ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿದೆ. ಇತ್ತ ಕರ್ನಾಟಕ ತಂಡ ಅನುಭವಿ ಬೌಲಿಂಗ್ ವಿಭಾಗವನ್ನೇ ಹೊಂದಿದ್ದರೂ ತನ್ನ ತವರು ನೆಲದಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿದೆ. ಇನ್ನು ಜಮ್ಮ ಮತ್ತು ಕಾಶ್ಮೀರ ತಂಡದ ಪರ ಅಜೇಯ ಶತಕ ಬಾರಿಸಿರುವ ಶುಭಂ ಪುಂಡೀರ್ 117 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರ ಜೊತೆಗೆ ಅಬ್ದುಲ್ ಸಮದ್ ಕೂಡ 52 ರನ್ ಗಳಿಸಿ ಅಜೇಯರಾಗಿದ್ದಾರೆ. ಕರ್ನಾಟಕ ಪರ ವೇಗಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದ್ದನ್ನು ಬಿಟ್ಟರೆ, ಉಳಿದವರು ವಿಕೆಟ್ ಬರ ಎದುರಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ದಿನ 87 ಓವರ್‌ಗಳು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ 2 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 18 ರನ್‌ಗಳಾಸಿದ್ದಾಗ ತಂಡದ ಮೊದಲ ವಿಕೆಟ್ ಪತನವಾಯಿತು. ಕಮ್ರಾನ್ ಇಕ್ಬಾಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಶುಭಂ ಪುಂಡಿರ್ ಮತ್ತು ಯಾವರ್ ಹಸನ್ ಎರಡನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟ ನೀಡಿದರು.
ಆದರೆ 88 ರನ್ ಬಾರಿಸಿದ್ದ ಯಾವರ್ ಹಸನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದಿತ್ತು. ಆ ಬಳಿಕ ಬಂದ ನಾಯಕ ಪರಾಸ್ ಡೋಗ್ರಾ 9 ರನ್ ಗಳಿಸಿದ್ದಾಗ ಗಾಯಕ್ಕೆ ತುತ್ತಾಗಿ ನಿವೃತ್ತರಾದರು. ಆ ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಶುಭಂ ಪುಂಡೀರ್ ಮತ್ತು ಅಬ್ದುಲ್ ಸಮದ್ ತಂಡವನ್ನು 250 ರನ್‌ಗಳ ಗಡಿ ದಾಟಿಸಿದರು. ಇಬ್ಬರೂ ಅಜೇಯ 105 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ದಿನದಾಟದಂತ್ಯಕ್ಕೆ ಶುಭಂ ಪುಂಡೀರ್ ಔಟಾಗದೆ 117 ಮತ್ತು ಅಬ್ದುಲ್ ಸಮದ್ ಔಟಾಗದೆ 52 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Published On – 6:01 pm, Tue, 24 February 26
