2026 ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪ್ರಶಸ್ತಿ ಹಣಾಹಣಿ ಮಾರ್ಚ್ 8 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ತವರಿನ ಲಾಭ ಪಡೆದು ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿರುವ ಟೀಂ ಇಂಡಿಯಾಕ್ಕೆ ಈ ನಾಲ್ಕು ಕಾಕತಾಳೀಯ ಘಟನೆಗಳು ಪೂರಕವಾಗಿ ನಿಂತಿವೆ. ಹಾಗಿದ್ದರೆ ಯಾವು ಆ 4 ಕಾಕತಾಳೀಯಗಳು ಎಂಬುದನ್ನು ನೋಡುವುದಾದರೆ..
ಮೊದಲನೆಯದಾಗಿ ಜಿಂಬಾಬ್ವೆ ತಂಡವು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದಾಗಲೆಲ್ಲಾ, ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. 1983 ರ ಏಕದಿನ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಆಸೀಸ್ ಸೋತಿತ್ತು. ಆ ಆವೃತ್ತಿಯಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿತ್ತು. ಆ ಬಳಿಕ 2007 ರ ಟಿ20 ವಿಶ್ವಕಪ್ನಲ್ಲಿಯೂ ಆಸೀಸ್, ಜಿಂಬಾಬ್ವೆ ವಿರುದ್ಧ ಸೋತಿತ್ತು. ಆಗಲೂ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಎತ್ತಿಹಿಡಿದಿತ್ತು. ಈಗ 2026 ರ ಟಿ20 ವಿಶ್ವಕಪ್ನಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಹೀಗಾಗಿ ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವ ನಿರೀಕ್ಷೆಯಿದೆ.
2011 ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು ಮಣಿಸಿದ ಟೀಂ ಇಂಡಿಯಾ, ವಿಶ್ವಕಪ್ ಎತ್ತಿಹಿಡಿದಿತ್ತು. ಈ ಮೂಲಕ ತವರಿನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿತ್ತು. ಇದುವರೆಗೆ ಯಾವುದೇ ತಂಡ ಕೂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿಲ್ಲ. ಆದರೆ ಇದೀಗ ಟೀಂ ಇಂಡಿಯಾಗೆ ಆ ಅವಕಾಶವಿದೆ. 2011 ರ ಏಕದಿನ ವಿಶ್ವಕಪ್ ಇತಿಹಾಸವನ್ನು ಸೂರ್ಯ ಪಡೆ ಪುನರಾವರ್ತಿಸಿದರೆ, ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ದಾಖಲೆಯನ್ನೂ ತನ್ನ ಖಾತೆಗೆ ಹಾಕಿಕೊಳ್ಳಲಿದೆ.
ಮತ್ತೊಂದು ಕಾಕತಾಳೀಯವೆಂದರೆ 2011 ರ ಏಕದಿನ ವಿಶ್ವಕಪ್ ಗೆಲ್ಲುವುದಕ್ಕೂ ಮೊದಲು ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಅದರಂತೆ 2026 ರ ಟಿ20 ವಿಶ್ವಕಪ್ನಲ್ಲೂ ಟೀಂ ಇಂಡಿಯಾದ ಏಕೈಕ ಸೋಲು ಅದೇ ದಕ್ಷಿಣ ಆಫ್ರಿಕಾ ವಿರುದ್ಧವಾಗಿದೆ. ಹೀಗಾಗಿ ಭಾರತ 2026 ರ ಟಿ20 ವಿಶ್ವಕಪ್ ಫೈನಲ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ನಡೆದಾಗಲೆಲ್ಲಾ, ಯಾವ ತಂಡ ಆ ಪಂದ್ಯವನ್ನು ಗೆದ್ದಿದೆಯೋ ಆ ತಂಡವೇ ಚಾಂಪಿಯನ್ ಆಗಿದೆ. 2022 ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತವನ್ನು ಸೋಲಿಸಿದ್ದ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. ಹಾಗೆಯೇ 2024 ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ಭಾರತಕ್ಕೆ ಚಾಂಪಿಯನ್ ಪಟ್ಟ ಒಲಿದಿತ್ತು. ಈ ಪ್ರವೃತ್ತಿ ಮುಂದುವರಿದರೆ, ಭಾರತ 2026 ರ ಟಿ20 ವಿಶ್ವಕಪ್ನಲ್ಲಿಯೂ ಚಾಂಪಿಯನ್ ಆಗಬಹುದು. ಏಕೆಂದರೆ ಈ ಬಾರಿಯೂ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿದೆ.
