Vasthu Tips: ಈ ವಸ್ತುಗಳನ್ನು ಎಂದಿಗೂ ಯಾರಿಂದಲೂ ಪಡೆಯಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Traditional Beliefs: Items You Should Never Accept or Borrow for Prosperity

ಕೆಲವು ಪ್ರಾಚೀನ ನಂಬಿಕೆಗಳು ಮತ್ತು ಶಾಸ್ತ್ರಗಳ ಪ್ರಕಾರ, ಆಕಸ್ಮಿಕವಾಗಿ ನಾವು ಯಾರಿಂದಲಾದರೂ ಕೆಲವು ನಿರ್ದಿಷ್ಟ ವಸ್ತುಗಳನ್ನು ಪಡೆದುಕೊಂಡರೆ, ನಮ್ಮ ಅದೃಷ್ಟ, ಆರೋಗ್ಯ ಮತ್ತು ಹಣಕಾಸಿನ ಸ್ಥಿತಿ ಕುಂಠಿತವಾಗುವ ಸಾಧ್ಯತೆ ಇದೆ. ಹಾಗಾಗಿ, ಜೀವನದಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಅಥವಾ ಸಾಲವಾಗಿ ಪಡೆಯಬಾರದು ಎಂದು ಹೇಳಲಾಗುತ್ತದೆ. ಸಾಲವಾಗಿ ಪಡೆದು ವಾಪಸ್ ನೀಡಬಹುದಾದ ಕೆಲವು ವಸ್ತುಗಳಿಗೆ ಇದು ಅನ್ವಯಿಸುವುದಿಲ್ಲ, ಆದರೆ ಕೆಳಗೆ ನಮೂದಿಸಲಾದ ವಸ್ತುಗಳು ನಮ್ಮ ಜೀವನದಲ್ಲಿ ದೊಡ್ಡ ಪರಿಣಾಮ ಬೀರಬಹುದು. ಅಂತಹ ಪ್ರಮುಖ ವಸ್ತುಗಳು ಯಾವುವು ಮತ್ತು ಅವುಗಳನ್ನು ಪಡೆದರೆ ಎಂತಹ ಪರಿಣಾಮಗಳು ಎದುರಾಗಬಹುದು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಉಪ್ಪು:

ಯಾರಿಂದಲೂ ಉಪ್ಪನ್ನು ಪಡೆಯುವುದು ಅಷ್ಟು ಶುಭವಲ್ಲ. ಮನೆಯಲ್ಲಿ ತಕ್ಷಣಕ್ಕೆ ಉಪ್ಪಿನ ಅವಶ್ಯಕತೆ ಇದ್ದಾಗ ಪಕ್ಕದ ಮನೆಯವರಿಂದ ಅಥವಾ ಸ್ನೇಹಿತರಿಂದ ಉಪ್ಪನ್ನು ಕೇಳಿ ಪಡೆದರೆ, ಕುಟುಂಬದಲ್ಲಿ ಸಾಲಗಳು ಹೆಚ್ಚಾಗುತ್ತವೆ ಮತ್ತು ಅವುಗಳನ್ನು ತೀರಿಸುವುದು ಕಷ್ಟವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ, ಉಪ್ಪನ್ನು ಉಡುಗೊರೆಯಾಗಿ ಸ್ವೀಕರಿಸಬಾರದು ಅಥವಾ ಸಾಲವಾಗಿ ತೆಗೆದುಕೊಳ್ಳಬಾರದು.

ಅಡುಗೆ ಎಣ್ಣೆ:

ಅಡುಗೆಗೆ ಉಪಯೋಗಿಸುವ ಎಣ್ಣೆಯನ್ನು ಬೇರೆಯವರಿಂದ ತೆಗೆದುಕೊಂಡರೆ ಅದೃಷ್ಟ ಹೊರಟುಹೋಗುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳು ಅರ್ಧಂಬರ್ಧವಾಗುವ ಸಾಧ್ಯತೆ ಇರುತ್ತದೆ. “ಕೈಗೆ ಬಂತು ತುತ್ತು ಬಾಯಿಗೆ ಬರಲಿಲ್ಲ” ಎಂಬಂತೆ, ಮಾಡಿದ ಕೆಲಸಗಳಿಗೆ ಪೂರ್ಣ ಫಲ ಸಿಗುವುದಿಲ್ಲ. ಅದೃಷ್ಟವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅಡುಗೆ ಎಣ್ಣೆಯನ್ನು ಯಾರಿಂದಲೂ ಪಡೆಯುವುದು ಅಷ್ಟು ಶುಭವಲ್ಲ.

