ಒಂದೆಡೆ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ ರಿಯಲ್ ಕೇರಳ ಸ್ಟೋರಿ ನಡೆದಿದೆ. ಮುಸ್ಲಿಂ ಪ್ರಿಯಕರ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿನಾ ಭೋಸ್ಲೆ (Monalisa Bhosle) ಮದುವೆ ನಡೆದಿದೆ. ತಮ್ಮ ವಿವಾಹಕ್ಕೆ ಕೇರಳವೇ ಸೂಕ್ತ ಮತ್ತು ಸುರಕ್ಷಿತ ಸ್ಥಳ ಎಂದು ತೀರ್ಮಾನಿಸಿ ಮೊನಾಲಿಸಾ ಮತ್ತು ಫರ್ಮಾನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೂ ದೇವಾಲಯದಲ್ಲಿ ಈ ಜೋಡಿಯ ಮದುವೆ ನಡೆದಿದೆ. ಮೊನಾಲಿಸಾಗೆ ಫರ್ಮಾನ್ ಅವರು ತಾಳಿ ಕಟ್ಟಿ, ಕುಂಕುಮ ಇಟ್ಟಿದ್ದಾರೆ. ಕೇರಳದ ಸ್ಥಳೀಯ ಜನರು ಮತ್ತು ರಾಜಕೀಯ ಮುಖಂಡರು ಈ ಮದುವೆ ಬೆಂಬಲ ನೀಡಿದ್ದಾರೆ. ನವ ದಂಪತಿಗೆ ಕೇರಳ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ (Muhammad Farman) ಅವರು ‘ರಿಯಲ್ ಕೇರಳ ಸ್ಟೋರಿ’ ಎಂಬ ಫಲಕ ಪ್ರದರ್ಶಿಸಿದ್ದಾರೆ.
ನವದೆಹಲಿ, ಮಾರ್ಚ್ 11: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಇಂದು ಸದನದಲ್ಲಿ ಧ್ವನಿ ಮತದಿಂದ ತಿರಸ್ಕರಿಸಲಾಯಿತು. ಹಲವಾರು ವಿರೋಧ ಪಕ್ಷದ ಸಂಸದರ ಬೆಂಬಲದೊಂದಿಗೆ ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಅವರು ಈ ನಿರ್ಣಯವನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದ ವೇಳೆ ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರು ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ಸಂವಿಧಾನವು ಸ್ಪೀಕರ್‌ಗೆ ಮಧ್ಯವರ್ತಿಯ ಪಾತ್ರವನ್ನು ನೀಡಿದೆ. ನೀವು ಮಧ್ಯವರ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದೀರಿ. 75 ವರ್ಷಗಳಲ್ಲಿ ಎರಡೂ ಸದನಗಳು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನು ಪಾತಾಳಕ್ಕಿಂತ ಕೆಳಗೆ ನೂಕಿವೆ. ಸ್ಪೀಕರ್ ಆಡಳಿತ ಪಕ್ಷ ಮತ್ತು ಪಕ್ಷ ಎರಡನ್ನೂ ಪ್ರತಿನಿಧಿಸುವ ನಿಷ್ಪಕ್ಷಪಾತ ರಕ್ಷಕನಾಗಿ ಕಾರ್ಯನಿರ್ವಹಿಸುತ್ತಾರೆ” ಎಂದು ಅಮಿತ್ ಶಾ ಹೇಳಿದರು.
#WATCH | Union Home Minister Amit Shah says, “LoP has grievances that he is not allowed to speak, that the voice of LoP is stifled. I would like to ask him who will decide who has to speak? Speaker? No, you have to decide this. But when it is a chance to speak, you are seen in… pic.twitter.com/j5R89yhn9q
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗಾಗ ತನಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ. ತನ್ನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಸಮಯ ನೀಡಿದಾಗ ಅವರು ಹಾಜರಿರುವುದು ಮತ್ತು ಕಲಾಪಗಳಲ್ಲಿ ಭಾಗವಹಿಸುವುದು ಅವರ ಜವಾಬ್ದಾರಿ. ಅಂತಹ ಅವಕಾಶಗಳು ಬಂದಾಗ ರಾಹುಲ್ ಗಾಂಧಿ ಹೆಚ್ಚಾಗಿ ವಿದೇಶದಲ್ಲಿಯೇ ಇರುತ್ತಾರೆ ಎಂದು ಅಮಿತ್ ಶಾ ಟೀಕಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2025ರ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ (ಮಾರ್ಚ್ 11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ (Monalisa Bhosle Marriage) ನೆರವೇರಿದೆ. ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ (Muhammad Farman) ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ತಿರುವನಂತಪುರಂನ ಅರುಮನೂರಿನಲ್ಲಿರುವ ಮಂದಿರದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ಅರ್ಚಕರು ನೀಡಿದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಡುವ ಮೂಲಕ ಫರ್ಮಾನ್ ಅವರು ಮೊನಾಲಿಸಾ ಅವರನ್ನು ವರಿಸಿದರು. ಮದುವೆಯ ನಂತರ ಮಾತನಾಡಿದ ಈ ಜೋಡಿ, ‘ನಮಗೆ ಕೇರಳ ಎಂದರೆ ತುಂಬಾ ಇಷ್ಟ. ಇಲ್ಲಿನ ಸುರಕ್ಷತೆ ಮತ್ತು ಪರಿಸರ ಕಂಡು ನಾವು ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದೆವು’ ಎಂದು ಹೇಳಿದ್ದಾರೆ.
ಮೊನಾಲಿಸಾ ಅವರು ಇಂದೋರ್ ಮೂಲದವರು. ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇವರಿಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾಗಿದ್ದರು. ‘ನಾನು ಮೊನಾಲಿಸಾಳನ್ನು ಚಿತ್ರೀಕರಣದ ಸೆಟ್‌ನಲ್ಲಿ ಭೇಟಿಯಾದೆ. ಆರು ತಿಂಗಳಿನಿಂದ ನಮ್ಮ ಪ್ರೀತಿ ಬೆಳೆದಿದೆ. ಈ ಆರು ತಿಂಗಳು ನಮಗೆ 60 ವರ್ಷಗಳ ಸುದೀರ್ಘ ಬಾಂಧವ್ಯದಂತೆ ಭಾಸವಾಗುತ್ತಿದೆ’ ಎಂದು ಫರ್ಮಾನ್ ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದ ಈ ಜೋಡಿ, ಇಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದಾರೆ. ‘ಕೇರಳದ ಸೌಂದರ್ಯ ಮತ್ತು ಅಲ್ಲಿನ ಜನರ ಗುಣ ನಮಗೆ ತುಂಬಾ ಇಷ್ಟವಾಯಿತು. ಬೇರೆ ರಾಜ್ಯಗಳಲ್ಲಿ ನಮ್ಮ ಸಂಬಂಧಕ್ಕೆ ವಿರೋಧ ವ್ಯಕ್ತವಾಗುವ ಆತಂಕವಿತ್ತು. ಆದ್ದರಿಂದ ಸುರಕ್ಷಿತ ಎನಿಸಿದ ಕೇರಳದ ದೇವಸ್ಥಾನದಲ್ಲಿ ಮದುವೆಯಾಗಲು ಸಮಿತಿಯ ಅನುಮತಿ ಪಡೆದೆವು’ ಎಂದು ಫರ್ಮಾನ್ ತಿಳಿಸಿದ್ದಾರೆ. ಫರ್ಮಾನ್ ಅವರ ತಂದೆ ಈ ಸಂಬಂಧಕ್ಕೆ ಇನ್ನು ಸಂಪೂರ್ಣ ಸಮ್ಮತಿ ನೀಡಿಲ್ಲ ಎಂಬ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.
ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಹೊರರಾಜ್ಯದ ಕಲಾವಿದರು ಕೇರಳಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ಮದುವೆ ಆಗಿರುವುದು ವಿಶೇಷವಾಗಿದೆ. ಮದುವೆ ಬಳಿಕ ತಮಗೆ ರಕ್ಷಣೆ ಬೇಕು ಎಂದು ಫರ್ಮಾನ್ ಮತ್ತು ಮೊನಾಲಿಸಾ ಅವರು ಕೇರಳ ಪೊಲೀಸರ ಮೊರೆ ಹೋಗಿದ್ದಾರೆ.
ಭಾರತದ ದೊಡ್ಡ ಕ್ರಿಕೆಟ್ ಉತ್ಸವವಾದ ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) ಮೊದಲ ಹಂತದ ಒಟ್ಟು 20 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಇದೇ ಮಾರ್ಚ್ 28ರಿಂದ ಪ್ರಾರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯವನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ. ಅದು ತವರು ಅಂಗಳ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ.
ಐಪಿಎಲ್ ಸೀಸನ್ 19ರ ಮೊದಲ ಹಂತದ ಪಂದ್ಯಗಳು ಮಾರ್ಚ್ 28ರಿಂದ ಏಪ್ರಿಲ್ 12ರವರೆಗೂ ನಡೆಯಲಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೊದಲ ಹಂತದ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯ ತವರು ಅಂಗಳ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದ್ದು, ಇನ್ನೆರೆಡು ಮ್ಯಾಚ್ ಗುವಾಹಟ್ಟಿ ಹಾಗೂ ಮುಂಬೈನಲ್ಲಿ ಆಡಲಿದೆ.
ಮಾರ್ಚ್ 28ರಂದು ಐಪಿಎಲ್ ಸೀಸನ್ 19ರ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೆದರಾಬಾದ್ ತಂಡವನ್ನು ಎದುರಿಸಲಿದೆ. ಪಂದ್ಯ ಮಾ.28ರ ಸಂಜೆ 7:30ಕ್ಕೆ ನಡೆಯಲಿದೆ.
ಉದ್ಘಾಟನಾ ಪಂದ್ಯದ ನಂತರ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂರ್ಜ್ ಬೆಂಗಳೂರು ತಂಡ ತನ್ನ ಎರಡನೇ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 5ರ ಸಂಜೆ 7.30ಕ್ಕೆ ತವರು ಅಂಗಳ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಇನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯವನ್ನು ಏಪ್ರಿಲ್ 10ರಂದು ರಾಜಸ್ಥಾನ ರಾಯಲ್ಸ್ ತಂಡದ ಎದುರು ಸೆಣಸಾಡಲಿದೆ. ಈ ಮ್ಯಾಚ್ ಸಂಜೆ 7.30ಕ್ಕೆ ಗುವಾಹಟ್ಟಿಯಲ್ಲಿ ನಡೆಯಲಿದೆ.
ಮೊದಲ ಹಂತದ ವೇಳಾಪಟ್ಟಿ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಾಲ್ಕನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯ ಏಪ್ರಿಲ್ 12ರಂದು ಸಂಜೆ 730ಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಬೀದರ್, ಮಾರ್ಚ್ 11: ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ. ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಪಾಠಿ ಲವ್ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಟಿವಿ9ಗೆ ಮೃತ ಮದಿಯಾ ಚಿಕ್ಕಪ್ಪ ಎಂ.ಡಿ.ಯೂಸುಫ್ ಹೇಳಿಕೆ ನೀಡಿದ್ದಾರೆ. ಸಹಪಾಠಿ ಬಾಲಕಿಗೆ ಚುಡಾಯಿಸಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿವೆ.
19.70 ಲಕ್ಷ ಮೌಲ್ಯದ 38 ಕೆಜಿ ಗಾಂಜಾ: ಇಬ್ಬರ ಬಂಧನ
ತೆಲಂಗಾಣದಿಂದ ಸಂತಪುರಕ್ಕೆ ಬೈಕ್ನಲ್ಲಿ ಸಾಗಿಸುತ್ತಿದ್ದ 38 ಕೆಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರಕ್ಕೆ ಸಾಗಿಸುವಾಗ ಆರೋಪಿಗಳನ್ನು ಬಂಧಿಸಲಾಗಿದ್ದು, 19.70 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಕ್ಕಳ ಕಳ್ಳರು ಎಂದು ಶಂಕಿಸಿ ಸ್ವಾಮೀಜಿಗಳ ಮೇಲೆ ಹಲ್ಲೆಗೆ ಯತ್ನ
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಕ್ಕಳ ಕಳ್ಳರ ವದಂತಿ ಹಿನ್ನೆಲೆ ಸ್ವಾಮೀಜಿಗಳ ಮೇಲೆ ಹಲ್ಲೆ ಯತ್ನ ನಡೆದ ಘಟನೆ ನಡೆದಿದೆ. ಭಿಕ್ಷಾಟನೆಗಾಗಿ ಗ್ರಾಮಕ್ಕೆ ಬಂದಿದ್ದ ಇಬ್ಬರು ಸ್ವಾಮೀಜಿಗಳನ್ನು ಮಕ್ಕಳ ಕಳ್ಳರು ಎಂದು ಶಂಕಿಸಿದ ಗ್ರಾಮಸ್ಥರು, ಅವರ ಕಾರನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ವಾಮೀಜಿಗಳು ಹಾಗೂ ಅವರೊಂದಿಗೆ ಇದ್ದ ಚಾಲಕರ ಮೇಲೆ ಹಲ್ಲೆ ಮಾಡಲು ಗ್ರಾಮಸ್ಥರು ಯತ್ನಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಇಬ್ಬರು ಸ್ವಾಮೀಜಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಹಿಂದಿ ಸೀಸನ್ 19’ರ (Bigg Boss 19) ಟ್ರೋಫಿ ಮುಡಿಗೇರಿಸಿಕೊಂಡ ನಟ ಗೌರವ್ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದ ಅದ್ದೂರಿ ಫಿನಾಲೆಯಲ್ಲಿ ಗೌರವ್ ವಿನ್ನರ್ ಎಂದು ಸಲ್ಮಾನ್ ಖಾನ್ ಘೋಷಿಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಕೂಡ ತಮಗೆ ಇನ್ನೂ ಶೋನ ಬಹುಮಾನದ ಮೊತ್ತ ತಲುಪಿಲ್ಲ ಎಂಬ ವಿಷಯವನ್ನು ಗೌರವ್ ಖನ್ನಾ (Gaurav Khanna) ಬಹಿರಂಗಪಡಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಸಹ ಅವರು ತಿಳಿಸಿದ್ದಾರೆ.
ಇತ್ತೀಚಿನ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಗೌರವ್ ಖನ್ನಾ ಉತ್ತರಿಸಿದರು. ‘ನಿಮಗೆ ಬಿಗ್ ಬಾಸ್‌ನಲ್ಲಿ ಭರವಸೆ ನೀಡಿದ ನಗದು ಹಣ, ಕಾರು ಮತ್ತು ಕೂಪನ್‌ಗಳು ಸಿಕ್ಕಿವೆಯೇ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದಕ್ಕೆ ಸಮಯ ಬೇಕಾಗುತ್ತದೆ. ನನಗೆ ಇನ್ನೂ ಹಣ ಬಂದಿಲ್ಲ. ಆದರೆ ಅದು ಖಂಡಿತಾ ಬರುತ್ತದೆ ಎಂಬ ನಂಬಿಕೆ ನನಗಿದೆ, ಏಕೆಂದರೆ ಅದಕ್ಕೊಂದು ಪ್ರಕ್ರಿಯೆ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
ಕಂಪನಿಯ ಆಂತರಿಕ ಲೆಕ್ಕಾಚಾರ ಮತ್ತು ಇತರ ಪ್ರಕ್ರಿಯೆಗಳಿಂದಾಗಿ ಬಹುಮಾನದ ಹಣ ಕೈ ಸೇರಲು ಸುಮಾರು 1ರಿಂದ 2 ತಿಂಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ‘ನಾನು ಟಿವಿ ಕ್ಷೇತ್ರದವನು. ಇಲ್ಲಿ ಇಂತಹ ವಿಳಂಬಗಳು ಸಹಜ. ಹಣ ಬಂದೇ ಬರುತ್ತದೆ’ ಎಂದು ಗೌರವ್ ಖನ್ನಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.
