ಇ-ಸಿಮ್ ಆಫರ್ ಹೆಸರಲ್ಲಿ ಹೊಸ ವಂಚನೆ:  ಕ್ಷಣಾರ್ಧದಲ್ಲೇ ಖಾತೆಯಿಂದ ಲಕ್ಷಾಂತರ ಹಣ ಲೂಟಿ! – Kannada News | Bengaluru e SIM Fraud Alert: Cyber Crooks Cyber Scam Dupes Lakhs in City

ಬೆಂಗಳೂರು, ಆಗಸ್ಟ್ 17: ಟೆಲಿಕಾಂ ಸೇವಾದಾರರಿಂದ ಕರೆ ಮಾಡಲಾಗುತ್ತಿದೆ ಎಂದು ನಂಬಿಸಿ, ನಿಮ್ಮ ಫೋನ್‌ನ ಸಾಮಾನ್ಯ ಸಿಮ್ ಕಾರ್ಡ್ ಅನ್ನು ‘ಇ-ಸಿಮ್’ (e-SIM) ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಹೇಳುವ ಸೈಬರ್ ಚೋರರ ಹೊಸ ವಂಚನೆ ಜಾಲವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಉಚಿತವಾಗಿ ಅಥವಾ ಸುಲಭವಾಗಿ ಇ-ಸಿಮ್ ನೀಡುತ್ತೇವೆ ಎಂದು ನಂಬಿಸುವ ವಂಚಕರು, ಮೊಬೈಲ್ ಒಟಿಪಿ (OTP) ಹಾಗೂ ಲಾಗಿನ್ ಕೋಡ್‌ಗಳನ್ನು ಪಡೆದು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕುತ್ತಿದ್ದಾರೆ.

ಲಕ್ಷಾಂತರ ಹಣ ಕಳೆದುಕೊಂಡ ಸಂತ್ರಸ್ತರು

ಬೆಂಗಳೂರಿನಲ್ಲಿ ಇ-ಸಿಮ್ (e-SIM) ಅಪ್‌ಗ್ರೇಡ್ ಹೆಸರಿನಲ್ಲಿ ಸೈಬರ್ ವಂಚಕರು ಇಬ್ಬರು ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ದೊಡ್ಡಬಳ್ಳಾಪುರ ರಸ್ತೆಯ ಮರಸಂದ್ರದ 51 ವರ್ಷದ ವ್ಯಕ್ತಿಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ ವಂಚಕರು, ಒಟಿಪಿ (OTP) ಪಡೆದು ಫೋನ್ ನೆಟ್‌ವರ್ಕ್ ಸ್ಥಗಿತಗೊಳಿಸಿ ಅವರ ಮೂರು ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು 6.2 ಲಕ್ಷ ರೂ. ಹಣವನ್ನು ಅನಧಿಕೃತವಾಗಿ ಡ್ರಾ ಮಾಡಿದ್ದಾರೆ. ಮತ್ತೊಂದೆಡೆ, ಚಿಕ್ಕಬಾಣಾವರದ ಶೋಯೈಬ್ (40) ಎಂಬುವರಿಗೆ ಸಿಮ್ ಡಿ-ಆಕ್ಟಿವೇಟ್ ಆಗಲಿದೆ ಎಂದು ಹೆದರಿಸಿ, ಇ-ಸಿಮ್ ನೀಡುವ ನೆಪದಲ್ಲಿ ಗೂಗಲ್ ಸೈನ್-ಇನ್ ಕೋಡ್ ಪಡೆದುಕೊಂಡು 2.8 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದಾರೆ.

ಸೈಬರ್ ವಂಚಕರು ಕಾರ್ಯಾಚರಣೆ ನಡೆಸುವುದು ಹೇಗೆ?

ಅಪರಿಚಿತರು ಕರೆ ಮಾಡಿ ಟೆಲಿಕಾಂ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಳ್ಳುತ್ತಾರೆ. ವಂಚಕರು ತಮ್ಮ ಬಳಿ ಇರುವ ಮೊಬೈಲ್ ಸಾಧನದಲ್ಲಿ ನಿಮ್ಮ ಸಂಖ್ಯೆಗೆ ಇ-ಸಿಮ್ ಆಕ್ಟಿವೇಶನ್‌ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ನಿಮ್ಮ ಫೋನ್‌ಗೆ ಬರುವ ಒಟಿಪಿ ಅಥವಾ QR ಕೋಡ್ ಲಿಂಕ್ ಅನ್ನು ಪಡೆದುಕೊಂಡ ತಕ್ಷಣ, ನಿಮ್ಮ ಫೋನ್‌ನ ಫಿಸಿಕಲ್ ಸಿಮ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ. ನಿಮ್ಮ ಸಂಖ್ಯೆಯ ಪೂರ್ಣ ನಿಯಂತ್ರಣ (ಕರೆಗಳು, SMS, OTP) ವಂಚಕರ ವಶವಾಗುತ್ತದೆ. ಇದನ್ನೇ ಬಳಸಿಕೊಂಡು ಬ್ಯಾಂಕಿಂಗ್ ಆಪ್‌ಗಳ ಪಾಸ್‌ವರ್ಡ್ ಮರುಹೊಂದಿಸಿ ಖಾತೆಯಲ್ಲಿರುವ ಮೊತ್ತವನ್ನು ದೋಚುತ್ತಾರೆ.

ಸುರಕ್ಷತೆಯಾಗಿರಲು ಪೊಲೀಸರ ಪ್ರಮುಖ ಸೂಚನೆಗಳು

ಯಾವುದೇ ಅಧಿಕೃತ ಟೆಲಿಕಾಂ ಸಂಸ್ಥೆಗಳು (Airtel, Jio, Vi ಇತ್ಯಾದಿ) ವಾಟ್ಸಾಪ್ ಅಥವಾ ಫೋನ್ ಕರೆ ಮೂಲಕ ಇ-ಸಿಮ್ ಅಪ್‌ಗ್ರೇಡ್ ಮಾಡಲು ಕೋರುವುದಿಲ್ಲ. ಕರೆಯಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಬಂದ ಒಟಿಪಿ, ಗೂಗಲ್ ಕೋಡ್, ಅಥವಾ ಕ್ಯೂಆರ್ ಕೋಡ್‌ಗಳನ್ನು ಯಾರೊಂದಿಗೂ ಶೇರ್ ಮಾಡಬಾರದು. ಇ-ಸಿಮ್ ಆಕ್ಟಿವೇಶನ್ ಅನ್ನು ಟೆಲಿಕಾಂ ಕಂಪನಿಗಳ ಅಧಿಕೃತ ಆಪ್‌ಗಳು ಅಥವಾ ಪ್ರಮುಖ ಮಳಿಗೆಗಳಿಗೆ (Service Stores) ಖುದ್ದಾಗಿ ತೆರಳಿ ಮಾತ್ರ ಮಾಡಿಸಬೇಕು. ಇದ್ದಕ್ಕಿದ್ದಂತೆ ಮೊಬೈಲ್ ಸಿಗ್ನಲ್ ಪೂರ್ತಿಯಾಗಿ ಹೋಗಿ ಸ್ಥಗಿತಗೊಂಡರೆ ತಕ್ಷಣವೇ ಟೆಲಿಕಾಂ ಸೇವಾದಾರರನ್ನು ಹಾಗೂ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಅಕೌಂಟ್ ಬ್ಲಾಕ್ ಮಾಡಿ. ವಂಚನೆಗೊಳಗಾದ ಸಂದರ್ಭದಲ್ಲಿ ತಕ್ಷಣವೇ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾನ್ 3 ವಿವಾದ: ಮಗನಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಖಾಡಕ್ಕೆ ಇಳಿದ ರಣವೀರ್ ತಂದೆ – Kannada News | Ranveer Singh father agrees to meet film body over Don 3 row as Pralay goes on floors  

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಡಾನ್ 3’ ಸಿನಿಮಾ ವಿವಾದ ಈಗ ಹೊಸ ಮಜಲು ತಲುಪಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಿಂದ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಹೊರನಡೆದಿದ್ದರು. ಈ ವಿಚಾರವಾಗಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿಸಲು ರಣವೀರ್ ಸಿಂಗ್ ಅವರ ತಂದೆ ಜಗ್‌ಜೀತ್ ಸಿಂಗ್ ಭವ್ನಾನಿ ಅವರು ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಜೊತೆ ಸಭೆ ನಡೆಸಲು ಒಪ್ಪಿಕೊಂಡಿದ್ದಾರೆ.

ರಣವೀರ್ ಸಿಂಗ್ ಅವರ ವಕೀಲರು ಕೂಡ ಈ ಸಭೆಯಲ್ಲಿ ಭಾಗವಹಿಸುವುದಾಗಿ ಇಮೇಲ್ ಮೂಲಕ ತಿಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಭಯ್ ಸಿನ್ಹಾ ಖಚಿತಪಡಿಸಿದ್ದಾರೆ. ರಣವೀರ್ ಸಿಂಗ್ ಅವರ ಹೊಸ ಚಿತ್ರ ‘ಪ್ರಳಯ’ ಮುಂಬೈನಲ್ಲಿ ಸೆಟ್ಟೇರಿದ ಬೆನ್ನಲ್ಲೇ ಈ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ಜೈ ಮೆಹ್ತಾ ನಿರ್ದೇಶನದ ಜೋಂಬಿ ಥ್ರಿಲ್ಲರ್ ‘ಪ್ರಳಯ’ ಚಿತ್ರಕ್ಕೆ ರಣವೀರ್ ಸಿಂಗ್ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿದ್ದಾರೆ.

ಈ ಹಿಂದೆ ರಣವೀರ್ ಸಿಂಗ್ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಡಾನ್ 3 ಚಿತ್ರದಿಂದ ದಿಢೀರ್ ಹೊರನಡೆದಿದ್ದರು. ಯಾವುದೇ ಸ್ಪಷ್ಟ ಕಾರಣ ನೀಡದೆ ವಿದೇಶಿ ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಈ ನಿರ್ಧಾರ ತಳೆದಿದ್ದರು. ಇದರಿಂದಾಗಿ ನಿರ್ಮಾಪಕರು ಚಲನಚಿತ್ರ ಮಂಡಳಿಗಳ ಮೆಟ್ಟಿಲೇರಿದ್ದರು. ಈ ಹಿಂದೆ ಎಫ್‌ಡಬ್ಲ್ಯೂಐಸಿಇ ನೀಡಿದ್ದ ಅಸಹಕಾರ ಆದೇಶವನ್ನು ನಂತರ ಹಿಂಪಡೆಯಲಾಗಿತ್ತು.

ಇದನ್ನೂ ಓದಿ: ‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ

ಈ ಎಲ್ಲಾ ವಿವಾದಗಳ ನಡುವೆಯೂ ರಣವೀರ್ ಸಿಂಗ್ ಯಾವುದೇ ಮೌಖಿಕ ಪ್ರತಿಕ್ರಿಯೆ ನೀಡಿಲ್ಲ. ತಾವು ಮಾತುಗಳಿಗಿಂತ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರ ತಂಡ ತಿಳಿಸಿದೆ. ಪ್ರಸ್ತುತ ನಿರ್ಮಾಪಕರ ಸಂಘದ ಜೊತೆ ಸಭೆ ನಡೆಯಲಿದ್ದು ವಿವಾದಕ್ಕೆ ಸುಖಾಂತ್ಯ ಸಿಗುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಕ್ಸರ್ ಸಿರಾಜ್… ಬ್ಯಾಟಿಂಗ್​ನಲ್ಲೂ ಮಿಯಾ ಮ್ಯಾಜಿಕ್! – Kannada News | Sixer Siraj: Miyan Magic with the Bat

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸುಭದ್ರ ಸ್ಥಿತಿ ತಲುಪಿದೆ. ಎರಡನೇ ದಿನದಾಟದಲ್ಲಿ ಮಳೆಯಿಂದಾಗಿ ಮೊದಲಾರ್ಧದ ಆಟ ರದ್ದಾಗಿದ್ದರೂ, ಸಿಕ್ಕ ಅಲ್ಪ ಅವಧಿಯಲ್ಲೇ ಭಾರತೀಯ ಬ್ಯಾಟರ್‌ಗಳು ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮವಾಗಿ, ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 460 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

ದೇವದತ್ ಪಡಿಕ್ಕಲ್ ಭರ್ಜರಿ ಶತಕ:

ಕರ್ನಾಟಕದ ಪ್ರತಿಭೆ ದೇವದತ್ ಪಡಿಕ್ಕಲ್ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದು, ವೃತ್ತಿಜೀವನದ ಚೊಚ್ಚಲ ಟೆಸ್ಟ್ ಶತಕವನ್ನು ಮ್ಯಾರಥಾನ್ ಇನಿಂಗ್ಸ್ ಆಗಿ ಪರಿವರ್ತಿಸಿದರು. ಮೊದಲ ದಿನ 131 ರನ್ ಗಳಿಸಿ ಅಜೇಯರಾಗಿದ್ದ ಪಡಿಕ್ಕಲ್, ಎರಡನೇ ದಿನವೂ ಲಂಕಾ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿ 230 ಎಸೆತಗಳಲ್ಲಿ 167 ರನ್ ಚಚ್ಚಿದರು. ಈ ಆಕರ್ಷಕ ಇನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಅಂತಿಮವಾಗಿ ಪ್ರಭಾತ್ ಜಯಸೂರ್ಯ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಪಡಿಕ್ಕಲ್ ತಮ್ಮ ಸ್ಮರಣೀಯ ಇನಿಂಗ್ಸ್ ಮುಗಿಸಿದರು.

ರಾಹುಲ್ ದಿಟ್ಟ ಹೋರಾಟ, ಜುರೆಲ್ ಅರ್ಧಶತಕ:

ಮೊದಲ ದಿನದ ಆಟದಲ್ಲಿ ತೀವ್ರ ಸ್ನಾಯು ಸೆಳೆತದಿಂದಾಗಿ 77 ರನ್‌ ಗಳಿಸಿದ್ದಾಗ ನಿವೃತ್ತರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್, ಎರಡನೇ ದಿನ ಮತ್ತೆ ಕ್ರೀಸ್‌ಗೆ ಮರಳಿದರು. ಅವರು 82 ರನ್‌ಗಳ ಉಪಯುಕ್ತ ಕೊಡುಗೆ ನೀಡಿ ಸ್ಪಿನ್ನರ್ ಕೇಶರ ನುವಾಂತ ಅವರಿಗೆ ವಿಕೆಟ್ ಒಪ್ಪಿಸಿದರು.  ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 39 ರನ್ ಗಳಿಸಿದರೆ, ಧ್ರುವ್ ಜುರೆಲ್ (51 ರನ್, 68 ಎಸೆತ) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತ 450ರ ಗಡಿ ದಾಟಲು ಪ್ರಮುಖ ಕಾರಣರಾದರು.

ಸಿಕ್ಸರ್ ಸಿರಾಜ್!

ಟೀಮ್ ಇಂಡಿಯಾ ಬ್ಯಾಟರ್​ಗಳ ಅಬ್ಬರದ ನಡುವೆ ಎಲ್ಲರ ಗಮನ ಸೆಳೆದಿದ್ದು ಮೊಹಮ್ಮದ್ ಸಿರಾಜ್. ಇತ್ತೀಚೆಗೆ ನಡೆದ ಅಭ್ಯಾಸ ಪಂದ್ಯದ ಅಂತಿಮ ಓವರ್‌ನಲ್ಲಿ ಸತತ 3 ಸಿಕ್ಸರ್ ಸಿಡಿಸಿ ಪವಾಡ ಸದೃಶ ಗೆಲುವು ತಂದುಕೊಟ್ಟಿದ್ದ ಸಿರಾಜ್, ಈ ಪಂದ್ಯದಲ್ಲೂ ಸ್ಫೋಟಕ ಇನಿಂಗ್ಸ್​ ಆಡಲು ಪ್ರಯತ್ನಿಸಿದ್ದರು.

ಅದರಲ್ಲೂ 111ನೇ ಓವರ್‌ನಲ್ಲಿ  ಸ್ಪಿನ್ನರ್ ಕೇಶರ ನುವಾಂತ ಎಸೆತವನ್ನು ಕ್ರೀಸ್‌ನಿಂದ ಮುಂದೆ ಬಂದು ಲಾಂಗ್-ಆನ್ ಭರ್ಜರಿ ಸಿಕ್ಸ್​ ಸಿಡಿಸಿ ಗಮನ ಸೆಳೆದರು. ಸಿರಾಜ್ ಅವರ ಈ ಸಿಕ್ಸರ್ ಕಂಡು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಸಹ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಇದಾಗ್ಯೂ ಮೊಹಮ್ಮದ್ ಸಿರಾಜ್ 15 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದೀಗ ಸಿರಾಜ್ ಅವರ ಭರ್ಜರಿ ಸಿಕ್ಸರ್​ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Source link

ವಿಧಾನಸಭೆ ಅಧಿವೇಶನದಲ್ಲಿ ಇಂದಿನಿಂದ ಅಸಲಿ ಕದನ! ನಾಗೇಂದ್ರ ರಾಜೀನಾಮೆಗೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್ – Kannada News | Karnataka Assembly Session: BJP to Intensify Protest, Demand B Nagendra’s Resignation

ಬೆಂಗಳೂರು, ಆಗಸ್ಟ್ 17: ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಮುಂಗಾರು ಅಧಿವೇಶನದ ಮೂರನೇ ದಿನದ ಕಲಾಪಗಳು ಇಂದು ನಡೆಯಲಿದ್ದು, ಪ್ರತಿಪಕ್ಷಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿವೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿಯಲಿದೆ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ತೀವ್ರಗೊಳಿಸಲು ಸಿದ್ಧವಾಗಿದೆ.

ಬಿಜೆಪಿ, ಜೆಡಿಎಸ್‌ನೊಂದಿಗೆ ಸೇರಿ ಸರ್ಕಾರದ ವಿರುದ್ಧ ಸಮರ ಸಾರಿದೆ. ವಾಲ್ಮೀಕಿ ನಿಗಮದ ಹಗರಣ, ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನೆಪದಲ್ಲಿ ವಿಧವಾ, ವೃದ್ಧಾಪ್ಯ, ವಿಕಲಚೇತನರ ಪಿಂಚಣಿ ಸ್ಥಗಿತಗೊಳಿಸಿರುವುದು, ಬಿಡದಿ ಟೌನ್‌ಶಿಪ್ ಯೋಜನೆ ಸ್ಥಗಿತದ ಬೇಡಿಕೆ ಹಾಗೂ ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ರೂಪಿಸಲಾದ ಹೊಸ ಮಸೂದೆ ವಿರುದ್ಧ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಬಲವಂತವಾಗಿ ಕೆಳಗಿಳಿಸಿ ಸಾಂವಿಧಾನಿಕ ಹುದ್ದೆಗಳ ದುರುಪಯೋಗ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪಿಸಲು ಸಿದ್ಧವಾಗಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಸಜ್ಜಾಗಿವೆ. ಒಟ್ಟಾರೆಯಾಗಿ, ಇಂದಿನಿಂದ ಉಭಯ ಸದನಗಳಲ್ಲಿ ತೀವ್ರ ರಾಜಕೀಯ ಕದನ ನಡೆಯುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾನ್ ಮಸಾಲ ಜಹೀರಾತು ವಿವಾದ: ಶಾರುಖ್, ಅಜಯ್ ದೇವಗನ್ ನೀಡಿದ್ದ ಸಮರ್ಥನೆ ಏನು? – Kannada News | Ban Them How Shah Rukh Khan and Ajay Devgn Defended Controversial Brand Ads

