ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ದರ್ಶನ್ (Darshan) ಪರ ವಕೀಲರು ‘ಬಾಸ್’ ಸಿನಿಮಾಗೆ ಪ್ರಮಾಣಪತ್ರ ನೀಡಬಾರದು ಎಂದು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ‘ಬಾಸ್’ ಚಿತ್ರದ ನಟ ತನುಷ್ ಶಿವಣ್ಣ ಅವರು ಮಾತನಾಡಿದ್ದಾರೆ. ‘ಅವರು ಸಿನಿಮಾವನ್ನೇ ನೋಡಿಲ್ಲ. ಹಾಗಿದ್ದಮೇಲೆ ಅವರು ಹೇಗೆ ನೋಟಿಸ್ ಕಳಿಸುತ್ತಾರೆ? ನಾವು ಯಾವ ವಿಷಯದ ಮೇಲೆ ಸಿನಿಮಾ ಮಾಡಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಸೆನ್ಸಾರ್ ಮಂಡಳಿಗೆ ಜವಾಬ್ದಾರಿ ಇದೆ. ಅವರು ತಮ್ಮ ಕೆಲಸ ಮಾಡುತ್ತಾರೆ. ಇನ್ನೇನು ನಮ್ಮ ಸಿನಿಮಾಗೆ ಪ್ರಮಾಣಪತ್ರ ಸಿಗಬೇಕಿತ್ತು. ಆದರೆ ಈಗ ನೋಟಿಸ್ ಕಳಿಸಿದ್ದರಿಂದ ನಮಗೆ ತುಂಬಾ ನಷ್ಟ ಆಗಿದೆ. ರೇಣುಕಾಸ್ವಾಮಿ ಘಟನೆ ಜೊತೆ ಕೆಲವು ವಿಷಯಗಳು ಮ್ಯಾಚ್ ಆಗಿರಬಹುದು. ಆದರೆ ಇದು ಅದೇ ಕಥೆ ಅಂತ ನಿರ್ಧಾರಕ್ಕೆ ಬರೋಕೆ ಆಗಲ್ಲ. ನಾವು ಆ ವಿಷಯ ಇಟ್ಟುಕೊಂಡು ಸಿನಿಮಾ ಮಾಡೋಕೆ ಕೂಡ ಆಗಲ್ಲ’ ಎಂದು ತನುಷ್ ಶಿವಣ್ಣ (Tanush Shivanna) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಳದಿ ಶಾಸ್ತ್ರದ ಕಲರ್​ಫುಲ್ ಫೋಟೋ ಗ್ಯಾಲರಿ

Source link

ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರ, ಒಡಿಶಾದಲ್ಲಿ ಎನ್​ಡಿಎಗೆ ಭರ್ಜರಿ ಗೆಲುವು; ಕಾಂಗ್ರೆಸ್​ಗೆ ಮುಖಭಂಗ

ನವದೆಹಲಿ, ಮಾರ್ಚ್ 16: ಬಿಹಾರದ ಎಲ್ಲಾ 5 ರಾಜ್ಯಸಭಾ ಸ್ಥಾನಗಳು ಹಾಗೂ ಒಡಿಶಾದಲ್ಲಿ 2 ಸ್ಥಾನಗಳಲ್ಲಿ ಎನ್​ಡಿಎ ಗೆಲುವು ಸಾಧಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಮೂವರು NDA ಅಭ್ಯರ್ಥಿಗಳು ಇಂದು ರಾಜ್ಯದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Elections) ಗೆಲುವು ಸಾಧಿಸಿದ್ದಾರೆ. ಜೆಡಿಯು ಪಕ್ಷದ ಕೇಂದ್ರ ಸಚಿವ ರಾಮ್ ನಾಥ್ ಠಾಕೂರ್, ಬಿಜೆಪಿ ನಾಯಕ ಶಿವೇಶ್ ಕುಮಾರ್ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಅಧ್ಯಕ್ಷ ಉಪೇಂದ್ರ ಕುಶ್ವಾಹ ಕೂಡ ಜಯಗಳಿಸಿದ್ದಾರೆ.

10 ರಾಜ್ಯಗಳಾದ್ಯಂತ 37 ರಾಜ್ಯಸಭಾ ಸ್ಥಾನಗಳಿಗೆ ಇಂದು (ಮಾರ್ಚ್ 16) ಚುನಾವಣೆ ನಡೆದಿತ್ತು. ಹಲವಾರು ಹಾಲಿ ಸದಸ್ಯರ ಅವಧಿ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ, ಇಂದು ಮತದಾನ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು. ಸಂಜೆ 4 ಗಂಟೆಯವರೆಗೆ ಮತದಾನ ನಡೆದಿತ್ತು. ಮತ ಎಣಿಕೆ ಇಂದು ಸಂಜೆ 5 ಗಂಟೆಗೆ ಪ್ರಾರಂಭವಾಗಿತ್ತು. ಚುನಾವಣೆಗೂ ಮೊದಲೇ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿಹಾರದಲ್ಲಿ 5, ಒಡಿಶಾದಲ್ಲಿ 4 ಮತ್ತು ಹರಿಯಾಣದಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರಮುಖ ಅಭ್ಯರ್ಥಿಗಳಲ್ಲಿ ಬಿಹಾರದ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಕೂಡ ಇದ್ದರು. ಅವರಿಬ್ಬರೂ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ; ಬಿಹಾರದಿಂದ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಕಣಕ್ಕೆ

ಜೆಡಿಯು ನಾಯಕ ನಿತೀಶ್ ಕುಮಾರ್ 44 ಶಾಸಕರಿಂದ ಮತಗಳನ್ನು ಪಡೆದರು. ನಿತಿನ್ ನಬಿನ್ 44 ಶಾಸಕರ ಬೆಂಬಲವನ್ನು ಪಡೆದರು. ರಾಷ್ಟ್ರೀಯ ಲೋಕ ಮೋರ್ಚಾ ನಾಯಕ ಉಪೇಂದ್ರ ಕುಶ್ವಾಹ ಶಾಸಕರಿಂದ 42 ಮತಗಳನ್ನು ಪಡೆದರು. ರಾಮನಾಥ್ ಠಾಕೂರ್ ಕೂಡ 42 ಶಾಸಕರ ಬೆಂಬಲವನ್ನು ಪಡೆದರು. ವಿರೋಧ ಪಕ್ಷದ ಮಹಾಘಟಬಂಧನ್ ಮತದಾನ ಪ್ರಕ್ರಿಯೆಯಲ್ಲಿ ಎಡವಿದ್ದು, ಕಾಂಗ್ರೆಸ್‌ನ ಮೂವರು ಶಾಸಕರು ಮತ್ತು ಆರ್‌ಜೆಡಿಯ ಒಬ್ಬರು ಮತದಾನಕ್ಕೆ ಗೈರುಹಾಜರಾಗಿದ್ದರು.

ಮಹಾರಾಷ್ಟ್ರದಲ್ಲಿ 7 ಸ್ಥಾನಗಳು, ತಮಿಳುನಾಡಿನಲ್ಲಿ 6, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 5, ಒಡಿಶಾದಲ್ಲಿ 4, ಅಸ್ಸಾಂನಲ್ಲಿ 3, ಹರಿಯಾಣ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ತಲಾ 2 ಮತ್ತು ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ರಾಜ್ಯಸಭಾ ಚುನಾವಣೆ ನಡೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ 8 ಹಿರಿಯ IAS ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಬೆಂಗಳೂರು, (ಮಾರ್ಚ್ 16): ಕರ್ನಾಟಕ ವಿಧಾನಸಭೆ ಅಧಿವೇಶನ (Karnataka Assembly Session 2026) ಇಂದು (ಮಾರ್ಚ್ 16) ಅಚ್ಚರಿಯ ಘಟನೆಗೆ ಸಾಕ್ಷಿಯಾಯ್ತು. ಸದನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ಕೊಡುತ್ತಿಲ್ಲ ಎಂದು ಸಿಟ್ಟಾದ ಸ್ಪೀಕರ್ ಯು.ಟಿ.ಖಾದರ್ (UT Khader) ಸಭಾತ್ಯಾಗ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ಬಜೆಟ್ ಕಲಾಪದ (Budget Session ) 7 ನೇ ದಿನವಾದ ಇವತ್ತು ಕೂಡ ಕಲಾಪ ನಡೆಸಲು ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಮುನಿಸಿಕೊಂಡು ಪೀಠದಿಂದ ಹೊರಹೋದರು. ಇದರ ಬೆನ್ನಲ್ಲೇ ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೇ  ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್​ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಯಾವೆಲ್ಲಾ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

ಯಾವ್ಯಾವ ಇಲಾಖೆಯ ಕಾರ್ಯದರ್ಶಿಗೆ ಸೋಟಿಸ್?

ಇನ್ನು ಸ್ಪೀಕರ್ ಅಸಮಧಾನಗೊಂಡು ಎದ್ದು ಹೋಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಬೇಸರಗೊಂಡಿದ್ದು, ಅಧಿವೇಶನದಲ್ಲಿ ಶಾಸಕರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡದ ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್​ ಅವರು 8 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಈ ಕೆಳಗಿನ ಬರೋಬ್ಬರಿ 8 ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲಾಗಿದೆ.

  • ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್​. ವಿನೋತ್ ಪ್ರಿಯಾ
  • ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್​ ರಾಜ್​ ಕೆ.ಪಿ
  • ಸಾರಿಗೆ ಇಲಾಖೆ ಕಾರ್ಯದರ್ಶಿ-ಎನ್​.ವಿ ಪ್ರಸಾದ್
  • ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ- ಆರ್​.ಗೀರಿಶ್​
  • ಲೋಕಪಯೋಗಿ ಇಲಾಖೆ ಕಾರ್ಯದರ್ಶಿ-ಅಮಲಾನ್ ಆದಿತ್ಯ ಬಿಸ್ವಾಸ್
  • ಕಂದಾಯ ಇಲಾಖೆ-ರಾಜೇಂದರ್​ ಕುಮಾರ್ ಕಟಾರಿಯಾ

ಇದನ್ನೂ ಓದಿ: ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಸರ್ಕಾರಕ್ಕೆ ತೀವ್ರ ಮುಜುಗರ, ಶಾಸಕರ ಹಕ್ಕು, ಸದನದ ಘನತೆಗೆ ಚ್ಯುತಿಯುಂಟು ಮಾಡಿರುತ್ತದೆ. ಸದನದಲ್ಲಿ ಪಶ್ನೆಗಳಿಗೆ ಏಕೆ ಉತ್ತರ ನೀಡಿಲ್ಲ? ಉತ್ತರಿಸದ ಬಗ್ಗೆ ಲಿಖಿತ ಸಮಜಾಯಿಸಿ ನೀಡುವಂತೆ ಸೂಚನೆ ನೀಡಲಾಗಿದೆ.
ಜೊತೆಗೆ ಇಂದೇ ವಿಧಾನ ಸಭೆ ಕಾರ್ಯದರ್ಶಿಗೆ ಉತ್ತರ ಒದಗಿಸುವಂತೆ ಸೂಚಿಸಲಾಗಿದೆ. ಉತ್ತರ ಒದಗಿಸಿದೆ ಇದ್ದರೆ ಶಾಸಕರಿಗೆ ಸಚಿವರ ಮೂಲಕ ವಿಳಂಬಕ್ಕೆ ಕಾರಣ ನೀಡಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.

ಸಚಿವರ ನಡೆಗೆ ಸ್ಫೀಕರ್​ ಕೆಂಡಾಮಂಡಲ

ಬಜೆಟ್ ಕಲಾಪದ 7 ನೇ ದಿನವಾದ ಇವತ್ತು ಕೂಡ ಕಲಾಪ ನಡೆಸಲು ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಮುನಿಸಿಕೊಂಡು ಪೀಠದಿಂದ ಹೊರಹೋದರು. ಸಚಿವರ ಕಾರ್ಯವೈಖರಿಗೆ ಸದನದಲ್ಲೇ ಗರಂ ಆದ ಸ್ಪೀಕರ್, 230ರ ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಮಾತ್ರ ಸಚಿವರು ಉತ್ತರಿಸಿದ್ದಾರೆ. ಈ ಬಗ್ಗೆ ಮೊನ್ನೆಯೇ ಮಂತ್ರಿಗಳು ಮತ್ತು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲಾಗಿತ್ತು. ಕಲಾಪ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ, ಶಾಸಕರ ಸಮಸ್ಯೆಗಳಿಗಾಗಿ. ಎಲ್ಲಾ ಪಕ್ಷಗಳ ಶಾಸಕರೂ ಪ್ರಶ್ನೆಗಳನ್ನ ಕೇಳುತ್ತಾರೆ. ನಿಯಮಾವಳಿ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿಲ್ಲ ಅಂದ್ರೆ ಹೇಗೆ? ಹಾಗಾದರೆ ಶಾಸಕರು ಸದನಕ್ಕೆ ಯಾಕೆ ಬರಬೇಕು ಹೇಳಿ? ಸರಿಯಾದ ಸಮಯಕ್ಕೆ ಮಂತ್ರಿಗಳು ಬರುವುದಿಲ್ಲ. ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಭಾರಿ ಸೂಚನೆ ನೀಡಿದ್ದೇನೆ. ಇಂದು ಸೇರಿ ಐದನೇ ಬಾರಿಯೂ ಸುಧಾರಿಸದಿದ್ದರೆ ಏನು ಮಾಡುವುದು? ಸುಧಾರಣೆ ಕಾಣಲೇ ಇಲ್ಲ. ಹೀಗಾದರೆ ಸದನ ನಡೆಸುವುದು ಹೇಗೆ? ಹಾಗಾಗಿ ಸಚಿವರು ಬಂದು ಉತ್ತರ ಹೇಳುವವರೆಗೂ ಸದನ ನಡೆಸುವುದಿಲ್ಲ ಎಂದೇಳಿ ಸ್ಪೀಕರ್ ಖಾದರ್ ಪೀಠದಿಂದ ಎದ್ದು ಹೋಗಿದ್ದರು.

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ

ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್​​ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Source link

ಕೇರಳ ಚುನಾವಣೆಗೆ ಬಿಜೆಪಿಯ 47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ನೇಮಮ್​ನಿಂದ ರಾಜೀವ್ ಚಂದ್ರಶೇಖರ್ ಕಣಕ್ಕೆ

ನವದೆಹಲಿ, ಮಾರ್ಚ್ 16: ಕೇರಳಂ (ಕೇರಳ) ಚುನಾವಣೆಗೆ (Kerala Assembly Elections ) ಬಿಜೆಪಿ 47 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇರಳ ರಾಜ್ಯದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹಲವಾರು ಪ್ರಮುಖ ನಾಯಕರನ್ನು ಕಣಕ್ಕಿಳಿಸಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಒಬ್ಬರು. ಅವರು ನೇಮಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಸ್ಥಾನವು ಬಿಜೆಪಿ ಮತ್ತು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್​​ವಾದಿ) (ಸಿಪಿಐಎಂ) ನಡುವೆ ನೇರ ಸ್ಪರ್ಧೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಸಿಪಿಐಎಂ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆಯಿರುವ ಕಜಕ್ಕೊಟ್ಟಂ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ನಾಯಕ ಕೆ. ಸುರೇಂದ್ರನ್ ಮಂಜೇಶ್ವರದಿಂದ ಸ್ಪರ್ಧಿಸಲಿದ್ದಾರೆ. ಅಲ್ಲಿ ಬಿಜೆಪಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ

ಹಿರಿಯ ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಅವರನ್ನು ಪಾಲಕ್ಕಾಡ್‌ನಿಂದ ಕಣಕ್ಕಿಳಿಸಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಮುಖ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ವಟ್ಟಿಯೂರ್ಕಾವುದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ಕ್ಷೇತ್ರವು ಸಿಪಿಐಎಂ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಒಳಗೊಂಡ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ

2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಸ್ಪರ್ಧಿಸಿದ್ದ ನವ್ಯಾ ಹರಿದಾಸ್ ಅವರಿಗೆ ಈ ಬಾರಿ ಬಿಜೆಪಿ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದೆ. ನವ್ಯಾ ಹರಿದಾಸ್ ಕೋಝಿಕ್ಕೋಡ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಹಿರಿಯ ಕೆ. ಕರುಣಾಕರನ್ ಅವರ ಪುತ್ರಿ ಮತ್ತು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರ ಸಹೋದರಿಯಾದ ಪದ್ಮಜಾ ವೇಣುಗೋಪಾಲ್ ಅವರನ್ನು ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.

ಇತ್ತೀಚೆಗೆ ಕೇರಳಂ ಎಂದು ಮರುನಾಮಕರಣಗೊಂಡಿರುವ ಕೇರಳದಲ್ಲಿ ಏಪ್ರಿಲ್ 9ರಂದು 140 ಕ್ಷೇತ್ರಗಳ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಫ್ಯಾನ್ಸ್ ಗೆ ಶುಭ ಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂಗೆ ಅಂಟಿದ್ದ ಸೂತಕ ಕೊನೆಗೂ ನಿವಾರಣೆ

ಮಾರ್ಚ್ 28ರಿಂದಲೇ ಐಪಿಎಲ್-2026 (IPL 2026)​ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್​​ ಹೈದರಾಬಾದ್ ನಡುವೆ ಓಪನಿಂಗ್ ಮ್ಯಾಚ್ ನಡೆಯಲಿದೆ. ಆದ್ರೆ ಇದು ಕನ್ಫರ್ಮ್ ಆಗಿರಲಿಲ್ಲ. ಯಾಕಂದ್ರೆ ರಾಜ್ಯ ಸರ್ಕಾರ ಇದೂವರೆಗೂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಗೆ ಅನುಮತಿ ನೀಡಿರಲಿಲ್ಲ. ಆದ್ರೆ, ಇಂದು (ಮಾರ್ಚ್ 16) ಬರೋಬ್ಬರಿ 10 ತಿಂಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡುವುದಕ್ಕೆ ಸರ್ಕಾರ (Karnataka government )ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಇಷ್ಟು ದಿನ ಇದ್ದ ಅಡೆತಡೆಗಳು ಕೊನೆಗೂ ದೂರ ಆಗಿವೆ.

ಕೆಎಸ್ಸಿಗೆ ಸರ್ಕಾರದ ಸಲಹೆ

ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಇಂದು (ಮಾರ್ಚ್ 16) ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ, ಪೊಲೀಸ್ ಇಲಾಖೆ, ಮತ್ತು ಕೆಎಸ್‌ಸಿಎ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದು, ಕೆಎಸ್ಸಿಗೆ ಕೆಲಸ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಚಿನ್ನಸ್ವಾಮಿಯಲ್ಲಿ ಮುಖ್ಯವಾಗಿ ಸುರಕ್ಷತೆ ಇರಬೇಕು, ತಜ್ಞರ ತಂಡ ನೀಡಿದ್ದ ವರದಿಯಂತೆ ಎಲ್ಲಾ ನಿಯಮ ಪಾಲಿಸಬೇಕು, ಗೇಟ್ ದೊಡ್ಡದು ಇರಲಿ,  ಆ್ಯಂಬುಲೆನ್ಸ್ ಇರಬೇಕು, ಫೈರ್ ವಾಹನ ಇರಬೇಕು, ನೀರಿನ ವ್ಯವಸ್ಥೆ ಇರಬೇಕು. ಹೀಗೆ  ಕೆಎಸ್​​ಸಿಎಗೆ ಹತ್ತು ಹಲವು ಸಲಹೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: IPL 2026: ಇಲ್ಲಿದೆ ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ, ಸೇವ್ ಮಾಡಿಟ್ಟುಕೊಳ್ಳಿ

