SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್ – Kannada News | Ishan Kishan’s Century Powers Jharkhand to Maiden Syed Mushtaq Ali Trophy Win

ಇಶಾನ್ ಕಿಶನ್ (Ishan Kishan) ನಾಯಕತ್ವದ ಜಾರ್ಖಂಡ್ ಕ್ರಿಕೆಟ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ, ಜಾರ್ಖಂಡ್ ತಂಡವು ಹರಿಯಾಣವನ್ನು 69 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ, ಜಾರ್ಖಂಡ್ ಮೊದಲ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಇಶಾನ್ ಕಿಶನ್ 101 ರನ್‌ಗಳ ಸ್ಫೋಟಕ ಶತಕ ಸಿಡಿಸಿದರು. ಇದರಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡವು 262 ರನ್‌ಗಳ ದಾಖಲೆಯ ಸ್ಕೋರ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹರಿಯಾಣ ತಂಡವು ಕೇವಲ 193 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಇಶಾನ್ ಜೊತೆಗೆ, ಅನುಕುಲ್ ರಾಯ್ ಕೂಡ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಫೋಟಕ ಶತಕ ಸಿಡಿಸಿದ ಕಿಶನ್

ಡಿಸೆಂಬರ್ 18 ರ ಗುರುವಾರ ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡಕ್ಕೆ ಮೊದಲ ಓವರ್​ನಲ್ಲೇ ಆಘಾತ ಎದುರಾಯಿತು. ಆರಂಭಿಕ ವಿರಾಟ್ ಸಿಂಗ್ ಮೊದಲ ಓವರ್‌ನಲ್ಲೇ ಔಟಾದರು. ಆದರೆ ಇನ್ನೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್, ಕುಮಾರ್ ಕುಶಾಗ್ರ ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 177 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಇದೇ ವೇಳೆ ನಾಯಕ ಇಶಾನ್ ಕಿಶನ್ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದರು. ಇತ್ತ ಶತಕದಂಚಿನಲ್ಲಿದ್ದ ಕುಶಾಗ್ರ 81 ರನ್‌ಗಳಿಗೆ ಔಟಾದರು. ನಂತರ ಅನುಕುಲ್ ರಾಯ್ ಮತ್ತು ರಾಬಿನ್ ಮಿಂಜ್ ಕೇವಲ 32 ಎಸೆತಗಳಲ್ಲಿ 75 ರನ್‌ಗಳನ್ನು ಸೇರಿಸಿ ತಂಡವನ್ನು 262 ರನ್​ಗಳಿಗೆ ಕೊಂಡೊಯ್ದರು. ಮಿನ್ಸ್ 14 ಎಸೆತಗಳಲ್ಲಿ 31 ರನ್ ಗಳಿಸಿದರೆ, ರಾಯ್ 20 ಎಸೆತಗಳಲ್ಲಿ 40 ರನ್ ಬಾರಿಸಿದರು.

ಸುಶಾಂತ್, ಅನುಕೂಲ್ ಮಾರಕ ಬೌಲಿಂಗ್

ಈ ಗುರಿ ಬೆನ್ನಟ್ಟಿದ ಹರಿಯಾಣ ತಂಡವು ಕೂಡ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್‌ಗೆ ನಾಯಕ ಅಂಕಿತ್ ಕುಮಾರ್ ಸೇರಿದಂತೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಎಡಗೈ ವೇಗಿ ವಿಕಾಸ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಆದಾಗ್ಯೂ, ನಂತರ ಯಶವರ್ಧನ್ ದಲಾಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ನಿಶಾಂತ್ ಸಿಂಧು ಮತ್ತು ಸಮಂತ್ ಜಖರ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, ಈ ಮೂವರಲ್ಲಿ ಯಾರಿಗೂ ತಮ್ಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಎಡಗೈ ವೇಗಿ ಸುಶಾಂತ್ ಮಿಶ್ರಾ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಖೋಟಾದ ನಾಲ್ಕು ಓವರ್‌ಗಳಲ್ಲಿ 27 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಇವರಿಗೆ ಸಾಥ್ ನೀಡಿದ ಅನುಕುಲ್ ರಾಯ್ ಕೂಡ 42 ರನ್ ನೀಡಿ 2 ವಿಕೆಟ್​ಗಳ ರೂಪದಲ್ಲಿ ದಲಾಲ್ ಮತ್ತು ಸಿಂಧು ಅವರನ್ನು ಔಟ್ ಮಾಡಿದರು. ಅಂತಿಮವಾಗಿ, ಇಡೀ ತಂಡವು 18.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 193 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:09 pm, Fri, 19 December 25

Source link

Leave a Reply

Your email address will not be published. Required fields are marked *