ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ – Kannada News | After Petrol and CNG Hike, Electricity Bills Set to Shock Consumers?

ವಿದ್ಯುತ್ ಪ್ರಸರಣImage Credit source: AI/Mediaforge/TV9

ನವದೆಹಲಿ, ಮೇ 18: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ಬೆಲೆಗಳ ಸತತ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಈಗ ಮತ್ತೊಂದು ಆರ್ಥಿಕ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಇಂಧನ ದರಗಳ ಏರಿಕೆಯ ಬೆನ್ನಲ್ಲೇ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮನೆಬಾಗಿಲಿಗೆ ಬರುವ ವಿದ್ಯುತ್ ಬಿಲ್ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ವಿದ್ಯುತ್​ನ ಮಾಸಿಕ ನಿಗದಿತ ಶುಲ್ಕವನ್ನು ಏರಿಸಲು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA- Central Electricity Authority) ಯೋಜಿಸಿದೆ. ಈ ಪ್ರಸ್ತಾಪ ಜಾರಿಯಾದರೆ, ವಿದ್ಯುತ್ ಬಳಕೆದಾರರಿಗೆ ಹೊರೆ ಹೆಚ್ಚಲಿದೆ.

ಈ ಸುದ್ದಿಯ ಮುಖ್ಯಾಂಶಗಳು:

  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 3 ರೂ ಮತ್ತು ಸಿಎನ್‌ಜಿ ಬೆಲೆಯಲ್ಲಿ 2 ರೂ ಏರಿಕೆಯಾದ ಬೆನ್ನಲ್ಲೇ ಈಗ ವಿದ್ಯುತ್ ದರ ಹೆಚ್ಚಳದ ಆತಂಕ ಮೂಡಿದೆ.
  • ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ (CEA) ಮಾಸಿಕ ನಿಗದಿತ ಶುಲ್ಕವನ್ನು (Fixed Charges) ಹೆಚ್ಚಿಸಲು ಪ್ರಸ್ತಾಪಿಸಿದೆ.
  • ಈ ಪ್ರಸ್ತಾಪ ಜಾರಿಯಾದರೆ, ಗ್ರಾಹಕರು ಕಡಿಮೆ ವಿದ್ಯುತ್ ಬಳಸಿದರೂ ಪ್ರತಿ ತಿಂಗಳು ಹೆಚ್ಚಿನ ಕಡ್ಡಾಯ ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ

ವಿದ್ಯುತ್ ಬಿಲ್ ಹೆಚ್ಚಳಕ್ಕೆ ಕಾರಣವೇನು?

ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ತಮ್ಮ ಮನೆಗಳ ಮೇಲೆ ‘ರೂಫ್‌ಟಾಪ್ ಸೋಲಾರ್’ (ಸೌರಶಕ್ತಿ) ಅಳವಡಿಸಿಕೊಳ್ಳುತ್ತಿದ್ದಾರೆ. ದೊಡ್ಡ ಕೈಗಾರಿಕೆಗಳು ಕೂಡ ಸ್ವಂತ ವಿದ್ಯುತ್ ಉತ್ಪಾದನೆಗೆ (Captive Power) ಆದ್ಯತೆ ನೀಡುತ್ತಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳ (Discoms) ಆದಾಯಕ್ಕೆ ಭಾರಿ ನಷ್ಟ ಉಂಟುಮಾಡುತ್ತಿದ್ದು, ಮೂಲಸೌಕರ್ಯ ನಿರ್ವಹಣೆ ಹಾಗೂ ಉದ್ಯೋಗಿಗಳ ವೇತನದ ವೆಚ್ಚವನ್ನು ಸರಿದೂಗಿಸಲು ಮಾಸಿಕ ನಿಗದಿತ ಶುಲ್ಕವನ್ನು ಹೆಚ್ಚಿಸಲು ‘ಫೋರಂ ಆಫ್ ರೆಗ್ಯುಲೇಟರ್ಸ್’ ಮುಂದೆ ಪ್ರಸ್ತಾಪ ಇಡಲಾಗಿದೆ.

ಸಾಮಾನ್ಯ ಗ್ರಾಹಕರ ಮೇಲಾಗುವ ಪರಿಣಾಮ

ಪ್ರಸ್ತುತ ವಿದ್ಯುತ್ ಕಂಪನಿಗಳು ತಮ್ಮ ಬಹುಪಾಲು ವೆಚ್ಚವನ್ನು ಗ್ರಾಹಕರು ಬಳಸುವ ಪ್ರತಿ ಯೂನಿಟ್ ಆಧಾರದ ಮೇಲೆ ವಸೂಲಿ ಮಾಡುತ್ತವೆ. ಗ್ರಾಹಕರ ವಿದ್ಯುತ್ ಬಳಕೆ ಕಡಿಮೆಗೊಂಡರೆ ಡಿಸ್ಕಾಂಗಳ ಆದಾಯಕ್ಕೆ ಕತ್ತರಿ ಬೀಳುತ್ತದೆ. ವಿದ್ಯುತ್ ಪ್ರಸರಣದ ಮೂಲಸೌಕರ್ಯ, ನೆಟ್ವರ್ಕ್ ಮೈಂಟೆನೆನ್ಸ್, ವಿದ್ಯುತ್ ಉತ್ಪಾದಕರಿಗೆ ಪಾವತಿ, ಸಿಬ್ಬಂದಿ ವೇತನದ ವೆಚ್ಚವು ಒಟ್ಟಾರೆ ವೆಚ್ಚದ ಶೇ. 38ರಿಂದ 56ರಷ್ಟಿದೆ. ಈಗ ಇರುವ ನಿಗದಿತ ಶುಲ್ಕದಿಂದ ಸಿಗುವ ಆದಾಯವು ಒಟ್ಟಾರೆ ಆದಾಯದ ಶೇ. 9ರಿಂದ 20ರಷ್ಟಿದೆ. ಹೊಸ ಪ್ರಸ್ತಾಪದ ಪ್ರಕಾರ, ದೇಶೀಯ ಮತ್ತು ಕೃಷಿ ಗ್ರಾಹಕರಿಗೆ ನಿಗದಿತ ಶುಲ್ಕವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಯೋಜಿಸಲಾಗಿದೆ. ಇನ್ನು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ 2030 ರ ವೇಳೆಗೆ ಈ ನಿಗದಿತ ಶುಲ್ಕವನ್ನು 100 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ

ಅಂದರೆ, ಭವಿಷ್ಯದಲ್ಲಿ ನೀವು ಕರೆಂಟ್ ಬಳಸಲಿ ಅಥವಾ ಬಿಡಲಿ, ಕನಿಷ್ಠ ನಿಗದಿತ ಶುಲ್ಕದ ರೂಪದಲ್ಲೇ ದೊಡ್ಡ ಮೊತ್ತದ ಬಿಲ್ ಪಾವತಿಸುವುದು ಕಡ್ಡಾಯವಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ‘ಕರೆಂಟ್ ಶಾಕ್’ ಗಾಯದ ಮೇಲೆ ಬರೆ ಎಳೆದಂತಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ! – Kannada News | Yadagiri District Plunged into Drinking Water Crisis: Residents Stage Massive Protest

ಯಾದಗಿರಿ, ಮೇ 18: ಬೇಸಿಗೆಯ ಪರಿಣಾಮವಾಗಿ ಉತ್ತರ ಕರ್ನಾಟಕದ ಹಲವೆಡೆ ನೀರಿನ ಅಭಾವ ಎದುರಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಬಂಡಳ್ಳಿ ಗ್ರಾಮದ ನಿವಾಸಿಗಳು ತಮ್ಮ ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಇಳಿದಿದ್ದಾರೆ. ಯಾದಗಿರಿ ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ನೂರಾರು ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಪಂಚಾಯತಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಕೊರತೆಯಿಂದಾಗಿ ತಮ್ಮ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ವೃದ್ಧಾಪ್ಯದಲ್ಲಿ ನೀರಿಗಾಗಿ ದೂರದ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮಗೆ ಅರ್ಹತೆಯೇ ಇಲ್ಲ… ರಿಯಾನ್ ಪರಾಗ್ ಬೇಸರ..! – Kannada News | Riyan Parag Post match interview after RR vs DC Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್​ಗಳಲ್ಲಿ 197 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ತಮ್ಮ ತಂಡದ ಕಳಪೆ ಪ್ರದರ್ಶನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಸೋಲಿಗೆ ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕಾರಣ ಎಂದಿದ್ದಾರೆ.

ನಾವು ಅರ್ಹರಲ್ಲ!

