ವಿಧಾನಸಭಾ ಚುನಾವಣೆ ವೇಳೆ 1,400 ಕೋಟಿಗೂ ಹೆಚ್ಚು ಅಕ್ರಮ ಹಣ ವಶಕ್ಕೆ; ಪಶ್ಚಿಮ ಬಂಗಾಳದಲ್ಲೇ ಅಧಿಕ ಮೊತ್ತ ಸೀಜ್ – Kannada News | Assembly Elections Election Commission seizes Over Rs 1,400 crore worth of illicit funds Highest In Bengal

ನವದೆಹಲಿ, ಮೇ 7: 2026ರ ವಿಧಾನಸಭಾ ಚುನಾವಣೆಯ (Assembly Elections) ಸಮಯದಲ್ಲಿ ಚುನಾವಣಾ ಆಯೋಗ ಒಟ್ಟು 1,400 ಕೋಟಿ ರೂ. ಹೆಚ್ಚು ಮೌಲ್ಯದ ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ಡೇಟಾ ಬಿಡುಗಡೆ ಮಾಡಿದೆ. 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ 1,400 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಈ ಅಕ್ರಮ ವಸ್ತುಗಳಲ್ಲಿ 154.89 ಕೋಟಿ ನಗದು, 183.3 ಕೋಟಿ ಮೌಲ್ಯದ 69.8 ಲಕ್ಷ ಲೀಟರ್ ಮದ್ಯ, 337.8 ಕೋಟಿ ಮೌಲ್ಯದ ಮಾದಕ ದ್ರವ್ಯ, 250 ಕೋಟಿ ಮೌಲ್ಯದ ಅಮೂಲ್ಯವಾದ ಲೋಹ ಮತ್ತು 518 ಕೋಟಿ ಮೌಲ್ಯದ ಉಚಿತ ವಸ್ತುಗಳು ಸೇರಿವೆ ಎಂದು ಚುನಾವಣಾ ಆಯೋಗ ಬಹಿರಂಗಪಡಿಸಿದೆ.

2026ರ ಸಾರ್ವತ್ರಿಕ ಚುನಾವಣೆಗಳು, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು 5 ರಾಜ್ಯಗಳಾದ್ಯಂತ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ರೂ 1,400 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ

ಪ್ರಕಟಣೆಯ ಪ್ರಕಾರ, 2021ರ ಚುನಾವಣೆಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಶೇ. 68.92ರಷ್ಟು ಅತಿ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಚುನಾವಣಾ ಅಧಿಕಾರಿಗಳು (CEOಗಳು), ಪೊಲೀಸ್ ಮಹಾನಿರ್ದೇಶಕರು (DGPಗಳು) ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳ ಹಾಗೂ ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ಹಲವು ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ – Kannada News | Chanakya Niti: What happens when you have too many expectations?

ನಿರೀಕ್ಷೆ (expectations) ಇಟ್ಟುಕೊಳ್ಳುವುದು, ಒಬ್ಬರಿಂದೊಬ್ಬರು ಏನನ್ನಾದರೂ ಅಪೇಕ್ಷಿಸುವುದು ಮನುಷ್ಯನ ಸಹಜ ಗುಣ. ಕೆಲವೊಂದು ಬಾರಿ ನಾವು  ಒಬ್ಬರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆ. ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದಾಗ ಮನಸ್ಸು ಒಡೆದು ಹೋಗುತ್ತದೆ. ಆದ್ದರಿಂದ ಯಾರಿಂದಲೂ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಕ್ರಮೇಣ ನಮ್ಮ ಮನಸ್ಸು, ಆಲೋಚನೆ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಮನಸ್ಸು, ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಅತಿಯಾದ ನಿರೀಕ್ಷೆಯಿಂದ ಏನೆಲ್ಲಾ ತೊಂದರೆಗಳು ಉದ್ಭವಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದರಿಂದ ಏನಾಗುತ್ತದೆ?

ಹತಾಶೆ ಹೆಚ್ಚಾಗಬಹುದು: ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಯಾರಿಂದಾದರೂ ಹೆಚ್ಚು ನಿರೀಕ್ಷಿಸಿದಾಗ, ಮತ್ತು ಅವರು ನಮ್ಮ ನಿರೀಕ್ಷೆಗಳನ್ನು ಪೂರೈಸದಿದ್ದರೆ, ನಾವು ತೀವ್ರ ನಿರಾಶೆಗೆ ಒಳಗಾಗುತ್ತೇವೆ. ಇದು ನಮ್ಮ ಮನಸ್ಸನ್ನು ಬೇಗನೆ ದುರ್ಬಲಗೊಳಿಸುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಇತರರ ನಡವಳಿಕೆಯನ್ನು ನಿಯಂತ್ರಿಸುವುದು ನಮ್ಮ ನಿಯಂತ್ರಣಕ್ಕೆ ಮೀರಿದ್ದು. ಇತರರಿಂದ ಅತಿಯಾದ ನಿರೀಕ್ಷೆಗಳನ್ನು ತಪ್ಪಿಸಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಯಾರಿಂದಲೂ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳಬೇಡಿ.

ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗುತ್ತದೆ: ಚಾಣಕ್ಯ ನೀತಿಯ ಪ್ರಕಾರ, ಇತರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಅಭ್ಯಾಸ  ಸಂಬಂಧಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಸಂಬಂಧದಲ್ಲಿ ನಮ್ಮ ನೆಚ್ಚಿನ ವ್ಯಕ್ತಿಯು ಯಾವಾಗಲೂ ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸಬೇಕು, ಅವರು ನಮ್ಮ ಇಚ್ಛೆಯಂತೆಯೇ ಇರಬೇಕು ಎಂದು ನಾವು ಯಾವಾಗಲೂ ಆಶಿಸುತ್ತೇವೆ, ಆದರೆ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಆಲೋಚನೆ ಮತ್ತು ಮಿತಿಗಳನ್ನು ಹೊಂದಿರುತ್ತಾನೆ. ಆದ್ದರಿಂದ, ಇತರ ವ್ಯಕ್ತಿಯು ನಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ಅದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ.  ಮತ್ತು ಇದರಿಂದ ಕೋಪ, ಮನಸ್ತಾಪ ಉಂಟಾಗಿ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ.

ಮಾನಸಿಕ ಒತ್ತಡ ಹೆಚ್ಚಾಗುತ್ತದೆ: ನೀವು ನಿರಂತರವಾಗಿ ಇತರರಿಂದ ನಿರೀಕ್ಷೆಗಳನ್ನು ಇಟ್ಟುಕೊಂಡಾಗ, ಆ ನಿರೀಕ್ಷೆಗಳನ್ನು ಅವರು ಪೂರೈಸದಿದ್ದಾಗ, ನಿಮ್ಮ ಮನಸ್ಸು ಛಿದ್ರವಾಗುತ್ತದೆ. ನಾನು ಬಯಸಿದ್ದು ಏಕೆ ಸಿಗಲಿಲ್ಲ, ಅವರು ನಾನಂದುಕೊಂಡ ರೀತಿಯಲ್ಲಿ ಏಕೆ ಇಲ್ಲ ಹೀಗೆ ಇಂತಹ ಪ್ರಶ್ನೆಗಳು ನಿರಂತರವಾಗಿ ಮನಸ್ಸಿನಲ್ಲಿ ಸುಳಿದಾಡುತ್ತದೆ. ಈ ಆಲೋಚನೆಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ  ಮತ್ತು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಯಾರಿಂದಲೂ ಏನನ್ನೂ ಅತಿಯಾಗಿ ನಿರೀಕ್ಷಿಸಬೇಡಿ.

ಇದನ್ನೂ ಓದಿ: ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಆತ್ಮವಿಶ್ವಾಸ ಕಡಿಮೆಯಾಗುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಇತರರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಾಗ, ನಾವು ನಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ನಮ್ಮೆಲ್ಲಾ ವಿಶ್ವಾಸವನ್ನು ನಾವು ಅತಿಯಾಗಿ ನಿರೀಕ್ಷಿಸುವ ವ್ಯಕ್ತಿಯ ಮೇಲೆ ಇಟ್ಟುಬಿಡುತ್ತೇವೆ. ಈ ಮನಸ್ಥಿತಿಯು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಆತ್ಮವಿಶ್ವಾಸದ ಕೊರತೆಯಿಂದ ಖಂಡಿತವಾಗಿಯೂ ವ್ಯಕ್ತಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇತರರ ಮೇಲೆ ಅತಿಯಾಗಿ ನಿರೀಕ್ಷೆ ಇಟ್ಟುಕೊಳ್ಳುವ ಬದಲು ನಿಮ್ಮನ್ನು ನೀವು ನಂಬಿ, ವಿಶ್ವಾಸವನ್ನು ಇಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟ್ರಾಂಗ್‌ ರೂಮ್‌ ಬೀಗ ಕಳೆದಿರೋದು ನಾವು ಎಂದೂ ಕೇಳಿಲ್ಲ: ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಮಾಜಿ ಎಂಪಿ ಹೇಳಿದ್ದಿಷ್ಟು – Kannada News | Ex MP GM Siddeshwar Reacts on BJP defeated In Davanagere South By Election

ದಾವಣಗೆರೆ, (ಮೇ 07): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere South By Election) ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ಆದ್ರೆ, ಮತ ಎಣಿಕೆ ಆರಂಭದಲ್ಲಿ ಸ್ಟ್ರಾಂಗ್ ರೂಮ್ ಬೀಗಗಳು ಕಾಣೆಯಾಗಿದ್ದವು. ಇದರಿಂದ ಗೊಂದಲ ಉಂಟಾಗಿ, ಅಧಿಕಾರಿಗಳು ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಬೀಗಗಳನ್ನು ಮುರಿದು ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಮಾಡಿದ್ದು, ಇದೀಗ ಬಿಜೆಪಿಗರ ಅನುಮಾನಕ್ಕೆ ಕಾರಣವಾಗಿದೆ. ಇನ್ನು ತಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸೋಲಿನ ಬಗ್ಗೆ ಮಾಜಿ ಸಂಸದ ಜಿಎಮ್ ಸಿದ್ದೇಶ್ವರ್ ಪ್ರತಿಕ್ರಿಯಿಸಿದ್ದು, ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ ಅಂತೆಲ್ಲಾ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mother’s Day 2026: ಈ ಬಾರಿಯ ತಾಯಂದಿರ ದಿನವನ್ನು ಹೀಗೆ ವಿಶೇಷವಾಗಿ ಆಚರಿಸಿ – Kannada News | Mother’s Day 2026: What can you do for Mom on Mother’s Day? Here are some ideas

ತಾಯಿಗೆ (Mother) ಆಕೆಯ ಪ್ರೀತಿಗೆ ವಿಶೇಷವಾದ ಸ್ಥಾನವಿದೆ. ಮಕ್ಕಳು, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿಯ ತ್ಯಾಗ, ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷ, ಏಳಿಗೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧಳಿರುವ ತ್ಯಾಗಮಯಿ ತಾಯಿಗೆ ಗೌರವಿಸಲು ಆಕೆಯನ್ನು ಸಂಭ್ರಮಿಸಲು ಪ್ರತಿವರ್ಷ ಮೇ ಎರಡನೇ ಭಾನುವಾರದಂದು ವಿಶ್ವಾದ್ಯಂತ ಮದರ್ಸ್‌ ಡೇ ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಾಯಂದಿರನ್ನು ಸಂಭ್ರಮಿಸುತ್ತಾರೆ. ಗಿಫ್ಟ್‌, ಸರ್‌ಪ್ರೈಸ್‌ ನೀಡುವ ಮೂಲಕ ಅಮ್ಮನಿಗೊಂದು ಥ್ಯಾಂಕ್ಸ್‌ ಹೇಳುತ್ತಾರೆ. ಈ ಬಾರಿ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಖುಷಿಪಡಿಸಲು, ಆಕೆಯನ್ನು ಸಂಭ್ರಮಿಸಲು ಏನು ಮಾಡಬಹುದು, ತಾಯಂದಿರ ದಿನವನ್ನು ವಿಶೇಷವಾಗಿ ಯಾವ ರೀತಿ ಆಚರಿಸಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಾಯಂದಿರ ದಿನದಂದು ಅಮ್ಮನಿಗಾಗಿ ನೀವು ಏನು ಮಾಡಬಹುದು?

ಅಮ್ಮನಿಗೆ ವಿಶ್ರಾಂತಿ ನೀಡಿ: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅಮ್ಮನಿಗೆ ಒಂದಲ್ಲಾ ಒಂದು ಕೆಲಸ ಇದ್ದೇ ಇರುತ್ತದೆ. ಆಕೆಗೆ ವಿಶ್ರಾಂತಿ ಅನ್ನೋದೇ ಇರೋಲ್ಲ. ಹೀಗಿರುವಾಗ ಮದರ್ಸ್‌ ಡೇ ದಿನ ಅಮ್ಮನಿಗೆ ಎಲ್ಲಾ ಕೆಲಸದಿಂದ ಬ್ರೇಕ್‌ ಕೊಟ್ಟು, ಸಂಪೂರ್ಣ ಮನೆಯ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವ ಮೂಲಕ ಆಕೆಗೆ ರೆಸ್ಟ್‌ ನೀಡಬಹುದು, ಆಕೆಯನ್ನು ಸಂತೋಷಪಡಿಸಬಹುದು.

ಸರ್‌ಪ್ರೈಸ್‌ ನೀಡಿ: ಪ್ರತಿಯೊಬ್ಬ ಮಹಿಳೆಯೂ ಸರ್‌ಪ್ರೈಸ್‌ಗಳೆಂದರೆ ತುಂಬಾನೇ ಇಷ್ಟ. ಆದ್ದರಿಂದ ನಿಮ್ಮ ಅಮ್ಮನನ್ನು ಸಂತೋಷಪಡಿಸಲು ಆಕೆಗೆ ಸರ್‌ಪ್ರೈಸ್‌ ಉಡುಗೊರೆಗಳನ್ನು ನೀಡಬಹುದು. ಆಕೆಗಾಗಿ ಸರ್‌ಪ್ರೈಸ್‌ ಟ್ರಿಪ್‌, ಡಿನ್ನರ್‌ ಪಾರ್ಟಿ ಅರೇಂಜ್‌ ಮಾಡಬಹುದು.

ನಿಮ್ಮ ಒಂದು ದಿನವನ್ನು ತಾಯಿಯಾಗಿ ಅರ್ಪಿಸಿ: ಇಂದಿನ ಯುವ ಜನತೆ ಮೊಬೈಲ್‌, ಇಂಟರ್‌ನೆಟ್‌ನಲ್ಲಿ ಸಮಯ ಕಳೆಯುವಷ್ಟು, ತಮ್ಮ ತಾಯಿಯೊಂದಿಗೆ ಸಮಯ ಕಳೆಯುವುದಿಲ್ಲ. ಅಮ್ಮನೊಂದಿಗೆ ಸರಿಯಾಗಿ ಮಾತನಾಡುವುದು ಕೂಡ ಇಲ್ಲ. ಆದ್ದರಿಂದ ಅಮ್ಮಂದಿರ ದಿನದಂದು ತಾಯಿಯನ್ನು ಸಂತೋಷಪಡಿಸಲು ನಿಮ್ಮ ಪೂರ್ಣ ಸಮಯವನ್ನು ತಾಯಿಗಾಗಿ ಮೀಸಲಿಡಲು ಪ್ರಯತ್ನಿಸಿ. ಅವರ ಕೆಲಸಗಳಲ್ಲಿ ಸಹಾಯ ಮಾಡಿ, ಅವರನ್ನು ಎಲ್ಲಾದ್ರೂ ಹೊರಗಡೆ ಕರೆದುಕೊಂಡು ಹೋಗಿ ಅವರಿಷ್ಟದ ತಿಂಡಿ ತಿನಿಸನ್ನು, ನೆಚ್ಚಿನ ಸೀರೆಯನ್ನು ತೆಗೆದಯಕೊಡಿ. ಅವರನ್ನು ರಾಣಿಯಂತೆ ಭಾವಿಸುವಂತೆ ಮಾಡಿ.

ಇದನ್ನೂ ಓದಿ: ಮದುವೆಯ ಬಳಿಕ ನವದಂಪತಿಗಳು ಹನಿಮೂನ್‌ಗೆ ಹೋಗೋ ಹಿಂದಿನ ಕಾರಣ ತಿಳಿಯಿರಿ

ವಿಶೇಷ ಖಾದ್ಯ ತಯಾರಿಸಿ: ಅಮ್ಮಂದಿರ ದಿನದಂದು ನಿಮ್ಮ ತಾಯಿಗಾಗಿ ಅವರಿಷ್ಟದ ಖಾದ್ಯ, ಸ್ಟೀಟ್‌ಗಳನ್ನು ನಿಮ್ಮ ಕೈಯಾರೆ ತಯಾರಿಸಿ, ಉಣಬಡಿಸಿ. ಇದು ಖಂಡಿತವಾಗಿಯೂ ನಿಮ್ಮ ತಾಯಿಗೆ ಖುಷಿ ಕೊಡುತ್ತದೆ.

ಇದಲ್ಲದೆ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಸಂಭ್ರಮಿಸಲು, ಅವರನ್ನು ಖುಷಿಪಡಿಸಲು ಅವರನ್ನು ಲಂಚ್‌, ಡಿನ್ನರ್‌ ಡೇಟ್‌ಗೆ ಕರೆದುಕೊಂಡು ಹೋಗಬಹುದು. ಮನೆಯ ಕೆಲಸದಿಂದ ಬ್ರೇಕ್‌ ಕೊಟ್ಟು ಅವರನ್ನು ಒಂದು ದಿನ ಹೊರಗಡೆ ಸುತ್ತಾಡಿಸಿಕೊಂಡು ಬರಬಹುದು, ಅವರಿಗಾಗಿ ಟ್ರಿಪ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಏನಾದರೂ ಸ್ಪೆಷಲ್‌ ಗಿಫ್ಟ್‌ಗಳನ್ನು ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ವಿಮಾನದಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ಯುಜ್ವೇಂದ್ರ ಚಾಹಲ್; ವಿಡಿಯೋ ವೈರಲ್ – Kannada News | IPL E Cigarette Scandal: Yuzvendra Chahal Vaping on Flight After Parag’s Fine; Legal Action Looms

ಕೆಲವೇ ದಿನಗಳ ಹಿಂದಷ್ಟೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಐಪಿಎಲ್ ಪಂದ್ಯದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್ ಒಳಗೆ ಇ-ಸಿಗರೇಟ್ ಸೇದಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯೂ ಚಂಡೀಗಢದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಪರಾಗ್ ನಿಷೇಧಿತ ಇ- ಸಿಗರೇಟ್ ಸೇದಿ ಸಿಕ್ಕಿಬಿದ್ದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಕ್ರಮಕ್ಕೆ ಮುಂದಾಗಿದ್ದ ಬಿಸಿಸಿಐ, ರಿಯಾನ್ ಪರಾಗ್​ಗೆ ಪಂದ್ಯ ಶುಲ್ಕ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಇದೇ ರೀತಿಯ ಕೃತ್ಯ ಎಸಗಿದ್ದು, ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ವಿಮಾನದಲ್ಲಿ ಇ-ಸಿಗರೇಟ್ ಸೇದಿದ ಚಾಹಲ್

ಯುಜ್ವೇಂದ್ರ ಚಾಹಲ್ ವಿಮಾನದಲ್ಲಿ ಇ-ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ಪ್ರವಾಸದ ಸಮಯದಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ತಂಡವು ಸ್ವತಃ ಈ ವಿಡಿಯೋವನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಚಾಹಲ್ ಇ-ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ತಂಡಕ್ಕೆ ಘಟನೆಯ ಅರಿವಾದ ತಕ್ಷಣ, ವೀಡಿಯೊವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಲಾಗಿದೆ. ಆದರೆ ಆ ಹೊತ್ತಿಗೆ, ಅನೇಕ ನೆಟ್ಟಿಗರು ಆ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡಿದ್ದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಮಾನಗಳಲ್ಲಿ ಧೂಮಪಾನ ಮಾಡುವುದು ಅಥವಾ ಇ-ಸಿಗರೇಟ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮಗಳ ಪ್ರಕಾರ, ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ಕೊಂಡೊಯ್ಯುವುದು ಅಥವಾ ಬಳಸುವುದು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದು ಬೆಂಕಿಯ ಅಪಾಯವನ್ನುಂಟುಮಾಡುತ್ತದೆ, ಇದು ಇಡೀ ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ ಯಾರಾದರೂ ಈ ಬಗ್ಗೆ ದೂರು ದಾಖಲಿಸಿದರೆ, ಚಾಹಲ್ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಚಾಹಲ್​ಗೆ ವಿಮಾನದಲ್ಲಿ ಪ್ರಯಾಣವನ್ನು ನಿಷೇಧಿಸುವ ಸಾಧ್ಯತೆಗಳು ಇವೆ.

ಈ ಹಿಂದೆಯೂ ವಿವಾದಕ್ಕೀಡಾಗಿದ್ದ ಚಾಹಲ್​

ಐಪಿಎಲ್ ಆರಂಭಕ್ಕೂ ಮುನ್ನ ಚಾಹಲ್ ಇಂತಹದ್ದೇ ವಿವಾದಕ್ಕೆ ಗುರಿಯಾಗಿದ್ದರು. ವೈರಲ್ ಆದ ವೀಡಿಯೊವೊಂದರಲ್ಲಿ, ಚಾಹಲ್ ತನ್ನ BMW ಕಾರನ್ನು ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅರ್ಧ ಸೇದಿದ್ದ ಸಿಗರೇಟನ್ನು ಕಾರಿನಿಂದ ಹೊರಗೆ ಎಸೆದಿದ್ದರು. ಈ ವೀಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನೇಕ ನೆಟ್ಟಿಗರು, ಬೆಂಕಿ ಇರುವ ಸಿಗರೇಟ್ ಇತರರಿಗೆ ಸಮಸ್ಯೆಯನ್ನುಂಟು ಮಾಡಬಹುದು ಎಂಬ ಸಾಮಾನ್ಯ ಅರಿವು ಚಾಹಲ್​ಗೆ ಇಲ್ಲವಾ ಎಂದು ಪ್ರಶ್ನಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟಿ ರೂ ಸಂಪಾದನೆ, ಡಿಸೈನ್ ಬಟ್ಟೆ ತೊಡುತ್ತಿದ್ದ ಭಾರತೀಯ ಮಹಿಳೆ, ಮೆಲ್ಬೋರ್ನ್​ನಲ್ಲಿ ಮನೆಗೆಲಸಕ್ಕೆ ಸೇರಿಕೊಂಡಾಗ… – Kannada News | Indian origin Shweta Desai goes from earning Rs 1 crore to cleaning apartments

ಈಕೆಯ ಹೆಸರು ಶ್ವೇತಾ ದೇಸಾಯಿ. ಮುಂಬೈನಲ್ಲಿ ಹುಟ್ಟಿ ಬೆಳೆದವಳು. ವಯಸ್ಸು ಈಗ 37 ವರ್ಷ. ಉನ್ನತ ವ್ಯಾಸಂಗಕ್ಕೆಂದು 2008ರಲ್ಲಿ ಲಂಡನ್​ಗೆ ಹೋದವಳು ಅಲ್ಲಿಯೇ ಬದುಕು ಮತ್ತು ವೃತ್ತಿ ಕಟ್ಟಿಕೊಂಡವಳು. 15 ವರ್ಷ ಲಂಡನ್​ನಲ್ಲಿ ಇದ್ದ ಬಳಿಕ ಆಕೆಯ ಜೀವನಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿತು. ಲಂಡನ್ ತೊರೆಯುವಾಗ ಈಕೆ ಅಲ್ಲಿ ಪಡೆಯುತ್ತಿದ್ದ ಸಂಬಳ ವರ್ಷಕ್ಕೆ ಸುಮಾರು ಒಂದು ಕೋಟಿ ರೂ. ಹಾಗಿದ್ದ ಈಕೆ ಈಗ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಅಪಾರ್ಟ್ಮೆಂಟ್ ಸ್ವಚ್ಛಗೊಳಿಸುವ ಕಾಯಕ ಮಾಡುತ್ತಿದ್ದಾಳೆ. ಹೇಗಿದ್ದವಳು, ಹೀಗೇಕಾದಳು?

ಶ್ವೇತಾ ದೇಸಾಯಿ ಅವರು ವಿವಾಹಿತೆ ಹಾಗೂ ಇಬ್ಬರು ಮಕ್ಕಳ ತಾಯಿ. ಲಂಡನ್​ನಲ್ಲಿ ಇಷ್ಟ ಬಂದಂತೆ ಜೀವಿಸಿದ ಅದೃಷ್ಟವಂತೆ. ಈಕೆಯ ಪತಿಗೆ ಮೆಲ್ಬೋರ್ನ್​ನಲ್ಲಿ ಕೆಲಸ ಸಿಕ್ಕಿ ಅಲ್ಲಿ ನೆಲಸಬೇಕಾದ ಕಾರಣ, ಈಕೆಯೂ ಲಂಡನ್​ನಲ್ಲಿ ತನ್ನ ಕೆಲಸ ಬಿಟ್ಟು ಗಂಡ ಹಾಗು ಇಬ್ಬರು ಮಕ್ಕಳೊಂದಿಗೆ 2023ರಲ್ಲಿ ಮೆಲ್ಬೋರ್ನ್​ಗೆ ಹೋಗುತ್ತಾಳೆ. ಇಲ್ಲಿ ಈಕೆಗೆ ಶುರುವಾಗುವುದು ಐಡೆಂಟಿಟಿ ಕ್ರೈಸಿಸ್.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಲಂಡನ್​ನಲ್ಲಿ ಕೈತುಂಬ ಸಂಬಳ ಕೊಡುವ ಕೆಲಸ ಇತ್ತು. ಮೆಲ್ಬೋರ್ನ್​ನಲ್ಲಿ ಎಷ್ಟು ಹುಡುಕಿದರೂ ಈಕೆಗೆ ಬೇಕಾದ ಕೆಲಸ ಸಿಗುವುದಿಲ್ಲ. ಕೊನೆಗೆ ಏರ್​ಬಿಎನ್​ಬಿಯಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆಯ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು.

ಶ್ವೇತಾ ದೇಸಾಯಿ ಇನ್ಸ್​ಟಾ ವಿಡಿಯೋ

ಏರ್​ಬಿಎನ್​ಬಿ ಅಪಾರ್ಟ್ಮೆಂಟ್​ಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆಗಳನ್ನು ವಾಶ್ ಮಾಡಿಸಿ ಇಸ್ತ್ರಿ ಮಾಡಿಸಿಡುವುದು, ಅತಿಥಿಗಳ ಪ್ರಶ್ನೆಗಳಿಗೆ ಸಮಾಧಾನ ಹೇಳುವುದು ಇತ್ಯಾದಿ ಕೆಲಸ ಮಾಡುತ್ತಿದ್ಧಾಳೆ ಶ್ವೇತಾ ದೇಸಾಯಿ.

