ನಿತೀಶ್ ರಾಣಾ ‘ಔಟ್’ ಗೊಂದಲ: ಐಪಿಎಲ್ ನಿಯಮ ಏನು ಹೇಳುತ್ತೆ? – Kannada News | IPL 2026: Nitish rana out controversy

IPL 2026: ಮೇ 5 ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ರೋಚಕ ಹಣಾಹಣಿ ಕೇವಲ ಆಟದಿಂದ ಮಾತ್ರವಲ್ಲದೆ, ಮೈದಾನದಲ್ಲಿ ನಡೆದ ಅನಿರೀಕ್ಷಿತ ಘಟನೆಗಳಿಂದಲೂ ಸುದ್ದಿಯಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಮ್ಯಾಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ ಅವರ ‘ವಿಚಿತ್ರ ಔಟ್’ ಪ್ರಮುಖ ಚರ್ಚೆಯ ವಿಷಯವಾಯಿತು.

ನಿತೀಶ್ ರಾಣಾ ಔಟ್ ಗೊಂದಲ:

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ 10ನೇ ಓವರ್‌ನಲ್ಲಿ ನಿತೀಶ್ ರಾಣಾ ಅವರ ವಿಕೆಟ್ ದೊಡ್ಡ ಗೊಂದಲಕ್ಕೆ ಕಾರಣವಾಯಿತು. ನೂರ್ ಅಹಮದ್ ಅವರ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದ ರಾಣಾ ಫೈನ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು. ಆದರೆ ಅದೇ ಸಮಯದಲ್ಲಿ ಸ್ಟಂಪ್ ಮೇಲಿನ ಬೇಲ್ಸ್ ಕೆಳಗೆ ಬಿದ್ದಿದ್ದವು.

  •  ಗೊಂದಲವೇನು?: ನಿತೀಶ್ ರಾಣಾ ಅವರು ‘ಹಿಟ್ ವಿಕೆಟ್’ ಆಗಿದ್ದಾರೆಯೇ ಅಥವಾ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಗ್ಲೌಸ್ ತಾಗಿ ಬೇಲ್ಸ್ ಬಿದ್ದಿದೆಯೇ ಎಂಬ ಪ್ರಶ್ನೆ ಎದ್ದಿತು.
  • ನಿಯಮ ಏನು ಹೇಳುತ್ತದೆ?: ಎಂಸಿಸಿ ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟರ್ ಅಥವಾ ಕೀಪರ್ ಸ್ಟಂಪ್‌ಗೆ ತಾಗದಿದ್ದರೂ ಬೇಲ್ಸ್ ಬಿದ್ದರೆ ಅದನ್ನು ‘ಬಾಹ್ಯ ಕಾರಣ’ (ಗಾಳಿ ಅಥವಾ ಕಂಪನ) ಎಂದು ಪರಿಗಣಿಸಲಾಗುತ್ತದೆ.

ಈ ಪಂದ್ಯದ ವೇಳೆ ದೆಹಲಿಯಲ್ಲಿ ಬಲವಾದ ಗಾಳಿ ಬೀಸುತ್ತಿದ್ದರಿಂದ, ಬೇಲ್ಸ್ ಬಿದ್ದಿರುವುದು ಸ್ಪಷ್ಟವಾಗಿತ್ತು. ಇದನ್ನು  ಪರಿಗಣಿಸಿ ಅಂಪೈರ್‌ಗಳು ನಿತೀಶ್ ರಾಣಾ ಅವರಿಗೆ ‘ಔಟ್’ ನೀಡಿದರು.

ಇದನ್ನೂ ಓದಿ: IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ

ಐಪಿಎಲ್ ನಿಯಮ ಹೇಳುವುದೇನು?

  • ಕ್ಯಾಚ್‌ಗೆ ಮೊದಲ ಆದ್ಯತೆ: ಬ್ಯಾಟರ್ ಹೊಡೆದ ಚೆಂಡು ಫೀಲ್ಡರ್ ಕೈ ಸೇರುವ ಮೊದಲು ವಿಕೆಟ್ ಕೀಪರ್ ಅಥವಾ ಬೇರೆ ಯಾವುದೋ ಕಾರಣಕ್ಕೆ (ಗಾಳಿ ಇತ್ಯಾದಿ) ಬೇಲ್ಸ್ ಕೆಳಗೆ ಬಿದ್ದರೂ, ಅದು ಕ್ಯಾಚ್ ಹಿಡಿಯುವ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ. ಬ್ಯಾಟರ್ ಚೆಂಡನ್ನು ಹೊಡೆದಾಗ ಅದು ನೇರವಾಗಿ ಫೀಲ್ಡರ್ ಕೈ ಸೇರಿದರೆ ಅದು ‘ಕ್ಯಾಚ್ ಔಟ್’ ಎಂದೇ ಪರಿಗಣಿಸಲ್ಪಡುತ್ತದೆ.
  • ವಿಕೆಟ್ ಬೀಳುವುದು ಮತ್ತು ಔಟ್: ವಿಕೆಟ್ ಕೀಪರ್ ಬೇಲ್ಸ್ ಬೀಳಿಸುವುದು ಕೇವಲ ‘ಸ್ಟಂಪಿಂಗ್’ ಅಥವಾ ‘ರನ್ ಔಟ್’ಗೆ ಮಾತ್ರ ಅನ್ವಯಿಸುತ್ತದೆ. ಆದರೆ ಕ್ಯಾಚ್ ಎಂಬುದು ಬ್ಯಾಟರ್ ಮತ್ತು ಫೀಲ್ಡರ್ ನಡುವಿನ ಕ್ರಿಯೆ. ಹಾಗಾಗಿ ವಿಕೆಟ್ ಬಿದ್ದಿದ್ದರೂ ಕ್ಯಾಚ್ ಹಿಡಿದರೆ ಬ್ಯಾಟರ್ ಔಟ್ ಎಂದು ಪರಿಗಣಿಸಲಾಗುತ್ತದೆ.
  •  ಒಂದು ವಿನಾಯಿತಿ: ಒಂದು ವೇಳೆ ವಿಕೆಟ್ ಕೀಪರ್ ಬೇಲ್ಸ್ ಬೀಳಿಸಿದ ನಂತರ, ಆ ಚೆಂಡು ವಿಕೆಟ್ ಅಥವಾ ಬಿದ್ದಿರುವ ಬೇಲ್ಸ್‌ಗೆ ತಗುಲಿ ನಂತರ ಫೀಲ್ಡರ್ ಕೈ ಸೇರಿದರೆ, ಅದನ್ನು ‘ನಾಟ್ ಔಟ್’ ಎಂದು ಘೋಷಿಸಲಾಗುತ್ತದೆ. ಏಕೆಂದರೆ ಚೆಂಡು ನೆಲಕ್ಕೆ ಅಥವಾ ಬೇರೆ ವಸ್ತುವಿಗೆ ತಗುಲಿದೆ ಎಂದು ಪರಿಗಣಿಸಬಹುದು. ಆದರೆ ಬೇಲ್ಸ್ ಅಥವಾ ಸ್ಟಂಪ್ ಬಿದ್ದಾಗ, ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿದರೆ ಅದು ಖಂಡಿತ ಔಟ್.

ನಿತೀಶ್ ರಾಣಾ ಪ್ರಕರಣದಲ್ಲಿ ಸಂಜು ಸ್ಯಾಮ್ಸನ್ ಗ್ಲೌಸ್ ತಗುಲಿ ಬೇಲ್ಸ್ ಬಿದ್ದಿದ್ದರೂ ಸಹ, ರಾಣಾ ಹೊಡೆದ ಚೆಂಡು ನೇರವಾಗಿ ಫೀಲ್ಡರ್ ಕೈ ಸೇರಿದ ಕಾರಣ ಅವರು ‘ಕ್ಯಾಚ್ ಔಟ್’ ಆಗಿದ್ದಾರೆ. ಬೇಲ್ಸ್​ ಬಿದ್ದಿರುವುದು ಇಲ್ಲಿ ಯಾವುದೇ ಪರಿಣಾಮ ಬೀರದು.

Source link

ಚುನಾವಣೆ ಮುಗಿದಿದೆ, ಶೀಘ್ರದಲ್ಲೇ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಬೇಕು: ಪರಮೇಶ್ವರ್ ಖಡಕ್ ಮಾತು – Kannada News | End Leadership Confusion Soon, Focus on Governance: Minister G Parameshwara to Congress High Command

ಬೆಂಗಳೂರು, ಮೇ 6: ಕರ್ನಾಟಕದ ನಾಯಕತ್ವ ಗೊಂದಲಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದು, ಚುನಾವಣೆಗಳು ಮುಗಿದಿರುವುದರಿಂದ ಈ ವಿಷಯಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮರ್ಪಕ ಆಡಳಿತ ನೀಡುವುದು ಮುಖ್ಯವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು. ಹಲವಾರು ನಾಯಕರು ಮುಂಚೂಣಿಯಲ್ಲಿ ಇರುವಾಗ ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈಗ ಚುನಾವಣೆಗಳ ಗಜಿಬಿಜಿ ಇಲ್ಲದಿರುವುದರಿಂದ ಹೈಕಮಾಂಡ್ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಮತ್ತು ಕೈಗೊಳ್ಳಬೇಕು ಎಂದು ಪರಮೇಶ್ವರ್ ಹೇಳಿದರು.

ಆಂತರಿಕ ಭಿನ್ನಾಭಿಪ್ರಾಯಗಳು ಆಡಳಿತದ ಮೇಲೆ ದುಷ್ಪರಿಣಾಮ ಬೀರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಕಳೆದ 40 ವರ್ಷಗಳಲ್ಲಿ ಇಂತಹ ಅನೇಕ ಸಂದರ್ಭಗಳನ್ನು ನೋಡಿದ್ದೇನೆ ಎಂದು ಅವರು ಸ್ಮರಿಸಿದರು. ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ನಿರ್ಧಾರಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ಸಭೆ ಸೇರಿ ತೆಗೆದುಕೊಳ್ಳುತ್ತಾದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆ ಸಾವಿನ ಸುದ್ದಿಗೆ ಮಗ ಜೀವಾ ಶಾಕ್; ಬಿಗಿದಪ್ಪಿ ಅತ್ತ ನಟ – Kannada News | Jiiva’s Father R.B. Choudary Dies in Accident; Actor Shocked by Sudden Loss

ಸೂಪರ್ ಗುಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಆರ್.ಬಿ. ಚೌಧರಿ (RB Choudary) ಅವರು ರಾಜಸ್ಥಾನದ ಉದಯಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತಮಿಳಿನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರ ಸಾವಿನ ಸುದ್ದಿ ಕೇಳಿ ಇಡೀ ದಕ್ಷಿಣ ಭಾರತದ ಚಿತ್ರರಂಗ ಆಘಾತಕ್ಕೊಳಗಾಗಿದೆ. ಅವರ ಪುತ್ರ, ನಟ ಜೀವಾ ತಂದೆಯ ಸಾವಿನ ಸುದ್ದಿ ಕೇಳಿ ಶಾಕ್​​ಗೆ ಒಳಗಾದರು.

1. ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್​​ಬಿ ಚೌಧರಿ ನಿಧನ
2. ರಾಜಸ್ಥಾನದ ಉದಯಪುರದಲ್ಲಿ ನಡೆದ ರಸ್ತೆ ಅಪಘಾತ 
3. ತಂದೆ ಸಾವಿನಿಂದ ಮಗ, ನಟ ಜೀವಾಗೆ ಶಾಕ್ 

ಚೌಧರಿ ಅವರು ಈ ರೀತಿ ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸರಲಿಲ್ಲ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೀವಾ ಅವರು ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ. ಆಪ್ತ ಬಳಗದವರು ಜೀವ ಅವರಿಗೆ ಸಾಂತ್ವನ ಹೇಳಲು ಬಂದರು. ಆಗ ಅವರನ್ನು ಜೀವಾ ಅಪ್ಪಿಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ತಂದೆಯ ಮಾರ್ಗದರ್ಶನದಲ್ಲೇ ಬೆಳೆದಿದ್ದ ಜೀವ ಅವರಿಗೆ ಈ ಸಾವು ದೊಡ್ಡ ಸಾಕಷ್ಟು ನೋವನ್ನು ನೀಡಿದೆ.