ವಿಮಲ್ ಇಲಾಯಚಿ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಬಾಲಿವುಡ್ ನಟರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ನೀಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದ್ದಾರೆ. ಈ ಜಾಹೀರಾತುಗಳು ನಿಷೇಧಿತ ವಿಮಲ್ ಪಾನ್ ಮಸಾಲಾದ ಪರೋಕ್ಷ ಪ್ರಚಾರಕ್ಕೆ ನೆರವಾಗುತ್ತಿವೆ ಎಂಬುದು ಎಫ್‌ಡಿಎ ಆರೋಪವಾಗಿದೆ.

ಈ ವಿವಾದದ ಬೆನ್ನಲ್ಲೇ ನಟರ ಹಳೆಯ ಹೇಳಿಕೆಗಳು ಮತ್ತೆ ಸದ್ದು ಮಾಡುತ್ತಿವೆ. ಶಾರುಖ್ ಖಾನ್ ಹಿಂದೆ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದರು. ‘ಸರ್ಕಾರಕ್ಕೆ ಆದಾಯ ಕೊಡುವ ಉತ್ಪನ್ನಗಳನ್ನು ನಿಷೇಧಿಸುವುದಿಲ್ಲ. ಆದರೆ ನಟರ ಆದಾಯಕ್ಕೆ ಮಾತ್ರ ತಡೆ ನೀಡಲಾಗುತ್ತದೆ’ ಎಂಬುದು ಅವರ ವಾದವಾಗಿತ್ತು. ‘ಹಾನಿಕಾರಕ ಉತ್ಪನ್ನಗಳನ್ನು ದೇಶದಲ್ಲೇ ಪೂರ್ಣವಾಗಿ ನಿಷೇಧಿಸಿ’ ಎಂದು ಅವರು ಸವಾಲು ಹಾಕಿದ್ದರು.

ಅಜಯ್ ದೇವಗನ್ ಕೂಡ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ತಾವು ಕೇವಲ ಇಲಾಯಿಚಿ ಜಾಹೀರಾತಿನಲ್ಲಿ ಮಾತ್ರ ಅಭಿನಯಿಸಿರುವುದಾಗಿ ಹೇಳಿದ್ದರು. ಉತ್ಪನ್ನ ಹಾನಿಕಾರಕವಾಗಿದ್ದರೆ ಅದರ ತಯಾರಿಕೆಯನ್ನೇ ಬಂದ್ ಮಾಡಬೇಕು ಎಂದಿದ್ದರು. ಜನರ ವೈಯಕ್ತಿಕ ಆಯ್ಕೆ ಕೂಡ ಇಲ್ಲಿ ಮುಖ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಟೈಗರ್ ಶ್ರಾಫ್ ಈ ವಿವಾದದ ಬಗ್ಗೆ ಇನ್ನು ಮಾತನಾಡಿಲ್ಲ. ಈ ಹಿಂದೆ ಅಕ್ಷಯ್ ಕುಮಾರ್ ಈ ಬ್ರ್ಯಾಂಡ್‌ನಿಂದ ಹೊರಬಂದಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ಅಕ್ಷಯ್ ಕ್ಷಮೆ ಕೇಳಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದ್ದರು. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಇಂತಹ ಬ್ರ್ಯಾಂಡ್‌ಗಳಿಂದ ದೂರ ಸರಿದಿದ್ದರು.

ಇದನ್ನೂ ಓದಿ: ಗುಟ್ಕಾ ಪ್ರಚಾರ: ಶಾರುಖ್, ಅಜಯ್, ಟೈಗರ್ ಶ್ರಾಫ್​​ಗೆ ನೊಟೀಸ್

ಸರ್ಕಾರಕ್ಕೆ ಆದಾಯ ತರುವ ಉತ್ಪನ್ನಗಳನ್ನು ನಟರು ಪ್ರಚಾರ ಮಾಡುವುದು ತಪ್ಪೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮಾರಾಟ ಬಂದ್ ಆಗದ ಹೊರತು ಈ ವಿವಾದ ಮುಗಿಯುವುದಿಲ್ಲ. ಈಗ ಈ ವಿವಾದಕ್ಕೆ ನಟರು ಯಾವ ರೀತಿ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿದ್ರೆಯಲ್ಲೇ ಕೊನೆಯುಸಿರೆಳೆದ ಬಾಲಿವುಡ್ ನಟಿ ಅನನ್ಯಾ; ಸಾವಿನ ತಿಂಗಳ ಬಳಿಕ ವಿಷಯ ರಿವೀಲ್ – Kannada News | ‘Ghost’ Actress Ananya Raj Passes Away At 35 After Battling Health Issues

ಚಿತ್ರರಂಗದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. 2019ರಲ್ಲಿ ರಲೀಸ್ ಆದ ‘ಘೋಸ್ಟ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಹಿ ಸುದ್ದಿಯನ್ನು ಅವರ ಕುಟುಂಬವು ತಡವಾಗಿ ತಿಳಿಸಿದ್ದು, ಅಭಿಮಾನಿಗಳಿಗೆ ತೀವ್ರ ದುಃಖ ತಂದಿದೆ.

ನಟಿ ಅನನ್ಯಾ ರಾಜ್ ಜುಲೈ 15 ರಂದು ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಅವರ ಕುಟುಂಬವು ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕುಟುಂಬಸ್ಥರು ಈ ನೋವಿನಿಂದ ಹೊರಬರಲು ಒಂದು ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುವಂತೆ ಅವರು ವಿನಂತಿಸಿದ್ದಾರೆ.

‘ಅನನ್ಯಾ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ದೈಹಿಕ ಹಾಗೂ ಮಾನಸಿಕ ಕಷ್ಟಗಳನ್ನು ಎದುರಿಸುತ್ತಿದ್ದರು. ಆದರೂ ಅವರು ಧೈರ್ಯದಿಂದ ಹೋರಾಟ ನಡೆಸಿದ್ದರು. ಅವರ ಮನಸ್ಸು ತುಂಬಾನೇ ಗಟ್ಟಿಯಾಗಿತ್ತು. ಅವರು ಸದಾ ಜೀವನವನ್ನು ಉತ್ಸಾಹದಿಂದ ನೋಡುತ್ತಿದ್ದರು.ಅವರು ಧೈರ್ಯವಂತೆ’ ಎಂದು ಕುಟು ಹೇಳಿದೆ.

