ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ! – Kannada News | Bengaluru: Womans Skeleton Discovered in Havanur Layout Home After 1.5 Years

ಬೆಂಗಳೂರು, ಆಗಸ್ಟ್ 08: ಹಾವನೂರು ಬಡಾವಣೆ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಆಶ್ಚರ್ಯ ಮೂಡಿಸಿದೆ. ಮೃತಪಟ್ಟು ಸುಮಾರು ಒಂದೂವರೆ ವರ್ಷದ ಬಳಿಕ ಅಸ್ಥಿಪಂಜರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಹಾವನೂರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಾಕ್ಷಾಯಿಣಿ ಎಂಬ ಮಹಿಳೆ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆಯೇ ದಾಕ್ಷಾಯಿಣಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದ ಮನೆಯ ಬಾಗಿಲು ಸಂಜೆ ತೆರೆದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಳವು ಮಾಡುವ ಉದ್ದೇಶದಿಂದ ಯಾರೋ ಮನೆಗೆ ನುಗ್ಗಿರಬಹುದು ಎಂದು ಶಂಕಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಬಾತ್‌ರೂಂನಲ್ಲಿ ದಾಕ್ಷಾಯಿಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಸದ್ಯ ಅಸ್ಥಿಪಂಜರವನ್ನು ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿರಲಿದೆ ಟೀಮ್ ಇಂಡಿಯಾದ ಹೊಸ ಫಿಟ್​ನೆಸ್ ಟೆಸ್ಟ್? ಇಲ್ಲಿದೆ ಮಾಹಿತಿ – Kannada News | How is Team India’s New Fitness Test? Here is the Complete details

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್​ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. ಇತ್ತೀಚಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳ ವೇಳೆ ಆಟಗಾರರಲ್ಲಿ ಕಂಡುಬಂದ ಮೈದಾನದ ನಿಧಾನಗತಿ, ಕಳಪೆ ಫೀಲ್ಡಿಂಗ್ ಹಾಗೂ ಅತಿಯಾದ ಸ್ನಾಯು ಸೆಳೆತದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಫಿಟ್​ನೆಸ್​ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ನೂತನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಈ ಹೊಸ ಫಿಟ್​ನೆಸ್​ ನಿಯಮಾವಳಿಗಳನ್ನು ರೂಪಿಸಿದೆ. ಇದುವರೆಗೆ ಇದ್ದ ಯೋ-ಯೋ (Yo-Yo) ಟೆಸ್ಟ್ ಮಾದರಿಯನ್ನು ಬದಿಗೊತ್ತಿ, ಇನ್ನೂ ಕಠಿಣವಾದ ಎರಡು ಹಂತದ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಏನಿದು ಹೊಸ ಫಿಟ್​ನೆಸ್ ಸೂತ್ರ?

ಇನ್ಮುಂದೆ ಭಾರತ ತಂಡಕ್ಕೆ ಆಯ್ಕೆಯಾಗಬೇಕಾದರೆ ಆಟಗಾರರು ಬ್ಯಾಕ್-ಟು-ಬ್ಯಾಕ್ ಎರಡು ಕಠಿಣ ದೈಹಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆ ಟೆಸ್ಟ್​ಗಳೆಂದರೆ…

  1. ಬ್ರಾಂಕೋ ಟೆಸ್ಟ್
  2. 2K ರನ್ ಟೆಸ್ಟ್​

ಹೇಗಿರಲಿದೆ ಫಿಟ್​ನೆಸ್ ಟೆಸ್ಟ್?

ಬ್ರಾಂಕೋ ಟೆಸ್ಟ್: ಇದು ರಗ್ಬಿ ಆಟಗಾರರು ಬಳಸುವ ಅತ್ಯಂತ ಕಠಿಣ ರನ್ನಿಂಗ್ ಟೆಸ್ಟ್ ಆಗಿದೆ.

  • ವಿಧಾನ: ಆಟಗಾರರು ಒಂದೇ ಸಮನೆ 20 ಮೀಟರ್, 40 ಮೀಟರ್ ಮತ್ತು 60 ಮೀಟರ್ ದೂರಕ್ಕೆ ಓಡಿ, ಮತ್ತೆ ವಾಪಸ್ ಬರಬೇಕು. ಇದರಲ್ಲಿ ಆಟಗಾರನು ಆರಂಭಿಕ ಗೆರೆಯಿಂದ ಹೊರಟು ಮೊದಲು 20 ಮೀಟರ್ ಓಡಿ ವಾಪಸ್ ಬರಬೇಕು, ತಕ್ಷಣವೇ 40 ಮೀಟರ್ ಓಡಿ ವಾಪಸ್ ಬರಬೇಕು ಮತ್ತು ಕೊನೆಯದಾಗಿ 60 ಮೀಟರ್ ಓಡಿ ವಾಪಸ್ ಬರಬೇಕಾಗುತ್ತದೆ. ಹೀಗೆ ಒಂದು ಸೆಟ್​ನಲ್ಲಿ ಒಟ್ಟು 240 ಮೀಟರ್‌ಗಳ ಓಟವನ್ನು ಪೂರ್ಣಗೊಳಿಸಬೇಕು.
  • ಯಾಕಾಗಿ ಈ ವಿಧಾನ: ಇಲ್ಲಿ ಪ್ರತಿ 20, 40, ಮತ್ತು 60 ಮೀಟರ್ ತಲುಪಿದಾಗಲೂ ವೇಗವನ್ನು ತಗ್ಗಿಸಿ, ತಕ್ಷಣ ತಿರುಗಿ, ಮತ್ತೆ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಆಟಗಾರರ ಶ್ವಾಸಕೋಶದ ಸಾಮರ್ಥ್ಯ ಮತ್ತು ಕಾಲಿನ ಸ್ನಾಯುಗಳ ಬಲ ತೀವ್ರವಾಗಿ ಪರೀಕ್ಷಿಸಲ್ಪಡುತ್ತದೆ.
  • ದೂರ: ಹೀಗೆ ಒಟ್ಟು 5 ಸೆಟ್‌ಗಳಲ್ಲಿ 1,200 ಮೀಟರ್ ದೂರವನ್ನು ಓಡಬೇಕು.
  • ಸಮಯದ ಮಿತಿ: ಈ ಹಿಂದೆ ಇದ್ದ 6 ನಿಮಿಷಗಳ ಸಮಯವನ್ನು ಕಡಿತಗೊಳಿಸಲಾಗಿದ್ದು, ಈಗ ಕೇವಲ 5 ನಿಮಿಷ 15 ಸೆಕೆಂಡ್‌ನಿಂದ 5 ನಿಮಿಷ 20 ಸೆಕೆಂಡ್ ಒಳಗಡೆ ಇದನ್ನು ಪೂರ್ಣಗೊಳಿಸುವುದು ಕಡ್ಡಾಯ.

2 ಕಿಲೋಮೀಟರ್ ಓಟ: ಬ್ರಾಂಕೋ ಟೆಸ್ಟ್ ಮುಗಿಸಿದ ತಕ್ಷಣವೇ ಆಟಗಾರರು ಈ ರನ್ನಿಂಗ್ ಟೆಸ್ಟ್‌ನಲ್ಲಿ ಭಾಗವಹಿಸಬೇಕು.

  • ವಿಧಾನ: ಟ್ರ್ಯಾಕ್‌ನಲ್ಲಿ ಸತತವಾಗಿ 2 ಕಿಲೋಮೀಟರ್ ದೂರವನ್ನು ಓಡಬೇಕು.
  • ಯಾಕಾಗಿ ಈ ವಿಧಾನ: ಬ್ರಾಂಕೊ ಟೆಸ್ಟ್ ಆಟಗಾರನ ತಕ್ಷಣದ ವೇಗ ಮತ್ತು ಚುರುಕುತನವನ್ನು ಪರೀಕ್ಷಿಸಿದರೆ, 2 ಕಿಲೋಮೀಟರ್ ಓಟವು ಆಟಗಾರನ ಒಟ್ಟಾರೆ ಸಾಮರ್ಥ್ಯವನ್ನು ಅಳೆಯುತ್ತದೆ. ಅಂದರೆ, ಸುದೀರ್ಘ ಸಮಯದವರೆಗೆ ಆಟಗಾರನು ದಣಿಯದೆ ಮೈದಾನದಲ್ಲಿ ಹೇಗೆ ಶ್ರಮ ಹಾಕಬಲ್ಲ ಎಂಬುದನ್ನು ಇದು ತೋರಿಸುತ್ತದೆ.
  • ದೂರ: 2 ಕಿಲೋ ಮೀಟರ್ ಓಟ.
  • ಸಮಯದ ಮಿತಿ: ಆಟಗಾರರು 2 ಕಿಲೋ ಮೀಟರ್​ ಓಟದ ದೂರವನ್ನು 9 ರಿಂದ 10 ನಿಮಿಷಗಳ ಒಳಗಾಗಿ ಕ್ರಮಿಸಬೇಕು.

ಹೊಸ ನಿಯಮದ ಪ್ರಮುಖ ಅಂಶಗಳು:

  • ಯಾರಿಗೂ ವಿನಾಯಿತಿ ಇಲ್ಲ: ಹಿರಿಯ ಆಟಗಾರರು ಅಥವಾ ಸ್ಟಾರ್ ಆಟಗಾರರು ಎಂಬ ಕಾರಣಕ್ಕೆ ಯಾರಿಗೂ ಫಿಟ್​ನೆಸ್ ಟೆಸ್ಟ್‌ನಿಂದ ರಿಯಾಯಿತಿ ಸಿಗುವುದಿಲ್ಲ.
  • ತೇರ್ಗಡೆ ಕಡ್ಡಾಯ: ಟೆಸ್ಟ್‌ನಲ್ಲಿ ಫೇಲ್ ಆದ ಆಟಗಾರರನ್ನು ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಆಯ್ಕೆಗೆ ಪರಿಗಣಿಸುವುದಿಲ್ಲ.
  • ಸರಣಿಗೂ ಮುನ್ನ ಟೆಸ್ಟ್: ಪ್ರತಿ ಅಂತರರಾಷ್ಟ್ರೀಯ ಸರಣಿ ಆರಂಭವಾಗುವ ಮುನ್ನ ಆಟಗಾರರು ಈ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಸಿಸಿಐನ ಈ ಕಠಿಣ ಹೆಜ್ಜೆಯು ಟೀಮ್ ಇಂಡಿಯಾವನ್ನು ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಫಿಟ್ ಮತ್ತು ಬಲಿಷ್ಠ ತಂಡವನ್ನಾಗಿ ರೂಪಿಸುವ ಸ್ಪಷ್ಟ ಮುನ್ಸೂಚನೆಯಾಗಿದೆ. ಮುಂಬರುವ ಸರಣಿಗಳಲ್ಲಿ ಕೇವಲ ಆಟಗಾರರ ರನ್ ಮತ್ತು ವಿಕೆಟ್‌ಗಳು ಮಾತ್ರವಲ್ಲದೆ, ಅವರ ದೈಹಿಕ ಸಾಮರ್ಥ್ಯವೂ ತಂಡದಲ್ಲಿನ ಸ್ಥಾನವನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಬುಮ್ರಾ ಮುಂಬೈ ಇಂಡಿಯನ್ಸ್ ಆಟಗಾರ: ಅಪರೂಪಕ್ಕೊಮ್ಮೆ ಭಾರತದ ಪರ ಆಡ್ತಾರೆ!

ಸ್ಟಾರ್ ಆಟಗಾರರಾಗಿದ್ದರೂ ಫಿಟ್ನೆಸ್ ಇಲ್ಲದಿದ್ದರೆ ಹೊರಗುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ, ಪ್ರತಿಯೊಬ್ಬ ಆಟಗಾರನೂ ಈಗ ಮೈದಾನದ ಪ್ರದರ್ಶನದಷ್ಟೇ ತಮ್ಮ ದೈಹಿಕ ಫಿಟ್​ನೆಸ್​ ಮೇಲೂ ತೀವ್ರ ನಿಗಾ ವಹಿಸಬೇಕಾಗಿದೆ.

Source link

ಭಾರತಕ್ಕೂ ಮುನ್ನ ವಿದೇಶದಲ್ಲಿ ‘ರಾಮಾಯಣ’ ರಿಲೀಸ್; ಲೀಕ್ ಭೀತಿಯಲ್ಲಿ ಫ್ಯಾನ್ಸ್ ಅಪ್ಸೆಟ್ – Kannada News | Ramayana Release Date Controversy: Indian Fans Concerned Over 2 Day Delayed Release After International Premiere

ಬಾಲಿವುಡ್ ನಟ ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ಬಿಡುಗಡೆ ಕುರಿತು ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ನೀಡಿರುವ ಹೇಳಿಕೆ ಇದೀಗ ಭಾರತೀಯ ಸಿನಿಮಾ ಪ್ರೇಮಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ರಾಮಾಯಣ’ ಸಿನಿಮಾ ಭಾರತಕ್ಕಿಂತ ಎರಡು ದಿನ ಮುಂಚಿತವಾಗಿಯೇ ವಿದೇಶಗಳಲ್ಲಿ ತೆರೆಕಾಣಲಿದೆ.

ವಿದೇಶದಲ್ಲಿ ನವೆಂಬರ್ 6, ಭಾರತದಲ್ಲಿ ನವೆಂಬರ್ 8

ನಿರ್ಮಾಪಕ ನಮಿತ್ ಮಲ್ಹೋತ್ರಾ ತಿಳಿಸಿರುವ ಪ್ರಕಾರ, ‘ರಾಮಾಯಣ’ ಚಿತ್ರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 6 ಶುಕ್ರವಾರದಂದು ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ನವೆಂಬರ್ 8ರ ಭಾನುವಾರ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ವಿದೇಶಗಳಲ್ಲಿ ಶುಕ್ರವಾರ ಸಿನಿಮಾ ರಿಲೀಸ್ ಮಾಡುವ ಪದ್ಧತಿ ಇರುವುದರಿಂದ ಈ ನಿರ್ಧಾರ ತಳೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲೀಕ್ ಭೀತಿ: ಅಪ್ಸೆಟ್ ಆದ ಭಾರತೀಯ ಅಭಿಮಾನಿಗಳು

ವಿದೇಶದಲ್ಲಿ ಎರಡು ದಿನ ಮುಂಚಿತವಾಗಿ ಸಿನಿಮಾ ರಿಲೀಸ್ ಆಗುತ್ತಿರುವುದು ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರದ ದೃಶ್ಯಗಳು ಎಚ್‌ಡಿ ರೂಪದಲ್ಲಿ ಲೀಕ್ ಆಗಬಹುದು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಪಾಯ್ಲರ್‌ಗಳು ಹರಿದಾಡಬಹುದು ಎಂಬ ಭಯ ಫ್ಯಾನ್ಸ್‌ನಲ್ಲಿದೆ. ಈ ಕಾರಣಕ್ಕೆ ಪ್ರಪಂಚದಾದ್ಯಂತ ಒಂದೇ ದಿನ ಸಿನಿಮಾವನ್ನು ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ನಿರ್ಮಾಪಕರಲ್ಲಿ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಮಹಾರಾಷ್ಟ್ರ ಸಿಎಂ

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಕೇವಲ ಐದೇ ದಿನಗಳಲ್ಲಿ 100 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿದೆ.  ಈ ಚಿತ್ರದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡಿದ್ದಾರೆ. ರಣಬೀರ್ ರಾಮ, ಸಾಯಿ ಪಲ್ಲವಿ ಸೀತೆ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೋರಾದ ಖಾತೆ ಹಂಚಿಕೆ ಕಸರತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸಿಎಂ ಡಿಕೆ ಶಿವಕುಮಾರ್ ಗಂಭೀರ ಚರ್ಚೆ – Kannada News | Karnataka Cabinet Portfolio Allocation: CM DK Shivakumar Holds Talks With Siddaramaiah

ಬೆಂಗಳೂರು, ಆಗಸ್ಟ್ 8: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ನಂತರ ಈಗ ಖಾತೆ ಹಂಚಿಕೆ ಕಸರತ್ತು ಜೋರಾಗಿದೆ. ಪ್ರಬಲ ಖಾತೆಗಳಿಗಾಗಿ ಸಚಿವರ ಮಧ್ಯೆ ಜಿದ್ದಾಜಿದ್ದಿ ಶುರುವಾಗಿದ್ದು, ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹಾಲಿ ಸಿಎಂ ಡಿಕೆ ಶಿವಕುಮಾರ್‌ಗೆ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ ನಂತರ, ಡಿಕೆ ಶಿವಕುಮಾರ್ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ.

ಹೊಸದಾಗಿ ಸಚಿವರಾದವರು ಇಂಥದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿದ್ದರೆ, ಮೊದಲ ಸುತ್ತಿನಲ್ಲಿ ಸಚಿವರಾದವರು ತಮ್ಮ ಖಾತೆ ಬದಲಾವಣೆಗೆ ಬೇಡಿಕೆ ಇಡುತ್ತಿದ್ದಾರೆ. ಬಸವರಾಜ್ ರಾಯರೆಡ್ಡಿ ಹಣಕಾಸು ಖಾತೆ ಕೇಳಿದ್ದರೆ, ಹೆಚ್.ಸಿ. ಬಾಲಕೃಷ್ಣ ಸಣ್ಣ ನೀರಾವರಿ ಇಲಾಖೆಯ ಮೇಲೆ ಕಣ್ಣಿಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗಾಗಿ ಕೆ.ಹೆಚ್. ಮುನಿಯಪ್ಪ, ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಸಚಿವ ಮುನಿಯಪ್ಪ ರಾಹುಲ್ ಗಾಂಧಿ ಎದುರು ತಮ್ಮ ಖಾತೆ ಬದಲಾವಣೆಗೆ ಮನವಿ ಮಾಡಿಕೊಂಡಿದ್ದಾರೆ.

ಯಾವ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಜಮೀರ್, ಬಾಲಕೃಷ್ಣ ಹೇಳಿದ್ದಾರೆ. ಖಾತೆ ಹಂಚಿಕೆಗೆ ಸಮಯಾವಕಾಶವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೈಕಮಾಂಡ್‌ನ ಮಧ್ಯಪ್ರವೇಶದಿಂದ ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್: ಮೃತಪಟ್ಟವರ ಖಾತೆಗೆ ಹಣ, 86 ಲಕ್ಷ ರೂ. ರಿಕವರಿ – Kannada News | Koppal Gruhalakshmi Fraud: 26,000 Duplicate Accounts, Multi Crore Scam Exposed

ಕೊಪ್ಪಳ, ಆ.08: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಾಗೂ ಗೋಲ್ ಮಾಲ್ ನಡೆದಿರುವುದು ಬಯಲಿಗೆ ಬಂದಿದೆ. ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೂ ಸತತವಾಗಿ ಹಣ ಜಮೆಯಾಗುತ್ತಿದ್ದು, ಇದನ್ನು ಗಮನಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿ ತನಿಖೆ ನಡೆಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿದೆ. ಈ ಕುರಿತು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಸತ್ಯಗಳನ್ನು ಹೊರಹಾಕಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 7,085 ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು. ಈ ಪೈಕಿ ಹಲವು ಕುಟುಂಬದವರು ತಮ್ಮ ಮನೆಯಲ್ಲಿ ಸದಸ್ಯರು ಮೃತಪಟ್ಟಿರುವ ವಿಷಯವನ್ನು ಇಲಾಖೆಗೆ ತಿಳಿಸಿರಲಿಲ್ಲ. ಗ್ಯಾರಂಟಿ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮರಣ ಪ್ರಮಾಣ ಪತ್ರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.

ಮೃತರ ಖಾತೆಯಿಂದ ಹಣ ಡ್ರಾ ಮಾಡಿದ್ದ ಮತ್ತು ಡ್ರಾ ಮಾಡದೇ ಉಳಿದಿದ್ದ ಖಾತೆಗಳನ್ನು ಪರಿಶೀಲಿಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಮೃತರ ಖಾತೆಗಳ ಮೂಲಕ ಸುಮಾರು 2 ರಿಂದ 3 ಕೋಟಿ ರೂಪಾಯಿಗಳಷ್ಟು ಹಣ ತಪ್ಪು ಖಾತೆಗಳಿಗೆ ತಲುಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಸುಮಾರು 26,000 ಮಲ್ಟಿಪಲ್ (ಬಹುವಿಧ) ಖಾತೆಗಳು ಪತ್ತೆಯಾಗಿದ್ದು, ಕೆಲವು ಫಲಾನುಭವಿಗಳ ಖಾತೆಗಳು ಹೊರ ರಾಜ್ಯಗಳಲ್ಲೂ ಇರುವುದು ಕಂಡುಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,13,500 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು 63 ಕೋಟಿ ರೂಪಾಯಿ ಜಮೆಯಾಗುತ್ತಿದೆ. ಇದೀಗ ಸರ್ಕಾರ ಸೂಚನೆಯಂತೆ ಪ್ರತಿಯೊಂದು ಖಾತೆಯನ್ನೂ ತೀವ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ದಕ್ಷಿಣ ಕನ್ನಡದಲ್ಲೂ ಗೃಹಲಕ್ಷ್ಮಿ ಅಕ್ರಮ ಬಯಲು:

ಕೊಪ್ಪಳದಲ್ಲಿ ನಡೆದಂತೆ ಇಂತಹ ಘಟನೆ ಈ ಹಿಂದೆ ಮಂಗಳೂರಿನಲ್ಲೂ ಕೂಡ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಪತ್ತೆಯಾಗಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣವೇ ಜಾಗೃತಗೊಂಡು ಹಣ ಮರುಪಡೆಯಲು ಹಾಗೂ ಖಾತೆಗಳನ್ನು ಸ್ಥಗಿತಗೊಳಿಸಲು ಸಮರೋಪಾದಿ ಕ್ರಮಕ್ಕೆ ಮುಂದಾಗಿತ್ತು. ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ಭರತ್ ಮುಂಡೋಡಿ ಅವರು, ಮೃತ ಫಲಾನುಭವಿಗಳ ಖಾತೆಗೆ ಜಮೆಯಾದ ಹಣವನ್ನು ತಕ್ಷಣವೇ ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಸಭೆಯಲ್ಲಿ ಮತ್ತೊಂದು ಗಂಭೀರ ವ್ಯತ್ಯಾಸ ಕಂಡುಬಂದಿದ್ದು, ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ‘ಮೃತಪಟ್ಟವರು’ ಎಂದು ಗುರುತಿಸಲಾಗಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ಮುಂದಿನ ಪರಿಶೀಲನಾ ಸಭೆಯಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು! – Kannada News | Bengaluru Mysuru Expressway Accident: Kerala KSRTC Bus Flips, Two Dead

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ

ರಾಮನಗರ, ಆಗಸ್ಟ್ 08: ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇನಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿದ್ದ ಸೈನ್ ಬೋರ್ಡ್‌ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ (Ramanagar) ತಾಲೂಕಿನ ಅವರಗೆರೆ ಗೇಟ್ ಬಳಿ ಈ ದುರ್ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಬಸ್ ಹೆದ್ದಾರಿಯಲ್ಲೇ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಕೇರಳದಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್, ರಾಮನಗರ ತಾಲೂಕಿನ ಅವರಗೆರೆ ಗೇಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಸೈನ್ ಬೋರ್ಡ್‌ಗೆ (ದಿಕ್ಸೂಚಿ ಫಲಕ) ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣ ಬಸ್ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಪರಿಣಾಮವಾಗಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಹಾಗೂ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಂಚಾರ ಅಸ್ತವ್ಯಸ್ತ

ಭೀಕರ ಅಪಘಾತದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.ವಿಷಯ ತಿಳಿಯುತ್ತಿದ್ದಂತೆ ಬಿಡದಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಭೀಕರ ಅಪಘಾತದ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಲ್ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಕ್ರಿಕೆಟ್ ಲೋಕವೇ ಫಿದಾ! – Kannada News | Will Jacks takes stunning catch in the Hundred 2026

ಲಾರ್ಡ್ಸ್ ಮೈದಾನದಲ್ಲಿ ನಡೆದ ಲಂಡನ್ ಸ್ಪಿರಿಟ್ ಮತ್ತು ಎಂಐ ಲಂಡನ್ ನಡುವಿನ ರೋಚಕ ಹೈ-ವೋಲ್ಟೇಜ್ ಪಂದ್ಯವು ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಫೀಲ್ಡಿಂಗ್ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಎಂಐ ಲಂಡನ್ ತಂಡದ ಆಲ್‌ರೌಂಡರ್ ವಿಲ್ ಜಾಕ್ಸ್ ಬೌಂಡರಿ ಗೆರೆಯ ಬಳಿ ಪ್ರದರ್ಶಿಸಿದ ಅಪ್ರತಿಮ ಕೌಶಲ್ಯ ಹಾಗೂ ಚುರುಕುತನಕ್ಕೆ ಈಗ ಇಡೀ ಕ್ರೀಡಾಲೋಕವೇ ತಲೆಬಾಗಿದೆ.

ಪಂದ್ಯದ ದಿಕ್ಕನ್ನೇ ಬದಲಿಸಿದ ಆ ಒಂದು ಕ್ಯಾಚ್!

ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್ ತಂಡದ ಆರಂಭಿಕ ಆಟಗಾರ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಬಿರುಸಿನ ಅರ್ಧಶತಕ ಬಾರಿಸಿ ಎಂಐ ಲಂಡನ್ ತಂಡಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದ್ದರು. ಅಲ್ಲದೆ ಇನ್ನಿಂಗ್ಸ್‌ನ 49ನೇ ಎಸೆತದಲ್ಲಿ ಲೆಗ್-ಸ್ಪಿನ್ನರ್ ನಾಥನ್ ಸೌಥರ್ ಎಸೆತವನ್ನು ಪ್ರಿಟೋರಿಯಸ್ ಲಾಂಗ್-ಆನ್ ಬೌಂಡರಿಯತ್ತ ಜೋರಾಗಿ ಸಿಕ್ಸರ್‌ಗೆಂದು ಅಟ್ಟಿದರು.

ಬೌಂಡರಿ ಲೈನ್‌ನಲ್ಲಿ ನಿಂತಿದ್ದ ವಿಲ್ ಜಾಕ್ಸ್ ಗಾಳಿಯಲ್ಲಿ ಅದ್ಭುತವಾಗಿ ಜಂಪ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ತಮ್ಮ ದೇಹದ ಸಮತೋಲನ ತಪ್ಪಿ ಬೌಂಡರಿ ಗೆರೆಯ ಆಚೆಗೆ ಬೀಳುತ್ತಿರುವುದನ್ನು ಅರಿತ ಅವರು, ತಕ್ಷಣವೇ ಸಮಯಪ್ರಜ್ಞೆ ಮೆರೆದು ಚೆಂಡನ್ನು ಮೈದಾನದ ಒಳಕ್ಕೆ ಚೆಂಡನ್ನು ಎಸೆದರು. ಅಷ್ಟಕ್ಕೆ ನಿಲ್ಲದ ಜಾಕ್ಸ್, ತಕ್ಷಣವೇ ಮೈದಾನದ ಒಳಕ್ಕೆ ಬಂದು ಡೈವ್ ಹೊಡೆದು ಎಡಗೈಯಿಂದ ಸಿಂಗಲ್ ಹ್ಯಾಂಡ್ ಮೂಲಕ ಅದ್ಭುತವಾಗಿ ಚೆಂಡನ್ನು ಹಿಡಿದರು.

ವಿಲ್ ಜಾಕ್ಸ್ ಅವರ ಈ ಅಸಾಧಾರಣ ಫೀಲ್ಡಿಂಗ್ ಪ್ರದರ್ಶನವನ್ನು ಕಂಡ ಕ್ರೀಡಾಭಿಮಾನಿಗಳು ಮತ್ತು ಕಾಮೆಂಟೇಟರ್‌ಗಳು ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾಚ್‌ನ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದನ್ನು ದಿ ಹಂಡ್ರೆಡ್ ಟೂರ್ನಿಯ “ಕ್ಯಾಚ್ ಆಫ್ ದಿ ಸೀಸನ್” ಎಂದು ಕರೆಯಲಾಗುತ್ತಿದೆ.

ಎಂಐ ಲಂಡನ್‌ಗೆ ಭರ್ಜರಿ ಜಯ:

ಪ್ರಿಟೋರಿಯಸ್ ವಿಕೆಟ್ ಪತನದ ನಂತರ ಲಂಡನ್ ಸ್ಪಿರಿಟ್ ತಂಡವನ್ನು 160 ರನ್‌ಗಳಿಗೆ ನಿಯಂತ್ರಿಸುವಲ್ಲಿ ಎಂಐ ಲಂಡನ್ ಯಶಸ್ವಿಯಾಯಿತು. ಬಳಿಕ ಬ್ಯಾಟಿಂಗ್ ಮಾಡಿದ ಎಮ್‌ಐ ಲಂಡನ್ ತಂಡ, ಸಿಕಂದರ್ ರಾಝ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಿಕೋಲಸ್ ಪೂರನ್ ಅವರ ಸಮಯೋಚಿತ ಆಟದ ನೆರವಿನಿಂದ 6 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಎಂಐ ಲಂಡನ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

Source link

Spiritual Significance: ಮಂತ್ರದ ಕೊನೆಯಲ್ಲಿ ‘ಸ್ವಾಹಾ’, ‘ನಮಃ’ ಎಂದೇಕೆ ಹೇಳುತ್ತಾರೆ? ಇದರ ಹಿಂದಿದೆ ಆಳವಾದ ಅರ್ಥ ಇಲ್ಲಿದೆ – Kannada News | Why Do Mantras End With Swaha, Namah ? Know Their Spiritual Significance

ಸ್ವಾಹಾ, ನಮಃ ಪದ ಬಳಕೆಯ ಅರ್ಥImage Credit source: tirthpurohit

ಯಾವುದೇ ಹೋಮ ನಡೆಯುತ್ತಿರುವಾಗ, ದೇವಾಲಯದಲ್ಲಿ ಪೂಜಾರಿ ಮಂತ್ರ ಪಠಿಸುತ್ತಿರುವಾಗ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ‘ಸ್ವಾಹಾ’, ‘ನಮಃ’ ಮುಂತಾದ ಪದಗಳು ಕೇಳಿಬರುತ್ತವೆ. ಸಾಮಾನ್ಯವಾಗಿ ಇವು ಮಂತ್ರವನ್ನು ಮುಗಿಸಲು ಬಳಸುವ ಪದಗಳು ಎಂದು ಹಲವರು ಭಾವಿಸುತ್ತಾರೆ. ಆದರೆ ಭಾರತೀಯ ಮಂತ್ರ ಸಂಪ್ರದಾಯಗಳಲ್ಲಿ ಈ ಪದಗಳಿಗೆ ವಿಶೇಷ ಮಹತ್ವವಿದೆ.

ವೇದ, ಆಗಮ ಮತ್ತು ತಾಂತ್ರಿಕ ಪರಂಪರೆಗಳಲ್ಲಿ ಇಂತಹ ಅಂತಿಮ ಪದಗಳನ್ನು ಮಂತ್ರದ ಆಶಯ ಮತ್ತು ಬಳಕೆಗೆ ಅನುಗುಣವಾಗಿ ವಿಭಿನ್ನ ಅರ್ಥಗಳಲ್ಲಿ ಪರಿಗಣಿಸಲಾಗಿದೆ. ಕೆಲವು ಪರಂಪರೆಗಳಲ್ಲಿ ಇವು ಮಂತ್ರದ ಶಕ್ತಿ ಅಥವಾ ಸಂಕಲ್ಪವನ್ನು ನಿರ್ದಿಷ್ಟ ರೀತಿಯಲ್ಲಿ ಅಭಿವ್ಯಕ್ತಗೊಳಿಸುವ ‘ಅಂತ್ಯಪದ’ಗಳಾಗಿ ಬಳಸಲಾಗುತ್ತವೆ.

ಮಂತ್ರದ ಕೊನೆಯಲ್ಲಿ ಈ ಪದಗಳನ್ನೇಕೆ ಬಳಸುತ್ತಾರೆ?

ಮಂತ್ರ ಜಪಿಸುವಾಗ ಮನಸ್ಸು, ಉಸಿರು ಮತ್ತು ಸಂಕಲ್ಪವನ್ನು ಒಂದೇ ದಿಕ್ಕಿನಲ್ಲಿ ಕೇಂದ್ರೀಕರಿಸುವುದು ಪ್ರಮುಖವೆಂದು ಭಾರತೀಯ ಆಧ್ಯಾತ್ಮಿಕ ಪರಂಪರೆಗಳು ಹೇಳುತ್ತವೆ. ಮಂತ್ರದ ಕೊನೆಯಲ್ಲಿ ಬರುವ ಪದವು ಆ ಜಪದ ಉದ್ದೇಶವನ್ನು ಸೂಚಿಸುವ ಅಥವಾ ಪೂಜಾ ವಿಧಿಯ ನಿರ್ದಿಷ್ಟ ಕ್ರಿಯೆಯೊಂದಿಗೆ ಅದನ್ನು ಜೋಡಿಸುವ ಪಾತ್ರವನ್ನು ಹೊಂದಿರಬಹುದು.

ಇದನ್ನು ಸರಳವಾಗಿ ಹೇಳುವುದಾದರೆ, ಬಿಲ್ಲಿಗೆ ಬಾಣವನ್ನು ಹೂಡಿ ಗುರಿಯತ್ತ ಎಳೆಯುವಂತೆ ಮಂತ್ರದ ಮೂಲಕ ಸಂಕಲ್ಪವನ್ನು ರೂಪಿಸಿ, ಅಂತಿಮ ಪದದ ಮೂಲಕ ಅದನ್ನು ನಿರ್ದಿಷ್ಟ ವಿಧಿಯಲ್ಲಿ ಪೂರ್ಣಗೊಳಿಸುವ ಸಾಂಕೇತಿಕ ಅರ್ಥವನ್ನು ಕಾಣಬಹುದು.

‘ಸ್ವಾಹಾ’ ಎಂದರೆ ಏನು?

ಹೋಮ ಮತ್ತು ಯಜ್ಞಗಳಲ್ಲಿ ಹೆಚ್ಚಾಗಿ ಕೇಳಿಬರುವ ಪದ ‘ಸ್ವಾಹಾ’. ಅಗ್ನಿಗೆ ಆಹುತಿ ನೀಡುವ ಸಂದರ್ಭದಲ್ಲಿ ಮಂತ್ರದೊಂದಿಗೆ ಈ ಪದವನ್ನು ಉಚ್ಚರಿಸಲಾಗುತ್ತದೆ. ಸಾಂಪ್ರದಾಯಿಕ ವಿವರಣೆಗಳಲ್ಲಿ ‘ಸ್ವಾಹಾ’ ಎಂಬುದು ಅರ್ಪಣೆ ಅಥವಾ ಆಹುತಿಯನ್ನು ಅಗ್ನಿಗೆ ಸಮರ್ಪಿಸುವ ಸಂದರ್ಭದಲ್ಲಿ ಬಳಸುವ ಪವಿತ್ರ ಪದವಾಗಿದೆ. ಹೀಗಾಗಿ ‘ಸ್ವಾಹಾ’ ಕೇವಲ ಮಂತ್ರದ ಕೊನೆಯ ಪದವಲ್ಲ; ಹೋಮದಲ್ಲಿ ಮಂತ್ರದೊಂದಿಗೆ ಸಲ್ಲಿಸುವ ಆಹುತಿಯ ವಿಧಿವಿಧಾನದ ಭಾಗವಾಗಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

‘ನಮಃ’ ಪದದ ಅರ್ಥವೇನು?

