ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 3 ರೈಲುಗಳ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜುಗಳಿಗೆ ಹಾನಿ – Kannada News | Stones hurled at Vande Bharat express and 2 other trains in Bihar Muzaffarpur windows damaged

ಪಾಟ್ನಾ, ಮೇ 18: ಭಾನುವಾರ ಸಂಜೆ ಬಿಹಾರದ ಮುಜಫರ್‌ಪುರ ಬಳಿ ಮೂರು ಪ್ಯಾಸೆಂಜರ್ ರೈಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಕಲ್ಲು ತೂರಾಟವು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದು, ಈ ಪ್ರದೇಶದಲ್ಲಿ ರೈಲ್ವೆ ಭದ್ರತೆಯ ಬಗ್ಗೆ ಭಾರೀ ಕಳವಳವನ್ನು ಹುಟ್ಟುಹಾಕಿದೆ. ಭಾರತೀಯ ರೈಲ್ವೆಯ ಪ್ರೀಮಿಯಂ ಸೆಮಿ-ಹೈ-ಸ್ಪೀಡ್ ಸೇವೆಗಳಲ್ಲಿ ಒಂದಾದ ಪಾಟಲಿಪುತ್ರ-ಗೋರಖ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮೇಲೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಘಟನೆಯ ಸಮಯದಲ್ಲಿ ರೈಲಿನ ಮೂರು ಬೋಗಿಗಳ ಕಿಟಕಿಗಳು ಛಿದ್ರಗೊಂಡಿವೆ.

ಮುಜಫರ್‌ಪುರ ಜಂಕ್ಷನ್ ಮತ್ತು ರಾಮದಯಾಳು ನಗರ ನಿಲ್ದಾಣದ ನಡುವೆ ಈ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಜೌಲಿಯಾ ಮತ್ತು ಖಬ್ರಾ ಬಳಿ ರೈಲನ್ನು ಟಾರ್ಗೆಟ್ ಮಾಡಲಾಗಿದ್ದು, ಅಲ್ಲಿ ಹಲವಾರು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಅಪಘಾತದಲ್ಲಿ 3 ಬೋಗಿಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು, ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​

ವಂದೇ ಭಾರತ್ ರೈಲಿನಲ್ಲಿ ನಡೆದ ಘಟನೆಯ ಸ್ವಲ್ಪ ಸಮಯದ ನಂತರ ಪಾಟ್ನಾ-ಜಯನಗರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 14006, ಲಿಚ್ಚವಿ ಎಕ್ಸ್‌ಪ್ರೆಸ್ ಕೂಡ ಅದೇ ಮಾರ್ಗದಲ್ಲಿ ವಿವಿಧ ಸ್ಥಳಗಳಲ್ಲಿ ಕಲ್ಲು ತೂರಾಟಕ್ಕೆ ಒಳಗಾದವು. ಈ ಘಟನೆಗಳು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಭೀತಿಯನ್ನುಂಟುಮಾಡಿದವು. ಈ ಘಟನೆ ಬಗ್ಗೆ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಒಳಗೆ ಅಳವಡಿಸಲಾದ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗಳು ವರದಿಯಾದ ನಂತರ ಭದ್ರತಾ ಸಿಬ್ಬಂದಿ ರೈಲ್ವೆ ಹಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ. ರೈಲ್ವೆ ಹಳಿಗಳ ಬಳಿ ಆಟವಾಡುತ್ತಿದ್ದ ಮಕ್ಕಳು ಕಲ್ಲು ತೂರಾಟದಲ್ಲಿ ಭಾಗಿಯಾಗಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿತಿಮೀರಿ ಇಂಧನ ಖರೀದಿಸದಿರಿ: ಕರ್ನಾಟಕದ ಜನತೆಗೆ ವಿಶೇಷ ಮನವಿ – Kannada News | Do not storage fuel: Karnataka Oil Industry Coordinator requested to Public

ಬೆಂಗಳೂರು, (ಮೇ 18): ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್  (Petrol And Diesel) ಮತ್ತು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಂಧನ ದರ ಹೆಚ್ಚಳವಾಗಲಿದೆ ಎನ್ನಲಾಗತ್ತಿದೆ.ಇನ್ನೊಂದೆಡೆ ಇರಾಕ್-ಇಸ್ರೆಲ್ ಯುದ್ಧದದಿಂದಾಗಿ ಇಂಧನ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮಿತವ್ಯಯ ಜೀವನಶೈಲಿಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್​​ನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಮಿತಿ ಹೇರಲಾಗಿದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1500ರವರೆಗೆ ಇಂಧನ ಮಿತಿ ಹೇರಲಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸ್ಪಷ್ಟನೆ ನೀಡಿದ್ದು, ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ. ಆತಂಕದಿಂದ ಇಂಧನ ಖರೀದಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

  • ಕರ್ನಾಟಕದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯ
  • ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಸಿದ್ಧಾರ್ಥ್ ಅಗರ್ವಾಲ್ ಸ್ಪಷ್ಟನೆ
  • ನಿರಂತರ ಪೂರೈಕೆಯ ಭರವಸೆ ನೀಡಿದ ಒಎಂಸಿಗಳು
  • ಆತಂಕದಿಂದ ಇಂಧನ ಖರೀದಿಸದಂತೆ ಸಾರ್ವಜನಿಕರಿಗೆ ಮನವಿ

ಇನ್ನು ಈ ಬಗ್ಗೆ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL ಮತ್ತು HPCL) ಸಿದ್ಧಾರ್ಥ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು, ರಾಜ್ಯದ ಎಲ್ಲಾ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಸಾಕಷ್ಟು ದಾಸ್ತಾನು ಸಂಪೂರ್ಣವಾಗಿ ಲಭ್ಯವಿದೆ ಎಂದು ಸಾರ್ವಜನಿಕರಿಗೆ ಅಧಿಕೃತವಾಗಿ ಭರವಸೆ ನೀಡಿದ್ದಾರೆ.

ಇದನ್ನೂ ನೋಡಿ: ಇಂಧನ ಬೆಲೆ ಮತ್ತಷ್ಟು ಹೆಚ್ಚಳ: ತಜ್ಞರಿಂದ 8ರಿಂದ 10 ರೂಪಾಯಿ ಏರಿಕೆ ಬಗ್ಗೆ ಭವಿಷ್ಯ

ಇಂಧನ ಪೂರೈಕೆಯಲ್ಲಿ ಅಡೆತಡೆಯಿಲ್ಲ

ಟರ್ಮಿನಲ್ ಗಳು ಮತ್ತು ಡಿಪೋಗಳಿಂದ ಹಿಡಿದು ಸ್ಥಳೀಯ ಚಿಲ್ಲರೆ ಮಾರಾಟ ಮಳಿಗೆಗಳವರೆಗಿನ ಸಂಪೂರ್ಣ ಇಂಧನ ಪೂರೈಕೆ ಸರಪಳಿಯು ಯಾವುದೇ ಅಡೆತಡೆಯಿಲ್ಲದೆ, ಸಾಮಾನ್ಯ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂಧನ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಾದ್ಯಂತ ಮರುಪೂರಣ ಕಾರ್ಯಾಚರಣೆಗಳು ಸುಗಮವಾಗಿ ಸಾಗುತ್ತಿವೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕರ್ನಾಟಕದ ಗ್ರಾಹಕರ ದೈನಂದಿನ ಇಂಧನ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಜ್ಜಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಕ್ಕಸ ಹೊಟ್ಟೆಗೆ ಅರೆಕಾಸು ಮಜ್ಜಿಗೆ; ದಿನಕ್ಕೆ 1,600 ಕೋಟಿ ನಷ್ಟವಿರುವ ತೈಲ ಕಂಪನಿಗಳಿಗೆ 3 ರೂ ಪೆಟ್ರೋಲ್ ಬೆಲೆ ಏರಿಕೆ ಸಾಲುತ್ತಾ?

ಅತಿಯಾಗಿ ಇಂಧನ ಸಂಗ್ರಹ ಬೇಡ

ಸಾರ್ವಜನಿಕರು ನಿಶ್ಚಿಂತರಾಗಿರಲು ಮತ್ತು ತಮ್ಮ ಸಾಮಾನ್ಯ ಇಂಧನ ಬಳಕೆಯನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಕರ್ನಾಟಕದ ಜನರಿಗೆ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಸಂಪೂರ್ಣವಾಗಿ ಬದ್ಧವಾಗಿವೆ ಮತ್ತು ಸಿದ್ಧವಾಗಿವೆ. ಅದರಂತೆ, ಸಾರ್ವಜನಿಕರು ಆತಂಕದಿಂದ ಇಂಧನ ಖರೀದಿಸುವುದು ಅಥವಾ ಅತಿಯಾಗಿ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ಮಾಡಬಾರದು. ಇಡೀ ಪ್ರದೇಶದಾದ್ಯಂತ ತಡೆರಹಿತ ಇಂಧನ ಲಭ್ಯತೆಗಾಗಿ ತೈಲ ಉದ್ಯಮವು ಲಾಜಿಸ್ಟಿಕ್ಸ್, ದಾಸ್ತಾನು ಚಲನೆ ಮತ್ತು ಚಿಲ್ಲರೆ ಕಾರ್ಯಾಚರಣೆಗಳನ್ನು ನಿಕಟವಾಗಿ ಸಂಯೋಜಿಸುವುದನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು – Kannada News | AI Job Loss Warning: Microsoft AI Chief Predicts White Collar Jobs Vanish in 18 Months

ನವದೆಹಲಿ, ಮೇ 18: ಕೃತಕ ಬುದ್ಧಿಮತ್ತೆಯಿಂದ (AI) ಮನುಷ್ಯರಿಗೆ ಕೆಲಸ ಇಲ್ಲವಾಗುತ್ತವೆ ಎನ್ನುವ ವಿಚಾರದ ಬಗ್ಗೆ ಪರಿಣಿತರಲ್ಲೇ ಮಿಶ್ರ ಅನಿಸಿಕೆಗಳಿವೆ. ಹಲವರು ಎಐನಿಂದ ಉದ್ಯೋಗನಷ್ಟವಾಗುವುದೆಲ್ಲಾ ಸುಳ್ಳು ಒಂದು ವರ್ಗ ಹೇಳುತ್ತಿದೆ. ಎಐನಿಂದ ಸಿಕ್ಕಾಪಟ್ಟೆ ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಇನ್ನೊಂದು ವರ್ಗ ಹೇಳುತ್ತಿದೆ. ಸ್ಯಾಮ್ ಆಲ್ಟ್​ಮ್ಯಾನ್, ಡೇರಿಯೋ ಅಮೋಡೇ, ಇಲಾನ್ ಮಸ್ಕ್ ಮೊದಲಾದವರು ಇದೇ ಅನಿಸಿಕೆ ಹೊಂದಿದ್ದಾರೆ. ಮೈಕ್ರೋಸಾಫ್ಟ್​ನ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ (Mustafa Suleyman) ಅವರೂ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಅವರ ಪ್ರಕಾರ ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಉದ್ಯೋಗಗಳೇ ಇಲ್ಲವಾಗುತ್ತವಂತೆ.

ಈ ಸುದ್ದಿಯ ಮುಖ್ಯಾಂಶಗಳು

  • ಎಐನಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ ಧ್ವನಿಗೂಡಿಸಿದ್ದಾರೆ.
  • ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಜಾಬ್​ಗಳು ಇಲ್ಲವಾಗುತ್ತವೆ. ಅಕೌಂಟೆಂಟ್, ಲಾಯರ್ ಮತ್ತು ಮಾರ್ಕೆಟಿಂಗ್ ಕೆಲಸಗಳು ಇಲ್ಲದಂತಾಗುತ್ತವಂತೆ.
  • 2027ರರೊಳಗೆ ಮನುಷ್ಯರು ಮಾಡುವಂತಹ ಹೆಚ್ಚಿನ ವೈಟ್ ಕಾಲರ್ ಕೆಲಸಗಳನ್ನು ಎಐ ನಿರ್ಮಿಸಬಲ್ಲುದು ಎಂದು ಸುಲೇಮಾನ್ ಹೇಳುತ್ತಾರೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ವೈಟ್ ಕಾಲರ್ ಕೆಲಸಗಳು ಯಾವುವು?

ಕಚೇರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ವೃತ್ತಿಪರ, ಆಡಳಿತಾತ್ಮಕ ಮತ್ತು ನಿರ್ವಹಣಾತ್ಮಕ ಕೆಲಸಗಳನ್ನು ವೈಟ್ ಕಾಲರ್ ಜಾಬ್​ಗಳೆಂದು ಗಣಿಸಲಾಗುತ್ತದೆ. ಉದಾಹರಣೆಗೆ, ಐಟಿ ಕ್ಷೇತ್ರದ ಉದ್ಯೋಗಗಳು, ಫಿನಾನ್ಸ್, ಅಕೌಂಟಿಂಗ್, ಕಾರ್ಪೊರೇಟ್ ಮ್ಯಾನೇಜ್ಮೆಂಟ್, ವಕೀಲರು, ಲೀಗಲ್ ಅಡ್ವೈಸರ್​ಗಳು, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಇತ್ಯಾದಿ ವರ್ಗದ ಕೆಲಸಗಳು ವೈಟ್ ಕಾಲರ್ ಜಾಬ್ ಎನಿಸುತ್ತವೆ.

