
ಜೂನ್ 4, 2025.. ಆರ್ಸಿಬಿ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ ದಿನ. ಬರೋಬ್ಬರಿ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದ ಆರ್ಸಿಬಿ, ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಆರ್ಸಿಬಿಯ ಮೊದಲ ಗೆಲುವನ್ನು ಅದರ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಬೀದಿ ಬೀದಿಗಳಲ್ಲಿ ಆರ್ಸಿಬಿ ಪರ ಘೋಷಣೆಗಳು ಮೊಳಗಿದ್ದವು. ಆದರೆ ಈ ಗೆಲುವಿನ ಸಂಭ್ರಮ ಸರಿಯಾಗಿ ಒಂದು ದಿನವೂ ಇರಲಿಲ್ಲ. ಟ್ರೋಫಿ ಗೆಲುವಿನ ಸಂಭ್ರಮದಲ್ಲಿದ್ದ ಆರ್ಸಿಬಿ ಮ್ಯಾನೇಜ್ಮೆಂಟ್ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳಲು ಬಯಸಿತ್ತು. ಇತ್ತ ಅಭಿಮಾನಿಗಳು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಲು ಮೈದಾನದಲ್ಲಿ ಸಾಗರೋಪಾದಿಯಾಗಿ ಹರಿದುಬಂದಿದ್ದರು. ಸಂಭ್ರಮಾಚರಣೆ ಶುರುವಾಗುವ ವೇಳೆಗೆ ಅಲ್ಲಿ ಜವರಾಯನ ಆಗಮನವಾಗಿ ಕಾಲ್ತುಳಿತವೆಂಬ ಘೋರ ದುರಂತದಿಂದ 11 ಅಮಾಯಕರು ಸಾವನ್ನಪ್ಪಿದರು.
ಈ ಅವಘಡದ ಬಳಿಕ ಏನೆಲ್ಲ ಆಯ್ತು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದಾಗ್ಯೂ ಅಗಲಿದ ಈ ಜೀವಗಳಿಗೆ ಆರ್ಸಿಬಿ ಹಾಗೂ ಕೆಎಸ್ಸಿಎ ಮಾಡಿದ ಸಹಾಯ ಅಲ್ಪ ಎಂಬ ಕೊರಗು ಅಭಿಮಾನಿಗಳಲ್ಲಿ ಕಾಡಲಾರಂಭಿಸಿತ್ತು. ಆದರೀಗ ಆರ್ಸಿಬಿ ಹಾಗೂ ಕೆಎಸ್ಸಿಎ ಆಡಳಿತ ಮಂಡಳಿ ಮಡದಿ ಜೀವಗಳ ನೆನಪಿಗೆ ಇದುವರೆಗೆ ಯಾರೂ ಮಾಡದ ಕೆಲಸಕ್ಕೆ ಕೈಹಾಕಿದೆ. ಈ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಐಪಿಎಲ್ 19 ನೇ ಸೀಸನ್ ಆರಂಭಕ್ಕೂ ಮುನ್ನ, ಆರ್ಸಿಬಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಈ ಘಟನೆಯನ್ನು ಸ್ಮರಿಸಲು ಭಾವನಾತ್ಮಕ ನಿರ್ಧಾರ ತೆಗೆದುಕೊಂಡಿವೆ. ಅಗಲಿದ ಈ 11 ಜೀವಗಳ ನೆನಪಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮರಣಾರ್ಥ ಫಲಕವನ್ನು ಸ್ಥಾಪಿಸಲು ಮತ್ತು ಕ್ರೀಡಾಂಗಣದ ಗ್ಯಾಲರಿಯಲ್ಲಿ 11 ಸೀಟುಗಳನ್ನು ಯಾವಾಗಲೂ ಖಾಲಿ ಇಡಲು ಆರ್ಸಿಬಿ-ಕೆಎಸ್ಸಿಎ ನಿರ್ಧರಿಸಿದೆ. ಈ 11 ಸೀಟುಗಳನ್ನು ಕೇವಲ ಐಪಿಎಲ್ ಪಂದ್ಯಗಳಿಗೆ ಮಾತ್ರವಲ್ಲ, ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲೂ ಖಾಲಿ ಇಡಲು ತೀರ್ಮಾನಿಸಲಾಗಿದೆ ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾಧ್ ಮಾಹಿತಿ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಈ 11 ಆಸನಗಳು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಜನರನ್ನು ಪ್ರತಿನಿಧಿಸುತ್ತವೆ. ಇದರ ಜೊತೆಗೆ ಕ್ರೀಡಾಂಗಣದ ಪ್ರವೇಶದ್ವಾರದ ಬಳಿ ಸ್ಮಾರಕ ಫಲಕವನ್ನು ಇರಿಸಲಾಗುವುದು. ಹಾಗೆಯೇ ಐಪಿಎಲ್ನ ಉದ್ಘಾಟನಾ ಪಂದ್ಯ ಆರಂಭಕ್ಕೂ ಮೊದಲು ಸಾವನ್ನಪ್ಪಿದವರ ಹೆಸರುಗಳನ್ನು ಪರದೆಯ ಮೇಲೆ ತೋರಿಸಲಾಗುತ್ತದೆ ಮತ್ತು ಒಂದು ನಿಮಿಷ ಮೌನಾಚರಣೆ ಮಾಡಲಾಗುವುದು. ಇದರಲ್ಲಿ ಎರಡೂ ತಂಡಗಳು ಭಾಗವಹಿಸುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