ಬಿಗ್ ಬಾಸ್ ಗೆದ್ದ ನಂತರ ಜೀವನದಲ್ಲಿ ಏನು ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೌರವ್, ‘ಈಗ ಪ್ರತಿ ದಿನ ಕಾನ್ಪುರದಲ್ಲಿರುವ ನನ್ನ ಮನೆಗೆ ಸುಮಾರು 50ರಿಂದ 60 ಜನರು ಭೇಟಿ ನೀಡುತ್ತಿದ್ದಾರೆ. ಜನರು ನನ್ನನ್ನು ಗುರುತಿಸುತ್ತಿರುವುದು ಖುಷಿ ನೀಡಿದೆ’ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌರವ್ ತೋರಿದ ಸಂಯಮದ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತಾವು ಈ ಹಿಂದೆ ಮಾಡಿದ ಎಲ್ಲಾ ಶೋಗಳಿಗಿಂತಲೂ ಬಿಗ್ ಬಾಸ್ ಮೂಲಕ ಸಿಕ್ಕಿರುವ ಖ್ಯಾತಿ ಮತ್ತು ಪ್ರೀತಿ ದೊಡ್ಡದು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕನ್ನಡದಲ್ಲಿ ಈವರೆಗೂ ಬಿಗ್ ಬಾಸ್ ಕಾರ್ಯಕ್ರಮದ 12 ಸೀಸನ್ಗಳು ನಡೆದಿವೆ. 12ನೇ ಸೀಸನ್ನಲ್ಲಿ ಗಿಲ್ಲಿ ನಟ ಅವರು ವಿನ್ನರ್ ಆದರು. ಅವರು ಕೂಡ ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುತ್ತಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಮುಂದಿನ ಸೀಸನ್ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ಇಂದಿನ ವೇಗದ ಜೀವನಶೈಲಿಯಲ್ಲಿ ಹಲವರಿಗೆ ತಮ್ಮ ಆಹಾರ ಪದ್ಧತಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ಹಲವರು ಮಲ್ಟಿವಿಟಮಿನ್‌ಗಳ (Multivitamin) ಮೇಲೆ ಅವಲಂಬಿತರಾಗುತ್ತಿದ್ದಾರೆ. ಮಲ್ಟಿವಿಟಮಿನ್‌ಗಳು ಎಂದರೆ ಹಲವು ವಿಧದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿರುವ ಪೂರಕ ಆಹಾರಗಳು. ಉದಾಹರಣೆಗೆ ವಿಟಮಿನ್ A, B, C, D, E ಜೊತೆಗೆ ಐರನ್, ಕ್ಯಾಲ್ಸಿಯಂ, ಜಿಂಕ್ ಮುಂತಾದವುಗಳು ಒಂದೇ ಮಾತ್ರೆಯಲ್ಲಿ ಇವೆಲ್ಲವೂ ದೊರೆಯುತ್ತವೆ. ಇವು ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ತುಂಬಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಯಾವುದಾದರೂ ವಿಟಮಿನ್ ಅಥವಾ ಖನಿಜಾಂಶಗಳ ಕೊರತೆ ಕಂಡುಬಂದಾಗ ಅಥವಾ ವ್ಯಕ್ತಿಯ ಆಹಾರ ಸಮತೋಲನದಲ್ಲಿಲ್ಲದಿದ್ದರೆ ವೈದ್ಯರು ಮಲ್ಟಿವಿಟಮಿನ್ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ ಪ್ರತಿದಿನ ಮಲ್ಟಿವಿಟಮಿನ್ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದೆಯೇ ಅಥವಾ ಹಾನಿಕಾರಕವೇ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಈ ಬಗ್ಗೆ ಸ್ಪಷ್ಟ ಮಾಹಿತಿ ಸ್ಟೋರಿಯಲ್ಲಿದೆ.
ಪ್ರತಿದಿನ ಮಲ್ಟಿವಿಟಮಿನ್ ತೆಗೆದುಕೊಳ್ಳುವುದು ಸರಿಯೇ?