ಪ್ಲಂಬರ್, ಎಲೆಕ್ಟ್ರಿಶಿಯನ್, ಕಟ್ಟಡ ಕಾರ್ಮಿಕರು, ಕುಶಲಕರ್ಮಿಗಳು ಇತ್ಯಾದಿ ಮನುಷ್ಯರ ದೈಹಿಕ ಶ್ರಮ ಮತ್ತು ಕೌಶಲ್ಯ ಬೇಡುವ ಕೆಲಸಗಳನ್ನು ಬ್ಲೂ ಕಾಲರ್ ಜಾಬ್ ಎನ್ನುತ್ತಾರೆ. ಎಐ ಹೊಡೆತದಲ್ಲಿ ಹೆಚ್ಚು ದಿನ ಉಳಿಯುವುದು ಬ್ಲೂ ಕಾಲರ್ ಜಾಬ್​ಗಳೇ ಎನ್ನುವುದು ತಜ್ಞರ ಅನಿಸಿಕೆ.

ಎಐ ಏಜೆಂಟ್​ಗಳು ನುಗ್ಗುತ್ತವೆ ಹುಷಾರ್..!

ಮೈಕ್ರೋಸಾಫ್ಟ್ ಎಐ ಡಿವಿಶನ್ ಮುಖ್ಯಸ್ಥರ ಪ್ರಕಾರ ಮುಂದಿನ ಎರಡ್ಮೂರು ವರ್ಷಗಳಲ್ಲಿ ಎಐ ಏಜೆಂಟ್​ಗಳು ಯಾವುದೇ ಕಂಪನಿಯ ವರ್ಕ್​ಫ್ಲೋ ಅನ್ನು ನಿರ್ವಹಿಸಲು ಆರಂಭಿಸುವಷ್ಟು ಶಕ್ತವಾಗಿರಲಿವೆ. ಮನುಷ್ಯರ ಅವಶ್ಯಕತೆ ಇಲ್ಲದಂತೆ ಅವುಗಳೇ ನಿರ್ಧಾರ ತೆಗೆದುಕೊಳ್ಳಬಲ್ಲುವಂತೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಪೋಡ್​ಕ್ಯಾಸ್ಟ್ ಮಾಡಿದಷ್ಟೇ ಸುಲಭವಾಗಿ ಎಐ ಸಿಸ್ಟಂಗಳ ನಿರ್ಮಾಣ ಸಾಧ್ಯ

ಎಐ ಸಿಸ್ಟಂಗಳು ಎಲ್ಲರಿಗೂ ಕೈಗೆಟಕುವಂತಿರುತ್ತವೆ. ಸಾಮಾನ್ಯ ಜನರೂ ಕೂಡ ಯಾವುದೇ ಪರಿಣತಿ ಇಲ್ಲದಿದ್ದರೂ ತಮ್ಮದೇ ಎಐ ಸಿಸ್ಟಂಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಹೇಳುವ ಮುಸ್ತಫಾ ಸುಲೇಮಾನ್, ಅದನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟ್ ಮಾಡುವ ಕೆಲಸಕ್ಕೆ ಹೋಲಿಸುತ್ತಾರೆ.

ಗ್ರಾಹಕೀಯವಾದ ಎಐ ಮಾಡಲ್ ಅನ್ನು ಸೃಷ್ಟಿಸುವುದು ಒಂದು ಬ್ಲಾಗ್ ಬರೆದಷ್ಟೇ ಸುಲಭವಾಗಿರುತ್ತದೆ. ಇದರಿಂದ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಅಗತ್ಯ ಇರುವ ಕಾರ್ಯಗಳಿಗೆ ನೆರವಾಗುವ ಎಐ ಟೂಲ್​ಗಳನ್ನು ಅವರೇ ರಚಿಸಬಲ್ಲುವು ಎಂದೆನ್ನುತ್ತಾರೆ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳ ಎಚ್ಚರಿಕೆಗೂ ಡೋಂಟ್​​ಕೇರ್​​: ಮೇ 20ರಂದು ಸಾರಿಗೆ ನೌಕರರ ಮುಷ್ಕರ ಖಚಿತ ಎಂದ ಮುಖಂಡರು – Kannada News | Karnataka KSRTC Strike Update: Employees Confirm May 20 Action Amid No Work, No Pay Warning

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಸಂಬಂಧ ಈಗಾಗಲೇ ಕೆಎಸ್​ಆರ್​​ಟಿಸಿ ಖಡಕ್​​ ಎಚ್ಚರಿಕೆ ರವಾನಿಸಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಷ್ಕರದಲ್ಲಿ ಭಾಗಿಯಾಗದಂತೆ ಕೆಎಸ್ಆರ್​ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ. ವಿಶೇಷ ಸೂಚನೆಯಡಿ ನೀಡಿರುವ ನಿರ್ದೇಶನದನ್ವಯ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಿದ್ದರೂ ಸಾರಿಗೆ ನೌಕರರು ಮಾತ್ರ ಪಟ್ಟು ಬಿಡಲು ನಿರಾಕರಿಸಿದ್ದು, ನಾವು ದೃಢವಾಗಿ ನಿರ್ಧಾರ ಮಾಡಿದ್ದೀವಿ, ಮುಷ್ಕರ ನಡೆಸುವುದು ಖಚಿತ ಎಂದು ತಿಳಿಸಿದ್ದಾರೆ.

‘ನಾವು ಯಾವುದಕ್ಕೂ ಹೆದರುವುದಿಲ್ಲ’

ನಮ್ಮ ಬೇಡಿಕೆ ಈಡೇರಿಸಲೇಬೇಕು, ಸಾರಿಗೆ ಮುಷ್ಕರ ಶುರುವಾದ ಮೇಲೆ ಏನೇನು ಆಗುತ್ತೆ ನೋಡೋಣ. ಸಾರಿಗೆ ನೌಕರರನ್ನು ಅರೆಸ್ಟ್ ಮಾಡಿದ್ರೆ ಬಸ್ ಯಾರು ಓಡಿಸುತ್ತಾರೆ? ಎಸ್ಮಾ ಜಾರಿಯಲ್ಲಿದೆ ಅಂತಾರೆ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಬೆಂಗಳೂರಲ್ಲಿ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ; ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

‘ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ’

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ ಎಂದಿದ್ದಾರೆ. ಈಗಾಗಲೇ ‘ನೋ ವರ್ಕ್ ನೋ ಪೇ’ ಆದೇಶ ಜಾರಿಮಾಡಲಾಗಿದ್ದು, ಸಾರಿಗೆ ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ನಿಶ್ಚಿತ. ಎಲ್ಲಾ ಜಿಲ್ಲೆಗಳ ಎಸ್​ಪಿ, ಆರ್​ಟಿಒಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ಕಾರದ ಸಾಧನಾ ಸಮಾವೇಶಕ್ಕೆ 2,000 ಬಸ್ ಕಳುಹಿಸಲಾಗುತ್ತಿದೆ. ಮೇ 20ರಂದು ರಾಜ್ಯದ ಎಲ್ಲಾ ಡಿಪೋಗಳಿಗೆ ಭದ್ರತೆ ನೀಡಲಾಗುವುದು. ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗಿದ್ದು ಭದ್ರತೆಗೆ ಸೂಚಿಸಲಾಗಿದೆ. ಮುಷ್ಕರದಲ್ಲಿ ಭಾಗಿಯಾಗಲ್ಲವೆಂದು ಸಾರಿಗೆ ಸಿಬ್ಬಂದಿಯಿಂದ ಮುಚ್ಚಳಿಕೆ ಬರೆಸಿಕೊಂಡಿರುವುದರಿಂದ ಸಾರಿಗೆ ಬಸ್ ಸಂಚಾರ ಇರುತ್ತೆ ಎಂದವರು ತಿಳಿಸಿದ್ದಾರೆ.

