70 ವರ್ಷದ ವ್ಯಕ್ತಿಯಿಂದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ – Kannada News | Gujarat Case: Elderly Man Held Over Alleged Assault of Disabled Woman

ಮಹಿಸಾಗರ್, ಏಪ್ರಿಲ್ 26: ಸಂಬಂಧಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಘಟನೆಯೊಂದು ಜಿಲ್ಲೆಯ ಲುನಾವಾಡ ಪಟ್ಟಣದಲ್ಲಿ ವರದಿಯಾಗಿದೆ. 26 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಆಕೆಯ 70 ವರ್ಷದ ಸಂಬಂಧಿಕನೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯು ಸಂತ್ರಸ್ತೆಯ ನೆರೆಮನೆಯವನಾಗಿದ್ದು, ಸಂಬಂಧದಲ್ಲಿ ಚಿಕ್ಕಪ್ಪ ಅಥವಾ ದೊಡ್ಡಪ್ಪನಾಗಬೇಕಿತ್ತು. ಘಟನೆ ನಡೆದ ದಿನ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಆರೋಪಿ, ತನ್ನ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ. ನಂತರ ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆತಂದು, ಬಾಗಿಲು ಲಾಕ್ ಮಾಡಿ ಮೃಗೀಯವಾಗಿ ವರ್ತಿಸಿದ್ದಾನೆ.

ದೌರ್ಜನ್ಯದ ನಂತರ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಆರೋಪಿ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಸಂತ್ರಸ್ತ ಮಹಿಳೆ ಧೈರ್ಯಗುಂದದೆ ನಡೆದ ಅನ್ಯಾಯವನ್ನು ತನ್ನ ತಾಯಿಗೆ ತಿಳಿಸಿದ್ದಾರೆ. ಮಗಳ ಸ್ಥಿತಿಯನ್ನು ಕಂಡು ಮರುಗಿದ ತಾಯಿ ಕೂಡಲೇ ಲುನಾವಾಡ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, 70 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಂಗವಿಕಲ ವ್ಯಕ್ತಿಗಳ ಮೇಲಿನ ಅಪರಾಧಗಳು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಠಿಣ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಮನೆಯ ಹತ್ತಿರವೇ ಇರುವ ವಯಸ್ಸಾದ ಸಂಬಂಧಿಯೇ ಇಂತಹ ವಿಕೃತ ಕೃತ್ಯವೆಸಗಿರುವುದು ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ವಯಸ್ಸಾದವರು ಮಕ್ಕಳಿಗೆ ಮತ್ತು ಅಬಲರಿಗೆ ರಕ್ಷಣೆ ನೀಡಬೇಕು, ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ” ಎಂದು ಜನರು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬರೋಬ್ಬರಿ 986 ರನ್​ಗಳು… ಐಪಿಎಲ್​ನಲ್ಲಿ ಹೊಸ ಇತಿಹಾಸ – Kannada News | 983 Runs, One Day: IPL Hits a New High

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಪಂಜಾಬ್ ಕಿಂಗ್ಸ್ (PBKS)​, ಡೆಲ್ಲಿ ಕ್ಯಾಪಿಟಲ್ಸ್ (DC), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು. ಅದು ಸಹ ರನ್​ ರಾಶಿ ಪೇರಿಸುವ ಮೂಲಕ ಎಂಬುದು ವಿಶೇಷ.

Source link

Karun Nair: ಕರುಣ್ ನಾಯರ್​ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ – Kannada News | Karun Nair dropped two catches of Shreyas Iyer KL Rahul’s explosive batting wasted

