ಕರ್ನಾಟಕ ಹವಾಮಾನ: 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಾಳೆ ಮಳೆ ಸಾಧ್ಯತೆ; ಹೇಗಿರಲಿದೆ ಬೆಂಗಳೂರು ವೆದರ್​​? – Kannada News | Karnataka Weather Update: Light to Moderate Rain Likely in Over 18 Districts on May 8

ಬೆಂಗಳೂರು, ಮೇ 07: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ತೀವ್ರ ಬಿಸಿಯ ಹವಾಮಾನದ ನಡುವೆಯೂ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನಾಳೆ ಸಣ್ಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್​​, ವಿಜಯಪುರ ಮತ್ತು ಬಳ್ಳಾರಿಯಲ್ಲಿ ವಿಪರೀತ ಉಷ್ಣ ವಾತಾವರಣ ಇರಲಿದ್ದು, ಸುಮಾರು 42 ಡಿಗ್ರಿ ಸೆಲ್ಸಿಯಸ್​​ ವರೆಗೆ ತಾಪಮಾನ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೆಯೇ ಉತ್ತರ ಒಳನಾಡು ಭಾಗದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಭಾಗದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಚಾಮರಾಜನರ, ದಾವಣಗೆರೆ, ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲೂ ಸಣ್ಣ ಪ್ರಮಾಣದ ಮಳೆಯನ್ನು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮೇ 9ರವರೆಗೆ ಬೆಂಗಳೂರು ಸೇರಿ ರಾಜ್ಯದಲ್ಲಿ ಮಳೆ

ಉಳಿದಂತೆ ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಳ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೇಗಿರಲಿದೆ ಬೆಂಗಳೂರು ವಾತಾವರಣ?

ಬೆಂಗಳೂರಿನಲ್ಲಿ ನಾಳೆ ಬಿಸಿಲಿನ ವಾತಾವರಣ ಇರಲಿದ್ದು ನಗರದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್​ ಇರಲಿದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್​ ತಲುಪಲಿದೆ. ಹಗಲಿನ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆಯಾದರೂ ಮಳೆಯ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ. ಗಾಳಿಯ ವೇಗ ಗಂಟೆಗೆ 6.4ರಿಂದ 16 ಕಿಲೋ ಮೀಟರ್​​ ವರೆಗೆ ಇರಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:04 pm, Thu, 7 May 26

Source link

LSG vs RCB IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ – Kannada News | Lucknow Super Giants vs Royal Challengers Bengaluru B IPL 2026 Live Cricket Score LSG vs RCB Match on 7th May latest news in Kannada

07 May 2026 07:05 PM (IST)

LSG vs RCB IPL 2026: ಆರ್​ಸಿಬಿ

ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್.

07 May 2026 07:02 PM (IST)

LSG vs RCB IPL 2026: ಟಾಸ್ ಗೆದ್ದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Source link

ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ – Kannada News | Apple announces series of initiatives for 2030 carbon neutral goal, including Rs 100 cr renewable energy project

ನವದೆಹಲಿ, ಮೇ 7: ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಯಾದ ಆಪಲ್ (Apple Inc), ಭಾರತದಲ್ಲಿ ಪರಿಸರ ಸ್ನೇಹಿ ಇಂಧನಕ್ಕಾಗಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ತನ್ನ ‘2030 ಕಾರ್ಬನ್ ನ್ಯೂಟ್ರಲ್’ (2030 Carbon Neutral) ಗುರಿಯನ್ನು ತಲುಪುವ ನಿಟ್ಟಿನಲ್ಲಿ ಭಾರತದ ಕ್ಲೀನ್ ಎನರ್ಜಿ (Clean Energy) ವಲಯದಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಆಪಲ್ ಘೋಷಿಸಿದೆ. ಇದೂ ಒಳಗೊಂಡಂತೆ ವಿವಿಧ ಪರಿಸರ ಉಪಕ್ರಮಗಳನ್ನು ಆ್ಯಪಲ್ ಕಂಪನಿ ಕೈಗೊಳ್ಳುತ್ತಿದೆ.

2030ರ ವೇಳೆಗೆ ತನ್ನ ಸಂಪೂರ್ಣ ಪೂರೈಕೆ ಸರಪಳಿ (Supply Chain) ಮತ್ತು ಉತ್ಪನ್ನಗಳ ಬಳಕೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕಿಳಿಸುವ (Carbon Neutral) ಬೃಹತ್ ಗುರಿಯನ್ನು ಆಪಲ್ ಹೊಂದಿದೆ. ಇದಕ್ಕಾಗಿ ಭಾರತದಂತಹ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಹಸಿರು ಇಂಧನಕ್ಕೆ ಒತ್ತು ನೀಡುತ್ತಿದೆ.

ಆಪಲ್ ಸಂಸ್ಥೆಯು ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು, ವಿಶೇಷವಾಗಿ ಸೌರಶಕ್ತಿ (Solar Power) ಯೋಜನೆಗಳನ್ನು ವಿಸ್ತರಿಸಲು ಈ ಹಣವನ್ನು ಬಳಸಲಿದೆ. ನವೀಕರಣ ಇಂಧನ ಅಭಿವೃದ್ಧಿಪಡಿಸುವ ಕ್ಲೀನ್​ಮ್ಯಾಕ್ಸ್ (CleanMax) ಕಂಪನಿ ಜೊತೆಗೂಡಿ ಆ್ಯಪಲ್ ದೆಶಾದ್ಯಂತ 150 ಮೆಗಾವ್ಯಾಟ್​ಗಿಂತ ಹೆಚ್ಚು ಸ್ವಚ್ಛ ಇಂಧನ ತಯಾರಿಸುವ ಯೋಜನೆ ಹೊಂದಿದೆ. ವರ್ಷಕ್ಕೆ ಒಂದೂವರೆ ಲಕ್ಷ ಮನೆಗಳಿಗೆ ಈ ಪರಿಸರಪೂರಕ ಇಂಧನ ಲಭ್ಯವಾಗಿಸಬಲ್ಲುದು ಈ ಉಪಕ್ರಮ.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಇದೇ ಕ್ಲೀನ್ ಮ್ಯಾಕ್ಸ್ ಕಂಪನಿ ಜೊತೆ ಸೇರಿ ಈ ಹಿಂದೆ ಆ್ಯಪಲ್ ತನ್ನ ಕಚೇರಿಗಳಲ್ಲಿ ರೂಫ್​ಟಾಪ್ ಸೋಲಾರ್ ಅನ್ನು ಅಳವಡಿಕೆ ಮಾಡಿತ್ತು.

ಕೇವಲ ಇಂಧನ ಮಾತ್ರವಲ್ಲದೆ, ನೀರು ಮರುಪೂರಣ (Water Replenishment) ಯೋಜನೆಗಳಿಗೂ ಆಪಲ್ ಆದ್ಯತೆ ನೀಡುತ್ತಿದೆ. ಕೈಗಾರಿಕಾ ಪ್ರದೇಶಗಳಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದೆ.

ಹಾಗೆಯೇ, ಡಬ್ಲ್ಯುಡಬ್ಲ್ಯುಎಫ್ ಜೊತೆ ಸೇರಿ ರೀಸೈಕ್ಲಿಂಗ್, ವೇಸ್ಟ್ ಮ್ಯಾನೇಜ್ಮೆಂಟ್ ಉಪಕ್ರಮಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದೆ. ಅಕುಮೆನ್ ಎನ್ನುವ ಕಂಪನಿ ಜೊತೆಗೂ ಆಪಲ್ ಕೈಜೋಡಿಸುತ್ತಿದೆ. ಇದೂ ಕೂಡ ರೀಜನರೇಟಿವ್ ಅಗ್ರಿಕಲ್ಚರ್, ವೇಸ್ಟ್ ಮ್ಯಾನೇಜ್ಮೆಂಟ್, ಸರ್ಕುಲಾರ್ ಎಕನಾಮಿಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ.

ಆಪಲ್ ಪಾಲಿಗೆ ಭಾರತ ಈಗ ಕೇವಲ ದೊಡ್ಡ ಮಾರುಕಟ್ಟೆಯಲ್ಲ, ಬದಲಿಗೆ ಪ್ರಮುಖ ಉತ್ಪಾದನಾ ಕೇಂದ್ರವೂ ಆಗಿದೆ. ಐಫೋನ್ ತಯಾರಿಕೆಯಲ್ಲಿ ಭಾರತದ ಪಾಲು ಹೆಚ್ಚುತ್ತಿರುವುದರಿಂದ, ಇಲ್ಲಿನ ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಸಂಸ್ಥೆಗೆ ಅನಿವಾರ್ಯ ಮತ್ತು ಜವಾಬ್ದಾರಿಯುತ ಕೆಲಸವಾಗಿದೆ.

ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

ಈ ಹೂಡಿಕೆಯಿಂದ ಭಾರತದ ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ ಮತ್ತು ಸುಸ್ಥಿರ ಪರಿಸರದ ಲಾಭ ಸಿಗಲಿದೆ. ಆಪಲ್‌ನ ಈ ನಡೆಯು ಇತರ ದೊಡ್ಡ ಕಂಪನಿಗಳಿಗೂ ಪರಿಸರ ರಕ್ಷಣೆಯತ್ತ ಸಾಗಲು ಪ್ರೇರಣೆಯಾಗಲಿದೆ.

ಆಪಲ್ ಸಂಸ್ಥೆಯು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಮತ್ತು ತನ್ನ ವ್ಯಾಪಾರವನ್ನು ಪರಿಸರ ಸ್ನೇಹಿಯಾಗಿಸಲು ಭಾರತದಲ್ಲಿ ಈ ಭಾರಿ ಹೂಡಿಕೆಯನ್ನು ಮಾಡುತ್ತಿದೆ. ತಂತ್ರಜ್ಞಾನ ಮತ್ತು ಪರಿಸರ ಎರಡೂ ಜೊತೆಜೊತೆಯಾಗಿ ಸಾಗಬೇಕು ಎಂಬುದು ಇದರ ಉದ್ದೇಶ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕ ವಯಸ್ಸಿನಲ್ಲೇ ಶಾಸಕರಾದ ಸಮರ್ಥ್​ ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಎಂಟ್ರಿ – Kannada News | Davanagere South Newly Elected Congress MLA Samarth shamanur bows down Steps of vidhana soudha

ಬೆಂಗಳೂರು, (ಮೇ 07): ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು (Samarth Shamanur) ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಶಾಸಕರಾಗಿದ್ದು, ಗೆದ್ದ ಬಳಿಕ ಮೊದಲ ಬಾರಿಗೆ ಸಮರ್ಥ, ತಂದೆ ತಾಯಿ ಜೊತೆಗೆ ವಿಧಾನಸೌಧಕ್ಕೆ ಆಗಮಿಸಿದ್ದು, ಈ ವೇಳೆ ಮೆಟ್ಟಿಲುಗಳಿಗೆ ನಮಸ್ಕರಿಸಿ ವಿಧಾನಸೌಧದ ಒಳಗಡೆ ಪ್ರವೇಶಿಸಿದರು.

ಇದನ್ನೂ ನೋಡಿ: ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ:ತಂದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥ ಶಾಸಕ

Source link

ಕಾರವಾರ: 140 ಟನ್ ತೂಕದ ವಿಕಿರಣ ರಕ್ಷಾ ಕವಚ ತರುತ್ತಿದ್ದ ವಾಹನ ಪಲ್ಟಿ; ವಿಡಿಯೋ ನೋಡಿ – Kannada News | Karwar: Truck Carrying 140 Tons of Radiation Protection Equipment Overturns; watch video

ಕಾರವಾರ, ಮೇ 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಸಲಕರಣೆ ಹೊತ್ತಿದ್ದ ಭಾರೀ ವಾಹನವೊಂದು ಪಲ್ಟಿಯಾಗಿದೆ. ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸೂರತ್‌ನಿಂದ ತರಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನವೇ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕೈಗಾ ಅಣುಸ್ಥಾವರದ ವಿಸ್ತರಣಾ ಕಾಮಗಾರಿಗಾಗಿ ಅತ್ಯಗತ್ಯವಾಗಿದ್ದ ಈ ವಿಕಿರಣ ರಕ್ಷಾ ಕವಚವನ್ನು ಸೂರತ್‌ನಿಂದ ರಸ್ತೆಯ ಮೂಲಕ ಅತ್ಯಂತ ಜಾಗರೂಕತೆಯಿಂದ ಸಾಗಿಸಲಾಗುತ್ತಿತ್ತು. ಆದರೆ ಮಲೆನಾಡಿನ ತಿರುವು ರಸ್ತೆಗಳಲ್ಲಿ ಸಾಗುವಾಗ ಈ ಅವಘಡ ಸಂಭವಿಸಿದೆ. 140 ಟನ್ ಭಾರ ಇರುವುದರಿಂದ ವಾಹನವನ್ನು ಮೇಲೆತ್ತಲು ಬೃಹತ್ ಕ್ರೇನ್‌ಗಳ ಅವಶ್ಯಕತೆಯಿದ್ದು, ಸ್ಥಳಕ್ಕೆ ಕೈಗಾ ಅಧಿಕಾರಿಗಳು ಮತ್ತು ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಉಡುಪಿಯಲ್ಲಿ ಅಬ್ಬರಿಸಿದ ವರುಣ: ಮಣಿಪಾಲ ರಸ್ತೆಯಲ್ಲಿ ನೀರು ನಿಂತು ಸವಾರರ ಪರದಾಟ – Kannada News | Heavy Rains Lash Udupi After Heatwave; Waterlogging on Manipal Road Disrupts Commuters

ಉಡುಪಿ, ಮೇ 07: ಬಿಸಿಲಿನ ತಾಪಕ್ಕೆ ತೀವ್ರವಾಗಿ ತತ್ತರಿಸಿದ್ದ ಪೊಡವಿಗೊಡೆಯನ ನಾಡು ಉಡುಪಿಯ ಜನಕ್ಕೆ ವರುಣ ತಂಪೆರೆದಿದ್ದಾನೆ. ಮುಂಜಾನೆಯಿಂದಲೆ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗ ನಡೆದಿದೆ. ಉಡುಪಿ ನಗರದಲ್ಲಿಯೂ ಉತ್ತಮ ಮಳೆಯಾದ ಪರಿಣಾಮ ಮಣಿಪಾಲ ರಸ್ತೆಯ ಕೆಲವೆಡೆ ರಸ್ತೆಯಲ್ಲಿಯೇ ಹಳ್ಳದ ರೀತಿ ನೀರು ಹರಿದಿರುವ ದೃಶ್ಯಗಳು ಕಂಡುಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೆಲ್ದಿ ಅಂತ ಸೇವಿಸುವ ಆಹಾರ ನಿಜವಾಗಿಯೂ ಆರೋಗ್ಯ ಕಾಪಾಡುತ್ತಾ? ಯಾವ ಉತ್ಪನ್ನ ಹೆಚ್ಚು ಅಪಾಯಕಾರಿ? – Kannada News | Hidden Sugar and Additives: What Market ‘Health’ Foods Don’t Tell You

ಇತ್ತೀಚಿನ ದಿನಗಳಲ್ಲಿ ಹೆಲ್ದಿ (Healthy), ಲೋ ಫ್ಯಾಟ್, ಶುಗರ ಫ್ರೀ (Sugar free) ಎಂಬ ಹೆಸರಿನಲ್ಲಿ ಹಲವಾರು ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಜನರು ಇವುಗಳನ್ನು ನಂಬಿಕೊಂಡು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಅವುಗಳ ಸೇವನೆ ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ, ಇವು ಎಷ್ಟು ಆರೋಗ್ಯಕರ ಎಂಬುದನ್ನು ಗಮನಿಸುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಈ ಎಲ್ಲಾ ಉತ್ಪನ್ನಗಳು ನಿಜವಾಗಿಯೂ ಆರೋಗ್ಯಕರವಾಗಿರುವುದಿಲ್ಲ. ಹಾಗಾದರೆ ಇದನ್ನು ಕಂಡುಹಿಡಿಯುವುದು ಹೇಗೆ, ಯಾವ ಉತ್ಪನ್ನ ಹೆಚ್ಚು ಅಪಾಯಕಾರಿ, ಖರೀದಿಸುವಾಗ ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಲೇಬಲ್‌ ನಿಮ್ಮನ್ನು ಮೋಸಗೊಳಿಸಬಹುದು!

ಪ್ಯಾಕೇಜಿಂಗ್‌ನಲ್ಲಿ ಬಳಸುವ ಆಕರ್ಷಕ ಪದಗಳು ಮತ್ತು ಜಾಹೀರಾತುಗಳು ಹಲವಾರು ಬಾರಿ ಗ್ರಾಹಕರನ್ನು ತಪ್ಪು ದಾರಿಗೆಳೆಯುತ್ತವೆ. ಕೆಲವು ಉತ್ಪನ್ನಗಳಲ್ಲಿ “ಹೆಲ್ದಿ” ಎಂದು ಬರೆದಿದ್ದರೂ, ಅವುಗಳಲ್ಲಿ ಅಡಗಿರುವ ಸಕ್ಕರೆ, ಉಪ್ಪು, ಅನಾರೋಗ್ಯಕರ ಕೊಬ್ಬುಗಳು ಮತ್ತು ಪ್ರಿಸರ್ವೇಟಿವ್‌ಗಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಇದನ್ನೂ ಓದಿ: ಕೋಲ್ಡ್ ಡ್ರಿಂಕ್ ಜೊತೆ ಚಿಪ್ಸ್ ತಿನ್ನುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ

ಯಾವ ಉತ್ಪನ್ನಗಳು ಹೆಚ್ಚು ಅಪಾಯಕಾರಿ?

ತಜ್ಞರ ಪ್ರಕಾರ, ಫ್ಲೇವರ್ಡ್ ಯೋಗರ್ಟ್, ಪ್ಯಾಕೇಜ್ಡ್ ಜ್ಯೂಸ್, ಎನರ್ಜಿ ಬಾರ್, ಡಯಟ್ ಸ್ನ್ಯಾಕ್ಸ್ ಮುಂತಾದವುಗಳಲ್ಲಿ ಸಕ್ಕರೆ ಮತ್ತು ಕಾರ್ಬೊಹೈಡ್ರೇಟ್ ಪ್ರಮಾಣ ಹೆಚ್ಚಿರಬಹುದು. ಇನ್‌ಸ್ಟಂಟ್ ಓಟ್ಸ್ ಕೂಡ ಕೆಲವೊಮ್ಮೆ ಹೆಚ್ಚು ಸಕ್ಕರೆ ಮತ್ತು ರಿಫೈನ್ಡ್ ಕಾರ್ಬ್ಸ್ ಹೊಂದಿರುತ್ತವೆ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಬೊಜ್ಜು ಹಾಗೂ ಮಧುಮೇಹದ ಅಪಾಯ ಹೆಚ್ಚಬಹುದು.

ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ;

ಯಾವುದೇ ಉತ್ಪನ್ನವನ್ನು ಖರೀದಿಸುವ ಮೊದಲು ಅದರ ನ್ಯೂಟ್ರಿಷನ್ ಲೇಬಲ್ ಪರಿಶೀಲಿಸುವುದು ಅಗತ್ಯ. ಅದರಲ್ಲಿ ಇರುವ ಸಕ್ಕರೆ, ಉಪ್ಪು, ಕೊಬ್ಬು ಮತ್ತು ಕ್ಯಾಲೊರಿಗಳ ಪ್ರಮಾಣ ಗಮನಿಸಬೇಕು. ಜೊತೆಗೆ, ಇಂಗ್ರಿಡಿಯಂಟ್ಸ್ ಪಟ್ಟಿಯನ್ನು ಓದಿ, ಹೆಚ್ಚು ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಉತ್ತಮ. ಮನೆಯಲ್ಲೇ ತಯಾರಿಸಿದ ಆಹಾರವು ಸಾಮಾನ್ಯವಾಗಿ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ. ಇದರಲ್ಲಿ ಪ್ರಿಸರ್ವೇಟಿವ್‌ಗಳು ಕಡಿಮೆ ಇರುತ್ತವೆ ಹಾಗೂ ಸಕ್ಕರೆ, ಉಪ್ಪು ಮತ್ತು ಎಣ್ಣೆಯ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮನೆ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Swapna Shastra: ಕನಸಿನಲ್ಲಿ ಕೂದಲು ಉದುರಿದಂತೆ ಕಂಡರೆ ಏನರ್ಥ? ಇದು ಅಶುಭವೇ? – Kannada News | Hair Loss Dream Meaning: Is It Good or Bad According to Swapna Shastra?

ನಿದ್ರೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಮಹತ್ವವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸುಗಳು ನಮಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಒಂದು ಮುನ್ಸೂಚನೆಯನ್ನು ನೀಡುತ್ತವೆ. ಒಂದು ವೇಳೆ ನಿಮ್ಮ ಕೂದಲು ಉದುರುತ್ತಿರುವಂತೆ ನೀವು ಕನಸು ಕಂಡರೆ, ಅದು ಕೇವಲ ಕಾಕತಾಳೀಯವಲ್ಲ. ನಿಜ ಜೀವನದಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿರುವಂತೆ, ಕನಸಿನಲ್ಲಿಯೂ ಇದು ಹಲವು ಪ್ರಮುಖ ಸುಳಿವುಗಳನ್ನು ಒಳಗೊಂಡಿರುತ್ತದೆ. ಈ ಲೇಖನದಲ್ಲಿ ಅಂತಹ ಕನಸುಗಳು ಶುಭವೋ ಅಥವಾ ಅಶುಭವೋ ಎಂಬುದನ್ನು ತಿಳಿಯೋಣ.

ಸ್ವಪ್ನ ಶಾಸ್ತ್ರ ಹೇಳುವುದೇನು?

ಸ್ವಪ್ನ ಶಾಸ್ತ್ರದ ಪ್ರಕಾರ, ಕೂದಲನ್ನು ವ್ಯಕ್ತಿಯ ಸೌಂದರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಕೂದಲು ಉದುರುತ್ತಿರುವಂತೆ ಕನಸು ಕಂಡರೆ, ಅವರು ಅಸುರಕ್ಷತೆ, ಮಾನಸಿಕ ಒತ್ತಡ ಅಥವಾ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಈ ಕನಸು ಜೀವನದಲ್ಲಿ ತಮಗೆ ಅತ್ಯಂತ ಮುಖ್ಯವಾದ ಯಾವುದನ್ನೋ ಕಳೆದುಕೊಳ್ಳುವ ಭಯವನ್ನು ಸಹ ಪ್ರತಿಬಿಂಬಿಸುತ್ತದೆ.

ಇನ್ನು ಕನಸಿನಲ್ಲಿ ಹಠಾತ್ ಮತ್ತು ತ್ವರಿತವಾಗಿ ಕೂದಲು ಉದುರುವುದನ್ನು ಕಾಣುವುದು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳು, ಆರ್ಥಿಕ ನಷ್ಟಗಳು ಅಥವಾ ಕುಟುಂಬದ ಸದಸ್ಯರ ನಡುವಿನ ಸಂಬಂಧದ ಉದ್ವಿಗ್ನತೆಯನ್ನು ಸೂಚಿಸುತ್ತದೆ. ಈ ಕನಸು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ಪ್ರಮುಖ ಬದಲಾವಣೆಗೆ ಒಳಗಾಗಲಿದ್ದಾನೆ ಮತ್ತು ಅದು ಅವರ ಮಾನಸಿಕ ನೆಮ್ಮದಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಎಚ್ಚರಿಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಒಂದು ವೇಳೆ ಕೂದಲು ಉದುರುವುದು ಕನಸಿನಲ್ಲಿ ಕ್ರಮೇಣವಾಗಿ ಸಂಭವಿಸುತ್ತಿದ್ದರೆ, ಅದು ದೀರ್ಘಕಾಲದ ಆತಂಕ ಅಥವಾ ಅತಿಯಾದ ಆಯಾಸದ ಸಂಕೇತವಾಗಿರಬಹುದು. ವ್ಯಕ್ತಿಯು ತನ್ನ ದಿನನಿತ್ಯದ ಬದುಕಿನಲ್ಲಿ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವ ಅಗತ್ಯವಿದೆ ಎಂದು ಇದು ಸೂಚಿಸುತ್ತದೆ. ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಇದು ಸಕಾಲ ಎಂಬ ಮುನ್ಸೂಚನೆ ಇದಾಗಿದೆ.

ಆರೋಗ್ಯದ ದೃಷ್ಟಿಕೋನ:

ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದರೆ, ಇಂತಹ ಕನಸುಗಳು ಹೆಚ್ಚಾಗಿ ದೈಹಿಕ ದೌರ್ಬಲ್ಯ ಅಥವಾ ಅಸಮತೋಲಿತ ದಿನಚರಿಯನ್ನು ಸೂಚಿಸುತ್ತವೆ. ನಿಮ್ಮ ಆಹಾರ ಪದ್ಧತಿ, ನಿದ್ರೆ ಮತ್ತು ದಿನನಿತ್ಯದ ಕೆಲಸಗಳಲ್ಲಿ ಶಿಸ್ತು ಇಲ್ಲದಿದ್ದಾಗ ಸುಪ್ತ ಮನಸ್ಸು ಇಂತಹ ಕನಸುಗಳ ಮೂಲಕ ಸಂದೇಶ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವುದು ಮತ್ತು ಸರಿಯಾದ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಆದರೆ, ಪ್ರತಿಯೊಂದು ಕನಸು ನಕಾರಾತ್ಮಕವಾಗಿರಲೇಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ, ಕೂದಲು ಉದುರುವಿಕೆಯ ಕನಸು ಜೀವನದಲ್ಲಿ ಹೊಸ ಬದಲಾವಣೆಗಳು ಮತ್ತು ಹೊಸ ಆರಂಭದ ಸಂಕೇತವೂ ಆಗಿರಬಹುದು. ಇದು ವ್ಯಕ್ತಿಯು ತನ್ನ ಹಳೆಯ ಆಲೋಚನೆಗಳು ಅಥವಾ ದೀರ್ಘಕಾಲದ ಸಮಸ್ಯೆಗಳನ್ನು ಬಿಟ್ಟು ಮುಂದುವರಿಯಲು ಸಿದ್ಧನಾಗಿದ್ದಾನೆ ಎಂದು ಸೂಚಿಸುತ್ತದೆ. ಅಂದರೆ, ಹಳೆಯದನ್ನು ತೊರೆದು ಹೊಸತನಕ್ಕೆ ತೆರೆದುಕೊಳ್ಳುವ ಧನಾತ್ಮಕ ಸೂಚನೆಯೂ ಇದಾಗಿರಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾಲಿ ಧನಂಜಯ್ ಪುತ್ರನಿಗಾಗಿ ತಯಾರಾಗುತ್ತಿದೆ ವಿಶ್ವಪ್ರಸಿದ್ಧ ಕಲಘಟಗಿ ತೊಟ್ಟಿಲು: ಏನಿದರ ವಿಶೇಷತೆ? – Kannada News | Daali Dhananjay orders famous Kalagatagi cradle for his son

ನಟ ಡಾಲಿ ಧನಂಜಯ್ (Daali Dhananjay) ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಅವರ ಪತ್ನಿ ವೈದ್ಯೆ ಧನ್ಯತಾ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿರುವ ನಟ ಡಾಲಿ ಧನಂಜಯ್, ಇದೀಗ ತಮ್ಮ ನವಜಾತ ಶಿಶುವಿಗಾಗಿ ತೊಟ್ಟಿಲು ಖರೀದಿಸುತ್ತಿದ್ದಾರೆ. ಅದೂ ಅಂತಿಥ ಸಾಮಾನ್ಯ ತೊಟ್ಟಿಲಲ್ಲ, ಬದಲಿಗೆ ವಿಶ್ವಪ್ರಸಿದ್ಧವಾಗಿರುವ ಕಲಘಟಗಿಯ ತೊಟ್ಟಿಲು. ಕಲಘಟಗಿ ಪಟ್ಟಣದ ತೊಟ್ಟಿಲಿಗೆ ಸುದೀರ್ಘ ಇತಿಹಾಸವಿದೆ. ಅದಕ್ಕೆ ಅದರದ್ದೇ ಆದ ಪರಂಪರೆ, ಪ್ರಾಮುಖ್ಯತೆ ಇದೆ. ಇಂಥಹಾ ಅಪರೂಪದ ತೊಟ್ಟಿಲನ್ನು ಡಾಲಿ ಖರೀದಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ, ತೊಟ್ಟಿಲು ಪಟ್ಟಣ ಅಂತಲೇ ಸುಪ್ರಸಿದ್ದವಾಗಿದೆ. ಕಳೆದ ನಾಲ್ಕು ತೆಲೆಮಾರುಗಳಿಂದ ಪಟ್ಟಣದ ಸಾವುಕಾರ ಕುಟುಂಬ ವಿಶಿಷ್ಟ ತೊಟ್ಟಿಲುಗಳನ್ನು ಮಾಡುತ್ತಾ ಬಂದಿದೆ. ಇತ್ತೀಚೆಗೆ ಮರದ ತೊಟ್ಟಿಲುಗಳ ಖರೀದಿಸುವವರ ಸಂಖ್ಯೆ ದಯನೀಯವಾಗಿ ಕುಸಿದಿದೆ, ಆದರೂ ಕಲಘಟಗಿ ತೊಟ್ಟಿಲುಗಳು ಮಾತ್ರ ಬೇಡಿಕೆ ಕಳೆದುಕೊಂಡಿಲ್ಲ. ಸಾವುಕಾರ ಕುಟುಂಬದ ಶ್ರೀಧರ್ ಸಾವುಕಾರು ಇದೀಗ ಕಲಘಟಗಿ ಪಟ್ಟಣದ ಚಿತ್ರಗಾರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ತೊಟ್ಟಿಲು ತಯಾರು ಮಾಡುವ ತಮ್ಮ ಹಿಂದಿನ ಪೀಳಿಗೆಯ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇವರೇ ಈಗ ಡಾಲಿ ಧನಂಜಯ್ ಅವರಿಗೂ ತೊಟ್ಟಿಲು ನಿರ್ಮಿಸಿಕೊಡಲಿದ್ದಾರೆ.

ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡಿದ್ದ ವರನಟ ಡಾ ರಾಜಕುಮಾರ್, ತಮ್ಮ ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದರಂತೆ. ಅಂಬರೀಶ್ ಅವರು ನಟ ಯಶ್ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ನಂತರ ಯಶ್ ಅವರು ಅಂಬರೀಶ್ ಪುತ್ರ ಅಭಿಷೇಕ ಪುತ್ರನಿಗೆ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡು, ತಮ್ಮ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?

ಚಿತ್ರರಂಗದವರು ಮಾತ್ರವಲ್ಲಾ, ರಾಮಕೃಷ್ಣ ಹೆಗಡೆ, ಎಮ್ ವೈ ಘೋರ್ಪಡೆ ಸೇರಿದಂತೆ ಅನೇಕ ರಾಜಕಾಣಿಗಳು, ಉದ್ಯಮಿಗಳು, ಅಧಿಕಾರಿಗಳು, ತಮ್ಮ ಕುಟುಂಬದಲ್ಲಿ ಮಗು ಜನನವಾದಾಗ, ಇದೇ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿ, ತೊಟ್ಟಿಲಲ್ಲಿ ಮಕ್ಕಳನ್ನು ಹಾಕಿ ಲಾಲಿ ಹಾಡಿ ಸಂಭ್ರಮಿಸಿದ್ದಾರಂತೆ. ಇದೀಗ ನಟ ಡಾಲಿ ಧನಂಜಯ್, ತಮಗೆ ಮಗುವಾಗುತ್ತಿದ್ದಂತೆ, ಪರಿಚಿತ ನಾರಾಯಣ್ ಕಲಾಲ್ ಎನ್ನುವವರ ಸಹಾಯದಿಂದ ಕಲಘಟಗಿಯಲ್ಲಿ ತೊಟ್ಟಿಲು ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕಲಘಟಗಿ ತೊಟ್ಟಿಲು ಡಾಲಿ ಧನಂಜಯ್ ಮನೆ ತಲುಪಲಿದೆ.

ರಾಜ್ಯದ ಅನೇಕ ಕಡೆ ತೊಟ್ಟಿಲು ತಯಾರು ಮಾಡುವವರು ಇದ್ದಾರೆ. ಆದರೆ ಕಲಘಟಗಿ ಸಾವುಕಾರ್ ಕುಟುಂಬ ತಯಾರಿಸೊ ತೊಟ್ಟಿಲು ವಿಶೇಷ ಮತ್ತು ವಿಭಿನ್ನವಾಗಿರುತ್ತವೆ. ಸಾಗುವಾನಿ ಕಟ್ಟಿಗೆಯನ್ನು ಬಳಸಿ ತೊಟ್ಟಿಲು ತಯಾರು ಮಾಡಲಾಗುತ್ತದೆ. ಅದಕ್ಕೆ ಯಾವುದೇ ರಾಸಾಯಿನಿಕ ಮಿಶ್ರಿತ ಬಣ್ಣವನ್ನು ಬಳಯದೆ, ಸಾವುಕಾರ್ ಕುಟುಂಬ, ತಾವೇ ದೇಶಿಯವಾಗಿ ಸಿಗೋ ಅನೇಕ ವಸ್ತುಗಳನ್ನು ಬಳಿಸಿ ಬಣ್ಣವನ್ನು ತಯಾರು ಮಾಡಿ, ಅದರ ಲೇಪನ ಮಾಡುತ್ತಾರೆ. ಹೀಗೆ ಹಚ್ಚಿದ ಬಣ್ಣ ವರ್ಷಗಳವರಗೆ ಹಾಳಾಗದೇ ಉಳಿಯುತ್ತದೆ. ಜೊತೆಗೆ ಇಡೀ ತೊಟ್ಟಿಲಿಗೆ ರಾಮಾಯಣ, ಮಹಾಭಾರತದ ಅನೇಕ ದೃಶ್ಯಗಳ ಚಿತ್ರಗಳನ್ನು ಬಿಡಿಸಲಾಗುತ್ತದೆ. ಎಷ್ಟೇ ವರ್ಷಗಳ ಕಾಲ ಇಟ್ಟರೂ ಈ ತೊಟ್ಟಿಲು ಹಾಳಾಗದೇ ಉಳಿಯುತ್ತದೆ. ಹೀಗಾಗಿ ಕಲಘಟಗಿ ತೊಟ್ಟಿಲಿಗೆ ಎಲ್ಲಿದ ಬೇಡಿಕೆ. ಕೇವಲ ಕರ್ನಾಟಕ ಮಾತ್ರವಲ್ಲಾ, ದೇಶ ಮತ್ತು ಹೊರದೇಶಗಲ್ಲಿದ್ದವರು ಕೂಡಾ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರಂತೆ. ಪ್ರಧಾನಿ ಮೋದಿ ಅವರಿಗೆ ಕೂಡಾ ಕಲಘಟಗಿ ತೊಟ್ಟಿಲನ್ನು ಸಾವುಕಾರ ಕುಟುಂಬ ಉಡುಗರೆಯಾಗಿ ನೀಡಿತ್ತು. ಒಂದು ತೊಟ್ಟಿಲು ಸಿದ್ದ ಮಾಡಲು ಸರಿಸುಮಾರು ಇಪ್ಪತ್ತು ದಿನದಿಂದ ಒಂದು ತಿಂಗಳ ಸಮಯವನ್ನು ಕುಟುಂಬ ತಗೆದುಕೊಳ್ಳುತ್ತದೆ. ತೊಟ್ಟಿಲು ಆರ್ಡರ್ ಮಾಡಿದವರಿಗೆ ಅಚ್ಚುಕಟ್ಟಾಗಿ ಸುಂದರವಾದ ತೊಟ್ಟಿಲುಗಳನ್ನು ಸಿದ್ದಮಾಡಿ ನೀಡುವ ಕೆಲಸವನ್ನು ಸಾವುಕಾರ್ ಕುಟುಂಬ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ? – Kannada News | Cubbon Park Walkers Association Opposes Mango Mela Inside Park Premises

ಮಾವು ಮೇಳಕ್ಕೆ ವಿರೋಧ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 07: ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ನಾಳೆಯಿಂದ ತೋಟಗಾರಿಕೆ ಇಲಾಖೆಯು ಹಮ್ಮಿಕೊಂಡಿರುವ ‘ಮಾವು ಮೇಳ’ಕ್ಕೆ (Mango Mela) ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ (CPWA) ತೀವ್ರ ವಿರೋಧ ವ್ಯಕ್ತಪಡಿಸಿದೆ. ಉದ್ಯಾನವನದ ಆವರಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಘವು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ.

ಮುಖ್ಯಾಂಶಗಳು

  • ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ತೋಟಗಾರಿಕೆ ಇಲಾಖೆ ಗಾಳಿಗೆ ತೂರಿತಾ?
  • ಬೃಹತ್ ಮೇಳಗಳ ಆಯೋಜನೆಯಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆ
  • ಮಾವು ಮೇಳ ಬೇರೆಡೆಗೆ ಸ್ಥಳಾಂತರಕ್ಕೆ ಒತ್ತಾಯ

ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ: ಎಸ್. ಉಮೇಶ್ ಕಿಡಿ 

ಈ ಹಿಂದೆ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಉದ್ಯಾನವನವನ್ನು ಸಂರಕ್ಷಿಸಲಾಗುವುದು ಮತ್ತು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟ ಭರವಸೆ ನೀಡಿದ್ದರು. ಆದರೆ, ಇದೀಗ ತೋಟಗಾರಿಕೆ ಇಲಾಖೆಯೇ ಮೇಳ ಆಯೋಜಿಸಲು ಮುಂದಾಗಿರುವುದು ಸರ್ಕಾರದ ಭರವಸೆಗೆ ವಿರುದ್ಧವಾಗಿದೆ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಕಿಡಿಕಾರಿದ್ದಾರೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ತೋಟಗಾರಿಕೆ ಇಲಾಖೆಯು ಉದ್ಯಾನವನದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಾವು, ಹಲಸು ಪ್ರಿಯರಿಗೆ ಈ ಬಾರಿ ಡಬ್ಬಲ್ ಧಮಾಕ! ಬೆಂಗಳೂರಿನ ಎರಡು ಕಡೆ ‘ಮಾವು ಮತ್ತು ಹಲಸಿನ ಮೇಳ’

ಕಬ್ಬನ್ ಪಾರ್ಕ್ ನಗರದ ಪ್ರಮುಖ ಮತ್ತು ಪರಿಸರ ಪರಂಪರೆಯ ತಾಣವಾಗಿದೆ. ಇದನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗ ಮಾಡುವುದು ಅದರ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿದಂತಾಗುತ್ತದೆ. ಕಬ್ಬನ್ ಪಾರ್ಕ್‌ನಲ್ಲಿ ಇಂತಹ ಬೃಹತ್ ಮೇಳಗಳನ್ನು ಆಯೋಜಿಸುವುದರಿಂದ ಜನಸಂದಣಿ ಮತ್ತು ವಾಹನ ಸಂಚಾರ ವಿಪರೀತವಾಗಿ ಹೆಚ್ಚಲಿದೆ. ಇದರಿಂದ ಉದ್ಯಾನವನದ ಸೂಕ್ಷ್ಮ ಪರಿಸರ ವ್ಯವಸ್ಥೆ ಹಾಗೂ ವನ್ಯಜೀವಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾವು ಮೇಳದಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವಿಶಾಲವಾದ ಸ್ಥಳಗಳ ಕೊರತೆಯಿಲ್ಲ. ಅರಮನೆ ಮೈದಾನದಂತಹ ಬೃಹತ್ ಸ್ಥಳಗಳು ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸೂಕ್ತವಾಗಿದೆ. ಆದರೆ ಪರಿಸರಕ್ಕೆ ಹಾನಿ ಮಾಡುವ ಉದ್ಯಾನವನವನ್ನೇ ಆರಿಸಿಕೊಂಡಿರುವುದು ಅವೈಜ್ಞಾನಿಕ ಎಂದು ಸಂಘ ದೂರಿದೆ.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ

ಕಬ್ಬನ್ ಪಾರ್ಕ್ ಪರಿಸರ ಸ್ನೇಹಿ ಉದ್ಯಾನವನವಾಗಿಯೇ ಉಳಿಯಬೇಕೇ ಹೊರತು ವಾಣಿಜ್ಯ ಕೇಂದ್ರವಾಗಬಾರದು. ತೋಟಗಾರಿಕೆ ಇಲಾಖೆ ಡಿಸಿಎಂ ಡಿಕೆ ಶಿವಕುಮಾರ್​​ ಸಾರ್ವಜನಿಕರಿಗೆ ನೀಡಿರುವ ಭರವಸೆಯನ್ನು ಗೌರವಿಸಬೇಕು. ಹೀಗಾಗಿ ಶಾಂತಿ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಎಸ್. ಉಮೇಶ್ ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version