IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತವರಿನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಪಂದ್ಯ ಆಯೋಜಿಸುವುದನ್ನು ನಿಷೇಧಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರದಿಂದ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದಾಗ್ಯೂ ಆರ್‌ಸಿಬಿ 7 ಪಂದ್ಯಗಳಲ್ಲಿ 5 ಮ್ಯಾಚ್ಗಳನ್ನು ಮಾತ್ರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಇನ್ನುಳಿದ 2 ಪಂದ್ಯಗಳನ್ನು ರಾಯ್‌ಪುರದಲ್ಲಿ ಆಡಲು ನಿರ್ಧರಿಸಿದೆ.
ಆರ್‌ಸಿಬಿ ರಾಯ್‌ಪುರದಲ್ಲಿ ಕಣಕ್ಕಿಳಿಯುತ್ತಿರುವುದೇಕೆ?
ಐಪಿಎಲ್ನಲ್ಲಿ 7 ಹೋಮ್ ಹಾಗೂ 7 ಅವೇ ಪಂದ್ಯಗಳ ನಿಯಮವಿದೆ. ಅಂದರೆ ತವರು ಮೈದಾನದಲ್ಲಿ 7 ಪಂದ್ಯಗಳು ಎದುರಾಳಿಗಳ ಹೋಮ್ ಗ್ರೌಂಡ್ನಲ್ಲಿ 7 ಪಂದ್ಯಗಳನ್ನಾಡಲಾಗುತ್ತದೆ. ಇತ್ತ ತವರಿನಲ್ಲಿಯೇ 7 ಪಂದ್ಯಗಳನ್ನಾಡುತ್ತಾ ಬಂದಿರುವ ಆರ್‌ಸಿಬಿ ಇದೀಗ 2 ಮ್ಯಾಚ್ಗಳಿಗಾಗಿ 2ನೇ ಹೋಮ್ ಗ್ರೌಂಡ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಛತ್ತೀಸ್‌ಗಢದ ರಾಯ್‌ಪುರದಲ್ಲಿ 2 ಮ್ಯಾಚ್ಗಳನ್ನಾಡಲಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ರಾಯ್‌ಪುರದಲ್ಲಿ ಕಣಕ್ಕಿಳಿಯುತ್ತಿರುವುದೇಕೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…
- ಒಪ್ಪಂದ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಲಭ್ಯತೆಯ ಬಗ್ಗೆ ಅನಿಶ್ಚಿತತೆ ಇದ್ದಾಗ, ಆರ್‌ಸಿಬಿ ಫ್ರಾಂಚೈಸಿಯು ಛತ್ತೀಸ್‌ಗಢ ಸರ್ಕಾರದೊಂದಿಗೆ ರಾಯ್‌ಪುರದಲ್ಲಿ ಪಂದ್ಯಗಳನ್ನು ಆಯೋಜಿಸಲು ಮೊದಲೇ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಂತೆ ಇದೀಗ ರಾಯ್‌ಪುರದಲ್ಲಿ 2 ಮ್ಯಾಚ್ಗಳನ್ನಾಡಲು ನಿರ್ಧರಿಸಲಾಗಿದೆ.
- ಸುರಕ್ಷತಾ ತನಿಖೆ: 2025ರ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ಘಟನೆಯಲ್ಲಿ 11 ಜನರು ಮೃತಪಟ್ಟ ನಂತರ, ಚಿನ್ನಸ್ವಾಮಿ ಕ್ರೀಡಾಂಗಣವು ಕಟ್ಟುನಿಟ್ಟಿನ ಸುರಕ್ಷತಾ ಪರಿಶೀಲನೆಗೆ ಒಳಪಟ್ಟಿತ್ತು. ಈ ಕಾರಣದಿಂದಾಗಿ ಕ್ರೀಡಾಂಗಣದ ಲಭ್ಯತೆಯ ಬಗ್ಗೆ ಅನುಮಾನಗಳಿದ್ದವು.
- ಪರ್ಯಾಯ ವ್ಯವಸ್ಥೆ: ಕ್ರೀಡಾಂಗಣದ ನವೀಕರಣ ಮತ್ತು ಭದ್ರತಾ ಪರವಾನಗಿ ವಿಳಂಬವಾಗಬಹುದು ಎಂಬ ಕಾರಣಕ್ಕೆ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣವನ್ನು ‘ಎರಡನೇ ತವರು’ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
- ಎರಡನೇ ತವರು: ಬೆಂಗಳೂರಿನಲ್ಲಿ ಪಂದ್ಯ ಆಯೋಜನೆಯ ಬಗ್ಗೆ ಗೊಂದಲವಿದ್ದ ಇದ್ದ ಕಾರಣ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲು ಅವಕಾಶ ನೀಡಬೇಕೆಂದು ಆರ್‌ಸಿಬಿ ಫ್ರಾಂಚೈಸಿ ಛತ್ತೀಸ್‌ಗಢ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯಂತೆ ಆರ್‌ಸಿಬಿ ತಂಡದ ಎರಡನೇ ತವರು ಮೈದಾನವಾಗಿ ರಾಯ್‌ಪುರದ ಸ್ಟೇಡಿಯಂ ಅನ್ನು ಆಯ್ಕೆ ಮಾಡಲಾಗಿತ್ತು. ಈ ವೇಳೆ ಮಾಡಿಕೊಂಡ ಒಪ್ಪಂದದಿಂದಾಗಿ ಆರ್‌ಸಿಬಿ ತಂಡವು 7 ತವರು ಪಂದ್ಯಗಳಲ್ಲಿ 2 ಮ್ಯಾಚ್ ಅನ್ನು ಎರಡನೇ ತವರು ಮೈದಾನವಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಿದೆ.
ಇದನ್ನೂ ಓದಿ: T20 World Cup 2026: ಸೆಮಿಫೈನಲ್ ಪಂದ್ಯಕ್ಕೆ ಹೆಚ್ಚುವರಿ 90 ನಿಮಿಷ!
ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಉದ್ಘಾಟನೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡು ತವರು ಮೈದಾನ ಹೊಂದಿದ್ದರೂ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ಆಯೋಜಿಸಲಾಗುತ್ತದೆ. ಪ್ರಸ್ತುತ ಮಾಹಿತಿ ಪ್ರಕಾರ ಮಾರ್ಚ್ 28 ರಂದು ನಡೆಯಲಿರುವ ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ vs ಕೆಕೆಆರ್ ಇಲ್ಲಾ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ.
