ಐಪಿಎಲ್ 2026 (IPL 2026) ರ49ನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ತಂಡ ತನ್ನ ಕಳಪೆ ಫಿಲ್ಡಿಂಗ್ ಹಾಗೂ ಕಳಪೆ ಬ್ಯಾಟಿಂಗ್ನಿಂದಾಗಿ ಟೂರ್ನಿಯಲ್ಲಿ ಸತತ ಮೂರನೇ ಸೋಲಿಗೆ ಕೊರಳೊಡ್ಡಬೇಕಾಯಿತು. ಇಡೀ ಆವೃತ್ತಿಯಲ್ಲಿ ಪಂಜಾಬ್ ತಂಡದ ಫಿಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದರ ನಡುವೆ ಬ್ಯಾಟ್ಸ್ಮನ್ಗಳ ಅಬ್ಬರದಿಂದಾಗಿ ಪಂಜಾಬ್ ಪಂದ್ಯಗಳನ್ನು ಗೆಲ್ಲುತ್ತಿತ್ತು. ಆದರೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಈ ಎರಡು ವಿಭಾಗವೂ ವಿಫಲವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 235 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಲಾಗದೆ ಪಂಜಾಬ್ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಒಳಗಾಯಿತು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಪಂಜಾಬ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ.
ಸುಲಭ ಕ್ಯಾಚ್ಗಳ ಡ್ರಾಪ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 235 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರಂಭದಿಂದಲೇ ಪಂಜಾಬ್ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಇದಕ್ಕೆ ಪೂರಕವೆಂಬಂತೆ ಪಂಜಾಬ್ ಫಿಲ್ಡರ್ಗಳು 3 ಸುಲಭ ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಇಶಾನ್ ಕಿಶನ್ ಹಾಗೂ ಕ್ಲಾಸೆನ್ಗೆ ಎರಡೆರಡು ಜೀವದಾನಗಳನ್ನು ನೀಡಿದರು. ಇದರ ಲಾಭ ಪಡೆದ ಇವರಿಬ್ಬರು ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಈ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಪಂಜಾಬ್ಗೆ ಆರಂಭಿಕ ಆಘಾತ
236 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವು ಮೊದಲ ಓವರ್ನಲ್ಲೇ ಆಘಾತ ಎದುರಿಸಿತು. ಮೊದಲ ಓವರ್ನಲ್ಲೇ ಪ್ಯಾಟ್ ಕಮ್ಮಿನ್ಸ್, ಪ್ರಿಯಾಂಶ್ ಆರ್ಯ ಅವರನ್ನು ಕೇವಲ 1 ರನ್ಗೆ ಔಟ್ ಮಾಡಿದರು. ನಂತರ ನಿತೀಶ್ ರೆಡ್ಡಿ ಮುಂದಿನ ಓವರ್ನಲ್ಲಿ ಪ್ರಭ್ಸಿಮ್ರನ್ ಅವರನ್ನು 3 ರನ್ಗೆ ಔಟ್ ಮಾಡಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ 5 ರನ್ ಗಳಿಸಿ ಔಟಾದರು. ಸ್ಟೊಯಿನಿಸ್ 28 ಮತ್ತು ಸೂರ್ಯಾಂಶ್ ಶೆಡ್ಜ್ 25 ರನ್ ಗಳಿಗೆ ಸುಸ್ತಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೂಪರ್ ಕೊನೊಲಿ ಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಪಾಯಿಂಟ್ ಟೇಬಲ್ ಸ್ಥಿತಿ
ಹೈದರಾಬಾದ್ ತಂಡವು 11 ಪಂದ್ಯಗಳಿಂದ 14 ಅಂಕಗಳೊಂದಿಗೆ ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಈಗ ಅಗ್ರಸ್ಥಾನದಲ್ಲಿದ್ದರೆ, ಸತತ ಮೂರನೇ ಸೋಲನ್ನು ಅನುಭವಿಸಿರುವ ಪಂಜಾಬ್, 13 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ಒಂಬತ್ತು ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಕೂಡ 10 ಪಂದ್ಯಗಳಿಂದ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:08 pm, Wed, 6 May 26