ಶ್ರೇಯಸ್ ಅಯ್ಯರ್ ಅವರ ಒಂದು ನಿರ್ಧಾರ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣವಾಯಿತೇ? – Kannada News | Shreyas Iyer explains why Chahal didn’t bowl a single over vs Delhi Capitals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 210 ರನ್ ಕಲೆಹಾಕಿದ್ದರು.

ಈ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್​ ಗಳಿಸಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಒಂದು ನಿರ್ಧಾರವು ಚರ್ಚೆಗೆ ಕಾರಣವಾಗಿದೆ. ಅದೇನೆಂದರೆ ಯುಜ್ವೇಂದ್ರ ಚಹಲ್​ಗೆ ಓವರ್ ನೀಡದಿರುವುದು.

ಈ ಪಂದ್ಯದ ಮಧ್ಯಂತರ ಹಂತದಲ್ಲಿ ಸ್ಪಿನ್ನರ್‌ಗಳ ನೆರವು ಪಡೆಯುವ ಅವಕಾಶವಿದ್ದರೂ ಶ್ರೇಯಸ್ ಅಯ್ಯರ್ ಕೇವಲ ವೇಗಿಗಳನ್ನೇ ಅವಲಂಬಿಸಿದರು. ಇದಾಗ್ಯೂ ಚಹಲ್ ಅವರಿಗೆ ಒಂದೇ ಒಂದು ಓವರ್ ನೀಡಿರಲಿಲ್ಲ.

ಅಯ್ಯರ್ ನೀಡಿದ ಕಾರಣವೇನು?

ಈ ಪಂದ್ಯದ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, ಚಹಲ್ ಅವರನ್ನು ಬಳಸದಿರುವುದಕ್ಕೆ ಪಿಚ್‌ನ ಸ್ವರೂಪವೇ ಕಾರಣ ಎಂದು ಸಮರ್ಥಿಸಿಕೊಂಡಿದ್ದಾರೆ. “ಧರ್ಮಶಾಲಾದ ಈ ಪಿಚ್‌ನಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ಸಿಗುತ್ತಿತ್ತು. ಚೆಂಡು ಅನಿರೀಕ್ಷಿತವಾಗಿ ಬೌನ್ಸ್ ಆಗುತ್ತಿತ್ತು ಮತ್ತು ಮೂಮೆಂಟ್ ಇತ್ತು. ನಮ್ಮ ವೇಗಿಗಳು ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು,” ಎಂದು ಹೇಳಿದ್ದಾರೆ

“ನಾವು 210 ರನ್ ಗಳಿಸಿದ್ದೆವು, ಇದು ಈ ಪಿಚ್‌ನಲ್ಲಿ ಪಾರ್ ಸ್ಕೋರ್‌ಗಿಂತ 30 ರನ್ ಹೆಚ್ಚೇ ಆಗಿತ್ತು. ಆದರೆ ನಮ್ಮ ಬೌಲರ್‌ಗಳು ‘ಹಾರ್ಡ್ ಲೆಂಗ್ತ್’ ಎಸೆಯುವಲ್ಲಿ ಮತ್ತು ಕ್ಷೇತ್ರರಕ್ಷಣೆಯಲ್ಲಿ ವಿಫಲರಾದರು,” ಎಂದು ಶ್ರೇಯಸ್ ಅಯ್ಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದರೆ ಪಿಚ್​ನ ಸ್ವರೂಪವು ಸ್ಪಿನ್ನರ್​ಗೆ ನೆರವಾಗುವಂತಿರಲಿಲ್ಲ. ಹೀಗಾಗಿಯೇ ನಾನು ಯುಜ್ವೇಂದ್ರ ಚಹಲ್​ಗೆ ಓವರ್ ನೀಡಲಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾಗ ಚಹಲ್ ಅವರನ್ನು ಬೌಲಿಂಗ್‌ಗೆ ತರುವುದು ಅಪಾಯಕಾರಿ ಎಂದು ಅಯ್ಯರ್ ಭಾವಿಸಿದ್ದರು. ಎಡಗೈ ಬ್ಯಾಟರ್‌ಗಳು ಲೆಗ್ ಸ್ಪಿನ್ನರ್ ವಿರುದ್ಧ ಸುಲಭವಾಗಿ ರನ್ ಗಳಿಸಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಟೆಸ್ಟ್​ ನಿವೃತ್ತಿಗೆ ಒಂದು ವರ್ಷ; ಕಂಬ್ಯಾಕ್ ಅಸಾಧ್ಯ

ಇದಾಗ್ಯೂ ವೇಗಿಗಳು ದುಬಾರಿಯಾದಾಗಲೂ ಯುಜ್ವೇಂದ್ರ ಚಹಲ್ ಅವರಿಗೆ ಚೆಂಡು ನೀಡದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ತಂಡದಲ್ಲಿದ್ದರೂ ಪಂದ್ಯ ಕೈ ತಪ್ಪುವ ಭೀತಿ ಎದುರಾದಗಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಯುಜ್ವೇಂದ್ರ ಚಹಲ್​ನನ್ನು ಕಡೆಗಣಿಸಿದ್ದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Source link

