Headlines

Rabies Vaccine: ಭಾರತದಲ್ಲಿ ಹೆಚ್ಚುತ್ತಲೇ ಇದೆ ನಾಯಿ ಕಚ್ಚುವಿಕೆ; ಲಸಿಕೆ ಪಡೆದರೂ ರೇಬೀಸ್ ಬರಲು ಸಾಧ್ಯವೇ? – Kannada News | Can you get rabies even after taking the vaccine Health Care Tips

ನವದೆಹಲಿ, ಆಗಸ್ಟ್ 7: ರೇಬೀಸ್ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೋಗ ಹರಡುವಿಕೆಯನ್ನು ತಡೆಯಲು ಮುಂದಾಗಿದೆ. ಇದರ ಭಾಗವಾಗಿ, ರೇಬೀಸ್​ನಿಂದ ಉಂಟಾಗುತ್ತಿರುವ ಸಾವುಗಳ ಬಗ್ಗೆ ಆರೋಗ್ಯ, ಪಶುವೈದ್ಯಕೀಯ, ಪೌರಾಡಳಿತ ಮತ್ತು ಅರಣ್ಯ ಇಲಾಖೆಗಳ ಜಂಟಿ ತಂಡಗಳ ಮೂಲಕ ತನಿಖೆ ಮಾಡಲು ಭಾರತ ಸಜ್ಜಾಗಿದೆ. ಇತ್ತೀಚೆಗೆ ಪೂರ್ಣ ಪ್ರಮಾಣದ ರೇಬೀಸ್ ನಿರೋಧಕ ಲಸಿಕೆ (Rabies Vaccine) ಪಡೆದ ನಂತರವೂ ಕೆಲವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡು ಸಾವನ್ನಪ್ಪಿರುವುದು “ಲಸಿಕೆ ಪಡೆದ ನಂತರವೂ ರೇಬೀಸ್ ಬರಲು ಸಾಧ್ಯವೇ?” ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕೆಲವು ವಿರಳ ಪ್ರಕರಣಗಳಲ್ಲಿ ರೇಬೀಸ್ ಲಸಿಕೆ ಪಡೆದರೂ ರೇಬೀಸ್ ರೋಗ ಉಂಟಾಗುತ್ತದೆ. ರೇಬೀಸ್ ಎಂಬುದು ನರಮಂಡಲದ ಮೇಲೆ ದಾಳಿ ಮಾಡುವ ವೈರಸ್‌ನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಕಡಿತ ಅಥವಾ ಪರಚುವಿಕೆಯಿಂದ ಹರಡುತ್ತದೆ. ಒಮ್ಮೆ ರೋಗಲಕ್ಷಣಗಳು ಕಾಣಿಸಿಕೊಂಡರೆ ರೇಬೀಸ್‌ನಿಂದ ಸಾವು ಬಹುತೇಕ ಖಚಿತ. ಆದರೆ, ರೇಬೀಸ್ ವೈರಸ್ ನರಗಳ ಮೂಲಕ ಮೆದುಳನ್ನು ತಲುಪಲು ಕೆಲವು ವಾರಗಳು, ಕೆಲವೊಮ್ಮೆ ತಿಂಗಳುಗಳನ್ನೇ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಅಂದರೆ ರೋಗವು ಅಪಾಯಕಾರಿಯಾಗುವ ಮೊದಲು ಸೂಕ್ತ ಚಿಕಿತ್ಸೆಯ ಮೂಲಕ ಅದನ್ನು ಸಂಪೂರ್ಣವಾಗಿ ತಡೆಯಬಹುದು. ಪ್ರಾಣಿ ಕಡಿದ ನಂತರ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿದರೆ ರಕ್ಷಣೆ ಪಡೆಯಬಹುದಾದ ಕೆಲವೇ ಕೆಲವು ಸೋಂಕುಗಳಲ್ಲಿ ರೇಬೀಸ್ ಕೂಡ ಒಂದಾಗಿದೆ.

ರೇಬೀಸ್ ಅತ್ಯಂತ ಭೀಕರವಾದ ಕಾಯಿಲೆಯಾಗಿದ್ದರೂ, ಸರಿಯಾದ ಸಮಯಕ್ಕೆ ಲಸಿಕೆ, ಗಾಯದ ಆರೈಕೆ ಮತ್ತು ಇಮ್ಯುನೊಗ್ಲೋಬುಲಿನ್ ಪಡೆದರೆ ಇದನ್ನು ಸಂಪೂರ್ಣವಾಗಿ ತಡೆಯಬಹುದು. ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ಗಾಯ ಸಣ್ಣದಾಗಿ ಕಂಡರೂ ಅಲಕ್ಷಿಸಬೇಡಿ. ತಕ್ಷಣವೇ ಆ ಗಾಯವನ್ನು ತೊಳೆದು, ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Rabies: ನಾಯಿ ಕಚ್ಚಿದ ನಂತರ ರೇಬೀಸ್ ಇಂಜೆಕ್ಷನ್ ಪಡೆದರೂ ಸಾಯುವ ಸಾಧ್ಯತೆ ಉಂಟಾ?

ಕೇವಲ ಲಸಿಕೆ ಒಂದೇ ರೇಬೀಸ್ ಅನ್ನು ತಡೆಯುತ್ತದೆ ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಪ್ರಾಣಿ ಕಡಿದ ನಂತರ ನೀಡುವ ಚಿಕಿತ್ಸೆ 3 ಅತ್ಯಂತ ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ,

ಗಾಯವನ್ನು ತೊಳೆಯುವುದು:

ಪ್ರಾಣಿ ಕಚ್ಚಿದ ತಕ್ಷಣವೇ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಹರಿಯುವ ನೀರು ಮತ್ತು ಸಾಬೂನಿನಿಂದ ತೊಳೆಯಬೇಕು. ಈ ಸಣ್ಣ ಕ್ರಿಯೆಯು ಗಾಯದ ಭಾಗದಲ್ಲಿರುವ ವೈರಸ್‌ನ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ರೇಬೀಸ್ ಇಮ್ಯುನೊಗ್ಲೋಬುಲಿನ್ (RIG):

ಈ ಮೊದಲು ಲಸಿಕೆ ಪಡೆಯದ ವ್ಯಕ್ತಿಗೆ ಇಮ್ಯುನೊಗ್ಲೋಬುಲಿನ್ ನೀಡಲಾಗುತ್ತದೆ. ದೇಹವು ತನ್ನದೇ ಆದ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವವರೆಗೆ, ಇದು ತಕ್ಷಣವೇ ವೈರಸ್ ವಿರುದ್ಧ ಹೋರಾಡಲು ಆ್ಯಂಟಿಬಾಡಿಗಳನ್ನು ಒದಗಿಸುತ್ತದೆ.

ಲಸಿಕೆ ಡೋಸ್‌ಗಳು:

ಲಸಿಕೆಯು ದೇಹದ ರೋಗನಿರೋಧಕ ವ್ಯವಸ್ಥೆಗೆ ದೀರ್ಘಕಾಲದ ರಕ್ಷಣೆ ನೀಡಲು ತರಬೇತಿ ನೀಡುತ್ತದೆ.

ಇದನ್ನೂ ಓದಿ: Rabies: ರೇಬೀಸ್ ತಡೆಗಟ್ಟಲು ಸಾಧ್ಯವೇ?; ಆರೋಗ್ಯ ತಜ್ಞರ ಅಚ್ಚರಿಯ ಉತ್ತರ ಇಲ್ಲಿದೆ

ಲಸಿಕೆ ಪಡೆದರೂ ರೇಬೀಸ್ ಬರಲು ಪ್ರಮುಖ ಕಾರಣಗಳು:

ಪೋಸ್ಟ್-ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ (PEP) ತಡವಾಗುವುದು:

ಶ್ವಾನ ಅಥವಾ ಇತರ ಸೋಂಕಿತ ಪ್ರಾಣಿ ಕಚ್ಚಿದ ತಕ್ಷಣವೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯದಿರುವುದು ಅತ್ಯಂತ ಅಪಾಯಕಾರಿ. ರೇಬೀಸ್ ವೈರಸ್ ನರಮಂಡಲವನ್ನು ತಲುಪುವ ಮೊದಲು ಲಸಿಕೆ ನೀಡಬೇಕಾಗುತ್ತದೆ.

ಇಮ್ಯುನೊಗ್ಲೋಬುಲಿನ್ (RIG) ನೀಡದಿರುವುದು:

ಗಂಭೀರ ಗಾಯಗಳಾದಾಗ ಕೇವಲ ಲಸಿಕೆ ಸಾಲದು. ಗಾಯದ ಭಾಗಕ್ಕೆ ನೇರವಾಗಿ ‘ರೇಬೀಸ್ ಇಮ್ಯುನೊಗ್ಲೋಬುಲಿನ್’ (RIG) ಇಂಜೆಕ್ಷನ್ ನೀಡುವುದು ಕಡ್ಡಾಯ. ಇದನ್ನು ನೀಡದಿದ್ದಾಗ ವೈರಸ್ ತಕ್ಷಣವೇ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು:

ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಹರಿಯುವ ನೀರು ಮತ್ತು ಸಾಬೂನಿನಿಂದ ತೊಳೆಯಬೇಕು. ಈ ಮೊದಲ ಹಂತವನ್ನು ನಿರ್ಲಕ್ಷಿಸುವುದರಿಂದ ವೈರಸ್‌ನ ಸಾಂದ್ರತೆ ದೇಹದಲ್ಲಿ ಹಾಗೆಯೇ ಉಳಿಯುತ್ತದೆ.

ಅಸಂಪೂರ್ಣ ಲಸಿಕೆ ಡೋಸ್‌ಗಳು:

ವೈದ್ಯರು ನಿಗದಿಪಡಿಸಿದ ಎಲ್ಲಾ ಡೋಸ್‌ಗಳನ್ನು (3, 7, 14 ಮತ್ತು 28ನೇ ದಿನಗಳು) ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದಿರುವುದು.

ರೋಗನಿರೋಧಕ ಶಕ್ತಿಯ ಕೊರತೆ:

ರೋಗಿಗಳಲ್ಲಿ ತೀವ್ರತರದ ರೋಗನಿರೋಧಕ ಶಕ್ತಿಯ ಕೊರತೆ ಇದ್ದಾಗ ದೇಹವು ಲಸಿಕೆಗೆ ಸರಿಯಾಗಿ ಸ್ಪಂದಿಸಿ ಆ್ಯಂಟಿಬಾಡಿಗಳನ್ನು ಉತ್ಪಾದಿಸಲು ವಿಫಲವಾಗಬಹುದು.

ರೇಬೀಸ್ ಲಸಿಕೆಯು ಸರಿಯಾದ ಸಮಯಕ್ಕೆ ಮತ್ತು ನಿಖರವಾದ ಮಾರ್ಗದರ್ಶನದಂತೆ ಪಡೆದುಕೊಂಡರೆ ಶೇ. 100ರಷ್ಟು ಪರಿಣಾಮಕಾರಿಯಾಗಿದೆ. ಅಜಾಗರೂಕತೆ ಮತ್ತು ಪ್ರೋಟೋಕಾಲ್ ಪಾಲಿಸದಿರುವುದೇ ಇಂತಹ ವಿರಳ ಸಾವುಗಳಿಗೆ ಮುಖ್ಯ ಕಾರಣ ಎಂದು ಅಧ್ಯಯನಗಳು ಎಚ್ಚರಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *