ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಪ್ರಸ್ತುತ ಭಾರತ ಟೆಸ್ಟ್ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಗಾಯದ ಸಮಸ್ಯೆ ಹಾಗೂ ಕಳಪೆ ಫಾರ್ಮ್ನಿಂದಾಗಿ ಪಂತ್ ಏಕದಿನ ಹಾಗೂ ಟಿ20 ತಂಡದಲ್ಲಿ ಆಡಿದ್ದು ಬಹಳ ವಿರಳ. ಆದಾಗ್ಯೂ ಪಂತ್ ಅವರ ಆದಾಯದ ಹರಿವು ಕಡಿಮೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಅವರ ಆದಾಯ ಹೆಚ್ಚುತ್ತಲೇ ಇದೆ(PC-PTI).
ಇದಕ್ಕೆ ಪೂರಕವಾಗಿ ರಿಷಭ್ ಪಂತ್ ದೇಶದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಪಂತ್ 23.84 ಕೋಟಿ ರೂ. ಆದಾಯ ತೆರಿಗೆ ಪಾವತಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಉತ್ತರಾಖಂಡದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರಾಗಿದ್ದಾರೆ(PC-PTI).
ಉತ್ತರಾಖಂಡ್ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರು ಈ ವಿವರಗಳನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಂತ್ ಅತಿ ಹೆಚ್ಚು ತೆರಿಗೆ ಪಾವತಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೂರ್ಕಿಯಲ್ಲಿ ಜನಿಸಿದ ಪಂತ್, ಬಿಸಿಸಿಐ ಒಪ್ಪಂದದಿಂದ, ಐಪಿಎಲ್, ಪಂದ್ಯ ಶುಲ್ಕ ಮತ್ತು ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಪಾಧಿಸುತ್ತಿದ್ದಾರೆ(PC-PTI).
ರಿಷಭ್ ಪಂತ್ ಅವರ ನಿವ್ವಳ ಮೌಲ್ಯ 150 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಅವರ ಆದಾಯದ ಪ್ರಮುಖ ಮೂಲವಾಗಿದೆ. ಅವರು ಬಿಸಿಸಿಐ ಮತ್ತು ಐಪಿಎಲ್ನಿಂದ ಗಣನೀಯ ಸಂಬಳವನ್ನು ಗಳಿಸುತ್ತಾರೆ. ಪಂತ್ ಹಲವಾರು ಬ್ರಾಂಡ್ಗಳ ಅಂಬಾಸಿಡರ್ ಕೂಡ ಆಗಿದ್ದಾರೆ. ಕಳೆದ ಆವೃತ್ತಿವರೆಗೆ ಲಕ್ನೋ ತಂಡದಲ್ಲಿದ್ದ ಪಂತ್ ಪ್ರತಿ ಅವೃತ್ತಿಗೆ 27 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು(PC-PTI).
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಂತ್ ಪಾವತಿಸಿದ ತೆರಿಗೆ ಮೊತ್ತವು ಎರಡು ಪಟ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ. ಕಳೆದ ವರ್ಷ, ಪಂತ್ ಸುಮಾರು 10.5 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಆದಾಗ್ಯೂ, ಈ ಬಾರಿ ಅವರ ತೆರಿಗೆ ಪಾವತಿ ಗಮನಾರ್ಹವಾಗಿ ಹೆಚ್ಚಾಗಿದೆ. ಪಂತ್ ದಾಖಲೆಯ 23.84 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ(PC-PTI).
ರಿಷಭ್ ಪಂತ್ ಪ್ರಸ್ತುತ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತಯಾರಿ ನಡೆಸುತ್ತಿದ್ದಾರೆ. ಲಂಕಾ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆಯುವುದು ರಿಷಭ್ ಪಂತ್ ಗುರಯಾಗಿದೆ. ಇತ್ತೀಚೆಗೆ, ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಆಡಿದ ಪಂತ್ 81 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಆದಾಗ್ಯೂ ಪಂತ್ ಸೀಮಿತ ಓವರ್ಗಳ ಕ್ರಿಕೆಟ್ ಆಡಿ ಎರಡು ವರ್ಷಗಳಾಗಿವೆ.