ಚೌಧರಿ ಕೇವಲ ನಿರ್ಮಾಪಕ ಮಾತ್ರ ಆಗಿರಲಿಲ್ಲ. ಜೀವಾ ಹಾಗೂ ಜಿತನ್ ರಮೇಶ್ ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ತಂದೆಯಾಗಿ ತಮ್ಮ ಕರ್ತವ್ಯ ಮಾಡಿದ್ದರು. ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜೀವಾ ಅವರಿಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿ, ಚಿತ್ರರಂಗದಲ್ಲಿ ಅವರೊಂದು ಸ್ಥಾನ ಕಂಡುಕೊಳ್ಳುವಂತೆ ಮಾಡಿದ್ದರು. ವೃತ್ತಿಪರತೆಯ ಜೊತೆಗೆ ಮಗನ ಪ್ರತಿಭೆಯ ಮೇಲೆ ಅವರು ಅಪಾರ ನಂಬಿಕೆ ಇಟ್ಟಿದ್ದರು. ತಂದೆಯನ್ನು ಕಳೆದುಕೊಂಡ ಜೀವಾ ಈಗ ಅನಾಥಪ್ರಜ್ಞೆಯಲ್ಲಿ ಮುಳುಗಿದ್ದಾರೆ.

1988ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಆರ್.ಬಿ. ಚೌಧರಿ, ಕನ್ನಡ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿಚಿತ್ರಗಳನ್ನು ನೀಡಿದವರು. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದ್ದ ಅವರು, ಹಲವು ತಾಂತ್ರಿಕ ವರ್ಗದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದರು. ಏಳು ಬಾರಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ಅವರ ಹೆಚ್ಚುಗಾರಿಗೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

ಚೌಧರಿ ಅವರ ಪತ್ನಿ ಮಹಜಬೀನ್ ಹಾಗೂ ನಾಲ್ವರು ಗಂಡು ಮಕ್ಕಳಾದ ಸುರೇಶ್, ಜೀವನ್, ಜೀವಾಮತ್ತು ಜಿತನ್ ರಮೇಶ್ ಅವರನ್ನು ಅಗಲಿದ್ದಾರೆ. ಈ ಶೋಕದ ಸಮಯದಲ್ಲಿ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಜೀವಾ ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ ರೀತಿ ಕರ್ನಾಟಕದಲ್ಲಿ ಗೆಲ್ಲೋದು ಯಾರು? ಉತ್ತರ ಕೊಟ್ಟ ರಾಗಿಣಿ ದ್ವಿವೇದಿ – Kannada News | Ragini Dwivedi talks about Thalapathy Vijay election win and Darshan Kichcha Sudeep Yash

ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ಅವರು ಚುನಾವಣೆ ಗೆದ್ದು ಸರ್ಕಾರ ರಚಿಸುತ್ತಿದ್ದಾರೆ. ಅವರ ಈ ಗೆಲುವು ಹಲವರಿಗೆ ಸ್ಫೂರ್ತಿ ಆಗಿದೆ. ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಕೂಡ ವಿಜಯ್ ರೀತಿ ಬೇರೆ ಯಾವ ನಟರು ಚುನಾವಣೆಯಲ್ಲಿ ನಿಲ್ಲಬಹುದು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ (Darshan), ಸುದೀಪ್, ಯಶ್ ಮುಂತಾದವರ ಹೆಸರು ಹೇಳಿಬರುತ್ತಿದೆ. ‘ಮನಸ್ಸು ಮಾಡಿದರೆ ಯಾರು ಏನು ಬೇಕಾದರೂ ಮಾಡಬಹುದು. ಈ ಎಲ್ಲ ನಟರಿಗೂ ಸಾಮರ್ಥ್ಯ ಇದೆ. ಒಳ್ಳೆಯ ಮನಸ್ಸಿನಿಂದ ಮಾಡಿದರೆ ಸಾಧ್ಯ ಆಗುತ್ತದೆ’ ಎಂದು ರಾಗಿಣಿ ದ್ವಿವೇದಿ (Ragini Dwivedi) ಹೇಳಿದ್ದಾರೆ. ರಾಜಕೀಯದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ರಾಗಿಣಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hindu Rituals: ಆರತಿಯ ಸಮಯದಲ್ಲಿ ಕರ್ಪೂರ ಆರಿಹೋದರೆ ಅಶುಭವೇ? ಜ್ಯೋತಿಷ್ಯ ತಜ್ಞರು ಹೇಳುವುದೇನು? – Kannada News | Aarti’s Deep Spiritual Meaning: Hindu Rituals, Camphor, and Pooja Significance

ಪೂಜೆಯಲ್ಲಿ ಆರತಿಯ ಮಹತ್ವImage Credit source: Pinterest

ಹಿಂದೂ ಧರ್ಮದ ಪ್ರತಿಯೊಂದು ಸಂಪ್ರದಾಯದ ಹಿಂದೆ ಒಂದು ವಿಶೇಷವಾದ ಅರ್ಥ ಮತ್ತು ಉದ್ದೇಶವಿರುತ್ತದೆ. ಪೂಜೆಯ ವಿವಿಧ ಹಂತಗಳಾದ ಧೂಪ, ದೀಪ ಮತ್ತು ನೈವೇದ್ಯಗಳ ನಂತರ ಸಮರ್ಪಿಸುವ ಆರತಿಯು ಅತ್ಯಂತ ಪ್ರಮುಖವಾದುದು. ಈ ಆರತಿಯ ಬೆಳಕು ಕೇವಲ ದೃಶ್ಯವಲ್ಲ, ಅದು ಭಕ್ತರ ಪಾಲಿಗೆ ದೇವರ ದಿವ್ಯ ಸಾನ್ನಿಧ್ಯದ ಸಂಕೇತವಾಗಿದೆ. ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ಆರತಿಯ ಜ್ಯೋತಿಯು ಮನುಷ್ಯನಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಅಲ್ಲದೆ, ಇದು ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಿ, ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ನೆರವಾಗುತ್ತದೆ.

ಆರತಿಯಲ್ಲಿ ಕರ್ಪೂರದ ಬಳಕೆ:

ಆರತಿಯಲ್ಲಿ ವಿಶೇಷವಾಗಿ ಕರ್ಪೂರದ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕರ್ಪೂರವು ಉರಿದಾಗ ಸಂಪೂರ್ಣವಾಗಿ ಕರಗಿ ಹೋಗುತ್ತದೆ ಮತ್ತು ಯಾವುದೇ ಬೂದಿಯನ್ನು ಉಳಿಸುವುದಿಲ್ಲ. ಇದು ಮನುಷ್ಯನ ಅಹಂಕಾರ ಮತ್ತು ಲೌಕಿಕ ಆಸೆಗಳ ವಿನಾಶವನ್ನು ಸೂಚಿಸುತ್ತದೆ. ಅಂದರೆ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ದೇವರಲ್ಲಿ ಲೀನವಾಗಬೇಕು ಎಂಬುದು ಇದರ ಹಿಂದಿನ ತತ್ವ. ವೈಜ್ಞಾನಿಕ ದೃಷ್ಟಿಯಿಂದಲೂ ಕರ್ಪೂರದ ಪರಿಮಳವು ವಾತಾವರಣದಲ್ಲಿರುವ ಕ್ರಿಮಿಕೀಟಗಳನ್ನು ನಾಶಪಡಿಸಿ, ಪರಿಸರವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಆರತಿ ಬೆಳಗುವ ಕ್ರಮ:

ಆರತಿ ಬೆಳಗುವ ಕ್ರಮಕ್ಕೂ ಅದರದ್ದೇ ಆದ ಶಾಸ್ತ್ರವಿದೆ. ಸಾಮಾನ್ಯವಾಗಿ ಶುದ್ಧವಾದ ಪಾತ್ರೆಯಲ್ಲಿ ಕರ್ಪೂರವನ್ನು ಬೆಳಗಿ, ದೇವರ ಪಾದಗಳು, ಹೊಕ್ಕುಳಿನ ಭಾಗ ಮತ್ತು ಮುಖದ ಬಳಿ ಚಲಿಸುವ ಮೂಲಕ ಇಡೀ ವಿಗ್ರಹಕ್ಕೆ ಬೆಳಗಲಾಗುತ್ತದೆ. ಅಗತ್ಯವಿದ್ದರೆ ಮಧ್ಯದಲ್ಲಿ ಜ್ಯೋತಿ ಆರಿಹೋಗದಂತೆ ಹೆಚ್ಚುವರಿ ಕರ್ಪೂರವನ್ನು ಸಿದ್ಧವಾಗಿಟ್ಟುಕೊಳ್ಳುವುದು ರೂಢಿ. ಪೂಜೆಯ ಕೊನೆಯಲ್ಲಿ ಈ ದಿವ್ಯ ಜ್ಯೋತಿಯನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುವ ಮೂಲಕ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಾಗುತ್ತದೆ. ಸಂಪ್ರದಾಯಗಳಲ್ಲಿ ಏಕ ಆರತಿ ಮತ್ತು ಪಂಚ ಆರತಿ ಎಂಬ ವಿಧಗಳಿದ್ದು, ಪಂಚ ಆರತಿಯು ಪಂಚಭೂತಗಳ ಸಂಕೇತವೆಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಆರತಿಯ ಸಮಯದಲ್ಲಿ ಕರ್ಪೂರ ಆರಿಹೋದರೆ ಅಶುಭವೇ?

ಅನೇಕ ಭಕ್ತರು ಆರತಿಯ ಸಮಯದಲ್ಲಿ ಕರ್ಪೂರವು ಮಧ್ಯದಲ್ಲೇ ಆರಿಹೋದರೆ ಅಥವಾ ತಟ್ಟೆಯಿಂದ ಕೆಳಗೆ ಬಿದ್ದರೆ ಅದು ಅಶುಭವೆಂದು ಆತಂಕಕ್ಕೊಳಗಾಗುತ್ತಾರೆ. ಆದರೆ, ವಾಸ್ತವದಲ್ಲಿ ಇದು ಕೇವಲ ಗಾಳಿಯ ವೇಗ, ಕರ್ಪೂರದ ಗುಣಮಟ್ಟ ಅಥವಾ ತಾಂತ್ರಿಕ ಕಾರಣಗಳಿಂದ ಸಂಭವಿಸುವ ಘಟನೆಯೇ ಹೊರತು ದೈವಿಕ ಕೋಪವಲ್ಲ. ಅಂತಹ ಸಂದರ್ಭಗಳಲ್ಲಿ ಗಾಬರಿಗೊಳ್ಳದೆ, ಮತ್ತೆ ಭಕ್ತಿಯಿಂದ ಕರ್ಪೂರವನ್ನು ಹಚ್ಚಿ ಆರತಿಯನ್ನು ಪೂರ್ಣಗೊಳಿಸುವುದು ಸೂಕ್ತ. ದೇವರಿಗೆ ಬೇಕಿರುವುದು ಭಕ್ತನ ಭಕ್ತಿಯೇ ಹೊರತು ಆಕಸ್ಮಿಕವಾಗಿ ನಡೆಯುವ ಇಂತಹ ಘಟನೆಗಳಲ್ಲ ಎಂಬುದು ನೆನಪಿರಲಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:01 am, Wed, 6 May 26

