Sanju Samson: ನನಗಲ್ಲ, ಈ ಪ್ರಶಸ್ತಿ ಅವರಿಗೆ ಕೊಡ್ಬೇಕಿತ್ತು..! – Kannada News | Sanju Samson Says Jasprit Bumrah deserves the POTM award

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್​ಗೇರಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ ವಿರೋಚಿತವಾಗಿ 7 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು. ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಯ್ತು. ಅತ್ತ ಗೆದ್ದು ಬೀಗಿದ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸಿದೆ.

ಇನ್ನು ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಯಾಮ್ಸನ್, ಈ ಗೌರವಕ್ಕೆ ಜಸ್​ಪ್ರೀತ್ ಬುಮ್ರಾ ಹೆಚ್ಚು ಅರ್ಹರು. ಹೀಗಾಗಿ ಅವರಿಗೆ ನೀಡಬೇಕಿತ್ತು ಎಂದರು.

ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ಜಸ್​ಪ್ರೀತ್ ಬುಮ್ರಾ ತಮ್ಮ 4 ಓವರ್‌ಗಳಲ್ಲಿ ಕೇವಲ 33 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಅದರಲ್ಲೂ ವಿಶೇಷವಾಗಿ 16ನೇ ಓವರ್​ನಲ್ಲಿ ಕೇವಲ 8 ರನ್​ ನೀಡಿದ್ದರು. ಇದಾದ ಬಳಿಕ 18ನೇ ಓವರ್‌ನಲ್ಲಿ ಕೇವಲ 6 ರನ್ ಮಾತ್ರ ನೀಡಿ ಇಡೀ ಪಂದ್ಯದ ಗತಿಯನ್ನು ಬದಲಿಸಿದ್ದರು.

ಜಸ್​ಪ್ರೀತ್ ಬುಮ್ರಾ ಅವರ ಈ ಬೌಲಿಂಗ್​​ನಿಂದಾಗಿ ನಾವು ಇಂದು ಪಂದ್ಯ ಗೆದ್ದಿದ್ದೇವೆ. ಅವರು ಅಂತಹ ಬೌಲಿಂಗ್ ಮಾಡದಿದ್ದರೆ ನಾವು ಈ ಪಂದ್ಯ ಗೆಲ್ಲುತ್ತಿರಲಿಲ್ಲ. ಅವರು ‘ಒಂದು ಪೀಳಿಗೆಯ ಅಪರೂಪದ ಬೌಲರ್’. ಹಾಗಾಗಿ ಈ ಪ್ರಶಸ್ತಿ ಅವರಿಗೆ ಸಲ್ಲಬೇಕಿತ್ತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದೀಗ ತನ್ನ ಭರ್ಜರಿ ಇನಿಂಗ್ಸ್​ಗೆ ದೊರಕಿದ್ದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಜಸ್​ಪ್ರೀತ್ ಬುಮ್ರಾಗೆ ಅರ್ಪಿಸುವ ಮೂಲಕ ಸಂಜು ಸ್ಯಾಮ್ಸನ್ ಎಲ್ಲರ ಮನ ಗೆದ್ದಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಎರಡು ಗೆಲುವುಗಳಲ್ಲಿ ಸ್ಯಾಮ್ಸನ್ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: IND vs ENG: ಟೀಮ್ ಇಂಡಿಯಾ ಗೆಲುವಿಗೆ ಇವರೇ ಕಾರಣ..!

ಇದಕ್ಕೂ ಮುನ್ನ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಬಾರಿಸಿ ಟೀಮ್ ಇಂಡಿಯಾಗೆ ಗೆಲುವು ತಂದು ಕೊಟ್ಟಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಇನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *