ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್ 2027 (ICC U19 Women’s World Cup 2027) ಏಷ್ಯಾ ಕ್ವಾಲಿಫೈಯರ್‌ನಲ್ಲಿ ಇಂದು ಯುಎಇ ಮತ್ತು ಮಲೇಷ್ಯಾ (UAE vs Malaysia) ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವಿನ ಈ ರೋಮಾಂಚಕ ಪಂದ್ಯದಲ್ಲಿ ಯುಎಇ ಕೇವಲ 1 ರನ್ಗಳಿಂದ ಮಲೇಷ್ಯಾ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಯುಎಇ ಮಹಿಳಾ ತಂಡವು ಮೊದಲು ಬ್ಯಾಟ್ ಮಾಡಿ 19.3 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮಲೇಷ್ಯಾ ಪೂರ್ಣ 20 ಓವರ್‌ಗಳನ್ನು ಆಡಿ ಕೇವಲ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ 94 ರನ್‌ಗಳಿಸಲಷ್ಟೇ ಶಕ್ತವಾಯಿತು.
100 ರನ್‌ಗಳ ಗಡಿ ದಾಟಲಿಲ್ಲ
ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಈ ಏಷ್ಯಾ ಕ್ವಾಲಿಫೈಯರ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ಕೇವಲ ಎರಡಂಕಿ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಯುಎಇ ತಂಡ 19.3 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಆರಂಭಿಕ ಆಟಗಾರ್ತಿ ಅಲ್ ಮಸಿರಾ ಜಹಾಂಗೀರ್ 31 ರನ್ ಗಳಿಸಿದರೆ, ತಂಡದ ನಾಲ್ವರು ಬ್ಯಾಟರ್ಗಳು ರನೌಟ್ ಆದರು. ಹೀಗಾಗಿ ಯುಎಇ ತಂಡಕ್ಕೆ 100 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
1 ರನ್ ಸೋಲು
ಈ ಗುರಿ ಬೆನ್ನಟ್ಟಿದ ಮಲೇಷ್ಯಾ ಪೂರ್ಣ 20 ಓವರ್‌ಗಳನ್ನು ಆಡಿ ಕೇವಲ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ತಂಡವು ಕೇವಲ 94 ರನ್‌ಗಳಿಸಲಷ್ಟೇ ಶಕ್ತವಾಗಿ 1 ರನ್ನಿಂದ ಪಂದ್ಯವನ್ನು ಸೋತಿದ್ದು ಮಾತ್ರವಲ್ಲದೆ ವಿಶ್ವಕಪ್‌ಗೆ ಅರ್ಹತೆ ಪಡೆಯುವುದರಿಂದಲೂ ವಂಚಿತವಾಯಿತು. ತಂಡದ ಪರ ನುರಿನ್ ಇಮಾನಿನಾ 36 ರನ್ ಬಾರಿಸಿದರೆ, ಆರಂಭಿಕ ಆಟಗಾರ್ತಿ ನೂರ್ ಆಲಿಯಾ ಅವರ 25 ಎಸೆತಗಳಲ್ಲಿ 12 ರನ್‌ಗಳ ನಿಧಾನಗತಿಯ ಇನ್ನಿಂಗ್ಸ್ ತಂಡಕ್ಕೆ ದುಬಾರಿ ಎನಿಸಿತು.
IND vs ZIM: ವಿಶ್ವಕಪ್ ಫೈನಲ್‌ನಲ್ಲಿ 175 ರನ್! ಮತ್ತೆ ಅಬ್ಬರಿಸ್ತಾರಾ ವೈಭವ್?
ವಿಶ್ವಕಪ್‌ಗೆ ಅರ್ಹತೆ ಪಡೆದ ಯುಎಇ
ಮಹಾಕ್ ಠಾಕೂರ್ ನಾಯಕತ್ವದ ಯುಎಇ, ಇಡೀ ಅರ್ಹತಾ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಎಂಟು ತಂಡಗಳ ಈ ಟೂರ್ನಮೆಂಟ್‌ನಲ್ಲಿ, ಯುಎಇ ಫೈನಲ್ ಸೇರಿದಂತೆ ತನ್ನ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ವಿಶ್ವಕಪ್‌ಗೆ ಅರ್ಹತೆ ಗಳಿಸಿತು. ತಂಡವು ಈಗ 2027 ರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:00 pm, Thu, 30 July 26