ಇದರ ಹೊರತಾಗಿಯೂ ಮುಷ್ಕರ ನಡೆದರೆ ನಮ್ಮಲ್ಲಿ 2,000 ತರಬೇತಿನಿರತರು ಇದ್ದಾರೆ. ಸಾರಿಗೆ ಇಲಾಖೆಯ 4 ನಿಗಮಗಳಲ್ಲಿ 5,000 ತರಬೇತಿ ಚಾಲಕರಿದ್ದಾರೆ. ಅವರನ್ನು ನಿಯೋಜಿಸುವ ಮೂಲಕ ಸಾರಿಗೆ ಬಸ್ ಸೇವೆ ನೀಡುತ್ತೇವೆ. ಜೊತೆಗೆ ಖಾಸಗಿ ಬಸ್​ಗಳ ಮಾಲೀಕರ ಸಂಘದ ಜೊತೆಗೂ ಚರ್ಚೆ ಮಾಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್​ಗಳನ್ನು ಓಡಿಸ್ತೇವೆ. ನಮ್ಮ ಜೊತೆ ಚರ್ಚೆ ನಡೆಸಲು ಸಾರಿಗೆ ಸಿಬ್ಬಂದಿಗೆ ಮುಕ್ತ ಅವಕಾಶವಿದೆ ಎಂದವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Peddi Trailer: ‘ಪೆದ್ದಿ’ ಟ್ರೇಲರ್ ಬಿಡುಗಡೆ; ಕ್ರಿಕೆಟ್ ಜೊತೆ ಕುಸ್ತಿ ಅಖಾಡದಲ್ಲೂ ರಾಮ್ ಚರಣ್ ಮಾಸ್ ಅವತಾರ – Kannada News | Peddi Movie Trailer Released ft Ram Charan Shiva Rajkumar Pan India Film

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ (Peddi) ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಟ್ರೇಲರ್ ಇಂದು (ಮೇ 18) ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ (Peddi Trailer) ನೋಡಿದ ಬಳಿಕ ರಾಮ್ ಚರಣ್ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಆಗಿದೆ. ರಾಮ್ ಚರಣ್ (Ram Charan) ಅವರ ವಿವಿಧ ಗೆಟಪ್ ಗಮನ ಸೆಳೆದಿದೆ. ಮೇಕಿಂಗ್ ಗುಣಮಟ್ಟ ನೋಡಿ ಪ್ರೇಕ್ಷಕರ ಭೇಷ್ ಎಂದಿದ್ದಾರೆ.

1. ‘ಪೆದ್ದಿ’ ಸಿನಿಮಾದಲ್ಲಿ ನಟ ರಾಮ್ ಚರಣ್ ಪಾತ್ರಕ್ಕೆ ಹಲವು ಶೇಡ್ಸ್ ಇವೆ.
2. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಆಗಿದೆ.
3. ಜೂನ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ವಿಜಯನಗರಂ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ರಾಮ್ ಚರಣ್ ಅವರು ಬೆಲ್ಲದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಮಿಕನಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಆಟದ ಬಗ್ಗೆ ಅಪಾರ ಒಲವು ಹೊಂದಿರುವ ಹೀರೋ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ತನಗೆ ಪರಿಚಯವೇ ಇಲ್ಲದ ಕುಸ್ತಿ ಅಖಾಡಕ್ಕೆ ಇಳಿಯಬೇಕಾಗಿ ಬರುತ್ತದೆ. ಕೊನೆಗೆ ಆತ ಹೇಗೆ ‘ಕ್ರಾಸ್ ಓವರ್ ಅಥ್ಲೀಟ್’ ಆಗಿ ಹೊರಹೊಮ್ಮುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾಹಂದರ.

‘ಆರ್ಆರ್ಆರ್’ ಚಿತ್ರದಲ್ಲಿ ವಿಭಿನ್ನ ಶೇಡ್‌ಗಳ ಪಾತ್ರದ ಮೂಲಕ ಅಬ್ಬರಿಸಿದ್ದ ರಾಮ್ ಚರಣ್ ಅವರು ‘ಪೆದ್ದಿ’ ಚಿತ್ರಕ್ಕಾಗಿ ತಮ್ಮ ದೇಹವನ್ನು ದಂಡಿಸಿ ಸಖತ್ ಟ್ರಾನ್ಸ್​ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಅವರ ಕಟ್ಟುಮಸ್ತಾದ ಬಾಡಿ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಟನೆ, ಮಾಸ್ ಮ್ಯಾನರಿಸಂ, ಡೈಲಾಗ್ ಡೆಲಿವರಿ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಪೆದ್ದಿ ಸಿನಿಮಾ ಟ್ರೇಲರ್:

ಈ ಸಿನಿಮಾಗೆ ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಿದ್ದಾರೆ. ಕೇವಲ ನಾಯಕನ ಮಾಸ್ ಎಲಿಮೆಂಟ್‌ಗಳನ್ನು ಮಾತ್ರವಲ್ಲದೇ, ಕಥೆಯಲ್ಲಿರುವ ಭಾವನಾತ್ಮಕ ಆಳವನ್ನೂ ಕೂಡ ಅವರು ಈ ಟ್ರೇಲರ್​​ನಲ್ಲಿ ತೋರಿಸಿದ್ದಾರೆ. ಸಿನಿಮಾದ ಅದ್ದೂರಿ ಮೇಕಿಂಗ್ ಹೆಚ್ಚು ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅವರ ಪಾತ್ರ ಕೂಡ ಟ್ರೇಲರ್​ನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜಕುಮಾರ್ ಜೊತೆ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ವೃದ್ಧಿ ಸಿನಿಮಾಸ್’ ಬ್ಯಾನರ್ ಮೂಲಕ ವೆಂಕಟ ಸತೀಶ್ ಕಿಲಾರು ಅವರು ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 4ರಂದು ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ವಿವಿಧೆಡೆ ಗಾಳಿ ಮಳೆ: ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟ – Kannada News | Bengaluru Rains: Strong Winds, Heavy Downpour Lash Several Areas Across City

ಬೆಂಗಳೂರು, ಮೇ 18: ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ರಾಜಧಾನಿ ಬೆಂಗಳೂರಿಗರಿಗೆ ವರುಣ ತಂಪೆರೆದಿದ್ದಾನೆ. ನಗರದ ವಿವಿಧೆಡೆ ಗಾಳಿ ಸಹಿತ ಮಳೆ (Rain) ಸುರಿದಿದ್ದು, ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಿಂದ ಸಮಸ್ಯೆಗೆ ಸಿಲುಕಿದ್ದು, ರಸ್ತೆ ಬದಿಗಳಲ್ಲೇ ಬೈಕ್ ನಿಲ್ಲಿಸಿ ಬಸ್ ನಿಲ್ದಾಣಗಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಸವಾರರು ನಿಂತ ದೃಶ್ಯಗಳು ಕಂಡುಬಂದಿವೆ. ನಗರದ ಹಲವು ರಸ್ತೆಗಳು ಮಳೆ‌ನೀರಿನಿಂದ ಆವೃತವಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು ಕೆರೆಯಂತಾಗಿವೆ.