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: 45 ಮಂದಿ ವಶಕ್ಕೆ ಪಡೆದು ವಿಚಾರಣೆ ಹಾಗೂ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | NEET Paper Leak Case: 45 Detained for Questioning; CM Vijay Closes 717 Liquor Shops and Other Major News Updates

ಜೈಪುರ/ನವದೆಹಲಿ, ಮೇ 12: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 45 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಜನರನ್ನು ಸದ್ಯ ಪೊಲೀಸ್ ಕಸ್ಟಡಿಯಲ್ಲೇ ಇರಿಸಲಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸಲು ಆದೇಶಿಸಿದ್ದು, ಶೀಘ್ರದಲ್ಲೇ ಈ ಆರೋಪಿಗಳನ್ನು ಸಿಬಿಐ ವಶಕ್ಕೆ ಒಪ್ಪಿಸುವ ಸಾಧ್ಯತೆಯಿದೆ. ದೇಶಾದ್ಯಂತ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಜಾಲದ ಮೂಲವನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಮುಂದಾಗಿವೆ.

ಮುಖ್ಯಾಂಶಗಳು

  • ರಾಜಸ್ಥಾನದಲ್ಲಿ ನೀಟ್ ಹಗರಣಕ್ಕೆ ಸಂಬಂಧಿಸಿದಂತೆ 45 ಜನರ ವಿಚಾರಣೆ; ಸಿಬಿಐ ತನಿಖೆ ಶೀಘ್ರ ಆರಂಭ.
  • ಎರಡನೇ ಬಾರಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕಾರ.
  • ತಮಿಳುನಾಡಿನಲ್ಲಿ ಸಿಎಂ ವಿಜಯ್ ಆದೇಶದಂತೆ 717 ಮದ್ಯದ ಅಂಗಡಿಗಳ ಬಂದ್; ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿ.

ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಆಡಳಿತ ಶುರು

ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ನಟ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಮೊದಲ ಕಟ್ಟುನಿಟ್ಟಿನ ಕ್ರಮವಾಗಿ ದೇವಸ್ಥಾನ ಮತ್ತು ಶಾಲೆಗಳ ಸಮೀಪವಿರುವ 717 ‘ಟಾಸ್ಮಾಕ್’ ಸಾರಾಯಿ ಅಂಗಡಿಗಳನ್ನು ಮುಚ್ಚುವಂತೆ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಅಬಕಾರಿ ಬದಲಾವಣೆ

ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ಬಂದ್ ಆಗುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಮೇ 11 ರಿಂದ ಹೊಸ ಅಬಕಾರಿ ನೀತಿ ಜಾರಿಗೆ ಬಂದಿದೆ. ಈ ನೀತಿಯ ಅನ್ವಯ ಕಡಿಮೆ ಬೆಲೆಯ ಮದ್ಯದ ದರದಲ್ಲಿ ಶೇ 20 ರಿಂದ 30 ರಷ್ಟು ಏರಿಕೆಯಾಗಿದ್ದು, ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ಮದ್ಯಪ್ರಿಯರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ

ಅಬಕಾರಿ ತೆರಿಗೆಯನ್ನು ಮದ್ಯದ ಪ್ರಮಾಣಕ್ಕಿಂತ ಹೆಚ್ಚಾಗಿ ಆಲ್ಕೋಹಾಲ್ ಅಂಶದ ಮೇಲೆ ವಿಧಿಸುತ್ತಿರುವುದು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆನ್​​ಲೈನ್​​ ತರಗತಿಗೆ ಅಪಸ್ವರ: ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ

ಬೆಂಗಳೂರು, ಮೇ 12: ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡುವ ಪ್ರಧಾನ ಮಂತ್ರಿಗಳ ಇತ್ತೀಚಿನ ಹೇಳಿಕೆಯನ್ನು ಖಾಸಗಿ ಶಾಲಾ ಒಕ್ಕೂಟ ಖಂಡಿಸಿದೆ. ಶಾಲಾ ಶಿಕ್ಷಣದಲ್ಲಿ ಭೌತಿಕ ತರಗತಿಗಳು ಅತ್ಯಗತ್ಯ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ 500 ದಿನಗಳ ಕಾಲ ಮಕ್ಕಳಿಗೆ ಆದ ಕಲಿಕೆಯ ನಷ್ಟ ಮತ್ತು ಅನ್ಯಾಯವನ್ನು ಸರಿಪಡಿಸಲು ಇಂದಿಗೂ ಸಾಧ್ಯವಾಗಿಲ್ಲ. ಶಾಲಾ ಶಿಕ್ಷಣದಲ್ಲಿ ಆನ್‌ಲೈನ್ ವ್ಯವಸ್ಥೆಯು ಭೌತಿಕ ತರಗತಿಗಳಿಗೆ ಪರ್ಯಾಯವಲ್ಲ. ಕಲಿಕೆಯ ವಿಧಾನಕ್ಕೆ ಭೌತಿಕ ತರಗತಿಗಳು ಅನಿವಾರ್ಯವಾಗಿವೆ. ಆನ್‌ಲೈನ್ ಶಿಕ್ಷಣವು ಹೆಚ್ಚುವರಿ ಅಥವಾ ಉನ್ನತ ಶಿಕ್ಷಣಕ್ಕೆ ಅನ್ವಯವಾಗಬಹುದಾದರೂ, ಶಾಲಾ ಶಿಕ್ಷಣಕ್ಕೆ ಇದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

