇಜಿಸುತ್ತದೆ. ಈ ಮಂತ್ರಗಳ ಶಬ್ದ ತರಂಗಗಳು ಮನಸ್ಸಿಗೆ ಅತೀವ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತವೆ.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಸೂರ್ಯಾರಾಧನೆಯು ವರದಾನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಏಕಾಗ್ರತೆ, ದೃಢ ಸಂಕಲ್ಪ ಮತ್ತು ನಾಯಕತ್ವದ ಗುಣಗಳನ್ನು ಪ್ರತಿನಿಧಿಸುತ್ತಾನೆ. ಭಾನುವಾರ ಸೂರ್ಯನನ್ನು ಪೂಜಿಸುವುದರಿಂದ ಬುದ್ಧಿಶಕ್ತಿ ತೀಕ್ಷ್ಣಗೊಳ್ಳುತ್ತದೆ, ಮನಸ್ಸಿನ ಗೊಂದಲಗಳು ನಿವಾರಣೆಯಾಗಿ ಅಧ್ಯಯನದ ಮೇಲೆ ಅಸಾಧಾರಣ ಗಮನ ಹರಿಸಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿಯೂ ಬೆಳಗಿನ ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡುವುದರಿಂದ ವಿಟಮಿನ್ ಡಿ (Vitamin D) ಲಭಿಸಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗೆ ಭಾನುವಾರವನ್ನು ಶಿಸ್ತುಬದ್ಧವಾಗಿ ಕಳೆಯುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