ಶನಿವಾರದಂದು ಯಾವ ಮರವನ್ನು ಪೂಜಿಸುವುದು ಶುಭImage Credit source: iStock
ಹಿಂದೂ ಸನಾತನ ಧರ್ಮದಲ್ಲಿ ಪ್ರಕೃತಿ ಆರಾಧನೆಗೆ ಅತ್ಯುನ್ನತ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ಗಿಡ-ಮರಗಳು, ನದಿ-ಪರ್ವತಗಳನ್ನು ದೈವಿಕ ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತಿದೆ. ಪ್ರಕೃತಿಯ ಪ್ರತಿಯೊಂದು ಅಂಶದಲ್ಲೂ ದೇವರನ್ನು ಕಾಣುವ ಭಕ್ತರು, ಪವಿತ್ರ ಮರ-ಗಿಡಗಳಲ್ಲಿ ದೈವಿಕ ಶಕ್ತಿ ನೆಲೆಸಿದೆ ಎಂದು ಬಲವಾಗಿ ನಂಬುತ್ತಾರೆ.
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ವಾರದ ಏಳು ದಿನಗಳಲ್ಲಿ ಆಯಾ ದಿನಕ್ಕೆ ಸಂಬಂಧಿಸಿದ ನಿರ್ದಿಷ್ಟ ಮರಗಳನ್ನು ಪೂಜಿಸುವುದರಿಂದ ಜಾತಕದ ದೋಷಗಳು ನಿವಾರಣೆಯಾಗಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ವಿಶೇಷವಾಗಿ ಶನಿವಾರದಂದು ಶನಿದೇವನ ಕೃಪೆಗೆ ಪಾತ್ರರಾಗಲು ಮತ್ತು ಕಷ್ಟಗಳಿಂದ ಪಾರಾಗಲು ಅರಳಿ ಮರ (ಅಶ್ವತ್ಥ ಮರ) ಮತ್ತು ಶಮಿ ಮರ (ಬನ್ನಿ ಮರ) ಗಳನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಅರಳಿ ಮರ (ಅಶ್ವತ್ಥ ವೃಕ್ಷ)ದ ಪೂಜೆ ಮತ್ತು ಮಹತ್ವ:
ಸನಾತನ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಅಗ್ರಸ್ಥಾನವಿದೆ. ಶಾಸ್ತ್ರಗಳ ಪ್ರಕಾರ, ಈ ಪವಿತ್ರ ಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ. ಅಷ್ಟೇ ಅಲ್ಲದೆ, ಸಾಕ್ಷಾತ್ ಲಕ್ಷ್ಮಿ ದೇವಿ ಹಾಗೂ ಪಿತೃದೇವತೆಗಳ ವಾಸಸ್ಥಾನವೂ ಇದಾಗಿದೆ ಎಂಬ ನಂಬಿಕೆಯಿದೆ. ಶನಿವಾರದಂದು ಮುಂಜಾನೆ ಸ್ನಾನ ಮಾಡಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದು ಅತ್ಯಂತ ಪುಣ್ಯದಾಯಕ. ಸಂಜೆಯ ವೇಳೆ ಅರಳಿ ಮರದ ಕೆಳಗೆ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಜಾತಕದಲ್ಲಿ ಕಾಡುವ ತೀವ್ರವಾದ ಶನಿ ದೋಷ (ಏಳೂವರೆ ಶನಿ, ಅಷ್ಟಮ ಶನಿ ಇತ್ಯಾದಿ) ಹಾಗೂ ಪಿತೃ ದೋಷಗಳು ನಿವಾರಣೆಯಾಗುತ್ತವೆ. ಇದರಿಂದ ಆರ್ಥಿಕ ಮುಗ್ಗಟ್ಟು ದೂರವಾಗಿ, ಮನೆಯಲ್ಲಿ ಸಂಪತ್ತು ಮತ್ತು ಮಾನಸಿಕ ಶಾಂತಿ ನೆಲೆಸುತ್ತದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಶಮಿ ಮರ (ಬನ್ನಿ ಮರ)ದ ಪೂಜೆ:
ಶಮಿ ಅಥವಾ ಬನ್ನಿ ಮರವು ಶನಿದೇವನಿಗೆ ಅತ್ಯಂತ ಪ್ರಿಯವಾದ ಮರವಾಗಿದೆ. ಮಹಾಭಾರತದ ಕಾಲದಿಂದಲೂ ಶಮಿ ವೃಕ್ಷದ ಪೂಜೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ಶನಿವಾರದಂದು ಶಮಿ ಮರಕ್ಕೆ ನೀರು ಎರೆದು ಪೂಜಿಸುವುದರಿಂದ ಶನಿ ದೇವನು ಪ್ರಸನ್ನನಾಗುತ್ತಾನೆ. ವಿಘ್ನಗಳು ದೂರವಾಗಿ, ಕೈಹಾಕಿದ ಪ್ರತಿ ಕೆಲಸಗಳಲ್ಲೂ ಯಶಸ್ಸು ಲಭಿಸುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದರ ಜೊತೆಗೆ, ವಾಸ್ತು ದೋಷಗಳ ನಿವಾರಣೆಗೂ ಶಮಿ ವೃಕ್ಷದ ಪೂಜೆ ಅತ್ಯುತ್ತಮ ಮಾರ್ಗವಾಗಿದೆ.
ಪ್ರಕೃತಿಯ ಒಡನಾಟದಲ್ಲಿ ಭಗವಂತನನ್ನು ಕಾಣುವ ಈ ಪದ್ಧತಿಯು ಕೇವಲ ಆಧ್ಯಾತ್ಮಿಕ ಶಾಂತಿಯನ್ನು ಮಾತ್ರವಲ್ಲದೆ, ಮರಗಳನ್ನು ಬೆಳೆಸಿ ಸಂರಕ್ಷಿಸುವ ಪರಿಸರ ಕಾಳಜಿಯನ್ನೂ ಎತ್ತಿ ತೋರಿಸುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಈ ಮರಗಳನ್ನು ಆರಾಧಿಸುವ ಮೂಲಕ ಶನಿವಾರದ ದಿನವನ್ನು ಮತ್ತಷ್ಟು ಮಂಗಳಕರವನ್ನಾಗಿಸಿಕೊಳ್ಳಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