‘ಓಂ ನಮಃ ಶಿವಾಯ’, ‘ಓಂ ನಮೋ ನಾರಾಯಣಾಯ’ ಮುಂತಾದ ಪ್ರಸಿದ್ಧ ಮಂತ್ರಗಳಲ್ಲಿ ‘ನಮಃ’ ಎಂಬ ಪದವನ್ನು ಕಾಣಬಹುದು. ‘ನಮಃ’ ಎಂಬುದು ಸಂಸ್ಕೃತದ ‘ನಮ್’ ಧಾತುವಿನಿಂದ ಬಂದ ಪದವಾಗಿದ್ದು, ನಮಸ್ಕಾರ, ವಂದನೆ ಅಥವಾ ಶರಣಾಗತಿಯ ಭಾವನೆಯನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ, ದೈವದ ಮುಂದೆ ಅಹಂಕಾರವನ್ನು ಬದಿಗಿಟ್ಟು ವಿನಮ್ರತೆಯಿಂದ ತಲೆಬಾಗುವ ಭಾವವನ್ನು ಇದು ಪ್ರತಿನಿಧಿಸುತ್ತದೆ ಎಂದು ಪರಂಪರೆಯಲ್ಲಿ ವಿವರಿಸಲಾಗಿದೆ.

ಮಂತ್ರಗಳಲ್ಲಿ ಪ್ರತಿಯೊಂದು ಶಬ್ದಕ್ಕೂ ಮಹತ್ವ:

ಭಾರತೀಯ ಮಂತ್ರ ಸಂಪ್ರದಾಯದಲ್ಲಿ ಶಬ್ದ, ಉಚ್ಚಾರಣೆ, ಛಂದಸ್ಸು ಮತ್ತು ಸಂಕಲ್ಪಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಒಂದು ಮಂತ್ರದ ಅರ್ಥವನ್ನು ಕೇವಲ ಅದರ ಪದಗಳ ಅನುವಾದದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಅದನ್ನು ಯಾವ ದೇವತೆಗೆ, ಯಾವ ವಿಧಿಯಲ್ಲಿ, ಯಾವ ಉದ್ದೇಶಕ್ಕಾಗಿ ಮತ್ತು ಯಾವ ಸಂಪ್ರದಾಯದಂತೆ ಪಠಿಸಲಾಗುತ್ತದೆ ಎಂಬುದೂ ಮುಖ್ಯವಾಗುತ್ತದೆ.

ಹೀಗಾಗಿ ‘ಸ್ವಾಹಾ’, ‘ನಮಃ’, ‘ಹುಂ’, ‘ಫಟ್’ ಮುಂತಾದ ಪದಗಳು ಕೇವಲ ಮಂತ್ರವನ್ನು ಮುಗಿಸುವ ಪದಗಳಲ್ಲ. ಅವುಗಳ ಬಳಕೆಯ ಹಿಂದೆ ಭಾರತೀಯ ಧಾರ್ಮಿಕ ಮತ್ತು ಮಂತ್ರ ಪರಂಪರೆಯಲ್ಲಿ ನಿರ್ದಿಷ್ಟ ವಿಧಿವಿಧಾನ ಹಾಗೂ ಸಾಂಕೇತಿಕ ಅರ್ಥಗಳಿವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬುಮ್ರಾ ಮುಂಬೈ ಇಂಡಿಯನ್ಸ್ ಆಟಗಾರ: ಅಪರೂಪಕ್ಕೊಮ್ಮೆ ಭಾರತದ ಪರ ಆಡ್ತಾರೆ! – Kannada News | Bumrah is an MI Player Who Occasionally Plays for India: kris srikkanth

ಭಾರತೀಯ ಕ್ರಿಕೆಟ್​ನಲ್ಲಿ ಕಾರ್ಯಭಾರ ನಿರ್ವಹಣೆ ಮತ್ತು ಆಟಗಾರರ ಫಿಟ್‌ನೆಸ್ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯ. ಆದರೆ, ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಲಭ್ಯತೆಯ ಕುರಿತು ನೀಡಿರುವ ಹೇಳಿಕೆ ಈಗ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.

ಜಸ್​ಪ್ರೀತ್ ಬುಮ್ರಾ ಅವರನ್ನು “ಅವರು ಮುಂಬೈ ಇಂಡಿಯನ್ಸ್ ಆಟಗಾರ, ಅಪರೂಪಕ್ಕೊಮ್ಮೆ ಭಾರತ ತಂಡದ ಪರ ಆಡುತ್ತಾರೆ” ಎಂದು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ಈ ಹೇಳಿಕೆಯು ಹೊಸ  ಚರ್ಚೆಯನ್ನು ಹುಟ್ಟುಹಾಕಿದೆ.

ಶ್ರೀಕಾಂತ್ ಆಕ್ರೋಶಕ್ಕೆ ಕಾರಣವೇನು?

ಜಸ್​ಪ್ರೀತ್  ಬುಮ್ರಾ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಯಾವುದೇ ದಣಿವಿಲ್ಲದೆ ಇಡೀ ಸೀಸನ್ ಆಡುತ್ತಾರೆ. ಆದರೆ, ಭಾರತ ತಂಡದ ಪ್ರಮುಖ ದ್ವಿಪಕ್ಷೀಯ ಸರಣಿಗಳು ಬಂದಾಗ ಗಾಯ ಅಥವಾ ವಿಶ್ರಾಂತಿಯ ಕಾರಣ ನೀಡಿ ಹೊರಗುಳಿಯುತ್ತಾರೆ ಎಂದು ಶ್ರೀಕಾಂತ್ ಟೀಕಿಸಿದ್ದಾರೆ.

  • ಜಸ್​ಪ್ರೀತ್ ಬುಮ್ರಾ ಫಿಟ್​ನೆಸ್ ಸಮಸ್ಯೆಯ ಕಾರಣ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವಾಡಿರಲಿಲ್ಲ.
  • ಫಿಟ್​ನೆಸ್ ಸಮಸ್ಯೆ ಹಿನ್ನಲೆ ಬುಮ್ರಾ ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದಾರೆ.

ಅಂದಿನ ಕಾಲದಲ್ಲಿ ಕಪಿಲ್ ದೇವ್ ಅವರಂತಹ ದಿಗ್ಗಜರು ಸತತವಾಗಿ ಬೌಲಿಂಗ್ ಮಾಡುವ ಮೂಲಕವೇ ಫಿಟ್‌ನೆಸ್ ಕಾಯ್ದುಕೊಳ್ಳುತ್ತಿದ್ದರು. ಆಧುನಿಕ ಕ್ರಿಕೆಟ್‌ನಲ್ಲಿ ಇಷ್ಟೆಲ್ಲಾ ವೈದ್ಯರು, ಫಿಸಿಯೋಗಳು ಇದ್ದರೂ ದಿನಕ್ಕೆ 20 ಓವರ್ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ಅವರು ಕೇವಲ ಟಿ20 ಲೀಗ್‌ಗಳಿಗಷ್ಟೇ ಸೀಮಿತವಾಗಲಿ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.

ಇದೇ ಕಾರಣದಿಂದಾಗಿ ಶ್ರೀಕಾಂತ್, ಜಸ್​ಪ್ರೀತ್ ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಆಟಗಾರ. ಆಗೊಮ್ಮೆ ಈಗೊಮ್ಮೆ ಭಾರತದ ಪರ ಆಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ಪರ-ವಿರೋಧ ಚರ್ಚಗಳು:

ಶ್ರೀಕಾಂತ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಕ್ರಿಕೆಟ್ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

ಭಾರತ ತಂಡದ ಪ್ರಮುಖ ದ್ವಿಪಕ್ಷೀಯ ಸರಣಿಗಳಿಂದ ಸ್ಟಾರ್ ಆಟಗಾರರು ಪದೇ ಪದೇ ವಿಶ್ರಾಂತಿ ಪಡೆಯುವುದರಿಂದ ತಂಡದ ಸ್ಥಿರತೆ ಹಾಳಾಗುತ್ತಿದೆ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ದೇಶದ ಪರ ಆಡುವುದಕ್ಕಿಂತ ಫ್ರಾಂಚೈಸಿ ಕ್ರಿಕೆಟ್‌ನಿಂದ ಬರುವ ಭಾರಿ ಮೊತ್ತ ಮತ್ತು ಒಪ್ಪಂದಗಳಿಗಾಗಿ ಅವರು ಶಕ್ತಿಯನ್ನು ಮೀಸರಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಮತ್ತೊಂದೆಡೆ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಅತ್ಯಂತ ವಿಶಿಷ್ಟವಾಗಿದ್ದು, ಅವರ ಬೆನ್ನಿನ ಮೂಳೆಗೆ ಭಾರಿ ಒತ್ತಡ ಬೀಳುತ್ತದೆ. ಅವರು ಈಗಾಗಲೇ ಬೆನ್ನುನೋವಿನ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರ ಶರೀರಕ್ಕೆ ನಿರಂತರ ವಿಶ್ರಾಂತಿಯ ಅಗತ್ಯವಿದೆ ಎಂದು ಕೆಲವರು ತಮ್ಮ ಅನಿಸಿಕೆಗಳನ್ನು ಮುಂದಿಟ್ಟಿದ್ದಾರೆ.

ಇನ್ನೂ ಕೆಲವರು, ಬುಮ್ರಾ ದ್ವಿಪಕ್ಷೀಯ ಸರಣಿಗಳನ್ನು ತಪ್ಪಿಸಿಕೊಂಡರೂ, ಐಸಿಸಿ ಟಿ20 ವಿಶ್ವಕಪ್‌ನಂತಹ ಜಾಗತಿಕ ಟೂರ್ನಿಗಳಲ್ಲಿ ಮತ್ತು ಪ್ರಮುಖ ಟೆಸ್ಟ್ ಸರಣಿಗಳಲ್ಲಿ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ದೇಶಕ್ಕೆ ಅತ್ಯಂತ ಅಗತ್ಯವಿರುವಾಗ ಅವರು ಶೇ.100 ರಷ್ಟು ಶ್ರಮ ಹಾಕುತ್ತಾರೆ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್!

ಒಟ್ಟಿನಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಫಿಟ್‌ನೆಸ್ ನಿರ್ವಹಣೆ ಕುರಿತು ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕಟು ಟೀಕೆಗಳು, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ನಡುವಿನ ಆದ್ಯತೆಗಳ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ವಿವಾದವು, ಆಟಗಾರರ ದೀರ್ಘಾವಧಿ ವೃತ್ತಿಜೀವನಕ್ಕಾಗಿ ವಿಶ್ರಾಂತಿ ಅಗತ್ಯವಿದ್ದರೂ, ಐಪಿಎಲ್ ಮತ್ತು ರಾಷ್ಟ್ರೀಯ ಕರ್ತವ್ಯದ ನಡುವಿನ ವರ್ಕ್‌ಲೋಡ್ ಸಮತೋಲನದ ರಚನಾತ್ಮಕ ಸವಾಲನ್ನು ಎತ್ತಿ ತೋರಿಸುತ್ತದೆ.

Source link

ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಕಬ್ಬಿಣದ ಶೀಟ್: ತಪ್ಪಿದ ಭಾರಿ ದುರಂತ – Kannada News | Bengaluru Metro Construction: Huge Iron Sheet Falls Near Marathahalli, Major Accident Averted

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಬೃಹತ್ ಕಬ್ಬಿಣದ ಶೀಟ್‌ವೊಂದು ಏಕಾಏಕಿ ನೆಲಕ್ಕೆ ಬಿದ್ದ ಘಟನೆ ನಡೆದಿದೆ. ಮಾರತ್‌ಹಳ್ಳಿ ಮೆಟ್ರೋ ನಿಲ್ದಾಣದ ಸಮೀಪ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಡರಾತ್ರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ ಬೃಹತ್ ಕಬ್ಬಿಣದ ಶೀಟ್‌ ಕೆಳಗೆ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಬೈಕ್ ಸವಾರರು ಅಥವಾ ವಾಹನಗಳು ಸಂಚರಿಸುತ್ತಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಕಬ್ಬಿಣದ ಶೀಟ್‌ ಬೀಳುವ ದೃಶ್ಯ ಕಾರೊಂದರ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಗಲಿನ ವೇಳೆ ಇದೇ ಘಟನೆ ಸಂಭವಿಸಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿತ್ತು. ಈ ಘಟನೆಯಿಂದ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಮೂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version