Source link

ಸಂಜು ಸ್ಯಾಮ್ಸನ್ ಸ್ವಾರ್ಥಿನಾ? ಇಲ್ಲಿದೆ ಉತ್ತರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಈ ಮೂಲಕ ಸಿಎಸ್​ಕೆ ತಂಡವನ್ನು 17.3 ಓವರ್​ಗಳಲ್ಲಿ ಗೆಲುವಿ ಗುರಿ ಮುಟ್ಟಿಸಿದರು. ಈ ಭರ್ಜರಿ ಬ್ಯಾಟಿಂಗ್​ಗೆ ಸಂಜು ಸ್ಯಾಮ್ಸನ್​​​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಉತ್ತಮ ವಾಗಿ ಬ್ಯಾಟಿಂಗ್ ಮಾಡಿರುವುದು ಖುಷಿ ನೀಡಿದೆ. ಅದರಲ್ಲೂ ಸಿಎಸ್​ಕೆ ತಂಡ ಗೆದ್ದಿರುವುದು ಸಂತಸ ತಂದಿದೆ ಎಂದರು. ಇತ್ತ ಸಂಜು ಮಾತನಾಡುತ್ತಿದ್ದಂತೆ ಅತ್ತ ಸ್ಟೇಡಿಯಂನಲ್ಲಿ ಚೇಟ್ಟಾ ಘೋಷವಾಕ್ಯ ಮೊಳಗಲಾರಂಭಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್, ಜನರು ನನ್ನನ್ನು ಪ್ರೀತಿಯಿಂದ ಚೇಟ್ಟಾ ಎಂದು ಕರೆಯುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ನನಗೆ ‘ಸಂಜು’ ಎಂದು ಕರೆಸಿಕೊಳ್ಳುವುದೇ ಹೆಚ್ಚು ಇಷ್ಟ ಎಂದರು.

ಇನ್ನು ಮೈದಾನದಲ್ಲಿ ಸಂಜು ಸ್ಯಾಮ್ಸನ್ ಅವರ ಶಾಂತ ಸ್ವಭಾವದ ಬಗ್ಗೆ ಕೇಳಿದಾಗ, “ನಾನು ಯಾವಾಗಲೂ ಹೀಗೆಯೇ ಇರುತ್ತೇನೆ. ಈಗ ನಾನು ಹೆಚ್ಚು ಸಮಯ ಕ್ರೀಸ್‌ನಲ್ಲಿ ಇರುವುದರಿಂದ ಜನರಿಗೆ ನಾನು ತುಂಬಾ ಶಾಂತವಾಗಿ ಕಾಣಿಸುತ್ತಿದ್ದೇನೆ. ಪಂದ್ಯ ಆಡದೆ ಹೊರಗಿದ್ದಾಗಲೂ ನಾನು ಅಷ್ಟೇ ಶಾಂತವಾಗಿರುತ್ತೇನೆ” ಎಂದು ನಗೆ ಬೀರಿದರು.

ಅಲ್ಲದೆ, ಕಳೆದ 3-5 ವರ್ಷಗಳಿಂದ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಸಣ್ಣ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡಿರುವುದು ರನ್ ಗಳಿಸಲು ಸಹಕಾರಿಯಾಗಿದೆ ಎಂದು ಇದೇ ವೇಳೆ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಸ್ವಾರ್ಥಿನಾ?

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ಗೆ ಶತಕ ಬಾರಿಸುವ ಎಲ್ಲಾ ಅವಕಾಶಗಳಿದ್ದವು. ಆದರೆ ಅವರು ವೈಯಕ್ತಿಕ ಮೈಲಿಗಲ್ಲಿಗೆ ಆಸೆ ಪಡಲಿಲ್ಲ. “ಶತಕಗಳು ಯಾವಾಗಲೂ ವಿಶೇಷವೇ. ಆದರೆ ಅದನ್ನು ಪಡೆಯಲು ನಾನು ನಿಸ್ವಾರ್ಥ ಆಟವನ್ನು ಬಿಟ್ಟು ಸ್ವಾರ್ಥಿಯಾಗಬೇಕಿತ್ತು. ನನ್ನ ಜೊತೆಗಾರ ಕಾರ್ತಿಕ್ ಶರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.

‘ನನಗೆ ಒಂದು ಸಿಂಗಲ್ ಕೊಡು, ನಾನು ಶತಕ ಪೂರೈಸುತ್ತೇನೆ’ ಎಂದು ಅವರಿಗೆ ಹೇಳಲು ನನ್ನ ಮನಸ್ಸು ಒಪ್ಪಲಿಲ್ಲ. ಪಂದ್ಯವನ್ನು ಗೆಲ್ಲಿಸುವುದು ಮತ್ತು ಅಜೇಯನಾಗಿ ಉಳಿಯುವುದು ಶತಕಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ” ಎಂದು ಹೇಳುವ ಮೂಲಕ ಸಂಜು ಸ್ಯಾಮ್ಸನ್ ತಾನೆಂತಹ ನಿಸ್ವಾರ್ಥಿ ಎಂಬುದನ್ನು ತೆರೆದಿಟ್ಟಿದ್ದಾರೆ.

ಈ ಪಂದ್ಯದಲ್ಲಿ ಅಜೇಯ 87 ರನ್ ಬಾರಿಸಿದ್ದ ಸಂಜು ಸ್ಯಾಮ್ಸನ್ ಮನಸ್ಸು ಮಾಡಿದ್ದರೆ ಶತಕ ಪೂರೈಸಬಹುದಿತ್ತು. ಆದರೆ ಶತಕದತ್ತ ಮುಖ ಮಾಡದೇ ಸಂಜು ಕೊನೆಯ ಹಂತದಲ್ಲಿ ಕಾರ್ತಿಕ್ ಶರ್ಮಾಗೆ ಹೆಚ್ಚಿನ ಸ್ಟ್ರೈಕ್ ನೀಡಿದ್ದರು. ಅವರ ಈ ನಡೆಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ  ಪಂದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸಂಜು, “ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ ನಿಧಾನವಾಗಿ ಆಡಿದರೂ ಪರವಾಗಿಲ್ಲ, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸಿ ಪಂದ್ಯವನ್ನು ನಮ್ಮತ್ತ ತಿರುಗಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಆಟದ ಯೋಜನೆ ಸ್ಪಷ್ಟವಾಗಿತ್ತು ಮತ್ತು ಅದು ಇಂದು ಕೈಹಿಡಿಯಿತು” ಎಂದರು.

ಇದನ್ನೂ ಓದಿ: IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ

ಸಂಜು ಸ್ಯಾಮ್ಸನ್ ಅವರ ಈ ಯೋಜಿತ ಬ್ಯಾಟಿಂಗ್​ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ತಂಡದ ಪ್ಲೇಆಫ್ ಆಸೆ ಕೂಡ ಜೀವಂತವಾಗಿದೆ. ಅಂದರೆ ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್​ ಆಡುವುದು ಬಹುತೇಕ ಖಚಿತ.

Source link

ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ – Kannada News | West Bengal: BJP Set to Form Govt on May 9, Suvendu Adhikari Leads CM Race

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ(West Bengal)ದ ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಸಾಧಿಸಿರುವ ಬಿಜೆಪಿ, ಈಗ ಸರ್ಕಾರ ರಚನೆಯ ಕಸರತ್ತನ್ನು ತೀವ್ರಗೊಳಿಸಿದೆ. ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಘೋಷಿಸಿರುವಂತೆ ಮೇ 9ರಂದು ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಮೇ 9 ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನವಾಗಿದ್ದು, ಅಂದೇ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಲು ನಿರ್ಧರಿಸಿದೆ. ಇದು ಬಂಗಾಳದ ಸಾಂಸ್ಕೃತಿಕ ಮತ್ತು ರಾಜಕೀಯ ಅಸ್ಮಿತೆಯನ್ನು ಬೆಸೆಯುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಹೆಸರು ಮುಂಚೂಣಿಯಲ್ಲಿದೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದ ಸುವೇಂದು, ಈಗ ಭವಾನಿಪುರದಲ್ಲೂ ಮಮತಾ ಅವರ ವಿರುದ್ಧ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಸರ್ಕಾರ ರಚನೆಯ ಕುರಿತು ಚರ್ಚಿಸಲು ಸುವೇಂದು ಅಧಿಕಾರಿ ಮತ್ತು ಇತರ ಉನ್ನತ ನಾಯಕರು ಮಂಗಳವಾರ ನವದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಬಿಜೆಪಿಯ ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಬಂಗಾಳಕ್ಕೆ ಹೊಸ ಯುಗದ ಆರಂಭ ಎಂದು ಹೇಳಿದ್ದಾರೆ. ಸೇಡು ತೀರಿಸಿಕೊಳ್ಳುವ ರಾಜಕೀಯದ ಬದಲು ಅಭಿವೃದ್ಧಿ ಆಧಾರಿತ ಬದಲಾವಣೆಯತ್ತ ಗಮನ ಹರಿಸಲು ಅವರು ಕರೆ ನೀಡಿದ್ದಾರೆ.

ಮತ್ತಷ್ಟು ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?

ಮತ್ತೊಂದೆಡೆ, ಕೇವಲ 80 ಸ್ಥಾನಗಳಿಗೆ ಕುಸಿದಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 100 ಸ್ಥಾನಗಳಲ್ಲಿ ವಂಚನೆಯಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಅವರು ದೂರಿದ್ದಾರೆ. ಆದರೆ, ಬಿಜೆಪಿ ಈ ಆರೋಪಗಳನ್ನು ಅಲ್ಲಗಳೆದಿದ್ದು, ಮಮತಾ ಅವರ ರಾಜಕೀಯ ನಿವೃತ್ತಿ ಕಾಲ ಬಂದಿದೆ ಎಂದು ಸುವೇಂದು ಅಧಿಕಾರಿ ಲೇವಡಿ ಮಾಡಿದ್ದಾರೆ.

17ನೇ ವಿಧಾನಸಭೆಯ ಅವಧಿ ಮೇ 7ಕ್ಕೆ ಕೊನೆಗೊಳ್ಳಲಿದ್ದು, ಮೇ 9ರಂದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಬಂಗಾಳದ ಜನತೆ ನೀಡಿದ ಈ ಭರ್ಜರಿ ಜನಾದೇಶವು ಪೂರ್ವ ಭಾರತದಲ್ಲಿ ಬಿಜೆಪಿಯ ಬಲವರ್ಧನೆಗೆ ನಾಂದಿ ಹಾಡಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು ಎಂಬ ಅಧಿಕೃತ ಘೋಷಣೆ ಹೊರಬೀಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧುರಂಧರ್ ಗೆಲುವಿನ ಎಫೆಕ್ಟ್: ನೋರಾ ಫತೇಹಿ ಜೊತೆ ಡ್ಯಾನ್ಸ್ ಮಾಡಿದ ರಾಕೇಶ್ ಬೇಡಿ – Kannada News | Dhurandhar actor Rakesh Bedi dances with Nora Fatehi and shares video

ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ‘ಧುರಂಧರ್’ (Dhurandhar) ಚಿತ್ರದಲ್ಲಿ ಜಮೀಲ್ ಜಮಾಲಿ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಅವರು ತಮ್ಮ ನೃತ್ಯದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಬಾಲಿವುಡ್‌ನ ಡ್ಯಾನ್ಸಿಂಗ್ ಸೆನ್ಸೇಷನ್ ನೋರಾ ಫತೇಹಿ (Nora Fatehi) ಜೊತೆ ರಾಕೇಶ್ ಬೇಡಿ ಹೆಜ್ಜೆ ಹಾಕುತ್ತಿದ್ದಾರೆ. ‘ಧುರಂಧರ್’ ಗೆಲುವಿನ ಬಳಿಕ ರಾಕೇಶ್ ಬೇಡಿ (Rakesh Bedi) ಅವರಿಗೆ ಇಂಥ ಹಲವು ಆಫರ್​ಗಳು ಬರುತ್ತಿವೆ. ಹೊಸ ಹಾಡಿನ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ರಾಕೇಶ್ ಬೇಡಿ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ನೋರಾ ಫತೇಹಿ ಜೊತೆಗಿನ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ, ‘ಇಂದು ನಾನು ಭಾರತದ ದೊಡ್ಡ ಸೆನ್ಸೇಷನ್, ಅದ್ಭುತ ನಟಿ ಮತ್ತು ಅದ್ಭುತ ಡ್ಯಾನ್ಸರ್ ನೋರಾ ಫತೇಹಿ ಜೊತೆ ಶೂಟಿಂಗ್ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ನೋರಾ ಫತೇಹಿ ಕೂಡ ರಾಕೇಶ್ ಬೇಡಿ ಅವರ ನೃತ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಸರ್, ನಿಮ್ಮ ಜೊತೆ ಕೆಲಸ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಿಮ್ಮ ಡ್ಯಾನ್ಸ್ ಅದ್ಭುತವಾಗಿದೆ. ನಿಮ್ಮ ನೃತ್ಯದ ವೇಗಕ್ಕೆ ಮ್ಯಾಚ್ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಜನರಿಗೆ ಈ ಹಾಡನ್ನು ತೋರಿಸಲು ನಾನು ಕಾಯುತ್ತಿದ್ದೇನೆ’ ಎಂದು ನೋರಾ ಹೇಳಿದ್ದಾರೆ.

ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ರಾಕೇಶ್ ಬೇಡಿ, ‘ಈಕೆ ಎಷ್ಟು ಸುಳ್ಳು ಹೇಳುತ್ತಾಳೆ ನೋಡಿ’ ಎಂದು ಕಾಲೆಳೆದಿದ್ದಾರೆ. ಕೂಡಲೇ ನಕ್ಕ ನೋರಾ, ‘ಇಲ್ಲ ಸರ್, ನಾನು ನಿಜ ಹೇಳುತ್ತಿದ್ದೇನೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಮದುವೆ ಸಮಾರಂಭಗಳಲ್ಲಿ ಈ ಹಾಡು ಖಂಡಿತವಾಗಿಯೂ ಸದ್ದು ಮಾಡಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

‘ಧುರಂಧರ್’ ಚಿತ್ರದಲ್ಲಿ ಪಾಕಿಸ್ತಾನಿ ರಾಜಕಾರಣಿ ಜಮೀಲ್ ಜಮಾಲಿ ಪಾತ್ರ ನಿರ್ವಹಿಸಿದ್ದ ರಾಕೇಶ್ ಬೇಡಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಚಿತ್ರದ ಯಶಸ್ಸಿನ ನಂತರ ಅವರು ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ನೋರಾ ಫತೇಹಿ ಅವರಂತಹ ಖ್ಯಾತ ನರ್ತಕಿಯ ಜೊತೆ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 Kannada News Live: ವಚನಾನಂದ ಶ್ರೀಗೆ ಜಾಮೀನು ಮಂಜೂರು; ಕಾಂಗ್ರೆಸ್​​ ಕೇರಳದಲ್ಲಿ ಗದ್ದುಗೆ, ತಮಿಳುನಾಡಿನಲ್ಲಿ ವಿಜಯ್ ಜೊತೆ ಮೈತ್ರಿ! – Kannada News | TV9 Kannada News Live: Dog Bite Epidemic, Swamiji Bail and Key Political Shifts

ಬೆಂಗಳೂರು, ಮೇ.6; ದೇಶದ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಂಡು ಬಂದಿದೆ. ಪಂಚ ರಾಜ್ಯಗಳ ಚುನಾವಣೆಯ ನಂತರ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿಸಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಮಳೆಯಾಗುವ ಸಾಧ್ಯ ಇದೆ ಎಂದು ಹೇಳಲಾಗಿದೆ. ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಿಲಿಕಾನ್ ಸಿಟಿ ಸೇರಿದಂತೆ ಕರ್ನಾಟಕದಾದ್ಯಂತ ಬೇಸಿಗೆಯ ತಾಪಮಾನ ಏರುತ್ತಿದ್ದಂತೆ ನಾಯಿಗಳ ವರ್ತನೆಯಲ್ಲಿ ಆಕ್ರಮಣಶೀಲತೆ ಕಂಡುಬರುತ್ತಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ವರದಿಯಾಗಿದೆ. ಇದರೆಲ್ಲದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಚನಾನಂದ ಶ್ರೀಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು:

ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹಾಸ್ಟೆಲ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಮಠದಲ್ಲಿದ್ದ ಮೂವರು ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಚನಾನಂದ ಶ್ರೀಗಳು ಹಾಗೂ ಅವರ ಬೆಂಬಲಿಗರ ವಿರುದ್ಧ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಬಂಧನದ ಭೀತಿಯಲ್ಲಿದ್ದ ಶ್ರೀಗಳು ಏಪ್ರಿಲ್ 21ರಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಾಲಯವು ಶ್ರೀಗಳಿಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು. ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು.

