ಪಿಎಂ ಇಂಟರ್ನ್‌ಶಿಪ್ ಯೋಜನೆImage Credit source: Ai generated
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ ಅಡಿಯಲ್ಲಿ ದೇಶದ ಯುವಕ-ಯುವತಿಯರಿಗೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡುವುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9,000ರೂ. ಸ್ಟೈಫಂಡ್ ನೀಡಲಾಗುತ್ತದೆ. ಇದು ಒಟ್ಟು 12 ತಿಂಗಳ ಅವಧಿಯ ಇಂಟರ್ನ್‌ಶಿಪ್ ಆಗಿದ್ದು, ತರಬೇತಿ ಪಡೆಯುವವರು ದೇಶದ ಅಗ್ರಗಣ್ಯ 500 ಕಂಪನಿಗಳಲ್ಲಿ ಅನುಭವ ಪಡೆಯಲು ಅವಕಾಶವಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 24 ವರ್ಷ ವಯೋಮಿತಿಯವರಾಗಿರಬೇಕು. ಶೈಕ್ಷಣಿಕವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿಯನ್ನು ಪೂರ್ಣಗೊಳಿಸಿದವರು ಅರ್ಹರಾಗಿರುತ್ತಾರೆ. ಆದರೆ, ಐಐಟಿ, ಐಐಎಂ ಅಥವಾ ಸಿಎ ಅಂತಹ ಉನ್ನತ ಪದವಿ ಹೊಂದಿದವರಿಗೆ ಮತ್ತು ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಹೆಚ್ಚಿರುವವರಿಗೆ ಇದರಲ್ಲಿ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಉದ್ಯೋಗದಲ್ಲಿದ್ದರೂ ಸಹ ಅವರು ಈ ಯೋಜನೆಗೆ ಅರ್ಹರಲ್ಲ.
ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್ ನೇಮಕಾತಿ ಘೋಷಣೆ
ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆ:
ಆಸಕ್ತರು ಅಧಿಕೃತ ವೆಬ್‌ಸೈಟ್ pminternship.mca.gov.in ಮೂಲಕ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಮೇ 13ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ನೀಡಿ, ತಮಗೆ ಇಷ್ಟವಾದ ಕ್ಷೇತ್ರ ಮತ್ತು ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಮೆರಿಟ್ ಮತ್ತು ಕಂಪನಿಗಳ ಅವಶ್ಯಕತೆಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ತರಬೇತಿಯ ಕೊನೆಯಲ್ಲಿ ನೀಡಲಾಗುವ ಅನುಭವದ ಪ್ರಮಾಣಪತ್ರವು ಅಭ್ಯರ್ಥಿಗಳು ಭವಿಷ್ಯದಲ್ಲಿ ಖಾಸಗಿ ವಲಯದಲ್ಲಿ ಉತ್ತಮ ಉದ್ಯೋಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:13 pm, Sat, 9 May 26