ಮುಖ್ಯಾಂಶಗಳು

  • ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗರಿಗೆ ತಂಪೆರೆದ ವರುಣ
  • ನಗರದ ವಿವಿಧೆಡೆ ಗಾಳಿ ಸಹಿತ ಸುರಿದಿರುವ ಸಾಧಾರಣ ಮಳೆ
  • ಮಳೆ ಕಾರಣ ಕೆಲವೆಡೆ ವಾಹನಗಳ ಸಂಚಾರಕ್ಕೆ ತೊಡಕು

ವಸಂತನಗರ, ಸಿಟಿ ಮಾರ್ಕೆಟ್​​, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಇಂದಿರಾ ನಗರ, ಲಗ್ಗೆರೆ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಮಣ್ಯ ನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ವರುಣನ ಆಗಮನವಾಗಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್!

ಕೆ.ಆರ್.ಸರ್ಕಲ್ ಅಂಡರ್ ಪಾಸ್ ಬಂದ್

ಇನ್ನು ಮಳೆ ಹಿನ್ನೆಲೆ ನೀರು ಸಂಗ್ರಹಣೆ ಸಾಧ್ಯತೆ ಇರುವ ಕಾರಣ ಮುಂಜಾಗ್ರತ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಳೆಯ ನಿರೀಕ್ಷೆ ಇದ್ದು, ಗಂಟೆಗೆ 40-50 ಕಿ.ಮೀ. ಗಾಳಿ, ಗುಡುಗು ಸಹಿತ ವರುಣ ಅಬ್ಬರಿಸಲಿದ್ದಾನೆ ಎಂದು ಇಲಾಖೆ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:44 pm, Mon, 18 May 26

Source link

ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ – Kannada News | Monsoon Rain Arriving in Karnataka On June First Week Says Meteorological director CS Patil

ಬೆಂಗಳೂರು, (ಮೇ 18): ಕರ್ನಾಟಕದಲ್ಲಿ ಪೂರ್ವ ಮುಂಗಾರು (Monsoon Rain) ಚುರುಕುಗೊಂಡಿದೆ. ಹೌದು..ಕಳೆದ ಕೆಲ ದಿನಗಳಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ ಮಾತನಾಡಿದ್ದು, ರಾಜ್ಯದ ಹಲವು ಕಡೆ ಮಾನ್ಸೂನ್ ಮಳೆಯಾಗಲಿದೆ. ಜೂನ್ ಮೊದಲೇ ವಾರದಲ್ಲಿ ನೈನೃತ್ಯ ಮಾನ್ಸೂನ್ ಆರಂಭವಾಗಲಿದ್ದು,  60-100 ಸೆಂಟಿಮೀಟರ್ ನಷ್ಟು ಮಳೆಯ ಸಾಧ್ಯತೆ ಇದೆ. ವಿನ್ಸ್ ಕನ್ವರ್ಷನ್ ಪ್ರಮಾಣ ಹೆಚ್ಚಿರುವ ಕಾರಣ ಬಂಗಾಳ ಕೊಲ್ಲಿಯಲ್ಲಿ ಗಾಳಿ ಪ್ರಮಾಣ ಜಾಸ್ತಿ ಇರುತ್ತೆ. ಇದರಿಂದ ರಾಜ್ಯದಲ್ಲಿ ಮೇ 18ರ ಬಳಿಕ ಮಳೆ ಆಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲಿ ಎಲ್ ನೀನು ಪರಿಣಾಮ ಬೀರಲಿದೆ ಎಂದಿದ್ದಾರೆ. ಇನ್ನು ಹವಾಮಾನ ತಜ್ಞ ಪಾಟೀಲ ಅವರು ಕರ್ನಾಟಕದ ಹವಾಮಾನ ಹಾಗೂ ಮುಂಗಾರು ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ? – Kannada News | Google maps how it knows your travel mode speed data ai secrets revealed

ತಂತ್ರಜ್ಞಾನ, ದತ್ತಾಂಶ ಮತ್ತು ಬುದ್ಧಿಮತ್ತೆ ಸೇರಿದರೆ ಅದ್ಭುತ ಸೇವೆ ಸೃಷ್ಟಿಯಾಗುತ್ತದೆ. ಅದುವೇ ಗೂಗಲ್ ಮ್ಯಾಪ್ಸ್. ಬಹುತೇಕ ಮೊಬೈಲ್ ಬಳಕೆದಾರರು ಮ್ಯಾಪ್ಸ್ ಬಳಸುತ್ತಾರೆ. ಅಷ್ಟರಮಟ್ಟಿಗೆ ಗೂಗಲ್​ನ ಈ ನಕ್ಷೆಯ ಆ್ಯಪ್ (Google Maps) ಉಪಯುಕ್ತ ಎನಿಸಿದೆ. ಗೂಗಲ್ ಈ ಭೂಮಿಯ ಮೂಲೆ ಮೂಲೆಯನ್ನೂ ಹೊಕ್ಕಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸೆಟಿಲೈಟ್, ವಿಮಾನ, ಸ್ಟ್ರೀಟ್​ವ್ಯೂ ವಾಹನಗಳು ಸೆರೆಹಿಡಿಯುವ ಚಿತ್ರಗಳನ್ನು ಬಳಸುತ್ತದೆ. ಅದರ ಜೊತೆಗೆ ಏಜೆನ್ಸಿ ಫೀಡ್​ಗಳು, ಸರ್ಕಾರಗಳು ಒದಗಿಸುವ ದತ್ತಾಂಶ, ಮೊಬೈಲ್ ಬಳಕೆದಾರರ ಲೊಕೇಶನ್ ಮಾಹಿತಿ ಇತ್ಯಾದಿ ಅಗಾಧ ದತ್ತಾಂಶವನ್ನು ಬಹಳ ಜಾಣತನದಿಂದ ಬಳಸಿ ಅದ್ಬುತವಾದ ಸೇವೆ ಒದಗಿಸುತ್ತದೆ ಗೂಗಲ್ ಮ್ಯಾಪ್ಸ್.

ಯಾವ ವಾಹನದಲ್ಲಿ ಹೋಗಿದ್ದು ಎಂದು ಮ್ಯಾಪ್ಸ್​ಗೆ ಹೇಗೆ ಗೊತ್ತಾಗುತ್ತದೆ?

ನೀವು ಗೂಗಲ್ ಮ್ಯಾಪ್ಸ್​ನನಲ್ಲಿನ ನಿಮ್ಮ ಪ್ರೊಫೈಲ್​ನಲ್ಲಿರುವ ಟೈಮ್​ಲೈನ್​ಗೆ ಹೋದಾಗ ನಿಮ್ಮ ಟ್ರಾವಲ್ ಹಿಸ್ಟರಿಯೇ ಅಲ್ಲಿರುತ್ತದೆ. ನೀವು ಲೊಕೇಶನ್ ಆನ್ ಮಾಡಿಕೊಂಡಿದ್ದರೆ ಇದು ದಾಖಲಾಗಿರುತ್ತದೆ. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಷ್ಟು ಹೊತ್ತಿಗೆ ಹೋದಿರಿ, ಯಾವ ವಾಹನದಲ್ಲಿ ಹೋದಿರಿ ಎಂದೆಲ್ಲಾ ವಿವರವನ್ನು ದಾಖಲು ಮಾಡಿಕೊಳ್ಳುತ್ತದೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಸೈಕಲ್, ದ್ವಿಚಕ್ರ ವಾಹನ, ಕಾರು, ಬಸ್ಸು, ರೈಲುಗಳಲ್ಲಿ ಪ್ರಯಾಣ ಮಾಡಿದರೆ ಅದನ್ನು ಬಹುತೇಕ ನಿಖರವಾಗಿ ತಿಳಿಸುತ್ತದೆ. ಅದು ಹೇಗೆ ಸಾಧ್ಯ? ಇದೆಲ್ಲವೂ ಕೂಡ ಬಹುತೇಕ ನಿಮ್ಮ ಫೋನ್​ನ ಜಿಪಿಎಸ್ ಬಳಸಿ ಮಾಡಲಾಗುವ ಅಂದಾಜು. ಆದರೂ ಕೂಡ ಯಾವ ವಾಹನದಲ್ಲಿ ಪ್ರಯಾಣಿಸಿದ್ದು ಎಂದು ಹೇಗೆ ಪತ್ತೆ ಮಾಡುತ್ತೆ? ಇದು ಬಹಳ ಕುತೂಹಲದ ಸಂಗತಿ.

ಪ್ರಯಾಣದ ವೇಗ, ಅಲುಗಾಟ, ಮಾರ್ಗ ಇತ್ಯಾದಿ ಗಮನಿಸುವ ಗೂಗಲ್ ಮ್ಯಾಪ್ಸ್

ಪ್ರಯಾಣದ ವೇಗದ ಮೇಲೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದಿರಿ ಎಂದು ಗೂಗಲ್ ಅಂದಾಜು ಮಾಡುತ್ತದೆ. 6-8 ಕಿಮೀ ವೇಗದಲ್ಲಿ ಆಗಿದ್ದರೆ ಸೈಕಲ್ ಎಂದು, 15-25 ಕಿಮೀ ವೇಗವಿದ್ದರೆ ಅದು ದ್ವಿಚಕ್ರ ವಾಹನ ಎಂದು ಬಗೆಯುತ್ತದೆ. ಇನ್ನೂ ಹೆಚ್ಚಿನ ವೇಗವಾದರೆ ಕಾರು, ಬಸ್ಸು ಇತ್ಯಾದಿ ಎಂದು ಭಾವಿಸುತ್ತದೆ.

ಗೂಗಲ್ ಕೇವಲ ವೇಗವೊಂದನ್ನೇ ನೆಚ್ಚಿಕೊಳ್ಳುವುದಿಲ್ಲ. ನಡೆಯುವಾಗ ಆಗುವ ಅಲುಗಾಟ, ಬೈಕ್ ಓಡಿಸುವಾಗಿನ ಅಲುಗಾಟ, ಕಾರ್ ಎಂಜಿನ್​ನ ವೈಬ್ರೇಶನ್​ನಲ್ಲಿ ಕುಳಿತಾಗಿನ ಅಲುಗಾಟ ಇವೆಲ್ಲವೂ ಪರಿಸ್ಪರ ಭಿನ್ನವಾಗಿರುತ್ತದೆ.

ಇದನ್ನೂ ಓದಿ: ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

ಇಷ್ಟು ಮಾತ್ರವಲ್ಲ, ನೀವು ಯಾವ ಮಾರ್ಗದಲ್ಲಿ ಹೋಗುತ್ತಿದ್ದೀರಿ ಎಂಬುದರ ಮೇಲೆ ನೀವಿರುವ ವಾಹನವನ್ನು ಅಂದಾಜಿಸಬಲ್ಲುದು. ರೈಲ್ವೆ ಟ್ರ್ಯಾಕ್​ನಾದ್ಯಂತ ನಿಮ್ಮ ಪ್ರಯಾಣ ಇದ್ದರೆ ನೀವು ರೈಲಿನಲ್ಲಿ ಹೋಗುತ್ತಿದ್ದಿರಬಹುದು. ಬಸ್ ಮಾರ್ಗದಲ್ಲಿ ಹೋಗುವುದು, ಬಸ್ ನಿಲ್ದಾಣಗಳಲ್ಲಿ ನಿಲ್ಲುವುದು ಇತ್ಯಾದಿ ಇದ್ದಾಗ ನೀವು ಬಸ್​ನಲ್ಲಿ ಪ್ರಯಾಣಿಸಿದ್ದಿರಬಹುದು ಎಂದು ಗೆಸ್ ಮಾಡುತ್ತೆ ಗೂಗಲ್.

ಹೀಗಾಗಿ, ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮ ಟೈಮ್​ಲೈನ್​ಗೆ ಹೋದಾಗ ಟ್ರಾವಲ್ ಹಿಸ್ಟರಿಯ ವಿವರ ಕಂಡು ನಿಮಗೆ ಅಚ್ಚರಿ ಆಗದೇ ಇರದು. ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ಸ್ ಹೆಚ್ಚು ಕನ್​ಫ್ಯೂಸ್ ಮಾಡಿಕೊಳ್ಳುವುದು ಬೈಕ್ ಮತ್ತು ಸೈಕಲ್ ವಿಚಾರಕ್ಕೆ. ನಗರದ ಟ್ರಾಫಿಕ್​ನಲ್ಲಿ ಬೈಕ್​ನಲ್ಲಿ ಪ್ರಯಾಣಿಸುವ ವೇಗ ಬಹುತೇಕ ಸೈಕಲ್​ನಷ್ಟೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು! – Kannada News | Unborn babies might copy their mothers yawns new pregnancy study reveals

ನವದೆಹಲಿ, ಮೇ 18: ಈ ಬ್ರಹ್ಮಾಂಡದಲ್ಲಿ ಆಕಳಿಸದವರು ಯಾರಾದರೂ ಇದ್ದಾರಾ? ನಾವು ಯಾರದ್ದಾದರೂ ಎದುರು ಕುಳಿತಾಗ ಅವರು ಆಕಳಿಸಿದರೆ ಅಥವಾ ನಾವು ಆಕಳಿಸುವವರನ್ನು ನೋಡಿದರೆ ನಮಗೂ ಆಕಳಿಕೆ ಬರುತ್ತದೆ. ಹೀಗಾಗಿ, ಆಕಳಿಕೆಯನ್ನು ಕಂಟ್ರೋಲ್ ಮಾಡುವುದು ಬಹಳ ಕಷ್ಟ. ನಮ್ಮೆದುರು ಇರುವ ವ್ಯಕ್ತಿ ಆಕಳಿಸಿದಾಗ ಎಷ್ಟು ಬೇಗನೆ ನಮಗೂ ಆಕಳಿಕೆ ಬರುತ್ತದೆಯೋ, ಅಷ್ಟೇ ವೇಗವಾಗಿ ಪ್ರಪಂಚದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಜೂಮ್ ವಿಡಿಯೋ ಕರೆಯಲ್ಲಿ ಮಾತನಾಡುವಾಗಲೂ ಆಕಳಿಕೆ ಹರಡುತ್ತದೆ ಎಂಬುದು ಅಚ್ಚರಿಯ ಸಂಗತಿ. ಇಷ್ಟೇ ಅಲ್ಲ, ಸಂಶೋಧನೆಯ ಪ್ರಕಾರ, ಆಕಳಿಕೆ ಎಷ್ಟು ವೇಗವಾಗಿ ಹರಡುತ್ತದೆ ಎಂದರೆ, ಗರ್ಭಿಣಿ ಮಹಿಳೆಯೊಬ್ಬರು ಆಕಳಿಸಿದಾಗ ಅವರ ಹೊಟ್ಟೆಯೊಳಗಿರುವ ಭ್ರೂಣವೂ (ಶಿಶು) ಕೂಡ ಆಕಳಿಸುತ್ತದೆ!

  • ಗರ್ಭದಲ್ಲಿರುವಾಗಲೇ ಮಗುವಿಗೆ ಅಮ್ಮನ ಆಕಳಿಕೆಯ ಅನುಭವವಾಗುತ್ತದೆ
  • ಗರ್ಭಿಣಿ ಪ್ರತಿಬಾರಿ ಆಕಳಿಸಿದಾಗಲೂ ಮಗುವೂ ಹೊಟ್ಟೆಯೊಳಗೆ ಆಕಳಿಸುತ್ತದೆ
  • ಹೊಕ್ಕಳುಬಳ್ಳಿ ಮೂಲಕ ಮಗುವಿಗೆ ಹಾರ್ಮೋನು ಹರಡುತ್ತದೆ

ಗರ್ಭದಲ್ಲಿರುವ ಶಿಶುಗಳಿಗೆ ಹೊರಗಿನ ಪ್ರಪಂಚವನ್ನು ನೋಡಲು ಸಾಧ್ಯವಿಲ್ಲದ ಕಾರಣ, ಈ ಆಕಳಿಕೆ ಹರಡಲು ಕೆಲವು ಪ್ರಮುಖ ಕಾರಣಗಳಿರಬಹುದು. ತಾಯಿ ಆಕಳಿಸಿದಾಗ ಅವರ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆಯಾಗುತ್ತದೆ. ಪ್ಲಾಸೆಂಟಾ (ಹೊಕ್ಕುಳಬಳ್ಳಿ) ಮೂಲಕ ಹರಡುವ ಹಾರ್ಮೋನುಗಳು ಮಗುವಿಗೂ ಆಕಳಿಸುವಂತೆ ಪ್ರೇರೇಪಿಸಬಹುದು. ಆಕಳಿಸುವಾಗ ತಾಯಿಯ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಚಲನೆ ಮತ್ತು ಕಂಪನಗಳನ್ನು ಗರ್ಭದಲ್ಲಿರುವ ಶಿಶುಗಳು (ವಿಶೇಷವಾಗಿ ಅವಳಿ ಮಕ್ಕಳಿದ್ದಾಗ) ಗ್ರಹಿಸಿ, ತಾವೂ ಆಕಳಿಸಬಹುದು.

ಇದನ್ನೂ ಓದಿ: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ

‘ಕರೆಂಟ್ ಬಯಾಲಜಿ’ (Current Biology) ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ತಮ್ಮ ತಾಯಂದಿರಿಂದ ಆಕಳಿಕೆಯನ್ನು ಗ್ರಹಿಸುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಸಾಕ್ಷ್ಯವನ್ನು ಕಂಡುಕೊಂಡಿದ್ದಾರೆ. ಇಟಲಿಯ ಪಾರ್ಮಾ ವಿಶ್ವವಿದ್ಯಾಲಯದ ಸಂಶೋಧಕರು 8 ತಿಂಗಳು ತುಂಬಿದ ಗರ್ಭಿಣಿ ಮಹಿಳೆಯರಿಗೆ ಆಕಳಿಸುವ ವಿಡಿಯೋಗಳನ್ನು ತೋರಿಸುವ ಮೂಲಕ ಈ ಕಲ್ಪನೆಯನ್ನು ಪರೀಕ್ಷಿಸಿದರು. ಮಹಿಳೆಯರ ಪ್ರತಿಕ್ರಿಯೆಗಳನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡಿದರೆ, ಭ್ರೂಣದ ಚಲನೆಯನ್ನು ಅಲ್ಟ್ರಾಸೌಂಡ್ ಮೂಲಕ ಗಮನಿಸಲಾಯಿತು.

ಇದನ್ನೂ ಓದಿ: ಗರ್ಭಿಣಿಯರೇ ಗಮನಿಸಿ: ಹೀಟ್​​ ಸ್ಟ್ರೋಕ್​ ಅಪಾಯ ಮಗುವಿನ ಮೇಲೂ ಪರಿಣಾಮ ಬೀರಬಹುದು ಎಚ್ಚರ!