ತಮಿಳುನಾಡಿನಲ್ಲಿ ಹೊಸ ಮೈತ್ರಿ: ದಶಕದ ಬಳಿಕ ಕೇರಳಂನಲ್ಲಿ ‘ಕೈ’ ಪರ್ವ

ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ರಾಜಕೀಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಿವೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಚೊಚ್ಚಲ ಚುನಾವಣಾ ಯಶಸ್ಸು ಮತ್ತು ಕೇರಳದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಪುನರಾಗಮನ ಈ ಬಾರಿಯ ವಿಶೇಷ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಭರ್ಜರಿ ಜಯ ಗಳಿಸಿದ್ದರೂ, ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆಯಿತ್ತು. ಇದೀಗ ಕಾಂಗ್ರೆಸ್ ತನ್ನ 5 ಸ್ಥಾನಗಳ ಬೆಂಬಲವನ್ನು ಘೋಷಿಸಿದ್ದು, ವಿಜಯ್ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಪ್ರತಿಯಾಗಿ ಕಾಂಗ್ರೆಸ್ 2 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಕೇರಳದಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ (LDF) ಪತನಗೊಂಡಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದೆ. ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧವಿದ್ದ ಆಡಳಿತ ವಿರೋಧಿ ಅಲೆ, ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟುಗಳು ಎಲ್‌ಡಿಎಫ್ ಸೋಲಿಗೆ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮಿತಿಮೀರಿದ ಬೀದಿ ನಾಯಿ ಹಾವಳಿ: ಕೇವಲ 4 ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನಾಯಿ ಕಡಿತ, 25 ಸಾವು

ರಾಜ್ಯದಲ್ಲಿ ಮಿತಿಮೀರಿದ ಬೀದಿ ನಾಯಿ ಹಾವಳಿ

ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಬೇಸಿಗೆಯ ಬಿಸಿಲಿಗೆ ನಾಯಿಗಳ ವರ್ತನೆಯಲ್ಲಿ ತೀವ್ರ ಆಕ್ರಮಣಶೀಲತೆ ಕಂಡುಬರುತ್ತಿದೆ. ಕಳೆದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು, 25 ಜನರು ರೇಬೀಸ್ ಸೇರಿದಂತೆ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ‘ಹೈ ಅಲರ್ಟ್’ ಘೋಷಿಸಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ವಿರೋಧಿ ಲಸಿಕೆ (ARV) ಮತ್ತು ಇಮ್ಯುನೊಗ್ಲೋಬ್ಯುಲಿನ್ ಲಸಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:32 am, Wed, 6 May 26

Source link

ಇಸ್ರೋ ಕ್ಯಾಂಪಸ್ ಮೇಲೆ ಹಾರಾಡಿತು ಡ್ರೋನ್: ಭದ್ರತೆಗೆ ಭಾರೀ ಆತಂಕ – Kannada News | Security Breach at ISRO ISITE Campus: Drone Spotted in No Drone Zone, FIR Filed in Bengaluru

ಸಾಂದರ್ಭಿಕ ಚಿತ್ರ (AI)Image Credit source: MediaForge AI

ಬೆಂಗಳೂರು, ಮೇ 6: ದೇಶದ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಒಂದಾದ ಬೆಂಗಳೂರಿನ (Bengaluru) ಇಸ್ರೋ ಐಸೈಟ್ (ISRO ISITE) ಕ್ಯಾಂಪಸ್ ಬಳಿ ಡ್ರೋನ್ ಹಾರಾಟ ನಡೆಸಿರುವುದು ಈಗ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದು, ಈ ಸಂಬಂಧ ಎಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಖ್ಯಾಂಶಗಳು

  • ಮೇ 2ರಂದು ಬೆಳಿಗ್ಗೆ ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ ಸುಮಾರು 12 ಸೆಕೆಂಡ್‌ಗಳ ಕಾಲ ಹಾರಾಡಿದ ಡ್ರೋನ್.
  • ಅನುಮತಿ ಇಲ್ಲದೆ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿರುವುದು ಪತ್ತೆ.
  • ಆಂತರಿಕ ಭದ್ರತೆಯ ದೃಷ್ಟಿಯಿಂದ ಇಸ್ರೋ ಅಧಿಕಾರಿಗಳಿಂದ ಪೊಲೀಸರಿಗೆ ದೂರು ಸಲ್ಲಿಕೆ.

ಇಸ್ರೋ ಐಸೈಟ್ ಕ್ಯಾಂಪಸ್ ಬಳಿ ನಡೆದಿದ್ದೇನು?

ಸಿಐಎಸ್‌ಎಫ್ (CISF) ಯುನಿಟ್‌ನ ಸಬ್ ಇನ್ಸ್‌ಪೆಕ್ಟರ್ ಅವರು ನೀಡಿರುವ ದೂರಿನ ಪ್ರಕಾರ, ಮೇ 2, 2026ರಂದು ಬೆಳಿಗ್ಗೆ ಸುಮಾರು 8:16 ಗಂಟೆಗೆ ಬೆಂಗಳೂರಿನ ಇಸ್ರೋ ಐಸೈಟ್ ಕ್ಯಾಂಪಸ್ ಮೇಲ್ಭಾಗದಲ್ಲಿ ಈ ಡ್ರೋನ್ ಹಾರಾಟ ಕಂಡುಬಂದಿದೆ. ‘ನೋ ಡ್ರೋನ್ ಝೋನ್’ ಎಂದು ಗುರುತಿಸಲ್ಪಟ್ಟಿರುವ ಈ ಪ್ರದೇಶದಲ್ಲಿ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ನಡೆಸಿದೆ. ಸುಮಾರು 10 ರಿಂದ 12 ಸೆಕೆಂಡುಗಳ ಕಾಲ ಹಾರಾಟ ನಡೆಸಿದ ಡ್ರೋನ್, ತದನಂತರ ಕಣ್ಮರೆಯಾಗಿದೆ.

ಭದ್ರತೆಗೆ ಭಾರೀ ಆತಂಕ

ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸಂವೇದನಾಶೀಲ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಅನುಮತಿ ಇಲ್ಲದೆ ವೈಮಾನಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇಂತಹ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿರುವುದು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ

ನಿಷೇಧಿತ ಪ್ರದೇಶವೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಅಥವಾ ಕಾನೂನು ಉಲ್ಲಂಘಿಸಿ ಡ್ರೋನ್ ಹಾರಿಸಿದ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಐಎಸ್‌ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಸದ್ಯ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡ್ರೋನ್ ಹಾರಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 am, Wed, 6 May 26

Source link

Exit mobile version