ಬೆಂಗಳೂರು (ಏ. 26): ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 35ನೇ ಪಂದ್ಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಪಂಜಾಬ್ ಕಿಂಗ್ಸ್ ತಂಡವು 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿತು, ಆದರೆ ಈ ಸೋಲು ಡೆಲ್ಲಿ ಕ್ಯಾಪಿಟಲ್ಸ್‌ನ ಗಾಯಗಳಿಗೆ ಉಪ್ಪು ಸವರಿತು. ಇಲ್ಲಿ ಇಡೀ ಪಂದ್ಯದ ಗತಿಯನ್ನು ಬದಲಾಯಿಸಿದ್ದು ಬ್ಯಾಟಿಂಗ್ ಅಲ್ಲ, ಡೆಲ್ಲಿಯ ಕಳಪೆ ಫೀಲ್ಡಿಂಗ್. ಕರುಣ್ ನಾಯರ್ (Karun Nair) ಈ ಪಂದ್ಯದಲ್ಲಿ ಎರಡು ದೊಡ್ಡ ತಪ್ಪುಗಳನ್ನು ಮಾಡಿ ಡೆಲ್ಲಿ ಕ್ಯಾಪಿಟಲ್ಸ್​ನ ಹೀನಾಯ ಸೋಲಿಗೆ ಕಾರಣರಾದರು.

ಕರುಣ್ ನಾಯರ್ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಪಂದ್ಯಕ್ಕೆ ದೊಡ್ಡ ತಿರುವು ಸಿಕ್ಕಿತು. ಮೊದಲನೆಯದು 16 ನೇ ಓವರ್‌ನಲ್ಲಿ ವಿಪ್ರಜ್ ನಿಗಮ್ ಎಸೆತದಲ್ಲಿ ಲಾಂಗ್-ಆಫ್‌ನಲ್ಲಿ ಕರುಣ್ ಕ್ಯಾಚ್ ಬಿಟ್ಟರು. ನಂತರ, ಮುಂದಿನ ಓವರ್‌ನಲ್ಲಿ, ನಾಯರ್ ಕುಲದೀಪ್ ಯಾದವ್ ಎಸೆತದಲ್ಲಿ ಲಾಂಗ್-ಆನ್‌ನಲ್ಲಿ ಅಯ್ಯರ್‌ಗೆ ಮತ್ತೊಂದು ಜೀವದಾನ ನೀಡಿದರು. ಈ ಎರಡೂ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅಯ್ಯರ್ ದೆಹಲಿ ಬೌಲರ್‌ಗಳ ಬೆವರಿಳಿಸಿಬಿಟ್ಟರು. ಕೇವಲ 26 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿ ಅಜೇಯ 71 ರನ್ ಗಳಿಸಿ ತಂಡವನ್ನು ಕೇವಲ 18.5 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.

ಕರುಣ್ ನಾಯರ್ ಕ್ಯಾಚ್ ಡ್ರಾಪ್ ಮಾಡಿದ ವಿಡಿಯೋ:

ಕೆಎಲ್ ರಾಹುಲ್ ಐತಿಹಾಸಿಕ ಇನ್ನಿಂಗ್ಸ್ ವ್ಯರ್ಥ

ಈ ಪಂದ್ಯದಲ್ಲಿ ಡೆಲ್ಲಿ ನಾಯಕ ಕೆ.ಎಲ್. ರಾಹುಲ್ ಅಜೇಯ 152 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ದಾಖಲೆಯ ವೈಯಕ್ತಿಕ ಸ್ಕೋರ್‌ ಗಳಿಸಿದರು. ಆದರೆ ನಾಯರ್ ಅವರ ಕಳಪೆ ಫೀಲ್ಡಿಂಗ್ ಈ ಮಾಸ್ಟರ್‌ಕ್ಲಾಸ್ ಇನ್ನಿಂಗ್ಸ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲಿಲ್ಲ. ಪಂಜಾಬ್ ಕಿಂಗ್ಸ್ 265 ರನ್ ಗಳಿಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ಅನ್ನು ಪೂರ್ಣಗೊಳಿಸಿತು. ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಪವರ್‌ಪ್ಲೇನಲ್ಲಿಯೇ 116 ರನ್ ಗಳಿಸುವ ಮೂಲಕ ದೆಹಲಿಯನ್ನು ಹಿಮ್ಮೆಟ್ಟಿಸಿದರು. ಇದರ ನಂತರ, ನಾಯರ್ ಅವರ ಕಳಪೆ ಫೀಲ್ಡಿಂಗ್ ಡೆಲ್ಲಿಯ ಉಳಿದ ಕೆಲಸವನ್ನು ಪೂರ್ಣಗೊಳಿಸಿತು.

