ಮೈಸೂರು, ಜುಲೈ 21: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ನುಗ್ಗಿ ಬೆದರಿಕೆಯೊಡ್ಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮುಳ್ಳೂರು ಗ್ರಾಮದ ನಿವಾಸಿ ಮಹೇಂದ್ರ ಕುಮಾರ್ ಎಂಬಾತನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ನಡೆದಿದ್ದೇನು?
ಮತದಾರರ ಪಟ್ಟಿ ಪರಿಷ್ಕರಣೆಯ (SIR) ಕರ್ತವ್ಯದಲ್ಲಿದ್ದ ಸಿಬ್ಬಂದಿ ಲತಾ ಎಂಬುವರ ಮನೆಗೆ ಜುಲೈ 13ರಂದು ರಾತ್ರಿ ಕುಡಿದು ಬಂದಿದ್ದ ಮಹೇಂದ್ರ ಕುಮಾರ್, ಅಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಈ ವೇಳೆ ಲತಾ ಅವರ ಕೈ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ನೀನು 300 ಜನರ ಮತಗಳನ್ನು ಹಾಳು ಮಾಡಿದ್ದೀಯಾ, ನಮ್ಮ ಗ್ರಾಮದಲ್ಲಿ ನೀನು ಹೇಗೆ ಕೆಲಸ ಮಾಡುತ್ತೀಯಾ ನೋಡುತ್ತೇನೆ? ನಿನ್ನನ್ನು ಕೆಲಸದಿಂದಲೇ ತೆಗೆದುಹಾಕಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಸಿಬ್ಬಂದಿ ನೀಡಿದ ದೂರಿನನ್ವಯ ಬಿಳಿಗೆರೆ ಪೊಲೀಸರು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಿಂದೆಯೂ ನಡೆದಿತ್ತು ಇದೇ ರೀತಿಯ ಘಟನೆ
SIR ಪ್ರಕ್ರಿಯೆಯ ವೇಳೆ ಕರ್ತವ್ಯನಿರತ ಸಿಬ್ಬಂದಿ ಹಾಗೂ ಬಿಎಲ್‌ಒ (BLO)ಗಳ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲೂ ಇಂತಹುದೇ ಅಮಾನವೀಯ ಘಟನೆ ವರದಿಯಾಗಿತ್ತು.
ಅಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿರ್ಲಾಲು ಗ್ರಾಮದ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬುವರ ಮನೆಗೆ ಎಸ್‌ಐಆರ್ ಪ್ರಕ್ರಿಯೆಗೆಂದು ತೆರಳಿದ್ದರು. ಆದರೆ, ಆ ಸಮಯದಲ್ಲಿ ಮನೆಮಾಲಿಕರು ನಿಮ್ಮ ಜಾತಿಯವರು ಒಳಗೆ ಬರಬಾರದು ಎಂದು ಜಾತಿ ನಿಂದನೆ ಮಾಡಿ, ಅವರನ್ನು ಅಂಗಳದಲ್ಲೇ ನಿಲ್ಲಿಸಿ ತೀವ್ರವಾಗಿ ಅಪಮಾನಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
