India’s Longest-Serving Prime Minister: ನೆಹರು ದಾಖಲೆ ಮುರಿದ ನರೇಂದ್ರ ಮೋದಿ: ಅತಿ ದೀರ್ಘಾವಧಿ ಚುನಾಯಿತ ಭಾರತದ ಪ್ರಧಾನಿ ಎಂಬ ಐತಿಹಾಸಿಕ ಕೀರ್ತಿಗೆ ಭಾಜನರಾದ ಮೋದಿ – Kannada News

ನರೇಂದ್ರ ಮೋದಿ-ನೆಹರುImage Credit source: The Siasat Daily

ನವದೆಹಲಿ, ಜೂನ್ 10: ಭಾರತದ ರಾಜಕೀಯ ಇತಿಹಾಸದಲ್ಲಿ ಇಂದು( ಜೂನ್ 10, 2026) ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಪ್ರಧಾನಿ ನರೇಂದ್ರ ಮೋದಿ( Narendra Modi)ಅವರು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್​ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕುವ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪರಮೋಚ್ಚ ಪ್ರಧಾನಿ ಎಂಬ ಅಭೂತಪೂರ್ವ ಇತಿಹಾಸ ಬರೆದಿದ್ದಾರೆ.

ಬುಧವಾರದ ಇಂದಿನ ದಿನಕ್ಕೆ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಸುಸ್ಥಿರ ಆಡಳಿತವನ್ನು ಪೂರ್ಣಗೊಳಿಸಿದ್ದು, ಜಾಗತಿಕ ರಂಗದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

1952 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಜವಾಹರಲಾಲ್ ನೆಹರು, ಆ ವರ್ಷ ಮೇ 13 ರಂದು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಮೇ 27, 1964 ರವರೆಗೆ ಆ ಹುದ್ದೆಯಲ್ಲಿ 4,398 ದಿನಗಳ ಕಾಲ ನಿರಂತರ ಅಧಿಕಾರಾವಧಿಯನ್ನು ಪೂರೈಸಿದ್ದರು. 1947 ರಿಂದ 1952 ರವರೆಗಿನ ಅವರ ಹಿಂದಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದರು, ಆಗ ಸಾರ್ವತ್ರಿಕ ಚುನಾವಣೆಗಳು ಇನ್ನೂ ನಡೆದಿರಲಿಲ್ಲ.

ಜನಾದೇಶದ ಭದ್ರ ಬುನಾದಿ: ಮೋದಿಯವರ ವಿಜಯಯಾತ್ರೆ
ಮೇ 26, 2014 ರಂದು ದೇಶದ ಜನಸಾಮಾನ್ಯರ ಆಕಾಂಕ್ಷೆಗಳ ಪ್ರತಿರೂಪವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. ತದನಂತರ ಅವರ ಜನಪ್ರಿಯತೆ ಮತ್ತು ಸುಧಾರಣಾವಾದಿ ಆಡಳಿತಕ್ಕೆ ಮನಸೋತ ಭಾರತದ ಜನತೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತಷ್ಟು ಭಾರಿ ಬಹುಮತದೊಂದಿಗೆ ಅವರನ್ನು ದ್ವಿತೀಯ ಅವಧಿಗೆ (ಮೇ 30, 2019) ಆಯ್ಕೆ ಮಾಡಿದರು. ಮುಂದುವರಿದು, ಜೂನ್ 9, 2024 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ರಾಜಕೀಯ ಸ್ಥಿರತೆ ಮತ್ತು ನಿರಂತರ ಅಭಿವೃದ್ಧಿಯ ಹೊಸ ಯುಗಕ್ಕೆ ಅವರು ನಾಂದಿ ಹಾಡಿದರು.

ಮತ್ತಷ್ಟು ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವುದು ಮತ್ತು ಅವರು ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿರುವುದನ್ನು ಸಂಭ್ರಮಿಸಲು ಎನ್​ಡಿಎ ಭಾರತ್ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ದೇಶದ 22 ಎನ್​ಡಿಎ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮೈತ್ರಿಕೂಟದ ಎಲ್ಲಾ ಘಟಕ ಪಕ್ಷಗಳ ಅಧ್ಯಕ್ಷರು ಸೇರಿದಂತೆ 25ಕ್ಕೂ ಹೆಚ್ಚು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ರಾಜಕೀಯ ಪಕ್ಷದ ನಾಯಕರಾಗಿ ಉಳಿಯದೆ, ದೇಶದ ಪ್ರತಿಯೊಂದು ವರ್ಗದ, ಅದರಲ್ಲೂ ಮುಖ್ಯವಾಗಿ ಯುವಕರು, ಮಹಿಳೆಯರು ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕವೇ ಈ ಅತ್ಯುನ್ನತ ಜಾಗತಿಕ ಮೈಲಿಗಲ್ಲನ್ನು ತಲುಪಿರುವುದು ಇಡೀ ನವ ಭಾರತದ ಹೆಮ್ಮೆಯ ಸಂಕೇತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಕೊಂಡಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada Live: ಸುದೀರ್ಘ ಅವಧಿಗೆ ಪ್ರಧಾನಿ: ನೆಹರೂ ದಾಖಲೆ ಹಿಂದಿಕ್ಕಿದ ಪಿಎಂ ನರೇಂದ್ರ ಮೋದಿ – Kannada News

ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ಪಿಎಂ ಜವಾಹರ್​ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ದಾಖಲೆ ಇದೀಗ ಮೋದಿ ಅವರದ್ದಾಗಿದೆ. ಮತ್ತೊಂದೆಡೆ, ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವುದು ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಸಚಿವ ಸಂಪುಟದ ಖಾತೆ ಕ್ಯಾತೆ ಮುಂದುವರಿದಿರುವುದರ ಜತೆಗೆ, ಸಂಪುಟ ವಿಸ್ತರಣೆ ವೇಳೆ ಸಚಿವರಾಗಲು ಲಾಬಿ ಜೋರಾಗಿದೆ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಟ್ಟದಲ್ಲಿ, ಇರಾನ್ ಹಾಗೂ ಇಸ್ರೆಲ್ ಸಂಘರ್ಷ ಮತ್ತೆ ತೀವ್ರಗೊಳ್ಳುವ ಸುಳಿವು ದೊರೆತಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

Vastu Tips: ಮುಂಜಾನೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News

ನಾವು ಬೆಳಿಗ್ಗೆ ಹೇಗೆ ಪ್ರಾರಂಭಿಸುತ್ತೇವೆ ಎಂಬುದು ನಮ್ಮ ಇಡೀ ದಿನದ ಯಶಸ್ಸು ಮತ್ತು ಶಾಂತಿಯನ್ನು ನಿರ್ಧರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಂಜಾನೆಯ ಸಮಯದಲ್ಲಿ ನಮ್ಮ ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರವು ಅತ್ಯಂತ ಸೂಕ್ಷ್ಮ ಹಾಗೂ ಗ್ರಹಣಶೀಲವಾಗಿರುತ್ತವೆ. ಈ ಪವಿತ್ರ ಸಮಯದಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ಮತ್ತು ನಕಾರಾತ್ಮಕತೆಯನ್ನು ದೂರವಿಡಲು ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಮಾಡುವ ಸಣ್ಣ ತಪ್ಪುಗಳು ದಿನದ ಶಕ್ತಿಯನ್ನು ಕುಂದಿಸಬಹುದು, ಹಾಗೆಯೇ ಕೆಲವು ಒಳ್ಳೆಯ ಅಭ್ಯಾಸಗಳು ನಮ್ಮ ಇಡೀ ದಿನವನ್ನು ಅದ್ಭುತವಾಗಿ ಪರಿವರ್ತಿಸಬಲ್ಲವು.

ಮುಂಜಾನೆ ಎದ್ದ ತಕ್ಷಣ ದೂರವಿಡಬೇಕಾದ ಅಶುಭ ಸಂಗತಿಗಳು:

ಕನ್ನಡಿಯಲ್ಲಿ ಮುಖ ನೋಡುವುದನ್ನು ತಪ್ಪಿಸಿ:

ಬೆಳಿಗ್ಗೆ ಎದ್ದ ತಕ್ಷಣ ಮೊದಲು ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಬಾರದು. ರಾತ್ರಿಯ ನಿದ್ರೆಯ ನಂತರ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವಿರುತ್ತದೆ ಎಂದು ನಂಬಲಾಗಿದೆ. ಎದ್ದ ತಕ್ಷಣ ಕನ್ನಡಿ ನೋಡುವುದರಿಂದ ಆ ನಕಾರಾತ್ಮಕ ಶಕ್ತಿಯು ಮರಳಿ ನಮಗೇ ಆಕರ್ಷಿತವಾಗಿ, ದಿನದ ಆರಂಭವನ್ನು ಅನಗತ್ಯ ಒತ್ತಡ ಮತ್ತು ಆಲಸ್ಯದಿಂದ ಕೂಡಿಸಬಹುದು.

ನಿಂತುಹೋದ ಗಡಿಯಾರದಿಂದ ದೂರವಿರಿ:

ಹಾಸಿಗೆಯಿಂದ ಎದ್ದೇಳುವಾಗ, ಮನೆಯಲ್ಲಿ ನಿಂತಿರುವ ಅಥವಾ ಮುರಿದ ಗಡಿಯಾರಗಳ ಕಡೆಗೆ ದೃಷ್ಟಿ ಹರಿಸಬಾರದು. ವಾಸ್ತು ಶಾಸ್ತ್ರದಲ್ಲಿ, ಚಲಿಸದ ಗಡಿಯಾರವನ್ನು ದುರದೃಷ್ಟದ ಸಂಕೇತ ಮತ್ತು ಜೀವನದ ಪ್ರಗತಿಗೆ ಬರುವ ದೊಡ್ಡ ಅಡಚಣೆ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮ ಸಮಯ ಮತ್ತು ಕಾರ್ಯಗಳು ನಿಧಾನವಾಗುವಂತೆ ಮಾಡುತ್ತದೆ.

ಅಡುಗೆಮನೆಯ ಕೊಳಕು ಪಾತ್ರೆಗಳನ್ನು ನೋಡಬೇಡಿ:

ರಾತ್ರಿಯ ಕೊಳಕು ಪಾತ್ರೆಗಳನ್ನು ಬೆಳಿಗ್ಗೆ ಅಡುಗೆಮನೆಯಲ್ಲಿ ಹಾಗೆಯೇ ನೋಡುವುದು ಶುಭವಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆರ್ಥಿಕ ತೊಂದರೆಗಳು ಮತ್ತು ದಾರಿದ್ರ್ಯವನ್ನು ಆಹ್ವಾನಿಸುವ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ರಾತ್ರಿಯೇ ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ.

ನಿಮ್ಮ ಅಥವಾ ಇತರರ ನೆರಳು ನೋಡಬೇಡಿ:

ಎಚ್ಚರವಾದ ತಕ್ಷಣ ನಿಮ್ಮ ಸ್ವಂತ ಅಥವಾ ಇನ್ನೊಬ್ಬ ವ್ಯಕ್ತಿಯ ನೆರಳನ್ನು ನೋಡುವುದನ್ನು ತಪ್ಪಿಸಬೇಕು. ನೆರಳುಗಳನ್ನು ನೋಡುವುದು ಮಾನಸಿಕ ಗೊಂದಲ, ಭ್ರಮೆ ಮತ್ತು ಭೀತಿಯನ್ನು ಉಂಟುಮಾಡುತ್ತದೆ. ಇದು ಇಡೀ ದಿನ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಅಥವಾ ಕಚೇರಿಯ ಕೆಲಸಗಳಲ್ಲಿ ಅನಗತ್ಯ ಸಂಘರ್ಷಗಳಿಗೆ ಕಾರಣವಾಗಬಹುದು.

ಕೋಪದಿಂದ ಪಾದಗಳನ್ನು ನೆಲಕ್ಕೆ ತುಳಿಯಬೇಡಿ:

ಹಾಸಿಗೆಯಿಂದ ಎದ್ದೇಳುವಾಗ ಕೋಪದಿಂದ ಅಥವಾ ಜೋರಾಗಿ ಪಾದಗಳನ್ನು ನೆಲಕ್ಕೆ ತುಳಿಯಬಾರದು. ಸನಾತನ ಸಂಸ್ಕೃತಿಯಲ್ಲಿ ನಾವು ಬದುಕುವ ಭೂಮಿಯನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಭೂಮಿಗೆ ಗೌರವ ನೀಡಬೇಕೇ ಹೊರತು, ಕೋಪದಿಂದ ಪಾದಗಳನ್ನು ಜೋರಾಗಿ ಇಡುವುದರಿಂದ ದಿನದ ಶಾಂತಿ ಭಂಗವಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ದಿನದ ಶುಭಾರಂಭಕ್ಕಾಗಿ ಪಾಲಿಸಬೇಕಾದ ದೈವಿಕ ಅಭ್ಯಾಸಗಳು:

ಸಕಾರಾತ್ಮಕತೆ ನೀಡುವ ಅಂಗೈ ದರ್ಶನ:

ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಮೊದಲು ನಿಮ್ಮ ಎರಡು ಅಂಗೈಗಳನ್ನು ಒಟ್ಟಿಗೆ ಸೇರಿಸಿ ನೋಡಬೇಕು. ‘ಕರಾಗ್ರೆ ವಸತೇ ಲಕ್ಷ್ಮಿ…’ ಶ್ಲೋಕವನ್ನು ಜಪಿಸುತ್ತಾ ಹಸ್ತಗಳನ್ನು ದರ್ಶಿಸುವುದರಿಂದ ದೈವಿಕ ಶಕ್ತಿ ಜಾಗೃತವಾಗುತ್ತದೆ. ನಂತರ ಹಸ್ತಗಳನ್ನು ಹಗುರವಾಗಿ ಉಜ್ಜಿ, ಮುಖದ ಮೇಲೆ ಇರಿಸಿಕೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಪರಿಚಲನೆ ಸುಲಭವಾಗುತ್ತದೆ.

