ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಎಡವಿದ್ದ ಕರ್ನಾಟಕ ತಂಡ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಜಾರ್ಖಂಡ್ ನೀಡಿದ್ದ 412 ರನ್ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿ ಗೆದ್ದ ಕರ್ನಾಟಕ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ 8ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ದೇವದತ್ ಪಡಿಕ್ಕಲ್, ಈ ಪಂದ್ಯದಲ್ಲೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 10 ಎಸೆತಗಳು ಬಾಕಿ ಇರುವಂತೆಯೇ ಜಯ ದಾಖಲಿಸಿತು. ಕರ್ನಾಟಕ ಪರ ಮಿಂಚಿದ ಪಡಿಕ್ಕಲ್ 124 ರನ್ಗಳ ಇನ್ನಿಂಗ್ಸ್ ಆಡಿದರೆ, ಕರುಣ್ ನಾಯರ್ ಕೂಡ ಅಜೇಯ 130 ರನ್ ಬಾರಿಸಿದರು.
