
ಮಾರ್ಚ್ 26 ರಿಂದ ಪಾಕಿಸ್ತಾನದಲ್ಲಿ ಪ್ರಾರಂಭವಾಗಬೇಕಿದ್ದ ಪಾಕಿಸ್ತಾನ ಸೂಪರ್ ಲೀಗ್ಗೆ ಕ್ವಾರಂಟೈನ್ ಪರಿಸ್ಥಿತಿ ಎದುರಾಗಿದೆ. ಅಂದರೆ ಕ್ರೀಡಾಂಗಣದಲ್ಲಿ ಯಾವ ಪ್ರೇಕ್ಷಕರು ಇಲ್ಲದೆ ಪಂದ್ಯಾವಳಿಯನ್ನು ನಡೆಸಬೇಕಾಗಿದೆ. ಪಾಕಿಸ್ತಾನದ ಟಿ20 ಲೀಗ್ನ 11 ನೇ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ, ಆದರೆ ಆರಂಭಕ್ಕೆ ಕೇವಲ ನಾಲ್ಕು ದಿನಗಳ ಮೊದಲು, ಪಂದ್ಯಾವಳಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ವಿದೇಶಿ ಆಟಗಾರರು ಲೀಗ್ ತೊರೆಯುತ್ತಿರುವುದರಿಂದ ಮತ್ತು ದೇಶದಲ್ಲಿನ ಭದ್ರತಾ ಪರಿಸ್ಥಿತಿಯಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್ಎಲ್ 2026 ಸೀಸನ್ ಅನ್ನು ಆರು ಸ್ಥಳಗಳ ಬದಲಿಗೆ ಕೇವಲ ಎರಡು ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಪಿಎಸ್ಎಲ್ ಬಗ್ಗೆ ದೊಡ್ಡ ಘೋಷಣೆ
ವಾಸ್ತವವಾಗಿ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ಎಂಟು ತಂಡಗಳು ಕಣಕ್ಕಿಳಿಯುತ್ತಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಅಭಿಮಾನಿಗಳು ಹೆಚ್ಚಿನ ಮನರಂಜನೆ ಸಿಗುವ ಖುಷಿಯಲ್ಲಿದ್ದರು. ಆದರೆ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಏಕೆಂದರೆ ಮೇಲೆ ಹೇಳಿದಂತೆ ದೇಶದಲ್ಲಿನ ಭದ್ರತಾ ಪರಿಸ್ಥಿತಿಯಿಂದಾಗಿ ಈ ಪಂದ್ಯಾವಳಿಯನ್ನು ಲಾಹೋರ್ ಮತ್ತು ಕರಾಚಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಈ ಲೀಗ್ನ ಎಲ್ಲಾ ಪಂದ್ಯಗಳು ಈ ಎರಡು ನಗರಗಳಲ್ಲಿ ಮಾತ್ರ ನಡೆಯಲಿವೆ. ಇದಲ್ಲದೆ, ಇಡೀ ಪಂದ್ಯಾವಳಿ ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮೊಹ್ಸಿನ್ ನಖ್ವಿ, ‘ಕಳೆದ ಹಲವು ದಿನಗಳಿಂದ ದೇಶದ ಪ್ರಧಾನಿ ಮತ್ತು ಲೀಗ್ನ ಫ್ರಾಂಚೈಸಿ ಮಾಲೀಕರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಪಾಕಿಸ್ತಾನದ ತೈಲ ಮತ್ತು ಅನಿಲ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಇದರಿಂದಾಗಿ ಪಾಕಿಸ್ತಾನ ಸರ್ಕಾರ ತೈಲ ಮತ್ತು ಅನಿಲ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಸಾರಿಗೆಯನ್ನು ಕಡಿಮೆ ಮಾಡಲು ಮತ್ತು ಇಂಧನವನ್ನು ಉಳಿಸಲು ಪಾಕಿಸ್ತಾನ ಮಂಡಳಿಯು ಕೇವಲ ಎರಡು ನಗರಗಳಲ್ಲಿ ಮತ್ತು ಪ್ರೇಕ್ಷಕರಿಲ್ಲದೆ ಲೀಗ್ ಅನ್ನು ನಡೆಸಲು ನಿರ್ಧರಿಸಿದೆ ಎಂದಿದ್ದಾರೆ.
ಹಿಂದೆ ಸರಿಯುತ್ತಿರುವ ವಿದೇಶಿ ಆಟಗಾರರು
ಪಂದ್ಯಾವಳಿಯನ್ನು ಮುಂದೂಡುವುದು ಒಂದು ಆಯ್ಕೆಯಾಗಿತ್ತು. ಆದರೆ ಈಗ ಪಂದ್ಯಾವಳಿಯನ್ನು ಮುಂದೂಡಿದರೆ, ಆ ಬಳಿಕ ಇದನ್ನು ಮತ್ತೆ ನಡೆಸಲು ಯಾವುದೇ ಅವಕಾಶವಿಲ್ಲ. ಇದಲ್ಲದೆ, ಕಳೆದ ಕೆಲವು ದಿನಗಳಲ್ಲಿ ಹಲವಾರು ವಿದೇಶಿ ಆಟಗಾರರು ಲೀಗ್ನಿಂದ ಹಿಂದೆ ಸರಿದಿದ್ದಾರೆ, ಇದಕ್ಕೆ ಪ್ರಮುಖ ಕಾರಣ ಐಪಿಎಲ್ ಜೊತೆಗೆ ಪಂದ್ಯಾವಳಿ ನಡೆಯುತ್ತಿರುವುದು. ವಾಸ್ತವವಾಗಿ, ಐಪಿಎಲ್ನಲ್ಲಿ ಹಲವಾರು ಆಟಗಾರರನ್ನು ಗಾಯದ ಕಾರಣದಿಂದಾಗಿ ಹೊರಗಿಡಲಾಗಿದೆ. ಪರಿಣಾಮವಾಗಿ, ಪಿಎಸ್ಎಲ್ನಲ್ಲಿ ಆಡಲು ಒಪ್ಪಿದ್ದ ಕೆಲವು ವಿದೇಶಿ ಆಟಗಾರರು ಈಗ ಲೀಗ್ನಿಂದ ಹಿಂದೆ ಸರಿದು ಐಪಿಎಲ್ನಲ್ಲಿ ಆಡಲು ಮುಂದಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