NEET Exam 2026: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ – Kannada News | NEET UG 2026 Paper Leak: Minister Madhu Bangarappa Slams Central Govt Over ‘Failed Administration’; Challenges R Ashoka

ಬೆಂಗಳೂರು, ಮೇ 12: ನೀಟ್ ಯುಜಿ 2026 ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯ ಸರ್ಕಾರದಲ್ಲಿ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಈ ಪ್ರಶ್ನೆ ಕೇಳಿ ಎಂದು ಸವಾಲು ಹಾಕಿದರು. ಸತತ ಎರಡನೇ ವರ್ಷವೂ ಇಂತಹ ಅವ್ಯವಸ್ಥೆ ನಡೆದಿರುವುದು ಮಕ್ಕಳ ಭವಿಷ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ವಿದ್ಯಾರ್ಥಿಗಳು ಉತ್ತಮ ವ್ಯವಸ್ಥೆ ಇಲ್ಲದಿದ್ದರೂ ಕಷ್ಟಪಟ್ಟು ಓದಿ ಉತ್ತಮ ಫಲಿತಾಂಶ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಕೇಂದ್ರದ ‘ಅವ್ಯವಸ್ಥೆ ಮತ್ತು ಹೊಲಸು ಅಡ್ಮಿನಿಸ್ಟ್ರೇಷನ್’ ಕಾರಣದಿಂದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಸಚಿವರು ಬಲವಾಗಿ ಪ್ರತಿಪಾದಿಸಿದರು. ತಮಟೆ ಹೊಡೆದು ದೀಪ ಹಚ್ಚುವವರಿಗೆ ಇನ್ನೇನು ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indian Navy Recruitment: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ; ಅವಿವಾಹಿತರು ಅರ್ಹರು – Kannada News | Indian Navy IT Officer Recruitment 2027: SSC Posts, Apply Now!

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶImage Credit source: Ai generated

ಕೇರಳದಲ್ಲಿರುವ ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿ (INA), 2027ರ ಜನವರಿ ಬ್ಯಾಚ್‌ಗಾಗಿ ಮಾಹಿತಿ ತಂತ್ರಜ್ಞಾನ (IT) ವಿಭಾಗದಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ (SSC) ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 15 ಹುದ್ದೆಗಳು ಲಭ್ಯವಿದ್ದು, ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶ ಸೇವೆ ಮಾಡುವ ಜೊತೆಗೆ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ಇಂಟರ್ಮೀಡಿಯೇಟ್ ಹಂತದಲ್ಲಿ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು. ಇದರೊಂದಿಗೆ ಕಂಪ್ಯೂಟರ್ ಸೈನ್ಸ್, ಐಟಿ, ಸಾಫ್ಟ್‌ವೇರ್ ಸಿಸ್ಟಮ್ಸ್, ಡೇಟಾ ಅನಾಲಿಟಿಕ್ಸ್ ಅಥವಾ ಎಐ ವಿಷಯದಲ್ಲಿ ಬಿಇ, ಬಿಟೆಕ್, ಬಿಸಿಎ ಅಥವಾ ಎಂಸಿಎ ಪದವಿಯನ್ನು ಶೇ. 60ರಷ್ಟು ಅಂಕಗಳೊಂದಿಗೆ ಪೂರೈಸಿರಬೇಕು. ಅಭ್ಯರ್ಥಿಗಳು ಜನವರಿ 1, 2002 ಮತ್ತು ಜುಲೈ 1, 2007 ರ ನಡುವೆ ಜನಿಸಿರಬೇಕು. ಪ್ರಸ್ತುತ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಪರೀಕ್ಷೆಯಿಲ್ಲದೆ ನೇರ ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಎನ್‌ಸಿಸಿ (NCC) ‘C’ ಪ್ರಮಾಣಪತ್ರ ಹೊಂದಿರುವವರಿಗೆ ಕಟ್‌ಆಫ್ ಅಂಕಗಳಲ್ಲಿ ಶೇ. 5ರಷ್ಟು ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ವೇತನ ಶ್ರೇಣಿ ಮತ್ತು ತರಬೇತಿ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಅಂದಾಜು ರೂ. 56,100 ಆರಂಭಿಕ ವೇತನದೊಂದಿಗೆ ಇತರೆ ಸರ್ಕಾರಿ ಸವಲತ್ತುಗಳು ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಕೇರಳದ ಎಜಿಮಲಾದಲ್ಲಿ 6 ವಾರಗಳ ಕಾಲ ಕಠಿಣ ತರಬೇತಿ ಇರಲಿದ್ದು, ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳು ಮದುವೆಯಾಗುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಮದುವೆಯಾದರೆ ಅಂತಹವರನ್ನು ತರಬೇತಿಯಿಂದ ವಜಾಗೊಳಿಸಲಾಗುತ್ತದೆ. ಆರಂಭಿಕ ಸೇವಾ ಅವಧಿಯು 10 ವರ್ಷಗಳಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಇನ್ನೂ 4 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆಸಕ್ತರು ಮೇ 16 ರಿಂದ ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 1 ಕೊನೆಯ ದಿನಾಂಕವಾಗಿರುತ್ತದೆ. ಐಟಿ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಯುವಕ-ಯುವತಿಯರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮನೆಯ ಗೋಡೆ: ಓರ್ವ ಬಾಲಕಿ ಸಾವು, ಮತ್ತಿಬ್ಬರಿಗೆ ಗಾಯ – Kannada News | Yadgir Tragedy: 8 Year Old Girl Dies in Wall Collapse After Heavy Rains

ಯಾದಗಿರಿ, ಮೇ 12: ವರುಣನ ಆರ್ಭಟಕ್ಕೆ ಮನೆ ಗೋಡೆ ಕುಸಿದು ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ. ಅಕ್ಷತಾ(8) ಮೃತ ದುರ್ದೈವಿಯಾಗಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಖ್ಯಾಂಶಗಳು

  • ಮನೆ ಗೋಡೆ ಕುಸಿದು ಬಾಲಕಿ ದಾರುಣ ಸಾವು
  • ವಡಗೇರಾದ ತುಮಕೂರು ಗ್ರಾಮದಲ್ಲಿ ಘಟನೆ
  • 8 ವರ್ಷದ ಬಾಲಕಿ ಅಕ್ಷತಾ ಮೃತ ದುರ್ದೈವಿ

ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ರೆಡ್​ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್​ಪೆಕ್ಟರ್!

ಸಿದ್ದಪ್ಪ ಎಂಬುವರಿಗೆ ಸೇರಿದ ಮನೆಯ ಅಡುಗೆ ಕೋಣೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿದಿದೆ. ಅವಶೇಷಗಳಡಿ ಸಿಲುಕಿದ್ದ ಮಕ್ಕಳಾದ ಸಂಗೀತಾ ಹಾಗೂ ಭೂಮಿಕಾಳನ್ನ ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಕ್ಷತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೊನ್ನೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಈ ವೇಳೆ ನೀರಿನಲ್ಲಿ ನೆಂದಿದ್ದ ಅಡುಗೆ ಕೋಣೆಯ ಗೋಡೆ ಅಲುಗಾಡುವ ಹಂತಕ್ಕೆ ಬಂದಿತ್ತು. ಗಾಳಿಯ ಅಬ್ಬರಕ್ಕೆ ಕೋಣೆಯ ತಗಡಿನ ಮೇಲ್ಛಾವಣಿ ಹಾರಹೋಗಿತ್ತು. ಹೀಗಾಗಿ ಮನೆಯವರು ಅಡುಗೆ ಕೋಣೆಯನ್ನು ಬೇರೆಡೆಗೆ ಶಿಫ್ಟ್​​ ಮಾಡಿದ್ದರು. ಆದರೆ ಅದೇ ಜಾಗದಲ್ಲಿ ಮಕ್ಕಳು ಆಟ ಆಡುವ ವೇಳೆ ಗೋಡೆ ಕುಸಿದ ಪರಿಣಾಮ ಓರ್ವ ಬಾಲಕಿಯ ಸಾವಾಗಿದೆ.

ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿ.ಪಂ.CEO ಲವೀಶ್ ಒರಡಿಯಾ ಮತ್ತು SP ಪೃಥ್ವಿಕ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬದುಕಿ ಬಾಳಬೇಕಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾವುದೇ ಅನಾಹುತ ಆಗಬಾರದೆಂದು ಮುನ್ನೆಚ್ಚರಿಕೆಯಿಂದ ಅಡುಗೆ ಮನೆಯನ್ನೇ ಬೇರೆಡೆ ಶಿಫ್ಟ್​​ ಮಾಡಿದ್ದರೂ ವಿಧಿಯಾಟಕ್ಕೆ ಬಾಲಕಿಯ ಸಾವಾಗಿರೋದು ಗ್ರಾಮಸ್ಥರಿಗೂ ಆಘಾತ ಉಂಟುಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rates: ಚಿನ್ನದ ಬೆಲೆ ಗ್ರಾಮ್​ಗೆ 170 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 12th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 12: ಕಳೆದ ಕೆಲ ದಿನಗಳಿಂದ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rates) ಈಗ ಭರ್ಜರಿ ಏರಿಕೆ ಕಂಡಿದೆ. ಇಂದು ಮಂಗಳವಾರ ಬಂಗಾರದ ದರದಲ್ಲಿ ಗ್ರಾಮ್​ಗೆ 170 ರೂ ಹೆಚ್ಚಳವಾಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಗ್ರಾಮ್​ಗೆ ಅದರ ಬೆಲೆಯಲ್ಲಿ 15 ರೂ ಹಿಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,398 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,115 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,410 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,398 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,115 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,115 ರೂ
  • ಚೆನ್ನೈ: 14,330 ರೂ
  • ಮುಂಬೈ: 14,115 ರೂ
  • ದೆಹಲಿ: 14,130 ರೂ
  • ಕೋಲ್ಕತಾ: 14,115 ರೂ
  • ಕೇರಳ: 14,115 ರೂ
  • ಅಹ್ಮದಾಬಾದ್: 14,120 ರೂ
  • ಜೈಪುರ್: 14,130 ರೂ
  • ಲಕ್ನೋ: 14,130 ರೂ
  • ಭುವನೇಶ್ವರ್: 14,115 ರೂ