ಮನಸ್ಸನ್ನು ಪ್ರಶಾಂತಗೊಳಿಸುವ ದೈವಿಕ ಸ್ಮರಣೆ:

ನಿಮ್ಮ ಇಷ್ಟದೇವತೆ ಅಥವಾ ದೇವರನ್ನು ನೆನೆಯುತ್ತಾ ಪ್ರಾರ್ಥನೆ ಅಥವಾ ಕನಿಷ್ಠ ಎರಡು ನಿಮಿಷಗಳ ಧ್ಯಾನದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಈ ಅಭ್ಯಾಸವು ಚಂಚಲವಾಗಿರುವ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಅಲ್ಲದೆ, ದಿನವಿಡೀ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಉತ್ಸಾಹದಿಂದ ಕೆಲಸ ಮಾಡಲು ಇದು ಅದ್ಭುತ ಆಂತರಿಕ ಶಕ್ತಿಯನ್ನು ಒದಗಿಸುತ್ತದೆ.

ಭೂಮಿ ದೇವಿಗೆ ಕೃತಜ್ಞತೆ ಮತ್ತು ನಮನ:

ಹಾಸಿಗೆಯಿಂದ ಕೆಳಗೆ ಇಳಿದು ಪಾದಗಳನ್ನು ನೆಲದ ಮೇಲಿಡುವ ಮುನ್ನ ಭೂಮಿ ತಾಯಿಗೆ ಕೈ ಮುಗಿದು ನಮಸ್ಕರಿಸಬೇಕು. ನಮಗೆ ಆಶ್ರಯ ನೀಡಿರುವ ಧರಿತ್ರಿಗೆ ಗೌರವ ಸೂಚಿಸುತ್ತಾ, ಪ್ರಕೃತಿಯು ನಮಗೆ ಕರುಣಿಸಿರುವ ಈ ಮತ್ತೊಂದು ಸುಂದರ ದಿನಕ್ಕಾಗಿ ಕೃತಜ್ಞತೆ ಸಲ್ಲಿಸಬೇಕು. ಈ ವಿನಮ್ರ ಭಾವನೆಯು ನಮ್ಮಲ್ಲಿ ಸಕಾರಾತ್ಮಕ ಯೋಚನೆಗಳನ್ನು ಬಿತ್ತುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದೇ ಮೊದಲ ಬಾರಿ… ‘ಲಾರ್ಡ್ಸ್’ ಪಿಚ್​ಗೆ ಡಿಮೆರಿಟ್ ಪಾಯಿಂಟ್! – Kannada News

ಕ್ರಿಕೆಟ್‌ನ ಕಾಶಿ ಎಂದೇ ಕರೆಯಲ್ಪಡುವ ಐತಿಹಾಸಿಕ ಲಾರ್ಡ್ಸ್ ಮೈದಾನದ ಇತಿಹಾಸದಲ್ಲೇ ಕಪ್ಪು ಚುಕ್ಕೆಯೊಂದು ಮೂಡಿದೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಪಿಚ್ ಗುಣಮಟ್ಟವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ‘ಅತೃಪ್ತಿಕರ’ ಎಂದು ಪರಿಗಣಿಸಿದೆ. ಅಷ್ಟೇ ಅಲ್ಲದೆ, ಲಾರ್ಡ್ಸ್ ಮೈದಾನಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಿದೆ.

ಲಾರ್ಡ್ಸ್‌ ಮೈದಾನದಲ್ಲಿ ಇದಕ್ಕೂ ಮುನ್ನ 149 ಟೆಸ್ಟ್ ಪಂದ್ಯಗಳು ನಡೆದಿವೆ. ಆದರೆ ಪಿಚ್​ಗೆ ‘ಅತೃಪ್ತಿಕರ’ ರೇಟಿಂಗ್ ಸಿಗುತ್ತಿರುವುದು ಇದೇ ಮೊದಲು. ಅಂದರೆ 150ನೇ ಐತಿಹಾಸಿಕ ಪಂದ್ಯಕ್ಕಾಗಿ ಸಿದ್ಧಪಡಿಸಲಾದ ಪಿಚ್ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿತ್ತು ಎಂದು ಐಸಿಸಿ ತಿಳಿಸಿದೆ. ಹೀಗಾಗಿಯೇ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ.

 ಕೇವಲ 166 ಓವರ್‌ಗಳಲ್ಲಿ 40 ವಿಕೆಟ್ ಪತನ!

ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಿನ ಈ ಪಂದ್ಯವು ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿತ್ತು. ಮಳೆಯ ಅಡ್ಡಿಯ ನಡುವೆಯೂ ಕೇವಲ 996 ಎಸೆತಗಳಲ್ಲಿ (166 ಓವರ್‌ಗಳು) ಪಂದ್ಯದ ಎಲ್ಲಾ 40 ವಿಕೆಟ್‌ಗಳು ಉರುಳಿದ್ದವು. ಇದು ಲಾರ್ಡ್ಸ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯ ಎಂಬ ಕೆಟ್ಟ ದಾಖಲೆಗೆ ಪಾತ್ರವಾಯಿತು.

ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ತಮ್ಮ ವರದಿಯಲ್ಲಿ, “ಈ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಯಾವುದೇ ಸಮತೋಲನ ಹೊಂದಿರಲಿಲ್ಲ. ಚೆಂಡು ಅತಿಯಾಗಿ ಸೀಮ್ ಆಗುತ್ತಿತ್ತು ಮತ್ತು ಅನಿರೀಕ್ಷಿತವಾಗಿ ಬೌನ್ಸ್ ಆಗುತ್ತಿತ್ತು. ಕೆಲವು ಎಸೆತಗಳು ಅತ್ಯಂತ ಕೆಳಮಟ್ಟದಲ್ಲಿ ಸಾಗುತ್ತಿದ್ದವು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಬಿದ್ದ 40 ವಿಕೆಟ್‌ಗಳ ಪೈಕಿ 24 ವಿಕೆಟ್‌ಗಳು ಬೌಲ್ಡ್ ಅಥವಾ ಎಲ್‌ಬಿಡಬ್ಲ್ಯೂ  ಮೂಲಕವೇ ಬಂದಿರುವುದು ಪಿಚ್‌ನ ವಿಚಿತ್ರ ವರ್ತನೆಗೆ ಸಾಕ್ಷಿಯಾಗಿದೆ.

ನಾಯಕ ಬೆನ್ ಸ್ಟೋಕ್ಸ್ ಅಸಮಾಧಾನ!

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 115 ರನ್‌ಗಳ ಜಯ ಸಾಧಿಸಿದರೂ, ನಾಯಕ ಬೆನ್ ಸ್ಟೋಕ್ಸ್ ಪಿಚ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. “ಇಂತಹ ವಿಪರೀತ ಪರಿಸ್ಥಿತಿಗಳು ಟೆಸ್ಟ್ ಕ್ರಿಕೆಟ್‌ನ ಭವಿಷ್ಯಕ್ಕೆ ಒಳ್ಳೆಯದಲ್ಲ. ಇದು ಪಂದ್ಯವನ್ನು ಲಾಟರಿಯನ್ನಾಗಿ ಮಾಡುತ್ತದೆ” ಎಂದು ಸ್ಟೋಕ್ಸ್ ಎಚ್ಚರಿಸಿದ್ದಾರೆ.

ಲಾರ್ಡ್ಸ್ ಮೈದಾನದ ಉಸ್ತುವಾರಿ ಹೊತ್ತಿರುವ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕಳಪೆ ಪಿಚ್ ತಯಾರಿಸಿದ್ದಕ್ಕಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದೆ.

ಏನಿದು ಡಿಮೆರಿಟ್ ಪಾಯಿಂಟ್ ನಿಯಮ?

ಐಸಿಸಿ ನಿಯಮಾವಳಿಗಳ ಪ್ರಕಾರ, ಮೈದಾನವೊಂದಕ್ಕೆ ಸಿಗುವ ಡಿಮೆರಿಟ್ ಪಾಯಿಂಟ್‌ಗಳು 5 ವರ್ಷಗಳ ಕಾಲ ಸಕ್ರಿಯವಾಗಿರುತ್ತವೆ.

  • ಮುಂದಿನ 5 ವರ್ಷಗಳಲ್ಲಿ ಲಾರ್ಡ್ಸ್ ಮೈದಾನವು ಒಟ್ಟು 6 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಅಲ್ಲಿ 12 ತಿಂಗಳುಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ನಿಷೇಧ ಹೇರಲಾಗುತ್ತದೆ.
  • ಒಂದು ವೇಳೆ ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ 12ಕ್ಕೆ ತಲುಪಿದರೆ, ನಿಷೇಧದ ಅವಧಿ 24 ತಿಂಗಳುಗಳಿಗೆ (2 ವರ್ಷ) ವಿಸ್ತರಣೆಯಾಗುತ್ತದೆ.

ಇದನ್ನೂ ಓದಿ: ಬರೋಬ್ಬರಿ 21 ವರ್ಷ… ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿದ ಬಾಂಗ್ಲಾದೇಶ್!

ಲಾರ್ಡ್ಸ್ ಜೊತೆಗೆ, ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದ ಪಿಚ್‌ಗೂ ಐಸಿಸಿ ‘ಅತೃಪ್ತಿಕರ’ ರೇಟಿಂಗ್ ನೀಡಿದೆ. ಅಂದರೆ ಲಾಹೋರ್​ ಪಿಚ್​ ಕೂಡ ಮುಂದಿನ 5 ವರ್ಷಗಳಲ್ಲಿ 6 ಡಿಮೆರಿಟ್ ಪಾಯಿಂಟ್ ಪಡೆದರೆ, ಅಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಪಂದ್ಯವಾಡುವುದನ್ನು ನಿಷೇಧಿಸಲಾಗುತ್ತದೆ.

Published On – 8:57 am, Wed, 10 June 26

Source link

ಗ್ರಾಹಕರ ಗಮನಕ್ಕೆ: ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್! – Kannada News

ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್!
Image Credit source: gettyimages.com

ಬೆಂಗಳೂರು, ಜೂನ್ 10: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತನ್ನ ಗ್ರಾಹಕರಿಗೆ ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದೆ. ಗ್ರಾಹಕರ ಡೇಟಾವನ್ನು ‘ಟೋಟಲ್ ರೆವಿನ್ಯೂ ಮ್ಯಾನೇಜ್‌ಮೆಂಟ್’ ಸಾಫ್ಟ್‌ವೇರ್‌ನಿಂದ ‘ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್’ ತಂತ್ರಜ್ಞಾನಕ್ಕೆ ವರ್ಗಾಯಿಸುವ ಸಲುವಾಗಿ, ಬೆಸ್ಕಾಂ ಒದಗಿಸುವ ಎಲ್ಲಾ ಆನ್‌ಲೈನ್ ಸೇವೆಗಳನ್ನು ಜೂನ್ 10 ರಿಂದ ಜೂನ್ 30 ರವರೆಗೆ ಒಟ್ಟು 21 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಮುಖ್ಯಾಂಶಗಳು

  • ಜೂನ್ 10 ರಿಂದ 30 ರವರೆಗೆ ಬೆಸ್ಕಾಂ ಆನ್‌ಲೈನ್ ಸೇವೆಗಳು ಇರುವುದಿಲ್ಲ.
  • ಸಾಫ್ಟ್‌ವೇರ್ ಡೇಟಾ ವರ್ಗಾವಣೆ ಪ್ರಕ್ರಿಯೆಗಾಗಿ ಈ ತಾಂತ್ರಿಕ ಸ್ಥಗಿತ ಅನಿವಾರ್ಯವಾಗಿದೆ.
  • ಗೂಗಲ್ ಪೇ, ಫೋನ್‌ಪೇ ಮೂಲಕ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶವಿದೆ.

ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ?

ಈ 21 ದಿನಗಳ ಅವಧಿಯಲ್ಲಿ ಬೆಸ್ಕಾಂನ ಅಧಿಕೃತ ಪೋರ್ಟಲ್ ಹಾಗೂ ಆಪ್‌ಗಳ ಮೂಲಕ ಲಭ್ಯವಿರುವ ಈ ಕೆಳಗಿನ ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.

  • ಹೊಸ ವಿದ್ಯುತ್ ಸಂಪರ್ಕಕ್ಕಾಗಿ (New Connection) ಅರ್ಜಿ ಸಲ್ಲಿಕೆ.
  • ಮಾಲೀಕತ್ವದ ಹೆಸರು ವರ್ಗಾವಣೆ (Name Transfer).
  • ಲೋಡ್ ಹೆಚ್ಚಳದ ವಿನಂತಿ (Load Enhancement Request).
  • ಬೆಸ್ಕಾಂ ಅಧಿಕೃತ ವೆಬ್‌ಸೈಟ್/ಗ್ರಾಹಕ ಪೋರ್ಟಲ್ ಮೂಲಕ ಆನ್‌ಲೈನ್ ಬಿಲ್ ಪಾವತಿ.

ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಹಳೆಯ ಟಿಆರ್‌ಎಂ (TRM) ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಿ ಹೊಸ ಐಟಿ ಅಪ್ಲಿಕೇಶನ್‌ಗೆ ಸಂಪೂರ್ಣವಾಗಿ ಪರಿವರ್ತನೆಗೊಳ್ಳಲು ಈ ತಾಂತ್ರಿಕ ಪ್ರಕ್ರಿಯೆಯು ಅನಿವಾರ್ಯವಾಗಿದೆ.

ಇದನ್ನೂ ಓದಿ BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್

ಬಿಲ್ ಪಾವತಿಗೆ ಪರ್ಯಾಯ ಮಾರ್ಗಗಳು

ಬೆಸ್ಕಾಂನ ಸ್ವಂತ ಆನ್‌ಲೈನ್ ಪೋರ್ಟಲ್‌ಗಳು ಕಾರ್ಯನಿರ್ವಹಿಸದಿದ್ದರೂ, ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಯಾವುದೇ ತೊಂದರೆಯಾಗುವುದಿಲ್ಲ. ಗ್ರಾಹಕರು ಪೇಮೆಂಟ್​ಗಾಗಿ ಫೋನ್ ಪೇ (PhonePe), ಗೂಗಲ್ ಪೇ (Google Pay) ಅಥವಾ ಅಮೆಜಾನ್ ಪೇ ಮುಂತಾದ ಯುಪಿಐ (UPI) ಮಾಧ್ಯಮಗಳ ಮೂಲಕ ಎಂದಿನಂತೆ ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಅಲ್ಲದೆ, ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆಯಿಂದಾಗಿ ಗ್ರಾಹಕರ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:49 am, Wed, 10 June 26

Source link

ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಸಚಿವ ಸೋಮಣ್ಣ ಬಿಗ್ ಅಪ್​ಡೇಟ್ – Kannada News

ವಿ ಸೋಮಣ್ಣ ಹಾಗೂ ರೈಲ್ವೆ ಹಳಿಯ ಸಾಂದರ್ಭಿಕ ಚಿತ್ರImage Credit source: PTI

ಬೆಂಗಳೂರು, ಜೂನ್ 10: ರಾಜ್ಯದ ಅತ್ಯಂತ ಪ್ರಮುಖ ಹಾಗೂ ಬಹುನಿರೀಕ್ಷಿತ ರೈಲ್ವೆ ಯೋಜನೆಗಳಲ್ಲೊಂದಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ (Tumakuru-Chitradurga-Davangere Railway Line) ನಿರ್ಮಾಣ ಕಾರ್ಯಕ್ಕೆ ಕೊನೆಗೂ ವೇಗ ಸಿಕ್ಕಿದೆ. ಈ ಮಹತ್ವದ ಯೋಜನೆ 2028 ರ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದ್ದಾರೆ. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು

  • 2028ರ ಫೆಬ್ರವರಿಗೆ ನೇರ ರೈಲು ಮಾರ್ಗ ಓಪನ್.
  • ಶೇ 92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ.
  • ತುಮಕೂರಿನಲ್ಲಿ 32 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿ.

1,801 ಕೋಟಿ ರೂ. ವೆಚ್ಚದ ಯೋಜನೆ: ಅಂತಿಮ ಹಂತದಲ್ಲಿ ಭೂಸ್ವಾಧೀನ

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ತಲಾ ಶೇ 50 ರಷ್ಟು ಆರ್ಥಿಕ ಸಹಭಾಗಿತ್ವದೊಂದಿಗೆ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಈ 191 ಕಿಲೋಮೀಟರ್ ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯ ಪೈಕಿ ಈಗಾಗಲೇ ಶೇಕಡಾ 92 ಕ್ಕೂ ಅಧಿಕ ಭೂಸ್ವಾಧೀನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗದ ಊರುಕೆರೆ-ತಿಮ್ಮರಾಜನಹಳ್ಳಿ ನಡುವಿನ 13.31 ಕಿಲೋಮೀಟರ್ ಉದ್ದದ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ತುಮಕೂರು-ರಾಯದುರ್ಗ ರೈಲು ಮಾರ್ಗವೂ ಸಿದ್ಧ

ಇದೇ ವೇಳೆ, ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ 2,496 ಕೋಟಿ ರೂಪಾಯಿ ವೆಚ್ಚದ 206 ಕಿಲೋಮೀಟರ್ ಉದ್ದದ ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಈ ಪೈಕಿ ಈಗಾಗಲೇ 83 ಕಿಲೋಮೀಟರ್ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ತುಮಕೂರು-ಊರುಕೆರೆ ನಡುವಿನ ಮಾರ್ಗದ ಸುರಕ್ಷತಾ ಪರಿಶೀಲನೆ (Safety Inspection) ಮುಗಿದಿದ್ದು, ಪಾವಗಡ-ದೊಡ್ಡಹಳ್ಳಿ ಸೆಕ್ಷನ್ ಕೂಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಯೋಜನೆಗೆ ಶೇಕಡಾ 97 ರಷ್ಟು ಭೂಸ್ವಾಧೀನ ಮುಗಿದಿದ್ದು, ಬಾಕಿ ಉಳಿದಿರುವ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.

ಸಚಿವ ವಿ. ಸೋಮಣ್ಣ ಅವರ ಲೋಕಸಭಾ ಕ್ಷೇತ್ರವಾದ ತುಮಕೂರಿನಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬರೋಬ್ಬರಿ 32 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು, ನಂದಿಹಳ್ಳಿ ಗೇಟ್ ಸೇರಿದಂತೆ ಹಾಸನ ಮತ್ತು ಬಿದಿರಗುಡಿ ಮಾರ್ಗದ ಬಿ.ಹೆಚ್ ರಸ್ತೆಯ ಮೇಲ್ಸೇತುವೆಗಳನ್ನು ಒಳಗೊಂಡ ಈ ಎಲ್ಲಾ ಕಾಮಗಾರಿಗಳನ್ನು 2026-27ರ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ

ಅರಣ್ಯ ಇಲಾಖೆ ಅನುಮತಿ, ವಿದ್ಯುತ್ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಸ್ಥಳಾಂತರದಂತಹ ತಾಂತ್ರಿಕ ಸವಾಲುಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಅವರಿಗೆ ಸಚಿವರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ 21 ವರ್ಷ… ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿದ ಬಾಂಗ್ಲಾದೇಶ್! – Kannada News

ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 21 ವರ್ಷಗಳ ಬಳಿಕ. ಅಂದರೆ ಕಳೆದ ಎರಡು ದಶಕಗಳಿಂದ ಬಾಂಗ್ಲಾದೇಶ್ ಪಾಲಿಗೆ ಮರೀಚಿಕೆಯಾಗಿದ್ದ ಆಸೀಸ್ ವಿರುದ್ಧದ ಗೆಲುವು ಕೊನೆಗೂ ದಕ್ಕಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜೋಶ್ ಇಂಗ್ಲಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕ ದಾಂಡಿಗ ತಂಝೀದ್ ಹಸನ್ 54 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೇನ್ ಶಾಂತೊ 67 ರನ್​ಗಳ ಕೊಡುಗೆ ನೀಡಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಸದ್ದೀಕ್ ಹೊಸೇನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 70 ಎಸೆತಗಳನ್ನು ಎದುರಿಸಿದ ಮೊಸದ್ದೀಕ್ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 86 ರನ್ ಬಾರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 284 ರನ್​ ಕಲೆಹಾಕಿತು.

285 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಎಸೆತದಲ್ಲೇ ಆಘಾತ ನೀಡುವಲ್ಲಿ ಬಾಂಗ್ಲಾದೇಶ್ ಯಶಸ್ವಿಯಾಯಿತು. ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ಶಾರ್ಟ್ (0) ಕ್ಲೀನ್ ಬೌಲ್ಡ್ ಆಗಿದ್ದರು.