ಅನನ್ಯಾ ರಾಜ್ ಮುಂಬೈನಲ್ಲಿ ನೆಲೆಸಿದ್ದರು. ಅವರು ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2016 ರಲ್ಲಿ ‘7 ಹವರ್ಸ್ ಟು ಗೋ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. 2017 ರಲ್ಲಿ ‘ದಿ ಫೈನಲ್ ಎಕ್ಸಿಟ್’ ಸಿನಿಮಾದಲ್ಲಿ ನಟಿಸಿದರು. 2019 ರ ‘ಘೋಸ್ಟ್’ ಹಾರರ್ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಇದನ್ನೂ ಓದಿ: ಒಟಿಟಿಗೆ ಬಂತು ಶಿವಣ್ಣ ನಟನೆಯ ‘ಘೋಸ್ಟ್’; 10,000 ಅಡಿ ಪೋಸ್ಟರ್ ಲಾಂಚ್  

ದಕ್ಷಿಣ ಭಾರತದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. 2022 ರ ತೆಲುಗಿನ ‘ತಗ್ಗೇದೆ ಲೆ’ ಸಿನಿಮಾದಲ್ಲಿ ಲಿಜಾ ಪಾತ್ರ ಮಾಡಿದ್ದರು. ‘ಮದ್ರಾಸಿ ಗ್ಯಾಂಗ್’ ಚಿತ್ರದಲ್ಲಿ ಸರಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಟಿ-ಸಿರೀಸ್ ಹಾಗೂ ಝೀ ಮ್ಯೂಸಿಕ್ ಜೊತೆ ಆಲ್ಬಮ್ ಹಾಡುಗಳಲ್ಲೂ ಅಭಿನಯಿಸಿದ್ದರು.

ಪ್ರಶ್ನೆ:  ಅನನ್ಯಾ ರಾಜ್ ಯಾರು?
ಉತ್ತರ: ಹಿಂದಿಯ ಘೋಸ್ಟ್​ ಸಿನಿಮಾ ನಟಿ

ಪ್ರಶ್ನೆ: ಅನನ್ಯಾ ರಾಜ್​ಗೆ ಏನಾಗಿತ್ತು?
ಉತ್ತರ: ದೈಹಿಕ ಹಾಗೂ ಮಾನಸಿಕ ಅನಾರೋಗ್ಯ

ಪ್ರಶ್ನೆ: ಅನನ್ಯಾ ರಾಜ್ ಸಾವಿನ ಸುದ್ದಿ ಯಾವಾಗ ರಿವೀಲ್?
ಉತ್ತರ: ಒಂದು ತಿಂಗಳ ಬಳಿಕ ರಿವೀಲ್

Published On – 8:02 am, Mon, 17 August 26

Source link

IND vs SL: ಮೂರನೇ ದಿನ 3 ಸೆಷನ್​ನಲ್ಲೂ ಮಳೆ ಭೀತಿ! – Kannada News | IND vs SL Test: Rain Threat Looms Large on Day 3

ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಕ್ಕೂ ಮಳೆಯ ಭೀತಿ ಎದುರಾಗಿದೆ. ಈಗಾಗಲೇ ಎರಡನೇ ದಿನದ ಆಟವು ಮಳೆಯಿಂದಾಗಿ ಕಡಿತಗೊಂಡಿದ್ದು, ಇಂದು (3ನೇ ದಿನ) ಕೂಡ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿವೆ.

ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಇಂದು ಗಾಲೆ ನಗರದಲ್ಲಿ ಮಳೆಯಾಗುವ ಒಟ್ಟಾರೆ ಸಂಭವನೀಯತೆ ಶೇಕಡಾ 83 ರಷ್ಟಿದೆ. ಎರಡನೇ ದಿನದಲ್ಲಿ ಒಂದೂವರೆ ಸೆಷನ್‌ಗಿಂತಲೂ ಹೆಚ್ಚು ಆಟವು ಮಳೆಗೆ ಆಹುತಿಯಾಗಿತ್ತು. ಇಂದು ಕೂಡ ಪಂದ್ಯವು ನಿರಂತರವಾಗಿ ಸ್ಥಗಿತಗೊಳ್ಳುತ್ತಾ, ಸ್ಟಾರ್ಟ್-ಸ್ಟಾಪ್ ರೂಪದಲ್ಲಿ ಸಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಹವಾಮಾನ ಮುನ್ಸೂಚನೆ:

ಬೆಳಗಿನ ಸೆಷನ್ (ಬೆಳಗ್ಗೆ 10:00 – ಮಧ್ಯಾಹ್ನ 12:00): ಪಂದ್ಯ ಆರಂಭವಾಗುವ ವೇಳೆಗೆ ಶೇಕಡಾ 51 ರಷ್ಟು ಮಳೆಯಾಗುವ ಸಾಧ್ಯತೆ ಇದೆ. 11:00 ಗಂಟೆಯ ಸುಮಾರಿಗೆ ಇದು ಶೇಕಡಾ 47 ಕ್ಕೆ ಇಳಿಯಬಹುದು.

ಮಧ್ಯಾಹ್ನದ ಸೆಷನ್ (ಮಧ್ಯಾಹ್ನ 12:40 – 2:40): ಈ ಅವಧಿಯಲ್ಲಿ ಮಳೆಯ ಭೀತಿ ಶೇಕಡಾ 44 ರಿಂದ 48 ರಷ್ಟಿರುತ್ತದೆ. ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಮಳೆಯ ಸಾಧ್ಯತೆ ಶೇಕಡಾ 52 ಕ್ಕೆ ಏರಲಿದೆ.

ಸಂಜೆಯ ಸೆಷನ್ (ಮಧ್ಯಾಹ್ನ 3:00 – ಸಂಜೆ 5:00): ಸಂಜೆಯ ವೇಳೆಗೆ ವಾತಾವರಣ ಸ್ವಲ್ಪ ಸುಧಾರಿಸಬಹುದು. ಮಧ್ಯಾಹ್ನ 3:00 ಗೆ ಶೇಕಡಾ 45 ರಷ್ಟಿದ್ದರೆ, ಸಂಜೆ 5:00 ರ ವೇಳೆಗೆ ಮಳೆಯ ಸಂಭವನೀಯತೆ ಶೇಕಡಾ 34 ಕ್ಕೆ ಇಳಿಯುವ ನಿರೀಕ್ಷೆಯಿದೆ.

ಅಂದರೆ ಮೂರು ಸೆಷನ್​ನಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿ ಇಂದಿನ ದಿನದಾಟಕ್ಕೂ ಮಳೆಯ ಕಾಟ ತಪ್ಪಿದ್ದಲ್ಲ.

ಬೃಹತ್ ಮೊತ್ತ ಪೇರಿಸಿದ ಭಾರತ:

ಗಾಲೆಯ ವಾತಾವರಣ ಕೈಕೊಡುತ್ತಿದ್ದರೂ, ತನ್ನ 600ನೇ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಭಾರತ ತಂಡ ಸದ್ಯ ಪಂದ್ಯದ ಮೇಲೆ ಬಲಿಷ್ಠ ಹಿಡಿತ ಸಾಧಿಸಿದೆ. ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ (167 ರನ್) ಮತ್ತು ಕೆಎಲ್ ರಾಹುಲ್ ಅವರ ಜವಾಬ್ದಾರಿಯುತ ಆಟದ (82 ರನ್) ನೆರವಿನಿಂದ ಭಾರತ ತಂಡ 2ನೇ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿದೆ.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

Source link

ಮಸಾಲೆ ಪದಾರ್ಥಗಳಲ್ಲೂ ಕಲಬೆರಕೆ: ಕರ್ನಾಟಕದ ಮನವಿ ಮೇರೆಗೆ EtO ಬಳಕೆಗೆ ಬ್ರೇಕ್ ಹಾಕಲು ಸಮಿತಿ ರಚಿಸಿದ ಕೇಂದ್ರ – Kannada News | Karnataka Food Safety Department Flags EtO in Spices, FSSAI Moves to Set New Standards

ಬೆಂಗಳೂರು, ಆಗಸ್ಟ್ 17: ಸ್ಟಾರ್ ಹೋಟೆಲ್‌ಗಳು, ಪ್ರತಿಷ್ಠಿತ ರೆಸ್ಟೋರೆಂಟ್‌ಗಳು ಹಾಗೂ ವಿವಿಧ ಆಹಾರ ಉತ್ಪನ್ನಗಳ ಮೇಲೆ ದಾಳಿ ನಡೆಸುತ್ತಿರುವ ಆಹಾರ ಸುರಕ್ಷತಾ ಇಲಾಖೆ (Food Saftey Department) ಇದೀಗ ಮಸಾಲೆ ಪದಾರ್ಥಗಳತ್ತವೂ (Masala Items) ಗಮನ ಹರಿಸಿದೆ. ಗರಂ ಮಸಾಲೆ, ಚಿಕನ್ ಮಸಾಲೆ, ಬಿರಿಯಾನಿ ಪೌಡರ್, ಸಾಂಬಾರ್ ಪೌಡರ್, ರಸಂ ಪೌಡರ್ ಸೇರಿದಂತೆ ರೆಡಿಮೇಡ್ ಮಸಾಲೆಗಳಲ್ಲಿ ಕೃತಕ ಬಣ್ಣ ಹಾಗೂ ಇತರ ರಾಸಾಯನಿಕಗಳ ಬಳಕೆಯ ಕುರಿತು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಇಲಾಖೆ ಈ ಕ್ರಮ ಕೈಗೊಂಡಿದೆ.

ಅಡುಗೆಗೆ ವ್ಯಾಪಕವಾಗಿ ಬಳಕೆಯಾಗುವ ಮಸಾಲೆ ಪದಾರ್ಥಗಳ ಗುಣಮಟ್ಟ ಮತ್ತು ಅವುಗಳಲ್ಲಿ ಬಳಸುವ ರಾಸಾಯನಿಕಗಳ ಪ್ರಮಾಣದ ಕುರಿತು ಹೆಚ್ಚಿನ ನಿಗಾ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಮಸಾಲೆ ಉತ್ಪನ್ನಗಳ ಬಳಕೆಗೆ ಸ್ಪಷ್ಟವಾದ ಮಾನದಂಡ ರೂಪಿಸುವ ಅಗತ್ಯವನ್ನೂ ಇಲಾಖೆ ಒತ್ತಿಹೇಳಿದೆ.

ಮಸಾಲೆಗಳಲ್ಲಿ EtO ಬಳಕೆ ಬಗ್ಗೆ ಆತಂಕ

ಮಸಾಲೆ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ (EtO) ಬಳಕೆ ಕುರಿತು ಆಹಾರ ಸುರಕ್ಷತಾ ಇಲಾಖೆಯಲ್ಲಿ ಆತಂಕ ವ್ಯಕ್ತವಾಗಿದೆ. ರಫ್ತು ಮಾಡುವ ಮಸಾಲೆ ಉತ್ಪನ್ನಗಳಿಗೆ ಅನ್ವಯಿಸುವ ಮಿತಿಗಿಂತ (30 ಅಥವಾ 50) ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಲವು ಉತ್ಪನ್ನಗಳಲ್ಲಿ EtO ಪ್ರಮಾಣ (200 -150) ಹೆಚ್ಚಿರಬಹುದು ಎಂಬ ಅನುಮಾನವನ್ನು ಇಲಾಖೆ ವ್ಯಕ್ತಪಡಿಸಿದೆ.

EtO ಅತಿಯಾದರೆ ದುಷ್ಪರಿಣಾಮ ಏನು?

EtOಗೆ ದೀರ್ಘಕಾಲದ ಅಥವಾ ಹೆಚ್ಚಿನ ಪ್ರಮಾಣದ ಒಡ್ಡಿಕೊಳ್ಳುವಿಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. EtO ಹೆಚ್ಚು ಸೇವನೆಯಿಂದ ಕಾರ್ಸಿನೋಜೆನಿಕ್ ಉತ್ಪತ್ತಿಯಾಗಿ ಕಾನ್ಸರ್ ತಗಲುವ ಸಂಭವವಿದೆ. ಜೊತೆಗೆ ಅಸಿಡಿಟಿ, ಕರುಳು ಬೇನೆ ಸೇರಿ ಅನೇಕ ಸಮಸ್ಯೆ ಬರುತ್ತದೆ. ಹೀಗಾಗಿ ಮಸಾಲೆ ಪದಾರ್ಥಗಳಲ್ಲಿನ ಇಂತಹ ರಾಸಾಯನಿಕಗಳ ಬಳಕೆಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ ಸೂಕ್ತ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಇಲಾಖೆ ಹೇಳಿದೆ.