ಇದನ್ನೂ ಓದಿ: ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 573 ರಿಂಗಿಟ್ (13,916 ರುಪಾಯಿ)
  • ದುಬೈ: 528.50 ಡಿರಾಮ್ (13,747 ರುಪಾಯಿ)
  • ಅಮೆರಿಕ: 147.50 ಡಾಲರ್ (14,091 ರುಪಾಯಿ)
  • ಸಿಂಗಾಪುರ: 187.30 ಸಿಂಗಾಪುರ್ ಡಾಲರ್ (14,076 ರುಪಾಯಿ)
  • ಕತಾರ್: 523.50 ಕತಾರಿ ರಿಯಾಲ್ (13,722 ರೂ)
  • ಸೌದಿ ಅರೇಬಿಯಾ: 536 ಸೌದಿ ರಿಯಾಲ್ (13,649 ರುಪಾಯಿ)
  • ಓಮನ್: 56.10 ಒಮಾನಿ ರಿಯಾಲ್ (13,922 ರುಪಾಯಿ)
  • ಕುವೇತ್: 43.34 ಕುವೇತಿ ದಿನಾರ್ (13,521 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 290 ರೂ
  • ಚೆನ್ನೈ: 300 ರೂ
  • ಮುಂಬೈ: 290 ರೂ
  • ದೆಹಲಿ: 290 ರೂ
  • ಕೋಲ್ಕತಾ: 290 ರೂ
  • ಕೇರಳ: 300 ರೂ
  • ಅಹ್ಮದಾಬಾದ್: 290 ರೂ
  • ಜೈಪುರ್: 290 ರೂ
  • ಲಕ್ನೋ: 290 ರೂ
  • ಭುವನೇಶ್ವರ್: 300 ರೂ
  • ಪುಣೆ: 290

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಫಿಟ್​​ನೆಸ್​​ ಗುಟ್ಟೇನು? ಖಾಸಗಿ ಟ್ರೈನರ್ ಹಂಚಿಕೊಂಡ ಕುತೂಹಲಕಾರಿ ಮಾಹಿತಿ – Kannada News | Thalapathy Vijay’s personal trainer talks about Vijay’s food and workout

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ ಆಗಿದ್ದಾರೆ. ಸಿನಿಮಾ ನಟನಾಗಿ ಅದ್ಧೂರಿ ಯಶಸ್ಸು ಅವರಿಗೆ ದೊರೆತಿದೆ. ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ರಾಜಕಾರಣಿಗಳಂತೆ ಅಲ್ಲದೆ, ಸಾಕಷ್ಟು ಫಿಟ್ ಆಗಿರುವ, ವಯಸ್ಸೂ ಇರುವ ಸಿಎಂ ಆಗಿದ್ದಾರೆ. ವಿಜಯ್ ಅವರಿಗೆ ಈಗ 50ರ ವಯಸ್ಸು, ಜಯಲಲಿತಾ ಬಿಟ್ಟರೆ ಅತಿ ಕಡಿಮೆ ವಯಸ್ಸಿಗೆ ತಮಿಳುನಾಡು ಸಿಎಂ ಆದವರು ವಿಜಯ್. 50ರ ಹರೆಯದಲ್ಲೂ ಅವರು 30ರ ಹರೆಯದವರಂತೆ ವಿಜಯ್ ಕಾಣುತ್ತಾರೆ. ಸಿನಿಮಾನಲ್ಲಿ ಫಿಟ್​​ನೆಸ್ ಬಹಳ ಮುಖ್ಯ, ಹಾಗೆಯೇ ರಾಜಕಾರಣಕ್ಕೂ ಸಹ. ವಿಜಯ್ ತಮ್ಮ ಫಿಟ್​​ನೆಸ್ ಹೇಗೆ ಮೇಂಟೇನ್ ಮಾಡುತ್ತಾರೆ, ಪ್ರತಿದಿನ ಅವರು ತಿನ್ನುವ ಆಹಾರ ಏನು? ಮಾಡುವ ವ್ಯಾಯಾಮಗಳೇನು? ಅವರ ಖಾಸಗಿ ಟ್ರೈನರ್ ನರೇಶ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ.

ವಿಜಯ್ ಅವರ ಖಾಸಗಿ ಟ್ರೈನರ್ ನರೇಶ್ ಕುಮಾರ್ ಹೇಳಿರುವಂತೆ, ವಿಜಯ್ ಅವರು ತಮ್ಮ ಆಹಾರದ ವಿಷಯದಲ್ಲಿ ಅತೀ ಹೆಚ್ಚು ಶಿಸ್ತು ಪಾಲಿಸುತ್ತಾರೆ. ಅವರು ಅತಿಯಾಗಿ ತಿನ್ನುವುದಿಲ್ಲ, ಬಹಳ ಹಿತವಾಗಿ ಮಿತವಾಗಿ ತಿನ್ನುತ್ತಾರೆ. ವಿಶೇಷವಾಗಿ ಕರಿದ ಪದಾರ್ಥಗಳಿಂದ ದೂರವಿರುತ್ತಾರೆ. ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಮತ್ತು ತಾಜಾ ತರಕಾರಿಗಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರಂತೆ. ರಾತ್ರಿ 7 ಗಂಟೆಯೊಳಗೆ ತಮ್ಮ ಊಟವನ್ನು ಮುಗಿಸುವುದು ಅವರ ಪ್ರಮುಖ ಆರೋಗ್ಯ ಸೂತ್ರಗಳಲ್ಲಿ ಒಂದು ಎಂದಿದ್ದಾರೆ ಅವರು.

ವಿಜಯ್ ಅವರಿಗೆ ಬಲ್ಕ್ ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವಾಸವಿಲ್ಲವಂತೆ. ಅವರು ಆರೋಗ್ಯಕ್ಕಾಗಿ ಜಿಮ್ ಮಾಡುತ್ತಾರಂತೆ. ವಿಜಯ್ ಗಂಟೆಗಟ್ಟಲೆ ಜಿಮ್​​ನಲ್ಲಿ ಕಳೆಯುವುದಿಲ್ಲ ಬದಲಿಗೆ ವ್ಯವಸ್ಥಿತವಾಗಿ ತಮ್ಮ ದೇಹದ ಆರೋಗ್ಯ ಮತ್ತು ಫ್ಲೆಕ್ಸಿಬಿಲಿಟಿಗೆ ಬೇಕಾದ ವ್ಯಾಯಾಮಗಳನ್ನಷ್ಟೆ ಮಾಡುತ್ತಾರೆ. ಪ್ರತಿದಿನ ಕಾರ್ಡಿಯೋ ವ್ಯಾಯಾಮಗಳು ಮತ್ತು ವೇಯ್ಟ್ ಲಿಫ್ಟಿಂಗ್ ತಪ್ಪದೇ ಮಾಡುತ್ತಾರಂತೆ ವಿಜಯ್. ಶೂಟಿಂಗ್ ಎಷ್ಟೇ ತಡವಾದರೂ ಅಥವಾ ಎಷ್ಟೇ ದಣಿದಿದ್ದರೂ, ಅವರು ವ್ಯಾಯಾಮವನ್ನು ಮಾತ್ರ ಕೈಬಿಡುವುದಿಲ್ಲವಂತೆ.

ಇದನ್ನೂ ಓದಿ:ವಿಜಯ್ ಸೂಟು-ಸ್ಟಾಲಿನ್ ಪಂಚೆ: ಅಣ್ಣಾಮಲೈ ಸಖತ್ ಟಾಂಗ್

ಫಿಟ್‌ನೆಸ್ ಎನ್ನುವುದು ಕೇವಲ ದೈಹಿಕವಷ್ಟೇ ಅಲ್ಲ, ಅದು ಮಾನಸಿಕ ಶಿಸ್ತಿನಿಂದ ಬರುತ್ತದೆ ಎಂದು ನರೇಶ್ ವಿವರಿಸಿದ್ದಾರೆ. ವಿಜಯ್ ಅವರಿಗೆ ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇದೆ. ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಮತ್ತು ಜಂಕ್ ಫುಡ್‌ಗಳನ್ನು ಅವರು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಸಿನಿಮಾ ಪಾತ್ರಗಳಿಗೆ ತಕ್ಕಂತೆ ತಮ್ಮ ದೇಹವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾ ಕೆಲ ವರ್ಷಗಳ ಹಿಂದಷ್ಟೆ ಬಂದಿತ್ತು. ಆ ಸಿನಿಮಾನಲ್ಲಿ ಅವರು ಶರ್ಟ್​​ಲೆಸ್ ಆಗಿ ಸಹ ಕಾಣಿಸಿಕೊಂಡಿದ್ದರು. ವಿಜಯ್ ಅವರು ಸಿಕ್ಸ್ ಪ್ಯಾಕ್ ಮಾಡಿಲ್ಲವಾದರೂ ಬೊಜ್ಜು ರಹಿತದವಾದ ಫಿಟ್ ಆಗಿರುವ ದೇಹವನ್ನು ಮೇಂಟೇನ್ ಮಾಡಿದ್ದಾರೆ. ದಿನಪೂರ್ತಿ ದಣಿಯದೆ, ಉತ್ಸಾಹ, ಉಲ್ಲಾಸದಿಂದ ಓಡಾಡುತ್ತಿರಲು ಫಿಟ್​​ನೆಸ್​​ನ ಅವಶ್ಯಕತೆ ಇದೆ. ಸಿನಿಮಾಕ್ಕಾಗಿ ಮಾಡಿದ ವ್ಯಾಯಾಮ, ಕಸರತ್ತು ವಿಜಯ್ ಅವರಿಗೆ ರಾಜಕೀಯದಲ್ಲಿ ಖಂಡಿತ ನೆರವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Office Desk Vastu: ವೃತ್ತಿಜೀವನದ ಯಶಸ್ಸಿಗೆ ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಡಿ – Kannada News | Office Desk Vastu: Boost Career Growth and Positive Energy at Your Workplace

