ಗದಗ, ಮಾರ್ಚ್ 9: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆ್ಯಂಬುಲೆನ್ಸ್ ವಾಹನವನ್ನು ಜನರ ಸಾಗಾಟಕ್ಕೆ ಬಳಸಲಾಗಿದೆ ಎಂಬ ಆರೋಪ ಗದಗದಲ್ಲಿ ಕೇಳಿಬಂದಿದೆ. ಗದಗದ ಜಿಮ್ಸ್ (GIMS) ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ್ಯಂಬುಲೆನ್ಸ್ ಬಂದು ನಿಲ್ಲುತ್ತಿದ್ದಂತೆ ಹಲವರು ಅದಕ್ಕೆ ಮುಗಿಬಿದ್ದು ಹತ್ತುವ ದೃಶ್ಯಗಳು ಕಂಡುಬಂದಿವೆ. ರೋಗಿಗಳ ರಕ್ಷಣೆಗೆ ಇರಬೇಕಾದ ಆ್ಯಂಬುಲೆನ್ಸ್‌ನಲ್ಲಿ ಸಾಮಾನ್ಯ ಜನರನ್ನು ಸಾಗಾಟ ಮಾಡುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ಗದಗ ಜಿಮ್ಸ್ ಆಸ್ಪತ್ರೆಯಿಂದ ಗದಗ ನಗರಕ್ಕೆ ಬಸ್ ಸೌಲಭ್ಯ ಕೊರತೆಯಿಂದ ಕೆಲವರು ಆ್ಯಂಬುಲೆನ್ಸ್‌ನ್ನು ಪ್ರಯಾಣಕ್ಕಾಗಿ ಬಳಸುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ರೋಗಿಗಳ ಹೊರತುಪಡಿಸಿ ಇತರರನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಾಟ ಮಾಡುವುದು ನಿಯಮ ಉಲ್ಲಂಘನೆಯಾಗಿದೆ. ಇನ್ನೊಂದೆಡೆ, ಚಾಲಕ ಅಥವಾ ಸಿಬ್ಬಂದಿಯಿಂದ ಆ್ಯಂಬುಲೆನ್ಸ್ ದುರುಪಯೋಗವಾಗಿರಬಹುದೆಂಬ ಆರೋಪವೂ ಕೇಳಿಬಂದಿದೆ. ಈ ರೀತಿಯ ಘಟನೆಗಳಿಂದ ರೋಗಿಗಳಿಗೆ ಸೋಂಕಿನ ಭಯ ಮಾತ್ರವಲ್ಲ, ಸಾರ್ವಜನಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
T20 World Cup 2026: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 255 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 159 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ದಾಂಡಿಗ ಇಶಾನ್ ಕಿಶನ್, ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಅದು ಸಾವಿನ ಸುದ್ದಿಯೊಂದಿಗೆ..!
ಫೈನಲ್ ಮ್ಯಾಚ್ಗೂ ಮುನ್ನ ನನ್ನ ಸಹೋದರಿ ತೀರಿಕೊಂಡಿದ್ದಾರೆ. ಅವಳಿಗೆ ನಾನು ವಿಶ್ವಕಪ್ ಗೆಲ್ಲಬೇಕೆಂಬ ತುಂಬಾ ಆಸೆಯಿತ್ತು. ಆದರೆ ಇದೀಗ ಅವಳಿಲ್ಲ. ಈ ವಿಶ್ವಕಪ್ ನಾನು ಅವಳಿಗಾಗಿ ಅರ್ಪಿಸುತ್ತೇನೆ ಎಂದು ಇಶಾನ್ ಕಿಶನ್ ಸಂತಸದ ಕ್ಷಣಗಳ ನಡುವೆ ನೋವನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು,
ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಈ ದಂಪತಿಯ ಆರು ತಿಂಗಳು ಮತ್ತು ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಟುಂಬದಲ್ಲಿ ಇಂತಹ ದೊಡ್ಡ ದುರಂತ ಸಂಭವಿಸಿದರೂ, ಇಶಾನ್ ಕಿಶನ್ ತಂಡದ ಹಿತದೃಷ್ಟಿಯಿಂದ ಫೈನಲ್ ಪಂದ್ಯವನ್ನು ಆಡಲು ನಿರ್ಧರಿಸಿದರು. ತಮ್ಮ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರು ನೀಡಿದ ಧೈರ್ಯದಿಂದಾಗಿ ಅವರು ಮೈದಾನಕ್ಕಿಳಿದರು.
ವೈಯಕ್ತಿಕ ದುಃಖದ ನಡುವೆಯೂ ಇಶಾನ್ ಕಿಶನ್ ಸ್ಫೋಟಕವಾಗಿ ಬ್ಯಾಟ್ ಬೀಸಿ 25 ಎಸೆತಗಳಲ್ಲಿ 54 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅಲ್ಲದೆ ಫೀಲ್ಡಿಂಗ್‌ನಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದರು. ಈ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ತನ್ನ ನೋವನ್ನು ಹಂಚಿಕೊಂಡ ಇಶಾನ್ ಕಿಶನ್, “ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಅವಳು ನನ್ನ ಈ ಐತಿಹಾಸಿಕ ಕ್ಷಣಗಳನ್ನು ನೋಡಬೇಕೆಂದು ಬಯಸಿದ್ದಳು. ಹೀಗಾಗಿ ಈ ಟ್ರೋಫಿಯನ್ನು ನಾನು ಸಹೋದರಿಗೆ ಅರ್ಪಿಸುವುದಾಗಿ ಇಶಾನ್ ಕಿಶನ್ ಭಾವುಕರಾದರು.
ಇದೀಗ ತನ್ನ ವೃತ್ತಿಜೀವನದ ಅತಿದೊಡ್ಡ ಪ್ರೋತ್ಸಾಹಕರಲ್ಲಿ ಒಬ್ಬರಾಗಿದ್ದ ಸಹೋದರಿಯ ಸಾವಿನ ದುಃಖದ ನಡುವೆಯೂ ಪ್ರಚಂಡ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ತನ್ನದೇಯಾದ ಕೊಡುಗೆ ನೀಡಿದ ಇಶಾನ್ ಕಿಶನ್ ಅವರ ಬಗ್ಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಗೋಪಾಲ್‌ಗಂಜ್, ಮಾರ್ಚ್ 9: ಮಹಿಳೆಯೊಬ್ಬರು ತನ್ನ ಪ್ರಿಯಕರನ ಬಿಡುಗಡೆಗೆ ಒತ್ತಾಯಿಸಿ ಮೊಬೈಲ್ ಟವರ್ ಏರಿರುವ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ. ಯಕರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೊಬೈಲ್ ಟವರ್ ಹತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಬಂಧಿತ ಪ್ರಿಯಕರನನ್ನು ಸ್ಥಳಕ್ಕೆ ಕರೆತಂದ ನಂತರ ಮಹಿಳೆ ಕೊನೆಗೂ ಕೆಳಗಿಳಿದಿದ್ದಾಳೆ. ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಮತ್ತು ಆಕೆಯ ಪ್ರಿಯಕರ ಪವನ್ ಚೌಹಾಣ್ ಇಬ್ಬರೂ ಗೋಪಾಲ್‌ಗಂಜ್ ಜಿಲ್ಲೆಯ ಬಂಕತಾ ಮಾಲ್ ಗ್ರಾಮದ ನಿವಾಸಿಗಳು. ಗುರುವಾರ ಮಹಿಳೆ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ, ಆಕೆಯ ಕುಟುಂಬವು ಆಕೆಯನ್ನು ಹುಡುಕಲು ಸಾಧ್ಯವಾಗದ ಕಾರಣ ಪೊಲೀಸ್ ದೂರು ದಾಖಲಿಸಿತು. ಮಹಿಳೆಯನ್ನು ಅಪಹರಿಸಿದ್ದಾನೆಂದು ಶಂಕಿಸಿ, ಪೊಲೀಸರು ಪವನ್‌ನನ್ನು ವಿಚಾರಣೆಗಾಗಿ ತಕ್ಷಣ ವಶಕ್ಕೆ ಪಡೆದಿದ್ದರು. ಪ್ರಿಯಕರನ ಬಂಧನದ ಬಗ್ಗೆ ಮಹಿಳೆಗೆ ತಿಳಿದಾಗ, ಅವರು ಶುಕ್ರವಾರ ಹಳ್ಳಿಯಲ್ಲಿರುವ ಮೊಬೈಲ್ ಟವರ್ ಹತ್ತಿದ್ದಾಳೆ.
ಆನೇಕಲ್, ಮಾರ್ಚ್ 09: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಕಿಡ್ನ್ಯಾಪ್ (Kidnap) ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅಲಿಯಾಸ್ ಗೋಪಿ ಎಂಬ ರಿಯಲ್ ಎಸ್ಟೇಟ್ ಏಜೆಂಟ್ ಅವರನ್ನು ಮಾರ್ಚ್ 8ರಂದು ಸಂಜೆ 7.30ರ ಸುಮಾರಿಗೆ ಕಿಡ್ನ್ಯಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೋಪಾಲ್ ಕಾರಿಗೆ ಡಿಕ್ಕಿ ಹೊಡೆದ ಕಿಡಿಗೇಡಿಗಳು
ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ವಾಹನದಿಂದ ಡಿಕ್ಕಿ ಹೊಡೆದ ಕಿಡಿಗೇಡಿಗಳು ಸ್ಪ್ರೇ ಹಾಕಿ ದಾಳಿ ನಡೆಸಿ ಅವರನ್ನು ಅಪಹರಿಸಿರುವುದಾಗಿ ಕುಟುಂಬಸ್ಥರು ಆರೋಪಿಸದ್ದಾರೆ.
ಕುಟುಂಬಸ್ಥರ ಶಂಕೆ ಅನ್ವಯ ಜಿಗಣಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೋಹನ್ ಬಾಬು, ಹರೀಶ್ ಹಾಗೂ ಕಿರಣ್ ಎಂಬುವರನ್ನು ಗೋಪಾಲ್ ಪತ್ನಿಯ ಆರೋಪದ ಮೇರೆಗೆ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಅಪಹರಣಗೊಂಡ ಗೋಪಾಲ್ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಇಂದು (ಮಾ.09) ಬೆಳಗಿನ ಜಾವ 9 ಇನ್ಸ್‌ಪೆಕ್ಟರ್‌ಗಳ ಸಹಭಾಗಿತ್ವದಲ್ಲಿ 7 ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎನ್ನಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಅವರು ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಪಹರಣಗೊಂಡ ಗೋಪಾಲರನ್ನು ಶೀಘ್ರ ಪತ್ತೆಹಚ್ಚಲು ಪೊಲೀಸರು ಎಲ್ಲಾ ದಿಕ್ಕುಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು, ಮಾರ್ಚ್ 9: ಮಧ್ಯಪ್ರಾಚ್ಯದಲ್ಲಿ ದಿನೇ ದಿನೇ ಇಸ್ರೇಲ್-ಇರಾನ್ ಯುದ್ಧದ (Israel Iran War) ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಹಂತಹಂತವಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಮಾರ್ಚ್ 8 ರ ಭಾನುವಾರ ರಾತ್ರಿ ದುಬೈನಿಂದ ಹೊರಟ ಎಮಿರೇಟ್ಸ್ ವಿಮಾನದಲ್ಲಿ 288 ಮಂದಿ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು. ಯುದ್ಧದ ಆತಂಕದಿಂದಾಗಿ ಹಲವು ದಿನಗಳಿಂದ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಇದೀಗ ವಿಮಾನ ಸೇವೆಗಳು ತಾತ್ಕಾಲಿಕ ಪುನರಾರಂಭವಾದ ಬೆನ್ನಲ್ಲೇ ತಾಯ್ನಾಡಿಗೆ ಮರಳುತ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತವಾಗಿ ಭಾರತಕ್ಕೆ, ವಿಶೇಷವಾಗಿ ಬೆಂಗಳೂರಿಗೆ (Bangalore) ಬಂದಿರುವ ಮಾಹಿತಿ ಲಭ್ಯವಾಗಿದೆ.
ದುಬೈನಿಂದ ಮರಳಿದ ಸುಷ್ಮಾ ಎಂಬವರು ಮಾತನಾಡಿ, ‘ದುಬೈನಲ್ಲಿ ಸಾಮಾನ್ಯವಾಗಿ ಎಲ್ಲವೂ ಸುರಕ್ಷಿತವಾಗಿಯೇ ಇತ್ತು. ಆದರೆ ಕೆಲವೊಮ್ಮೆ ಸ್ಫೋಟದ ಶಬ್ದಗಳು ಕೇಳಿಬರುತ್ತಿದ್ದರಿಂದ ಆತಂಕ ಉಂಟಾಗುತ್ತಿತ್ತು’ ಎಂದು ಅನುಭವವನ್ನು ಹಂಚಿಕೊಂಡರು.
ಇನ್ನೊಬ್ಬ ಪ್ರಯಾಣಿಕ ಅಹ್ಮದ್ ಖಾನ್ ಮಾತನಾಡಿ, ‘ಒಮ್ಮೆ ನಾವು ಊಟ ಮಾಡಿ ಮನೆಗೆ ಬರುತ್ತಿದ್ದಾಗ ನಮ್ಮ ಮನೆ ಹಿಂಭಾಗದಲ್ಲೇ ಡ್ರೋನ್ ದಾಳಿ ನಡೆದಿತ್ತು. ಅದರಿಂದ ತುಂಬಾ ಭಯವಾಯಿತು’ ಎಂದು ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಒಟ್ಟಾರೆ ದುಬೈನಲ್ಲಿ ದೊಡ್ಡ ಮಟ್ಟದ ತೊಂದರೆ ಎದುರಾಗಿಲ್ಲ ಎಂದು ಮರಳಿದವರು ಹೇಳಿದರೂ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಯಾವಾಗ ಹೇಗೆ ತಿರುವು ಪಡೆಯುತ್ತದೆ ಎನ್ನುವುದು ತಿಳಿಯದ ಹಿನ್ನೆಲೆಯಲ್ಲಿ ಅನೇಕರು ಮುಂಜಾಗ್ರತಾ ಕ್ರಮವಾಗಿ ತಾಯ್ನಾಡಿಗೆ ಮರಳುತ್ತಿರುವುದು ಕಂಡುಬರುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಸಾಮಾನ್ಯವಾಗಿ ಹೋಟೆಲ್ಗೋ ಅಥವಾ ಯಾವುದೋ ಒಳ್ಳೆಯ ಸ್ಥಳಕ್ಕೆ ಹೋಗಿ ಹುಡುಗರು ಹುಡುಗಿಯರಿಗೆ ಪ್ರೇಮ ನಿವೇದನೆ ಮಾಡುತ್ತಾರೆ. ಆದರೆ ಹುಡುಗ ಮಾತ್ರವಲ್ಲ ಇಡೀ ಕುಟುಂಬವೇ ಆಕೆಗೆ ಪ್ರಪೋಸ್ ಮಾಡಲು ಅವರ ಮನೆ ಕೆಳಗೆ ನಿಂತು ಬಾಲ್ಕನಿಯಲ್ಲಿ ನಿಂತಿರುವ ಯುವತಿಗೆ ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಗೆಳತಿಯ ಮನೆಯ ಹೊರಗೆ ತನ್ನ ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬ ಸದಸ್ಯರನ್ನು ಒಟ್ಟುಗೂಡಿಸಿದ್ದರು. ಎಲ್ಲರೂ ಒಟ್ಟಿಗೆ ಕಾಯುತ್ತಿದ್ದರು. ಜನರು ನೃತ್ಯ ಮಾಡುತ್ತಾ, ಹಾಡುತ್ತಾ, ಯುವತಿಗೆ ಬಾಲ್ಕನಿಯಲ್ಲಿ ನೋಡುವಂತೆ ಮಾಡಿದರು.ಆಕೆ ಹೊರಬಂದಾಗ ಅಲ್ಲಿರುವ ಜನರನ್ನು ಕಂಡು ದಿಗ್ಭ್ರಮೆಗೊಂಡಳು. ತನಗಾಗಿ ಬಂದಿದ್ದವರನ್ನು ನೋಡಿ ಭಾವುಕಳಾದಳು.