ಸೂಜಿ:

ಹೊಲಿಗೆ ಸೂಜಿ ಅಥವಾ ಹೂ ಕಟ್ಟುವ ಸೂಜಿಯನ್ನು ಯಾರಿಂದಲಾದರೂ ಪಡೆದರೆ, ನೀವು ಯಾರಿಂದ ಸೂಜಿಯನ್ನು ತೆಗೆದುಕೊಂಡಿರುತ್ತೀರೋ ಅವರೊಂದಿಗೆ ಒಂದಲ್ಲ ಒಂದು ದಿನ ಕಲಹಗಳುಂಟಾಗುತ್ತವೆ ಎಂದು ನಂಬಲಾಗಿದೆ. ಬಟ್ಟೆಗಳಿಗೆ ಹಾಕುವ ಪಿನ್‌ಗಳಿಗೂ ಇದು ಅನ್ವಯಿಸುತ್ತದೆ. ಇದರಿಂದ ಸಂಬಂಧಗಳಲ್ಲಿ ಕಹಿ ಉಂಟಾಗಬಹುದು.

ಎಳ್ಳು (ಕಪ್ಪೆಳ್ಳು ಅಥವಾ ಬಿಳಿ ಎಳ್ಳು):

ಕಪ್ಪೆಳ್ಳು ಅಥವಾ ಬಿಳಿ ಎಳ್ಳನ್ನು ಯಾರಿಂದಲಾದರೂ ಪಡೆದರೆ, ಮಂಕು ಬಡಿಯುತ್ತದೆ, ಕೆಲಸ ಕಾರ್ಯಗಳು ನಿಧಾನವಾಗುತ್ತವೆ, ಅದೃಷ್ಟ ದೂರವಾಗುತ್ತದೆ ಮತ್ತು ಎಲ್ಲಾ ಕೆಲಸಗಳು ಪೆಂಡಿಂಗ್ ಆಗಿ ಅರ್ಧಂಬರ್ಧವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, ಎಳ್ಳನ್ನು ಇತರರಿಂದ ಪಡೆಯುವುದು ಸೂಕ್ತವಲ್ಲ.

ಗಡಿಯಾರ:

ಯಾರಿಂದಲೂ ಗಡಿಯಾರವನ್ನು ಉಡುಗೊರೆಯಾಗಿ ಸ್ವೀಕರಿಸುವುದು ಅಥವಾ ಸಾಲವಾಗಿ ಪಡೆಯುವುದು ತಪ್ಪು. ಗಡಿಯಾರವನ್ನು ಪಡೆದರೆ, ನಿಮ್ಮ ಕೆಲಸ ಕಾರ್ಯಗಳ ಯೋಜನೆಗಳು ಪೂರ್ತಿ ವಿರುದ್ಧವಾಗಿ ಪರಿಣಮಿಸುತ್ತವೆ. ನೀವು ಹಾಕಿಕೊಂಡಿರುವ ಯೋಜನೆಗಳಾದ ಮನೆ ಕಟ್ಟುವಿಕೆ, ವಾಹನ ಖರೀದಿ, ಸಾಲ ಪಡೆಯುವುದು, ಮಕ್ಕಳ ಮದುವೆ ಅಥವಾ ಇನ್ನಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ನಂಬಲಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪೊರಕೆ:

ಮಹಿಳೆಯರು ಹೊಸ ಪೊರಕೆ ಇಲ್ಲದಿದ್ದಾಗ ಮತ್ತೊಬ್ಬರಿಂದ ಪೊರಕೆಯನ್ನು ಪಡೆದರೆ, ಆ ಮನೆಗೆ ಎಲ್ಲಾ ವಿಧದಲ್ಲೂ ಬಡತನ ಕಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ ಅದನ್ನು ಯಾರಿಂದಲೂ ಪಡೆಯಬಾರದು.

ಛತ್ರಿ (ಕೊಡೆ):

ಮಳೆಗಾಲದಲ್ಲಿ ಅಥವಾ ಪ್ರಯಾಣ ಮಾಡುವಾಗ ಛತ್ರಿ ಬೇಕಾದಾಗ ಇತರರಿಂದ ಎರವಲು ಪಡೆದರೆ, ಧನ ಹಾನಿ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಬಾಚಣಿಗೆ:

ಪ್ರಯಾಣದಲ್ಲಿರುವಾಗ ಅಥವಾ ಮನೆಯಲ್ಲಿ ಬಾಚಣಿಗೆ ಇಲ್ಲದಿದ್ದಾಗ ಇತರರಿಂದ ಬಾಚಣಿಗೆಯನ್ನು ಪಡೆದರೆ, ಇಲ್ಲದ ಕಾಯಿಲೆಗಳು ಮತ್ತು ಅನಾರೋಗ್ಯ ಕಾಡುತ್ತವೆ ಎಂದು ನಂಬಲಾಗಿದೆ. ದೇಹದ ಯಾವುದೋ ಒಂದು ಭಾಗದಲ್ಲಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *