ನವದೆಹಲಿ, ಮೇ 23: ದೇಶದಲ್ಲಿ ದೀರ್ಘಕಾಲದವರೆಗೆ ಸ್ಥಿರವಾಗಿದ್ದ ಇಂಧನ ದರಗಳಿಗೆ ಈಗ ಜಾಗತಿಕ ಮಾರುಕಟ್ಟೆಯ ಬಿಸಿ ತಟ್ಟಿದೆ. ಶನಿವಾರದ ತೈಲ ಕಂಪನಿಗಳ ನಿರ್ಧಾರದಂತೆ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ.
ಇದೇ ತಿಂಗಳು ಮೂರನೇ ಬಾರಿ ಏರಿಕೆ:
ಇತ್ತೀಚಿನ ದಿನಗಳಲ್ಲಿ ತೈಲ ಕಂಪನಿಗಳು ಗ್ರಾಹಕರ ಮೇಲೆ ಸತತವಾಗಿ ಇಂಧನ ಹೊರೆಯನ್ನು ಹಾಕುತ್ತಿವೆ. ಈ ವಾರದ ಆರಂಭದಲ್ಲಷ್ಟೇ ಲೀಟರ್ ಇಂಧನಕ್ಕೆ 90 ಪೈಸೆ ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ಲೀಟರ್‌ಗೆ ಒಮ್ಮೆಗೆ ಸುಮಾರು 3 ರೂ.ಗಳಷ್ಟು ದರಗಳನ್ನು ಹೆಚ್ಚಿಸುವ ಮೂಲಕ ದೀರ್ಘಾವಧಿಯ ಬೆಲೆ ಸ್ಥಿರತೆಗೆ ಬ್ರೇಕ್ ಹಾಕಿದ್ದವು. ಇತ್ತೀಚಿನ ಈ ಪರಿಷ್ಕರಣೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.77 ರೂ.ಗಳಿಂದ 98.64 ರೂ.ಗಳಿಗೆ ತಲುಪಿದೆ.
ದರ ಏರಿಕೆಗೆ ಅಸಲಿ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಯುದ್ಧದ ವಾತಾವರಣ ಮತ್ತು ಯುಎಸ್-ಇರಾನ್ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್‌ಗಿಂತ (USD) ಹೆಚ್ಚಾಗಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 97 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಪೂರೈಕೆಯ ಕಳವಳಗಳ ಮಧ್ಯೆ ಒಂದು ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 111 ಡಾಲರ್‌ಗೆ ತಲುಪಿತ್ತು.
ತೈಲ ಕಂಪನಿಗಳಿಗೆ ಆಗ್ತಿದ್ದ ಭಾರಿ ನಷ್ಟ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸತತವಾಗಿ ಏರುತ್ತಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ತಿಂಗಳುಗಳಿಂದ ದೇಶೀಯ ಇಂಧನ ಬೆಲೆಗಳನ್ನು ಬದಲಾಯಿಸದೆ ಗ್ರಾಹಕರಿಗೆ ನೆರವಾಗಿದ್ದವು. ಆದರೆ, ಈ ಅವಧಿಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿ ತಿಂಗಳು ಸುಮಾರು 1,000 ಕೋಟಿ ರೂ.ಗಳಷ್ಟು ಭಾರಿ ನಷ್ಟವನ್ನು ಅನುಭವಿಸುತ್ತಿದ್ದವು. ಹೀಗಾಗಿ ನಷ್ಟದ ಹೊರೆಯನ್ನು ತಗ್ಗಿಸಲು ಈಗ ಬೆಲೆ ಪರಿಷ್ಕರಣೆಯ ಮೂಲಕ ಆ ಹೊರೆಯ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಕಂಪನಿಗಳು ಆರಂಭಿಸಿವೆ.
ಇಂಧನ ಆಘಾತ ಎದುರಿಸಲು ಭಾರತ ಸಜ್ಜು: ಹರ್ದೀಪ್ ಸಿಂಗ್ ಪುರಿ
ಇತ್ತೀಚೆಗೆ ನಡೆದ ‘ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆ 2026’ ರಲ್ಲಿ ಮಾತನಾಡಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಜಾಗತಿಕ ಅಡೆತಡೆಗಳು ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಹೊರತಾಗಿಯೂ ಬಲವಾದ ನೀತಿ ಸಮನ್ವಯದ ಮೂಲಕ ಭಾರತವು ಸ್ಥಿರ ಇಂಧನ ಪೂರೈಕೆಯನ್ನು ಖಚಿತಪಡಿಸಿದೆ ಎಂದು ಹೇಳಿದ್ದರು. ಯಾವುದೇ ಕೊರತೆಯಾಗದಂತೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ತಡೆರಹಿತ ಲಭ್ಯತೆಯನ್ನು ಖಚಿತಪಡಿಸಲಾಗಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದರು. ಆದಾಗ್ಯೂ, ಪ್ರಸ್ತುತ ಜಾಗತಿಕ ಒತ್ತಡ ಹೆಚ್ಚಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಬೆಲೆ ಏರಿಕೆ ಅನಿವಾರ್ಯವಾಗಿದೆ.
