IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ರಾಯ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಆರ್ಸಿಬಿ 20ನೇ ಓವರ್ನ ಕೊನೆಯ ಎಸೆತದಲ್ಲಿ ಚೇಸ್ ಮಾಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ನಮ್ಮ ಸೋಲಿಗೆ ಬ್ಯಾಟಿಂಗ್ ವಿಭಾಗದ ಹಿನ್ನಡೆಯೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಸ್ಕೋರ್‌ನಲ್ಲಿ 10 ರಿಂದ 15 ರನ್ ಕಡಿಮೆಯಾದವು ಎಂದು ನನಗೆ ಅನ್ನಿಸಿತು. ಸರಿಯಾದ ಸಮಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ಹೊಡೆತ ನೀಡಿತು. ಆದರೆ ನಮನ್ ಧೀರ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ಈ ಪಿಚ್‌ನಲ್ಲಿ ಆಡಿದ ರೀತಿ ನೋಡಿದರೆ, ಅವರು ಬೇರೆಯದೇ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆನೋ ಎಂಬಂತಿತ್ತು,” ಎಂದು ಸೂರ್ಯಕುಮಾರ್ ಯಾದವ್ ಯುವ ಬ್ಯಾಟರ್‌ಗಳನ್ನು ಶ್ಲಾಘಿಸಿದರು.
ಇನ್ನು ಪಂದ್ಯದ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಯುವ ಆಲ್ ರೌಂಡರ್ ರಾಜ್ ಬಾವಾಗೆ ನೀಡಲಾಗಿತ್ತು. ಈ ಬಗ್ಗೆ ಮಾತನಾಡಿದ ಸೂರ್ಯ, “ರಾಜ್ ಕಳೆದ ವರ್ಷದಿಂದ ಮತ್ತು ಈ ಸೀಸನ್ ಪೂರ್ತಿ ಕೊನೆಯ ಓವರ್‌ಗಳ ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದಾರೆ. ಅವರು ಈ ವರ್ಷ ಸಂಪೂರ್ಣ ಭಿನ್ನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊನೆಯ ಓವರ್‌ನಲ್ಲಿ ಅವರು ಗೆಲುವಿನ ಹತ್ತಿರ ತಂದಿದ್ದರು. ಅವರ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿದೆ,” ಎಂದರು.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್
ಇದೇ ವೇಳೆ ಪಂದ್ಯದ ನಡುವೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ನಡುವೆ ಕ್ಯಾಚ್ ಪಡೆಯುವಾಗ ನಡೆದ ಗೊಂದಲದ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, “ಇವೆಲ್ಲ ಆಟದ ಭಾಗ. ಅಭ್ಯಾಸದ ಸಮಯದಲ್ಲಿ ನಾವು ಇವುಗಳ ಬಗ್ಗೆ ಗಮನ ಹರಿಸುತ್ತೇವೆ. ಆದರೆ ಅಂತಿಮವಾಗಿ ತಿಲಕ್ ಆ ಅದ್ಭುತ ಕ್ಯಾಚ್ ಹಿಡಿದ ರೀತಿ ಅವರ ವಿಶೇಷತೆಯನ್ನು ತೋರಿಸುತ್ತದೆ,” ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಅನುಭವ ಮತ್ತು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸೂರ್ಯಕುಮಾರ್, “ನಾವು ಈ ಸ್ಥಾನದಲ್ಲಿ ಇರಲು ಬಯಸುವುದಿಲ್ಲ. ಇದು ಜೀರ್ಣಿಸಿಕೊಳ್ಳಲು ಕಷ್ಟವಾದ ವಿಷಯ. ಆದರೆ ಈ ಸೀಸನ್ ನಮಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ನಾವು ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಮುಂದಿನ ವರ್ಷ ಬಲಿಷ್ಠವಾಗಿ ಹಿಂತಿರುಗುತ್ತೇವೆ,” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.