ಆರ್‌ಎಂಎಲ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಪ್ರತಿಯೊಬ್ಬರೂ ಪ್ರತಿದಿನ ಮಲ್ಟಿವಿಟಮಿನ್ ತೆಗೆದುಕೊಳ್ಳುವುದು ಅಗತ್ಯವಿಲ್ಲ. ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವಿಸುತ್ತಿದ್ದರೆ ದೇಹಕ್ಕೆ ಬೇಕಾದ ವಿಟಮಿನ್ ಮತ್ತು ಖನಿಜಾಂಶಗಳು ಆಹಾರದಿಂದಲೇ ದೊರೆಯುತ್ತವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೇಳೆಗಳು ಮತ್ತು ಪ್ರೋಟೀನ್‌ಯುಕ್ತ ಆಹಾರಗಳನ್ನು ನಿಯಮಿತವಾಗಿ ಸೇವಿಸುವವರಲ್ಲಿ ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆ ಕಾಣಿಸದು. ಕೆಲ ಸಂದರ್ಭಗಳಲ್ಲಿ ಮಾತ್ರ ಮಲ್ಟಿವಿಟಮಿನ್ ಅಗತ್ಯವಾಗಬಹುದು. ಉದಾಹರಣೆಗೆ ಸಮತೋಲಿತ ಆಹಾರ ಸೇವನೆ ಮಾಡದವರು, ವೃದ್ಧರು, ಗರ್ಭಿಣಿಯರು, ಮಗುವಿಗೆ ಹಾಲುಣಿಸುವ ಮಹಿಳೆಯರು ಅಥವಾ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರ ಸಲಹೆಯ ಮೇರೆಗೆ ಮಲ್ಟಿವಿಟಮಿನ್ ತೆಗೆದುಕೊಳ್ಳಬಹುದು.
ವೈದ್ಯರು ಮತ್ತೊಂದು ಮಹತ್ವದ ವಿಷಯವನ್ನು ಕೂಡ ಹೇಳುತ್ತಾರೆ. ಕೆಲವು ವಿಟಮಿನ್‌ಗಳು ವಿಟಮಿನ್ A, D, E ಮತ್ತು K ದೇಹದಲ್ಲಿ ಸಂಗ್ರಹವಾಗುವ ಸ್ವಭಾವ ಹೊಂದಿವೆ. ಇವುಗಳನ್ನು ಅತಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಮಲ್ಟಿವಿಟಮಿನ್ ಸೇವಿಸುವುದು ಸೂಕ್ತವಲ್ಲ. ತಜ್ಞರ ಪ್ರಕಾರ, ಮಲ್ಟಿವಿಟಮಿನ್‌ಗಳನ್ನು ಸಮತೋಲನಯುತ ಆಹಾರದ ಪರ್ಯಾಯವಾಗಿ ಪರಿಗಣಿಸಬಾರದು. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹಜವಾದ ಆಹಾರಗಳಿಂದ ಪಡೆಯುವುದೇ ಉತ್ತಮ. ಯಾವುದೇ ಪೂರಕ ಆಹಾರವನ್ನು ದೀರ್ಘಕಾಲ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಕೊಪ್ಪಳ, ಮಾರ್ಚ್ 11: ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಹಾಡಹಗಲೇ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಹಗಲು ಹೊತ್ತಿನಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಮಲ್ಲಾಪುರ ಗ್ರಾಮವು ತುಂಗಭದ್ರಾ ನದಿಯ ಸಮೀಪದಲ್ಲಿರುವ ಕಾರಣ, ನದಿಯ ಆಸುಪಾಸಿನ ಪ್ರದೇಶಗಳಿಂದ ಚಿರತೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ತಮ್ಮ ಗ್ರಾಮದಲ್ಲಿ ಚಿರತೆಯ ಸಂಚಾರ ಹೆಚ್ಚಾಗಿರುವುದರಿಂದ, ಜನ ಜಾನುವಾರುಗಳಿಗೆ ಅಪಾಯವಾಗಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದು, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋನ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.
ನಾವು ಮಾನಸಿಕವಾಗಿ ಬಲಿಷ್ಠರಾದಾಗ (mentally strong) ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ, ಸಮಾಜದಲ್ಲಿ ಧೈರ್ಯವಾಗಿ ಬದುಕಲು ಸಾಧ್ಯ. ದೈಹಿಕವಾಗಿ ಬಲಶಾಲಿಯಾಗಿರಲು ವ್ಯಾಯಾಮ, ಯೋಗಾಭ್ಯಾಸವನ್ನು ಮಾಡುವಂತೆ, ಮಾನಸಿಕವಾಗಿ ಬಲಿಷ್ಠರಾಗಲು ಒಂದಷ್ಟು ತತ್ವಗಳನ್ನು ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವುಗಳನ್ನು ಅನುಸರಿಸುವ ನಮ್ಮ ಆಲೋಚನೆ, ನಂಬಿಕೆಗಳು ಮತ್ತು ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಅಷ್ಟೇ ಅಲ್ಲದೆ ಜೀವನದಲ್ಲಿ ನಾವು ಅಂದುಕೊಂಡ ಗುರಿಯನ್ನೂ ಸಾಧಿಸಬಹುದು. ಹಾಗಿದ್ರೆ ಮಾನಸಿಕವಾಗಿ ಬಲಿಷ್ಠರಾಗಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಮಾನಸಿಕವಾಗಿ ಸದೃಢರಾಗಲು ಏನು ಮಾಡಬೇಕು?
ಪ್ರತಿದಿನ ಯೋಚಿಸುವ ಅಭ್ಯಾಸ: ನಾವು ನಮ್ಮ ದೇಹವನ್ನು ಫಿಟ್ ಮತ್ತು ಸದೃಢವಾಗಿಡಲು ಪ್ರತಿದಿನ ವ್ಯಾಯಾಮ ಮಾಡುವಂತೆ ಮಾನಸಿಕವಾಗಿ ಸದೃಢರಾಗಲು ಪ್ರತಿದಿನ ಒಳ್ಳೆಯ ಆಲೋಚನೆಗಳನ್ನು ಯೋಚಿಸುವುದನ್ನು ಅಭ್ಯಾಸ ಮಾಡಬೇಕು. ಆಲೋಚನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಾವು ಯೋಚಿಸಬೇಕು. ಹೀಗೆ ಪ್ರತಿದಿನ ಈ ರೀತಿ ಯೋಚಿಸಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಈ ಸಣ್ಣ ಅಭ್ಯಾಸವು ನಿಮ್ಮನ್ನು ಹೆಚ್ಚು ತಾಳ್ಮೆಯ ಮತ್ತು ಬುದ್ಧಿವಂತ ವ್ಯಕ್ತಿಯನ್ನಾಗಿ ಮಾಡುತ್ತದೆ.
ಸ್ವಾವಲಂಬನೆ: ಆಚಾರ್ಯ ಚಾಣಕ್ಯರು ಹೇಳುವಂತೆ, ನಾವು ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಮೊದಲು ಸ್ವಾವಲಂಬಿಗಳಾಗಬೇಕು. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಲು ಪ್ರಯತ್ನಿಸಿದಾಗ, ನಮ್ಮ ಮನಸ್ಸು ಬಲಗೊಳ್ಳುತ್ತದೆ. ಮತ್ತೊಂದೆಡೆ, ನಾವು ಎಲ್ಲದಕ್ಕೂ ಇತರರನ್ನು ಅವಲಂಬಿಸಲು ಪ್ರಾರಂಭಿಸಿದರೆ, ಅದು ನಮ್ಮನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತದೆ. ಸಣ್ಣ ಜವಾಬ್ದಾರಿಗಳನ್ನು ಸಹ ನಾವೇ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಮ್ಮನ್ನು ಮಾನಸಿಕವಾಗಿಯೂ ಬಲಶಾಲಿಗಳನ್ನಾಗಿ ಮಾಡುತ್ತದೆ.
ಸಮಯದ ಸದುಪಯೋಗ: ಆಚಾರ್ಯ ಚಾಣಕ್ಯ ಹೇಳುವಂತೆ ಸಮಯವು ಅತ್ಯಂತ ಅಮೂಲ್ಯವಾದದ್ದು. ಮಾನಸಿಕವಾಗಿ ಬಲಿಷ್ಠರಾಗಿರುವವರು ಸಮಯವನ್ನು ಗೌರವಿಸುತ್ತಾರೆ. ಅವರು ಅದನ್ನು ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವ, ಕೆಲಸಗಳಿಗೆ ಆದ್ಯತೆ ನೀಡುವ ಮತ್ತು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಅಭ್ಯಾಸವು ವ್ಯಕ್ತಿಯನ್ನು ಮಾನಸಿಕವಾಗಿ ಬಲಿಷ್ಠಗೊಳಿಸುತ್ತದೆ.
ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ: ಚಾಣಕ್ಯನ ಪ್ರಕಾರ, ನಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು, ನಾವು ಮೊದಲು ನಮ್ಮ ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಹತಾಶೆ, ಭಯ ಮತ್ತು ಕೋಪದಂತಹ ಭಾವನೆಗಳು ನಮ್ಮ ಮನಸ್ಸನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತವೆ. ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ನಮ್ಮ ದಾರಿಯಲ್ಲಿ ಬರುವ ಯಾವುದೇ ಸವಾಲನ್ನು ನಾವು ಧೈರ್ಯದಿಂದ ಎದುರಿಸಬಹುದು ಮತ್ತು ಜಯಿಸಬಹುದು ಅಲ್ಲದೆ ಈ ಸಕಾರಾತ್ಮಕ ಆಲೋಚನೆಗಳು ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಹೊಸ ವಿಷಯಗಳನ್ನು ಕಲಿಯುವುದು: ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು, ನಾವು ಜೀವನದ ಪ್ರತಿ ಹಂತದಲ್ಲೂ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವ ಮತ್ತು ಹೊಸ ಜ್ಞಾನವನ್ನು ಹೇಗೆ ಪಡೆಯುವುದು ಎಂದು ತಿಳಿದಿರುವ ವ್ಯಕ್ತಿಯು ಕ್ರಮೇಣ ಮಾನಸಿಕವಾಗಿ ಬಲಶಾಲಿಯಾಗುತ್ತಾನೆ. ಆದ್ದರಿಂದ, ನಮ್ಮ ಜ್ಞಾನವನ್ನು ಹೆಚ್ಚಿಸಲು, ನಾವು ಹೊಸ ಪುಸ್ತಕಗಳನ್ನು ಓದಬೇಕು.. ಹಿಂದಿನ ಅನುಭವಗಳಿಂದ ಪಾಠಗಳನ್ನು ಕಲಿಯಬೇಕು.. ಇತರರಿಂದ ಒಳ್ಳೆಯದನ್ನು ಕಲಿಯಲು ಪ್ರಯತ್ನಿಸಬೇಕು.
ಬೆಂಗಳೂರು, ಮಾರ್ಚ್ 11: ಗುತ್ತಿಗೆದಾರನಿಂದ ಐದು ಲಕ್ಷ ರೂ ಲಂಚ ಸ್ವೀಕರಿಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ (MLA Chandru Lamani) ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಆ ಮೂಲಕ ಬಿಜೆಪಿ ಶಾಸಕನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಲೋಕಾಯುಕ್ತ ಪೊಲೀಸರಿಂದ ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಐದು ಲಕ್ಷ ರೂ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆ ಬಂಧಿಸಲಾಗಿದ್ದು, ಕಳೆದ 15 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಈ ಮಧ್ಯೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಡಾ. ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಎರಡು ಲಕ್ಷ ರೂ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಒದಗಿಸುವ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.
ಫೆಬ್ರವರಿ 21ರಂದರು ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ ಬಿದ್ದಿದ್ದರು. ಗುತ್ತಿಗೆದಾರನಿಂದ 5 ಲಕ್ಷ ರೂ ಲಂಚ ಪಡೀತಿದ್ದಾಗ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದರು. ಈ ಪ್ರಕರಣದಲ್ಲಿ ಲಮಾಣಿ ಜೈಲು ಸೇರಿದ್ದರು. ಘಟನೆ ಬೆನ್ನಲ್ಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಚಂದ್ರು ಬೆಂಬಲಗರು ಹಾಗೂ ಬಂಜಾರದ ಸಮುದಾಯ ಸಿಡಿದೆದ್ದಿತ್ತು. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿರೋದಾಗಿ ಸಮುದಾಯ ಆರೋಪಿಸಿತ್ತು. ಸಾಲದ್ದಕ್ಕೆ ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪ ಮಾಡಿದ್ದರು.