ಈ ಆಘಾತದಿಂದ ಪಾರಾಗುವ ಮುನ್ನವೇ ಮಾರ್ನಸ್ ಲಾಬುಶೇನ್ (1) ವಿಕೆಟ್ ಕಳೆದುಕೊಂಡಿತು. ಇನ್ನು ಜೋಶ್ ಇಂಗ್ಲಿಸ್ 19 ರನ್​ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಅಲೆಕ್ಸ್ ಕ್ಯಾರಿ (47) ಹಾಗೂ ಕ್ಯಾಮರೋನ್ ಗ್ರೀನ್ (52*) ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆ ಮೂಡಿಸಿದ್ದರು.

ಆದರೆ ಬಾಂಗ್ಲಾ ಬೌಲರ್​ಗಳ ಸಂಘಟಿತು ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 42.2 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್​ ಕಲೆಹಾಕಲಷ್ಟೇ ಶಕ್ತರಾದರು. ಈ ಹಂತದಲ್ಲಿ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಇನ್ನು ಪಂದ್ಯದ ಫಲಿತಾಂಶಕ್ಕೆ ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ಅದರಂತೆ ಬಾಂಗ್ಲಾದೇಶ್ ತಂಡವು 86 ರನ್​ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡದ 2ನೇ ಗೆಲುವು.

ಇದಕ್ಕೂ ಮುನ್ನ ಬಾಂಗ್ಲಾದೇಶ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದು 2005 ರಲ್ಲಿ. ಇದಾದ ಬಳಿಕ ಒಮ್ಮೆಯೂ ಕಾಂಗರೂ ಪಡೆಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 21 ವರ್ಷಗಳ ಬಳಿಕ ಗೆಲುವಿನ ನಗೆ ಬೀರುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿದೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝೀದ್ ಹಸನ್ ತಮೀಮ್ , ಸೈಫ್ ಹಸನ್ , ನಜ್ಮುಲ್ ಹೊಸೇನ್ ಶಾಂತೊ ,ಲಿಟ್ಟನ್ ದಾಸ್ (ವಿಕೆಟ್ ಕೀಪರ್ ), ತೌಹಿದ್ ಹೃದೋಯ್,  ಮೊಸದ್ದೀಕ್ ಹೊಸೇನ್ , ಮೆಹಿದಿ ಹಸನ್ ಮಿರಾಝ್ (ನಾಯಕ) , ತನ್ವೀರ್ ಇಸ್ಲಾಂ , ತಸ್ಕಿನ್ ಅಹ್ಮದ್ , ಮುಸ್ತಫಿಝುರ್ ರೆಹಮಾನ್ , ನಹಿದ್ ರಾಣಾ.

ಇದನ್ನೂ ಓದಿ: ಒಂದೇ ಓವರ್​ನಲ್ಲಿ 3 ವಿಕೆಟ್​: ಟೀಮ್ ಇಂಡಿಯಾಗೆ ರೋಚಕ ಜಯ

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಜೋಶ್ ಇಂಗ್ಲಿಸ್ (ನಾಯಕ) , ಕೂಪರ್ ಕೊನೊಲಿ , ಮಾರ್ನಸ್ ಲಾಬುಶೇನ್ , ಅಲೆಕ್ಸ್ ಕ್ಯಾರಿ , ಕ್ಯಾಮರೋನ್ ಗ್ರೀನ್ , ಮ್ಯಾಟ್ ರೆನ್ಶಾ , ಲಿಯಾಮ್ ಸ್ಕಾಟ್ , ಆ್ಯಡಂ ಝಂಪಾ,
ನಾಥನ್ ಎಲ್ಲಿಸ್ , ಕ್ಸೇವಿಯರ್ ಬಾರ್ಟ್ಲೆಟ್.

Published On – 8:36 am, Wed, 10 June 26

Source link

ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ಅಜಿತ್; ಅಪರೂಪದ ನಡೆ – Kannada News

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajit Kumar) ಅವರ ಶೈಲಿಯೇ ವಿಭಿನ್ನ. ಸಾಮಾನ್ಯವಾಗಿ ಅವರು ತಮ್ಮ ಸಿನಿಮಾಗಳ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ, ಆಡಿಯೋ ಲಾಂಚ್‌ಗೆ ಬರೋದಿಲ್ಲ, ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಂಟರ್‌ಟೇನ್ ಮಾಡಲು ಹೋಗುವುದಿಲ್ಲ. ಸ್ಟಾರ್ ಇಮೇಜ್‌ನಿಂದ ಯಾವಾಗಲೂ ದೂರ ಉಳಿಯುವ ಅಜಿತ್, ಇತ್ತೀಚೆಗೆ ತಮ್ಮ ಪುಟ್ಟ ಅಭಿಮಾನಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಸದಾ ಸೈಲೆಂಟ್ ಆಗಿರುವ ನಟನ ಈ ಅಪರೂಪದ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಹೊರತುಪಡಿಸಿ ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ಅಜಿತ್ ಕುಮಾರ್, ಇತ್ತೀಚೆಗೆ ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಸ್ನೇಹಿತನ ಮಕ್ಕಳು ಅಜಿತ್ ಅವರ ದೊಡ್ಡ ಅಭಿಮಾನಿಗಳು. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ, ರೇಸಿಂಗ್ ಡ್ರೆಸ್ ಧರಿಸಿರುವ ಅಜಿತ್ ಹೆಲ್ಮೆಟ್ ಹಿಡಿದುಕೊಂಡು ವಿಡಿಯೋ ಕಾಲ್ ಬಂದಾಗ ಅವರ ಖುಷಿಗೆ ಪಾರವೇ ಇರಲಿಲ್ಲ.
ಅಜಿತ್ ಕುಮಾರ್ ಅವರು ತಮ್ಮ ಗೆಳೆಯನ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಮಾತನಾಡುವಾಗ ಅಜಿತ್ ಅವರು ಆ ಇಬ್ಬರು ಮಕ್ಕಳ ದಿನಚರಿ ಮತ್ತು ಓದಿನ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ‘ಮುಂದಿನ ಬಾರಿ ನಾನು ಖಂಡಿತಾ ನಿಮ್ಮನ್ನು ಖುದ್ದಾಗಿ ಬಂದು ಭೇಟಿ ಮಾಡುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಜೀವನ ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ. ವಿಡಿಯೋ ಕಾಲ್ ಮುಗಿಯುತ್ತಿದ್ದಂತೆ ಆ ಅಣ್ಣ-ತಂಗಿ ಇಬ್ಬರೂ ಸೂಪರ್‌ಸ್ಟಾರ್ ಜೊತೆ ಮಾತನಾಡಿದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕಕ್ಕೆ ಸಿಗದ ನಟನ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ವಿಡಿಯೋ ಕೆಳಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ‘ನೀವೇ ಅತ್ಯಂತ ಅದೃಷ್ಟವಂತ ಹುಡುಗಿ’ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ನಿಮ್ಮ ತಂದೆ ಸಾಕ್ಷಾತ್ ಆ ದೇವರ (ಅಜಿತ್) ಜೊತೆಯೇ ಸ್ನೇಹ ಬೆಳೆಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇದು ಗಾಡ್ ಲೆವೆಲ್ ಫ್ಯಾಮಿಲಿ ಫ್ರೆಂಡ್‌ಶಿಪ್’ ಎಂದು ಅಭಿಮಾನಿಗಳು ಅಜಿತ್ ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್​​ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ

90ರ ದಶಕದಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಜಿತ್, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರೂ ಅದ್ದೂರಿ ಪ್ರಚಾರದಿಂದ ದೂರವೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರೇಸಿಂಗ್ ಸೀಸನ್‌ನ ಬ್ರೇಕ್ ಸಮಯದಲ್ಲಿ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ಅವರ ನಟನೆಯ ‘ವಿದಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಕಂಡಿದ್ದವು. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅಜಿತ್, ದುಃಖದ ನಡುವೆಯೂ ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು ಗೊತ್ತಾ? – Kannada News

ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆImage Credit source: Pinterest

ಇಂದಿನ ವೇಗದ ಜಗತ್ತಿನಲ್ಲಿ ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಮ್ಮ ವ್ಯಕ್ತಿತ್ವ, ಅದೃಷ್ಟ ಮತ್ತು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಎಷ್ಟು ಪ್ರಭಾವ ಬೀರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ಈ ಅಂಕೆಗಳು ನಮ್ಮ ಬದುಕಿನ ಅನೇಕ ನಿರ್ಣಾಯಕ ಅಂಶಗಳನ್ನು ಪ್ರಭಾವಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ, ಅನೇಕರು ತಮ್ಮ ಹುಟ್ಟಿದ ದಿನಾಂಕವನ್ನೇ ಅದೃಷ್ಟ ಸಂಖ್ಯೆ ಎಂದು ಭಾವಿಸುತ್ತಾರೆ. ಆದರೆ, ಸಂಖ್ಯಾಶಾಸ್ತ್ರವು ಮೊಬೈಲ್ ಸಂಖ್ಯೆಗಳ ಕೊನೆಯ ಎರಡು ಅಂಕೆಗಳಿಗೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಏಕೆಂದರೆ, ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ಒಂದು ಸಂಖ್ಯೆ ಇರುತ್ತದೆ – ವಾಹನ, ಮನೆ, ವಿದ್ಯುತ್ ಬಿಲ್ ಹೀಗೆ ಎಲ್ಲದಕ್ಕೂ. ಅದೇ ರೀತಿ, ನಮ್ಮ ಮೊಬೈಲ್ ಸಂಖ್ಯೆಯು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಕನ್ನಡ ಮಾಧ್ಯಮದಲ್ಲಿ ಬಿಡಿ, ಹತ್ತು, ನೂರು ಎಂದು ಬಲಭಾಗದಿಂದ ಎಡಭಾಗಕ್ಕೆ ಲೆಕ್ಕ ಹಾಕಿದಂತೆ, ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು (ಬಿಡಿ ಮತ್ತು ಹತ್ತರ ಸ್ಥಾನ) ಅತ್ಯಂತ ಪ್ರಭಾವಶಾಲಿ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ವಿವಿಧ ಅಂಕೆಗಳ ಸಂಯೋಜನೆ ಮತ್ತು ಅವುಗಳ ಪ್ರಭಾವ:

  • ಕೋಪ ಮತ್ತು ಆವೇಶ: ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು 4 ಮತ್ತು 8 ರ ಸಂಯೋಜನೆಯಲ್ಲಿ ಬಂದಾಗ, ಅದು ಕೋಪ, ತಾಳ್ಮೆ ಮತ್ತು ಆವೇಶವನ್ನು ಹೆಚ್ಚಿಸಬಹುದು. ಇದು ಎಲ್ಲಾ ರಾಶಿಗಳಿಗೂ ಅನ್ವಯಿಸುತ್ತದೆ.
  • ಸಂತೋಷ ಮತ್ತು ತೃಪ್ತಿ: 3 ಮತ್ತು 7 (ಅಥವಾ 7 ಮತ್ತು 3) ರ ಸಂಯೋಜನೆಗಳು ಎಲ್ಲಾ ರಾಶಿಗಳಿಗೂ ಸಂತೋಷ ಮತ್ತು ತೃಪ್ತಿಯನ್ನು ತರುತ್ತವೆ. ಇದು ಬಹಳ ಶುಭಕರವಾದ ಸಂಯೋಜನೆ.
  • ಅದೃಷ್ಟ ಮತ್ತು ಪ್ರಗತಿ: 5 ಮತ್ತು 6 (ಅಥವಾ 6 ಮತ್ತು 5) ಸಂಯೋಜನೆಗಳು ಅದೃಷ್ಟ, ಭೂಯೋಗ, ಕೆಲಸ ಕಾರ್ಯಗಳಲ್ಲಿ ಶುಭ, ಕೀರ್ತಿ ಮತ್ತು ಪ್ರತಿಷ್ಠೆಯನ್ನು ತರುತ್ತವೆ.
  • ವಿದ್ಯಾರ್ಥಿಗಳಿಗೆ: ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡಿಸುವಾಗ, ಕೊನೆಯ ಅಂಕೆಗಳು 3 ಮತ್ತು 2 (ಅಥವಾ 2 ಮತ್ತು 3) ಇರುವುದು ಒಳ್ಳೆಯದು. ಇದು ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ರಾಜಯೋಗ: 9 ಮತ್ತು 1 (ಅಥವಾ 1 ಮತ್ತು 9) ಸಂಯೋಜನೆಗಳು ರಾಜಯೋಗವನ್ನು ತರುತ್ತವೆ ಎಂದು ನಂಬಲಾಗಿದೆ.
    ಒತ್ತಡ: 4 ಮತ್ತು 3 (ಅಥವಾ 3 ಮತ್ತು 4) ಹಾಗೂ 1 ಮತ್ತು 8 (ಅಥವಾ 8 ಮತ್ತು 1) ಸಂಯೋಜನೆಗಳು ಕೆಲವೊಮ್ಮೆ ಒತ್ತಡ ಮತ್ತು ಆತಂಕವನ್ನು ಉಂಟುಮಾಡಬಹುದು.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸಂಖ್ಯೆಗಳು ನಮ್ಮ ಗುಣಗಳನ್ನು, ನಾವು ಹುಟ್ಟಿದ ವಂಶವನ್ನು, ಮತ್ತು ನಮ್ಮ ಹೆಸರನ್ನು ಅವಲಂಬಿಸಿ ಪ್ರಭಾವ ಬೀರುತ್ತವೆ. ಸಾತ್ವಿಕ ಗುಣದವರಿಗೆ ಸಾತ್ವಿಕ ಸಂಖ್ಯೆಗಳು ಸಿಕ್ಕರೆ ಅದು ಸಕಾರಾತ್ಮಕ ಪ್ರಭಾವವನ್ನು ದ್ವಿಗುಣಗೊಳಿಸುತ್ತದೆ. ಒಂದು ವೇಳೆ ಒಳ್ಳೆಯ ವ್ಯಕ್ತಿಗಳಿಗೆ ರಜೋಗುಣದ ಸಂಖ್ಯೆಗಳು ಸಿಕ್ಕರೆ, ಅದು ಅವರ ಕೋಪವನ್ನು ಹೆಚ್ಚಿಸಿ, ಗುಣಗಳಲ್ಲಿ ಬದಲಾವಣೆಯನ್ನು ತರಬಹುದು.

ವೃತ್ತಿಪರರಿಗೆ ನಿರ್ದಿಷ್ಟ ಸಂಖ್ಯೆಗಳು:

  • ವ್ಯಾಪಾರಸ್ಥರು: ವ್ಯಾಪಾರದಲ್ಲಿ ಯಶಸ್ಸು ಮತ್ತು ಹಣ ಗಳಿಕೆಗೆ 5 (ಬುಧನ ಸಂಖ್ಯೆ) ಮತ್ತು 3 (ಗುರುವಿನ ಸಂಖ್ಯೆ) ಸಂಯೋಜನೆಗಳು ಅತ್ಯಂತ ಶುಭಕರ.
  • ವೈದ್ಯರು: ವೈದ್ಯ ವೃತ್ತಿಯಲ್ಲಿರುವವರಿಗೆ 1 ಮತ್ತು 9 ಸಂಖ್ಯೆಗಳು ಒಳ್ಳೆಯದು.
  • ವಿದ್ಯಾಸಂಸ್ಥೆಗಳ ಸಿಬ್ಬಂದಿ: ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ 2 ಮತ್ತು 5 ಸಂಖ್ಯೆಗಳು ಹೆಚ್ಚು ಶುಭವನ್ನು ತರುತ್ತವೆ.
  • ಸಿನಿಮಾ ರಂಗ (ಸಾಹಿತಿಗಳು, ನಿರ್ದೇಶಕರು): ಸಿನಿಮಾ ಕ್ಷೇತ್ರದಲ್ಲಿರುವ ಸಾಹಿತಿಗಳು, ನಿರ್ದೇಶಕರಿಗೆ 2 ಮತ್ತು 6 ಸಂಖ್ಯೆಗಳು ಶುಭಕರ ಎಂದು ಹೇಳಲಾಗುತ್ತದೆ.

ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದ್ದರೂ, ಪ್ರತಿಯೊಂದು ಸಂಖ್ಯೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ, ನಿಮ್ಮ ಜೀವನದ ಹಾದಿಯನ್ನು ಮತ್ತಷ್ಟು ಶುಭಕರವಾಗಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಮಳೆ ಬೆನ್ನಲ್ಲೇ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ – Kannada News

ಮಳೆ ಬೆನ್ನಲ್ಲೇ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ

ಬೆಂಗಳೂರು, ಜೂನ್ 10: ಇಂದು ಕರ್ನಾಟಕದ ಪ್ರಮುಖ ನಗರಗಳು ಹಾಗೂ ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ತೃಪ್ತಿಕರವಾಗಿದೆ. ಇತ್ತೀಚಿನ ಮಳೆಯ ಕಾರಣದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ.

ಮುಖ್ಯಾಂಶಗಳು

  • ಇಂದಿನ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಉತ್ತಮ ಶ್ರೇಣಿಯಲ್ಲಿದೆ.
  • ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಕುಸಿದಿದೆ.
  • ಮೈಸೂರು, ಮಂಗಳೂರು ಮತ್ತು ಗದಗದ ಗಾಳಿಯ ಗುಣಮಟ್ಟ ಆರೋಗ್ಯಕರವಾಗಿದೆ.

‘ಉತ್ತಮ’ ಶ್ರೇಣಿಯಲ್ಲಿ ಸಿಲಿಕಾನ್ ಸಿಟಿ!

ರಾಜಧಾನಿ ಬೆಂಗಳೂರಿನಲ್ಲಿ ಇಂದು ಜೂನ್ 10 ರಂದು ವಾಯು ಗುಣಮಟ್ಟ ಸೂಚ್ಯಂಕವು 15 ರಿಂದ 18 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಉತ್ತಮ ಶ್ರೇಣಿಗೆ ಸೇರುತ್ತದೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಬೀಸುತ್ತಿರುವ ತಂಪಾದ ಗಾಳಿಯಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.

ಪ್ರಮುಖ ಮಾಲಿನ್ಯಕಾರಕಗಳಾದ PM2.5 ಕೇವಲ 8 µg/m³ ಮತ್ತು PM10 ಪ್ರಮಾಣ 13 µg/m³ ನಷ್ಟಿದೆ. ಸಾಮಾನ್ಯವಾಗಿ ಬಿಟಿಎಂ ಲೇಔಟ್, ಹೆಬ್ಬಾಳ ಮತ್ತು ಜಯನಗರದಂತಹ ಜನನಿಬಿಡ ಪ್ರದೇಶಗಳಲ್ಲೂ ಇಂದು ವಾಯು ಗುಣಮಟ್ಟವು ಅತ್ಯಂತ ಆರೋಗ್ಯಕರವಾಗಿದೆ. ಇದರಿಂದಾಗಿ ವೃದ್ಧರು, ಮಕ್ಕಳು ಹಾಗೂ ಉಸಿರಾಟದ ತೊಂದರೆ ಇರುವವರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಕರ್ನಾಟಕದ ಇತರೆ ನಗರಗಳ AQI ಸ್ಥಿತಿ ಹೀಗಿದೆ

  • ಗದಗ: 20 (ಅತ್ಯಂತ ಉತ್ತಮ)
  • ಚಿಕ್ಕಮಗಳೂರು: 25 (ಉತ್ತಮ)
  • ಮೈಸೂರು: 33 (ಉತ್ತಮ)
  • ಬಾಗಲಕೋಟೆ ಮತ್ತು ಬೆಳಗಾವಿ: 35 – 45 ರ ಆಸುಪಾಸು (ಉತ್ತಮ)
  • ಮಂಗಳೂರು: 28 (ಉತ್ತಮ – ಕರಾವಳಿ ತೀರದ ತಂಗಾಳಿ)

ವಾಯು ಗುಣಮಟ್ಟ ಸೂಚ್ಯಂಕವು 0-50 ರ ಒಳಗಿದ್ದರೆ ಅದನ್ನು ‘ಉತ್ತಮ’ (Good) ಎಂದೂ, 51-100 ರಷ್ಟಿದ್ದರೆ ‘ಸಾಧಾರಣ’ (Moderate) ಎಂದೂ ಪರಿಗಣಿಸಲಾಗುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳು ಇಂದು 50 ಕ್ಕಿಂತ ಕಡಿಮೆ ಸೂಚ್ಯಂಕವನ್ನು ಹೊಂದುವ ಮೂಲಕ ಹಸಿರು ವಲಯದಲ್ಲಿ ಗುರುತಿಸಿಕೊಂಡಿವೆ. ಮುಂಬರುವ ದಿನಗಳಲ್ಲಿ ಮಳೆ ಮುಂದುವರಿಯುವುದರಿಂದ ಗಾಳಿಯ ಗುಣಮಟ್ಟ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version