ಭಾರತೀಯ ಸನಾತನ ಸಂಪ್ರದಾಯ ಮತ್ತು ವಾಸ್ತು ಶಾಸ್ತ್ರದಲ್ಲಿ ಶಬ್ದಕ್ಕೆ (ಧ್ವನಿ ತರಂಗಗಳು) ಅತ್ಯಂತ ವಿಶೇಷವಾದ ಸ್ಥಾನವಿದೆ. ಕೆಲವು ಪವಿತ್ರ ಶಬ್ದಗಳು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಅಂತಹ ಪವಿತ್ರ ವಸ್ತುಗಳಲ್ಲಿ ಪರಮ ಶಿವನ ಆಯುಧವಾದ ‘ಡಮರು’ ಮತ್ತು ಪೂಜಾ ಗಂಟೆ ಪ್ರಮುಖವಾದವು. ಇವುಗಳಿಂದ ಹೊರಹೊಮ್ಮುವ ಶಬ್ದವು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಲೇಖನದಲ್ಲಿ ಪೂಜಾ ಮಂಟಪದಲ್ಲಿ ಡಮರು ಇಡುವುದರಿಂದ ಆಗುವ ಪ್ರಯೋಜನಗಳು ಹಾಗೂ ಅವುಗಳನ್ನು ಇಡಬೇಕಾದ ಸರಿಯಾದ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
ಆರ್ಥಿಕ ಪ್ರಗತಿ ಮತ್ತು ಯಶಸ್ಸಿಗೆ ಡಮರು ಪರಿಹಾರ:
ವ್ಯಾಪಾರ, ವ್ಯವಹಾರ ಅಥವಾ ಉದ್ಯೋಗದಲ್ಲಿ ಆಗಾಗ್ಗೆ ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ ಡಮರು ಅತ್ಯುತ್ತಮ ವಾಸ್ತು ಪರಿಹಾರವಾಗಿದೆ. ವಾಸ್ತು ತಜ್ಞರ ಪ್ರಕಾರ, ಶಿವನನ್ನು ಭಕ್ತಿಯಿಂದ ಸ್ಮರಿಸುತ್ತಾ ಡಮರುಕವನ್ನು ನಿಯಮಿತವಾಗಿ ಬಾರಿಸಿದರೆ, ವೃತ್ತಿ ಜೀವನದ ಅಡೆತಡೆಗಳು ದೂರವಾಗುತ್ತವೆ. ಇದು ಹೊಸ ಹೊಸ ಉದ್ಯೋಗಾವಕಾಶಗಳು ಮತ್ತು ಆದಾಯದ ಮೂಲಗಳು ಹೊರಹೊಮ್ಮಲು ದಾರೀದೀಪವಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಡಮರು ಇಡುವುದರಿಂದ ಆರ್ಥಿಕ ಪ್ರಗತಿ ಸುಲಭವಾಗುತ್ತದೆ.
ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…
ಡಮರುಕವನ್ನು ಮನೆಯಲ್ಲಿಡುವಾಗ ಪಾಲಿಸಬೇಕಾದ ಮುಖ್ಯ ವಾಸ್ತು ನಿಯಮಗಳು:
ಡಮರುವನ್ನು ಮನೆಯಲ್ಲಿ ಇಡುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದರೆ ಮಾತ್ರ ಅದರ ಪೂರ್ಣ ಶುಭ ಫಲಿತಾಂಶಗಳು ನಮಗೆ ಸಿಗುತ್ತವೆ:
- ಸರಿಯಾದ ದಿಕ್ಕು: ಡಮರುಗವನ್ನು ಯಾವಾಗಲೂ ಮನೆಯ ಈಶಾನ್ಯ (North-East) ಅಥವಾ ಪೂರ್ವ (East) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭದಾಯಕ.
- ನೆಲದ ಮೇಲೆ ಇಡಬೇಡಿ: ಡಮರುಗವನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಅದನ್ನು ಯಾವಾಗಲೂ ಒಂದು ಸ್ವಚ್ಛವಾದ ಕೆಂಪು ಬಟ್ಟೆ ಅಥವಾ ವಿಶೇಷವಾದ ಸ್ಟ್ಯಾಂಡ್ ಮೇಲೆ ಇರಿಸಬೇಕು.
- ಶುದ್ಧತೆಗೆ ಆದ್ಯತೆ: ಕೊಳಕು ಅಥವಾ ಅಪವಿತ್ರ ಕೈಗಳಿಂದ ಡಮರುಕವನ್ನು ಮುಟ್ಟಬೇಡಿ. ಪೂಜೆಯ ಸಮಯದಲ್ಲಿ ಮಾತ್ರ ಭಕ್ತಿ ಮತ್ತು ಏಕಾಗ್ರತೆಯಿಂದ ಅದನ್ನು ಬಾರಿಸುವುದು ಸೂಕ್ತ.
- ಹಾನಿಗೊಳಗಾದ ವಸ್ತುಗಳ ನಿಷೇಧ: ಮನೆಯಲ್ಲಿ ಯಾವುದೇ ಕಾರಣಕ್ಕೂ ಮುರಿದ ಅಥವಾ ಹಾನಿಗೊಳಗಾದ ಡಮರುಗ ಇಡಬಾರದು. ಒಡೆದ ವಸ್ತುಗಳನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ಪೂಜಾ ಪರಿಕರಗಳನ್ನು ಕೇವಲ ಅಲಂಕಾರಿಕ ವಸ್ತುವಾಗಿ ನೋಡದೆ, ಅವುಗಳಿಗೆ ಪವಿತ್ರ ಸ್ಥಾನ ನೀಡಿ ಗೌರವಿಸಬೇಕು. ನಿಯಮಿತವಾಗಿ ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡು, ಭಕ್ತಿಯಿಂದ ಬಳಸಿದರೆ ಮನೆಯಲ್ಲಿ ಸುಖ, ಶಾಂತಿ, ಮತ್ತು ಸಮೃದ್ಧಿ ನೆಲೆಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
