CBSE 12th Result 2026 Declared: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್​ ಪರಿಶೀಲಿಸಲು ಈ ಲಿಂಕ್ ಬಳಸಿ – Kannada News | CBSE 12th Result 2026 Declared: Check Marks and Download Scorecard Now!

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟImage Credit source: gemini ai

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆದಿದ್ದ ಈ ಪರೀಕ್ಷೆಯ ಫಲಿತಾಂಶಕ್ಕಾಗಿ ದೀರ್ಘಕಾಲದ ಕಾಯುವಿಕೆ ಈಗ ಅಂತ್ಯಗೊಂಡಿದೆ. ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in ಮತ್ತು cbse.gov.in ನಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಶಾಲಾ ಕೋಡ್ ಬಳಸಿ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.

ಫಲಿತಾಂಶ ಪರಿಶೀಲಿಸುವ ಸುಲಭ ವಿಧಾನಗಳು:

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳ ಹೊರತಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕವೂ ಸುಲಭವಾಗಿ ಫಲಿತಾಂಶ ಪಡೆಯಬಹುದು. ಸ್ಮಾರ್ಟ್‌ಫೋನ್‌ಗಳಲ್ಲಿ DigiLocker ಅಥವಾ UMANG ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಡಿಜಿಟಲ್ ಅಂಕಪಟ್ಟಿ ಮತ್ತು ವಲಸೆ ಪ್ರಮಾಣಪತ್ರಗಳನ್ನು (Migration Certificate) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ದಟ್ಟಣೆ (Server Traffic) ಹೆಚ್ಚಿದ್ದಾಗ ಈ ಮೊಬೈಲ್ ಆಪ್‌ಗಳು ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗವಾಗಿ ಸಹಕಾರಿಯಾಗಲಿವೆ.

ಫಲಿತಾಂಶ ನೋಡುವುದು ಹೇಗೆ?

  • ಮೊದಲು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹೋಮ್ ಪೇಜ್‌ನಲ್ಲಿರುವ ‘Class 12th Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರೋಲ್ ನಂಬರ್ (Roll Number), ಶಾಲಾ ಸಂಖ್ಯೆ (School No.) ಮತ್ತು ಅಡ್ಮಿಟ್ ಕಾರ್ಡ್ ಐಡಿಯನ್ನು ನಮೂದಿಸಿ.
  • ‘Submit’ ಬಟನ್ ಒತ್ತಿದಾಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ಉತ್ತೀರ್ಣ ಪ್ರಮಾಣ ಮತ್ತು ಪ್ರಾದೇಶಿಕ ಸಾಧನೆ:

ಪ್ರಸಕ್ತ ಸಾಲಿನಲ್ಲಿ ಶೇ.85.20ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.3.19ರಷ್ಟು ಫಲಿತಾಂಶ ಕುಸಿತ ಕಂಡಿದೆ. ಅಂದರೆ 2025ರಲ್ಲಿ ಶೇ.88.39ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ವಿವಿಧ ವಲಯಗಳ (Regions) ಪೈಕಿ ಕೆಲವು ಪ್ರಮುಖ ನಗರಗಳು ಅತಿ ಹೆಚ್ಚು ಉತ್ತೀರ್ಣ ಶೇಕಡಾವಾರು ದಾಖಲಿಸುವ ಮೂಲಕ ಮುಂಚೂಣಿಯಲ್ಲಿವೆ. ಮಂಡಳಿಯು ಅನಗತ್ಯ ಮಾನಸಿಕ ಒತ್ತಡವನ್ನು ತಡೆಗಟ್ಟಲು ವಿದ್ಯಾರ್ಥಿಗಳಿಗೆ ಯಾವುದೇ ರಾಂಕ್ ಅಥವಾ ಮೊದಲ ಮೂರು ಟಾಪರ್‌ಗಳ ಪಟ್ಟಿಯನ್ನು ಪ್ರಕಟಿಸದೆ, ಕೇವಲ ಶ್ರೇಣಿಗಳ ಆಧಾರದ ಮೇಲೆ ಫಲಿತಾಂಶ ನೀಡುವ ಸಂಪ್ರದಾಯವನ್ನು ಮುಂದುವರಿಸಿದೆ.

ಮರುಮೌಲ್ಯಮಾಪನ ಮತ್ತು ಕಂಪಾರ್ಟ್‌ಮೆಂಟ್ ಪರೀಕ್ಷೆ:

ಫಲಿತಾಂಶದಲ್ಲಿ ನಿರೀಕ್ಷಿತ ಅಂಕ ಪಡೆಯದ ವಿದ್ಯಾರ್ಥಿಗಳಿಗೆ ಮಂಡಳಿಯು ಮರುಮೌಲ್ಯಮಾಪನ (Re-evaluation) ಮತ್ತು ಅಂಕಗಳ ಮರುಪರಿಶೀಲನೆಗೆ (Verification of Marks) ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಶೀಘ್ರದಲ್ಲೇ ಕಂಪಾರ್ಟ್‌ಮೆಂಟ್ ಪರೀಕ್ಷೆಗಳನ್ನು ಆಯೋಜಿಸಲಾಗುವುದು. ಇದರ ವೇಳಾಪಟ್ಟಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಸಿಬಿಎಸ್‌ಇ ಶೀಘ್ರದಲ್ಲೇ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:00 pm, Wed, 13 May 26

Source link

ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ನೇಮಕ ಆದೇಶ ಹಿಂಪಡೆದ ತಮಿಳುನಾಡು ಸಿಎಂ ವಿಜಯ್​​: ತೀವ್ರ ಟೀಕೆ ಬೆನ್ನಲ್ಲೇ ಕ್ರಮ – Kannada News | Tamilnadu CM Vijay Revokes Astrologer OSD Appointment Amidst Widespread Criticism

ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ನೇಮಕ ಆದೇಶ ಹಿಂಪಡೆದೆ ತಮಿಳುನಾಡು ಸಿಎಂ ವಿಜಯ್

ಚೆನ್ನೈ, ಮೇ 13: ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರ ನೇಮಕ ಆದೇಶವನ್ನು ತಮಿಳುನಾಡು ಸಿಎಂ ವಿಜಯ್​ ಹಿಂಪಡೆದಿದ್ದಾರೆ. ವೆಟ್ರಿವೆಲ್ ಅವರನ್ನು ಮುಖ್ಯಮಂತ್ರಿಗಳ ಇಲಾಖೆಯಲ್ಲಿ OSD ಆಗಿ ನೇಮಕ ಮಾಡಿದ ಒಂದು ದಿನದೊಳಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನೇಮಕಾತಿ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಕಮ್ಯೂನಿಷ್ಟ್​​ ಪಾರ್ಟಿ ಆಫ್​​ ಇಂಡಿಯಾ-ಮ್ಯಾಟ್ರಿಕ್ಸ್​​ (ಸಿಪಿಐಎಂ) ಹಾಗೂ ಕಮ್ಯೂನಿಷ್ಟ್​​ ಪಾರ್ಟಿ ಆಫ್​​ ಇಂಡಿಯಾ (ಸಿಪಿಐ) ಈ ಬಗ್ಗೆ ಟೀಕಿಸಿದ್ದವು.

ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಗೆ ಮುನ್ನ ವಿಸಿಕೆ ಶಾಸಕಿ ವಾಣಿ ಅರುಸು, ಸರ್ಕಾರ ವೈಜ್ಞಾನಿಕ ಹಾಗೂ ತಾರ್ಕಿಕ ಚಿಂತನೆಗೆ ಆದ್ಯತೆ ನೀಡಬೇಕು, ಮೂಢನಂಬಿಕೆಗಳಿಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದರು. ಎಡಪಂಥೀಯ ಪಕ್ಷಗಳಾದ CPIM ಮತ್ತು CPI ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದವು. CPIM ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ಸರ್ಕಾರಕ್ಕೆ ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕ ಚಿಂತನೆ ಉತ್ತೇಜಿಸುವ ಜವಾಬ್ದಾರಿ ಇದೆ. ಸಾರ್ವಜನಿಕ ಹಣದಲ್ಲಿ ಜ್ಯೋತಿಷಿಯನ್ನು ಸರ್ಕಾರಿ ಹುದ್ದೆಗೆ ನೇಮಿಸುವುದು ಮೂಢನಂಬಿಕೆಗೆ ಉತ್ತೇಜನ ನೀಡುತ್ತದೆ ಎಂದು ಟೀಕಿಸಿದ್ದರು. CPI ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಕೂಡ ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ಸರ್ಕಾರದ ವಿಶೇಷ ಅಧಿಕಾರಿಯಾಗಿ ನೇಮಿಸಿದ ಸಿಎಂ ವಿಜಯ್

ಇವುಗಳ ಜೊತೆಗ ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯಕಾಂತ್​​ ಕೂಡ ವಿಜಯ್​​ ನಿರ್ಧಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ರಾಧನ್ ಪಂಡಿತ್ ಅವರನ್ನು OSD ಆಗಿ ನೇಮಕ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಅವರು ನಿಮ್ಮ ಗುರು ಆಗಿದ್ದರೆ ವೈಯಕ್ತಿಕವಾಗಿ ಇಟ್ಟುಕೊಳ್ಳಿ. ಯುವಕರು ನಿಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ನೀವು ಯುವಜನತೆಗೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು. ಹೀಗಾಗಿ OSD ಆಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರ ನೇಮಕ ವಿಚಾರ ಟಿವಿಕೆ ಮುಖ್ಯಸ್ಥ ವಿಜಯ್​​ಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿತ್ತು. ಒತ್ತಡ ಹೆಚ್ಚಾದ ಕಾರಣ ಕೊನೆಗೂ ತಮ್ಮ ಆದೇಶವನ್ನು ಸಿಎಂ ಹಿಂಪಡೆದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:03 pm, Wed, 13 May 26

Source link

ಬ್ಯಾಟರ್​ಗಳ ಅಬ್ಬರದ ನಡುವೆ ಗುಜರಾತ್ ಟೈಟಾನ್ಸ್ ಬೌಲರ್​ಗಳ ಪರಾಕ್ರಮ – Kannada News | GT’s Unstoppable Bowling Force Demolishes IPL 2026!

ಟಿ20 ಕ್ರಿಕೆಟ್ ಎಂದರೆ ಬ್ಯಾಟರ್‌ಗಳ ಅಬ್ಬರ ಎಂಬ ಮಾತನ್ನು ಗುಜರಾತ್ ಟೈಟಾನ್ಸ್ ಬೌಲರ್​ಗಳು ಸುಳ್ಳಾಗಿಸಿದ್ದಾರೆ. ಅದರಲ್ಲೂ ಕಳೆದ ಐದು ಪಂದ್ಯಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ತಂಡಗಳ ಪಾಲಿಗೆ ಗುಜರಾತ್ ವೇಗಿಗಳು ದುಸ್ವಪ್ನವಾಗಿ ಪರಿಣಮಿಸಿದ್ದಾರೆ. ಕೇವಲ ರನ್ ವೇಗಕ್ಕೆ ಬ್ರೇಕ್ ಹಾಕುವುದು ಮಾತ್ರವಲ್ಲದೆ, ಎದುರಾಳಿಗಳನ್ನು ಸಂಪೂರ್ಣವಾಗಿ ಉಸಿರುಗಟ್ಟಿಸಿ ವಿಕೆಟ್ ಬೇಟೆಯಾಡುವುದನ್ನೇ ಈ ಬೌಲರ್‌ಗಳು ಹವ್ಯಾಸವಾಗಿಸಿಕೊಂಡಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಲಭ್ಯವಿದ್ದ 50 ವಿಕೆಟ್‌ಗಳ ಪೈಕಿ ಬರೋಬ್ಬರಿ 46 ವಿಕೆಟ್ ಉರುಳಿಸಿರುವ ಟೈಟಾನ್ಸ್ ಬೌಲರ್‌ಗಳ ಈ ಘಾತಕ ಫಾರ್ಮ್, ಈಗ ಇಡೀ ಟೂರ್ನಿಗೆ ಅತ್ಯಂತ ಅಪಾಯಕಾರಿ ಎಚ್ಚರಿಕೆಯ ಗಂಟೆಯಾಗಿದೆ!

ಕರಾರುವಾಕ್ ದಾಳಿ:

ಇತ್ತೀಚಿನ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಬೌಲರ್‌ಗಳು ಎದುರಾಳಿ ತಂಡಗಳನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ಪ್ರಮುಖ ಪ್ರದರ್ಶನಗಳು ಹೀಗಿವೆ:

  • ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ: ಸಿಎಸ್‌ಕೆ ತಂಡವನ್ನು ಕೇವಲ 158/7 ರನ್‌ಗಳಿಗೆ ನಿಯಂತ್ರಿಸಿ ಕಟ್ಟಿಹಾಕಿದರು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ: ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಕೇವಲ 155 ರನ್‌ಗಳಿಗೆ ಆಲ್-ಔಟ್ ಮಾಡಿದರು.
  • ಪಂಜಾಬ್ ಕಿಂಗ್ಸ್ ವಿರುದ್ಧ: ಕರಾರುವಾಕ್ ದಾಳಿಯ ಮೂಲಕ ಪಂಜಾಬ್ ತಂಡವನ್ನು 163/9 ರನ್‌ಗಳಿಗೆ ಸೀಮಿತಗೊಳಿಸಿದರು.
  • ರಾಜಸ್ಥಾನ್ ರಾಯಲ್ಸ್ ವಿರುದ್ಧ: ಆರ್‌ಆರ್ ತಂಡವನ್ನು ಮಣಿಸಿ 152 ರನ್‌ಗಳಿಗೆ ಆಲ್-ಔಟ್ ಮಾಡುವ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಿದರು.
  • ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ: ಇದು ಸೀಸನ್‌ನ ಅತ್ಯಂತ ಘಾತಕ ಬೌಲಿಂಗ್ ಪ್ರದರ್ಶನವಾಗಿದ್ದು, ಎಸ್‌ಆರ್‌ಎಚ್ ತಂಡವನ್ನು ಕೇವಲ 86 ರನ್‌ಗಳಿಗೆ ಆಲ್-ಔಟ್ ಮಾಡಿ ಧೂಳೀಪಟ ಮಾಡಿದರು.

ಟೈಟಾನ್ಸ್ ಯಶಸ್ಸಿನ ಹಿಂದಿರುವ  ‘ಮಹಾ ಶಕ್ತಿಗಳು’

ಗುಜರಾತ್ ಟೈಟಾನ್ಸ್​ ತಂಡದ ಈ ಐತಿಹಾಸಿಕ ಬೌಲಿಂಗ್ ದರ್ಬಾರ್‌ನ ಹಿಂದೆ ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಆಟಗಾರರ ಶ್ರಮವಿದೆ:

  • ರಶೀದ್ ಖಾನ್: ಅಫ್ಘಾನಿಸ್ತಾನದ ಈ ಮಾಂತ್ರಿಕ ಲೆಗ್-ಸ್ಪಿನ್ನರ್ ಮಧ್ಯಮ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಪ್ರಮುಖ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ.
  • ಕಗಿಸೊ ರಬಾಡ: ಸೌತ್ ಆಫ್ರಿಕಾದ ಈ ಮಾರಕ ವೇಗಿ ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಎದುರಾಳಿಗಳಿಗೆ ರನ್ ಗಳಿಸಲು ಯಾವುದೇ ಅವಕಾಶ ನೀಡುತ್ತಿಲ್ಲ .
  • ಮೊಹಮ್ಮದ್ ಸಿರಾಜ್: ಭಾರತದ ಈ ಸ್ಟಾರ್ ವೇಗಿ ಆರಂಭದಲ್ಲೇ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಅದ್ಭುತ ಬ್ರೇಕ್-ಥ್ರೂ ನೀಡುತ್ತಿದ್ದಾರೆ.
  • ಜೇಸನ್ ಹೋಲ್ಡರ್: ವೆಸ್ಟ್ ಇಂಡೀಸ್‌ನ ಈ ಅನುಭವಿ ಆಲ್‌ರೌಂಡರ್ ತನ್ನ ಲೈನ್ ಅಂಡ್ ಲೆಂಗ್ತ್ ಬೌಲಿಂಗ್ ಮೂಲಕ ಎದುರಾಳಿಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.

ಇದನ್ನೂ ಓದಿ: 16 ಅಂಕಗಳಿದ್ದರೂ ಗುಜರಾತ್ ಟೈಟಾನ್ಸ್​ ಇನ್ನೂ ಪ್ಲೇಆಫ್‌ಗೆ ಕ್ವಾಲಿಫೈ ಆಗಿಲ್ಲವೇಕೆ?

ಈ ಭೀಕರ ಬೌಲಿಂಗ್ ಪ್ರದರ್ಶನದ ಬಲದಿಂದಲೇ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2026ರ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಈಗಾಗಲೇ ಪ್ಲೇಆಫ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

Source link

ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ – Kannada News | Kannada Actor Dileep Raj funeral will take place in Farm House near Ram Nagar

ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದು, ರಾಮನಗರ ತಾಲೂಕಿನ ಗುನ್ನೂರು ಬಳಿಯ ತೋಟದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಬಗ್ಗೆ ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ. 10 ವರ್ಷಗಳ ಹಿಂದೆ ಗುನ್ನೂರು ಗ್ರಾಮದಲ್ಲಿ ದಿಲೀಪ್ ರಾಜ್ ಅವರು ಒಂದು ಎಕರೆ ಜಮೀನು ಖರೀದಿಸಿದ್ದರು. ಇಂದು (ಮೇ 13) ಸಂಜೆ ನಾಲ್ಕು ಗಂಟೆ ಸುಮಾರಿಗೆ ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ (Dileep Raj Funeral) ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಫಾರ್ಮ್ ಹೌಸ್ ಕೆಲಸಗಾರರು ಹಾಗೂ ಗ್ರಾಮಸ್ಥರಿಂದ ಗುಂಡಿ ತೋಡುವ ಕಾರ್ಯ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ಜಾಗದಲ್ಲಿ ದಿಲೀಪ್ ರಾಜ್ ಅವರು ತೋಟ ನಿರ್ಮಾಣ ಮಾಡಿಕೊಂಡು ಮನೆ ಕಟ್ಟಿದ್ದರು. ಅವರ ಅಕಾಲಿಕ ಮರಣದಿಂದಾಗಿ ಕುಟುಂಬದವರಿಗೆ ಮತ್ತು ಆಪ್ತರಿಗೆ ತೀವ್ರ ಆಘಾತ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ‘ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ, ಯಾವುದೇ ದುರಭ್ಯಾಸ ಇರಲಿಲ್ಲ’: ಗೆಳೆಯ ದಿಲೀಪ್ ಅಗಲಿಕೆಗೆ ರವಿಶಂಕರ್ ಕಣ್ಣೀರು – Kannada News | Heart Attack Claims Kannada Actor Dileep Raj: Ravishankar Gowda Reflects on His Friends Life

ಬೆಂಗಳೂರು, ಮೇ 13: ಕನ್ನಡದ ಜನಪ್ರಿಯ ನಟ ದಿಲೀಪ್ ರಾಜ್ 47ನೇ ವಯಸ್ಸಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಧಾರಾವಾಹಿ ಹಾಗೂ ಹಲವು ಕನ್ನಡ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಅವರ ನಿಧನ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ದಿಲೀಪ್ ರಾಜ್ ಅವರ ಸ್ನೇಹಿತ ಹಾಗೂ ನಟ ರವಿಶಂಕರ್ ಗೌಡ ಅವರು ದಿಲೀಪ್ ರಾಜ್ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಫಿಟ್‌ನೆಸ್ ಫ್ರೀಕ್ ಆಗಿದ್ದರು ಮತ್ತು ಯಾವುದೇ ದುರಭ್ಯಾಸಗಳನ್ನು ಹೊಂದಿರಲಿಲ್ಲ ಎಂದು ರವಿಶಂಕರ್ ಗೌಡ ಹೇಳಿದ್ದಾರೆ. “ಆರೋಗ್ಯಕ್ಕೂ ಸಾವಿಗೂ ಸಂಬಂಧವೇ ಇಲ್ಲ ಅನ್ನುವಂತಾಗಿದೆ” ಎಂದು ಅವರು ದಿಲೀಪ್ ರಾಜ್ ಅವರ ಅನಿರೀಕ್ಷಿತ ಸಾವಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ತಮ್ಮ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿ, ನಂತರ ಟಿವಿ ನಿರ್ಮಾಣದ ಮೂಲಕ ಯಶಸ್ಸಿನ ಹಾದಿಯಲ್ಲಿದ್ದರು ಎಂದು ರವಿಶಂಕರ್ ಗೌಡ ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೆಡಿಸಿನ್ ಇಲ್ಲ, ಎಕ್ಸ್‌ರೇ ಶೀಟ್ ಕೂಡ ಇಲ್ಲ! ಗ್ಯಾರಂಟಿ ಯೋಜನೆಗೆ ಹಣ ಒದಗಿಸುವ ಭರದಲ್ಲಿ ಔಷಧಿಗಳಿಗೆ ಸರ್ಕಾರದಿಂದ ಕತ್ತರಿ? – Kannada News | Severe Medicine Shortage at Devanahalli Government Hospital: Patients Struggle Without Antibiotics and X ray Sheets

ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ಅಭಾವ

ದೇವನಹಳ್ಳಿ, ಮೇ 13: ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸುವ ಭರಾಟೆಯಲ್ಲಿ ಆರೋಗ್ಯ ಇಲಾಖೆಯ ಮೆಡಿಸಿನ್‌ಗಳಿಗೆ (Medicine) ಕತ್ತರಿ ಹಾಕಲಾಗಿದೆಯೇ ಎಂಬ ಅನುಮಾನ ಈಗ ಸಾರ್ವಜನಿಕರಲ್ಲಿ ಮೂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ತೀವ್ರ ಕೊರತೆ ಎದುರಾಗಿದ್ದು, ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಮುಖ್ಯಾಂಶಗಳು

  • ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿಬಯೋಟಿಕ್ ಮಾತ್ರೆ ಹಾಗೂ ಚುಚ್ಚುಮದ್ದುಗಳ ತೀವ್ರ ಅಭಾವ
  •  ಎಕ್ಸ್‌ರೇ ಶೀಟ್ ಇಲ್ಲದೆ ರೋಗಿಗಳು ಮೊಬೈಲ್‌ನಲ್ಲಿ ಫೋಟೋ ಹಿಡಿಯುವ ದುಸ್ಥಿತಿ
  •  ಗ್ಯಾರೆಂಟಿ ಯೋಜನೆಗಳ ಅಬ್ಬರದಲ್ಲಿ ಬಡವರ ಆರೋಗ್ಯ ಸೇವೆಗೆ ಸರ್ಕಾರದಿಂದ ಕತ್ತರಿ

ಆಂಟಿಬಯೋಟಿಕ್ ಮಾತ್ರೆಗಳಿಲ್ಲ!

ತಾಲೂಕು ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಜ್ವರ, ನೆಗಡಿ ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಆಂಟಿಬಯೋಟಿಕ್ ಮಾತ್ರೆಗಳು ಲಭ್ಯವಿಲ್ಲ. ವೈದ್ಯರು ಬರೆದುಕೊಡುವ ಬಹುತೇಕ ಮದ್ದುಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗುತ್ತಿಲ್ಲ. ಆಂಟಿಬಯೋಟಿಕ್ ಚುಚ್ಚುಮದ್ದುಗಳ ಕೊರತೆಯೂ ಕಾಡುತ್ತಿದ್ದು, ಲಭ್ಯವಿರುವ ಇಂಜೆಕ್ಷನ್‌ಗಳನ್ನು ಮಾತ್ರ ನೀಡಿ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ದುರಂತ: ಐದು ವರ್ಷದ ಮಗು ಸಾವು

ತಮ್ಮ ಮೊಬೈಲ್​ನಲ್ಲೇ ಎಕ್ಸ್‌ರೇ ಫೋಟೋ ತಗೊಳ್ಳುತ್ತಿರುವ ರೋಗಿಗಳು

ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿಗೆ ನಿಂತಿಲ್ಲ. ಎಕ್ಸ್‌ರೇ ಮಾಡಿಸಿದ ರೋಗಿಗಳಿಗೆ ಫಿಲ್ಮ್ ಗ್ರಾಫ್ ಶೀಟ್ ನೀಡಲಾಗುತ್ತಿಲ್ಲ. ರೋಗಿಗಳೇ ತಮ್ಮ ಮೊಬೈಲ್‌ನಲ್ಲಿ ಎಕ್ಸ್‌ರೇ ಫೋಟೋ ಹಿಡಿದುಕೊಂಡು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಔಷಧಗಳಿಗಾಗಿ ಇಂಡೆಂಟ್ ಸಲ್ಲಿಸಿ ಹಲವು ದಿನಗಳು ಕಳೆದರೂ ಇಲಾಖೆಯಿಂದ ಸರಬರಾಜಾಗಿಲ್ಲ ಎಂದು ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಿದ್ದಾರೆ. ದೇವನಹಳ್ಳಿ ತಾಲೂಕು ಆಸ್ಪತ್ರೆಯ ಸ್ಥಿತಿಯನ್ನು ಕಂಡು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಕೂಡಲೇ ಬಡವರ ಆರೋಗ್ಯದ ಕಡೆ ಗಮನಹರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ಸಿ. ಜೋಸೆಫ್​​ ವಿಜಯ್​​ – Kannada News | CM C. Joseph Vijay Makes Major Announcement After Winning Floor Test in Tamil Nadu Assembly

ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ವಿಜಯ್ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್, ತಮ್ಮ ಸರ್ಕಾರಕ್ಕೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷವು ಯಾವುದೇ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿ, 1.72 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಯುವಕರು, ಸರ್ಕಾರಿ ನೌಕರರು, ಶಿಕ್ಷಕರು ಮತ್ತು ದುಡಿಯುವ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಈ ಸರ್ಕಾರವಿದೆ. ಪ್ರಾಮಾಣಿಕ ಮತ್ತು ಅಂತಃಸಾಕ್ಷಿಯ ಆಡಳಿತವನ್ನು ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಧಾನಸಭೆಯಲ್ಲೂ ನಿರೀಕ್ಷೆಗೂ ಮೀರಿ ವಿಶ್ವಾಸಮತ ಗೆದ್ದ ಸಿಎಂ ವಿಜಯ್: ಯಾರದ್ದೆಲ್ಲ ಬೆಂಬಲ ಸಿಕ್ತು? ಇಲ್ಲಿದೆ ವಿವರ – Kannada News | CM Joseph Vijay Wins Trust Vote: TVK Government Proves Majority with 144 Votes in Tamil Nadu Assembly

ತಮಿಳುನಾಡು ಸಿಎಂ ಜೋಸೆಫ್ ವಿಜಯ್Image Credit source: tv9

ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ಜೋಸೆಫ್ ವಿಜಯ್ (CM Joseph Vijay) ನಿರೀಕ್ಷೆಗೂ ಮೀರಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್​ನ ಐವರು ಶಾಸಕರು, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು ಶಾಸಕರು, ಸಿಪಿಐ(ಎಂ) ಇಬ್ಬರು, ಐಯುಎಂಎಲ್​ ಪಕ್ಷದ ಇಬ್ಬರು ಶಾಸಕರು ಶಾಸಕರು ಸೇರಿದಂತೆ ಒಟ್ಟು 144 ಜನ ಶಾಸಕರ ಬೆಂಬಲ ದೊರೆತಿದೆ. ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (Tamilaga Vettri Kazhagam) 107 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತಕ್ಕೆ 118 ಸ್ಥಾನಗಳು ಬೇಕಿರುವ ಕಾರಣ ಸರ್ಕಾರ ರಚನೆ ತುಸು ವಿಳಂಬವಾಗಿತ್ತು.

ಎಐಎಡಿಎಂಕೆ ಬಂಡಾಯ ಶಾಸಕರಿಂದಲೂ ಬೆಂಬಲ

ಎಐಎಡಿಎಂಕೆಯ 25 ಮಂದಿ ಬಂಡಾಯ ಶಾಸಕರೂ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ವೇಲುಮಣಿ ಮತ್ತು ಷಣ್ಮುಗಂ ಶಾಸಕರು ನೇತೃತ್ವದ ಬಂಡಾಯ ಶಾಸಕರು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನಿಲುವನ್ನು ಧಿಕ್ಕರಿಸಿ ವಿಜಯ್ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಬೆಂಬಲಿಸಿದ ಶಾಸಕರಿಗೆ ವಿಜಯ್ ಧನ್ಯವಾದ: ದ್ವೇಷ ರಾಜಕಾರಣ ಮಾಡಲ್ಲವೆಂದು ಅಭಯ

ವಿಶ್ವಾಸಮತ ಗೆದ್ದ ನಂತರ ಮಾತನಾಡಿದ ಸಿಎಂ ವಿಜಯ್, ನಮ್ಮ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಎಲ್ಲಾ ಶಾಸಕರಿಗೂ ಧನ್ಯವಾದ. ನಮ್ಮದು ಮೈತ್ರಿಕೂಟ ಸರ್ಕಾರ. ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ನಾವು ಬದ್​ಧ. ನಮ್ಮ ಸರ್ಕಾರ ಯಾವಾಗಲೂ ಜನಪರವಾಗಿರುತ್ತದೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ದ್ವೇಷ ರಾಜಕಾರಣ ಮಾಡಲ್ಲ. ಮತ ಹಾಕಿದವರು, ಹಾಕದಏ ಇರುವವರು ಎಂಬ ಭೇದ-ಭಾವ ಮಾಡಲ್ಲ. ಪೆರಿಯಾರ್​, ಕಾಮರಾಜ್​, ಅಂಬೇಡ್ಕರ್​​ ತತ್ವದಡಿ ಕೆಲಸ ಮಾಡುತ್ತೇವೆ ಎಂದರು.

ಜಾತಿ, ಧರ್ಮ ಎಂದು ಪರಿಗಣಿಸದೆ ಜನರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ತಮಿಳುನಾಡು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ವಿಜಯ್ ಹೇಳಿದರು.

ಟಿವಿಕೆ ಸರ್ಕಾರದ ವಿರುದ್ಧ ಉದಯನಿಧಿ ಆಕ್ರೋಶ

ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು, ವಿಶ್ವಾಸಮತ ಯಾಚನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ, ಕೇವಲ 1.72 ಕೋಟಿ ಜನರು ಟಿವಿಕೆಗೆ ಮತ ಹಾಕಿದ್ದಾರೆ. ಉಳಿದ ಶೇ 65 ಜನರು ಟಿವಿಕೆ ವಿರುದ್ಧ ಮತ ಹಾಕಿದ್ದಾರೆ. ಟಿವಿಕೆಗೆ ಮತ ಹಾಕಿದ ಜನರಿಗೂ ಈಗ ಜ್ಞಾನೋದಯವಾಗುತ್ತಿದೆ. 118 ರ ಬಹುಮತದ ಚಿಹ್ನೆಯನ್ನು ಹೊಂದಿರುವ ಪಕ್ಷ ಮಾತ್ರ ಸರ್ಕಾರ ರಚಿಸಬಹುದು. ಟಿವಿಕೆ ನಾಯಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಈಗ ಜನರನ್ನು ಭೇಟಿ ಮಾಡಿ ಧನ್ಯವಾದ ಹೇಳುವುದಕ್ಕೂ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ (ತಿರುಪತ್ತೂರು ಶಾಸಕ ಆರ್. ಸೀನಿವಾಸ ಸೇತುಪತಿ) ವಿಶ್ವಾಸಮತದಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿರುವುದರಿಂದ ಟಿವಿಕೆ ಈಗ ಕೇವಲ 106 ಸದಸ್ಯರನ್ನು ಹೊಂದಿದೆ. ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷಗಳಿಂದ ಬೆಂಬಲವನ್ನು ಟಿವಿಕೆ ಪಡೆದುಕೊಂಡಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ಇದನ್ನೂ ಓದಿ: ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

‘ಎಐಎಡಿಎಂಕೆ ಎರಡು ಭಾಗವಾಗಿದೆ. ಈ ರಾಜಕೀಯ ಬದಲಾವಣೆಯ ಹಿಂದೆ ಯಾವ ಲೆಕ್ಕಾಚಾರ ಇದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಹೆಸರಿಸಲು ಸಹ ನೀವು (ಟಿವಿಕೆ) ನಿರಾಕರಿಸಿದ್ದೀರಿ ಮತ್ತು ಅವರನ್ನು ‘ಇತರ ಪಕ್ಷಗಳು’ ಎಂದು ಮಾತ್ರ ಉಲ್ಲೇಖಿಸಿದ್ದೀರಿ. ಆದರೆ ಈಗ ನೀವು ಅದೇ ನಾಯಕರನ್ನು ಭೇಟಿಯಾಗುತ್ತಿದ್ದೀರಿ, ಮತ್ತು ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾವು ವಿಧಾನಸಭೆಯಿಂದ ಹೊರನಡೆಯುತ್ತಿದ್ದೇವೆ. ನಾವು ಹೊರನಡೆದ ನಂತರ, ನಿಮಗೆ ಬಹುಮತ ಸಿಗುತ್ತದೆ. ನಮ್ಮ ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ರಾಜಕೀಯಗೊಳಿಸಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ’ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು. ನಂತರ ಡಿಎಂಕೆ ಸದಸ್ಯರು ಸಬಾತ್ಯಾಗ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:49 am, Wed, 13 May 26

Source link

‘ನನಗಿಂತ ಮೊದಲು ಫೇಮಸ್ ಆಗಿದ್ದ’: ದಿಲೀಪ್ ರಾಜ್ ಬೆಳೆದು ಬಂದ ಹಾದಿ ನೆನಪಿಸಿಕೊಂಡ ನಟ ಗಣೇಶ್ – Kannada News | Kannada actor Dileep Raj Death: Golden Star Ganesh pays last tribute

ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದು, ಹಲವು ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ದಿಲೀಪ್ ರಾಜ್ ಜೊತೆ ಒಡನಾಟ ಹೊಂದಿದ್ದರು. ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಏನು ಹೇಳಬೇಕು ಅಂತ ತಿಳಿಯುತ್ತಿಲ್ಲ. ಮನಸ್ಸಿಗೆ ತುಂಬ ನೋವಾಗುತ್ತಿದೆ. ದಿಲೀಪ್ ರಾಜ್ ಅವರು ಒಳ್ಳೆಯ ವ್ಯಕ್ತಿ ಆಗಿದ್ದರು. ಅದ್ಭುತ ನಟನಾಗಿದ್ದರು. ನಮ್ಮದೆಲ್ಲ ಒಂದು ಚಿಕ್ಕ ತಂಡ. ಕಾಲೇಜು ಮುಗಿಸಿ ಜೊತೆಯಲ್ಲಿ ಬಂದವರು ನಾವು. ನಾವೆಲ್ಲ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಪಡೆದಿದ್ದೇ ದಿಲೀಪ್’ ಎಂದು ಗಣೇಶ್ ಅವರು ಹೇಳಿದ್ದಾರೆ.

‘ದಿಲೀಪ್ ರಾಜ್ ಅವರು ಅತ್ಯುತ್ತಮ ಡ್ಯಾನ್ಸರ್ ಆಗಿದ್ದರು. ಅವರನ್ನು ನೋಡಿ ನಮಗೆಲ್ಲ ಖುಷಿ ಆಗುತ್ತಿತ್ತು. ಪ್ರೀತಿಗಾಗಿ ಅಂತ ಒಂದು ಸೀರಿಯಲ್ ಬರುತ್ತಿತ್ತು. ಕಿಟ್ಟಿ ಮತ್ತು ದಿಲೀಪ್ ಜೊತೆಯಾಗಿ ನಟನೆ ಮಾಡುತ್ತಿದ್ದರು. ನಾವೆಲ್ಲ ಸೆಟ್​ಗೆ ಹೋಗುತ್ತಿದ್ದೆವು. ಆರಂಭದ ದಿನಗಳಿಂದಲೂ ನಾನು ದಿಲೀಪ್ ಅವರನ್ನು ನೋಡಿಕೊಂಡು ಬಂದಿದ್ದೇನೆ. ಬಹಳ ಶ್ರಮಜೀವಿ ಅವರು’ ಎಂದಿದ್ದಾರೆ ಗಣೇಶ್.

‘ಅವರಿಗೆ ಇನ್ನೂ ಚಿಕ್ಕ ವಯಸ್ಸು. 48 ವರ್ಷಕ್ಕೆ ಹೀಗಾಯಿತು ಎಂಬುದು ತಿಳಿದು ನಮಗೆಲ್ಲ ಶಾಕ್ ಆಗಿದೆ. ಬೆಳಗ್ಗೆ ಸುದ್ದಿ ತಿಳಿದ ಕೂಡಲೇ ಇದು ನಿಜನೋ ಸುಳ್ಳೋ ಎನಿಸಿತು. ಇಡೀ ಕುಟುಂಬಕ್ಕೆ, ಅವರ ಆಪ್ತರಿಗೆ ಈ ನಷ್ಟ ಭರಿಸುವ ಶಕ್ತಿಯನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ. ದಿಲೀಪ್ ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಗಣೇಶ್ ಅವರು ಹೇಳಿದ್ದಾರೆ.

ನಟ ಸುಂದರ್ ಕೂಡ ಮಾತನಾಡಿದ್ದಾರೆ. ‘ಕಾಲೇಜು ದಿನಗಳಿಂದಲೂ ನಾನು ದಿಲೀಪ್​ನನ್ನು ನೋಡಿದ್ದೇನೆ. ಒಂದು ವರ್ಷ ನಾನು ಅವನಿಗೆ ಅಕೌಂಟ್ಸ್ ಪಾಠ ಮಾಡಿದ್ದೇನೆ. ಆಗ ಅವನು ಇನ್ನೂ ಸೀರಿಯಲ್​ಗೆ ಬಂದಿರಲಿಲ್ಲ. ತುಂಬಾ ಪ್ರತಿಭಾವಂತ ನಟ. ಇದು ಅವನು ಹೋಗುವಂತಹ ವಯಸ್ಸು ಅಲ್ಲ. ಸಿನಿಮಾದಲ್ಲಿ ಹೀರೋ ಆಗಿ ಮಿಂಚಬೇಕು ಎಂಬ ಆಸೆ ಅವನಿಗೆ ಇತ್ತು. ಅದು ಈಡೇರಲಿಲ್ಲ’ ಎಂದು ಸುಂದರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು

‘ಅವನ ಬಳಿ ಮಾತನಾಡಿ 6-7 ತಿಂಗಳು ಆಗಿತ್ತು. ಅಲ್ಲಿಯವರೆಗೂ ಅವನು ತುಂಬಾ ಚೆನ್ನಾಗಿದ್ದ. ದೈಹಿಕವಾಗಿ ಅವನು ಫಿಟ್ ಆಗಿದ್ದ. ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ ಎಂಬ ಖುಷಿ ಅವನಿಗೆ ಇತ್ತು. ಸ್ಟುಡಿಯೋ ಮಾಡಿದ್ದ, ಸೀರಿಯಲ್ ನಿರ್ಮಾಣ ಮಾಡಿದ್ದ. ಹೆಂಡತಿ ಮತ್ತು ಮಕ್ಕಳಿಗೆ ಈಗ ದೊಡ್ಡ ಆಘಾತ ಆಗಿದೆ’ ಎಂದಿದ್ದಾರೆ ಸುಂದರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫಲನಾಭವಿಗಳು ಮೃತಪಟ್ಟ ಬಳಿಕವೂ ಖಾತೆಗೆ ಗೃಹಲಕ್ಷ್ಮಿ ಹಣ: ದಕ್ಷಿಣ ಕನ್ನಡದಲ್ಲಿ 22 ಕೋಟಿ ಜಮೆ ಬೆಳಕಿಗೆ – Kannada News | Gruhalakshmi Scheme: 22 Crore Paid to Deceased Beneficiaries in Dakshina Kannada

ಮಂಗಳೂರು, ಮೇ 12: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ತಿಂಗಳು ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಜನರ ಆರೋಪದ ನಡುವೆ, ಶಾಕಿಂಗ್​​ ವಿಚಾರವೊಂದು ಬಹಿರಂಗಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದಾಗಲೇ ಮೃತಪಟ್ಟಿರುವ ಫಲಾನುಭವಿಗಳ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ವಿಷಯ ಗೊತ್ತಾಗುತ್ತಲೇ ಈ ಬಗ್ಗೆ ತಕ್ಷಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾದ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​​ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ಭರತ್ ಮುಂಡೋಡಿ  ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ ಬಳಕೆಯಲ್ಲಿಲ್ಲದ ಖಾತೆಗಳಿಗೆ ಸಹ ಹಣ ವರ್ಗಾವಣೆ ಮುಂದುವರಿದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮೃತ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: 35 ಲಕ್ಷ ರೂ. ಮೌಲ್ಯದ ಹೈಡ್ರೋವಿಡ್ ಗಾಂಜಾ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ!

ಅಲ್ಲದೆ, ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟವರು ಎಂದು ಗುರುತಿಸಿರುವ ಗಂಭೀರ ವ್ಯತ್ಯಾಸಗಳೂ ಕಂಡುಬಂದಿರುವ ಬಗ್ಗೆಯೂ ಉಲ್ಲೇಖಿಸಿದ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಪರಿಶೀಲನಾ ಸಭೆಯಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ 4,25,759 ರೇಷನ್ ಕಾರ್ಡ್ ಹೊಂದಿದವರು ಇದ್ದು, ಇದುವರೆಗೆ 3,82,178 ಫಲಾನುಭವಿಗಳು ನೋಂದಾಯಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಫಲಾನುಭವಿಗಳ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಬ್ಯಾಂಕ್ ವಿವರಗಳು ಲಭ್ಯವಿದ್ದರೆ, ಬ್ಯಾಂಕ್‌ಗಳ ಮೂಲಕ ಖಾತೆಗಳನ್ನು ಸ್ಥಗಿತಗೊಳಿಸಿ ಮುಂದಿನ ವ್ಯವಹಾರಗಳನ್ನು ತಡೆಯಬಹುದು ಎಂದು ಭಾರತ್ ಮುಂಡೋಡಿ ಹೇಳಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಲ್ಲಿಯೂ ಮರಣ ದಾಖಲೆಗಳು ಲಭ್ಯವಿರುವುದರಿಂದ, ಸಂಬಂಧಿತ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮೃತಪಟ್ಟವರ ಖಾತೆಗಳಿಗೆ ನೆರವು ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:24 pm, Wed, 13 May 26

Source link

Exit mobile version