ವೃತ್ತಿಜೀವನದ ಯಶಸ್ಸಿಗೆ ವಾಸ್ತುImage Credit source: Pinterest

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರ ಎಷ್ಟು ಮುಖ್ಯವೋ ಹಾಗೆಯೇ ನಿಮ್ಮ ಕೆಲಸದ ಸ್ಥಳಗಳಲ್ಲಿಯೂ ಕೂಡ ವಾಸ್ತು ಅಷ್ಟೇ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಕೆಲಸ ಮಾಡುವ ಸ್ಥಳವು ನಮ್ಮ ಏಳಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಆಫೀಸ್ ಡೆಸ್ಕ್ ಮೇಲೆ ಈ ಕೆಲವು ವಸ್ತುಗಳನ್ನು ಇರಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಗಣೇಶ ಅಥವಾ ಲಕ್ಷ್ಮಿಯ ಸಣ್ಣ ವಿಗ್ರಹ:

ಕೆಲಸದ ಸ್ಥಳದಲ್ಲಿ ವಿಘ್ನನಿವಾರಕ ಗಣೇಶನ ಸಣ್ಣ ವಿಗ್ರಹವನ್ನು ಇಡುವುದು ಅತ್ಯಂತ ಶುಭ. ಇದು ಅಡೆತಡೆಗಳನ್ನು ನಿವಾರಿಸಿ ಹೊಸ ಅವಕಾಶಗಳನ್ನು ತರುತ್ತದೆ. ಹಾಗೆಯೇ ಲಕ್ಷ್ಮಿಯ ಕೃಪೆಯಿಂದ ಆರ್ಥಿಕ ಲಾಭವಾಗುತ್ತದೆ ಎಂದು ನಂಬಲಾಗಿದೆ.

ಬಿದಿರಿನ ಗಿಡ (Bamboo Plant):

ಆಫೀಸ್ ಟೇಬಲ್ ಮೇಲೆ ಸಣ್ಣ ಬಿದಿರಿನ ಗಿಡವನ್ನು ಇಡುವುದು ವಾಸ್ತುವಿನಲ್ಲಿ ಬಹಳ ಜನಪ್ರಿಯ. ಇದು ಅದೃಷ್ಟದ ಸಂಕೇತವಾಗಿದ್ದು, ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ಹೋಗಲಾಡಿಸಿ ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ಫಟಿಕದ ಪಿರಮಿಡ್ (Crystal Pyramid):

ಮೇಜಿನ ಮೇಲೆ ಸ್ಫಟಿಕದ (Crystal) ಪಿರಮಿಡ್ ಇಡುವುದರಿಂದ ಧನಾತ್ಮಕ ಶಕ್ತಿಯು ಕೇಂದ್ರೀಕೃತವಾಗುತ್ತದೆ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ನೀಡುತ್ತದೆ.

ಓಡುವ ಕುದುರೆಗಳ ಚಿತ್ರ ಅಥವಾ ಪ್ರತಿಮೆ:

ಓಡುತ್ತಿರುವ ಕುದುರೆಗಳು ವೇಗ ಮತ್ತು ಪ್ರಗತಿಯ ಸಂಕೇತ. ಮೇಜಿನ ಮೇಲೆ ಅಥವಾ ಎದುರಿನ ಗೋಡೆಯ ಮೇಲೆ ಏಳು ಓಡುವ ಕುದುರೆಗಳ ಚಿತ್ರವನ್ನು ಇಡುವುದರಿಂದ ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ.

ತಾಜಾ ಹೂವುಗಳು:

ಯಾವಾಗಲೂ ಮೇಜಿನ ಮೇಲೆ ತಾಜಾ ಹೂವುಗಳನ್ನು (ವಿಶೇಷವಾಗಿ ಹಳದಿ ಅಥವಾ ಬಿಳಿ ಬಣ್ಣದ ಹೂವುಗಳು) ಇಡುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಆದರೆ ಹೂವುಗಳು ಬಾಡಿಹೋದ ತಕ್ಷಣ ಅವುಗಳನ್ನು ತೆಗೆದುಹಾಕಬೇಕು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ದಿಕ್ಸೂಚಿ (Compass):

ನಿಮ್ಮ ಮೇಜಿನ ಉತ್ತರ ದಿಕ್ಕಿನಲ್ಲಿ ಸಣ್ಣ ದಿಕ್ಸೂಚಿಯನ್ನು ಇಡುವುದು ವೃತ್ತಿಜೀವನದ ಬೆಳವಣಿಗೆಗೆ ಪೂರಕವಾಗಿದೆ. ಇದು ನಿಮಗೆ ಹೊಸ ದಾರಿಗಳನ್ನು ತೋರಿಸುತ್ತದೆ ಎಂದು ನಂಬಲಾಗಿದೆ.

