ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ತುಮಕೂರು/ ರಾಯಚೂರು, ಮಾರ್ಚ್​​ 20: ಕೋತಿಯೊಂದು ಮಾಡಿದ ಕಿತಾಪತಿಗೆ ಓರ್ವ ಮೃತಪಟ್ಟಿದ್ದು ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್(65) ಘಟನೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದು, ಕೆಲಸ ಮುಗಿಸಿ ನಿನ್ನೆ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಹಲವರ ಜೊತೆ ಇವರ ಮೇಲೂ ದಾಳಿ ನಡೆಸಿತ್ತು.

ಬೈಕ್​​ನಲ್ಲಿ ಬರುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಲು ಆರಂಭಿಸಿದ ಕಾರಣ ಅವುಗಳಿಂದ ತಪ್ಪಿಸಿಕೊಳ್ಳಲು ವಿಜಯ್ ಪ್ರಕಾಶ್ ಹರಸಾಹಸ ಪಟ್ಟಿದ್ದರು. ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಐವತ್ತಕ್ಕೂ ಅಧಿಕ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ತನ್ನದಲ್ಲದ ತಪ್ಪಿಗೆ ಜೀವ ತೆತ್ತಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆಯ ಸಾವಿಗೆ ಕಂಗಾಲಾಗಿರುವ ಮಗಳು ಕಣ್ಣೀರಿಟ್ಟಿದ್ದಾರೆ. ನಮ್ಮ ಅಪ್ಪನಿಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬಾರದಿರಲಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​ ವೇಳೆ ಹೈಡ್ರಾಮಾ; ಚುನಾವಣಾ ಅಧಿಕಾರಿಯಿಂದಲೇ ಕಳ್ಳ ಮತದಾನ?

ಮನೆ ಮೇಲ್ಚಾವಣಿ ಕುಸಿದು ಮಹಿಳೆ ಸಾವು

ಮಳೆಗೆ ಮನೆ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ 14ನೇ ವಾರ್ಡ್​​ನಲ್ಲಿ ಮಹಿಳೆಯೋರ್ವರು ಮೃತಪಟ್ಟಿರುವ ಅಘಾತಕಾರಿ ಘಟನೆ ನಡೆದಿದೆ. ಈಶಮ್ಮ(60) ಮೃತಳಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಈಶಮ್ಮ ಮಸ್ಕಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ನವದೆಹಲಿ, ಮಾರ್ಚ್ 20: ಭಾರತದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಲಾಗಿದೆ. ವರದಿಗಳ ಪ್ರಕಾರ, ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 2.30 ರೂನಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕವಾಗಿ ತೈಲ ಸರಬರಾಜು ವ್ಯತ್ಯಯಗೊಂಡಿರುವ ಪರಿಣಾಮ ಈ ಏರಿಕೆ ಆಗಿರಬಹುದು. ಆದರೆ, ಅಧಿಕೃತವಾಗಿ ಯಾವ ಕಾರಣವನ್ನೂ ಕೊಡಲಾಗಿಲ್ಲ. ಆದರೆ, ಮಾಮೂಲಿಯ ಅನ್​ಲೆಡೆಡ್ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ.

ಪ್ರೀಮಿಯಮ್ ಪೆಟ್ರೋಲ್ ಹೈ ಆಕ್ಟೇನ್ ಪೆಟ್ರೋಲ್ ಆಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸಿ, ಮೈಲೇಜನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ಮಾಮೂಲಿಯ ಪೆಟ್ರೋಲ್​ಗಿಂತ ತುಸು ಹೆಚ್ಚಿನದ್ದಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಈ ಬೆಲೆ ಏರಿಕೆ ಮಾಡಿವೆ.

Source link

ಕೋಲ್ಕತ್ತಾದ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​ನಲ್ಲಿ ಸಿಲುಕಿ ವ್ಯಕ್ತಿ ಸಾವು, ಮಗ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ, ಮಾರ್ಚ್​ 20: ಸದಾ ಒಂದಲ್ಲಾ ಒಂದು ಘಟನೆಯಿಂದ ಸುದ್ದಿಯಲ್ಲಿರುವ ಕೋಲ್ಕತ್ತಾ ಆರ್​ಜಿಕರ್ ಆಸ್ಪತ್ರೆಯ ಲಿಫ್ಟ್​​(Lift) ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ.
ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಪ್ರಕಾರ, ಮೃತರ ಮಗನ ಕಾಲಿನ ಮೂಳೆ ಮುರಿದಿದ್ದು, ಆರ್​​ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಅರೂಪ್ ಬಂಡೋಪಾಧ್ಯಾಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹಿಂದಿರುಗುತ್ತಿದ್ದಾಗ ಲಿಫ್ಟ್​ನಿಂದ ಕೆಳಗೆ ಹೋಗುತ್ತಿದ್ದರು. ಲಿಫ್ಟ್​ ಇದ್ದಕ್ಕಿದ್ದಂತೆ ನಿಂತಿತ್ತು, ಒಳಗೆ ಮೂವರು ಸಿಲುಕಿಕೊಂಡಿದ್ದರು. ಅರೂಪ್ ಬಹಳ ಸಮಯವಾದರೂ ಹಿಂದಿರುಗದಿದ್ದಾಗ ಕುಟುಂಬ ಚಿಂತಿತರಾಗಿ ಅವರನ್ನು ಹುಡುಕಲು ಆರಂಭಿಸಿತ್ತು. ನಂತರ ಅವರ ಶವ ಲಿಫ್ಟ್​ ಒಳಗೆ ಪತ್ತೆಯಾಗಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಲಿಫ್ಟ್​ಮ್ಯಾನ್ ಇರಲಿಲ್ಲ. ಪ್ರಾಥಮಿಕ ತನಿಖೆಗಳು ಇದನ್ನು ಸಮಪೂರ್ಣ ನಿರ್ಲಕ್ಷ್ಯವೆಂದು ಪರಿಗಣಿಸುತ್ತಿವೆ. ಹಿಂದಿನ ದಿನ ಲಿಫ್ಟ್​ ಕೆಟ್ಟುಹೋಗಿತ್ತು. ಆದರೆ ಅದನ್ನು ದುರಸ್ತಿ ಮಾಡಲಾಗಿಲ್ಲ ಎಂದು ಕೆಲವರು ಹೇಳಿದ್ದಾರೆ.