ಪಂದ್ಯದ ಬಳಿಕ ಮಾತನಾಡಿದ ರಿಯಾನ್ ಪರಾಗ್,  “ನಾವು ಇದೇ ರೀತಿ ಆಟ ಮುಂದುವರಿಸಿದರೆ, ಟೂರ್ನಿಯ ಟಾಪ್-4 ಹಂತ ತಲುಪಲು ಖಂಡಿತ ಅರ್ಹರಲ್ಲ, ಪ್ಲೇಆಫ್​ ಆಡಲು ನಮಗೆ ಅರ್ಹತೆಯೇ ಇರಲ್ಲ” ಎಂದು ಪರಾಗ್ ನೇರವಾಗಿಯೇ ಹೇಳಿದ್ದಾರೆ.

ಏಕೆಂದರೆ ರಾಜಸ್ಥಾನ್ ರಾಯಲ್ಸ್​ ತಂಡವು 14 ಓವರ್‌ಗಳ ಮುಕ್ತಾಯಕ್ಕೆ  3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಆದರೆ 26 ಎಸೆತಗಳಲ್ಲಿ 51 ರನ್ ಗಳಿಸಿದ್ದ ರಿಯಾನ್ ಪರಾಗ್ ಔಟಾದ ಬಳಿಕ ಕೆಳ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಕೊನೆಯ 7 ಓವರ್‌ಗಳಲ್ಲಿ ತಂಡ ಕೇವಲ 41 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು.

220 ಅಥವಾ 230 ರನ್​ಗಳ ಗುರಿ ನೀಡುವ ಸೂಚನೆ ನೀಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ದಿಢೀರ್ ಕುಸಿತಕ್ಕೊಳಗಾಗಿ ಕೇವಲ 193 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಈ ಕಳಪೆ ಬ್ಯಾಟಿಂಗ್ ಅನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ರಿಯಾನ್ ಪರಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಫೀಲ್ಡಿಂಗ್​ ವೇಳೆ ಕೆ.ಎಲ್. ರಾಹುಲ್ ಶೂನ್ಯ ರನ್ ಗಳಿಸಿದ್ದಾಗ ಯಶ್ ರಾಜ್ ಪುಂಜಾ ಕ್ಯಾಚ್ ಕೈಬಿಟ್ಟಿದ್ದು ದುಬಾರಿಯಾಗಿ ಪರಿಣಮಿಸಿತು. “ನಾವು ಟ್ರೋಫಿ ಗೆಲ್ಲಬೇಕು ಎಂದರೆ ಇಂತಹ ಕಳಪೆ ಫೀಲ್ಡಿಂಗ್‌ ಬದಲಾಗಬೇಕು” ಎಂದು ರಿಯಾನ್ ಪರಾಗ್ ನೇರವಾಗಿ ಹೇಳಿದ್ದಾರೆ.

ಇದೇ ವೇಳೆ ಪಂದ್ಯದ ಕೊನೆಯಲ್ಲಿ 18 ಎಸೆತಗಳಲ್ಲಿ 35 ರನ್ ಬೇಕಾಗಿದ್ದಾಗ, ಅನುಭವಿ ದಸುನ್ ಶಾನಕ ಬದಲಿಗೆ ಪಾರ್ಟ್-ಟೈಮ್ ಆಫ್-ಸ್ಪಿನ್ನರ್ ಡೊನೊವನ್ ಫೆರೇರಾಗೆ ಓವರ್ ನೀಡಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಪರಾಗ್, ಕ್ರೀಸ್‌ನಲ್ಲಿ ಇಬ್ಬರು ಎಡಗೈ ಬ್ಯಾಟರ್‌ಗಳಿದ್ದ ಕಾರಣ ಈ ರಿಸ್ಕ್ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ: IPL 2026: CSK ಗೆದ್ದರೆ RCB ಗೆ ಪ್ಲಸ್ ಪಾಯಿಂಟ್..!

ಒಟ್ಟಾರೆಯಾಗಿ ಹೇಳುವುದಾದರೆ, ರಿಯಾನ್ ಪರಾಗ್ ಅವರ ಈ ನೇರ ನುಡಿಗಳು ತಂಡದಲ್ಲಿನ ಆಂತರಿಕ ಅಸಮಾಧಾನ ಮತ್ತು ಒತ್ತಡವನ್ನು ಎತ್ತಿ ತೋರಿಸುತ್ತವೆ. ಟೂರ್ನಿಯ ಮೊದಲಾರ್ಧದಲ್ಲಿ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್, ಲೀಗ್ ಹಂತದ ನಿರ್ಣಾಯಕ ಹಂತದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಈಗ ರಾಜಸ್ಥಾನ್ ತಂಡದ ಪ್ಲೇ-ಆಫ್ ಭವಿಷ್ಯ ಅವರದ್ದೇ ಕೈಯಲ್ಲಿದೆ. ಮುಂದಿನ ಪಂದ್ಯಗಳಲ್ಲಿ ತಂಡವು ತಪ್ಪುಗಳನ್ನು ತಿದ್ದಿಕೊಂಡು, ನಾಯಕ ನಿರೀಕ್ಷಿಸಿದ ಆಟವನ್ನು ಪ್ರದರ್ಶಿಸಿ ಅಗ್ರ ನಾಲ್ಕರ ಸ್ಥಾನ ಗಿಟ್ಟಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಹಾದಿ ಕಠಿಣ:

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇನ್ನು ಕೇವಲ 2 ಲೀಗ್ ಪಂದ್ಯಗಳು ಬಾಕಿ ಇವೆ. ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗದೆ ಪ್ಲೇ-ಆಫ್ ತಲುಪಬೇಕಾದರೆ ಆರ್​ಆರ್​ ಮುಂದಿನ ಎರಡೂ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಿದೆ. ಮೇ 19 ರಂದು ಜೈಪುರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಈ ಮ್ಯಾಚ್​ನಲ್ಲಿ ಸೋತರೆ ರಾಜಸ್ಥಾನ್ ರಾಯಲ್ಸ್ ತಂಡ ಹೊರಬೀಳುವುದು ಖಚಿತವಾಗಲಿದೆ.

Source link

ನೀಟ್-ಯುಜಿ ಪೇಪರ್ ಲೀಕ್ ಹಗರಣ: ಸಿಬಿಐ ತನಿಖೆಯಲ್ಲಿ ಬಿಗ್ ಟ್ವಿಸ್ಟ್; ಬ್ಯೂಟಿಷಿಯನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು? – Kannada News | NEET UG Paper Leak Case: CBI Probe Points to Key Role of Beautician

ಪುಣೆ, ಮೇ 18: ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ(NEET – UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಪುಣೆಯ 46 ವರ್ಷದ ಬ್ಯೂಟಿಷಿಯನ್ ಒಬ್ಬರು ಈ ಇಡೀ ಜಾಲದ “ಪ್ರಮುಖ ಕೊಂಡಿ”ಯಾಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ. ಈ  ಮೂಲಕ ಪರೀಕ್ಷಾ ಮಂಡಳಿಯ (NTA) ಉನ್ನತ ಮಟ್ಟದ ಅಧಿಕಾರಿಯೇ ಈ ಸೋರಿಕೆಯ ಮಾಸ್ಟರ್‌ಮೈಂಡ್ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಎನ್‌ಟಿಎ (NTA) ಸಮಿತಿಯ ತಜ್ಞೆಯೇ ಸೂತ್ರಧಾರಿ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯ 2026ನೇ ಸಾಲಿನ ನೀಟ್-ಯುಜಿ ಪ್ರಶ್ನೆ-ನಿಗದಿ ಸಮಿತಿಯ ತಜ್ಞೆಯಾಗಿದ್ದ 57 ವರ್ಷದ ಮನೀಷಾ ಗುರುನಾಥ್ ಮಾಂಧರೆ ಅವರನ್ನು ಸಿಬಿಐ ಬಂಧಿಸಿದೆ. ಈಕೆಗೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ಎರಡೂ ವಿಷಯಗಳ ಅಂತಿಮ ಪ್ರಶ್ನೆಪತ್ರಿಕೆಗಳನ್ನು ನೋಡಲು ಅವಕಾಶವಿತ್ತು. ಆರ್ಥಿಕ ಲಾಭಕ್ಕಾಗಿ ಮಾಂಧರೆ ಈ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆಗೂ ಮುನ್ನವೇ ಸೋರಿಕೆ ಮಾಡಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇವರನ್ನು 14 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.

ಪುಣೆಯ ಸುಖಸಾಗರ್ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮನೀಷಾ ವಾಘ್ಮೋರೆ ಈ ಪ್ರಕರಣದ ಪ್ರಮುಖ ಕೊಂಡಿಯಾಗಿದ್ದಾರೆ. ಈಕೆಗೆ ಮಾಂಧರೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ, ಇಬ್ಬರೂ ಸೇರಿ ಸೋರಿಕೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಇವರಿಗೆ ನಿವೃತ್ತ ಶಿಕ್ಷಕಿ ಪಿವಿ ಕುಲಕರ್ಣಿ ಸಾಥ್ ನೀಡಿದ್ದರು.

ವಾಘ್ಮೋರೆ ತನ್ನ ಪಾರ್ಲರ್‌ಗೆ ಬರುತ್ತಿದ್ದ ಗ್ರಾಹಕರು ಹಾಗೂ ಟ್ಯೂಷನ್ ಶಿಕ್ಷಕರನ್ನು ಹುಡುಕುತ್ತಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಪ್ರಶ್ನೆಪತ್ರಿಕೆ ಖರೀದಿಸಲು ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಆರಂಭಿಸಿದ್ದಳು.

ಪ್ರತಿ ವಿದ್ಯಾರ್ಥಿಗೆ 10 ಲಕ್ಷ ರೂಪಾಯಿಯ ಡೀಲ್!
ಮೂಲಗಳ ಪ್ರಕಾರ, ಸಿಕ್ಕಿಬಿದ್ದಿರುವ ಆರೋಪಿಗಳು ಪ್ರತಿ ವಿದ್ಯಾರ್ಥಿಯಿಂದ ಪ್ರಶ್ನೆಪತ್ರಿಕೆಗಾಗಿ ಬರೋಬ್ಬರಿ 10 ಲಕ್ಷ ರೂಪಾಯಿ ಲೂಟಿ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಮೊತ್ತದಲ್ಲಿ ಬ್ಯೂಟಿಷಿಯನ್ ವಾಘ್ಮೋರೆ, ಎನ್‌ಟಿಎ ತಜ್ಞೆ ಮಾಂಧರೆ ಮತ್ತು ನಿವೃತ್ತ ಶಿಕ್ಷಕಿ ಕುಲಕರ್ಣಿ ತಲಾ 2.5 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಹಂಚಿಕೊಳ್ಳಲು ನಿರ್ಧರಿಸಿದ್ದರು. ವಾಘ್ಮೋರೆ ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳನ್ನು ಈ ಜಾಲಕ್ಕೆ ಸಿಲುಕಿಸಿದ್ದಳು.

ಮತ್ತಷ್ಟು ಓದಿ: ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು?

ವಾಘ್ಮೋರೆ ತಾನು ಪಡೆದ ಪ್ರಶ್ನೆಪತ್ರಿಕೆಯನ್ನು ತನ್ನ ಹಳೆಯ ಸ್ನೇಹಿತ ಧನಂಜಯ್ ಲೋಖಂಡೆಗೆ ರವಾನಿಸಿದ್ದಳು. ಆತ ನಾಸಿಕ್‌ನಲ್ಲಿ ಕೌನ್ಸೆಲಿಂಗ್ ವ್ಯವಹಾರ ನಡೆಸುತ್ತಿದ್ದ ಶುಭಂ ಖೈರ್ನಾರ್‌ಗೆ ತಲುಪಿಸಿದ್ದ. ಶುಭಂ ಈ ಪ್ರಶ್ನೆಪತ್ರಿಕೆಯ ಪಿಡಿಎಫ್ (PDF) ಫೈಲ್‌ಗಳನ್ನು ಗುರುಗ್ರಾಮ್‌ನ ಯಶ್ ಯಾದವ್ ಮತ್ತು ಜೈಪುರದ ಇತರೆ ದಲ್ಲಾಳಿಗಳಿಗೆ ಹಂಚಿದ್ದ. ಕಳೆದ ಮಂಗಳವಾರ ಪರೀಕ್ಷೆ ರದ್ದಾದ ಕೆಲವೇ ಗಂಟೆಗಳಲ್ಲಿ ಮೊದಲ ಶಂಕಿತ ಖೈರ್ನಾರ್‌ನನ್ನು ಬಂಧಿಸಿದ ಸಿಬಿಐ, ಸಾಲು ಸಾಲು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಸದ್ಯ ಸಿಬಿಐ ಈ ಜಾಲದ ಆಳ ಅಗಲವನ್ನು ಹುಡುಕುತ್ತಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಇನ್ನೂ ಹಲವಾರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ದೊಡ್ಡ ಮಟ್ಟದ ಸಂಘಟಿತ ಅಪರಾಧ ತಂಡ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ ಈ ಹಗರಣದ ಸಂಪೂರ್ಣ ಸತ್ಯವನ್ನು ಹೊರತರಲು ಸಿಬಿಐ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ – Kannada News | Rupee Hits Record Low: Drops 20 Paise to cross 96 Against US Dollar

ನವದೆಹಲಿ, ಮೇ 18: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿನ ತಲ್ಲಣಗಳು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವುದು ದೇಶೀಯ ಕರೆನ್ಸಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು (Indian Rupee value) ತೀವ್ರ ಕುಸಿತವನ್ನು ಕಾಣುವ ಮೂಲಕ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. ಸೋಮವಾರದ ಫಾರೆಕ್ಸ್ ವಹಿವಾಟು ವೇಳೆ ಡಾಲರ್ ಎದುರು ರುಪಾಯಿ 96.27 ಮಟ್ಟಕ್ಕೆ ಕುಸಿದಿತ್ತು. ಇದು ದೇಶೀಯ ಶೇರು ಮಾರುಕಟ್ಟೆ (Stock Market) ಹಾಗೂ ಆರ್ಥಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಸುದ್ದಿಯ ಮುಖ್ಯಾಂಶಗಳು

  1. ಸೋಮವಾರದ ವಹಿವಾಟಿನ ಆರಂಭದಲ್ಲೇ ರೂಪಾಯಿ ಮೌಲ್ಯವು 20 ಪೈಸೆಗಳಷ್ಟು ಭಾರಿ ಕುಸಿತವನ್ನು ಕಂಡಿದೆ.
  2. ಈ ಕುಸಿತದ ನಂತರ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 96.27 ಕ್ಕೆ ತಲುಪಿದೆ.
  3. ಜಾಗತಿಕ ಮಾರುಕಟ್ಟೆಯಲ್ಲಿನ ನಕಾರಾತ್ಮಕ ಬೆಳವಣಿಗೆಗಳು ದೇಶೀಯ ಕರೆನ್ಸಿಯ ಮೇಲೆ ತೀವ್ರ ಪರಿಣಾಮ ಬೀರಿವೆ.

ಆರ್ಥಿಕ ತಜ್ಞರ ಪ್ರಕಾರ, ಅಮೆರಿಕದ ಫೆಡರಲ್ ರಿಸರ್ವ್‌ನ ನೀತಿಗಳು, ಜಾಗತಿಕ ಮಟ್ಟದಲ್ಲಿ ಡಾಲರ್ ಇಂಡೆಕ್ಸ್ ಬಲಗೊಳ್ಳುತ್ತಿರುವುದು ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಉಂಟಾಗುತ್ತಿರುವ ಏರಿಳಿತಗಳು ರೂಪಾಯಿಯ ಈ ಐತಿಹಾಸಿಕ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಡಾಲರ್ ಕಡೆಗೆ ಮುಖ ಮಾಡುತ್ತಿರುವುದರಿಂದ ಭಾರತೀಯ ಮಾರುಕಟ್ಟೆಯಿಂದ ಭಾರಿ ಪ್ರಮಾಣದ ಹಣ ಹೊರಹೋಗುತ್ತಿದೆ.

ಇದನ್ನೂ ಓದಿ: Gold Rate: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ

ರೂಪಾಯಿ ಮೌಲ್ಯದ ಈ ಸಾರ್ವಕಾಲಿಕ ಕುಸಿತವು ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ವಿಶೇಷವಾಗಿ ಭಾರತವು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ರಸಗೊಬ್ಬರಗಳ ವೆಚ್ಚ ದುಬಾರಿಯಾಗಲಿದೆ. ಆಮದು ವೆಚ್ಚ ಹೆಚ್ಚಾದಂತೆ ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರ (ಬೆಲೆ ಏರಿಕೆ) ಹೆಚ್ಚಾಗುವ ಆತಂಕ ಎದುರಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಸ್ಥಿರತೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ಡಾಲರ್ ಮಾರಾಟ ಪ್ರಕ್ರಿಯೆಗೆ ಇಳಿಯಲಿದೆಯೇ ಎಂಬುದನ್ನು ಹೂಡಿಕೆದಾರರು ಮತ್ತು ಆರ್ಥಿಕ ವಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳದಲ್ಲಿ ಗಾಳಿ ಮಳೆಯಬ್ಬರ: ಬೇರು ಸಮೇತ ನೆಲಕ್ಕುರುಳಿದ ಮರಗಳು, ಕ್ರೇನ್​​ ಧರಾಶಾಹಿ – Kannada News | Karnataka Rain Fury: Trees Uprooted in Kushtagi, Huge Crane Collapses in Tavaragera

ಕೊಪ್ಪಳ, ಮೇ 18: ಕರ್ನಾಟಕ ರಾಜ್ಯದ ಹಲವೆಡೆ ಭಾರಿ ಮಳೆ ಮತ್ತು ಬಿರುಗಾಳಿ ವ್ಯಾಪಕ ಅನಾಹುತಗಳನ್ನು ಸೃಷ್ಟಿಸಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಿನ್ನೆ (ಮೇ 17) ಸಂಜೆ ಸುರಿದ ಭಾರೀ ಮಳೆಯ ಆರ್ಭಟಕ್ಕೆ ಬೃಹತ್ ಮರಗಳು ಬೇರುಸಮೇತ ಧರೆಗುರುಳಿವೆ. ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿತ್ತು. ಮತ್ತೊಂದೆಡೆ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ಕೊಪ್ಪಳದ ತಾವರಗೇರ ಪಟ್ಟಣದ ಬಳಿ ಬೃಹತ್ ವಿಂಡ್ ಫ್ಯಾನ್ ಅಳವಡಿಕೆಗೆ ಬಳಸುವ ಕ್ರೇನ್ ಪತನಗೊಂಡಿದೆ. ವಿಂಡ್ ಫ್ಯಾನ್ ಅಳವಡಿಕೆಗೆ ಬಳಸುವ ಈ ಕ್ರೇನ್ ಕುಸಿಯುವಾಗ ಅಲ್ಲೇ ಇದ್ದ ಕಾರ್ಮಿಕರು ಕೂದಲಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಗದಗ, ಹಾವೇರಿ, ಹುಬ್ಬಳ್ಳಿ, ಕೊಪ್ಪಳ ಮತ್ತು ಕುಷ್ಟಗಿ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ದರ್ಶನ್ ಇಲ್ಲದೆ ನೋವು ಅನುಭವಿಸುತ್ತಿರುವ ವಿಜಯಲಕ್ಷ್ಮೀ; ಒಡೆದ ಹೃದಯ ಪೋಸ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎದುರಾಗಿರುವ ಕಾನೂನು ಹೋರಾಟದಲ್ಲಿ ನಟ ದರ್ಶನ್‌ಗೆ ಮತ್ತೊಮ್ಮೆ ಭಾರಿ ಹಿನ್ನೆಡೆಯಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದೆ.

ಸುಪ್ರೀಂಕೋರ್ಟ್‌ನಲ್ಲಿಯೂ ಜಾಮೀನು ಸಿಗದೇ ದರ್ಶನ್ ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗಿರುವುದು ಇಡೀ ಕುಟುಂಬಕ್ಕೆ ತೀವ್ರ ನಿರಾಸೆ ಮೂಡಿಸಿದೆ. ಈ ತೀರ್ಪು ಹೊರಬೀಳುತ್ತಿದ್ದಂತೆ ಪತಿ ದರ್ಶನ್ ಅವರನ್ನು ನೆನೆದು ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ಫೋಟೋವನ್ನು ಪೋಸ್ಟ್ ಮಾಡಿರುವ ವಿಜಯಲಕ್ಷ್ಮೀ, ಅದಕ್ಕೆ ಯಾವುದೇ ಸುದೀರ್ಘ ಬರಹ ಬರೆಯದೇ ಕೇವಲ ‘ಹಾರ್ಟ್ ಬ್ರೇಕ್’ ಎಮೋಜಿ ಹಾಕುವ ಮೂಲಕ ತೀವ್ರ ಬೇಸರ ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಅಪ್ಪ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತ ಪುಟಾಣಿ – Kannada News | A little girl hiding behind a pillar from her father’s scolding

ತಂದೆ ಮಗಳ (father – daughter) ಸಂಬಂಧವೇ ಹಾಗೆ, ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಂದೆಗೂ ಮುದ್ದಿನ ಮಗಳು ಪುಟ್ಟ ರಾಜಕುಮಾರಿಯಾಗಿರುತ್ತಾಳೆ. ಮಗಳಿಗೂ ಯಾವತ್ತೂ ತಂದೆ ಗದರಲ್ಲ. ಆದರೆ ಈ ಪುಟಾಣಿಯ ತಂದೆಯೂ ಕೈಯಲ್ಲಿ ಪೊರಕೆ ಹಿಡಿದುಕೊಂಡು ಬೈಯಲು ಶುರು ಮಾಡಿದ್ದಾನೆ. ಅಪ್ಪನ  ಬೈಗುಳಕ್ಕೆ  ಪುಟ್ಟ ಹುಡುಗಿ ಹೆದರಿ ಹೋಗಿದೆ. ಕಂಬದ ಹಿಂದೆ ಅಡಗಿ ನಿಂತ ಪುಟಾಣಿ ವಿಡಿಯೋ ವೈರಲ್ ಆಗಿದೆ.

Distraction ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಂದೆಯೂ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತುಕೊಂಡ ಪುಟ್ಟ ಹುಡುಗಿ ಕಣ್ಣು ಮಿಟುಕಿಸುತ್ತಾ ನೋಡುತ್ತಿದೆ. ಅಷ್ಟೇ ಅಲ್ಲದೇ ಪುಟಾಣಿಯೂ ಮುಖವನ್ನು ಊದಿಸಿಕೊಂಡು ಮುದ್ದಾಗಿ ರಿಯಾಕ್ಷನ್ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುದ್ದಾದ ಪುಟಾಣಿ, ಹುಡುಕಲು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆ ಮಗಳ ಬಾಂಧವ್ಯವೇ ಚಂದ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲೆನಾಡಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ: ಹಿಂಡು ಹಿಂಡಾಗಿ ಕಾಣಿಸಿಕೊಂಡ ಕಾಡುಕೋಣಗಳು – Kannada News | Gaur Menace Rises in Malnad: Herd of Over 20 Wild Buffaloes Spotted Near Horanadu

ಚಿಕ್ಕಮಗಳೂರು, ಮೇ 18: ಮಲೆನಾಡಲ್ಲಿ ಕಾಡು ಕೋಣಗಳ ಉಪಟಳ ಮಿತಿ ಮೀರಿದ್ದು, ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಂಡು ಗ್ರಾಮಸ್ಥರು ಕಂಗಾಲಾಗಿರುವ ಘಟನೆ ಕಳಸ ತಾಲೂಕಿನ‌ ಹೊರನಾಡು ಸಮೀಪದ ಎಳಕುಂಬ್ರಿಯಲ್ಲಿ ನಡೆದಿದೆ. ಗುಡ್ಡದಲ್ಲಿ 20ಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಅವುಗಳ ಓಡಾಟದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೊರನಾಡು, ಎಳಕುಂಬ್ರಿ ಸುತ್ತಮುತ್ತ ಕಾಡುಕೋಣಗಳು ಬೆಳೆ ಹಾನಿ ಮಾಡುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಸ್ವೀಡನ್ ಬಾಂಧವ್ಯಕ್ಕೆ ಹೊಸ ವೇಗ: ಪ್ರಧಾನಿ ಮೋದಿ ಪ್ರವಾಸದ ಪ್ರಮುಖ ಒಪ್ಪಂದಗಳ ಬಗ್ಗೆ ಮಾಹಿತಿ ಇಲ್ಲಿದೆ – Kannada News | Narendra Modi Hails New Strategic Milestones in Sweden Visit

ಸ್ಟಾಕ್‌ಹೋಮ್, ಮೇ 18: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸ್ವೀಡನ್ ಪ್ರವಾಸವು ಭಾರತ ಮತ್ತು ಸ್ವೀಡನ್ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳಿಗೆ ಹೊಸ ವೇಗವನ್ನು ನೀಡಿದೆ. ಈ ಭೇಟಿಯು ಅತ್ಯಂತ ಯಶಸ್ವಿಯಾಗಿದ್ದು, ಉಭಯ ದೇಶಗಳ ಸಂಬಂಧವನ್ನು ‘ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್’ (Strategic Partnership) ಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಜಂಟಿ ಸಂಶೋಧನೆಗೆ ಚಾಲನೆ  ಸಿಕ್ಕಿದೆ. ಭಾರತ-ಸ್ವೀಡನ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕಾರಿಡಾರ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟುಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ. ತಮ್ಮ ಪ್ರವಾಸದ ಯಶಸ್ಸಿಗೆ ಕಾರಣರಾದ ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್, ಅಲ್ಲಿನ ಸರ್ಕಾರ ಮತ್ತು ಜನತೆ ತೋರಿದ ಆತ್ಮೀಯ ಆತಿಥ್ಯ ಹಾಗೂ ಸ್ನೇಹಕ್ಕೆ ಪ್ರಧಾನಿ ಮೋದಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಒಪ್ಪಂದಗಳು ಭವಿಷ್ಯದಲ್ಲಿ ಉಭಯ ದೇಶಗಳ ಪ್ರಗತಿಗೆ ಹೊಸ ದಾರಿ ದೀಪವಾಗಲಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version