ನವದೆಹಲಿ, ಮೇ 26: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆಯಾದ ನಂತರ, ಈಗ ಸಿಎನ್‌ಜಿ (CNG) ದರವೂ ಹೆಚ್ಚಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 83 ರೂಪಾಯಿ 9 ಪೈಸೆಗೆ ತಲುಪಿದೆ. ಇದು ಸಿಎನ್‌ಜಿ ಬಳಸುವ ವಾಹನ ಮಾಲೀಕರಿಗೆ ಭಾರಿ ಆಘಾತ ನೀಡಿದೆ. ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಾಲ್ಕು ಬಾರಿ ಏರಿಕೆ ಕಂಡಿದ್ದವು. ಅದರ ಬೆನ್ನಲ್ಲೇ, ಸೋಮವಾರ ಮತ್ತೆ ಪ್ರತಿ ಲೀಟರ್‌ಗೆ 2 ರೂಪಾಯಿ 83 ಪೈಸೆ ಹೆಚ್ಚಳವಾಗಿತ್ತು. ಇದೀಗ ಸಿಎನ್‌ಜಿ ದರ ಏರಿಕೆಯಾಗಿರುವುದು ಇಂಧನ ಬಳಕೆದಾರರಿಗೆ ಮತ್ತೊಂದು ಹೊರೆಯಾಗಿದೆ. ಈ ದರ ಏರಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯ ಏರಿಳಿತಗಳು ಪ್ರಮುಖ ಕಾರಣವಾಗಿವೆ. ಇದರ ಜೊತೆಗೆ, ಯುದ್ಧದ ಕಾರ್ಮೋಡದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯಗಳು ಉಂಟಾಗಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣವಾಗಿದೆ.
ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ (Ranveer Singh) ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ನಟನ ವಿರುದ್ಧ ಅಸಹಕಾರದ ಕಠಿಣ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ರಣವೀರ್ ಸಿಂಗ್ ಹೊಸ ಚಿತ್ರಗಳ ಚಿತ್ರೀಕರಣ ಮಾಡದಂತೆ ಹಾಗೂ ಚಿತ್ರರಂಗದ ಯಾರೂ ಅವರೊಂದಿಗೆ ಕೆಲಸ ಮಾಡದಂತೆ ಸೂಚಿಸಿ ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ.
* ಗಂಭೀರ ಸ್ವರೂಪ ಪಡೆದ ಡಾನ್ 3 ವಿವಾದ
* ಬ್ಯಾನ್ ಆದ ನಟ ರಣವೀರ್ ಸಿಂಗ್
* ಮುಂದಿರುವ ಆಯ್ಕಗಳೇನು?
ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ತಯಾರಾಗುತ್ತಿತ್ತು. ಆದರೆ, ಚಿತ್ರದ ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಅವರು ಈ ಚಿತ್ರದಿಂದ ಹೊರನಡೆದರು. ಇವರ ಈ ದಿಢೀರ್ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಸಾಕಷ್ಟು ಹಣ ಸುರಿಯಲಾಗಿದೆ. ಹೀಗಾಗಿ ನಿರ್ಮಾಣ ಸಂಸ್ಥೆಯು ನಟನಿಂದ ಸುಮಾರು 40 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.
ಆದರೆ, ಇದನ್ನು ರಣವೀರ್ ಸಿಂಗ್ ಒಪ್ಪಿಲ್ಲ. ನಷ್ಟ ಪರಿಹಾರದ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈ ವಿವಾದ FWICEಗೆ ತಲುಪಿತು. FWICE ಅಧ್ಯಕ್ಷ ಬಿ.ಎನ್ ತಿವಾರಿ ಹಾಗೂ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೂಟಿಂಗ್ ಹಂತದಲ್ಲಿ ನಟರು ಹೀಗೆ ಹೊರನಡೆಯುವ ಪ್ರವೃತ್ತಿ ಸರಿಯಲ್ಲ ಎಂದು ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬ್ಯಾನ್ ಆದೇಶದಿಂದಾಗಿ ರಣವೀರ್ ಸಿಂಗ್ ಅವರು ಭಾರತದಲ್ಲಿ ಹೊಸ ಸಿನಿಮಾಗಳ ಶೂಟಿಂಗ್ ಮಾಡಲು ಅಥವಾ ಹೊಸ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ವಿವಾದ ಬಗೆಹರಿಯುವವರೆಗೂ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಗುತ್ತದೆ. ‘ಧುರಂಧರ್ 2’ ಸಿನಿಮಾದ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರಿಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಇತ್ತು. ಇಂತಹ ಪ್ರಮುಖ ಸಮಯದಲ್ಲಿ ಎದುರಾಗಿರುವ ಈ ಕಾನೂನು ಮತ್ತು ವೃತ್ತಿಪರ ಸಂಕಷ್ಟವು ಅವರ ಸಿನಿ ಪಯಣಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ. ಅವರು ನಷ್ಟ ಪರಿಹಾರ ಮಾಡಿದರೆ ಅಥವಾ ‘ಡಾನ್ 3’ ಸಿನಿಮಾದಲ್ಲಿ ನಟಿಸಿದರೆ ವಿವಾದ ಬಗೆಹರಿಯಬಹುದು. ರಣವೀರ್ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.
ಉನ್ನಾವೋ, ಮೇ 26: ದೆಹಲಿಯಿಂದ ಬಿಹಾರಕ್ಕೆ ಹೋಗುತ್ತಿದ್ದ ಬಸ್(Bus) ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಔರಾಸ್ ಪೊಲೀಸ್ ಠಾಣೆ ಪ್ರದೇಶದ ಆಗ್ರಾ ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಔರಾಸ್ ಎಸ್‌ಒ ಸಂಜೀವ್ ಕುಶ್ವಾಹ ಅವರ ಪ್ರಕಾರ, ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಮತ್ತು ಕೈದಿ ಸೇರಿದ್ದಾರೆ.
ಮೃತ ಸಬ್ ಇನ್ಸ್‌ಪೆಕ್ಟರ್‌ನನ್ನು ರಾಮಚಂದ್ರ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ರಾಮಚಂದ್ರ ಅವರು ಕೈದಿ ಛತ್ರಪಾಲ್ ಜೊತೆಗೆ ಸಿವಾನ್‌ನಿಂದ ದೆಹಲಿಗೆ ಪ್ರಯಾಣಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದವು.
ಮತ್ತೊಂದು ಅಪಘಾತ
ಧುಲೆ ಬಳಿಯ ಮುಂಬೈ-ಆಗ್ರಾ ಹೆದ್ದಾರಿಯ ಲಾಲಿಂಗ್ ಘಾಟ್ ವಿಭಾಗದಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಆರು ಪ್ರಯಾಣಿಕರು ಸಾವನ್ನಪ್ಪಿದ್ದು, 10 ರಿಂದ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಳು ಡಂಪಿಂಗ್ ಯಂತ್ರ ಮತ್ತು ಹಲವಾರು ಪ್ರಯಾಣಿಕ ವಾಹನಗಳ ನಡುವೆ ಸಂಭವಿಸಿದ ಹಿಂಸಾತ್ಮಕ ಅಪಘಾತದ ನಂತರ ಈ ಘಟನೆಯಲ್ಲಿ ಮೂರು ಬಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಪರಿಣಾಮವಾಗಿ, ಮುಂಜಾನೆ ಈ ಅಪಘಾತದಿಂದಾಗಿ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಚಾರ ಸ್ವಲ್ಪ ಸಮಯದವರೆಗೆ ಅಸ್ತವ್ಯಸ್ತವಾಗಿತ್ತು.
ಬೆಂಗಳೂರು, ಮೇ.26 : ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿಶೀಟರ್ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿ ಸೊಂಟ ಜಾಯಿಂಟ್ ಕಂಪ್ರೆಷನ್ (ಸೊಂಟದ ಮೂಳೆ ಜರುಗುವಿಕೆ) ಆಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡಿರುವ ಆರೋಪಿಯನ್ನು ನಗರದ ಕುಖ್ಯಾತ ರೌಡಿ ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ರೌಡಿ ಸ್ಪಾಟ್ ನಾಗ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈ ನಡುವೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಈತ ರಹಸ್ಯವಾಗಿ ಹೊಸದೊಂದು ಮನೆ ಕಟ್ಟಿಸುತ್ತಿದ್ದ. ಈ ಬಗ್ಗೆ ಪಕ್ಕಾ ಮಾಹಿತಿ ಪಡೆದ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಲು ಈ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಖಾಕಿ ಪಡೆ ಸ್ಥಳಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಸ್ಪಾಟ್ ನಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಹಿಡಿಯಲು ಬಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ, ಅವರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಪೊಲೀಸರಿಗೆ ನೇರವಾಗಿ ಬೆದರಿಕೆ ಹಾಕಿ, ಅಲ್ಲಿಂದ ಎಸ್ಕೇಪ್ ಆಗುವ ಧಾವಂತದಲ್ಲಿ ನಿರ್ಮಾಣ ಹಂತದ ಬಿಲ್ಡಿಂಗ್‌ನ ಮೇಲಿಂದ ಕೆಳಗೆ ಧುಮುಕಿದ್ದಾನೆ.
ಕಟ್ಟಡದಿಂದ ಹಾರಿದ ರಭಸಕ್ಕೆ ಸ್ಪಾಟ್ ನಾಗನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆತನಿಗೆ ಎದ್ದು ಓಡಲು ಸಾಧ್ಯವಾಗಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಿಲ್ಡಿಂಗ್‌ನಿಂದ ಬಿದ್ದ ಕಾರಣ ಆತನ ಸೊಂಟದ ಮೂಳೆ ಜಾಯಿಂಟ್ ಕಂಪ್ರೆಷನ್ (Joint Compression) ಆಗಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲೇ ಆತನಿಗೆ ಚಿಕಿತ್ಸೆ ಮುಂದುವರಿದಿದೆ.
ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಪಾಟ್ ನಾಗನ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.
ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಅದೃಷ್ಠ ಮತ್ತು ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ಅಂಗಗಳಲ್ಲಿ ಒಂದಾದ ಹಸ್ತಸಾಮುದ್ರಿಕ ಶಾಸ್ತ್ರಕ್ಕೆ (Palmistry) ಅದರದ್ದೇ ಆದ ವಿಶೇಷ ಮಹತ್ವವಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಅಂಗೈಯಲ್ಲಿ ಒಂದು ನಿರ್ದಿಷ್ಟ ಗುರುತಿದ್ದರೆ ಅವರು ಜೀವನದಲ್ಲಿ ಅಪಾರ ಸಂಪತ್ತನ್ನು ಗಳಿಸಿ ಕೋಟ್ಯಧಿಪತಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಆ ರೇಖೆ ಅಥವಾ ಗುರುತು ಯಾವುದು ಗೊತ್ತೇ? ಅದೇ ಇಂಗ್ಲಿಷ್‌ನ ‘M’ (ಎಮ್) ಅಕ್ಷರ.
ನಿಮ್ಮ ಕೈಯಲ್ಲೂ ಈ ‘M’ ಗುರುತಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ ಮತ್ತು ಅದರ ಹಿಂದಿನ ಆಸಕ್ತಿದಾಯಕ ರಹಸ್ಯಗಳನ್ನು ತಿಳಿಯಿರಿ.
ಅಂಗೈಯಲ್ಲಿ ‘M’ ಅಕ್ಷರ ಮೂಡುವುದು ಹೇಗೆ?
ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಈ ಗುರುತು ಇರುವುದಿಲ್ಲ. ಅಂಗೈಯಲ್ಲಿರುವ ಮೂರು ಮುಖ್ಯ ರೇಖೆಗಳಾದ ಜೀವನ ರೇಖೆ (Life Line), ಮಸ್ತಿಷ್ಕ ರೇಖೆ ಅಥವಾ ಬುದ್ಧಿ ರೇಖೆ (Head Line), ಮತ್ತು ಹೃದಯ ರೇಖೆ (Heart Line) ಒಟ್ಟಾಗಿ ಸೇರಿದಾಗ ಈ ಮೂರು ರೇಖೆಗಳ ಜೋಡಣೆಯಿಂದ ‘M’ ಎಂಬ ಅಕ್ಷರ ಮೂಡುತ್ತದೆ. ಈ ಮೂರು ರೇಖೆಗಳು ಒಂದಕ್ಕೊಂದು ಬೆಸೆದುಕೊಂಡು ಸ್ಪಷ್ಟವಾದ ‘M’ ಆಕಾರವನ್ನು ಹೊಂದಿದ್ದರೆ, ಅಂತಹ ವ್ಯಕ್ತಿಗಳು ಅತ್ಯಂತ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
ಮಹಿಳೆಯರು ಮತ್ತು ಪುರುಷರಿಗೆ ಯಾವ ಕೈಯಲ್ಲಿರಬೇಕು?
ಹಸ್ತಸಾಮುದ್ರಿಕ ಶಾಸ್ತ್ರದ ನಿಯಮಗಳ ಪ್ರಕಾರ, ಈ ‘M’ ಅಕ್ಷರವು ಜನ್ಮಜಾತವಾಗಿ ಮಹಿಳೆಯರ ಎಡಗೈಯಲ್ಲಿ ಮತ್ತು ಪುರುಷರ ಬಲಗೈಯಲ್ಲಿ ಇದ್ದರೆ ಅದು ಅದ್ಭುತವಾದ ಲಾಭ ಹಾಗೂ ಯಶಸ್ಸನ್ನು ತಂದುಕೊಡುತ್ತದೆ.
ಅಪಾರ ಸಂಪತ್ತು ಮತ್ತು ಯಶಸ್ಸು: ಅಂಗೈಯಲ್ಲಿ ‘M’ ಗುರುತಿರುವವರು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಇವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕೋಟ್ಯಧಿಪತಿಯಾಗುವ ಯೋಗವನ್ನು ಹೊಂದಿರುತ್ತಾರೆ.
ನಾಯಕತ್ವದ ಗುಣ (Leadership Qualities): ಇಂತಹ ವ್ಯಕ್ತಿಗಳಲ್ಲಿ ನಾಯಕತ್ವದ ಗುಣಗಳು ಜನ್ಮಜಾತವಾಗಿರುತ್ತವೆ. ಯಾವುದೇ ರಂಗದಲ್ಲೂ ಇವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.
ರಾಜಕೀಯ ಮತ್ತು ವ್ಯಾಪಾರದಲ್ಲಿ ಯಶಸ್ಸು: ರಾಜಕೀಯ ರಂಗದಲ್ಲಿ ಇವರು ದೊಡ್ಡ ಮಟ್ಟದ ಯಶಸ್ಸು ಮತ್ತು ಜನಪ್ರಿಯತೆ ಗಳಿಸುತ್ತಾರೆ. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲೂ ಇವರಿಗೆ ಸಾಟಿ ಯಾರು ಇರುವುದಿಲ್ಲ.
ಬುದ್ಧಿವಂತಿಕೆ ಮತ್ತು ದೂರದೃಷ್ಟಿ: ಇವರು ತೀಕ್ಷ್ಣ ಬುದ್ಧಿಶಕ್ತಿ ಹಾಗೂ ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ಯಾವುದೇ ವಿಷಯದಲ್ಲೂ ಇವರಿಗೆ ದೂರದೃಷ್ಟಿ ಹೆಚ್ಚಾಗಿರುತ್ತದೆ. ವಿಶೇಷವಾಗಿ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ ಮತ್ತು ಹಣ ಖರ್ಚು ಮಾಡುವ ಮುನ್ನ ಒಂದಕ್ಕೆ ಎರಡರಷ್ಟು ಯೋಚಿಸುತ್ತಾರೆ.
ಅದೃಷ್ಟದ ಒಲವು: ಇವರ ಅದೃಷ್ಟ ಎಷ್ಟು ಬಲವಾಗಿರುತ್ತದೆ ಎಂದರೆ, ಇವರು ಎಷ್ಟೇ ಬಡತನದ ಪರಿಸ್ಥಿತಿಯಲ್ಲಿ ಹುಟ್ಟಿದ್ದರೂ ಸಹ, ಕಾಲಕ್ರಮೇಣ ಸ್ವಪ್ರಯತ್ನ ಹಾಗೂ ಲಕ್‌ನಿಂದಾಗಿ ಶ್ರೀಮಂತರಾಗುತ್ತಾರೆ. ಆರ್ಥಿಕವಾಗಿ ಇವರ ಬೆಳವಣಿಗೆ ಅದ್ಭುತವಾಗಿರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಮೊದಲ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾಲ್ಕು ತಂಡಗಳು ಪ್ಲೇಆಫ್ ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಲೀಗ್ ಹಂತದ 70 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅತ್ಯಧಿಕ ಅಂಕಗಳನ್ನು ಪಡೆದು, ಪಾಯಿಂಟ್ಟ್ ಟೇಬಲ್ನಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಂಡಿರುವ ನಾಲ್ಕು ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ. ಅದರಂತೆ ಈ ಬಾರಿ ಪ್ಲೇಆಫ್ ಆಡಲಿರುವ ತಂಡಗಳೆಂದರೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಗುಜರಾತ್ ಟೈಟಾನ್ಸ್
ಸನ್ರೈಸರ್ಸ್ ಹೈದರಾಬಾದ್
ರಾಜಸ್ಥಾನ್ ರಾಯಲ್ಸ್.
ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿರುವ ಕಾರಣ ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ.
ಐಪಿಎಲ್ ಪ್ಲೇಆಫ್ ನಿಯಮದ ಪ್ರಕಾರ, ಲೀಗ್ ಹಂತದ ಮುಕ್ತಾಯದ ವೇಳೆ ಅಂಕ ಪಟ್ಟಿಯಲ್ಲಿ ಟಾಪ್-2 ನಲ್ಲಿ ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ಹಾಗೂ 3ನೇ ಮತ್ತು 4ನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತದೆ.
ಮೊದಲ ಕ್ವಾಲಿಫೈಯರ್: ಪ್ಲೇಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಎಲಿಮಿನೇಟರ್ ಪಂದ್ಯ: ಪ್ಲೇಆಫ್ ಸುತ್ತಿನ ಎರಡನೇ ಪಂದ್ಯವು ಎಲಿಮಿನೇಟರ್ ಮ್ಯಾಚ್ ಆಗಿದ್ದು, ಈ ಪಂಧ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ.
ದ್ವಿತೀಯ ಕ್ವಾಲಿಫೈಯರ್: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.
ಗೆದ್ದವರು ಫೈನಲ್ಗೆ, ಸೋತವರಿಗೆ ಮತ್ತೊಂದು ಚಾನ್ಸ್!
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೇರಲಿದೆ. ಅಂದರೆ ಇಂದಿನ ಮ್ಯಾಚ್ನಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ.
ಹಾಗೆಯೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳುವುದಿಲ್ಲ. ಬದಲಾಗಿ ಎರಡನೇ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ಇರಲಿದೆ. ಅಂದರೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡಕ್ಕೆ ಫೈನಲ್ಗೇರಲು ಎರಡನೇ ಚಾನ್ಸ್ ಸಿಗಲಿದೆ.
ಮಾಡು ಇಲ್ಲವೇ ಮಡಿ ಪಂದ್ಯ:
ಎಲಿಮಿನೇಟರ್ ಪಂದ್ಯ ಎಂಬುದು ಮಾಡು ಇಲ್ಲವೇ ಮಡಿ ಪಂದ್ಯ. ಅಂದರೆ ಈ ಮ್ಯಾಚ್ನಲ್ಲಿ ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಈ ಡು ಆರ್ ಡೈ ಮ್ಯಾಚ್ನಲ್ಲಿ ಈ ಬಾರಿ ಕಣಕ್ಕಿಳಿಯಲಿರುವುದು ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್. ಈ ಎರಡು ತಂಡಗಳಲ್ಲಿ ಒಂದು ಟೀಮ್ ಇಂಡಿಯಾ ಮೇ 27 ರಂದು ಐಪಿಎಲ್ ಅಭಿಯಾನ ಕೊನೆಗೊಳಿಸಲಿದೆ.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯ ಆಡಬೇಕಾಗುತ್ತದೆ. ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಂದಿಗೆ ಎಲಿಮಿನೇಟರ್ ಪಂದ್ಯ ಗೆದ್ದ ತಂಡ ಪಂದ್ಯವಾಡಬೇಕಾಗುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ.
ಅಂದರೆ ಎಲಿಮಿನೇಟರ್ ಪಂದ್ಯವಾಡುವ ತಂಡ ಫೈನಲ್ಗೇರಬೇಕಿದ್ದರೆ 2 ಮ್ಯಾಚ್ಗಳಲ್ಲಿ ಜಯ ಸಾಧಿಸಬೇಕು. ಅದೇ ವೇಳೆ ಮೊದಲ ಕ್ವಾಲಿಫೈಯರ್ನಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸುತ್ತದೆ. ಇನ್ನು ಸೋತ ತಂಡಕ್ಕೆ ಸಿಗುವ ಎರಡನೇ ಚಾನ್ಸ್ (ದ್ವಿತೀಯ ಕ್ವಾಲಿಫೈಯರ್) ಮೂಲಕ ಫೈನಲ್ಗೆ ಪ್ರವೇಶಿಸಲು ಅವಕಾಶ ಇರಲಿದೆ.
ಹೀಗಾಗಿ ಇಂದಿನ (ಮೇ 26) ಮ್ಯಾಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಗುಜರಾತ್ ಟೈಟಾನ್ಸ್ ತಂಡಗಳು ಸೋತರೆ ಐಪಿಎಲ್ನಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಆಡಲು ಅವಕಾಶ ಪಡೆಯಲಿದೆ. ಆದರೆ ಅತ್ತ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡದ ಐಪಿಎಲ್ ಅಭಿಯಾನ ನಾಳೆ (ಮೇ 27) ಅಂತ್ಯವಾಗಲಿದೆ. ಅಂದರೆ ಸನ್ರೈಸರ್ಸ್ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ಒಂದು ಟೀಮ್ ಬುಧವಾರ ಐಪಿಎಲ್ ಅಭಿಯಾನ ಅಂತ್ಯಗೊಳಿಸಲಿದೆ.
ವಾಷಿಂಗ್ಟನ್, ಮೇ 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ಜೊತೆಗಿನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಸೇನೆಯು ದಕ್ಷಿಣ ಇರಾನ್‌ನಲ್ಲಿ ಭೀಕರ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯ ಬಳಿ ಕ್ಷಿಪಣಿ ಉಡಾವಣಾ ತಾಣಗಳು ಮತ್ತು ಗಣಿಗಳನ್ನು ಇರಿಸಲು ಯತ್ನಿಸುತ್ತಿದ್ದ ಇರಾನಿನ ದೋಣಿಗಳನ್ನು ಗುರಿಯಾಗಿಸಿಕೊಂಡು ಈ ಸ್ವ-ರಕ್ಷಣಾ ದಾಳಿಗಳನ್ನು ನಡೆಸಿರುವುದಾಗಿ ಯುಎಸ್ ಸೇನೆ ಪ್ರಕಟಿಸಿದೆ.
ಇರಾನ್ ಪಡೆಗಳಿಂದ ಎದುರಾಗಬಹುದಾದ ನೇರ ಬೆದರಿಕೆಗಳಿಂದ ಅಮೆರಿಕದ ಸೈನಿಕರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ವಕ್ತಾರ ತಿಮೋತಿ ಹಾಕಿನ್ಸ್ ತಿಳಿಸಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿದ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಗಣಿಗಳನ್ನು ಇಡುವುದನ್ನು ಗಮನಿಸಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಅಮೆರಿಕದ ಪಡೆಗಳು ಐಆರ್‌ಜಿಸಿಯ ಎರಡೂ ದೋಣಿಗಳನ್ನು ಹಾಗೂ ಆ ಕ್ಷಿಪಣಿ ನೆಲೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ.
ಸೋಮವಾರ ಇರಾನ್‌ನ ದಕ್ಷಿಣ ಕರಾವಳಿಯುದ್ದಕ್ಕೂ ಇರುವ ಬಂದರ್ ಅಬ್ಬಾಸ್, ಸಿರಿಕ್ ಮತ್ತು ಜಾಸ್ಕ್ ಬಳಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಈ ದಾಳಿಗಳು ಕೇವಲ ರಕ್ಷಣಾತ್ಮಕವಾಗಿದ್ದು, ಸದ್ಯಕ್ಕೆ ಕಾರ್ಯಾಚರಣೆ ಮುಗಿದಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಮಿಲಿಟರಿ ಕ್ರಮವು ಅತ್ಯಂತ ಸೀಮಿತ ವ್ಯಾಪ್ತಿಯನ್ನು ಹೊಂದಿದ್ದು, ಇರಾನ್ ಜೊತೆಗೆ ಸಾಗುತ್ತಿರುವ ಕದನ ವಿರಾಮ ಒಪ್ಪಂದದ ಕುಸಿತವನ್ನು ಇದು ಸೂಚಿಸುವುದಿಲ್ಲ ಎಂದು ಅಮೆರಿಕದ ಮೂಲಗಳು ಖಚಿತಪಡಿಸಿವೆ.