ಮತ್ತಷ್ಟು ಓದಿ: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಮೃತರ ಸಹೋದರಿ ಅರ್ಪಿತಾ ಮಾತನಾಡಿ, ನಾವು ನಮ್ಮ ಅಳಿಯನ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇವೆ, ನಾವು ಕಿರುಚುತ್ತಲೇ ಇದ್ದೆವು, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಊಹಿಸಿರಲಿಲ್ಲ ಎಂದರು.

ರಕ್ಷಣಾ ಕಾರ್ಯಾಚರಣೆ ಆರಂಭವಾದಾಗ ಸಿಬ್ಬಂದಿಗೆ ಲಿಫ್ಟ್​ ಕೀ ಸಿಗಲಿಲ್ಲ, ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಬಿಜೆಪಿ ನಾಯಕ ತಪಸ್ ಚಟರ್ಜಿ ಟಿಎಂಸಿ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಸರ್ಕಾರ ಮತ್ತು ಆಸ್ಪತ್ರೆಯ ಕಡೆಯಿಂದ ಆದ ನಿರ್ಲಕ್ಷ್ಯ ಎಂದು ಹೇಳಿದ್ದಾರೆ,ಜೀವಗಳನ್ನು ಉಳಿಸಲಾಗದಿದ್ದರೂ ಅಂತಹ ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

ನವದೆಹಲಿ, ಮಾರ್ಚ್ 20: ನಿನ್ನೆ ಯುಗಾದಿ ಹಬ್ಬದ ದಿನದಂದು ಹೂಡಿಕೆದಾರರಿಗೆ 12 ಲಕ್ಷ ಕೋಟಿ ರೂ ನಷ್ಟ ತಂದಿತ್ತು ಷೇರು ಮಾರುಕಟ್ಟೆ (Stock Market) ಇವತ್ತು ಹಸಿರು ಬಣ್ಣಕ್ಕೆ ತಿರುಗಿದೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಧಾನ ಸೂಚ್ಯಂಕಗಳು ಗಳಿಕೆ ಕಂಡಿವೆ. ಸೆನ್ಸೆಕ್ಸ್ 1,016 ಅಂಕ ಗಳಿಸಿದೆ. ನಿಫ್ಟಿ50 ಸೂಚ್ಯಂಕ 288 ಅಂಕಗಳಷ್ಟು ಚೇತರಿಕೆ ಕಂಡಿದೆ. ಈ ವರದಿ ಬರೆಯುವ ವೇಳೆ, ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಕಗಳ ಗಳಿಕೆಯೊಂದಿಗೆ 74,530 ಮಟ್ಟದಲ್ಲಿತ್ತು. ನಿಫ್ಟಿ ಗಳಿಸಿದ ಅಂಕಗಳು ನೂರಕ್ಕಿಂತ ತುಸು ಹೆಚ್ಚು.

ಕಡಿಮೆಗೊಂಡ ಯುದ್ಧದ ತೀವ್ರತೆ

ಇರಾನ್​ನ ತೈಲ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ, ಇರಾನ್ ದೇಶವು ಸುತ್ತಮುತ್ತಲಿನ ಗಲ್ಫ್ ರಾಷ್ಟ್ರಗಳ ತೈಲ ಘಟಕಗಳನ್ನು ಗುರಿಯಾಗಿಸಿದ್ದು ಇಡೀ ಜಗತ್ತನ್ನು ಆತಂಕಕ್ಕೆ ದೂಡಿತ್ತು. ಇಸ್ರೇಲ್​ಗೆ ಅಮೆರಿಕ ಎಚ್ಚರಿಕೆ ಕೊಟ್ಟಿರುವುದು ಮತ್ತೆ ತೈಲ ಘಟಕಗಳ ಮೇಲೆ ದಾಳಿಯಾಗುವ ಸಾಧ್ಯತೆ ಕಡಿಮೆಗೊಂಡಿದೆ. ಹಾಗೆಯೇ, ಭೂಸೇನೆಗಳು ರಣರಂಗಕ್ಕೆ ಇಳಿಯುವುದಿಲ್ಲ ಎನ್ನುವ ಆಶ್ವಾಸನೆಯೂ ಸಿಕ್ಕಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ಮಾರುಕಟ್ಟೆಯನ್ನು ಶಾಂತಗೊಳಿಸಿದೆ.

ಇದನ್ನೂ ಓದಿ: ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ಯುದ್ಧದ ತೀವ್ರತೆ ಮತ್ತು ಅಪಾಯವು ಕಡಿಮೆಗೊಂಡಿರುವ ಪರಿಣಾಮ ಅಮೆರಿಕದ ಮಾರುಕಟ್ಟೆಗೆ ಕಳೆ ಬಂದಿದೆ. ಇದು ಭಾರತವೂ ಸೇರಿ ವಿಶ್ವದ ವಿವಿಧ ಷೇರುಪೇಟೆಯ ಮೇಲೂ ಸಕಾರಾತ್ಮಕ ಭಾವನೆ ಮೂಡಿಸಿದೆ.

ತೈಲ ಬೆಲೆ ಇಳಿಕೆ

ಜಾಗತಿಕ ತೈಲ ಬೆಲೆಗಳು ಇಳಿದಿವೆ. ಬ್ರೆಂಟ್ ಕ್ರೂಡ್ ತೈಲದ ಬೆಲೆ 119.13 ಡಾಲರ್ ಇದ್ದದ್ದು 107 ಡಾಲರ್​ಗೆ ಇಳಿದಿದೆ. ಹೀಗಾಗಿ, ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡ ಕಡಿಮೆಗೊಂಡಿದೆ. ಇದು ಮಾರುಕಟ್ಟೆಯ ವಿಶ್ವಾಸ ಹೆಚ್ಚಿಸಿದೆ.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಒಳ್ಳೆಯ ಬೆಲೆಗೆ ಷೇರುಗಳನ್ನು ಖರೀದಿಸುವ ಯತ್ನ

ಗುರುವಾರ ಷೇರು ಬಜಾರು ಶೇ. 3ರಷ್ಟು ಕುಸಿತ ಕಂಡಿತ್ತು. ಅನೇಕ ಒಳ್ಳೆಯ ಷೇರುಗಳಿಗೆ ಮಾರ್ಕೆಟ್ ಕರೆಕ್ಷನ್ ಸಿಕ್ಕಿದೆ. ಹೀಗಾಗಿ, ಅನೇಕ ಒಳ್ಳೆಯ ಷೇರುಗಳು ಕಡಿಮೆ ಬೆಲೆಗೆ ಲಭ್ಯ ಇವೆ. ಹೂಡಿಕೆದಾರರು ಇದರ ಲಾಭ ಪಡೆಯಲು ಶುಕ್ರವಾರ ಮುಗಿಬಿದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಸುಗೂಸು ಸಾವು ಕೇಸ್​​ಗೆ ಟ್ವಿಸ್ಟ್: ಹೆಣ್ಣುಮಗು ಎಂದು ವಿಷವುಣಿಸಿದ್ದ ತಂದೆ ಅರೆಸ್ಟ್​​

ಬೆಳಗಾವಿ, ಮಾರ್ಚ್​ 20: 15 ದಿನದ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು (baby death) ಏಕಾಏಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿದ್ದು, ಸದ್ಯ ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿತ್ತು. ಕಾಕತಿ ಪೊಲೀಸ್​ ಠಾಣೆಗೆ ಮಗುವಿನ ತಾಯಿ ಶೀಲಾ ದೂರು ನೀಡಿದ್ದರು.

ನಡೆದಿದ್ದೇನು?

ಇತ್ತೀಚೆಗೆ ಅಂದರೆ ಮಾರ್ಚ್​ 17ರಂದು 15 ದಿನಗಳ ಹಿಂದೆ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಮಗುವಿನ ಸಾವಿಗೆ ತಂದೆಯೇ ಕಾರಣ ಎಂಬ ಗಂಭೀರ ಆರೋಪನ್ನು ಕುಟುಂಬಸ್ಥರೇ ಮಾಡಿದ್ದರು.

ಇದನ್ನೂ ಓದಿ: 15 ದಿನ ಮಗು ಅನುಮಾಸ್ಪದ ಸಾವು: ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಒಂದು ವರ್ಷದ ಹಿಂದೆ ಭೀಮರಾಯ ಶೀಲಾ‌ರನ್ನು ಮದುವೆ ಆಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮರಾಯಗೆ ಗಂಡು ಮಕ್ಕಳೆಂದರೆ ಹುಚ್ಚು. ಆದರೆ 15 ದಿನದ ಹಿಂದೆ ಹೆಣ್ಣು ಮಗು ಆಗಿದ್ದಕ್ಕೆ ನೊಂದುಕೊಂಡಿದ್ದರು. ಪತ್ನಿ ತವರು ಮನೆಗೆ ಬಂದಿದ್ದ ಭೀಮರಾಯ ಮಗು ನೋಡಿ ವಾಪಾಸ್ ಹೋಗಿದ್ದರು. ಅವರು ಅತ್ತ ಹೋಗ್ತಿದ್ದಂತೆ ಮಗು ಅಸ್ವಸ್ಥಗೊಂಡಿತ್ತು. ಕೂಡಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿತ್ತು.

ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ಔಷಧಿಯನ್ನು ಮಗುವಿಗೆ ಉಣಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಮಗುವನ್ನ ಬಿಮ್ಸ್ ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆಯ ಬಳಿಕವೇ ಮಗುವಿನ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮಗು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು.

ಇದನ್ನೂ ಓದಿ: 2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಯುವತಿಗೆ ಮಾಡಿದ್ದೇನು ಗೊತ್ತಾ?

ಇನ್ನು ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮತ್ತೊಂದೆಡೆ ಆರೋಪ ಎದುರಿಸುತ್ತಿದ್ದ ಪತಿ ಭೀಮರಾಯ ನಾಪತ್ತೆ ಆಗಿದ್ದರು. ಬಂಧನಕ್ಕೆ ಪೊಲೀಸರು ಬಲೆ ಕೂಡ ಬೀಸಿದ್ದರು. ಅದರಂತೆಯೇ ಇಂದು ಆರೋಪಿ ತಂದೆಯನ್ನು  ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

50 ದಿನ ಪೂರೈಸಿದ ಖುಷಿಯಲ್ಲಿ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾ ತಂಡ

ಎಂ.ಎಲ್. ಪ್ರಸನ್ನ ಅವರು ನಿರ್ದೇಶನ ಮಾಡಿದ ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾದಲ್ಲಿ ವಿಶೇಷ ಕಥಾಹಂದರ ಇದೆ. ಈ ಸಿನಿಮಾ ಬಿಡುಗಡೆಯಾಗಿ 50 ದಿನಗಳನ್ನು (50 Days) ಪೂರೈಸಿದೆ. ಕನ್ನಡದಲ್ಲಿ ಅರ್ಧ ಶತಕ ಪೂರೈಸಿದ 2026ರ ಮೊದಲ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ. ಆ ಸಲುವಾಗಿ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಿತು. ವಿ. ನಾಗೇಂದ್ರ ಪ್ರಸಾದ್, ಧರ್ಮ ಕೀರ್ತಿರಾಜ್, ರವಿ ಗೌಡ, ಮೋಹನ್, ಜಡೇಶ್ ಕೆ. ಹಂಪಿ, ಓಂ ಪ್ರಕಾಶ್ ರಾವ್, ಚಕ್ರವರ್ತಿ ಚಂದ್ರಚೂಡ್, ವೀರಕಪುತ್ರ ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಭಾರತಿ ಟೀಚರ್ 7ನೇ ತರಗತಿ’ (Bharathi Teacher) ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು.

‘ಪೂಜ್ಯಾಯ ಫಿಲ್ಮ್ಸ್’ ಬ್ಯಾನರ್ ಮೂಲಕ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ‘ಭಾರತಿ ಟೀಚರ್ 7ನೇ ತರಗತಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುರುರಾಜ್ ರೆಡ್ಡಿ ಅವರು ಸಹ ನಿರ್ಮಾಪಕರಾಗಿದ್ದಾರೆ. ಎಂ.ಎಲ್. ಪ್ರಸನ್ನ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಜವಬ್ದಾರಿಯನ್ನು ನಿಭಾಯಿಸಿದ್ದಾರೆ.

ಸಚಿತ್ ಫಿಲ್ಮ್ಸ್​​ನ ವೆಂಕಟ್ ಗೌಡ ಅವರು ಕ್ರಿಯೇಟಿವ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ 11 ಕೇಂದ್ರಗಳಲ್ಲಿ 25 ದಿವಸ , 9 ಕೇಂದ್ರಗಳಲ್ಲಿ 50 ದಿವಸ ಪೂರೈಸಿದ್ದು, ಇಲ್ಲಿಯವರೆಗೂ 2 ಲಕ್ಷ ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಸಿಹಿಕಹಿ ಚಂದ್ರು, ಕುಮಾರಿ ಯಶಿಕಾ, ಗೋವಿಂದೇ ಗೌಡ, ದಿವ್ಯಾ ಅಂಚನ್, ಅಶ್ವಿನ್‌ ಹಾಸನ್, ಬೆನಕಾ ನಂಜಪ್ಪ, ಸೌಜನ್ಯ ಸುನಿಲ್, ರೋಹಿತ್‌ ರಾಘವೇಂದ್ರ, ಎಂ.ಜೆ. ರಂಗಸ್ವಾಮಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಂ.ಬಿ. ಹಳ್ಳಿಕಟ್ಟಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುಜಿತ್‌ ನಾಯಕ್ ಅವರ ಸಂಕಲನ, ಕಂಬಿ ರಾಜ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.

ನಟ ಸಿಹಿಕಹಿ ಚಂದ್ರ ಅವರು ಮಾತನಾಡಿ, ‘ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಇಷ್ಟು ದೊಡ್ಡ ರೋಲ್ ಸಿಕ್ಕಿರೋದು ಇದೇ ಮೊದಲು. ಇಂತಹ ಪಾತ್ರ ನಿಭಾಯಿಸುತ್ತೇನೆ ಎನ್ನುವ ನಂಬಿಕೆ ಇರಲಿಲ್ಲ. ನಿರ್ದೇಶಕರು ನನ್ನ ಮೇಲೆ ಭರವಸೆ ಇಟ್ಟುಕೊಂಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಎಲ್ಲರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ಸಚಿವ ಸಂತೋಷ್ ಲಾಡ್ ನಟನೆ

ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ‘ಇಂಥ ಚಿತ್ರವನ್ನು ಜನರಿಗೆ ತಲುಪಿಸುವಂತಹ ಕೆಲಸ ಆಗಬೇಕು. ಆ ಕೆಲಸವನ್ನು ಈ ಚಿತ್ರತಂಡದವರು ಮಾಡಿರುವುದು ಶ್ಲಾಘನೀಯ. ಇಂತಹ ಪ್ರಯತ್ನಗಳು ಮತ್ತೆ ಮತ್ತೆ ಆಗಬೇಕು. ನಾನು ಸಿನಿಮಾ ನೋಡಿದ್ದೇನೆ. ಎಲ್ಲಾ ಪಾತ್ರಗಳ ಪೋಷಣೆಯನ್ನು ಆನಂದಿಸಿದ್ದೇನೆ’ ಎಂದರು. 50 ದಿನ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಿಂದ ಚಾರ್​​ ಧಾಮ್​​​ ಯಾತ್ರೆಗೆ ಹೋಗುವವರು ಈಗ ಪೂಜಾ ಫೀ ಎಷ್ಟು ಕೊಡಬೇಕು ಗೊತ್ತಾ?

ವಿಶ್ವಪ್ರಸಿದ್ಧ ಚಾರ್​​ ಧಾಮ್​ ಯಾತ್ರೆಗೂ ಮುನ್ನ ಬದ್ರಿನಾಥ್​​-ಕೇದಾರನಾಥ್​ ಟೆಂಪಲ್​​ ಕಮಿಟಿ (ಬಿಕೆಟಿಸಿ)ಯಿಂದ ಭಕ್ತರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಉಭಯ ದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ಆರತಿಗಳ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಬಿಕೆಟಿಸಿ ಸಭೆಯಲ್ಲಿ ಈ ನಿರ್ಧಾರವನ್ನು ಏಕಮತದಿಂದ ಅಂಗೀಕರಿಸಲಾಗಿದೆ. ಆದರೆ ಸಾಮಾನ್ಯ ದರ್ಶನ ಹಿಂದಿನಂತೆ ಉಚಿತವಾಗಿಯೇ ಮುಂದುವರಿಯಲಿದೆ. ಬಿಕೆಟಿಸಿ ನಿರ್ವಹಣೆಯಡಿ ಇರುವ ಈ ಎರಡೂ ಧಾಮಗಳಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ವಿವಿಧ ಪೂಜೆಗಳು ಮತ್ತು ಆರತಿಗಳು ನಡೆಯುತ್ತವೆ. ಮಹಾಭಿಷೇಕ, ಅಭಿಷೇಕ, ಭೋಗ, ಅಖಂಡ ಜ್ಯೋತಿ ಸೇರಿದಂತೆ ಅನೇಕ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳುತ್ತವೆ. ಈ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು ಹಾಗೂ ನಿಗದಿತ ಶುಲ್ಕ ಪಾವತಿಸಬೇಕಿದೆ. ಈಗಿನ ಹೊಸ ನಿರ್ಧಾರದಂತೆ ಈ ಶುಲ್ಕಗಳು ಹೆಚ್ಚಳಗೊಂಡಿವೆ.

ಬದ್ರಿನಾಥ ಧಾಮದ ಹೊಸ ದರಗಳು
ಸೇವೆಯ ವಿವರ ಹಿಂದನ ದರ (ರೂ. ಗಳಲ್ಲಿ) ಹೊಸ ದರ (ರೂ. ಗಳಲ್ಲಿ)
ಶ್ರೀಮದ್ಭಾಗವತ ಕಥೆ 51000 100000
ವೇದ ಮತ್ತು ಗೀತಾ ಪಾಠ 2500 3100
ಕರ್ಪೂರ ಆರತಿ 1951 3000
ಬೆಳ್ಳಿ ಆರತಿ 2731 5100
ಮಹಾಭಿಷೇಕ 4700 5500
ಅಭಿಷೇಕ 4500 5300
ಅಖಂಡ ಜ್ಯೋತಿ (ವಾರ್ಷಿಕ) 4951 6000
ಸ್ವರ್ಣ ಆರತಿ 5202 6100
ಖೀರ್ ಭೋಗ 1001 2100
ಬಾಲ ಭೋಗ 7301 10000
ಮಹಾಭೋಗ 32501 45000

ಇದನ್ನೂ ಓದಿ: ದೈವಾರಾಧನೆಯಲ್ಲಿ ‘ಮಡಿ’ ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!

ಕೆದಾರನಾಥ ಧಾಮದ ಹೊಸ ದರಗಳು
ಸೇವೆಯ ವಿವರ ಹಿಂದನ ದರ (ರೂ. ಗಳಲ್ಲಿ) ಹೊಸ ದರ (ರೂ. ಗಳಲ್ಲಿ)
ಲಘು ರುದ್ರಾಭಿಷೇಕ 6100 7100
ಮಹಾಭಿಷೇಕ 9500 11500
ರುದ್ರಾಭಿಷೇಕ 7200 7500
ದಿನಪೂರ್ತಿ ಪೂಜೆ 28600 51000
ಶಿವ ಸಹಸ್ರನಾಮ 2000 2500
ಅಖಂಡ ಜ್ಯೋತಿ 28600 35000
ಕರ್ಪೂರ ಆರತಿ 1900 2400
ಬಾಲ ಭೋಗ 1000 1500

ಸಾಮಾನ್ಯ ದರ್ಶನ ಉಚಿತ

ಬಿಕೆಟಿಸಿ ಪ್ರಕಾರ, ಸಾಮಾನ್ಯ ಭಕ್ತರಿಗೆ ದರ್ಶನ ವ್ಯವಸ್ಥೆ ಹಳೆಯದಂತೆ ಉಚಿತವಾಗಿಯೇ ಇರುತ್ತದೆ. ಕೇವಲ ವಿಶೇಷ ಪೂಜೆ, ಆರತಿ ಮತ್ತು ವಿಧಿಗಳಿಗಾಗಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಸಮಿತಿ ಅಧ್ಯಕ್ಷ ಹೆಮಂತ್ ದ್ವಿವೇದಿ ಹೇಳುವಂತೆ, ಪ್ರತಿವರ್ಷದಂತೆ ಈ ವರ್ಷವೂ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಚಾರಧಾಮ ಯಾತ್ರೆಗೂ ಮುನ್ನ ಕಮಿಟಿಯ ಈ ನಿರ್ಧಾರ ಪ್ರಾಮುಖ್ಯತೆ ಪಡೆದಿದೆ. ವಿಶೇಷ ಪೂಜೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಈ ದರ ಏರಿಕೆಯ ಪರಿಣಾಮ ಬೀಳಬಹುದು. ಆದರೆ ಸಮಿತಿಯ ಪ್ರಕಾರ, ಈ ಹೆಚ್ಚುವರಿ ಶುಲ್ಕದಿಂದ ದೇವಸ್ಥಾನಗಳ ವ್ಯವಸ್ಥೆ ಮತ್ತು ಭಕ್ತರಿಗೆ ಸೌಲಭ್ಯಗಳು ಮತ್ತಷ್ಟು ಸುಧಾರಿಸಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಂಡೀಗಢದ ಜನನಿಬಿಡ ಪ್ರದೇಶವಾದ ಸೆಕ್ಟರ್-9ರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನ್ಯೂ ಚಂಡೀಗಢದ ನಿವಾಸಿ ಚಿನ್ನಿ ಖುಭೇರಿ ಎಂಬುವವರನ್ನು ಗುರಿಯಾಗಿಸಿಕೊಂಡು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸೆಕ್ಟರ್-9ರಲ್ಲಿರುವ ‘ಬಾಡಿ ಝೋನ್’ (Body Zone) ಜಿಮ್‌ನ ಹೊರಗಡೆ ಈ ಘಟನೆ ಸಂಭವಿಸಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಚಿನ್ನಿ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಚಂಡೀಗಢ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಾಳಿಕೋರರು ಕೃತ್ಯ ಎಸಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನಿಂದ ಕೋಟಿ ಕೋಟಿ ವಂಚನೆ ಆರೋಪ, 18 ಜನರ ವಿರುದ್ಧ ಪ್ರಕರಣ

ಬೆಂಗಳೂರು, ಮಾರ್ಚ್ 20: ಬೆಂಗಳೂರು (Bangalore) ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ ಕೋಟಿ ಹಣ ವಂಚನೆ ಆರೋಪ ಕೇಳಿಬಂದಿದೆ. ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಅಸೋಸಿಯೇಷನ್ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಎಂಬವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಪ್ರತಿ ಫ್ಲಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟಾರೆ ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಬಳಸದೇ, ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಲಾಗಿದೆ. ಉದಾಹರಣೆಗೆ; ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಿಸಿರುವುದು ಗಮನಕ್ಕೆ ಬಂದಿದೆ. ಜೊತೆಗೆ, ಆಡಿಟ್ ಖರ್ಚನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹೆಂಡತಿ, ಮನೆ ಕೆಲಸದವರ ಬ್ಯಾಂಕ್ ಖಾತೆಗಳಿಗೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಒಟ್ಟಾರೆ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ನವದೆಹಲಿ, ಮಾರ್ಚ್​ 20: ಯುದ್ಧಭೂಮಿಯಲ್ಲಿ ಗೆಲ್ಲಲಾಗದೆ ಒಪ್ಪಂದವನ್ನು ಮಾಡಿಕೊಂಡ ರಾಷ್ಟ್ರಗಳಿಗೆ ರಕ್ಷಣೆಯನ್ನೂ ನೀಡಲಾಗದೆ ಅತಂತ್ರವಾಗಿರುವ ಪಾಕಿಸ್ತಾನ(Pakistan)ವು ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕಲು ಕುತಂತ್ರ ನಡೆಸುತ್ತಿರುವುದು ಬಹಿರಂಗವಾಗಿದೆ. ಇತ್ತೀಚೆಗೆ ಅಮೆರಿಕದ ಸೇನೆಯು ಇರಾನ್​ನ ಯುದ್ಧನೌಕೆ ಐರಿಸ್ ಡೇನಾವನ್ನು ಹೊಡೆದುಹಾಕಿತ್ತು, ಇದು ಭಾರತದಲ್ಲಿ ಸಮರಭ್ಯಾಸ ನಡೆಸಿಕೊಂಡು ಇರಾನ್​​ನತ್ತ ಹೊರಟಿದ್ದ ಯುದ್ಧನೌಕೆಯಾಗಿತ್ತು. ಶ್ರೀಲಂಕಾದ ಬಳಿಯ ಹಿಂದೂ ಮಹಾಸಾಗರದಲ್ಲಿ ಈ ಅವಘಡ ಸಂಭವಿಸಿತ್ತು.

ಇರಾನ್​ ಇಸ್ರೇಲ್ ಅಮೆರಿಕ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿಯೂ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ಅಫ್ಘಾನಿಸ್ತಾನ ಇನ್ನೊಂದೆಡೆ ಬಲೂಚಿಸ್ತಾನ ವಿಮೋಚನಾ ತಂಡ ಪಾಕಿಸ್ತಾನದ ವಿರುದ್ಧ ಮುಗಿಬಿದ್ದಿದೆ. ಇನ್ನೊಂದೆಡೆ ವಾಯುನೆಲೆಯನ್ನು ಅಮೆರಿಕಕ್ಕೆ ನೀಡಿದರೆ ಹುಷಾರ್ ಎಂದು ಪಾಕ್​​ಗೆ ಇರಾನ್ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಆಗಿರುವ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾ ಯುದ್ಧ ಸನ್ನಿವೇಶದಲ್ಲಿ ಸಿಲುಕಿದಾಗ ಪಾಕ್ ನೆರವು ನೀಡಬೇಕು ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದೆಡೆ ರಕ್ಷಣೆಗೆ ಇರಾನ್ ಯುದ್ಧನೌಕೆಗೆ ಭಾರತ ಸರ್ಕಾರವು ರಕ್ಷಣೆ ನೀಡಬೇಕಿತ್ತು ಎನ್ನುವ ದೇಶದಲ್ಲಿನ ಕಾಂಗ್ರೆಸ್ ಆರೋಪದ ನಡುವೆ ಪಾಕಿಸ್ತಾನವು ಈ ಸನ್ನಿವೇಶವನ್ನು ಬಳಸಿಕೊಂಡು ಭಾರತವನ್ನು ಯುದ್ಧದೊಳಗೆ ಸೇರಿಸುವ ಹುನ್ನಾರ ಮಾಡಿತ್ತು. ಹಾಗೆಯೇ ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕುವ ಕುತಂತ್ರವನ್ನು ನಡೆಸಿತ್ತು.

ಇರಾನ್ ಯುದ್ಧನೌಕೆಯನ್ನು ಭಾರತದ ಸಮುದ್ರದ ಗಡಿಯೊಳಗೆ ನಾಶಪಡಿಸಿರಲಿಲ್ಲ, ಹಾಗೆಯೇ ಯಾವುದೇ ಅಂತಾರಾಷ್ಟ್ರೀಯ ನಿಯಮದ ಪ್ರಕಾರವು, ಆ ಯುದ್ಧನೌಕೆಗೆ ಭಾರತವು ರಕ್ಷಣೆ ಕೊಡಬೇಕೆಂದಿರಲಿಲ್ಲ, ಆದಾಗ್ಯೂ ರಕ್ಷಣಾ ಕಾರ್ಯಾಚರಣೆಗೆ ಭಾರತ ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ಓದಿ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!

ಈ ವಿಚಾರವನ್ನು ಭಾರತ ವಿದೇಶಾಂಗ ಸಚಿವಾಲಯವು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಯುದ್ಧದ ಸಂದರ್ಭದಲ್ಲಿ ಕ್ಷಿಪಣಿಗಳಿಗಿಂತ ವೇಗವಾಗಿ ಸುಳ್ಳು ಮಾಹಿತಿಗಳು ಹರಿದಾಡುತ್ತವೆ. ಆಪರೇಷನ್ ಸಿಂಧೂರ್​ನಿಂದ ಹಿಡಿದು ಇತಿಹಾಸದಲ್ಲಿನ ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ದೊಡ್ಡ ಅಸ್ತ್ರವೇ ಸುಳ್ಳು ಸುದ್ದಿಯಾಗಿದೆ.

ಅಮೆರಿಕ, ಇರಾನ್, ಇಸ್ರೇಲ್ ಯುದ್ಧದ ವಿಚಾರದಲ್ಲಿ ಭಾರತವನ್ನು ಎಳೆದು ತರಲು ಪಾಕಿಸ್ತಾನ ಮತ್ತೆ ಈ ಅಸ್ತ್ರ ಬಳಸಿದೆ. ಇವತ್ತಿನವರೆಗೂ ಭಾರತವು ಇಸ್ರೇಲ್ ಹಾಗೂ ಇರಾನ್ ಜತೆಗೆ ಭಿನ್ನ ವೇಧಿಕೆಯಲ್ಲಿ ಉತ್ತಮವಾದ ಸಂಬಂಧವನ್ನು ಹೊಂದಿದೆ. ಇದು ಪಾಕಿಸ್ತಾನ ಸೇರಿ ಹಲವು ದುಷ್ಟ ಶಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನು ಸಹಿಸದ ಪಾಕಿಸ್ತಾನವು ಐರಿಸ್ ಡೇನಾ ಯುದ್ಧ ನೌಕೆಯ ಪತನದ ಹಿಂದೆ ಭಾರತದ ಹಸ್ತಕ್ಷೇಪವಿದೆ ಎನ್ನುವ ಕಥೆಯೊಂದನ್ನು ಕಟ್ಟಿ ವಿಶ್ವಕ್ಕೆ ಸಾರುವ ಪ್ರಯತ್ನ ಮಾಡಿತ್ತು. ಹಾಗೆಯೇ ಈ ಸುಳ್ಳು ಸುದ್ದಿಯ ಮೂಲಕ ಭಾರತದ ಮೇಲೆ ಇರಾನ್ ದಾಳಿ ಮಾಡಬೇಕು ಎನ್ನುವುದು ಪಾಕಿಸ್ತಾನದ ಶಡ್ಯಂತ್ರವಾಗಿತ್ತು ಎನ್ನುವುದು ತಿಳಿದುಬಂದಿದೆ.