RCBಯ 5 ಪಂದ್ಯಗಳ ಜತೆ ಪ್ಲೇ ಆಫ್‌ -ಸಮಿಸ್

ವಿಶ್ವದ ಅತೀ ದೊಡ್ಡ ಟೂರ್ನಮೆಂಟ್, ಈ ಬಾರಿ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಾಕಂದ್ರೆ ಹೋಮ್ ಪಂದ್ಯಗಳಲ್ಲಿ ಕೇವಲ 5 ಪಂದ್ಯ ಮಾತ್ರ ಬೆಂಗಳೂರಿನಲ್ಲಿ ಆಡಿಸಲು ಆರ್ ಸಿಬಿ ಮ್ಯಾನೇಜ್ಮೆಂಟ್ ತಿಳಿಸಿತ್ತು. ಆದ್ರೆ ಬಿಸಿಸಿಐ ಮಾತ್ರ ಫ್ಯಾನ್ಸ್ ಶುಭ ಸುದ್ದಿ ನೀಡಿದೆಯಂತೆ. ಆರ್ ಸಿಬಿಯ 5 ಪಂದ್ಯದ ಜತೆ ಒಂದು ಪ್ಲೇ ಆಫ್ ಪಂದ್ಯ ಮತ್ತು ಸೆಮಿ ಫೈನಲ್ ಮ್ಯಾಚ್ ಸಹ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆಯಂತೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಕೆಡಿ’ ಕೂಡ ಇದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾಗೆ ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಈ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನೋರಾ ಫತೇಹಿ (Nora Fatehi) ಅವರು ಡ್ಯಾನ್ಸ್ ಮಾಡಿದ್ದಾರೆ. ಆದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಆದರೆ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ (Vulgar Lyrics) ಇದೆ ಎಂಬ ಕಾರಣಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಅವರು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಅವರು ಹಾಡಿದ್ದಾರೆ. ಹಿಂದಿ ವರ್ಷನ್​ಗೆ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ. ಈ ಹಾಡಿನ ಸಾಹಿತ್ಯದಲ್ಲಿ ಮದ್ಯಪಾನದ ಬಗ್ಗೆ ಹೇಳಲಾಗಿದ್ದರೂ ಕೂಡ ಡಬಲ್ ಮೀನಿಂಗ್ ಇದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಜನರಿಂದ ಈ ಹಾಡಿಗೆ ನೆಗೆಟಿವ್ ಕಮೆಂಟ್​ಗಳು ಬಂದಿವೆ.

‘ಇಷ್ಟು ಕಳಪೆ ಸಾಹಿತ್ಯದ ಹಾಡು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕಳಪೆ ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು. ಪ್ರೇಮ್ ಅವರೇ, ನಿಮ್ಮ ಮೇಲೆ ಗೌರವ ಇದೆ. ಆದರೆ ಕನ್ನಡಕ್ಕೆ ಇಂಥ ಹಾಡು ಬೇಡ’ ಎಂಬಿತ್ಯಾದಿಯಾಗಿ ಪ್ರೇಕ್ಷಕರು ಕಮೆಂಟ್ ಮಾಡಿದ್ದಾರೆ.

ಇನ್ನು, ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ.

‘ನನ್ನ ಟೈಮ್​ಲೈನ್​​ನಲ್ಲಿ ಈ ಹಾಡಿನ ತುಣುಕು ಕಾಣಿಸಿತು. ನಾನು ಸರಿಯಾಗಿ ಕೇಳಿಸಿಕೊಂಡಿದ್ದೇನೋ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಲು ಎರಡು ಬಾರಿ ಪ್ಲೇ ಮಾಡಬೇಕಾಯಿತು. ಗೀತರಚನಕಾರರು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರ ಆಗುತ್ತದೆ’ ಎಂದು ಅರ್ಮಾನ್ ಮಲಿಕ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಅರ್ಮಾನ್ ಮಲಿಕ್ ಅವರ ಪೋಸ್ಟ್​​ಗೆ ಕಮೆಂಟ್ ಮಾಡಿರುವ ಅನೇಕರು ಸಹಮತ ಸೂಚಿಸಿದ್ದಾರೆ. ಹಾಡಿನ ಸಾಹಿತ್ಯ ತುಂಬಾ ಅಶ್ಲೀಲವಾಗಿದೆ. ಚಿತ್ರರಂಗದವರೇ ಇದರ ವಿರುದ್ಧ ಧ್ವನಿ ಎತ್ತಿರುವುದು ಸಮಾಧಾನಕರ ಸಂಗತಿ ಎಂದು ಜನರು ಕಮೆಂಟ್ ಮಾಡಿದ್ದಾರೆ. ಇಂಥ ಸಾಹಿತ್ಯವನ್ನು ಯಾರು ಒಪ್ಪುತ್ತಾರೆ? ಗಾಯಕರು ಇಂಥದ್ದನ್ನು ಹಾಡನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಜನರಿಂದ ಬಂದಿದೆ.

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು:

‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ವಿರುದ್ಧ ಮಹಿಳಾ ಸಂಘಗಳು ಧ್ವನಿ ಎತ್ತುವ ಸಾಧ್ಯತೆ ಹೆಚ್ಚಿದೆ. ಇದರಿಂದ ಚಿತ್ರತಂಡಕ್ಕೆ ತೊಂದರೆ ಆಗಬಹುದು. ಕೆಲವೇ ದಿನಗಳ ಹಿಂದೆ ಖ್ಯಾತ ರ‍್ಯಾಪ್ ಸಿಂಗರ್ ಬಾದ್​ಶಾ ಅವರು ಹರಿಯಾಣ್ವಿ ಭಾಷೆಯ ‘ಟಟೀರಿ’ ಹಾಡಿನಲ್ಲಿ ಇದೇ ರೀತಿಯ ಅಶ್ಲೀಲ ಸಾಹಿತ್ಯ ಬಳಸಿದ್ದರು. ಅದರಿಂದಾಗಿ ಅವರಿಗೆ ಮಹಿಳಾ ಆಯೋಗ ನೋಟೀಸ್ ನೀಡಿತು. ವಿರೋಧ ವ್ಯಕ್ತವಾದ ಬಳಿಕ ಬಾದ್​ಶಾ ಅವರು ಆ ಹಾಡನ್ನು ಡಿಲೀಟ್ ಮಾಡಬೇಕಾಯಿತು. ಆ ಘಟನೆಯ ಬೆನ್ನಲ್ಲೇ ‘ಸರ್ಸೆ ನಿನ್ನ ಸರ್ಸೆ’ ರೀತಿಯ ಕಳಪೆ ಸಾಹಿತ್ಯ ಇರುವ ಹಾಡು ಬಿಡುಗಡೆ ಆಗಿದ್ದು, ಜನಾಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ಸೇರಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಅಹಮದಾಬಾದ್, ಮಾರ್ಚ್ 16: ಎಲ್‌ಪಿಜಿ ಸಾಗಿಸುವ ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಇರಾನಿನ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಲು ಅನುಮತಿ ನೀಡಿದ್ದರು. ಅವುಗಳಲ್ಲಿ ಒಂದು ಶಿವಾಲಿಕ್, ಇನ್ನೊಂದು ಹಡಗು ನಂದಾ ದೇವಿ. ಹಾರ್ಮುಜ್ ಜಲಸಂಧಿ ದಾಟಿರುವ ಶಿವಾಲಿಕ್ ಹಡಗು ಎಲ್​ಪಿಜಿಯನ್ನು ಹೊತ್ತು ಗುಜರಾತ್​​ನ ಮುಂದ್ರಾ ಬಂದರನ್ನು ತಲುಪಿದೆ. ನಂದಾ ದೇವಿ ಹಡಗು ನಾಳೆ ಕಾಂಡ್ಲಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಡಗುಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತೊಯ್ದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧನೌಕೆ ನಿಯೋಜನೆ ಕುರಿತು ಅಮೆರಿಕದೊಂದಿಗೆ ಮಾತುಕತೆ ನಡೆದಿಲ್ಲ; ಭಾರತ ಸ್ಪಷ್ಟನೆ

ನವದೆಹಲಿ, ಮಾರ್ಚ್ 16: ತೈಲ ಟ್ಯಾಂಕರ್‌ಗಳ ಸುರಕ್ಷಿತ ಸಾಗಾಟವನ್ನು ಖಚಿತಪಡಿಸಿಕೊಳ್ಳಲು ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ನೌಕಾ ಹಡಗುಗಳ ನಿಯೋಜನೆಯ ಕುರಿತು ಅಮೆರಿಕದೊಂದಿಗೆ ಯಾವುದೇ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಜಗತ್ತಿನ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತ ಮತ್ತು ಮುಕ್ತವಾಗಿಡಲು ಈ ಪ್ರದೇಶಕ್ಕೆ ಯುದ್ಧನೌಕೆಗಳನ್ನು ಕಳುಹಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವಾರು ದೇಶಗಳನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಾನು ಈ ವಿಚಾರದಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಖಚಿತಪಡಿಸಿದೆ.

ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಾಗಾಟದಲ್ಲಿ ಇರಾನ್ ಹಸ್ತಕ್ಷೇಪಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅನೇಕ ದೇಶಗಳು ತೊಡಗಿಸಿಕೊಂಡಿದ್ದರೂ ಭಾರತವು ಈ ವಿಷಯದ ಕುರಿತು ಅಮೆರಿಕದೊಂದಿಗೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆಗೆ ಬರಲು ಭಾರತವೂ ಸೇರಿ ಹಲವು ರಾಷ್ಟ್ರಗಳಿಗೆ ಅಮೆರಿಕ ಮನವಿ

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಿಗ್ಬಂಧನ ವಿಧಿಸಿದ ನಂತರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಭಾರತೀಯ ಹಡಗುಗಳ ಚಲನವಲನದ ಕುರಿತು ಅಪ್​ಡೇಟ್ ನೀಡಿದೆ. ಸಚಿವಾಲಯದ ಪ್ರಕಾರ, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಸರಕು ಕಾರ್ಯಾಚರಣೆಗಳು ಸರಾಗವಾಗಿ ಮುಂದುವರೆದಿವೆ. ಭಾರತದ ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ಹಡಗು ಶಿವಾಲಿಕ್ ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಂದ್ರಾ ಬಂದರನ್ನು ತಲುಪಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಕಚ್ಚಾ ತೈಲ ಸರಕುಗಳೊಂದಿಗೆ ಹೊರಟ ಜಗ್ ಲಾಡ್ಕಿ ಎಂಬ ಮತ್ತೊಂದು ಹಡಗು ಭಾರತದ ಕಡೆಗೆ ಸುರಕ್ಷಿತವಾಗಿ ಆಗಮಿಸುತ್ತಿದೆ. ಅದು ನಾಳೆ ಮುಂದ್ರಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇರಾನ್​ನ ಕರಾವಳಿ ಮೇಲೆ ಬಾಂಬ್ ಹಾಕುತ್ತೇನೆ; ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಶಪಥ ಮಾಡಿದ ಟ್ರಂಪ್

ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಇರಾನ್ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ನಡುವಿನ ಫೋನ್ ಕರೆಗಳ ನಂತರ ಶನಿವಾರ ಮುಂಜಾನೆ 92,712 ಮೆಟ್ರಿಕ್ ಟನ್ ಎಲ್‌ಪಿಜಿಯೊಂದಿಗೆ 2 ಭಾರತೀಯ ಧ್ವಜ ಹೊಂದಿರುವ ಎಲ್‌ಪಿಜಿ ವಾಹಕಗಳಾದ ಶಿವಾಲಿಕ್ ಮತ್ತು ನಂದಾ ದೇವಿ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದವು. ಹೀಗಾಗಿ, ಸದ್ಯಕ್ಕಂತೂ ಭಾರತಕ್ಕೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಬೈ ಎಲೆಕ್ಷನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್, ಬಿಜೆಪಿಯಲ್ಲಿ ಸಂಚಲನ

ದಾವಣಗೆರೆ, (ಮಾರ್ಚ್ 16): ಬಾಗಲಕೋಟೆ  (Bagalkote) ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ  (Davanagere South By Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಅಭ್ಯರ್ಥಿಗಳ ಟಿಕೆಟ್ ಗೆ ಜಟಾಪಟಿ ನಡೆಯುತ್ತಿದೆ. ಹೌದು.. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress)​​ ಎರಡೂ ಪಕ್ಷಗಳಲ್ಲಿಯೂ ಉಪ ಚುನಾವಣೆ ಟಿಕೆಟ್​​ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿರೋದು, ಬೈ ಎಲೆಕ್ಷನ್​​ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​​ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್​​ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಬಿ.ಜಿ. ಅಜಯ್ ಕುಮಾರ್, ಯಶವಂತ್ ರಾವ್ ಜಾಧವ್, ದೇವರಮನೆ ಶಿವಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿನ ವರ್ಷಗಳ ಅಸಮಾಧಾನ ಈಗ ಮೂರನೇಯವರಿಗೆ ಲಾಭ ತಂದು ಕೊಡುವ ರೀತಿಯಲ್ಲಿ ಅಖಾಡ ಸಿದ್ಧವಾಗುತ್ತಿದೆ.

ಇಬ್ಬರ ಕಿತ್ತಾಟ 3ನೇ ವ್ಯಕ್ತಿಗೆ ಟಿಕೆಟ್?