ಇರಾನ್ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಟ್ರಂಪ್ ಮತ್ತೊಂದು ದೊಡ್ಡ ಶರತ್ತನ್ನು ವಿಧಿಸಿದ್ದಾರೆ. ಇದರ ಪ್ರಕಾರ, ಸೌದಿ ಅರೇಬಿಯಾ, ಪಾಕಿಸ್ತಾನ, ಕತಾರ್, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್ ದೇಶಗಳು ತಕ್ಷಣವೇ ‘ಅಬ್ರಹಾಂ ಒಪ್ಪಂದಕ್ಕೆ’ (ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಒಪ್ಪಂದ) ಸಹಿ ಹಾಕಬೇಕು ಎಂದು ಟ್ರಂಪ್ ಹೇಳಿದ್ದಾರೆ. ಈ ಎಲ್ಲಾ ದೇಶಗಳು ಏಕಕಾಲದಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯವಾಗಿದ್ದು, ಆಗ ಮಾತ್ರ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ಸಾಧ್ಯ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
ಬಾಲಿವುಡ್‌ನ ಹಿರಿಯ ನಟ, ‘ಹೀ-ಮ್ಯಾನ್’ ಎಂದೇ ಪ್ರಸಿದ್ಧರಾಗಿದ್ದ ಧರ್ಮೇಂದ್ರ (Dharmendra) ಅವರಿಗೆ ಮೇ 25 ರಂದು ಮರಣೋತ್ತರವಾಗಿ ದೇಶದ ಪ್ರತಿಷ್ಠಿತ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಧರ್ಮೇಂದ್ರ ಅವರ ಪರವಾಗಿ ಅವರ ಪತ್ನಿ, ನಟಿ ಹೇಮಾ ಮಾಲಿನಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಡೀ ವಾತಾವರಣವೇ ಭಾವನಾತ್ಮಕವಾಗಿತ್ತು. ಪ್ರಶಸ್ತಿ ಸ್ವೀಕರಿಸುವಾಗ ಹೇಮಾ ಮಾಲಿನಿ ಅವರ ಮುಖದಲ್ಲಿ ಪತಿಯನ್ನು ಕಳೆದುಕೊಂಡ ದುಃಖ ಹಾಗೂ ಹೆಮ್ಮೆಯ ಭಾವ ಒಟ್ಟಿಗೇ ಎದ್ದು ಕಾಣುತ್ತಿತ್ತು.
ಈ ವಿಶೇಷ ಸಮಾರಂಭದಲ್ಲಿ ಹೇಮಾ ಮಾಲಿನಿ ಅವರೊಂದಿಗೆ ಮಗಳು ಅಹಾನಾ ಡಿಯೋಲ್ ಮತ್ತು ಅಳಿಯ ವೈಭವ್ ವೋಹ್ರಾ ಉಪಸ್ಥಿತರಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಂದೆಗೆ ಸಿಕ್ಕ ಅತ್ಯುನ್ನತ ಗೌರವವನ್ನು ನೋಡಿದಾಗ ಅಹಾನಾ ಅವರಿಗೆ ತಮ್ಮ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಅವರ ಕಣ್ಣುಗಳು ಆನಂದಭಾಷ್ಪದಿಂದ ತುಂಬಿಬಂದವು. ಆ ವೇಳೆ ಪಕ್ಕದಲ್ಲೇ ಇದ್ದ ಪತಿ ವೈಭವ್ ವೋಹ್ರಾ ಅವರು ಪತ್ನಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಇನ್ನು ಸಮಾರಂಭದಲ್ಲಿ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದ ಹೇಮಾ ಮಾಲಿನಿ, ಅತ್ಯಂತ ಸರಳ ಹಾಗೂ ಆಕರ್ಷಕವಾಗಿ ಕಾಣಿಸುತ್ತಿದ್ದರು.
ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಹೇಮಾ ಮಾಲಿನಿ, ‘ನಮ್ಮ ಮತ್ತೊಬ್ಬ ಪುತ್ರಿ ಇಶಾ ಡಿಯೋಲ್ ಕೂಡ ಈ ಸಮಾರಂಭದಲ್ಲಿ ಇರಬೇಕಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಇದು ಇಡೀ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಮತ್ತು ಅಷ್ಟೇ ಭಾವುಕ ಕ್ಷಣವಾಗಿದೆ. ಧರ್ಮೇಂದ್ರ ಅವರಿಗೆ ದೊರೆತ ಈ ಗೌರವದಿಂದ ಇಡೀ ಕುಟುಂಬ ಸಂತೋಷವಾಗಿದೆ. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ’ ಎಂದು ಹೆಳಿದರು.
