T20 World Cup 2026: ಜಗದೀಸನ್ ಸ್ಫೋಟಕ ಶತಕ: ಭಾರತಕ್ಕೆ ಭರ್ಜರಿ ಜಯ – Kannada News | T20 World Cup 2026: India A beat US by 38 runs

ಟಿ20 ವಿಶ್ವಕಪ್​ನ 2ನೇ ಅಭ್ಯಾಸ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ನಾರಾಯಣ್ ಜಗದೀಸನ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದ ಬಳಿಕ ಪ್ರಿಯಾಂಶ್ ಆರ್ಯ (28) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ನಾರಾಯಣ್ ಜಗದೀಸನ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 55 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 105 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ 24 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 38 ರನ್ ಬಾರಿಸಿದರು. ಈ ಭರ್ಜರಿ ಇನಿಂಗ್ಸ್​ನೊಂದಿಗೆ ತಿಲಕ್ ವರ್ಮಾ ತಮ್ಮ ಫಿಟ್​​ನೆಸ್ ಅನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ಮುಂಬರುವ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಖಚಿತವಾಗಿದೆ.

ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಆಯುಷ್ ಬದೋನಿ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 60 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್​ ಕಲೆಹಾಕಿತು.

239 ರನ್​ಗಳ ಕಠಿಣ ಗುರಿ ಪಡೆದ ಯುಎಸ್​ಎ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 33 ಆಗುವಷ್ಟರಲ್ಲಿ ಇಬ್ಬರು ಪ್ರಮುಖ ದಾಂಡಿಗರನ್ನು ಕಳೆದುಕೊಂಡರು. ಇದಾಗ್ಯೂ ಆರಂಭಿಕ ಬ್ಯಾಟರ್ ಆ್ಯಂಡ್ರಿಸ್ ಗೌಸ್ 44 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಂಜಯ್ ಕೃಷ್ಣಮೂರ್ತಿ ಕೇವಲ 18 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 41 ರನ್ ಚಚ್ಚಿದರು. ಹಾಗೆಯೇ ಶುಭಮ್ ರಂಜಾನೆ 28 ರನ್​ಗಳ ಕೊಡುಗೆ ನೀಡಿದರೆ, ಹರ್ಮೀತ್ ಸಿಂಗ್ 25 ರನ್ ಬಾರಿಸಿದರು.

ಇದಾಗ್ಯೂ ಯುಎಸ್​ಎ ತಂಡವು 19.4 ಓವರ್​ಗಳಲ್ಲಿ 200 ರನ್​ ಕಲೆಹಾಕಿ ಆಲೌಟ್ ಆಯಿತು. ಈ ಮೂಲಕ ಭಾರತ ಎ ತಂಡವು 38 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ಎ ತಂಡ: ಆಯುಷ್ ಬದೋನಿ (ನಾಯಕ), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ವಿಪ್ರಾಜ್ ನಿಗಮ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮಯಾಂಕ್ ಯಾದವ್.

ಇದನ್ನೂ ಓದಿ: 402 ನಾಟೌಟ್… ಹೊಸ ಇತಿಹಾಸ ಬರೆದ ಜೋಸ್ ಬಟ್ಲರ್

ಯುಎಸ್​ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೇಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಮ್ ರಂಜಾನೆ.

Source link

Leave a Reply

Your email address will not be published. Required fields are marked *