ಆಕಳಿಸುವ ವಿಡಿಯೋಗಳನ್ನು ನೋಡಿದ ನಂತರ ಸುಮಾರು ಶೇ. 64ರಷ್ಟು ಮಹಿಳೆಯರು ಕನಿಷ್ಠ ಒಂದು ಬಾರಿಯಾದರೂ ಆಕಳಿಸಿದರು. ಆ ಪ್ರಕರಣಗಳ ಪೈಕಿ, ಅರ್ಧಕ್ಕಿಂತ ಕೊಂಚ ಹೆಚ್ಚು ಭ್ರೂಣಗಳು ಸುಮಾರು 90 ಸೆಕೆಂಡುಗಳ ಒಳಗೆ ಆಕಳಿಸಿದವು. ಗರ್ಭದೊಳಗೆ ಬೆಳವಣಿಗೆಯ ಹಂತದಲ್ಲಿ ಭ್ರೂಣಗಳು ಸ್ವಾಭಾವಿಕವಾಗಿ ಆಕಳಿಸುತ್ತವೆ ಎಂಬುದು ವಿಜ್ಞಾನಿಗಳಿಗೆ ಮೊದಲೇ ತಿಳಿದಿತ್ತು. ಆಕಳಿಕೆ ಭ್ರೂಣದ ಉಸಿರಾಟ ಮತ್ತು ಮುಖದ ಚಲನೆಗೆ ಸಂಬಂಧಿಸಿದ ಸ್ನಾಯುಗಳು ಹಾಗೂ ನರಗಳ ಸಂಪರ್ಕವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ. ಆದರೆ, ತಾಯಿ ಆಕಳಿಸಿದಾಗ ಮಗು ಕೂಡ ಅದನ್ನು ಗ್ರಹಿಸಿ ಆಕಳಿಸುತ್ತದೆ ಎಂಬುದು ಹೊಸ ಅಧ್ಯಯನ. ಹೀಗಾಗಿ, ನೀವು ಗರ್ಭಿಣಿಯಾಗಿದ್ದರೆ, ನೀವು ಆಕಳಿಸಿದಾಗಲೆಲ್ಲ ನಿಮ್ಮ ಹೊಟ್ಟೆಯಲ್ಲಿರುವ ಮಗು ಕೂಡ ನಿಮ್ಮೊಂದಿಗೆ ಆಕಳಿಸುತ್ತಿರುತ್ತದೆ ಎಂಬುದನ್ನು ನೆನಪಿಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಬಾರಿಗೆ ಸಿನಿಮಾ ಹಾಡಿಗೆ ಧ್ವನಿ ನೀಡಿದ ಶಿಲ್ಪಾ ಗಣೇಶ್; ಜುಲೈ 24ಕ್ಕೆ ‘ಪಿಚ್ಚರ್’ ಬಿಡುಗಡೆ – Kannada News | Shilpa Ganesh turns singer for Tulu Kannada movie Picture release date

ಸಾಮಾನ್ಯವಾಗಿ ಪ್ರಚಾರದಿಂದ ದೂರವಿರುವ ಶಿಲ್ಪಾ ಗಣೇಶ್ (Shilpa Ganesh) ಅವರು ಈಗ ಸುದ್ದಿಯಲ್ಲಿದ್ದಾರೆ. ತುಳು ಮನೆಮಾತು ಆಗಿರುವ ಶಿಲ್ಪಾ ಅವರಿಗೆ, ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ನಿರ್ಮಿಸಬೇಕು ಎನ್ನುವ ಹಂಬಲ ಈಗ ಈಡೇರುತ್ತಿದೆ. ಕನ್ನಡದಲ್ಲಿ ನಿರ್ಮಾಪಕಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಲ್ಪಾ ಅದ್ದೂರಿಯಾಗಿ ನಿರ್ಮಿಸಿರುವ ತುಳು ಸಿನಿಮಾ ‘ಪಿಚ್ಚರ್’ (Picture Movie) ಜುಲೈ 24ರಂದು ತೆರೆಗೆ ಬರಲಿದೆ. ತುಳು (Tulu) ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿದೆ. ತುಳು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಮಾತ್ರವಲ್ಲದೆ, ಈ ಸಿನಿಮಾದ ಮೂಲಕ ಶಿಲ್ಪಾ ಗಣೇಶ್ ಅವರು ಗಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂಬುದು ವಿಶೇಷ.

ಈಗಾಗಲೇ ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಿರುವ ‘ಗೋಕುಲದ ರಾಧೆ’ ಹಾಡಿಗೆ ಶಿಲ್ಪಾ ಗಣೇಶ್ ಅವರು ಧ್ವನಿ ನೀಡಿದ್ದಾರೆ. ಸ್ಯಾಮುವೆಲ್ ಅಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಸ್ಕರಣ್ ಸಿಂಗ್ ಜೊತೆ ಶಿಲ್ಪಾ ಗಣೇಶ್ ಅವರು ಹಾಡಿದ್ದಾರೆ. ಮೊದಲಿಂದಲೂ ಹಾಡುವ ಹವ್ಯಾಸ ಇರುವ ಶಿಲ್ಪಾ ಅವರು ಸಿನಿಮಾಗಾಗಿ ಹಾಡಿರುವುದು ಇದೇ ಮೊದಲು. ಶಿಲ್ಪಾ ಅವರ ಕಂಠಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿಲ್ಪಾ ಗಣೇಶ್ ಅವರು ಕೇವಲ ನಿರ್ಮಾಣದ ಹಿಂದೆ ಇರುವ ವ್ಯಕ್ತಿಯಲ್ಲ. ಕಲೆಯ ವಿವಿಧ ಆಯಾಮಗಳತ್ತ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿ ಎಂದು ಚಿತ್ರತಂಡ ಹೇಳಿದೆ.

ತುಳು ಸಿನಿಮಾಗಳಿಗೆ ಸೀಮಿತ ಬಂಡವಾಳದ ಕಾರಣ ಈ ತನಕ ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿಲ್ಲ. ಇದೇ ಮೊದಲ ಬಾರಿಗೆ ಅಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ನಿತ್ಯಪ್ರಕಾಶ್, ಅಮೃತ ಸುದು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಳು ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಗಣೇಶ್ ಅವರು ಕಾಣಿಸಿಕೊಂಡಿದ್ದಾರೆ.

‘ಗೋಕುಲದ ರಾಧೆ’ ಹಾಡು:

ತುಳು ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಬೇಕು ಎಂಬ ಆಶಯ ಶಿಲ್ಪಾ ಗಣೇಶ್ ಅವರದ್ದು. ಸಾಕಷ್ಟು ತುಳು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಂದೀಪ್ ಬೆದ್ರ ರಚನೆ ಮತ್ತು ನಿರ್ದೇಶನದಲ್ಲಿ ‘ಪಿಚ್ಚರ್’ ಸಿನಿಮಾ ಮೂಡಿಬರುತ್ತಿದೆ. ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿದ್ದಾರೆ. ಹೆಸರಾಂತ ಛಾಯಾಗ್ರಾಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ

ಗಣೇಶ್ ನಟನೆಯ ‘ಮಳೆಯಲಿ ಜೊತೆಯಲಿ’, ‘ಕೂಲ್’, ‘ಮುಗುಳುನಗೆ’ ಮತ್ತು ‘ಗೀತಾ’ ಚಿತ್ರಗಳನ್ನು ಶಿಲ್ಪಾ ಅವರು ನಿರ್ಮಿಸಿದ್ದಾರೆ. ನಿರ್ಮಾಪಕಿಯಾಗಿ ಅವರು ವ್ಯವಹಾರದ ಜೊತೆಗೆ ಭಾವನಾತ್ಮಕ ಮೌಲ್ಯ ಇರುವ ಕಥೆಗಳತ್ತ ಒಲವು ತೋರಿಸುತ್ತಾರೆ. ಈ ಕಾರಣದಿಂದ ‘ಪಿಚ್ಚರ್’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಕನ್ನಡ ಸಿನಿಮಾಗಳ ಜೊತೆಗೆ ವರ್ಷಕ್ಕೆ ಒಂದಾದರೂ ತುಳು ಚಿತ್ರ ನಿರ್ಮಿಸುವ ಯೋಚನೆ ಶಿಲ್ಪಾ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version