Ugadi 2026: ಮಾ.19ಕ್ಕೆ ಹೊಸ ವರ್ಷದ ಆರಂಭ; ಯುಗಾದಿ ಹಬ್ಬದ ಮಹತ್ವ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

Ugadi 2026: ಮಾ.19ಕ್ಕೆ ಹೊಸ ವರ್ಷದ ಆರಂಭ; ಯುಗಾದಿ ಹಬ್ಬದ ಮಹತ್ವ ಮತ್ತು ಆಚರಣೆಯ ಬಗ್ಗೆ ಇಲ್ಲಿದೆ ಮಾಹಿತಿ

ಯುಗಾದಿ ಹಬ್ಬದ ಆಚರಣೆ ಮತ್ತು ಅದರ ಹಿನ್ನೆಲೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ಅಗ್ರಮಾನ್ಯ ಸ್ಥಾನವಿದೆ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬವನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಭಿನ್ನತೆಯಿಂದ ಆಚರಿಸಲಾಗುತ್ತದೆ. ಯುಗಸ್ಯ ಆದಿ ಅಂದರೆ ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಯುಗಾದಿಯು ಪ್ರಕೃತಿಯಲ್ಲಿ ಹೊಸತನದ ಸಂಕೇತವಾಗಿ ನಿಲ್ಲುತ್ತದೆ. ಹಳೆಯ ಚಿಗುರನ್ನು ಬಿಟ್ಟು, ಹಳೆಯ ಎಲೆಗಳನ್ನು ಉದುರಿಸಿ ಹೊಸ ಚಿಗುರಿನಿಂದ ಪ್ರಕೃತಿ ಕಂಗೊಳಿಸುವ ವಸಂತ ಋತುವಿನಲ್ಲಿ ಯುಗಾದಿ ಬರುತ್ತದೆ. ಪಂಚಾಂಗದ ಪ್ರಕಾರ, ಚೈತ್ರ ಮಾಸದ ಪಾಡ್ಯಮಿಯಂದು ಯುಗಾದಿ ಆಚರಣೆ ಮಾಡಲಾಗುತ್ತದೆ.

ಈ ದಿನಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮದೇವನು ಇಡೀ ಸೃಷ್ಟಿಯನ್ನು ಈ ದಿನವೇ ಪ್ರಾರಂಭಿಸಿದನು ಎಂಬ ನಂಬಿಕೆಯಿದೆ. ಹಾಗಾಗಿ ಇದು ಹೊಸ ಕಾಲ, ಹೊಸ ಪ್ರಾರಂಭವನ್ನು ಸೂಚಿಸುತ್ತದೆ. ಪ್ರಕೃತಿಯು ವಸಂತ ಋತುವಿನ ಆಗಮನದೊಂದಿಗೆ ಹೊಸ ಸಂವತ್ಸರದ ಜನ್ಮದಿನವನ್ನು ಆಚರಿಸುತ್ತದೆ. ಇದು ಪ್ರಕೃತಿಯ ಪುನರುಜ್ಜೀವನವನ್ನು ಪ್ರತಿನಿಧಿಸುತ್ತದೆ. ಮರಗಿಡಗಳು ಚಿಗುರಿ, ಹೂವು ಅರಳಿ, ಕೋಗಿಲೆ ಇಂಪಾದ ಗಾಯನದಿಂದ ವಾತಾವರಣವನ್ನು ತುಂಬುತ್ತದೆ. ಇದು ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವಾಗಿದೆ.

ಯುಗಾದಿ ಹಬ್ಬದ ಆಚರಣೆಗಳು ಹಿಂದಿನ ದಿನವೇ ಪ್ರಾರಂಭವಾಗುತ್ತವೆ. ಮನೆಯನ್ನೆಲ್ಲಾ ಶುದ್ಧಗೊಳಿಸಿ ಮಾವಿನ ತೋರಣಗಳನ್ನು ಕಟ್ಟಲಾಗುತ್ತದೆ. ಹಬ್ಬದ ದಿನ ಅಭ್ಯಂಗ ಸ್ನಾನ ಮಾಡುವುದು ಪ್ರಮುಖ ಆಚರಣೆ. ಎಣ್ಣೆ ಹಚ್ಚಿ, “ಗಂಗೆಚ ಯಮುನೆಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಂ” ಎಂಬ ಸಪ್ತ ನದಿಗಳ ಮಂತ್ರವನ್ನು ಪಠಿಸಿ, ಬಿಸಿ ನೀರಿನಿಂದ ಸ್ನಾನ ಮಾಡಲಾಗುತ್ತದೆ. ಹೊಸ ಬಟ್ಟೆಗಳನ್ನು ಧರಿಸಿ ಕುಲದೇವರು, ಇಷ್ಟದೇವರು ಹಾಗೂ ಮನೆ ದೇವರನ್ನು ಆವಾಹಿಸಿ ಪೂಜೆ ಸಲ್ಲಿಸಲಾಗುತ್ತದೆ.

ಪಂಚಾಂಗ ಪೂಜೆಯು ಈ ಹಬ್ಬದ ಮತ್ತೊಂದು ವಿಶೇಷ. ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳ ವಿಚಾರವನ್ನು ಒಳಗೊಂಡಿರುವ ಪಂಚಾಂಗವನ್ನು ಪೂಜಿಸುವುದರಿಂದ ವರ್ಷವಿಡೀ ಶುಭ ಫಲಗಳು ಲಭಿಸಲಿ ಎಂದು ಪ್ರಾರ್ಥಿಸಲಾಗುತ್ತದೆ. ಸಂಧ್ಯಾಕಾಲದಲ್ಲಿ ಪಂಚಾಂಗ ಶ್ರವಣ ಮಾಡಲಾಗುತ್ತದೆ. ಪೂಜೆಯ ನಂತರ ಸಿಹಿ ಊಟ, ಅದರಲ್ಲೂ ಹೋಳಿಗೆ ಊಟವನ್ನು ಮಾಡುವುದು ವಾಡಿಕೆ.

ಪೂಜಾ ಕೈಂಕರ್ಯದಲ್ಲಿ ಬೇವು-ಬೆಲ್ಲ ನೈವೇದ್ಯಕ್ಕೆ ವಿಶೇಷ ಸ್ಥಾನವಿದೆ. ಇದು ಜೀವನದ ಕಷ್ಟ-ಸುಖಗಳ ಸಮತೋಲನವನ್ನು ತೋರಿಸುತ್ತದೆ. ಬೇವು ಕಹಿಯನ್ನೂ, ಬೆಲ್ಲ ಸಿಹಿಯನ್ನೂ ಪ್ರತಿನಿಧಿಸುತ್ತದೆ, ಜೀವನದಲ್ಲಿ ಇವೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶ ನೀಡುತ್ತದೆ. ಬೇವು-ಬೆಲ್ಲ ಸೇವಿಸುವಾಗ, “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶನಾಯ ನಿಂಬಕಂದಳ ಭಕ್ಷಣಂ” ಎಂಬ ಶ್ಲೋಕವನ್ನು ಪಠಿಸುವುದು ಸಂಪ್ರದಾಯ. ಇದರಿಂದ ಉತ್ತಮ ಆರೋಗ್ಯ, ರೋಗರುಜಿನಗಳಿಂದ ಮುಕ್ತಿ ಹಾಗೂ ಬಾಂಧವ್ಯಗಳ ಉತ್ತಮಿಕೆಯನ್ನು ನಿರೀಕ್ಷಿಸಲಾಗುತ್ತದೆ.

ಯುಗಾದಿಯ ದಿನ ಶ್ರೀರಾಮರ ಪಟ್ಟಾಭಿಷೇಕ ಮತ್ತು ಮತ್ಸ್ಯಾವತಾರದ ಸಂಭವಿಸಿದೆ ಎಂಬ ನಂಬಿಕೆಯೂ ಇದೆ. ಅಲ್ಲದೆ, ಶಾಲಿವಾಹನ ಶಕೆ ಪ್ರಾರಂಭವಾದ ದಿನವೂ ಇದೇ ಆಗಿದೆ. ಈ ವರ್ಷ ಪರಾಭವ ನಾಮ ಸಂವತ್ಸರವಾಗಿದ್ದು, 60 ವರ್ಷಗಳಲ್ಲಿ 40ನೇ ವರ್ಷವಾಗಿದೆ. ಈ ವರ್ಷದ ರಾಜ ಗುರು ಆಗಿದ್ದರೆ, ಮಂತ್ರಿ ಕುಜ ಮತ್ತು ಸೇನಾಧಿಪತಿ ಚಂದ್ರನಾಗಿರುತ್ತಾನೆ.

ಈ ಹಬ್ಬವು ಆರೋಗ್ಯ, ಅದೃಷ್ಟ, ಮಾನಸಿಕ, ವೈಜ್ಞಾನಿಕ ಮತ್ತು ಧಾರ್ಮಿಕವಾಗಿ ಹೊಸ ಚೈತನ್ಯ, ಶಕ್ತಿ ಮತ್ತು ಹೊಸತನವನ್ನು ನೀಡುತ್ತದೆ. ಯುಗಾದಿಯು ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗದಲ್ಲಿಯೂ ಮಹತ್ವವನ್ನು ಹೊಂದಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *