ವೈಭವ್ ಸೂರ್ಯವಂಶಿ.. ವಯಸ್ಸು ಕೇವಲ 14 ವರ್ಷವಾಗಿದ್ದರೂ, ನನ್ನಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಘಟಾನುಘಟಿ ಬೌಲರ್ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