RR vs SRH: ವೈಭವ್ ಅಬ್ಬರದ ಶತಕಕ್ಕೂ ಒಲಿಯದ ಜಯ; ಸನ್‌ರೈಸರ್ಸ್​ಗೆ ಸುಲಭ ಗೆಲುವು

ಕರುಣ್ ನಾಯರ್ ವಿರುದ್ಧ ಸಿಟ್ಟಾದ ಫ್ಯಾನ್ಸ್

ಕರುಣ್ ನಾಯರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲಿಂಗ್​ಗೆ ಗುರಿಯಾಗಿದ್ದಾರೆ. ಅಯ್ಯರ್ ಕ್ಯಾಚ್ ಸಕಾಲದಲ್ಲಿ ಪಡೆದಿದ್ದರೆ ಡೆಲ್ಲಿ ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡೆಲ್ಲಿ ತಂಡ ಈ ಋತುವಿನಲ್ಲಿ ಎದುರಿಸಿದ ನಾಲ್ಕನೇ ಸೋಲು ಇದಾಗಿದ್ದು, ಪಂಜಾಬ್ ತಂಡ ಅಜೇಯವಾಗಿ ಉಳಿದಿದ್ದು, ಪ್ಲೇಆಫ್ ತಲುಪುವ ಹಂತದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:12 am, Sun, 26 April 26

Source link

ದೆಹಲಿ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ – Kannada News | Man Found Dead Inside Ladies’ Washroom at Delhi Metro Station

ನವದೆಹಲಿ, ಏಪ್ರಿಲ್ 26: ದೆಹಲಿಯ ಇಂದರ್​ಲೋಕ್ ಮೆಟ್ರೋ(Metro) ನಿಲ್ದಾಣದಲ್ಲಿ ಮಹಿಳಾ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಏಪ್ರಿಲ್ 25ರ ಶನಿವಾರ ಸಂಜೆ ಸುಮಾರು 5.33ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಮೆಟ್ರೋ ನಿಲ್ದಾಣದ ಮಹಿಳೆಯರ ಶೌಚಾಲಯವು ಒಳಗಿನಿಂದ ಲಾಕ್ ಆಗಿದ್ದು, ಅಲ್ಲಿಂದ ತೀವ್ರವಾದ ದುರ್ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಶೌಚಾಲಯದ ಬಾಗಿಲನ್ನು ಒಡೆದು ಒಳಪ್ರವೇಶಿಸಿದೆ.

ಬಾಗಿಲು ಒಡೆದಾಗ ಪೊಲೀಸರಿಗೆ ಆಘಾತ ಕಾದಿತ್ತು. ಶೌಚಾಲಯದೊಳಗೆ ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿಯ ಶವ ನೇತಾಡುತ್ತಿರುವುದು ಕಂಡುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ವ್ಯಕ್ತಿಯು ಅದೇ ಶೌಚಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದರಿಂದ, ಸಾವು ಸಂಭವಿಸಿ ಕನಿಷ್ಠ ಎರಡು ದಿನಗಳಾಗಿರಬಹುದು ಎಂದು ಶಂಕಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಮೃತ ವ್ಯಕ್ತಿಯನ್ನು ಕೊನೆಯ ಬಾರಿಗೆ ಎರಡು ದಿನಗಳ ಹಿಂದೆ ಕೆಲಸದ ಸ್ಥಳದಲ್ಲಿ ನೋಡಲಾಗಿತ್ತು. ಅಂದಿನಿಂದ ಅವರು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಶೌಚಾಲಯದ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಇದು ಆತ್ಮಹತ್ಯೆ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ, ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಅಪರಾಧ ವಿಭಾಗದ ತಜ್ಞರು ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬಿಎನ್‌ಎಸ್‌ಎಸ್‌ನ (BNSS) ಸೆಕ್ಷನ್ 194ರ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದ್ದು, ಮೆಟ್ರೋ ಅಧಿಕಾರಿಗಳ ಸಹಕಾರದೊಂದಿಗೆ ಮೃತರ ಪೂರ್ಣ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಮೆಟ್ರೋ ನಿಲ್ದಾಣದಂತಹ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರ ಶೌಚಾಲಯದೊಳಗೆ ವ್ಯಕ್ತಿ ಶವ ಪತ್ತೆಯಾಗಿರುವುದು ಸುರಕ್ಷತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಾವಿನ ಹಿಂದಿನ ಅಸಲಿ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿದುಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಬಳ್ಳಾರಿಯಲ್ಲಿ ಮತ್ತದೇ ಸ್ಥಿತಿ! ಕಳಪೆ ಮಟ್ಟಕ್ಕಿಳೀತು ಏರ್ ಕ್ವಾಲಿಟಿ – Kannada News | Bangalore Air Pollution Crisis: Ballari Air quality gets worse, Bengaluru AQI is slightly better

ಳ್ಳಾರಿಯಲ್ಲಿ ಮತ್ತದೇ ಸ್ಥಿತಿ! ಕಳಪೆ ಮಟ್ಟಕ್ಕಿಳೀತು ಏರ್ ಕ್ವಾಲಿಟಿ
Image Credit source: google Gemini

ಬೆಂಗಳೂರು, ಏಪ್ರಿಲ್ 26: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಮೊದಲಿನಂತೆಯೇ ಬಳ್ಳಾರಿಯ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಕಳೆದ ತಿಂಗಳಿಂದ ಸುಧಾರಿಸಿದ್ದ AQI

ಬಳ್ಳಾರಿಯಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಇದೀಗ ಮತ್ತೊಮ್ಮೆ ಜಿಲ್ಲೆಯ ವಾಯು ಗುಣಮಟ್ಟ ಕಳಪೆಯಾಗಿದ್ದು, 150ಕ್ಕೂ ಹೆಚ್ಚಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 129ಕ್ಕೆ ತಲುಪಿದೆ.

ಮಂಗಳೂರು ಮತ್ತು ಉಡುಪಿಯ AQI 100ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 129
  • ಮಂಗಳೂರು-148
  • ಮೈಸೂರು – 121
  • ಬೆಳಗಾವಿ – 120
  • ಕಲಬುರ್ಗಿ-144
  • ಶಿವಮೊಗ್ಗ –124
  • ಬಳ್ಳಾರಿ – 158
  • ಹುಬ್ಬಳ್ಳಿ- 136
  • ಉಡುಪಿ –138
  • ವಿಜಯಪುರ – 93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾರ್ಮಿನಾರ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ, ತೆಲಂಗಾಣದ ನಾಮಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಘಟನೆ – Kannada News | Blaze Erupts in Charminar Express Coach Near Telangana Station

ಭುವನಗಿರಿ, ಏಪ್ರಿಲ್ 26: ತೆಲಂಗಾಣದ ಅಲೆರ್ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ(Fire) ಕಾಣಿಸಿಕೊಂಡಿದೆ. ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆಯೇ ಬೋಗಿಯೊಂದರಿಂದ ಹೊಗೆ ಹೊರಬಂದಿದ್ದು, ಪ್ರಯಾಣಿಕರು ಭೀತಿಯಿಂದ ಹೊರಗೆ ಓಡಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ರೈಲಿನ ಎಸ್‌5 (S5) ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ರೈಲು ಅಲೆರ್ ನಿಲ್ದಾಣದ ವ್ಯಾಪ್ತಿಯಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ತಕ್ಷಣವೇ ಎಚ್ಚೆತ್ತ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬೋಗಿಯಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಕೆಳಗಿಳಿದಿದ್ದಾರೆ. ಈವರೆಗೆ ದೊರೆತ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾದ ಬಗ್ಗೆ ಅಧಿಕೃತ ವರದಿಗಳಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ರೈಲ್ವೆ ತಾಂತ್ರಿಕ ತಂಡವು ಬೋಗಿಯನ್ನು ಪರೀಕ್ಷಿಸುತ್ತಿದ್ದು, ಬೆಂಕಿ ಪೂರ್ಣವಾಗಿ ಆರಿರುವುದನ್ನು ಖಚಿತಪಡಿಸಿಕೊಂಡ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಕೆಳಗೆ ಅಗ್ನಿ ಅವಘಡ!

ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ (Short Circuit) ಆಗಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಹಾನಿಯ ಬಗ್ಗೆ ಸಮಗ್ರ ವರದಿ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ರೈಲ್ವೆ ಇಲಾಖೆಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಪರ್ಯಾಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿಗರೇ ಗಮನಿಸಿ: TCS ಮ್ಯಾರಥಾನ್​​ ಹಿನ್ನೆಲೆ ಈ ಪ್ರಮುಖ ರಸ್ತೆಗಳ ಸಂಚಾರದಲ್ಲಿಂದು ಭಾರಿ ಬದಲಾವಣೆ – Kannada News | Bengaluru Traffic Alert: Road Closures and Diversions for TCS 10K Marathon Today

ಬೆಂಗಳೂರು, ಏಪ್ರಿಲ್​​ 26: ನಗರದಲ್ಲಿ ಇಂದು ನಡೆಯುತ್ತಿರುವ TCS ವರ್ಲ್ಡ್ 10K ಮ್ಯಾರಥಾನ್​​ನಲ್ಲಿ 30,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇರುವ ಹಿನ್ನೆಲೆ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ನಿರ್ಭಂಧಿಸಲಾಗಿದೆ. ಮಾರ್ಗ ಬದಲಾವಣೆ ಜೊತೆಎಗೆ ನೋ-ಪಾರ್ಕಿಂಗ್ ನಿಯಮಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಜಾರಿಗೊಳಿಸಿದ್ದಾರೆ. ಮ್ಯಾರಥಾನ್ RSAOI ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯವಾಗಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆ ಮಾರ್ಗಗಳಲ್ಲಿ ಮ್ಯಾರಥಾನ್​​ ನಡೆಯಲಿದ್ದು, ಹಲಸೂರು, ಫ್ರೇಸರ್ ಟೌನ್ ಮತ್ತು ಶಿವಾಜಿನಗರ ಪ್ರದೇಶಗಳ ಮೂಲಕ ಸಾಗಲಿದೆ.

ಯಾವೆಲ್ಲ ರಸ್ತೆಗಳು ಬಂದ್​​

  • ಕಬ್ಬನ್ ರಸ್ತೆ: CTO ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್ ವರೆಗೆ ಸಂಚಾರಕ್ಕೆ ಅವಕಾಶ ಇಲ್ಲ
  • ವಿಧಾನಸೌಧದ ಕಡೆ ಪ್ರವೇಶ: ಎಲ್ಲಾ ವಾಹನಗಳಿಗೆ ಸಂಪೂರ್ಣ ನಿರ್ಬಂಧ
  • ಇತರೆ ಮಾರ್ಗಗಳು: ಸೇಂಟ್ ಜಾನ್ಸ್ ರಸ್ತೆ (ಡಿಕನ್ಸನ್ ರಸ್ತೆದಿಂದ ವೀರಪಿಳ್ಳೈ ಸ್ಟ್ರೀಟ್), ಕಾಮರಾಜ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ ಹಾಗೂ ಲೇಡಿ ಕರ್ಝನ್ ರಸ್ತೆಯ ಕೆಲವು ಭಾಗಗಳು ಕ್ಲೋಸ್​​ ಇರಲಿವೆ.

ಇದನ್ನೂ ಓದಿ: ಜನಗಣತಿ ಕಾರ್ಯಕ್ಕೆ ಅಡ್ಡಿ; ಮಹಿಳಾ ಸಿಬ್ಬಂದಿಗೆ ಅವಮಾನ; ನಿವಾಸಿ ವಿರುದ್ಧ ಎಫ್​ಐಆರ್​ ದಾಖಲು

ಪರ್ಯಾಯ ಮಾರ್ಗಗಳು

  • ಕ್ವೀನ್ಸ್ ರಸ್ತೆ ವಾಹನಗಳನ್ನು ಬಾಳೇಕುಂದ್ರಿ ಜಂಕ್ಷನ್​​ ಮಾರ್ಗವಾಗಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ಚಾಲುಕ್ಯ ಸರ್ಕಲ್​​ನಿಂದ ಮೆಜೆಸ್ಟಿಕ್/ಸಿಟಿ ಮಾರ್ಕೆಟ್ ಕಡೆ ತೆರಳಬೇಕು
  • ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್/ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವ BMTC ಬಸ್‌ಗಳು ವೆಂಕಟಸ್ವಾಮಿ ನಾಯ್ಡು ರಸ್ತೆ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆಯ ಮೂಲಕ ಸಾಗಬೇಕು
  • ಎಂಜಿ ರಸ್ತೆದಿಂದ ಹಲಸೂರು ಕಡೆಗೆ ಹೋಗುವವರು ವೆಬ್ಸ್ ಜಂಕ್ಷನ್, ಟ್ರಿನಿಟಿ ಜಂಕ್ಷನ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಬಳಸಿ ಸಾಗಬೇಕು
  • ಭಾರಿ ವಾಹನಗಳಿಗೆ ಸಿಬಿಡಿ ಪ್ರದೇಶಕ್ಕೆ ಪ್ರವೇಶವಿಲ್ಲ. ಓಲ್ಡ್ ಮದ್ರಾಸ್ ರಸ್ತೆಯಿಂದ ಬರುವವರು ಎನ್‌ಜಿಇಎಫ್ ಜಂಕ್ಷನ್‌, ಸುರಂಜನ್ ದಾಸ್ ರಸ್ತೆ ಮೂಲಕ ಓಲ್ಡ್ ಏರ್‌ಪೋರ್ಟ್ ರಸ್ತೆಗೆ ಹೋಗಬೇಕು

ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಕಬ್ಬನ್ ಪಾರ್ಕ್ ಸುತ್ತಮುತ್ತ ನೋ-ಪಾರ್ಕಿಂಗ್ ಜೋನ್ ಆಗಿರುತ್ತದೆ. ಮ್ಯಾರಥಾನ್​​ನಲ್ಲಿ ಭಾಗವಹಿಸುವವರು ಮತ್ತು ಪ್ರೇಕ್ಷಕರು UB ಸಿಟಿ, ಶಿವಾಜಿನಗರ ಬಸ್ ನಿಲ್ದಾಣ ಅಥವಾ ಚರ್ಚ್ ಸ್ಟ್ರೀಟ್‌ನ ಶೋಭಾ ಮಾಲ್‌ನಲ್ಲಿ ಪಾವತಿಸಬಹುದಾದ ಪಾರ್ಕಿಂಗ್ ಸೌಲಭ್ಯವನ್ನು ಬಳಸಬಹುದು. MS ಬಿಲ್ಡಿಂಗ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ – Kannada News | White House Shooting: Trump Rushed to Bunker During Dinner Amid Gunfire Fear