ಕೆಲವು ಪ್ರಮುಖ ನಿಯಮಗಳು:

ನಿಮ್ಮ ಮೇಜು ಯಾವಾಗಲೂ ಅಚ್ಚುಕಟ್ಟಾಗಿರಲಿ. ಅನಗತ್ಯ ಕಾಗದಪತ್ರಗಳು ಅಥವಾ ಹಳೆಯ ಫೈಲ್‌ಗಳನ್ನು ರಾಶಿ ಹಾಕಬೇಡಿ. ಕೆಲಸ ಮಾಡುವಾಗ ನಿಮ್ಮ ಮುಖವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರುವುದು ವಾಸ್ತು ಪ್ರಕಾರ ಅತ್ಯಂತ ಶ್ರೇಷ್ಠ. ಪೆನ್ ಸ್ಟ್ಯಾಂಡ್ ಅಥವಾ ಕನ್ನಡಿ ಒಡೆದಿದ್ದರೆ ತಕ್ಷಣ ಬದಲಾಯಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:19 am, Tue, 12 May 26

Source link

ಆಡಳಿತ ವೈಫಲ್ಯ: ಪ್ರಧಾನಿ ಮೋದಿಯ ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ಅಂಕಿಅಂಶ ಸಮೇತ ತಿರುಗೇಟು ಕೊಟ್ಟ ಪ್ರಲ್ಹಾದ್ ಜೋಶಿ – Kannada News | Pralhad Joshi Slams CM Siddaramaiah Over PM Modi’s Bengaluru Speech Criticism; Highlights Karnataka’s Debt Crisis

ಪ್ರಧಾನಿ ಮೋದಿ, ಪ್ರಲ್ಹಾದ್ ಜೋಶಿ ಹಾಗೂ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)Image Credit source: TV9 Network

ಬೆಂಗಳೂರು, ಮೇ 12: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನಡುವೆ ವಾಕ್ಸಮರ ತಾರಕಕ್ಕೇರಿದೆ. ಪ್ರಧಾನಿ ಮೋದಿ ಭಾಷಣವು ‘ಸುಳ್ಳು ಮತ್ತು ದ್ವೇಷದಿಂದ ಕೂಡಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದರೆ, ಇದಕ್ಕೆ ಪ್ರತಿಯಾಗಿ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡುವ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಜಾಹೀರಾತುಗಳ ಹಿಂದೆ ಅಡಗಿರುವ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಈಗ ಬಯಲಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ‘ಗ್ಯಾರಂಟಿ ಆಧಾರಿತ ಸಾಲದ ಬಲೆ’ಗೆ ತಳ್ಳಿದೆ: ಪ್ರಲ್ಹಾದ್ ಜೋಶಿ ಆರೋಪ.
  • ರಾಜ್ಯದ ಸಾಲದ ಹೊರೆ ಹೆಚ್ಚುತ್ತಿದೆ, ರಸ್ತೆಗಳು ಗುಂಡಿಮಯವಾಗಿವೆ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಿಲ್ಲ: ಕೇಂದ್ರ ಸಚಿವ ಟೀಕೆ.
  • ಸಿದ್ದರಾಮಯ್ಯ ಸರ್ಕಾರವು ಜನರ ಮೇಲೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದೆ: ಜೋಶಿ ಕಿಡಿ

ಕಾಂಗ್ರೆಸ್ ಆಡಳಿತಕ್ಕೆ ಜೋಶಿ ಚಾಟಿ

ಸಿದ್ದರಾಮಯ್ಯ ಟೀಕೆಗಳಿಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ‘ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಕಾಂಗ್ರೆಸ್ ಹದಗೆಡಿಸಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಾಂಗ್ರೆಸ್ ಸಚಿವರು ಶಾಸಕರನ್ನು ಎಣಿಸುವುದರಲ್ಲೇ (ಪಕ್ಷದೊಳಗಿನ ಅಧಿಕಾರ ಹಂಚಿಕೆ ಕಿತ್ತಾಟ ಉಲ್ಲೇಖಿಸಿ) ನಿರತರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ ಮತ್ತು ಗುತ್ತಿಗೆದಾರರು ಬಿಲ್ ಪಾವತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತ ಹಳಿ ತಪ್ಪಿರುವುದಕ್ಕೆ ಸಾಕ್ಷಿ ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ 48 ಅಗತ್ಯ ವಸ್ತುಗಳ ಬೆಲೆ ಏರಿಕೆ: ಜೋಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲು, ಇಂಧನ, ವಿದ್ಯುತ್ ಸೇರಿದಂತೆ ಸುಮಾರು 48 ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಾಗಿದೆ ಎಂದು ಜೋಶಿ ಆರೋಪಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತದೆ, ಆದರೆ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಭಾರಿ ಹೊರೆ ಹೊರಿಸುತ್ತಿದೆ. ಇದು ಜನರಿಗೆ ಮಾಡಿದ ದ್ರೋಹ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ ನೀಡಿದ ಕರೆಗಳನ್ನು ಸಿದ್ದರಾಮಯ್ಯ ಅವರು ಲೇವಡಿ ಮಾಡುತ್ತಿರುವುದು ಅವರ ಜವಾಬ್ದಾರಿಯಿಲ್ಲದ ನಾಯಕತ್ವವನ್ನು ತೋರಿಸುತ್ತದೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಖಜಾನೆ ಲೂಟಿ ಮಾಡುತ್ತಿದೆ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಮೋದಿ ವ್ಯಂಗ್ಯ!

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿತ ಕಂಡಿದ್ದನ್ನು ನೆನಪಿಸಿದ ಜೋಶಿ, ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಒಳಗಿನ ಅಧಿಕಾರ ದಾಹ, ಕಿತ್ತಾಟ ಮತ್ತು ಆಡಳಿತದ ಪಾರ್ಶ್ವವಾಯುವಿಗೆ ಉತ್ತರ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version