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ನಟ ಧರ್ಮೇಂದ್ರ ಅವರು ತಮ್ಮ ಜೀವಿತಾವಧಿಯಲ್ಲಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಿನಿ ಪಯಣದಲ್ಲಿ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ವಿಶಿಷ್ಟ ನಟನೆ ಹಾಗೂ ಅದ್ಭುತ ವ್ಯಕ್ತಿತ್ವದಿಂದಾಗಿ ಅವರು ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದರು. ‘ಶೋಲೆ’, ‘ಫೂಲ್ ಔರ್ ಪತ್ತರ್’, ‘ಅನ್ಪದ್’, ‘ಹಕಿಕತ್’, ‘ಬಂದಿನಿ’, ‘ಸೀತಾ ಔರ್ ಗೀತಾ’, ‘ಮೇರಾ ಗಾಂವ್ ಮೇರಾ ದೇಶ್’ ಸೇರಿದಂತೆ ಅಸಂಖ್ಯಾತ ಸೂಪರ್‌ಹಿಟ್ ಚಿತ್ರಗಳ ಮೂಲಕ ಅವರು ಹಿಂದಿ ಚಿತ್ರರಂಗದ ಅಪ್ರತಿಮ ನಾಯಕನಾಗಿ ಗುರುತಿಸಿಕೊಂಡಿದ್ದರು.
1960 ರಲ್ಲಿ ಬಿಡುಗಡೆಯಾದ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಧರ್ಮೇಂದ್ರ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅವರು ನಿಧನರಾದ ನಂತರ ತೆರೆಕಂಡ ‘ಇಕ್ಕಿಸ್’ ಅವರ ವೃತ್ತಿಜೀವನದ ಕೊನೆಯ ಸಿನಿಮಾವಾಯಿತು. ತಮ್ಮ ಬದುಕಿನ ಕೊನೆಯ ದಿನಗಳವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ, ಅವರು ನಟಿಸಿದ ಸಿನಿಮಾಗಳು ಮತ್ತು ಅವರ ನೆನಪುಗಳು ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯಲಿವೆ.
ವಾರದ ದಿನಗಳಿಗೆ ಸೂಕ್ತವಾದ ಬಣ್ಣImage Credit source: Pinterest
ನಮ್ಮ ಬದುಕಿನಲ್ಲಿ ಬಣ್ಣಗಳು ಅಗಾಧ ಪ್ರಭಾವವನ್ನು ಬೀರುತ್ತವೆ. ವಾರದ ಏಳು ದಿನಗಳಿಗೆ ಏಳು ಬಣ್ಣಗಳ ಮಹತ್ವವಿದೆ. ಪ್ರತಿದಿನವೂ ಅದರದೇ ಆದ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಗ್ರಹಗಳ ಅನುಗ್ರಹ ಮತ್ತು ಸಕಾರಾತ್ಮಕ ಪ್ರಭಾವಗಳನ್ನು ಪಡೆಯಬಹುದು. ಇದನ್ನು ಕಲರ್ ಥೆರಪಿ ಅಥವಾ ಬಣ್ಣ ಚಿಕಿತ್ಸೆ ಎಂದೂ ಕರೆಯುತ್ತಾರೆ. ಬಣ್ಣಗಳು ಮನುಷ್ಯನ ವ್ಯಕ್ತಿತ್ವ, ಏಳಿಗೆ, ಅಭಿವೃದ್ಧಿ ಹಾಗೂ ಅವನತಿಯ ಮೇಲೆ ಸಹ ಪರಿಣಾಮ ಬೀರುತ್ತವೆ. ಸರಿಯಾದ ಬಣ್ಣಗಳು ಸಂತೋಷ ಮತ್ತು ಸಮೃದ್ಧಿಯನ್ನು ತರಬಲ್ಲವು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ವಾರದ ದಿನಗಳಿಗೆ ಸೂಕ್ತವಾದ ಬಣ್ಣಗಳು ಮತ್ತು ಅವುಗಳ ಮಹತ್ವ:
ಸೋಮವಾರ (ಚಂದ್ರನ ದಿನ):
ಸೋಮವಾರವು ಚಂದ್ರನಿಗೆ ಮೀಸಲಾದ ದಿನ. ಈ ದಿನ ಬಿಳಿ ಅಥವಾ ಶ್ವೇತ ವರ್ಣದ ಬಟ್ಟೆಗಳನ್ನು ಧರಿಸುವುದು ಶುಭ. ಇದು ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಮಹಿಳೆಯರು ಮತ್ತು ಪುರುಷರು ಇಬ್ಬರೂ ಬಿಳಿ ಬಟ್ಟೆಗಳನ್ನು ಧರಿಸಬಹುದು.
ಮಂಗಳವಾರ (ಕುಜನ ದಿನ):
ಮಂಗಳವಾರವು ಕುಜ (ಮಂಗಳ), ಸುಬ್ರಮಣ್ಯ ಮತ್ತು ಹನುಮಂತನಿಗೆ ಸಮರ್ಪಿತವಾಗಿದೆ. ಈ ದಿನ ಕೇಸರಿ ಮಿಶ್ರಿತ ಬಟ್ಟೆಗಳನ್ನು ಅಥವಾ ಕೇಸರಿ ಬಣ್ಣದ ಛಾಯೆ ಇರುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಹಣೆಗೆ ಸಿಂಧೂರವನ್ನು ಧರಿಸುವುದರಿಂದಲೂ ಶಕ್ತಿ ವೃದ್ಧಿಸುತ್ತದೆ. ಇದು ಕುಟುಂಬದಲ್ಲಿ ನೆಮ್ಮದಿ, ಕಲಹಗಳಿಂದ ಮುಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ.
ಬುಧವಾರವು ವಿಷ್ಣು, ಕಾಲಭೈರವ, ವಿನಾಯಕ (ಗಣೇಶ) ಮತ್ತು ವೆಂಕಟೇಶ್ವರ ಸ್ವಾಮಿಗೆ ಮೀಸಲಾಗಿದೆ. ಈ ದಿನ ಹಸಿರು ಮಿಶ್ರಿತ ಬಟ್ಟೆಗಳನ್ನು ಧರಿಸುವುದು ಶುಭ. ಉದಾಹರಣೆಗೆ, ಮಹಿಳೆಯರು ಸೀರೆಯ ಅಂಚಿನಲ್ಲಿ ಹಸಿರು ಬಣ್ಣವಿರುವ ಬಟ್ಟೆಯನ್ನು ಅಥವಾ ಹಸಿರು ಛಾಯೆಯ ಉಡುಪುಗಳನ್ನು ಧರಿಸಬಹುದು. ಇದು ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ, ಕೆಲಸಗಳಲ್ಲಿ ಉತ್ತಮ ಯೋಜನೆಗಳಿಗೆ ಸಹಕರಿಸುತ್ತದೆ ಮತ್ತು ಸಂವಹನ ಕೌಶಲ್ಯವನ್ನು ಸುಧಾರಿಸುತ್ತದೆ.
ಗುರುವಾರ (ಗುರುಗಳ ದಿನ):
ಗುರುವಾರವು ಬೃಹಸ್ಪತಿ (ಗುರು) ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ. ಇದು ನೆಮ್ಮದಿ, ತೃಪ್ತಿ ಮತ್ತು ಬಯಸಿದ ಫಲಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಶುಕ್ರವಾರವು ಶ್ರೀ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಉತ್ತಮ ದಿನ. ಈ ದಿನ ಮಿಶ್ರಿತ ಬಣ್ಣಗಳ ಬಟ್ಟೆಗಳನ್ನು ಧರಿಸುವುದು ಶುಭ – ಉದಾಹರಣೆಗೆ, ಹಸಿರು ಮತ್ತು ಕೆಂಪು ಮಿಶ್ರಿತ ಬಟ್ಟೆಗಳು. ಬಿಳಿ ಬಣ್ಣವೂ ಸಹ ಈ ದಿನಕ್ಕೆ ಸೂಕ್ತವಾಗಿದೆ. ಮಿಶ್ರಿತ ಹೂವುಗಳನ್ನು ಅಮ್ಮನಿಗೆ ಅರ್ಪಿಸುವುದರಿಂದ ಸಮೃದ್ಧಿ ಮತ್ತು ಮಂಗಳಕರ ಫಲಗಳು ದೊರೆಯುತ್ತವೆ.
ಶನಿವಾರ (ಶನಿಯ ದಿನ):
ಶನಿವಾರದಂದು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ನೀಲಿ ಬಣ್ಣದ ಪ್ರಭಾವ ಹೆಚ್ಚಿರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಉತ್ತಮ. ನೀಲಿಯೊಂದಿಗೆ ಕಪ್ಪು ಬಣ್ಣವನ್ನು ಧರಿಸುವುದರಿಂದ ದುಷ್ಟ ಶಕ್ತಿಗಳ ಕಾಟ ಕಡಿಮೆಯಾಗುತ್ತದೆ ಮತ್ತು ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಭಾನುವಾರ (ಸೂರ್ಯನ ದಿನ):
ಭಾನುವಾರವು ಸೂರ್ಯ ದೇವರಿಗೆ ಮೀಸಲಾದ ದಿನ. ಈ ದಿನ ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಾನಸಿಕ ತೃಪ್ತಿ ಸಿಗುತ್ತದೆ. ಇದು ಮನೆಯಲ್ಲಿ ನಡೆಯುವ ಚರ್ಚೆಗಳು ಮತ್ತು ಸಂಭಾಷಣೆಗಳು ಸಕಾರಾತ್ಮಕವಾಗಿ ಅಂತ್ಯಗೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಬಟ್ಟೆಗಳ ಬಣ್ಣ, ಹೂವುಗಳ ಬಣ್ಣ, ಮನೆಯ ಬಣ್ಣ ಹೀಗೆ ನಾವು ನೋಡುವ ಪ್ರತಿಯೊಂದು ಬಣ್ಣವೂ ನಮ್ಮ ಮನಸ್ಥಿತಿ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಪ್ರಾಚೀನ ನಂಬಿಕೆ. ಈ ಬಣ್ಣಗಳ ಮಹತ್ವವನ್ನು ನಂಬುವವರಿಗೆ ಮಾತ್ರ ಇದರ ಪ್ರಯೋಜನಗಳು ಲಭ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