ನಟಿ ತ್ರಿಷಾ (Trisha) ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಜೊತೆ ಸುತ್ತಾಡುತ್ತಾ ಇದ್ದಾರೆ. ಈ ಕಾರಣಕ್ಕೆ ವಿಜಯ್ ಹಾಗೂ ಅವರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ಅವರು ‘ವಿಜಯ್ಗೆ ನಟಿಯ ಜೊತೆ ಸಂಬಂಧ ಇದೆ’ ಎಂದು ಆರೋಪಿಸಿದ್ದಾರೆ. ತ್ರಿಷಾ ಅವರಿಗೆ ಈಗ 42 ವರ್ಷ. ತ್ರಿಷಾ ಇನ್ನೂ ವಿವಾಹ ಆಗಿಲ್ಲ. ಹಾಗಂತ ಅವರು ಈ ಬಗ್ಗೆ ಆಲೋಚನೆ ಮಾಡಿಯೇ ಇಲ್ಲ ಎಂದು ಹೇಳೋಕೆ ಆಗುವುದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ತ್ರಿಷಾಗೆ ಮದುವೆ ಆಗಿ, 10 ವರ್ಷಗಳೇ ಕಳೆದಿರುತ್ತವೆ. ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ತ್ರಿಷಾ ಅವರು ವರುಣ್ ಎಂಬುವವರನ್ನು ಮದುವೆ ಆಗಿರುತ್ತಿದ್ದರು. ಜನವರಿ 23ರಂದು ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಇವರ ಎಂಗೇಜ್ಮೆಂಟ್ ನಡೆಯಿತು. ತ್ರಿಷಾ ಮದುವೆ ಆಗಬೇಕಿದ್ದ ಹುಡುಗ ಉದ್ಯಮಿ ಆಗಿದ್ದರು ಎನ್ನಲಾಗಿದೆ. ಅವರು ನಿಶ್ಚಿತಾರ್ಥ ಮಾಡಿಕೊಂಡ ಚಿತ್ರಗಳು ವೈರಲ್ ಆದವು. ಎಂಗೇಜ್ಮೆಂಟ್ ವಿಷಯ ವೈರಲ್ ಆಗುತ್ತಿದ್ದಂತೆ ತ್ರಿಷಾ ಹಾಗೂ ವರುಣ್ ಸುತ್ತಾಟ ಆರಂಭಿಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು ಎನ್ನಿ.
ತ್ರಿಷಾ ಅವರು ಮೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಕೊನೆ ಮಾಡಿಕೊಂಡರು. ಇದು ಅಭಿಮಾನಿಗಳಿಗೆ ಶಾಕಿಂಗ್ ಎಂದೆನಿಸಿತ್ತು. ನಿರೀಕ್ಷೆಗಳು ಇಬ್ಬರಿಗೂ ಹೆಚ್ಚೇ ಇದ್ದವು. ಈ ನಿರೀಕ್ಷೆ ತಲುಪಿಲ್ಲ. ಹೀಗಾಗಿ, ಇವರು ಬೇರೆ ಆದರು ಎಂದು ವರದಿ ಆಗಿತ್ತು. ಇವರು ಬೇರೆ ಆಗಲು ಮತ್ತೊಂದು ಕಾರಣವೂ ಇತ್ತು. ವರುಣ್ ಕುಟುಂಬ ಉದ್ಯಮದ ಹಿನ್ನೆಲೆ ಹೊಂದಿತ್ತು. ಅವರು ನಟಿಯನ್ನು ಮದುವೆ ಆಗುತ್ತಿರುವುದು ಕುಟುಂಬದವರಿಗೆ ಇಷ್ಟವೇ ಇರಲಿಲ್ಲವಂತೆ. ಹೀಗಾಗಿ, ಕುಟುಂಬದವರು ಅಸಮಾಧಾನ ಹೊರಹಾಕಿದ್ದರು. ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿರುವವರನ್ನು ಮದುವೆ ಆಗುವಂತೆ ಕುಟುಂಬದವರು ಒತ್ತಾಯ ಹೇರಿದ್ದರು.
ತ್ರಿಷಾಗೂ ವರುಣ್ನ ಮದುವೆ ಆಗಿದ್ದರೆ ಸಾಕಷ್ಟು ತೊಂದರೆ ಆಗುತ್ತಿತ್ತಂತೆ. ಇದಕ್ಕೆ ಕಾರಣವೂ ಇದೆ. ತ್ರಿಷಾ ಅವರನ್ನು ನಿಯಂತ್ರಿಸಲು ವರುಣ್ ಇಷ್ಟಪಡುತ್ತಿದ್ದರು. ಅಲ್ಲದೆ, ನಟನೆಯನ್ನು ತೊರೆಯುವಂತೆ ಅವರು ಒತ್ತಡ ಹೇರಿದ್ದರು ಎಂದು ವರದಿ ಆಗಿದೆ. ಇದನ್ನು ಗಮನಿಸಿದ ಅವರು ನಿಶ್ಚಿತಾರ್ಥದಿಂದ ದೂರವೇ ಇರಲು ನಿರ್ಧರಿಸಿದರು.
ಈ ಎರಡೂ ವಿಚಾರಕ್ಕೆ ಇಬ್ಬರ ಮಧ್ಯೆ ತಿಕ್ಕಾಟ ಆರಂಭ ಆಯಿತು. ಇದು ಬೇರೆಯದೇ ಹಂತಕ್ಕೆ ಹೋಯಿತು. ಮದುವೆ ಆದರೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಇವರಿಗೆ ಅನಿಸಿದೆ. ಈ ಕಾರಣದಿಂದ ಇಬ್ಬರೂ ದೂರ ಆದರು. ತ್ರಿಷಾ ಆ ಬಳಿಕ ವಿವಾಹ ಆಗಲೇ ಇಲ್ಲ. ಆ ಬಗ್ಗೆ ಅವರು ಯೋಚಿಸಿಯೂ ಇಲ್ಲ. ಈಗ ಅವರು ವಿಜಯ್ ಜೊತೆ ಮದುವೆ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.
T20 World Cup 2026: 2026ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. ಇದಕ್ಕೂ ಮುನ್ನ ಭಾರತ ತಂಡವು 2007 ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಮತ್ತೊಮ್ಮೆ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಐತಿಹಾಸಿಕ ಕ್ಷಣಗಳಿಗೆ ಈ ಹಿಂದಿನ ವಿಶ್ವಕಪ್ ವಿಜೇತ ನಾಯಕರುಗಳು ಸಾಕ್ಷಿಯಾಗಿದ್ದರು. ಅಂದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಈ ಪಂದ್ಯದ ವೇಳೆ ಹಾಜರಿದ್ದರು. ಇತ್ತ ಟೀಮ್ ಇಂಡಿಯಾ ಮೂರನೇ ಬಾರಿ ವಿಶ್ವಕಪ್ ಗೆದ್ದ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಹಾಡಿ ಹೊಗಳಿದ್ದು ವಿಶೇಷ.
ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಜಯ ಸಾಧಿಸಿದ ನಂತರ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪ್ರಶಂಸೆಯ ಸಾರಾಂಶ ಈ ಕೆಳಗಿನಂತಿದೆ…
“ಕೋಚ್ ಸಾಬ್, ನಿಮ್ಮ ನಗು ಅದ್ಭುತವಾಗಿ ಕಾಣುತ್ತಿದೆ. ಗಂಭೀರತೆಯೊಂದಿಗೆ ನಗು ಇರುವುದು ಒಂದು ‘ಕಿಲ್ಲರ್ ಕಾಂಬಿನೇಶನ್’. ತುಂಬಾ ಚೆನ್ನಾಗಿ ಆಡಿದ್ದೀರಿ, ಆನಂದಿಸಿ ಗೆಳೆಯರೇ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುವ ಗೌತಮ್ ಗಂಭೀರ್, ಭಾರತದ ಗೆಲುವಿನ ಸಂಭ್ರಮದಲ್ಲಿ ನಗುತ್ತಿರುವುದನ್ನು ಕಂಡು ಧೋನಿ ಈ ರೀತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಇದೇ ಪೋಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಬೌಲಿಂಗ್ ಅನ್ನು ಕೊಂಡಾಡಿದ ಧೋನಿ, ಅವರನ್ನು “ಚಾಂಪಿಯನ್ ಬೌಲರ್” ಎಂದು ಕರೆದಿದ್ದಾರೆ. ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 96 ರನ್ಗಳ ಪ್ರಚಂಡ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕಳೆದ ಕೆಲವು ವಾರಗಳಿಂದ ನಟ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ (Trisha) ಅವರ ಹೆಸರು ಚರ್ಚೆಯಲ್ಲಿದೆ. ಅವರಿಬ್ಬರ ಸಂಬಂಧದ ಕಾರಣದಿಂದ ಸಂಗೀತಾ ಅವರು ವಿಜಯ್ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ವಿವಾಹ ಆರತಕ್ಷತೆಯೊಂದಕ್ಕೆ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ತೆರಳಿದ್ದರು. ಇದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಚರ್ಚೆ ಶುರುವಾಗಿದೆ. ಈಗ ಈ ಬಗ್ಗೆ ನಟ ಹಾಗೂ ನಿರ್ದೇಶಕ ಪಾರ್ಥಿಬನ್ ಅವರು ಕುಹಕವಾಡಿದ್ದಾರೆ.
ದಳಪತಿ ವಿಜಯ್ ಹಾಗೂ ತ್ರಿಷಾ ಒಟ್ಟಾಗಿ ಸುತ್ತಾಟ ಮಾಡುತ್ತಿರುವ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ನಟಿಯ ಜೊತೆಗಿನ ಅಕ್ರಮ ಸಂಬಂಧದ ಕಾರಣಕ್ಕೆ ವಿಜಯ್ ಅವರಿಗೆ ವಿಚ್ಛೇದನ ನೀಡುತ್ತಿರುವುದಾಗಿ ಪತ್ನಿ ಸಂಗೀತಾ ಹೇಳಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಈಗ ತ್ರಿಷಾ ಬಗ್ಗೆ ತಮಿಳು ನಟ ಪಾರ್ಥಿಬನ್ ಮಾಡಿದ ಕಾಮೆಂಟ್ ವೈರಲ್ ಆಗಿದೆ. ಅವರು ನಟಿಯನ್ನು ಟೀಕೆ ಮಾಡಿದ್ದಾರೆ. ಪಾರ್ಥಿಬನ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ತೆರೆ ಹಂಚಿಕೊಂಡ ನಟಿಯರ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ತೋರಿಸಲಾಯಿತು. ಈ ವೇಳೆ ತ್ರಿಷಾ ಫೋಟೋ ಬಂತು.
‘ಕುಂದವೈ (ತ್ರಿಷಾ) ಕೆಲ ದಿನ ಮನೆ ಒಳಗೆ ಇರೋದು ಉತ್ತಮ. ಎಲ್ಲವನ್ನೂ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ. ಎಲ್ಲಾ ಕವಿತೆಗಳನ್ನು ಆನಂದಿಸಲು ಸಾಧ್ಯವಿಲ್ಲ. ಕೆಲವು ಕವಿತೆಗಳನ್ನು ಮುಕ್ತವಾಗಿ ಓದಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ‘ಕುಂದವೈ ಹೊರಗೆ ಬಂದರೆ ಸಮಸ್ಯೆ’ ಎಂದು ಅವರು ಹೇಳಿದ್ದಾರೆ.
ಪಾರ್ಥಿಬನ್ ಅವರ ಭಾಷಣವನ್ನು ಕೆಲವರು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಪಾರ್ಥಿಬನ್ ಅವರು ಆಡಿದ ಮಾತುಗಳು ಸರಿ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ‘ಪಾರ್ಥಿಬನ್ ಅವರು ಈಗಾಗಲೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ ಅವರು ತಮ್ಮ ಮಾಜಿ ಪತ್ನಿಯ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂದು ಕೆಲವರು ಪಾರ್ಥಿಬನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ವಿಜಯ್ ಅವರನ್ನು ಟೀಕಿಸಿದ್ದಾರೆ. ‘ಹೆಂಡತಿಯ ಕಣ್ಣೀರು ಕೂಡ ವಿಜಯ್‌ಗೆ ಅಷ್ಟು ಮುಖ್ಯವಲ್ಲ ಎಂದು ಅವರು ವೇದಿಕೆಯ ಮೇಲೆ ಮಾತನಾಡುತ್ತಾರೆ. ಇದು ಸ್ವೀಕಾರಾರ್ಹವಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು, ಮಾರ್ಚ್ 9: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಮಾರ್ಚ್ 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಗಮನ ಸೆಳೆಯಿತು. ಇದರ ಭಾಗವಾಗಿ ಬೆಂಗಳೂರು ಮತ್ತು ಮೈಸೂರು ಮಾರ್ಗದಲ್ಲಿ ಭಾನುವಾರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೊ ಪೈಲಟ್, ಟಿಟಿ (ಟಿಕೆಟ್ ಪರಿಶೀಲಕರು) ಸೇರಿದಂತೆ ರೈಲಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಮಹಿಳೆಯರ ಸಾಧನೆ ಮತ್ತು ಅವರ ಪಾತ್ರವನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದ ಸಂಭ್ರಮದ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನೈಋತ್ಯ ರೈಲ್ವೆ ಹಂಚಿಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