ಉಚಿತ ಶಿಲ್ಪಕಲೆ ತರಬೇತಿImage Credit source: cauverycrafts.com
ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಜೊತೆಗೆ ಕೌಶಲ್ಯಾಧಾರಿತ ವೃತ್ತಿಗಳಿಗೂ ಹೆಚ್ಚಿನ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಶಿಲ್ಪಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ. ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅವರ ಸಾಧನೆ ಸಾವಿರಾರು ಯುವಕರಿಗೆ ಶಿಲ್ಪಕಲೆ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳುವ ಪ್ರೇರಣೆಯಾಗಿದೆ. ಇದೀಗ ಇಂತಹ ಪ್ರತಿಭಾವಂತ ಶಿಲ್ಪಿಗಳನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ (ಕಾವೇರಿ ಹ್ಯಾಂಡಿಕ್ರಾಫ್ಟ್ಸ್) ‘ಶಿಲ್ಪಗುರುಕುಲ’ ಯೋಜನೆಯಡಿ ಉಚಿತ ಶಿಲ್ಪಕಲೆ ಮತ್ತು ಮರದ ಕೆತ್ತನೆ ತರಬೇತಿ ನೀಡುತ್ತಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಯುವಕರಿಗೆ ಇದು ಸುವರ್ಣಾವಕಾಶವಾಗಿದೆ.
10 ತಿಂಗಳ ಉಚಿತ ವಸತಿ ಸಹಿತ ತರಬೇತಿ:
“ಶಿಲ್ಪಗುರುಕುಲ” ಯೋಜನೆಯಡಿ ಶಿಲ್ಪಕಲೆ ಮತ್ತು ಮರದ ಕೆತ್ತನೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಮಾತ್ರವಲ್ಲದೆ ಮಾಸಿಕ ಸ್ಟೈಫಂಡ್ ಸಹ ನೀಡಲಾಗುತ್ತದೆ.ಈ ತರಬೇತಿ ಕಾರ್ಯಕ್ರಮವು 10 ತಿಂಗಳ ಅವಧಿಯ ವಸತಿ ಸಹಿತ ಕೋರ್ಸ್ ಆಗಿದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ವಸತಿ, ಊಟ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಪ್ರತಿ ತಿಂಗಳು 1,500 ರೂ. ಸ್ಟೈಫಂಡ್(ಪ್ರೋತ್ಸಾಹ ಧನ) ನೀಡಲಾಗುವುದು.
ಯಾರು ಅರ್ಜಿ ಸಲ್ಲಿಸಬಹುದು?
ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 16 ರಿಂದ 35 ವರ್ಷದೊಳಗಿನವರಾಗಿರಬೇಕು. ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾಗಿರಬೇಕು. ಶಿಲ್ಪಕಲೆ ಅಥವಾ ಮರದ ಕೆತ್ತನೆ ಕಲಿಯುವ ಆಸಕ್ತಿ ಹಾಗೂ ಕೈಚಳಕ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
ತರಬೇತಿಯಲ್ಲಿ ಏನು ಕಲಿಸಲಾಗುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಅನುಭವಿ ಶಿಲ್ಪಿಗಳಿಂದ ಶಿಲ್ಪಕಲೆ ಹಾಗೂ ಮರದ ಕೆತ್ತನೆ ಕೌಶಲ್ಯಗಳ ಕುರಿತು ಪ್ರಾಯೋಗಿಕ ಮತ್ತು ವೃತ್ತಿಪರ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಈ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಅಥವಾ ಉದ್ಯೋಗಾವಕಾಶಗಳನ್ನು ಪಡೆಯಲು ಸಹ ನೆರವಾಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ www.cauverycrafts.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈ ತರಬೇತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ದಾಖಲಾತಿ ಪ್ರತಿಗಳೊಂದಿಗೆ ದಿನಾಂಕ 7/08/2026ರೊಳಗೆ ಯೋಜನಾಧಿಕಾರಿ , ಶ್ರೀಗಂಧದ ಕಲಾ ಸಂಕೀರ್ಣ , ಕೆಳದಿ ರಸ್ತೆ ಸಾಗರ 577 401 ಶಿವ ಮೊಗ್ಗ ಜಿಲ್ಲೆ ಹಾಗೂ ಪ್ರಧಾನ ವ್ಯವಸ್ಥಾಪಕರು(ಅಭಿವೃದ್ಧಿ), ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಕೇಂದ್ರ ಕಛೇರಿ ನಂ45, ಕೆ.ಎಚ್. ಹೆಚ್.ಡಿ.ಸಿ ಕಾಂಪ್ಲೆಕ್ಸ್ 33ನೇ ಮಹಡಿ , ಎಂ. ಜಿ ರಸ್ತೆ ಬೆಂಗಳೂರು-560 001. ಇವರಿಗೆ ಕಛೇರಿಯ ವೇಳೆಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಆ. 07 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಶ್ರೀ ಗಣೇಶ್ ಸಿಂಗ್ ಪಿ ಯೋಜನಾಧಿಕಾರಿ, ಶ್ರೀಗಂಧದ ಕಲಾ ಸಂಕೀರ್ಣ , ಸಾಗರ ಇವರನ್ನು 9945458941 ಅಥವಾ 9071529038 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಪ್ರಮುಖ ಮಾಹಿತಿ: ಪ್ರತಿ ತರಬೇತಿ ಬ್ಯಾಚ್‌ಗೆ ಸುಮಾರು 30 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಆಧಾರದ ಮೇಲೆ ಪ್ರವೇಶ ನೀಡಲಾಗುವುದರಿಂದ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸುವುದು ಒಳಿತು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
