
IPL 2026: ಒಬ್ಬ ಕ್ರಿಕೆಟ್ ತಂಡದ ನಾಯಕನಿಗೆ ತನ್ನ ತಂಡ ಸತತವಾಗಿ 200ಕ್ಕೂ ಹೆಚ್ಚು ರನ್ ಗಳಿಸುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಮಾಧಾನ ಮತ್ತೊಂದಿಲ್ಲ. ಪ್ರಸ್ತುತ ನನ್ನ ತಂಡದ ಬ್ಯಾಟಿಂಗ್ ಲೈನಪ್ ನೋಡಿದರೆ, ಕೇವಲ ಆಟಗಾರರಲ್ಲ, ಅಪ್ಪಟ ‘ಧುರಂಧರ’ರ ದಂಡೇ ಅಲ್ಲಿ ನಿಂತಿದೆ ಅನ್ನಿಸುತ್ತದೆ. ಹೀಗಂದಿರುವುದು ಮತ್ಯಾರೂ ಅಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್.
‘ಧುರಂಧರ’ರ ದಂಡು:
ಪ್ರತಿ ಪಂದ್ಯದಲ್ಲೂ 200 ರನ್ ದಾಟುವುದು ಸುಲಭದ ಮಾತಲ್ಲ. ಇದಕ್ಕೆ ಆರಂಭಿಕರಿಂದ ಹಿಡಿದು ಫಿನಿಶರ್ಗಳವರೆಗೆ ಎಲ್ಲರ ಕೊಡುಗೆಯೂ ಮುಖ್ಯ. ನಮ್ಮ ತಂಡದ ಬ್ಯಾಟರ್ಗಳು ಮೈದಾನಕ್ಕಿಳಿದರೆ ಸಾಕು, ಬೌಲರ್ಗಳ ಬೆವರಿಳಿಯುತ್ತಿದೆ. ಸಿಕ್ಸರ್-ಬೌಂಡರಿಗಳ ಸುರಿಮಳೆಯಾಗುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ರಜತ್ ಪಾಟಿದಾರ್ ಹೇಳಿದ್ದಾರೆ.
ನಾಯಕನಾಗಿ ಹೆಮ್ಮೆಯ ಕ್ಷಣ:
ತಂಡದಲ್ಲಿ ಇಷ್ಟೊಂದು ಮ್ಯಾಚ್-ವಿನ್ನರ್ಗಳು ಇದ್ದಾಗ ನಾಯಕನ ಕೆಲಸ ಸುಲಭವಾಗುತ್ತದೆ. ಯಾವುದೇ ಹಂತದಲ್ಲಿ ವಿಕೆಟ್ ಬಿದ್ದರೂ, ನಂತರ ಬರುವ ಆಟಗಾರ ಪಂದ್ಯವನ್ನು ಅಷ್ಟೇ ವೇಗವಾಗಿ ಮುಂದೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದಾನೆ.
ಈ ರೀತಿಯ ಬ್ಯಾಟಿಂಗ್ ಬಲ ಇರುವುದರಿಂದ, ಬೌಲರ್ಗಳ ಮೇಲೆ ಒತ್ತಡ ಕಡಿಮೆ ಇರುತ್ತದೆ ಮತ್ತು ನಾಯಕನಾಗಿ ನಾನು ಹೆಚ್ಚು ಆಕ್ರಮಣಕಾರಿ ತಂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.
ಸವಾಲು ಮತ್ತು ಜವಾಬ್ದಾರಿ:
ಆರ್ಸಿಬಿ ತಂಡದಲ್ಲಿ ಇಷ್ಟೊಂದು ಪ್ರತಿಭಾವಂತ ಆಟಗಾರರಿದ್ದಾಗ ಎಲ್ಲರಿಗೂ ಸರಿಯಾದ ಅವಕಾಶ ನೀಡುವುದು ಕೂಡ ದೊಡ್ಡ ಸವಾಲು. ಬ್ಯಾಟಿಂಗ್ ಕ್ರಮಾಂಕವನ್ನು ಸಮತೋಲನದಲ್ಲಿಟ್ಟುಕೊಂಡು, ಈ ಫಾರ್ಮ್ ಅನ್ನು ಟೂರ್ನಿಯ ಕೊನೆಯವರೆಗೂ ಕಾಯ್ದುಕೊಳ್ಳುವುದು ಈಗಿನ ಮುಖ್ಯ ಗುರಿ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್ಗೆ ಅನ್ಯಾಯ..!
ಅದರಂತೆ ನಾವು ಮುಂಬೈ ಇಂಡಿಯನ್ಸ್ ವಿರುದ್ಧಅವರ ತವರಿನಲ್ಲೇ ಗೆದ್ದಿದ್ದೇವೆ. ಮುಂದಿನ ಪಂದ್ಯಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಎದುರಾಳಿ ಯಾರೇ ಇರಲಿ, ನಮ್ಮ ಧುರಂಧರರು ಅಬ್ಬರಿಸಲು ಸಜ್ಜಾಗಿದ್ದಾರೆ. ಈ ರನ್ ಮಳೆ ಹೀಗೆಯೇ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.