FSSAIಗೆ ರಾಜ್ಯದಿಂದ ಪತ್ರ

ಈ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವಾದ FSSAIಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಸಾಲೆ ಪದಾರ್ಥಗಳಲ್ಲಿನ EtO ಬಳಕೆ ಹಾಗೂ ಅವುಗಳ ಗುಣಮಟ್ಟದ ಮಾನದಂಡಗಳ ಕುರಿತು ಪರಿಶೀಲನೆ ನಡೆಯಲಿದೆ.

ಇದನ್ನೂ ಓದಿ: ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ!

ಮುಂದಿನ ದಿನಗಳಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆ, ಬಳಕೆ ಹಾಗೂ ಅವುಗಳಲ್ಲಿ ರಾಸಾಯನಿಕಗಳ ಪ್ರಮಾಣದ ಮೇಲೆ ಹೆಚ್ಚಿನ ನಿಯಂತ್ರಣ ಜಾರಿಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vehicle Emission Test Price Hike: ವಾಹನ ಸವಾರರ ಜೇಬಿಗೆ ಕತ್ತರಿ: ರಾಜ್ಯದಲ್ಲಿ ಎಮಿಷನ್ ಟೆಸ್ಟ್ ದರ ಏರಿಕೆ! – Kannada News | Karnataka Vehicle Emission Test Price Hike: New Rates for Bike, Car and Commercial Vehicles

ಬೆಂಗಳೂರು, ಆಗಸ್ಟ್ 17: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮತ್ತೊಂದು ಬಿಗ್ ಶಾಕ್ ನೀಡಿದೆ. ರಾಜ್ಯದಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ವಾಹನಗಳ ಎಮಿಷನ್ ಸರ್ಟಿಫಿಕೇಟ್ (ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ/PUC) ದರವನ್ನು ಹೆಚ್ಚಳ ಮಾಡಲಾಗಿದೆ.

4 ವರ್ಷಗಳ ಬಳಿಕ ಮತ್ತೆ ಏರಿಕೆಯಾದ ಎಮಿಷನ್ ದರ

ದ್ವಿಚಕ್ರ ವಾಹನ, ಆಟೋ, ಕಾರು, ಲಾರಿ ಹಾಗೂ ಬಸ್ ಸೇರಿದಂತೆ ಯಾವುದೇ ಮಾದರಿಯ ವಾಹನ ಮಾಲೀಕರಿಗೂ ಇಂದಿನಿಂದ ಈ ದರ ಏರಿಕೆಯ ಬಿಸಿ ತಟ್ಟಲಿದೆ. 2021-2022ರಲ್ಲಿ ಕೊನೆಯ ಬಾರಿಗೆ ಎಮಿಷನ್ ಟೆಸ್ಟಿಂಗ್ ದರವನ್ನು ಪರಿಷ್ಕರಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿರುವುದು, ಕೇಂದ್ರಗಳ ಬಾಡಿಗೆ, ಕರೆಂಟ್ ಬಿಲ್ ಹಾಗೂ ಸಿಬ್ಬಂದಿಯ ಸಂಬಳ ಭರಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದರ ಹೆಚ್ಚಿಸುವಂತೆ ‘ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ಸ್ ಅಸೋಸಿಯೇಷನ್’ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಸಲ್ಲಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಈಗ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಎಮಿಷನ್ ಟೆಸ್ಟಿಂಗ್ ಕೇಂದ್ರಗಳ ನಿರ್ವಹಣಾ ವೆಚ್ಚ ಸಾಕಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಎಮಿಷನ್ ಸರ್ಟಿಫಿಕೇಟ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಯೋಗೀಶ್ ತಿಳಿಸಿದ್ದಾರೆ.

ಯಾವ ವಾಹನಕ್ಕೆ ಎಷ್ಟಿತ್ತು? ಈಗ ಎಷ್ಟಾಗಿದೆ? (ಹಳೆಯ vs ಹೊಸ ದರ ಪಟ್ಟಿ)

ಸವಾರರಿಗೆ ನಿಯಮ ಪಾಲನೆ ಕಡ್ಡಾಯ: ತಪ್ಪಿದರೆ ದಂಡದ ಬಿಸಿ!

ರಾಜ್ಯದಲ್ಲಿ ಒಟ್ಟು ಮೂರುವರೆ ಕೋಟಿಗೂ ಹೆಚ್ಚು ವಾಹನಗಳಿದ್ದು, ಕೇವಲ ರಾಜಧಾನಿ ಬೆಂಗಳೊಂದರಲ್ಲೇ ಸುಮಾರು 1 ಕೋಟಿ 30 ಲಕ್ಷಕ್ಕೂ ಅಧಿಕ ವಾಹನಗಳಿವೆ. ಪ್ರತಿಯೊಂದು ವಾಹನವೂ ನಿಯಮಾನುಸಾರ ಪ್ರತಿ 6 ತಿಂಗಳು ಅಥವಾ ವರ್ಷಕ್ಕೊಮ್ಮೆ ಎಮಿಷನ್ ಟೆಸ್ಟ್ ಮಾಡಿಸುವುದು ಕಡ್ಡಾಯ.

ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಸಂಚಾರ ಪೊಲೀಸರು 500 ರೂ. ಇಂದ 1,000 ರೂ.ವರೆಗೆ ದಂಡ ವಿಧಿಸುತ್ತಾರೆ. ಆರ್‌ಟಿಒ (RTO) ಅಧಿಕಾರಿಗಳು ವಾಹನಗಳಿಗೆ ಎಫ್‌ಸಿ (Fitness Certificate) ನವೀಕರಿಸುವುದಿಲ್ಲ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಇನ್ಶೂರೆನ್ಸ್ ಕ್ಲೈಮ್ ಸಿಗುವುದು ಕಷ್ಟವಾಗುತ್ತದೆ. ಈ ಹಿಂದೆ ಪ್ರತಿ ಎಮಿಷನ್ ಟೆಸ್ಟ್‌ಗೆ ಸರ್ಕಾರಕ್ಕೆ 3.25 ರೂ. ನೀಡಬೇಕಿತ್ತು, ಆದರೆ ಈಗ ಸರ್ಕಾರಕ್ಕೆ ನೀಡಬೇಕಾದ ಪಾಲು 13.80 ರೂ.ಗೆ ಏರಿಕೆಯಾಗಿದೆ.

ಸಾರ್ವಜನಿಕರ ಆಕ್ರೋಶ

ಸರ್ಕಾರದ ಈ ತೀರ್ಮಾನಕ್ಕೆ ವಾಹನ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಮಾಡಿಸಬೇಕು. ಈಗಾಗಲೇ ಬೆಲೆ ಏರಿಕೆಯಿಂದ ತೊಂದರೆಯಲ್ಲಿದ್ದೇವೆ, ಈಗ ಈ ದರ ಹೆಚ್ಚಳ ಸಾಮಾನ್ಯ ಹಾಗೂ ಬಡ ವಾಹನ ಸವಾರರಿಗೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ, ದಿನನಿತ್ಯದ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದರ ನಡುವೆಯೇ ಸಾರಿಗೆ ಇಲಾಖೆಯ ಈ ನಿರ್ಧಾರ ಕೋಟ್ಯಂತರ ವಾಹನ ಮಾಲೀಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕುವುದು ಖಚಿತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಂಪಿಯನ್ ಪಟ್ಟ ಅಲಂಕರಿಸಿದ ‘ಸೂಪರ್ ಜೈಂಟ್ಸ್​’ – Kannada News | Manchester Super Giants win The Hundred Title

ದಿ ಹಂಡ್ರೆಡ್ ಲೀಗ್​ನಲ್ಲಿ ಮ್ಯಾಚೆಂಸ್ಟರ್ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ನಡೆದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

ರಾಕೆಟ್ಸ್ ಬೃಹತ್ ಮೊತ್ತ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡ ನಿಗದಿತ 100 ಎಸೆತಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಆಟ ಹಾಗೂ ಆಲ್ ರೌಂಡರ್ ಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ ರಾಕೆಟ್ಸ್​ ಪಡೆಯು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಸೈಫರ್ಟ್ ಸಿಡಿಲಬ್ಬರ:

159 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಟ್ರೆಂಟ್ ರಾಕೆಟ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸೈಫರ್ಟ್, ಕೇವಲ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್ ಚಚ್ಚಿದರು. ಈ ಮೂಲಕ ‘ದಿ ಹಂಡ್ರೆಡ್’ ಫೈನಲ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಮೀರ್ ಸೃಷ್ಟಿಸಿದ ನಡುಕ:

ಒಂದು ಹಂತದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ ಸುಲಭವಾಗಿ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ (29 ರನ್‌ಗೆ 3 ವಿಕೆಟ್) ಸತತ ಆರು ಡಾಟ್ ಬಾಲ್‌ಗಳನ್ನು ಎಸೆದು, ಅಪಾಯಕಾರಿ ಬ್ಯಾಟರ್‌ಗಳಾದ ಹೆನ್ರಿಕ್ ಕ್ಲಾಸೆನ್ ಮತ್ತು ಮೈಕೇಲ್ ಬ್ರೇಸ್‌ವೆಲ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ಭರ್ಜರಿ ಟ್ವಿಸ್ಟ್ ನೀಡಿದರು.

ಡಾಸನ್ ವಿನ್ನಿಂಗ್ ಸಿಕ್ಸ್!

ಕೊನೆಯ 3 ಎಸೆತಗಳಲ್ಲಿ ಮ್ಯಾಂಚೆಸ್ಟರ್ ಗೆಲುವಿಗೆ 3 ರನ್ ಬೇಕಾಗಿದ್ದಾಗ, ಇಂಗ್ಲೆಂಡ್‌ನ ಅನುಭವಿ ಆಟಗಾರ ಲಿಯಾಮ್ ಡಾಸನ್ ಬೆನ್ ಸ್ಯಾಂಡರ್ಸನ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರು. ಈ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ 98 ಎಸೆತಗಳಲ್ಲಿ 162 ರನ್​ಗಳಿಸಿ ಮ್ಯಾಂಚೆಸ್ಟರ್​ ಸೂಪರ್ ಜೈಂಟ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಬೆನ್ ಡಕೆಟ್ , ಫಿನ್ ಅಲೆನ್ , ಅನ್ಯೂರಿನ್ ಡೊನಾಲ್ಡ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ಟಿಮ್ ಡೇವಿಡ್ , ಮಿಚೆಲ್ ಸ್ಯಾಂಟ್ನರ್ , ಲೂಯಿಸ್ ಗ್ರೆಗೊರಿ , ಕ್ಯಾಲ್ವಿನ್ ಹ್ಯಾರಿಸನ್ , ಕ್ರೇಗ್ ಓವರ್ಟನ್ , ಬೆನ್ ಸ್ಯಾಂಡರ್ಸನ್ , ಮೊಹಮ್ಮದ್ ಅಮೀರ್.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್​ ಪ್ಲೇಯಿಂಗ್ 11: ಟಿಮ್ ಸೈಫರ್ಟ್ , ಪಾಲ್ ವಾಲ್ಟರ್ , ಜೋಸ್ ಬಟ್ಲರ್ (ನಾಯಕ) , ಹೆನ್ರಿಕ್ ಕ್ಲಾಸೆನ್ , ಮೈಕೆಲ್ ಬ್ರೇಸ್‌ವೆಲ್ , ಲ್ಯೂಸ್ ಡು ಪ್ಲೂಯ್ , ಲಿಯಾಮ್ ಡಾಸನ್ , ಗಸ್ ಅಟ್ಕಿನ್ಸನ್ , ನೂರ್ ಅಹ್ಮದ್ , ಸೋನಿ ಬೇಕರ್ , ಜೋಶ್ ಟಂಗ್.

ಸೂಪರ್ ಜೈಂಟ್ಸ್​ಗೆ ಚೊಚ್ಚಲ ಟ್ರೋಫಿ:

ಸಂಜೀವ್ ಗೊಯೆಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ (RPSG) ಗ್ರೂಪ್ ಒಡೆತನದ ‘ಸೂಪರ್ ಜೈಂಟ್ಸ್’ ಫ್ರಾಂಚೈಸಿಗೆ ಒಲಿದ ಮೊದಲ ಟ್ರೋಫಿ ಇದಾಗಿದೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳನ್ನು ಈಗಾಗಲೇ ಕಣಕ್ಕಿಳಿಸಿದ್ದರೂ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹೆಸರಿನಲ್ಲಿ ಕಣಕ್ಕಿಳಿದ ಮೊದಲ ವರ್ಷದಲ್ಲೇ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Published On – 7:39 am, Mon, 17 August 26

Source link

Exit mobile version