ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಮ್ಯಾಚ್ನಲ್ಲಿ ಆರ್ಸಿಬಿ ತಂಡವು ರೋಚಕ ಜಯ ಸಾಧಿಸಿದೆ. ಆರ್ಸಿಬಿ ತಂಡದ ಈ ಗೆಲುವಿಗೆ ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ದಾರ್ ಎಷ್ಟು ಕಾರಣರೋ, ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ರಾಜ್ ಬಾವ ಕೂಡ ಅಷ್ಟೇ ಕಾರಣರು.
ಏಕೆಂದರೆ ಈ ಮ್ಯಾಚ್ನ ಅಂತಿಮ ಓವರ್ನಲ್ಲಿ ಆರ್ಸಿಬಿ ತಂಡಕ್ಕೆ 15 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ರಾಜ್ ಬಾವ ಬರೋಬ್ಬರಿ 10 ಎಸೆತಗಳನ್ನು ಎಸೆದಿದ್ದರು. ಅಂದರೆ ಹೆಚ್ಚುವರಿ ಮೂರು ಎಸೆತಗಳೇ ಮುಂಬೈ ಇಂಡಿಯನ್ಸ್ ಪಾಲಿಗೆ ಮುಳುವಾಯಿತು.
ರಾಜ್ ಬಾವ ಕೊನೆಯ ಓವರ್:
ಮೊದಲ ಎಸೆತವನ್ನು ವೈಡ್ ಎಸೆದಿದ್ದ ರಾಜ್ ಬಾವ, ಮರು ಎಸೆತದಲ್ಲಿ ನೋ ಬಾಲ್ ಮಾಡಿದರು. ಪರಿಣಾಮ ಆರ್ಸಿಬಿ ತಂಡಕ್ಕೆ 2 ರನ್ಗಳು ಸಿಕ್ಕವು. ಇನ್ನು ಫ್ರಿಹಿಟ್ ಎಸೆತದಲ್ಲಿ ಒಂದು ರನ್ ನೀಡಿದರು.
ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಇದರಿಂದ ಎಕ್ಸ್ಟ್ರಾ ಇನ್ನೊಂದು ರನ್ ಸಿಕ್ಕಿತು. ಆ ಬಳಿಕ ರೊಮಾರಿಯೊ ಶೆಫರ್ಡ್ ವಿಕೆಟ್ ಪಡೆದರು. ಆದರೆ ಆ ಬಳಿಕ ಭುವನೇಶ್ವರ್ ಕುಮಾರ್ಗೆ ಬಾನ್ಸರ್ ಎಸೆಯಲು ಹೋಗಿ ಮತ್ತೊಂದು ವೈಡ್ ನೀಡಿದರು. ಮರು ಎಸೆತದಲ್ಲಿ ಭುವಿ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ ಒಂದು ರನ್ ಕಲೆಹಾಕುವ ಮೂಲಕ ರಾಸಿಖ್ ದಾರ್ಗೆ ಸ್ಟ್ರೈಕ್ ನೀಡಿದರು.
ಅದರಂತೆ ಅಂತಿಮ ಎಸೆತದಲ್ಲಿ ಆರ್ಸಿಬಿ ತಂಡಕ್ಕೆ 2 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ರಾಸಿಖ್ ನೀಡಿದ ಕ್ಯಾಚ್ ಕೈಚೆಲ್ಲುವ ಮೂಲಕ ರಾಜ್ ಬಾವ 2 ರನ್ ಬಿಟ್ಟು ಕೊಟ್ಟರು. ಈ ಮೂಲಕ ಆರ್ಸಿಬಿ ತಂಡ ಕೊನೆಯ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿತು.
ಅಂದರೆ ಇಲ್ಲಿ ರಾಜ್ ಬಾವ ಕೊನೆಯ ಓವರ್ನಲ್ಲಿ ಮೂರು ವೈಡ್ ಹಾಗೂ ಒಂದು ನೋ ಬಾಲ್ ಎಸೆಯುವ ಮೂಲಕ ಒಟ್ಟು 10 ಎಸೆತಗಳನ್ನು ಎಸೆದಿದ್ದರು. ಈ ಹೆಚ್ಚುವರಿ 4 ಎಸೆತಗಳ ಮೂಲಕ ಆರ್ಸಿಬಿ 5 ರನ್ಗಳನ್ನು ಕಲೆಹಾಕಿದ್ದರು. ಅಂದರೆ ರಾಜ್ ಬಾವ ಎಸೆದ ಹೆಚ್ಚುವರಿ ಎಸೆತಗಳೇ ಆರ್ಸಿಬಿ ಗೆಲುವಿಗೆ ಕಾರಣವಾಯ್ತು ಎಂದರೆ ತಪ್ಪಾಗಲಾರದು.