TacticalTribun ಖಾತೆಯ ಮೂಲಕ ಮಾರ್ಚ್ 4ರಂದು ಇದಕ್ಕೆ ಪೂರಕವಾಗಿ ಸಂದೇಶವೊಂದನ್ನು ಹಾಕಲಾಗಿತ್ತು. ಐರಿಸ್ ಡೇನಾದ ಚಲನೆ ಹಾಗೂ ನಿಖರವಾದ ಸ್ಥಳದ ಮಾಹಿತಿಯನ್ನು ಭಾರತವು ಅಮೆರಿಕದೊಂದಿಗೆ ಹಂಚಿಕೊಂಡಿದೆ. ಎನ್ನುವುದು ಈ ಖಾತೆಯ ಮೂಲಕ ಮಾಡಿದ ಪೋಸ್ಟ್​ನ ಸಾರಾಂಶವಾಗಿತ್ತು.

ಈ ಪೋಸ್ಟ್​ ಅನ್ನು 500ಕ್ಕೂ ಅಧಿಕ ಜನರು ಶೇರ್ ಮಾಡಿದ್ದರು. ಇದಕ್ಕೆ #IndiaBetraysIran ಹ್ಯಾಶ್​​ಟ್ಯಾಗ್ ಮೂಲಕ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುವ ಪ್ರಯತ್ನವೂ ನಡೆದಿತ್ತು. ಸುಮಾರು 500ಕ್ಕೂ ಅಧಿಕ ರೀಲ್​ಪೋಸ್ಟ್​ ಜತೆಗೆ ರಿಪೋಸ್ಟ್​ ಮಾಡಲಾಗಿತ್ತು. ಇದಕ್ಕೆ ಮಿಲಿಯನ್​ಗಟ್ಟಲೆ ವ್ಯೂಸ್ ಕೂಡಾ ಬಂದಿತ್ತು. ಈ ಟ್ರೆಂಡ್​ನಲ್ಲಿ ಕಾರ್ಯನಿರ್ವಹಿಸಿದ ಶೇ.40ಕ್ಕೂ ಅಧಿಕ ಪೋಸ್ಟ್​ಗಳು ಪಾಕ್ ಮೂಲದ್ದಾಗಿತ್ತು, ಇನ್ನುಳಿದ ಕೆಲವು ಮದ್ಯಪ್ರಾಚ್ಯ , ಆಫ್ರಿಕಾ ಹಾಗೂ ಇತರೆ ರಾಷ್ಟ್ರಗಳ ಮೂಲಕ ನಡೆದಿತ್ತು.

ಅಂದಹಾಗೆ ಇದೇನು ಈ ಕುತಂತ್ರಿಗಳ ಮೊದಲ ಪ್ರಯತ್ನವಾಗಿರಲಿಲ್ಲ, ಕೆಲ ದಿನಗಳ ಹಿಂದೆ, ರಾಜನಾಥ್ ಸಿಂಗ್ ಅವರ ಎಐ ವಿಡಿಯೋ ಹಾಕಿ, ಇರಾನ್ ಮೇಲಿನ ದಾಳಿಗೆ ಭಾರತದ ಸಂಪೂರ್ಣ ಬೆಂಬಲವಿದೆ ಎಂಬುವ ರೀತಿ ಬಿಂಬಿಸಲಾಗಿತ್ತು. ಹಾಗೆಯೇ ಇರಾನ್​ ಸರ್ವೋಚ್ಛ ನಾಯಕರಾಗಿದ್ದ ಅಲಿ ಖಮೇಲಿ ಹತ್ಯೆಗೂ ಭಾರತವು ಪ್ರಧಾನಿ ನರೇಂದ್ರ ಮೋದಿ ಮೂಲಕ ಇಸ್ರೇಲ್ ಹಾಗೂ ಅಮೆರಿಕಕ್ಕೆ ಬೆಂಬಲ ಸೂಚಿಸುತ್ತು ಎನ್ನುವಂತೆ ಹೇಳಲಾಗಿತ್ತು.

ಆದರೆ ಈ ಎರಡೂಸುದ್ದಿಗಳ ಬಗ್ಗೆ ಪಿಐಬಿ ಫ್ಯಾಕ್ಟ್​ ಚೆಕ್ ಮೂಲಕ ಸ್ಪಷ್ಟನೆ ನಿಡಿತ್ತು.ಆದರೆ ಐರಿಸ್ ಡೇನಾ ಮೂಲಕ ಮತ್ತೆ ಕುತಂತ್ರ ಮಾಡಲು ಹೋದ ಹಿನ್ನೆಲೆಯಲ್ಲಿ ಈ ಟ್ರೆಂಡ್​ನಲ್ಲಿ ಭಾಗಿಯಾದ ಹಲವು ಖಾತೆಗಳನ್ನು ರದ್ದುಪಡಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version