2023ರ ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಮಾಜಿ ಸಚಿವ ಎಂ.ಪಿ‌. ರೇಣುಕಾಚಾರ್ಯ ಟೀಮ್ ಬೆಂಬಲ ವ್ಯಕ್ತಪಡಿಸಿದ್ದರೆ, ಯಶವಂತರಾವ್ ಜಾಧವ್ ಪರ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಟೀಮ್ ಬೆಂಬಲ ಸೂಚಿಸಿದೆ. ಹೀಗಾಗಿ ಎರಡೂ ಬಣಗಳ ಕುಸ್ತಿಗೆ ಬ್ರೇಕ್ ಹಾಕಲು ಪ್ರಯತ್ನ ಪಟ್ಟು ಸುಸ್ತಾಗಿರುವ ಬಿಜೆಪಿ ನಾಯಕತ್ವ ಈಗ 2024ರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬಗ್ಗೆಯೂ ಚಿಂತನೆ ನಡೆಸಿದೆ. ಎರಡೂ ಬಣಗಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ವಿನಯ್ ಕುಮಾರ್ ಗೆ ಟಿಕೆಟ್ ನೀಡುವ ಬಗ್ಗೆಯೂ ಗಂಭೀರ ಚಿಂತನೆಯಲ್ಲಿದ್ದು, ಈಗಾಗಲೇ ವಿನಯಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ದೆಹಲಿ ಮಟ್ಟದ ನಾಯಕರು ಮುಗಿಸಿದ್ದಾರೆ.

ಇದನ್ನೂ ನೋಡಿ: ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಮಿತ್ರ ಜೆಡಿಎಸ್ ಮುಖಂಡ

ದಾವಣಗೆರೆ ದಕ್ಷಿಣದಲ್ಲಿ ಜಾತಿ ಸಮೀಕರಣಕ್ಕೆ ಆಗ್ರಹ

ವಿಧಾನ ಪರಿಷತ್ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೂರೂ ಟಿಕೆಟ್ ಲಿಂಗಾಯತರಿಗೆ ಘೋಷಣೆ ಮತ್ತು ಬಾಗಲಕೋಟೆ ಉಪಚುನಾವಣೆಗೆ ಲಿಂಗಾಯತ ಸಮುದಾಯದ ವೀರಣ್ಣ ಚರಂತಿಮಠಗೆ ಟಿಕೆಟ್ ಖಚಿತವಾಗಿರುವ ಕಾರಣ ದಾವಣಗೆರೆ ದಕ್ಷಿಣದಲ್ಲಿ ಜಾತಿ ಸಮೀಕರಣಕ್ಕೆ ಆಗ್ರಹ ರಾಜ್ಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ. ಜಾತಿ ಸಮೀಕರಣ ಮಾಡುವಂತೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಆಗ್ರಹಿಸಿದ್ದು, ಹೀಗಾಗಿ ಕುರುಬ ಸಮುದಾಯಕ್ಕೆ ಸೇರಿದ ವಿನಯಕುಮಾರ್ ಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ಇನ್ನು ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಸೇರಿದಂತೆ ಮೂರ್ನಾಲ್ಕು ಜ‌ನ ದೆಹಲಿಯತ್ತ ತೆರಳಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ರೇಣುಕಾಚಾರ್ಯ ಟೀಮ್ ಪ್ರಯತ್ನ ನಡೆಸಲು ಮುಂದಾಗಿದೆ.

ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಚಾಲೆಂಜ್

ಇದೇ ವೇಳೆ ಆಡಳಿತ ಪಕ್ಷ ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯೇ ಚಾಲೆಂಜ್ ಆಗಿ ಪರಿಣಮಿಸಿದೆ. ಶಾಮನೂರು ಕುಟುಂಬ ವರ್ಸಸ್ ಮುಸ್ಲಿಂ ಸಮುದಾಯದ ಫೈಟ್ ಎಂಬಂತಾಗಿದ್ದು, ತಮ್ಮ ಕುಟುಂಬಸ್ಥರಲ್ಲೇ ಒಬ್ಬರಿಗೆ ಟಿಕೆಟ್ ಬೇಕು ಅಂತ ಶಾಮನೂರು ಕುಟುಂಬ ಪಟ್ಟು ಹಿಡಿದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಬೇಕು ಎಂದು ಪಟ್ಟು ಕೂಡಾ ಜೋರಾಗಿದ್ದು, ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗುತ್ತಲೇ ಇದೆ.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರು, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಖಾಲಿದ್ ಪೈಲ್ವಾನ್, ಮುಜಿಮಲ್ ಹುಸೇನ್, ಸಾಧಿಕ್ ಪೈಲ್ವಾನ್, ಆಯೋಬ್ ಪೈಲ್ವಾನ್ ಮತ್ತು ಶಿವಗಂಗಾ ಶ್ರೀನಿವಾಸ್ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದಿದೆ.

ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಭ್ಯರ್ಥಿ ಆಯ್ಕೆಗೆ ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿವೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಅಗುವವರೆಗೂ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡದೇ ಇರಲು ತೀರ್ಮಾನಿಸಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version