ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕನೋಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಎರಡನೇ ವಿಕೆಟ್ಗೆ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್ಗಳ ಜೊತೆಯಾಟವನ್ನಾಡಿದರು.
ಈ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್ 37 ಎಸೆತಗಳಲ್ಲಿ 93 ರನ್ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್ಗಳು ಸೇರಿದ್ದವು. ಆದಾಗ್ಯೂ ಪ್ರಿಯಾಂಶ್ ಕೇವಲ 7 ರನ್ಗಳಿಂದ ಶತಕ ವಂಚಿತರಾದರು.
ಇತ್ತ ಕೂಪರ್ ಕನೋಲಿ ಕೂಡ 46 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ಗಳ ಸಹಿತ 87 ರನ್ಗಳ ಇನ್ನಿಂಗ್ಸ್ ಅಡಿದರು. ಅದರಲ್ಲೂ ಇವರಿಬ್ಬರು ಸೇರಿ ಇನ್ನಿಂಗ್ಸ್ನ 13ನೇ ಓವರ್ನಲ್ಲಿ ಬರೋಬ್ಬರಿ 32 ರನ್ ಕಲೆಹಾಕಿದರು. ಮಾರ್ಕ್ರಾಮ್ ಬೌಲ್ ಮಾಡಿದ ಈ ಓವರ್ನಲ್ಲಿ ಬರೋಬ್ಬರಿ 5 ಸಿಕ್ಸರ್ಗಳು ಸಿಡಿದವು.
ಈ ಮೂಲಕ ಈ ಆವೃತ್ತಿಯಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ದಾಖಲಿಸಿದ ದಾಖಲೆ ಇವರಿಬ್ಬರ ಪಾಲಾಯಿತು. ಇದಕ್ಕೂ ಮುನ್ನ ಸಿಎಸ್ಕೆ ವಿರುದ್ಧ ಆರ್ಸಿಬಿ ಬ್ಯಾಟರ್ಗಳು ಒಂದು ಓವರ್ನಲ್ಲಿ 30 ರನ್ ಕಲೆಹಾಕಿದ್ದರು. ಇದೀಗ ಆ ದಾಖಲೆ ಪಂಜಾಬ್ ಪಾಲಾಗಿದೆ.
ಹಾಗೆಯೇ ಈ ಪಂದ್ಯದಲ್ಲಿ ಪಂಜಾಬ್ ತಂಡ ಬರೋಬ್ಬರಿ 21 ಸಿಕ್ಸರ್ಗಳನ್ನು ಬಾರಿಸಿತು. ಇದರಲ್ಲಿ ಪ್ರಿಯಾಂಶ್ ಹಾಗೂ ಕನೋಲಿ ಇಬ್ಬರಿಂದ 16 ಸಿಕ್ಸರ್ಗಳು ಸಿಡಿದವು. ಈ 21 ಸಿಕ್ಸರ್ಗಳ ಮೂಲಕ ಈ ಆವೃತ್ತಿಯಲ್ಲಿ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಪಂಜಾಬ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಸಿಎಸ್ಕೆ ವಿರುದ್ಧ 19 ಸಿಕ್ಸರ್ ಬಾರಿಸಿದ್ದ ಆರ್ಸಿಬಿ ಹೆಸರಿನಲ್ಲಿತ್ತು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ದಾಖಲೆ ಬರೆಯಿತು. ಈ ಹಿಂದೆ ಸಿಎಸ್ಕೆ ವಿರುದ್ಧ ಆರ್ಸಿಬಿ ಬಾರಿಸಿದ್ದ 250 ರನ್ಗಳು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆ ಪಂಜಾಬ್ ಪಾಲಾಗಿದೆ.





