ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ರಜತ್ ಪಾಟಿದರ್ ಅವರ ಅಜೇಯ 93 ರನ್ಗಳ ಇನ್ನಿಂಗ್ಸ್ ಹಾಗೂ ಅನುಭವಿ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಅವರ ತಲಾ 43 ರನ್ಗಳ ಇನ್ನಿಂಗ್ಸ್ನಿಂದ ದಾಖಲೆಯ 255 ರನ್ ಕಲೆಹಾಕಿತು (PC- RCB X).
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಅರ್ಧಶತಕ ಪೂರೈಸಲು ಸಾಧ್ಯವಾಗದೆ ಇರಬಹುದು. ಆದಾಗ್ಯೂ ಕೊಹ್ಲಿ ತಮ್ಮ ಇನ್ನಿಂಗ್ಸ್ನಲ್ಲಿ 25 ಎಸೆತಗಳನ್ನು ಎದುರಿಸಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 43 ರನ್ ಬಾರಿಸಿದರು. ಈ ಮೂಲಕ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಜೊತೆಗೆ ಈ ಇನ್ನಿಂಗ್ಸ್ನೊಂದಿಗೆ ಕೊಹ್ಲಿ, ಈ ಐಪಿಎಲ್ನಲ್ಲಿ 600 ರನ್ಗಳ ಗಡಿ ಕೂಡ ದಾಟಿದರು (PC- RCB X).
ಈ ಐಪಿಎಲ್ನಲ್ಲಿ 14 ಲೀಗ್ ಪಂದ್ಯಗಳು ಮತ್ತು ಕ್ವಾಲಿಫೈಯರ್ 1 ಪಂದ್ಯ ಸೇರಿದಂತೆ ಇದುವರೆಗೆ 15 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 600 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕೊಹ್ಲಿ ಅತಿ ಹೆಚ್ಚು ಐಪಿಎಲ್ ಸೀಸನ್ಗಳಲ್ಲಿ 600 ಕ್ಕೂ ಹೆಚ್ಚು ರನ್ಗಳನ್ನು ಅತಿ ಹೆಚ್ಚು ಬಾರಿ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ (PC- RCB X).
ಆರನೇ ಬಾರಿಗೆ ಅಂದರೆ 6ನೇ ಆವೃತ್ತಿಯಲ್ಲಿ 600 ಕ್ಕೂ ಹೆಚ್ಚು ರನ್ಗಳನ್ನು ಬಾರಿಸಿರುವ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈ ಹಿಂದೆ 2013, 2016, 2023, 2024 ಮತ್ತು 2025 ರಲ್ಲಿ 600+ ರನ್ ಕಲೆಹಾಕಿದ್ದಾರೆ. ಈ ಮೂಲಕ ಕೊಹ್ಲಿ ಸತತ ನಾಲ್ಕು ಆವೃತ್ತಿಗಳಲ್ಲಿ 600 ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ (PC- RCB X).
ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದು, ಅವರು ನಾಲ್ಕು ಆವೃತ್ತಿಗಳಲ್ಲಿ 600 ರನ್ಗಳ ಗಡಿ ದಾಟಿದ್ದಾರೆ. ಉಳಿದಂತೆ ಶುಭಮನ್ ಗಿಲ್, ಡೇವಿಡ್ ವಾರ್ನರ್ ಮತ್ತು ಕ್ರಿಸ್ ಗೇಲ್ ಐಪಿಎಲ್ನಲ್ಲಿ ತಲಾ ಮೂರು ಬಾರಿ 600+ ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್, ಫಾಫ್ ಡು ಪ್ಲೆಸಿಸ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಎರಡು ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ (PC- IPL X).
