‘ಹಾಸ್ಟೆಲ್ ಹುಡುಗರ’ ಮೆಚ್ಚಿನ ತಮಿಳಿನ ಸ್ಟಾರ್ ನಟ, ಶೀಘ್ರವೇ ರೀಮೇಕ್

‘ಹಾಸ್ಟೆಲ್ ಹುಡುಗರ’ ಮೆಚ್ಚಿನ ತಮಿಳಿನ ಸ್ಟಾರ್ ನಟ, ಶೀಘ್ರವೇ ರೀಮೇಕ್

ಕನ್ನಡದಲ್ಲಿ ಸಾಕಷ್ಟು ಹೊಸ ತಂಡಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿವೆ. ಕೆಲವರಿಗೆ ಯಶಸ್ಸು ಸಿಕ್ಕಿದೆ, ಕೆಲವರಿಗೆ ಇಲ್ಲ. 2023 ರಲ್ಲಿ ಹೊಸ ತಂಡವೊಂದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (hostel hudugaru bekagiddare) ಎಂಬ ಸಿನಿಮಾ ಮಾಡಿತ್ತು. ನಟ ರಕ್ಷಿತ್ ಶೆಟ್ಟಿ ಇದಕ್ಕೆ ಬೆಂಬಲ ನೀಡಿದ್ದರು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ನಟಿ ರಮ್ಯಾ, ಸಿನಿಮಾ ಮೇಲೆ ದೂರು ಸಹ ದಾಖಲಿಸಿದ್ದರು. ಆ ಕಾರಣಕ್ಕೂ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಇದೀಗ ಸಿನಿಮಾ ತಮಿಳಿಗೆ ಹೊರಟಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ತಮಿಳಿನ ಸ್ಟಾರ್ ನಟರೊಬ್ಬರು ರೀಮೇಕ್ ಮಾಡಲಿದ್ದಾರೆ.

ತಮಿಳಿನ ಹೊಸ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಶಿವಕಾರ್ತಿಕೇಯನ್ ಅವರು ಕನ್ನಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ರೀಮೇಕ್​​ನಲ್ಲಿ ನಟಿಸಲಿದ್ದಾರೆ. ಮಾತ್ರವಲ್ಲದೆ ಸಿನಿಮಾವನ್ನು ತಮ್ಮದೇ ಸ್ವಂತ ಬ್ಯಾನರ್ ಆಗಿರುವ ‘ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್’ ಅಡಿಯಲ್ಲಿ ನಿರ್ಮಾಣ ಮಾಡಲು ಸಹ ಆಸಕ್ತಿ ತೋರಿಸಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ಶಿವಕಾರ್ತಿಕೇಯನ್ ಅವರು ಈ ಚಿತ್ರದಲ್ಲಿ ನಟಿಸುತ್ತಾರೆಯೇ ಅಥವಾ ಕೇವಲ ನಿರ್ಮಾಣಕ್ಕೆ ಸೀಮಿತವಾಗುತ್ತಾರೆಯೇ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ, ಚಿತ್ರದ ವಿಶಿಷ್ಟ ಕಥಾಹಂದರ ಅವರಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹೋಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ 2023ರಲ್ಲಿ ಬಿಡುಗಡೆ ಆಗಿತ್ತು. ಹೊಸ ಹುಡುಗರ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದರು. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆ, ವಿಭಿನ್ನ ಮೇಕಿಂಗ್ ಶೈಲಿ ಮತ್ತು ಭಿನ್ನ ರೀತಿಯ ಕಾಮಿಡಿಯಿಂದಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ರಿಷಬ್ ಶೆಟ್ಟಿ, ಪವನ್ ಕುಮಾರ್ ಮತ್ತು ದಿಗಂತ್ ಅವರುಗಳು ಸಿನಿಮಾದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿತ್ತು.

ಇದನ್ನೂ ಓದಿ:‘ಬೃಂದಾವಿಹಾರಿ’ ಆದ ಗೋಲ್ಡನ್ ಸ್ಟಾರ್ ಗಣೇಶ್; ಹೊಸ ಸಿನಿಮಾ ಟೈಟಲ್ ಅನೌನ್ಸ್

ಶಿವಕಾರ್ತಿಕೇಯನ್ ಮೊದಲಿನಿಂದಲೂ ಕುಟುಂಬ ವರ್ಗಕ್ಕೆ ಇಷ್ಟವಾಗುವಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ‘ಹೋಸ್ಟೆಲ್ ಹುಡುಗರು’ ಕೌಟುಂಬಿಕ ಅಲ್ಲದೇ ಹೋದರೂ ಯುವಕರಿಗೆ ಹಿಡಿಸುವ ಹಾಗೂ ಹಾಸ್ಯಮಯ ಸಿನಿಮಾ ಆಗಿರುವ ಕಾರಣ, ಸಿನಿಮಾದ ರೀಮೇಕ್ ಬಗ್ಗೆ ಶಿವಕಾರ್ತಿಕೇಯನ್ ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಹಾಸ್ಟೆಲ್ ಜೀವನದ ಕತೆ ಆಗಿರುವ ಕಾರಣ ದೊಡ್ಡ ಮಟ್ಟದ ರೀಚ್ ಸಿನಿಮಾಕ್ಕೆ ಸಿಗಲಿದೆ ಎಂಬ ನಂಬಿಕೆ ಅವರಿಗಿದೆ ಎನ್ನಲಾಗುತ್ತಿದೆ.

ಕನ್ನಡದಲ್ಲಿ ಬಹುತೇಕ ಹೊಸ ಕಲಾವಿದರೇ ಈ ಚಿತ್ರದಲ್ಲಿದ್ದರು. ಅದೇ ಮಾದರಿಯನ್ನು ತಮಿಳಿನಲ್ಲೂ ಅನುಸರಿಸುವ ಸಾಧ್ಯತೆ ಇದೆ. ಶಿವಕಾರ್ತಿಕೇಯನ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಈ ಸಿನಿಮಾವನ್ನು ಬಳಸಿಕೊಳ್ಳಬಹುದು. ಸ್ವತಃ ಶಿವಕಾರ್ತಿಕೇಯನ್ ಸಹ ಹೊರಗಿನವರಾಗಿ ಚಿತ್ರರಂಗಕ್ಕೆ ಬಂದವರು. ಅವರಂತೆಯೇ ಸಿನಿಮಾ ರಂಗದ ಹಿನ್ನೆಲೆ ಇಲ್ಲದವರನ್ನು ಬೆಳೆಸಲು ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಹಾಗಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಲಿದ್ದಾರೆ.

ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ ಇದೀಗ ಅವರು ‘ಸಿಯಾನ್’ ಹೆಸರಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾ ಅನ್ನು ಶಿವಕುಮಾರ್ ಮುರುಗೇಶನ್ ನಿರ್ದೇಶಿಸುತ್ತಿದ್ದು, ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ. ಸಂತೋಶ್ ನಾರಾಯಣ್ ಸಂಗೀತ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಪಡಿತರ ಕಾಳಸಂತೆಗೆ: ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಹೊರ ರಾಜ್ಯಗಳಿಗೆ ಸಪ್ಲೈ

ಕಲಬುರಗಿ, ಮಾರ್ಚ್​ 19: ರಾಜ್ಯದಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಅಂತಾ ಸರ್ಕಾರ ಅನ್ನಭಾಗ್ಯ ಯೋಜನೆ (Anna Bhagya Rice) ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಬಡವರ ಹೊಟ್ಟೆ ಸೇರಬೇಕಾದ ಅಕ್ಕಿಯನ್ನ ರೇಷನ್ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಅಕ್ಕಿ ಸಪ್ಲೈ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕರ ಕಳ್ಳಾಟ ಬಯಲಾಗಿದೆ.

ಕಲಬುರಗಿ ನಗರದ ಜೆ.ಆರ್ ನಗರದಲ್ಲಿರುವ ರೇಷನ್ ಅಂಗಡಿಯಿಂದ ಮಾರ್ಚ್ 3ರಂದು ಅಕ್ಕಿಯನ್ನ ರಾತ್ರೋರಾತ್ರಿ ಬೇರೆಡೆ ಸಪ್ಲೈ ಮಾಡಿದ್ದಾರೆ. ಸರ್ಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ. ಆದರೆ ರೇಷನ್ ಅಂಗಡಿಗಳು ಬಡವರಿಗೆ ನೀಡಬೇಕಾದ ಅಕ್ಕಿಯನ್ನ ಜನರಿಗೆ ನೀಡುವ ಬದಲು ಕಾಳಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟಕ್ಕೆ ಮುಂದಾಗಿದ್ದಾರೆ.

ಹೋರಾಟದ ಎಚ್ಚರಿಕೆ 

ಕೆಲವು ಪಡಿತರ ಚೀಟಿದಾರರಿಗೆ ಪುಡಿಗಾಸಿನ ಆಸೆ ತೋರಿಸಿ ದುಡ್ಡು ಕೊಡುತ್ತಿದ್ದಾರೆ. ಇನ್ನು ಕೆಲವರ ಥಂಬ್ ತೆಗೆದುಕೊಂಡು ಅಕ್ಕಿ ಇಲ್ಲ, ಮುಂದಿನ ತಿಂಗಳು ಕೊಡುತ್ತೇವೆ ಅಂತಾ ಹೇಳಿ ವಾಪಸ್ ಕಳುಹಿಸುತ್ತಿದ್ದಾರಂತೆ. ಆ ಮೂಲಕ ಇವರೆಲ್ಲರ ಪಾಲಿನ ಅಕ್ಕಿಯನ್ನ ಮಹಾರಾಷ್ಟ್ರ, ತೆಲಂಗಾಣಕ್ಕೆ ಸಪ್ಲೈ ಮಾಡೋದಕ್ಕೆ ಮುಂದಾಗಿದ್ದಾರೆ. ಬಡವರ ಪಾಲಿನ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ದಂಧೆಗೆ ಬ್ರೇಕ್ ಹಾಕದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಹೋರಾಟಗಾರ ಎಂಎಸ್ ಪಾಟೀಲ್ ನರಿಬೋಳ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಗಲ್ಫ್​ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನಲೆ ಅಕ್ಕಿ ರಫ್ತುಗೂ ಬಿತ್ತು ಬ್ರೇಕ್​​: ಉದ್ಯಮಿಗಳು ಕಂಗಾಲು

ಜೆ.ಆರ್ ನಗರದಲ್ಲಿರುವ ರೇಷನ್ ಅಂಗಡಿಯ ಪಡಿತರದಾರರಿಗೆ ತಿಂಗಳಿಗೆ ಸರಿಯಾಗಿ ರೇಷನ್ ವಿತರಿಸುವುದಿಲ್ಲವಂತೆ. ಯಾರಾದರು ಜೋರು ಮಾಡಿ ಕೇಳಿದರೆ ರೇಷನ್ ಕಾರ್ಡ್ ಕಟ್ ಮಾಡಿಸುವ ಬೆದರಿಕೆ ಮಾಲೀಕರು ಹಾಕ್ತಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿಬಂದಿವೆ. ಜನರ ಪಾಲಿನ ಅಕ್ಕಿಯನ್ನ ಬೇರೆಡೆ ಮಾರಾಟ ಮಾಡಿ ರೇಷನ್ ಅಂಗಡಿಯವರು ದುಪ್ಪಟ್ಟು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ.

ರೇಷನ್ ಅಂಗಡಿ ಮಾಲೀಕರ ಕಥೆಯೇ ಬೇರೆ

ಇನ್ನು ರೇಷನ್ ಅಂಗಡಿಯಿಂದ ಅಕ್ಕಿ ಸಪ್ಲೈ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರೇಷನ್ ಅಂಗಡಿಯ ಮಾಲೀಕನಿಗೆ ಕೇಳಿದರೆ ಅವರು ಹೇಳುವ ಕಥೆಯೇ ಬೇರೆ. ನಾಲ್ಕೈದು ಕುಟುಂಬದ ಪಡಿತರದಾರರ ಅಕ್ಕಿಯನ್ನ ತೆಗೆದುಕೊಂಡು ಹೋಗಲು ಬಂದು ಗಾಡಿಯಲ್ಲಿ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ. ಅವರು ಅಕ್ಕಿ ತೆಗೆದುಕೊಂಡು ಹೋಗುವ ವಿಡಿಯೋವನ್ನ ಯಾರೋ ಬೇಕು ಅಂತಾ ವೈರಲ್ ಮಾಡಿದ್ದಾರೆ. ಅದರ ಹೊರತಾಗಿ ಯಾವುದೇ ರೀತಿಯಲ್ಲಿ ಅಕ್ರಮವಾಗಿ ಅಕ್ಕಿ ಸಪ್ಲೈ ಮಾಡಿಲ್ಲ ಎಂದು ರೇಷನ್ ಅಂಗಡಿ ಮಾಲೀಕ ಭಾಗ್ಯವಂತ ಪಾಟೀಲ್ ಹೇಳಿದ್ದಾರೆ.

ಆದರೆ ಹಗಲು ಹೊತ್ತಲ್ಲಿ ಸರಿಯಾಗಿ ಪಡಿತರ ವಿತರಿಸದ ರೇಷನ್ ಅಂಗಡಿಯವರು ಯಾರೋ ನಾಲ್ಕೈದು ಜನರ ರೇಷನ್​ಗಾಗಿ ರಾತ್ರಿ ಅಂಗಡಿ ಓಪನ್ ಮಾಡಿ ರೇಷನ್ ನೀಡುತ್ತಾರಾ ಅನ್ನೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಕಲಬುರಗಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಂದಾಸ್​ ಆಗಿ ಅಕ್ರಮವಾಗಿ ಅಕ್ಕಿ ಸಾಗಾಟ, ಮಾರಾಟ ದಂಧೆ ಜೊತೆಗೆ ರೇಷನ್ ಅಂಗಡಿಯಿಂದ ಅಕ್ಕಿ ಸಪ್ಲೈ ಅಲ್ಲದೆ ರೆಷನ್ ಅಂಗಡಿ ಮಾಲೀಕರು ಅಕ್ಕಿಯ ಬದಲು ಪಡಿತರ ಚೀಟಿದಾರರಿಗೆ ಹಣ ನೀಡುವಂತಹ ದಂಧೆ ನಿರಂತರವಾಗಿ ನಡೆಯುತ್ತಿದ್ದರು ಕೂಡ ಅಧಿಕಾರಿಗಳು ಕಣ್ಣ ಮುಚ್ಚಿ ಕುಳಿತುಕೊಂಡಿರುವುದು ನಿಜಕ್ಕೂ ದುರಂತವೆ ಸರಿ. ಇನ್ನು ಮುಂದಾದ್ರು ಬಡವರ ಪಾಲಿನ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲಕ್ಕೆ ಬ್ರೇಕ್ ಹಾಕುವಂತಹ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ನವದೆಹಲಿ, ಮಾರ್ಚ್ 19: ಇರಾನ್ ಯುದ್ಧದ ಪರಿಣಾಮ ದೇಶದಲ್ಲಿ ಎಲ್​ಪಿಜಿ ಬಿಕ್ಕಟ್ಟು ಉದ್ಭವಿಸಿರುವ ಬೆನ್ನಲ್ಲೇ ಸರ್ಕಾರ ಇಂಧನ ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇಂಧನ ದತ್ತಾಂಶ ಅಥವಾ ಎನರ್ಜಿ ಡಾಟಾವನ್ನು ರಾಷ್ಟ್ರೀಯ ಭದ್ರತೆಯ ವಿಚಾರವೆಂದು ಸರ್ಕಾರ ವರ್ಗೀಕರಿಸಿದೆ. ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ನಿರತವಾಗಿರುವ ಎಲ್ಲಾ ಸಂಸ್ಥೆಗಳೂ ಕೂಡ ತಮ್ಮ ಕಾರ್ಯಾಚರಣೆಯ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವುದನ್ನು ಕಡ್ಡಾಯಪಡಿಸಲಾಗಿದೆ.

ತೈಲ ಸಚಿವಾಲಯವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಾಹಿತಿ ಸಲ್ಲಿಕೆ ಆದೇಶ 2026ರ -Petroleum and Natural Gas (furnishing of information) Order – ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ತೈಲ ಕ್ಷೇತ್ರದ ಮೌಲ್ಯ ಸರಪಳಿಯಲ್ಲಿರುವ ರಿಫೈನಿಂಗ್ ಕಂಪನಿಗಳು, ಎಲ್​ಎನ್​ಜಿ ಆಮದುಗಾರರು, ಪೈಪ್​ಲೈನ್ ಆಪರೇಟಿಂಗ್ ಸಂಸ್ಥೆಗಳು, ನಗರ ಗ್ಯಾಸ್ ವಿತರಕರು, ಪೆಟ್ರೋಕೆಮಿಕಲ್ ಸಂಸ್ಥೆಗಳೆಲ್ಲವೂ ತಮ್ಮ ಕಾರ್ಯಾಚರಣೆಯ ಪೂರ್ಣ ಮಾಹಿತಿಯನ್ನು ತೈಲ ಸಚಿವಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಮತ್ತು ಅನಾಲಿಸಿಸ್ ವಿಭಾಗಕ್ಕೆ (ಪಿಪಿಎಸಿ) ಒದಗಿಸುತ್ತಿರಬೇಕು ಕೆಲ ಸಂದರ್ಭದಲ್ಲಿ ನಿತ್ಯವೂ ಮಾಹಿತಿ ಅಪ್​ಡೇಟ್ ಮಾಡುತ್ತಿರಬೇಕು ಎಂದು ಈ ಆರ್ಡರ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಯಾವ್ಯಾವ ಮಾಹಿತಿ ಸಲ್ಲಿಸಬೇಕು?

ಉತ್ಪಾದನೆ, ಆಮದು, ಸರಕು ಪ್ರಮಾಣ, ಅನುಭೋಗದ ಟ್ರೆಂಡ್ ಇತ್ಯಾದಿ ಡಾಟಾವನ್ನು ಈ ಕಂಪನಿಗಳು ಪಿಪಿಎಸಿಗೆ ನೀಡಬೇಕು. ಈ ಹಿಂದೆ ಈ ಮಾಹಿತಿಯನ್ನು ಗೌಪ್ಯವಾಗಿಡುವ ಅವಕಾಶ ಕೊಡಲಾಗಿತ್ತು. ಮಾರ್ಚ್ 18, ಬುಧವಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಇಂಧನ ಸಚಿವಾಲಯವು ಹೊಸ ಆರ್ಡರ್ ತಂದಿದೆ.

ಇರಾನ್ ಯುದ್ಧದ ಪರಿಣಾಮ ಜಾಗತಿಕವಾಗಿ ತೈಲ ಮತ್ತು ಅನಿಲ ಸರಬರಾಜು ಭಾರೀ ವ್ಯತ್ಯಯಗೊಂಡಿದೆ. ಭಾರತವು ರಷ್ಯಾದಿಂದ ತೈಲ ಪೂರೈಕೆ ಪಡೆಯುತ್ತಿದೆಯಾದರೂ, ಅನಿಲ ಪೂರೈಕೆಗೆ ಧಕ್ಕೆಯಾಗಿದೆ. ಭಾರತ ಆಮದು ಮಾಡಿಕೊಳ್ಳುವ ಶೇ. 80ರಷ್ಟು ಎಲ್​ಪಿಜಿಯು ಗಲ್ಫ್ ರಾಷ್ಟ್ರಗಳಿಂದ ಬರುತ್ತದೆ. ಹೀಗಾಗಿ, ಎಲ್​ಪಿಜಿ ಬಿಕ್ಕಟ್ಟು ಉದ್ಭವವಾಗಿದೆ. ಇದೇ ವೇಳೆ ಸರ್ಕಾರವು ಕಚ್ಚಾ ತೈಲ ಪೂರೈಕೆ ಸಾವಶ್ಯ ಇರುವುದಾಗಿ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಪೆಟ್ರೋಲ್, ಪಿಎನ್​ಜಿ, ಸಿಎನ್​ಜಿ ಪೂರೈಕೆ ಸಮರ್ಪಕವೆಂದ ಸರ್ಕಾರ

ಕಚ್ಛಾ ತೈಲ ಬೆಲೆ ಸಮರ್ಪಕವಾಗಿದೆ. ರಿಫೈನರಿಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತಿವೆ. ಪೆಟ್ರೋಲ್ ಪಂಪ್​ಗಳು ಸಹಜವಾಗಿ ಕೆಲಸ ಮಾಡುತ್ತಿವೆ. ಎಲ್ಲಿಯೂ ಅಲಭ್ಯತೆ ಬಂದಿಲ್ಲ. ಪಿಎನ್​ಜಿ ಮತ್ತು ಸಿಎನ್​ಜಿ ಪೂರೈಕೆ ಕೂಡ ನೂರಕ್ಕೆ ನೂರು ಇದೆ. ಕಮರ್ಷಿಯಲ್ ಎಲ್​ಪಿಜಿ ಬಳಕೆದಾರರನ್ನು ಸಾಧ್ಯವಿರುವೆಡೆ ಪಿಎನ್​ಜಿ ಕನೆಕ್ಷನ್​ಗೆ ವರ್ಗವಾಗುವಂತೆ ಉತ್ತೇಜಿಸಲಾಗುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bengaluru Ola Ride Scam: 285 ರೂ. ಬಿಲ್ 5,950 ರೂ.ಗೆ ಏರಿಕೆ! ಕ್ಯಾಬ್ ಡ್ರೈವರ್​​​ಗಳ ಹೊಸ ಆಟ ಶುರು

ಬೆಂಗಳೂರು, ಮಾ.19: ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಚಾಲಕರ ಹಗರಣಗಳು ಹೊಸ ರೂಪವನ್ನು ಪಡೆದುಕೊಂಡಿದೆ. ಓಲಾ ಆಪ್‌ನಲ್ಲಿ ಬುಕ್ ಮಾಡಿದ್ದ ಕನಿಷ್ಠ ದರದ ಪ್ರಯಾಣವೊಂದನ್ನು ತಾಂತ್ರಿಕವಾಗಿ ತಿರುಚಿ, ಸಾವಿರಾರು ರೂಪಾಯಿ ಹಣ ವಸೂಲಿ ಮಾಡಲು ಯತ್ನಿಸಿದ ಚಾಲಕನ ವಂಚನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಯಾಣಿಕರೊಬ್ಬರು ತಮ್ಮ ರೈಡ್ ಆರಂಭಿಸಿದಾಗ ತೋರಿಸಿದ ದರ ಕೇವಲ 285 ರೂಪಾಯಿ. ಆದರೆ, ಗಮ್ಯಸ್ಥಾನ ತಲುಪಿದಾಗ ಓಲಾ ಆಪ್‌ನಲ್ಲಿ ತೋರಿಸಿದ ಬಿಲ್ ಬರೋಬ್ಬರಿ 5,950 ರೂಪಾಯಿ!

ಚಾಲಕನು ಯಾವುದೋ ತಾಂತ್ರಿಕ ಹ್ಯಾಕಿಂಗ್ ತಂತ್ರ ಬಳಸಿ ಪ್ರಯಾಣ ದರವನ್ನು ಬೇಕಂತಲೇ ಹೆಚ್ಚಿಸಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ನೋಡಿ ಪ್ರಯಾಣಿಕರು ಶಾಕ್ ಆಗಿದ್ದಾರೆ. ಬಿಲ್ ಪಾವತಿಸಲು ನಿರಾಕರಿಸಿದ ಪ್ರಯಾಣಿಕರು, “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡುತ್ತೇವೆ ಎಂದ ತಕ್ಷಣ ಗಾಬರಿಗೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ವೈರಲ್ ಆಗಿರುವ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಇಂತಹ ಘಟನೆಗಳ ಬಗ್ಗೆ ತಕ್ಷಣ ವರದಿ ಮಾಡಲು ಸಲಹೆ ನೀಡಿದ್ದಾರೆ. “ದಯವಿಟ್ಟು ಈ ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ, ತಕ್ಷಣ ಕ್ರಮ ಕೈಗೊಳ್ಳಿ. ನೀವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದರೆ, ದಯವಿಟ್ಟು ನಮ್ಮ 112 ಗೆ ಕರೆ ಮಾಡಿ ವರದಿ ಮಾಡಿ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹೊಯ್ಸಳ ಗಸ್ತು ವಾಹನವನ್ನು ಸ್ಥಳಕ್ಕೆ ಕಳುಹಿಸಲಾಗುತ್ತದೆ.” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ

ರೈಡ್-ಹೇಲಿಂಗ್ ಕಂಪನಿಗಳು ಸಾಮಾನ್ಯವಾಗಿ ಜಿಪಿಎಸ್ ಆಧಾರಿತ ದರ ಲೆಕ್ಕಾಚಾರ ಮತ್ತು ಕ್ರಿಯಾತ್ಮಕ ಬೆಲೆ ನಿಗದಿಯನ್ನು ಬಳಸುತ್ತವೆ, ಆದರೆ ಈ ಪ್ರಮಾಣದ ವ್ಯತ್ಯಾಸಗಳು ಕಂಡು ಬಂದರೆ ಇದು ಮೋಸ ಎಂದು ಗೊತ್ತಾಗುತ್ತದೆ. ಇನ್ನು ಕಂಪನಿಯು ಹೇಳಿರುವ ಪ್ರಕಾರ ಪ್ರಯಾಣಿಕರಿಗೆ ಅಪ್ಲಿಕೇಶನ್‌ನಲ್ಲಿನ ಪಾವತಿಗಳನ್ನು ಮಾತ್ರ ಅವಲಂಬಿಸಲು, ನಗದು ವಿವಾದಗಳನ್ನು ತಪ್ಪಿಸಲು ಮತ್ತು ಅಧಿಕೃತ ಮಾರ್ಗಗಳ ಮೂಲಕ ಸಮಸ್ಯೆಗಳನ್ನು ತಕ್ಷಣ ವರದಿ ಮಾಡಲು ಸಲಹೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಗಳ ರೀಲ್ಸ್ ನಡುವೆ ಎಂಟ್ರಿ ಕೊಟ್ಟ ತಂದೆಯ ಚಿಂದಿ ಮೂನ್‌ ವಾಕ್‌ ಸ್ಟೆಪ್‌ 

ಅಪ್ಪ (father) ಅಂದ್ರೆನೇ ಹಾಗೇನೇ, ಪದಗಳಲ್ಲಿ ವಿವರಿಸಲು ಆಗದು. ಮಗಳ ಪಾಲಿಗೆ ಅಪ್ಪ ಮೊದಲ ಹೀರೋ ಅಷ್ಟೇ ಅಲ್ಲ, ಬೆಸ್ಟ್ ಫ್ರೆಂಡ್ ಕೂಡ ಆಗಿರುತ್ತಾನೆ. ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೇಯೇ ಪ್ರಪಂಚ. ಅಪ್ಪ ಮಗಳ ಬಾಂಧವ್ಯ ಸಾರುವ ಕೆಲ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಇಲ್ಲೊಬ್ಬ ತಂದೆಯೂ ಮಗಳ ರೀಲ್ಸ್‌ನಲ್ಲಿ ಚಿಂದಿ ಸ್ಟೆಪ್ ಹಾಕಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಚಪ್ಪಲಿ ಧರಿಸದೇ ಮೈಕೆಲ್ ಜಾಕ್ಸನ್ (Michael Jackson) ಮೂನ್ ವಾಕ್ ಸ್ಟೆಪ್ ಮಾಡಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

@magic_shop ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಗಳು, ಮೈಕೆಲ್ ಜಾಕ್ಸನ್ ಅವರ ಬಿಲ್ಲಿ ಜೀನ್ ಹಾಡಿಗೆ ಡ್ಯಾನ್ಸ್ ಮಾಡಲು ಮುಂದಾಗಿದ್ದಾಳೆ. ಇದೇ ವೇಳೆ ಎಂಟ್ರಿ ಕೊಟ್ಟ ಆಕೆಯ ತಂದೆ ಚಪ್ಪಲಿ ಧರಿಸಿ ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್ ಸಖತ್ ಆಗಿ ಮಾಡಿರುವುದನ್ನು ಕಾಣಬಹುದು. ಕೊನೆಗೆ ಮಗಳು ತಂದೆ ಜತೆಗೆ ಸ್ಟೆಪ್ ಹಾಕುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವೈದ್ಯರು ಪುಟ್ಟ ಕಂದಮ್ಮನನ್ನು ಕೈಗಿಡುತ್ತಿದ್ದಂತೆ ಎತ್ತಿಕೊಳ್ಳಲು ಹೆದರಿದ ತಂದೆ

ಈ ವಿಡಿಯೋ 20 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿಯ ಡ್ಯಾನ್ಸ್ ಡ್ಯಾನ್ಸರ್ ಗಳನ್ನು ಮೀರಿಸುವಂತಿದೆ ಎಂದಿದ್ದಾರೆ. ಇನ್ನೊಬ್ಬರು, ಅಂಕಲ್ ಜಾಕ್ಸನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಂಕಲ್ ಎಂದು ಕರೆಯಬೇಡಿ, ಯುವಕನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮುಸ್ಲಿಮರಿಗೆ ಕಾಂಗ್ರೆಸ್​​ ಮಣೆ ಹಾಕಿದ್ರೆ, ಬಿಜೆಪಿಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ?: ಯತ್ನಾಳ್​​ ಹೊಸ ಬಾಂಬ್​​

ದಾವಣಗೆರೆ, ಮಾರ್ಚ್​​ 19: ಬಾಗಲಕೋಟೆ ಸೇರಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಈ ನಡುವೆ ವಿಜಯಪುರದಲ್ಲಿ ಮಾತನಾಡಿದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕಾರಣದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಕುಟುಂಬ ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿಕೊಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಯಡಿಯೂರಪ್ಪ ಕುಟುಂಬ ಹಾಗೂ ಶಾಮನೂರು ಕುಟುಂಬದ ನಡುವೆ ವ್ಯವಸ್ಥಿತ ಹೊಂದಾಣಿಕೆ ಇದೆ. ಹಿಂದೆ ಶಿವಮೊಗ್ಗದಲ್ಲಿ ರಾಘವೇಂದ್ರಗೆ ಮತ ಹಾಕುವಂತೆ ಶಾಮನೂರು ಶಿವಶಂಕರಪ್ಪ ಹೇಳಿದ್ದರೆ, ದಾವಣಗೆರೆಯಲ್ಲಿ ಯಡಿಯೂರಪ್ಪ ಶಾಮನೂರಿಗೆ ಮತ ಹಾಕಿ ಎಂದು ಹೇಳಿದ್ದರು . ಒಂದೊಮ್ಮೆ ದಾವಣಗೆರೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ,  ಹಾಲಿ ಬಿಜೆಪಿ ಅಭ್ಯರ್ಥಿಯಿಂದ ಟಿಕೆಟ್​​ ಹಿಂಪಡೆದು ಶಾಮನೂರು ಮಲ್ಲಿಕಾರ್ಜುನ್ ಅವರ ಪುತ್ರನಿಗೆ ನೀಡಿದರೂ ಆಶ್ಚರ್ಯವಿಲ್ಲ ಎಂದು ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ

ಕತಾರ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಇರಾನ್ ಅಮೆರಿಕದ ಸ್ವತ್ತುಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಇಂಧನ ಸೌಲಭ್ಯಗಳನ್ನು ಸಹ ಧ್ವಂಸಗೊಳಿಸಿದೆ. ಇರಾನ್ (Iran War) ಇಂದು ಕತಾರ್‌ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸ್ಥಾವರವಾದ ರಾಸ್ ಲಫಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧತೆ ತೀವ್ರಗೊಂಡಿದೆ.

ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸೌಲಭ್ಯದ ಮೇಲಿನ ದಾಳಿಯ ನೇರ ಪರಿಣಾಮವಾಗಿ ಈ ಸ್ಥಳದಲ್ಲಿ ತೈಲದ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ರಷ್ಯಾದ ಜೊತೆಗೆ ಕತಾರ್ ವಿಶ್ವದ ಅಗ್ರ ಎಲ್‌ಎನ್‌ಜಿ ಉತ್ಪಾದಕರಲ್ಲಿ ಒಂದಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಕೂಡ ಇರಾನ್ ಕತಾರ್​ನ ಅನಿಲ ಕ್ಷೇತ್ರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಟ್ಟೆಪಾಡಿಗೆ ದುಡಿಯಲು ಬಂದವನ ದಾರುಣ ಅಂತ್ಯ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರ ಪೈಕಿ ಓರ್ವ ಸಾವು

ಹುಬ್ಬಳ್ಳಿ, ಮಾರ್ಚ್​​ 19: ಕೆಲಸ ಮಾಡಿ ಮಲಗಿದ್ದ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ಚಿಕಿತ್ಸೆ ಫಲಿಸದೆ ಓರ್ವ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಾಮನಗರ ಮೂಲದ ಕಾರ್ಮಿಕ ಅಮ್ಜದ್ ಪಾಷಾ(26) ಮೃತ ದುರ್ದೈವಿಯಾಗಿದ್ದು, ಕಳೆದ 3 ದಿನಗಳಿಂದ ಕಿಮ್ಸ್​ನಲ್ಲಿ ಅಮ್ಜದ್​​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದ ಮೂವರಾದ ಜಾಫರ್, ಜಬಿ, ಹೈದರ್​​ಗೆ ಚಿಕಿತ್ಸೆ ಮುಂದುವರಿದ್ದು, ಮಾ.17ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಮಲಗಿದ್ದಲ್ಲೇ ಕಾರ್ಮಿಕರು ಅಸ್ವಸ್ಥರಾಗಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜಮಾಲಸಾಬ್ ಪಾಳ್ಯಾ ನಿವಾಸಿಗಳಾದ ಅಮ್ಜದ್ ಪಾಶಾ, ಹೈದರ್, ಜಬಿ, ಜಾಫರ್ ಎಂಬ ನಾಲ್ವರು ಕಾರ್ಮಿಕರು ದೊಡ್ಡ ದೊಡ್ಡ ಅಂಗಡಿಗಳ LED ವಾಲ್ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಡ್ರೈಪ್ರೂಟ್ಸ್ ಅಂಗಡಿಯೊಂದು ಆರಂಭವಾಗುತ್ತಿದ್ದು, ಆ ಆಂಗಡಿಯ ಇಂಟಿರಿಯರ್ ವರ್ಕ್ ಮತ್ತು LED ಕೆಲಸ ಮಾಡಲು ಲಾರಿ ಚಾಲಕ ಅಲಿಂ ಸೇರಿ ಐವರು ಹತ್ತು ದಿನದ ಹಿಂದೆ ಬಂದಿದ್ದರು. ಮಾರ್ಚ್ 16ರಂದು ರೋಜಾ ಇದ್ದ ನಾಲ್ವರು ರಾತ್ರಿ ಊಟ ಮಾಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದರು. ಅಂಗಡಿಯ ಶೆಟರ್ ಹಾಕಿಕೊಂಡು ಒಳಗಡೆ ನಾಲ್ವರು ಕಾರ್ಮಿಕರು ಮಲಗಿದ್ದರೆ, ಲಾರಿ ಚಾಲಕ ಅಲೀಂ ಹೊರಗಡೆ ಇದ್ದ ತನ್ನ ಲಾರಿಯಲ್ಲಿ ಮಲಗಿದ್ದ. ಆದ್ರೆ ಮಾರ್ಚ್ 17ರಂದು ಮುಂಜಾನೆ ಒಂಭತ್ತು ಗಂಟೆಯಾದರೂ ಇವರು ಎದ್ದು ಹೊರಗೆ ಬಾರದ ಇದ್ದಾಗ ಲಾರಿ ಚಾಲಕ ಅಲೀಂ, ಶೆಟರ್ ಓಪನ್ ಮಾಡಿ ನಿರ್ಮಾಣ ಹಂತದ ಅಂಗಡಿಯೊಳಗೆ ಹೋಗಿದ್ದಾನೆ. ಆಗ ನಾಲ್ವರು ಪ್ರಜ್ಞೆ ಇಲ್ಲದೇ ಬಿದ್ದಿಕಂಡಿದೆ. ಬಾಯಲ್ಲಿ ಬುರುಗು ಬರುತ್ತಿದ್ದ ಹಿನ್ನೆಲೆ ಕೂಡಲೇ ಸ್ಥಳೀಯರಿಗೆ ಮತ್ತು ಅಂಗಡಿ ಮಾಲೀಕರಿಗೆ ಆತ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಯಿಸಿ ನಾಲ್ವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿದ್ದರು. ಆದ್ರೆ ಮೂರು ದಿನಗಳ ಸಾವು ಬದುಕಿನ ಹೋರಾಟ ನಡೆಸಿದ ಅಮ್ಜದ್ ಪಾಷಾ ಇಂದು ಹುಬ್ಬಳ್ಳಿ ಕಿಮ್ಸ್​​ನಲ್ಲಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಕಿಮ್ಸ್​​ ಸಿಬ್ಬಂದಿ ನಿರ್ಲಕ್ಷ್ಯ ಆರೋಪ; ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಇನ್ನು ನಿರ್ಮಾಣ ಹಂತದ ಕಟ್ಟಡವಾಗಿದ್ದರಿಂದ ಒಳಗಡೆ ಇಂಟೀರಿಯರ್ ವರ್ಕ್ ಮಾಡಲು ಅನೇಕ ಕೆಮಿಕಲ್​​ಗಳನ್ನು ಇಡಲಾಗಿದ್ದು, ಅವುಗಳ ವಾಸನೆ ಕೂಡಾ ಹೆಚ್ಚಾಗಿತ್ತು.ಕಟ್ಟಡದಲ್ಲಿ ಇತ್ತ ನಾಲ್ವರು ಕಾರ್ಮಿಕರು ಮಲಗಿದ್ದರೆ, ಗ್ಲಾಸ್ ವರ್ಕ್ ಮಾಡುವ ಬೇರೆ ಕಾರ್ಮಿಕರು ಜನರೇಟರ್ ಆನ್ ಮಾಡಿಕೊಂಡು ರಾತ್ರಿ ಕೆಲಸ ಮಾಡ್ತಿದ್ದರಂತೆ. ಕೆಲಸ ಮುಗಿದ ಬಳಿಕ ಜನರೇಟರ್ ಬಂದ್​​ ಮಾಡದೇ ಅವರು ತೆರೆಳಿದ್ದ ಪರಿಣಾಮ ಕಟ್ಟಡದ ಒಳಗೆ ಕಾರ್ಬನ್ ಡೈ ಆ್ಯಕ್ಸೈಡ್ ಹೆಚ್ಚಾಗಿದೆ. ಹೊರಗಿನಿಂದಲೂ ಗಾಳಿ ಬಾರದೇ ಇದ್ದಿದ್ದರಿಂದ ಆಮ್ಲಜನಕ ಸಮಸ್ಯೆಯಾಗಿ ಕಾರ್ಮಿಕರಿಗೆ ಉಸಿರುಗಟ್ಟಿದೆ ಎನ್ನಲಾಗಿದೆ. ಉಳಿದ ಮೂವರು ಕೂಡ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದ ಕಾರಾಗೃಹಗಳಲ್ಲಿ ಡ್ರಗ್ಸ್​ ಪರೀಕ್ಷೆ: ಡ್ರಗ್ಸ್​ ಸೇವನೆಯಲ್ಲಿ ಮಹಿಳಾ ಕೈದಿಗಳೇ ಹೆಚ್ಚು

ಬೆಂಗಳೂರು, ಮಾರ್ಚ್​ 19: ರಾಜ್ಯಾದ್ಯಂತ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ (Drug Test) ಒಳಪಡಿಸಲಾಗುತ್ತಿದೆ. ಆ ಮೂಲಕ ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಾರಾಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹೀಗಾಗಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಅಧಿಕಾರಿಗಳು ಪರೀಕ್ಷೆ ಮಾಡಿಸುತ್ತಿದ್ದು, ಮಹಿಳಾ ಕೈದಿಗಳೇ ಹೆಚ್ಚಾಗಿ ಡ್ರಗ್ಸ್​ ಸೇವನೆ ಮಾಡಿರೋದು ಪತ್ತೆ ಆಗಿದೆ.

ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್

ಡ್ರಗ್ಸ್ ಪರೀಕ್ಷೆ ವೇಳೆ ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್​​ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪಾಸಿಟಿವ್ ಬಂದವರನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ನಿಮಾನ್ಸ್​ಗೆ ಸ್ಯಾಂಪಲ್ ರವಾನಿಸಲಾಗಿದ್ದು, ವರದಿ ಬಂದ ನಂತರ ವ್ಯಸನದ ಮಟ್ಟ ಎಷ್ಟಿದೆ ಎಂದು ತಿಳಿಯಲಿದೆ. ಆ ಪ್ರಕಾರ ಚಿಕಿತ್ಸೆ ನೀಡಲಾಗುವುದು. ಡ್ರಗ್ ಪರೀಕ್ಷೆಯಲ್ಲಿ ಹೆಚ್ಚಾಗಿ ವಿಚಾರಣಾಧೀನ ಕೈದಿಗಳಲ್ಲಿ ಮಾದಕ ವ್ಯಸನ ಹೆಚ್ಚಾಗಿದ್ದು, ಪಾಸಿಟಿವ್ ಬಂದಿದೆ. ಸಜಾ ಕೈದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಸನ ಕಂಡು ಬಂದಿಲ್ಲ.

ಯೂರಿನ್ ಬದಲಿಗೆ ನೀರು ಮಿಶ್ರಣ: ಮಹಿಳಾ ಕೈದಿಗಳ ಕಳ್ಳಾಟ

ಇನ್ನು ಯೂರಿನ್ ಸ್ಯಾಂಪಲ್ ಶೇಖರಣೆ ವೇಳೆ ಮಹಿಳಾ ಕೈದಿಗಳು ಕಳ್ಳಾಟವಾಡಿದ್ದಾರೆ. ಯೂರಿನ್ ಬದಲಿಗೆ ಖೈದಿಗಳು ನೀರು ಮಿಶ್ರಣ ಮಾಡಿ ಕೊಟ್ಟಿರುವುದು ಬಯಲಾಗಿದೆ. ಈ  ಬಗ್ಗೆ ಮಹಿಳಾ ಕೈದಿಗಳನ್ನ ಕೇಳಿದ್ದಕ್ಕೆ ನಾವು ಏಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಒತ್ತಾಯ ಮಾಡಿದಾಗ ಯೂರಿನ್ ಜೊತೆ ನೀರು ಮಿಶ್ರಣ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ನಿರ್ದಿಷ್ಟ ಪಾಸಿಟಿವ್ ಸಂಖ್ಯೆ ಇನ್ನು ಪತ್ತೆಯಾಗಿಲ್ಲ. ಸದ್ಯ ಜೈಲಿನ ವೈದ್ಯರು ಶೇಕಡಾ 10 ರಷ್ಟು ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ. ಹಂತ ಹಂತವಾಗಿ ಮುಂದೆ ಎಲ್ಲರಿಗೂ ಪರೀಕ್ಷೆ ಮಾಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಜೈಲುಗಳಲ್ಲಿ ಡ್ರಗ್ಸ್ ನೆಟ್​ವರ್ಕ್​ ಬ್ರೇಕ್ ಹಾಕಲು ಡಿಜಿಪಿ ಪ್ಲಾನ್; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಟೆಸ್ಟ್!

ಅಧಿಕಾರಿಗಳು ಜೈಲಿನ ವೈದ್ಯರಿಗೆ ಡ್ರಗ್ಸ್​ ಟೆಸ್ಟ್​ ಕಿಟ್ ಕೊಟ್ಟು ಕೈದಿಗಳಿಗೆ ಟೆಸ್ಟ್​ ನಡೆಸಿದ್ದಾರೆ.​ ಸದ್ಯ ಒಟ್ಟು ಐದು ಮಾದರಿಯ ಮಾದಕ ವಸ್ತುಗಳ ಪರೀಕ್ಷೆ ಮಾಡಲಾಗುತ್ತಿದೆ. ಎಂಡಿಎಂಎ, ಗಾಂಜಾ, ಹೆರಾಯಿನ್, ಕೊಕೇನ್ ಸೇರಿದಂತೆ ಒಟ್ಟು ಐದು ಮಾದರಿಯ ಡ್ರಗ್ ಸೇವನೆ ಪರೀಕ್ಷೆ ಮಾಡಲಾಗುತ್ತಿದೆ. ಹೆಚ್ಚಾಗಿ ಬೆಂಗಳೂರು, ಮೈಸೂರು ಜೈಲಿನಲ್ಲಿ ಎಲ್ಲಾ ಮಾದರಿಯ ಡ್ರಗ್ ಪರೀಕ್ಷೆ ನಡೆದಿದ್ದು, ಉಳಿದ ಜೈಲುಗಳಲ್ಲಿ ವೈದ್ಯರು ಗಾಂಜಾ ಸೇವನೆ ಪರೀಕ್ಷೆ ಮಾತ್ರ ಮಾಡುತ್ತಿದ್ದಾರೆ.

ವರದಿ: ವಿಕಾಸ್​ ಟಿವಿ9 ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಕಮ್ ಸ್ವಾಮೀಜಿ ಆತ್ಮಹತ್ಯೆ, ಕಾರಣ ನಿಗೂಢ

ರಾಯಚೂರು, (ಮಾರ್ಚ್ 19): ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ, ಜೀವನದಲ್ಲಿ ವೈರಾಗ್ಯ ಕಂಡು ದೀಕ್ಷೆ ಪಡೆದು ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಸ್ವಾಮೀಜಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ನಡೆದಿದೆ. ದೇವೇಂದ್ರಪ್ಪ (58) ಎಂಬವರೇ ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ದೀಕ್ಷೆ ಪಡೆದು ಜಗದ್ಗುರು ಶಿವಾನಂದ ಮಠ ಕಟ್ಟಿ ಮಠದಲ್ಲಿ ಪುರಾಣ, ಪ್ರವಚನ ಮಾಡುತ್ತಿದ್ದರು. ಆದ್ರೆ, ಇದೀಗ ಬಸ್ಸಾಪುರ ಮಠದ ಭಜನಾ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ದೇವೇಂದ್ರಪ್ಪ, ಕಳೆದ ಎರಡು ದಶಕಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ವೈರಾಗ್ಯ ಜೀವನದತ್ತ ಮುಖ ಮಾಡಿ, ಬಸಾಪುರ ಗ್ರಾಮದಲ್ಲಿ ಶಿವಾನಂದ ಜಗದ್ಗುರು ನಾಮಧಾರಿ ಮಠವನ್ನು ಸ್ಥಾಪಿಸಿ, ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದರು. ಖಾವಿ ವಸ್ತ್ರ ಧರಿಸಿ ಜನರಿಗೆ ಧಾರ್ಮಿಕ ಪ್ರವಚನ ನೀಡುತ್ತಿದ್ದರು. ಆದರೆ, ಏಕಾಏಕಿ ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರು ಹಾಗೂ ಭಕ್ತರು ಆಘಾತಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಹೊಟ್ಟೆಪಾಡಿಗೆ ದುಡಿಯಲು ಬಂದವನ ದಾರುಣ ಅಂತ್ಯ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರ ಪೈಕಿ ಓರ್ವ ಸಾವು

ಇತ್ತೀಚೆಗೆ ಅಪಘಾತವಾಗಿದ್ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದರು. ಅಲ್ಲದೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.  ಆದ್ರೆ, ಆತ್ಮಹತ್ಯೆಗೆ  ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.

ಘಟನಾ ಸ್ಥಳಕ್ಕೆ ತುರುವಿಹಾಳ ಠಾಣೆ ಪಿಎಸ್ಐ ಸುಜಾತ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಬಳಿಕ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.  ಇನ್ನು ಗ್ರಾಮದ ರಮೇಶ್ ನೀಡಿದ ದೂರಿನ ಮೇರೆಗೆ ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version