ಲಂಡನ್​ನಲ್ಲಿ ಡಿಸೈನರ್ ಬಟ್ಟೆ, ಬ್ಯಾಗು, ಫ್ಯಾನ್ಸಿ ಮೇಕಪ್ ಹೊಂದಿದ್ದ ಶ್ವೇತಾ ದೇಸಾಯಿ, ಹಣಕಾಸು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾಳೆ. ಆದರೆ, ಮೆಲ್ಬೊರ್ನ್​ನಲ್ಲಿ ಈಕೆ ಬಲವಂತವಾಗಿ ತನ್ನ ಲೈಫ್​ಸ್ಟೈಲ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ ಇಲ್ಲದೇ ಇದ್ದಾಗ ಏನೆಲ್ಲಾ ಆಗುತ್ತೆ ಎಂಬುದು ಈಕೆಗೆ ಅನುಭವಕ್ಕೆ ಬಂದಿತು. ಈಗ ಸಿಕ್ಕ ಕೆಲಸದಲ್ಲೇ ತೃಪ್ತಿ ಗಳಿಸುತ್ತಿದ್ದಾಳೆ.

ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

ಶ್ವೇತಾಗೆ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಲು ಈ ಕೆಲಸ ಸಹಾಯವಾಗಿದೆ. ಅಪಾರ್ಟ್ಮೆಂಟ್​ಗಳ ನಿರ್ವಹಣೆ ಜೊತೆಗೆ ಈಕೆ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುತ್ತಾಳೆ, ತನ್ನದೇ ಬ್ಯುಸಿನೆಸ್ ಮತ್ತು ಕೋಚಿಂಗ್ ಪ್ರಾಕ್ಟೀಸ್ ನಡೆಸುತ್ತಾಳೆ. ಈಕೆ ರೀಬ್ಯುಲ್ಡ್ ರೂಮ್ ಹೆಸರಿನಲ್ಲಿ ಒಂದು ವಾಟ್ಸಾಪ್ ಕಮ್ಯೂನಿಟಿ ಆರಂಭಿಸಿದ್ದು, ಅದರಲ್ಲಿ ತನ್ನಂತೆ ಜೀವನ ಬದಲಾವಣೆಗೆ ಒಗ್ಗಿಕೊಳ್ಳಬೇಕಿರುವ ಮಹಿಳೆಯರಿಗೆ ಮಾರ್ಗದರ್ಶನ ಕೊಡುತ್ತಾಳೆ. ಹಾಗಂತ, ಶ್ವೇತಾ ದೇಸಾಯಿ ತಮ್ಮ ಇನ್ಸ್​ಟಾಗ್ರಾಮ್ ರೀಲ್ಸ್​ನಲ್ಲಿ ಹೇಳಿಕೊಂಡಿದ್ದಾಳೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುವೇಂದು ಅಧಿಕಾರಿ ಪಿಎ ಚಂದ್ರನಾಥ್ ಹತ್ಯೆ ಪ್ರಕರಣ; ಎಸ್​ಐಟಿ ತನಿಖೆಗೆ ಆದೇಶ – Kannada News | Suvendu Adhikari PA Chandranath Rath murder case SIT formed

ಕೊಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ (Suvendu Adhikari) ಆಪ್ತ ಸಹಾಯಕ ಚಂದ್ರನಾಥ್ ರಥ (Chandranath Rath) ಅವರ ಕೊಲೆ ಪ್ರಕರಣ ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಎಸ್​ಐಟಿಯನ್ನು ರಚಿಸಲಾಗಿದೆ. ಚಂದ್ರನಾಥ ರಥ್ ಹತ್ಯೆಯ ತನಿಖೆಗಾಗಿ ಮೀಸಲಾದ ಎಸ್‌ಐಟಿಯನ್ನು ರಚಿಸಲಾಗಿದೆ. ಈ ತಂಡಕ್ಕೆ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಮಟ್ಟದ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರನಾಥ ರಥ್ ಅವರನ್ನು ಬುಧವಾರ ತಡರಾತ್ರಿ ಉತ್ತರ 24 ಪರಗಣದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಕೆಲವೇ ದಿನಗಳ ಮೊದಲು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರಗೊಂಡಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಹಂತಕರಿಗಾಗಿ ಪೊಲೀಸರು ದೊಡ್ಡ ಪ್ರಮಾಣದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಇದನ್ನೂ ಓದಿ: ಇದೊಂದು ಪೂರ್ವ ಯೋಜಿತ ಕೊಲೆ, ಆಪ್ತ ಚಂದ್ರನಾಥ್ ರಥ್ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಮಾತು

ಈಗಾಗಲೇ ಚಂದ್ರನಾಥ್ ರಥ ಅವರ ಮೃತದೇಹದ ಶವಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಅವರಿಗೆ ಮೂರು ಗುಂಡೇಟಿನ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. 7.6 ಬೋರ್ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ನಿಂದ ಅವರನ್ನು ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಎಸ್​ಐಟಿ ರಚಿಸಲಾಗಿದ್ದು, ವಿವಿಧ ಜಿಲ್ಲೆಗಳು ಮತ್ತು ವಿಶೇಷ ಘಟಕಗಳ ಪೊಲೀಸ್ ಸಿಬ್ಬಂದಿ ಈ ಎಸ್‌ಐಟಿಯ ಭಾಗವಾಗಿರುತ್ತಾರೆ. ಈ ತಂಡವು ಪ್ರಕರಣದ ಪ್ರತಿಯೊಂದು ಹಂತವನ್ನು ಪರಿಶೀಲಿಸುತ್ತದೆ. ಹಲವಾರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಪ್ರಮುಖ ಶೂಟರ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು?

ಪ್ರಾಥಮಿಕ ವಿವರಗಳ ಪ್ರಕಾರ, ನಿನ್ನೆ ರಾತ್ರಿ 10.30ರ ಸುಮಾರಿಗೆ ಉತ್ತರ 24 ಪರಗಣದ ಮಧ್ಯಮಗ್ರಾಮ್ ಪ್ರದೇಶದಲ್ಲಿ ಕೊಲೆ ನಡೆದಿದೆ. ಚಂದ್ರನಾಥ್ ರಥ ಕೊಲ್ಕತ್ತಾದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಸ್ಕಾರ್ಪಿಯೋ ಡೊಹ್ರಿಯಾ ಪ್ರದೇಶವನ್ನು ತಲುಪಿದಾಗ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಸ್ಕಾರ್ಪಿಯೋದ ಎಡಭಾಗದಿಂದ ಗುಂಡಿನ ದಾಳಿ ನಡೆಸಿ, ಚಂದ್ರನಾಥ್​​ನನ್ನು ಕೊಂದಿದ್ದಾರೆ.

ಗುಂಡಿನ ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಂದ್ರನಾಥ್ ಅವರ ಎದೆ, ಹೊಟ್ಟೆ ಮತ್ತು ಮುಖಕ್ಕೆ ಗುಂಡು ತಗುಲಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಬರುವಾಗಲೇ ಅವರು ಮೃತಪಟ್ಟಿದ್ದರು. ಅವರ ಚಾಲಕನಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಗಾವಾಲೆ ಕೊಲೆ ಬೆನ್ನಲ್ಲೇ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್: ಬುಡ ಸಮೇತ ಕಿತ್ತೊಗೆಯಲು ಎಸ್ಪಿ ಪ್ಲಾನ್ – Kannada News | Karwar SP Plans Major Crackdown as Meter Interest Racket Turns Active Again

ಮುಂಡಗೋಡ ಪೊಲೀಸ್​ ಠಾಣೆImage Credit source: tv9 kannada

ಕಾರವಾರ, ಮೇ 07: ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ​​ ಕೊಲೆ ಪ್ರಕರಣದ (zameer ahmed murder case) ಬೆನ್ನಲ್ಲೆ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್​​ ಆಗಿದೆ. ಈ ಬಗ್ಗೆ ಟಿವಿ9 ಬಿತ್ತರಿಸಿದ ವರದಿಯನ್ನು ಗಂಭಿರವಾಗಿ ಪರಿಗಣಿಸಿರುವ ಎಸ್​​ಪಿ ದೀಪನ್, ಮುಂಡಗೋಡ ಮತ್ತು ಹಳಿಯಾಳದಲ್ಲಿ ಮೀಟರ್ ಬಡ್ಡಿ ದಂಧೆಯನ್ನ (Meter interest racket)
ಬುಡ ಸಮೇತ ಕಿತ್ತುಹಾಕಲು ಪ್ಲಾನ್​ ಮಾಡಿದ್ದಾರೆ. ಇನ್ನೊಂದು ಕಡೆ ಕೆಲ ಪೊಲೀಸರಿಗೆ ಈ ತನಿಖೆ ನಡುಕ ಹುಟ್ಟಿಸಿದೆ.

ಮುಖ್ಯಾಂಶಗಳು

  • ಮುಂಡಗೋಡ ಮೀಟರ್ ಬಡ್ಡಿ ದಂಧೆಯ ಬಗ್ಗೆ ಎಷ್ಟ ಹೇಳಿದರು ಸಾಲದು.
  • ಹೆಣ ಉರುಳಿದರು ಇಲ್ಲಿನ ಮೀಟರ್ ಬಡ್ಡಿ ದಂಧೆಕೋರರಿಗೆ ಬಾರದ ಬುದ್ಧಿ.
  • ಮೀಟರ್ ಬಡ್ಡಿ ದಂಧೆ ಮಟ್ಟಹಾಕಲು ಪೊಲೀಸರ ಮಾಸ್ಟರ್​ ಪ್ಲಾನ್.​

ಜಮೀರ್​ ಕೊಲೆ ಪ್ರಕರಣದಲ್ಲಿ 7 ಜನರ ಬಂಧನ

ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಬೆನ್ನಲ್ಲೆ. ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್ ಆಗಿದೆ. ಸದ್ಯ ಪ್ರಾಥಮಿಕ ಮೂಲಗಳ ಪ್ರಕಾರ ಜಮೀರ್ ಕೊಲೆ ಮೀಟರ್ ಬಡ್ಡಿ ದಂಧೆಗಾಗಿ ನಡೆದಿದೆ ಎನ್ನಲಾಗಿದೆ. ಇನ್ನು ಕೊಲೆ ಪ್ರಕರಣದಲ್ಲಿ ಇದುವರೆಗೂ 7 ಜನರನ್ನ ಬಂಧಿಸಿರುವ ಪೊಲೀಸರು, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೆತೃತ್ವದ ತಂಡದಿಂದ ತನಿಖೆ ಮುಂದುವರೆದಿದೆ. ಕೊಲೆ ಪ್ರಕರಣದ ಜೊತೆ ಜೊತೆಗೆ ಮೀಟರ್ ಬಡ್ಡಿ ದಂಧೆ ಬುಡ ಸಮೇತ ಕಿತ್ತುಹಾಕಲು ಮಾಹಿತಿ ಕಲೆ ಹಾಕುತ್ತಿದ್ದಾರೆ.

ದಂಧೆಕೋರರ ಗಡಿಪಾರಿಗೆ ಸಿದ್ಧತೆ: ಪೊಲೀಸರಿಗೆ ನಡುಕ

ಈಗಾಗಲೇ ಮುಂಡಗೋಡ, ಹಳಿಯಾಳ ಮತ್ತು ದಾಂಡೇಲಿ ಭಾಗದಲ್ಲಿ ಸಕ್ರಿಯವಾಗಿರುವ ಮೀಟರ್ ಬಡ್ಡಿ ದಂಧೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು, ಈ ವಾರದಲ್ಲಿ ಅಧಿಕೃತ ಆದೇಶ ಮಾಡಿ ಕೆಲವರನ್ನ ಗಡಿಪಾರಿಗೆ ಮುಂದಾಗಿದ್ದಾರೆ. ಇನ್ನು ಇದರ ಜೊತೆಗೆ ಮೀಟರ್ ಬಡ್ಡಿ ದಂಧೆಗೆ ಕೆಲ ಸ್ಥಳೀಯ ಪೊಲೀಸರ ಬೆಂಬಲ ಇತ್ತು ಎನ್ನಲಾಗುತ್ತಿದೆ. ಹೀಗಾಗಿ ಜಮೀರ್ ಮೊಬೈಲ್ ಫೋನ್ ತನಿಖೆ ಮಾಡಲು ಎಸ್ಪಿ ದೀಪನ್ ಮುಂದಾಗಿದ್ದಾರೆ. ಸದ್ಯ ದೀಪನ್ ನಡೆಯಿಂದ ಜಮೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಪೊಲೀಸರಿಗೆ ನಡುಕ ಹುಟ್ಟಿದೆ. ವಾಟ್ಸಪ್ ಹಾಗೂ ನಾರ್ಮಲ್ ಕಾಲ್ ಮೂಲಕ ಕೆಲ ಪೊಲೀಸರು ಜಮೀರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್ ದರ್ಗಾವಾಲೆ ಕೊಲೆ ಕೇಸ್: ಪ್ರಮುಖ ಆರೋಪಿ ಸೇರಿ ಐವರು ಅರೆಸ್ಟ್​; ಹತ್ಯೆಗೆ ಅದೇ ಕಾರಣ

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಮೀರ್ ಕೊಲೆ ಬಳಿಕವಾದರೂ ಮೀಟರ್ ಬಡ್ಡಿ ದಂಧೆ ಮಟ್ಟಹಾಕಲು ಪೊಲೀಸರು ಕೈಗೊಂಡಿರುವ ಕಾರ್ಯ ಕೆಲವರಿಗೆ ಖುಷಿ ತಂದಿದ್ದರೆ, ಕೆಲವರಿಗೆ ನಡುಕ ಹುಟ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Jason Sanjay: ನಟ ವಿಜಯ್ ಪುತ್ರ ಈಗೇನು ಮಾಡುತ್ತಿದ್ದಾರೆ ಗೊತ್ತಾ? ಜೇಸನ್ ಸಂಜಯ್ ಶಿಕ್ಷಣ ಮತ್ತು ಕೆರಿಯರ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್! – Kannada News | Jason Sanjay’s Directorial Debut: Vijay’s Son Chooses Camera, Dad Enters Politics

ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್Image Credit source: Pinterest

ತಮಿಳು ಚಿತ್ರರಂಗದ ‘ದಳಪತಿ‘ ಎಂದೇ ಖ್ಯಾತರಾದ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಈಗ ಸುದ್ದಿಯಲ್ಲಿದ್ದಾರೆ. ಸ್ಟಾರ್ ನಟನ ಮಗ ಅಂದಮೇಲೆ ತಂದೆಯಂತೆ ನಾಯಕ ನಟನಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಜೇಸನ್ ಆರಿಸಿಕೊಂಡ ಹಾದಿಯೇ ಬೇರೆ. ಸಿನಿಮಾ ನಿರ್ದೇಶನದ ಕನಸು ಹೊತ್ತಿರುವ ಜೇಸನ್ ಸಂಜಯ್ ಅವರ ಶಿಕ್ಷಣ ಮತ್ತು ವೃತ್ತಿ  ಜೀವನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ತಂದೆ ರಾಜಕೀಯಕ್ಕೆ, ಮಗ ನಿರ್ದೇಶನಕ್ಕೆ:

ನಟ ವಿಜಯ್ ಇತ್ತೀಚೆಗೆ ತಮ್ಮದೇ ಆದ ‘ತಮಿಳಗ ವೆಟ್ರಿ ಕಳಗಂ’ (TVK) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಲು ವಿಜಯ್ ಸಿನಿಮಾದಿಂದ ದೂರ ಸರಿಯುತ್ತಿರುವ ಬೆನ್ನಲ್ಲೇ, ಅವರ ಪುತ್ರ ಜೇಸನ್ ಸಿನಿಮಾ ರಂಗಕ್ಕೆ ತಾಂತ್ರಿಕವಾಗಿ ಎಂಟ್ರಿ ನೀಡುತ್ತಿರುವುದು ವಿಶೇಷ.

ಜೇಸನ್ ಸಂಜಯ್ ಅವರ ಶಿಕ್ಷಣ (Education):

ಜೇಸನ್ ಸಂಜಯ್ ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ಅದಕ್ಕೆ ಬೇಕಾದ ಅಡಿಪಾಯವನ್ನು ಗಟ್ಟಿಯಾಗಿ ಹಾಕಿಕೊಂಡಿದ್ದಾರೆ. ಇವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ‘ಅಮೇರಿಕನ್ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ ಪೂರೈಸಿದರು. ಬಳಿಕ ಚಲನಚಿತ್ರ ನಿರ್ಮಾಣದ (Film Production) ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮುಗಿಸಿದ್ದಾರೆ. ಇದಾದ ಬಳಿಕ ಲಂಡನ್‌ನಲ್ಲಿ ಚಿತ್ರಕಥೆ (Screenwriting) ಮತ್ತು ನಿರ್ದೇಶನದ ಬಗ್ಗೆ ಉನ್ನತ ವ್ಯಾಸಂಗ ಮಾಡಿದ್ದು, ಅಂತರಾಷ್ಟ್ರೀಯ ಮಟ್ಟದ ಸಿನಿಮಾ ತಾಂತ್ರಿಕತೆಯನ್ನು ಕಲಿತಿದ್ದಾರೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಜೇಸನ್ ಸಂಜಯ್ ಅವರ ವೃತ್ತಿಜೀವನದ ಹಾದಿ (Career Path):

ನಟನೆಯ ಬದಲಿಗೆ ಕ್ಯಾಮೆರಾ ಹಿಂದೆ ನಿಂತು ಕಥೆ ಹೇಳುವುದು ಜೇಸನ್ ಅವರಿಗೆ ಇಷ್ಟದ ಕೆಲಸ. ವಿದೇಶದಲ್ಲಿ ವ್ಯಾಸಂಗ ಮಾಡುವಾಗಲೇ ಜೇಸನ್ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ‘ಪುಲ್ ದಿ ಟ್ರಿಗರ್’ (Pull the Trigger) ಕಿರುಚಿತ್ರವು ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಇದಲ್ಲದೇ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ (Lyca Productions) ಜೊತೆ ಜೇಸನ್ ಕೈಜೋಡಿಸಿದ್ದಾರೆ. ಇವರ ಚೊಚ್ಚಲ ಸಿನಿಮಾ ನಿರ್ದೇಶನಕ್ಕೆ ಈ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಇದು ಒಬ್ಬ ಯುವ ನಿರ್ದೇಶಕನಿಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ.

ತಂದೆಯೊಂದಿಗಿನ ಸಂಪರ್ಕ ಕಡಿತ?

ವಿಜಯ್ ಮತ್ತು ಸಂಗೀತಾ ವಿಚ್ಛೇದನ ವಿಚಾರಣೆ ಸುದ್ದಿ ಹರಡುತ್ತಿರುವಾಗಲೇ ಜೇಸನ್ ಸಂಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ತಂದೆ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ . ಇದಲ್ಲದೇ ಜೇಸನ್ ತಮ್ಮ ಹೆಸರಿನಲ್ಲಿದ್ದ ತಂದೆಯ ಇನಿಶಿಯಲ್ (S) ಬದಲಿಗೆ ತಾಯಿಯ ಹೆಸರನ್ನು ಬಳಸಲು ಆರಂಭಿಸಿದ್ದಾರೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿವೆ. ಇದು ತಂದೆ ಮತ್ತು ಮಗನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಬಿಂಬಿತವಾಗುತ್ತಿದೆ. ಮೂಲಗಳ ಪ್ರಕಾರ, ಜೇಸನ್ ಕಳೆದ ಕೆಲವು ಸಮಯದಿಂದ ತಮ್ಮ ತಂದೆಯೊಂದಿಗೆ ಅಷ್ಟಾಗಿ ಸಂಪರ್ಕದಲ್ಲಿಲ್ಲ ಮತ್ತು ಅವರು ತಮ್ಮ ತಾಯಿಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ.

ಶಿಕ್ಷಣಕ್ಕೆಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:51 pm, Thu, 7 May 26

Source link

ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ತೊಳೆಯಬಾರದಂತೆ? ಏಕೆ ಗೊತ್ತಾ? – Kannada News | Do you know why you shouldn’t wash chicken before cooking?

ಪ್ರತಿಯೊಬ್ಬರೂ ಸಹ ಅಡುಗೆ ಮಾಡುವ ಮುನ್ನ ತರಕಾರಿ, ಮಾಂಸ ಎಲ್ಲವನ್ನೂ ಚೆನ್ನಾಗಿ ತೊಳೆಯುತ್ತಾರೆ. ಅದರಲ್ಲೂ ಕೋಳಿ (chicken) ಇತ್ಯಾದಿ ಮಾಂಸಗಳನ್ನು ಎರಡು ಮೂರು ಬಾರಿ ಸ್ವಚ್ಛಗೊಳಿಸುತ್ತಾರೆ. ಇದರಿಂದ ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಸತ್ತು ಹೋಗುತ್ತವೆ, ಮಾಂಸ ಚೆನ್ನಾಗಿ ಕ್ಲೀನ್‌ ಆಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಹೀಗೆ ಅಡುಗೆಗೂ ಮುನ್ನ ಕೋಳಿ ಮಾಂಸವನ್ನು ತೊಳೆಯಲೇಬಾದಂತೆ. ಇದರಿಂದ ಹಾನಿಕಾರ ಬ್ಯಾಕ್ಟೀರಿಯಾ ಇನ್ನಷ್ಟು ಹರಡುತ್ತದೆ, ಇದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಹಾಗಿದ್ರೆ ಅಡುಗೆಗೂ ಮುನ್ನ ಕೋಳಿ ಮಾಂಸವನ್ನು ತೊಳೆಯುವುದರಿಂದ ಏನೆಲ್ಲಾ ಅಪಾಯಗಳು ಉದ್ಭವಿಸುತ್ತವೆ, ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಅಡುಗೆ ಮಾಡುವ ಮೊದಲು ಕೋಳಿ ತೊಳೆಯುವುದು ಏಕೆ ಹಾನಿಕಾರಕ?

ಹಸಿ ಕೋಳಿ ಮಾಂಸದಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಾಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅವುಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ ಮತ್ತು ಫುಡ್‌ ಪಾಯಿಸನ್‌ನಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನೀವು ಹಸಿ ಕೋಳಿ ಮಾಂಸವನ್ನು ತೊಳೆದಾಗ, ಆ ನೀರಿನ ಹನಿಗಳು  ಸಿಂಕ್, ತಟ್ಟೆಗಳು, ಪಾತ್ರೆಗಳು ಮತ್ತು ಕೌಂಟರ್‌ಗಳಿಗೆ  ಚಿಮ್ಮುವ ಮೂಲಕ ಈ ಬ್ಯಾಕ್ಟೀರಿಯಾಗಳು ಹರಡಬಹುದು. ಹರಿಯುವ ನೀರಿನ ಅಡಿಯಲ್ಲಿ ಕೋಳಿ ಮಾಂಸವನ್ನು ತೊಳೆಯುವುದರಿಂದ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಎಂದು ಹಲವರು ನಂಬುತ್ತಾರೆ. ಆದರೆ ನೀರು ಬ್ಯಾಕ್ಟೀರಿಯಾವನ್ನು ಕೊಲ್ಲುವುದಿಲ್ಲ. ಇದಕ್ಕೆ ಹೆಚ್ಚಿನ ತಾಪಮಾನ ಬೇಕಾಗುತ್ತದೆ. ಆದ್ದರಿಂದ, ಕೋಳಿ ಮಾಂಸವನ್ನು ತೊಳೆಯುವ ಬದಲು ನೇರವಾಗಿ ಚೆನ್ನಾಗಿ ಬೇಯಿಸಬೇಕು. ಇದು ಬ್ಯಾಕ್ಟೀರಿಯಾ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕುರಿತ ಮಾಹಿತಿಯನ್ನು ಅವನೀಶ್ ಛಾಬ್ರಿಯಾ ಎಂಬವವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಅಮೇರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಪ್ರಕಾರ, ಹಸಿ ಕೋಳಿಯನ್ನು ತೊಳೆಯುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಡುಗೆ ಮಾಡುವ ಮೊದಲು ಹಸಿ ಕೋಳಿಯನ್ನು ತೊಳೆಯುವುದರಿಂದ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ, ಸಾಲ್ಮೊನೆಲ್ಲಾ, ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಮತ್ತು ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಬ್ಯಾಕ್ಟೀರಿಯಾಗಳು ಹರಡುತ್ತವೆ.ಸೋಂಕಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಸಿ ಕೋಳಿಯನ್ನು ತೊಳೆಯುವುದು ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ವಿಶೇಷವಾಗಿ ಹಾನಿಕಾರಕವಾಗಿದೆ.

ಕೋಳಿಯನ್ನು ಹೇಗೆ ಸ್ವಚ್ಛಗೊಳಿಸಬೇಕು?

ಕೋಳಿಯಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಕೋಳಿಯನ್ನು ಸೂಕ್ತ ತಾಪಮಾನದಲ್ಲಿ ಚೆನ್ನಾಗಿ ಬೇಯಿಸುವುದು ಅತ್ಯಗತ್ಯ. ಕೋಳಿಯನ್ನು ಕನಿಷ್ಠ 75°C ಅಥವಾ 165°F ತಾಪಮಾನದಲ್ಲಿ ಕೋಳಿಯನ್ನು ಬೇಯಿಸಬೇಕು. ಈ ತಾಪಮಾನದಲ್ಲಿ ಕೋಳಿಯನ್ನು ಬೇಯಿಸುವುದರಿಂದ ಲೋಳೆ ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ:  ನೀವು ಮಾಡುವ ತಪ್ಪುಗಳು ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು

ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯುವುದು ಹೇಗೆ?

  • ಕೋಳಿಯನ್ನು ನೀರಿನಿಂದಲೇ ತೊಳೆಯಬೇಕು ಅಂತಿದ್ದರೆ, ತೊಳೆಯಲು ಬಯಸಿದರೆ, ಚಿಕನ್‌ ಕ್ಲೀನ್‌ ಮಾಡಿದ ತಕ್ಷಣವೇ  ಸಿಂಕ್, ಪಾತ್ರೆಗಳು, ಕೌಂಟರ್‌ ಟಾಪ್‌ಗಳನ್ನು ಸ್ವಚ್ಛಗೊಳಿಸಿ. ತಕ್ಷಣವೇ ಬಿಸಿನೀರು ಮತ್ತು ಸೋಪಿನಿಂದ ಸಿಂಕ್ ಅನ್ನು ಚೆನ್ನಾಗಿ ತೊಳೆಯಿರಿ.
  • ಹಸಿ ಕೋಳಿ ಮಾಂಸವನ್ನು ರೆಫ್ರಿಜರೇಟರ್‌ನಲ್ಲಿ ಇಡುವುದನ್ನು ಯಾವಾಗಲೂ ತಪ್ಪಿಸಿ. ಇದು ಬ್ಯಾಕ್ಟೀರಿಯಾಗಳು ಇತರ ಆಹಾರ ಪದಾರ್ಥಗಳಿಗೆ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಯಾವಾಗಲೂ ಕೋಳಿ ಮಾಂಸವನ್ನು ಮುಚ್ಚಿಡಿ.
  • ಕೋಳಿ ಕ್ಲೀನ್‌ ಮಾಡಿದರ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version