ವಾಷಿಂಗ್ಟನ್, ಏಪ್ರಿಲ್ 26: ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತಭವನದ ವಾರ್ಷಿಕ ಭೋಜನಕೂಟ ಆತಂಕಕ್ಕೆ ಸಾಕ್ಷಿಯಾಗಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಭಾಷಣಕ್ಕೂ ಮುನ್ನವೇ ಕೇಳಿಬಂದ ಗುಂಡಿನ ಸದ್ದಿನಿಂದಾಗಿ ಇಡೀ ಸಭಾಂಗಣದಲ್ಲಿ ಅವ್ಯವಸ್ಥೆ ಉಂಟಾಯಿತು. ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ರಾಜತಾಂತ್ರಿಕರಿಂದ ತುಂಬಿದ್ದ ಸಭಾಂಗಣದಲ್ಲಿ ಐದರಿಂದ ಎಂಟು ಬಾರಿ ಗುಂಡು ಹಾರಿದ ಶಬ್ದ ಕೇಳಿಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ, ದಾರಿ ಬಿಡಿ, ಕೆಳಗೆ ಬಾಗಿ ಎಂದು ಕೂಗುತ್ತಾ ಅಧ್ಯಕ್ಷ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ಆ ಸಮಯದಲ್ಲಿ ಸಭಾಂಗಣದಲ್ಲಿದ್ದ ನೂರಾರು ಅತಿಥಿಗಳು ಪ್ರಾಣಭೀತಿಯಿಂದ ಟೇಬಲ್‌ಗಳ ಕೆಳಗೆ ಅಡಗಿ ಕುಳಿತರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟ್ರಂಪ್ ಮತ್ತು ಮೆಲಾನಿಯಾ ಸುರಕ್ಷಿತ
ಅದೃಷ್ಟವಶಾತ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಅಧ್ಯಕ್ಷರು ಮತ್ತು ಅವರ ಸಂಪುಟದ ಸದಸ್ಯರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಸಿಎನ್‌ಎನ್‌ಗೆ ಸ್ಪಷ್ಟಪಡಿಸಿದ್ದಾರೆ. ಘಟನೆಯ ನಂತರ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಈ ಘಟನೆಯು ಜುಲೈ 13, 2024 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಟ್ರಂಪ್ ಮೇಲಿನ ಹತ್ಯೆ ಯತ್ನದ ನೆನಪುಗಳನ್ನು ಮರುಕಳಿಸಿತು. ಅಂದು ಕಿವಿಗೆ ಗುಂಡು ತಗುಲಿ ಕೂದಲೆಳೆಯ ಅಂತರದಲ್ಲಿ ಟ್ರಂಪ್ ಪಾರಾಗಿದ್ದರು. ಇಂದು ಮತ್ತೆ ಅಂತಹದ್ದೇ ಶೂಟೌಟ್ ವರದಿಗಾರರ ಭೋಜನಕೂಟದಲ್ಲಿ ನಡೆದಿದ್ದು, ಅಮೆರಿಕದ ಅತ್ಯುನ್ನತ ನಾಯಕರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.
ಒಬ್ಬ ಬಂದೂಕುಧಾರಿ ಇರುವಿಕೆಯನ್ನು ಪೊಲೀಸರು ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ವಾಷಿಂಗ್ಟನ್‌ನಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಒಟ್ಟಾರೆಯಾಗಿ, ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯ ಮೇಲೆ ಪದೇ ಪದೇ ನಡೆಯುತ್ತಿರುವ ಇಂತಹ ದಾಳಿಯ ಯತ್ನಗಳು ಅಮೆರಿಕದ ಆಂತರಿಕ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಈ ಘಟನೆಯು ಅಮೆರಿಕದ ರಾಜಕೀಯ ಧ್ರುವೀಕರಣ ಮತ್ತು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಮೈ ಸುಡುವ ಬಿಸಿಲಿನ ಜೊತೆಗೆ ಇಂದು ಹಲವೆಡೆ ಆಲಿಕಲ್ಲು ಮಳೆ! 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka Weather Forecast: Heatwave in Coastal and Hailstorm in North interior Karnataka, Orange alert

ಕರ್ನಾಟಕ ಹವಾಮಾನ ವರದಿImage Credit source: MediaForge AI

ಬೆಂಗಳೂರು, ಏಪ್ರಿಲ್ 26: ಬೆಂಗಳೂರಿನ ಜನರು ಬಿಸಿಲ ಬೇಗೆಯಲ್ಲಿ (Karnataka Weather) ಬೇಯುತ್ತಿದ್ದು, ತಂಪು ವಾತಾವರಣದ ನಿರೀಕ್ಷೆಯಲ್ಲಿದ್ದಾರೆ. ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದ್ದು, ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣ ಅಲೆ

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತೂ ಇಂತೂ ಭಾರತದಲ್ಲಿ 100 ಕೋಟಿ ರೂ. ಗಳಿಸಿದ ‘ಭೂತ್ ಬಂಗ್ಲ’ ಸಿನಿಮಾ – Kannada News | Bhooth Bangla Box Office Collection Akshay Kumar Priyadarshan movie crosses 100 crore mark in India

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್ ಎಂದರೆ ಅಲ್ಲಿ ನಗುವಿಗೆ ಗ್ಯಾರಂಟಿ. ಸುಮಾರು 14 ವರ್ಷಗಳ ನಂತರ ಈ ಸೂಪರ್ ಹಿಟ್ ಜೋಡಿ ಒಂದಾಗಿ ಮಾಡಿರುವ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ 9 ದಿನಗಳಲ್ಲಿ ಈ ಹಾರರ್ ಕಾಮಿಡಿ ಸಿನಿಮಾ ಭಾರತದಲ್ಲಿ 100 ಕೋಟಿ ರೂಪಾಯಿಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟನ ಸಿನಿಮಾಗೆ ಇದು ದೊಡ್ಡ ಕಲೆಕ್ಷನ್ ಅಲ್ಲದೇ ಇದ್ದರೂ, 100 ಕೋಟಿ ರೂಪಾಯಿ ಆಗಿದೆ ಎಂಬುದಷ್ಟೇ ಸಮಾಧಾನಕರ ಸಂಗತಿ.

Sacnilk ವರದಿಯ ಪ್ರಕಾರ, ‘ಭೂತ್ ಬಂಗ್ಲ’ ತನ್ನ ಎರಡನೇ ಶನಿವಾರದಂದು (9ನೇ ದಿನ) ಭರ್ಜರಿ 10.75 ಕೋಟಿ ರೂಪಾಯಿ ಗಳಿಸಿದೆ. ಮೊದಲ ವಾರದಲ್ಲಿ 84.40 ಕೋಟಿ ರೂಪಾಯಿ ಸಂಗ್ರಹಿಸಿದ್ದ ಈ ಸಿನಿಮಾ, ಶನಿವಾರದ ಗಳಿಕೆಯೊಂದಿಗೆ ಭಾರತದಲ್ಲಿ ಒಟ್ಟು 100.90 ಕೋಟಿ ರೂಪಾಯಿ ಗಳಿಸಿದೆ. ಇನ್ನು, ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 120.10 ಕೋಟಿ ರೂಪಾಯಿಗೆ ತಲುಪಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಓವರ್‌ಸೀಸ್ ಮಾರುಕಟ್ಟೆಯಲ್ಲಿ ಈವರೆಗೆ ಸುಮಾರು 3.8 ಮಿಲಿಯನ್ ಡಾಲರ್ (ಅಂದಾಜು 31 ಕೋಟಿ ರೂ.) ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ವಿಶ್ವದಾದ್ಯಂತದ ಗಳಿಕೆ 135 ಕೋಟಿ ರೂಪಾಯಿಗಳನ್ನು ಮೀರಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಅಕ್ಷಯ್ ಕುಮಾರ್ ಅಭಿಮಾನಿಗಳು ಈ ಸಿನಿಮಾ ಎಂಜಾಯ್ ಮಾಡಿದ್ದಾರೆ.

ಈ ಹಿಂದೆ ‘ಹೇರಾ ಫೇರಿ’, ‘ಗರಂ ಮಸಾಲಾ’, ‘ಭೂಲ್ ಭುಲಯ್ಯ’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಈಗ ‘ಭೂತ್ ಬಂಗ್ಲ’ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಟಬು, ವಾಮಿಕಾ ಗಬ್ಬಿ, ಮಿಥಿಲಾ ಪಾಲ್ಕರ್, ರಾಜ್‌ಪಾಲ್ ಯಾದವ್ ಮತ್ತು ಜಿಸ್ಶು ಸೇನ್‌ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ತಾಂತ್ರಿಕ ಕಾರಣಗಳಿಂದ ಏಪ್ರಿಲ್ 17ರಂದು ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವುದರಿಂದ ಕಲೆಕ್ಷನ್ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version