IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ್ದ 244 ರನ್ಗಳ ಬೃಹತ್ ಮೊತ್ತವನ್ನು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಐತಿಹಾಸಿಕ ರನ್ ಚೇಸ್ ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, “ನಮ್ಮ ಬ್ಯಾಟಿಂಗ್ ಲೈನಪ್ ಮತ್ತು ಪಿಚ್ನ ಗುಣಮಟ್ಟ ನೋಡಿದರೆ ಎಂತಹ ಗುರಿಯನ್ನೂ ಬೆನ್ನಟ್ಟಬಹುದು ಎಂಬ ನಂಬಿಕೆ ನನಗಿತ್ತು. ನಮ್ಮ ಆರಂಭಿಕ ಆಟಗಾರರು ಯಾವುದೇ ಭಯವಿಲ್ಲದೆ ಆಡುತ್ತಿದ್ದಾರೆ. ಅವರಲ್ಲಿ ಅದೆಷ್ಟು ವೈವಿಧ್ಯಮಯ ಶಾಟ್ಗಳಿವೆ ಎಂದರೆ, ಅವರಿಗೆ ಬೌಲಿಂಗ್ ಮಾಡುವ ಪರಿಸ್ಥಿತಿ ನನಗೆ ಬರದಿರುವುದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ!” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಯುವ ಆಟಗಾರರ ಬೆಂಬಲ:
ತಂಡದ ಯುವ ಆಟಗಾರರಾದ ಸಲಿಲ್ ಅರೋರಾ ಅವರಂತಹ ಪ್ರತಿಭೆಗಳ ಬಗ್ಗೆ ಮಾತನಾಡುತ್ತಾ, ಕೋಚಿಂಗ್ ಸ್ಟಾಫ್ ಯುವಕರಲ್ಲಿ ತುಂಬಿರುವ ‘ನಿರ್ಭೀತ ಮನೋಭಾವ’ವೇ ತಂಡದ ಯಶಸ್ಸಿನ ಗುಟ್ಟು ಎಂದಿದ್ದಾರೆ. “ಈ ಯುವ ಆಟಗಾರರಿಗೆ ತಾವು ಎಷ್ಟು ಸಮರ್ಥರು ಎಂಬುದು ಅವರಿಗೇ ತಿಳಿದಿಲ್ಲ, ಅದು ಅವರ ದೊಡ್ಡ ಶಕ್ತಿ,” ಎಂದು ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಬೌಲರ್ಗಳಿಗೆ ಹೊಸ ಸವಾಲು:
ಹೆಚ್ಚಿನ ರನ್ ಬಿಟ್ಟುಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮ್ಮಿನ್ಸ್, “ಖಂಡಿತವಾಗಿಯೂ ಚಿಂತೆಯಾಗುತ್ತದೆ. ಆದರೆ ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಐದು ವರ್ಷಗಳ ಹಿಂದಿನ ಐಪಿಎಲ್ಗೂ ಈಗಿನದ್ದಕ್ಕೂ ದೊಡ್ಡ ವ್ಯತ್ಯಾಸವಿದೆ. ಹಿಂದೆ 200 ರನ್ ಬೆನ್ನಟ್ಟುವುದು ಕಷ್ಟವಾಗಿತ್ತು, ಆದರೆ ಈಗ ಓವರ್ಗೆ 12 ರನ್ ಬೇಕಿದ್ದರೂ ಬ್ಯಾಟರ್ಗಳು ಅದನ್ನು ಸುಲಭವಾಗಿ ಚೇಸ್ ಮಾಡುತ್ತಿದ್ದಾರೆ. ಹೀಗಾಗಿ ಬೌಲರ್ಗಳು ತಮ್ಮ ನಿರೀಕ್ಷೆಗಳನ್ನು ಬದಲಿಸಿಕೊಳ್ಳಬೇಕಿದೆ,” ಎಂದಿದ್ದಾರೆ.
ಬೌಲರ್ಗಳಿಗೆ ಎದುರಾಗಿರುವ ಇಂತಹ ಸವಾಲುಗಳ ನಡುವೆ ಈಶಾನ್ ಮಾಲಿಂಗ ಅವರ ಬೌಲಿಂಗ್ ದಾಳಿಯೇ ನಮ್ಮ ಗೆಲುವಿಗೆ ಕಾರಣ. ಏಕೆಂದರೆ ಹೈ ಸ್ಕೋರಿಂಗ್ ಪಂದ್ಯದಲ್ಲಿ ಈಶಾನ್ 4 ಓವರ್ಗಳಲ್ಲಿ ನೀಡಿದ್ದು ಕೇವಲ 29 ರನ್ ಮಾತ್ರ. ಹೀಗಾಗಿ ನಮ್ಮ ಗೆಲುವಿಗೆ ಈಶಾನ್ ಮಾಲಿಂಗ ಕಾರಣ ಎಂದೇ ಹೇಳಬೇಕು.
ಕೊನೆಯಲ್ಲಿ ನೀವು ಹಾಕುವ ಒಂದು ಅತ್ಯುತ್ತಮ ಯಾರ್ಕರ್ ಪಂದ್ಯದ ಗತಿಯನ್ನೇ ಬದಲಿಸಬಹುದು. ಈಶಾನ್ ಮಾಲಿಂಗ ಅವರಂತಹ ಬೌಲರ್ಗಳು ನಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ಯಾಟ್ ಕಮಿನ್ಸ್, ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್
ಒಟ್ಟಾರೆಯಾಗಿ, ಬ್ಯಾಟಿಂಗ್ ಸ್ನೇಹಿ ಪಿಚ್ಗಳ ನಡುವೆಯೂ ಈಶಾನ್ ಮಾಲಿಂಗ 4 ಓವರ್ಗಳಲ್ಲಿ ಕೇವಲ 29 ರನ್ ಮಾತ್ರ ನೀಡಿದ್ದಾರೆ. ಪರಿಣಾಮ 250 ರ ಗಡಿದಾಟಬೇಕಿದ್ದ ಮುಂಬೈ ಇಂಡಿಯನ್ಸ್ ಸ್ಕೋರ್ 243 ರಲ್ಲೇ ನಿಂತಿದೆ. ಈ ಗುರಿ ಬೆನ್ನತ್ತಿ ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ ಗಳ ವಿಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.