ಬೆಂಗಳೂರು, ಜುಲೈ 13: ಪ್ರೀತಿಯೇ ಹಾಗೆ, ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಸಂಗಾತಿಗೆ ಕಾರು, ಒಡವೆ ಹೀಗೆ ದುಬಾರಿ ಬೆಲೆಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ಬೆಂಗಳೂರಿನ (Bengaluru) ಆಟೋಚಾಲಕನು ಅಗಲಿದ ಮಡದಿಯನ್ನು ಮನಸ್ಸಿನಲ್ಲಿಟ್ಟು ಆರಾಧಿಸುತ್ತಿದ್ದೇನೆ. ಮಡದಿಯ ಫೋಟೋವನ್ನು ತನ್ನ ಆಟೋದಲ್ಲಿಟ್ಟು ಪೂಜಿಸುತ್ತಿದ್ದಾನೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಆಶೀಶ್ (asishmatthew) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಅಗಲಿದ ಮಡದಿ ಫೋಟೋ ಇಟ್ಟುಕೊಂಡಿದ್ದು, ಹೂವು ಇಟ್ಟು ದಿನ ನಿತ್ಯ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಆಶಿಶ್ ಬೆಂಗಳೂರಿನ ಈ ಆಟೋಚಾಲಕನನ್ನು ಮಾತನಾಡಿಸಿದ್ದಾನೆ. ಇದೇ ವೇಳೆ ಆಟೋ ಚಾಲಕ ನನ್ನ ಮಡದಿ, ನಮ್ಮನ್ನೆಲ್ಲಾ ಅಗಲಿ 8 ವರ್ಷ ಆಯ್ತು. ನನಗೆ ಮಗ, ಸೊಸೆ ಆರು ಜನ ಮೊಮ್ಮಕ್ಕಳು ಹಾಗೂ ನನ್ನ ಜತೆಗೆ ದೊಡ್ಡ ಕುಟುಂಬವೇ ಇದೆ. ಆದರೆ ನನ್ನ ಹೆಂಡ್ತಿನಾ ಮರೆಯೋಕೆ ಆಗಲ್ಲ ಎಂದಿದ್ದಾನೆ.
ನನ್ನ ಮಗ ಮನೆಯಲ್ಲಿರು, ಕೆಲಸ ಮಾಡ್ಬೇಡ ಎಂದು ಹೇಳ್ತಾನೆ. ಆದರೆ ಮನೆಯಲ್ಲಿದ್ರೆ ನಂಗೆ ಟೆನ್ಶನ್ ಜಾಸ್ತಿ ಆಗ್ತದೆ. ಹೊರಗಡೆ ಬಂದ್ರೆ ಹೊಸ ಜನರ ಜತೆಗೆ ಮಾತಾಡ್ತಾ ಇದ್ರೆ ಮೈಂಡ್ ಫ್ರೀ ಆಗುತ್ತೆ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್
ಈ ವಿಡಿಯೋ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಖುಷಿನೂ ಆಯ್ತು, ಬೇಜಾರ್ ಕೂಡ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಪರಿಶುದ್ಧ ಪ್ರೀತಿ ಎಷ್ಟು ಚಂದ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಾವು ಅವಳನ್ನು ಅವನಿಂದ ದೂರ ಮಾಡಿರಬಹುದು.. ಆದರೆ ಪ್ರೀತಿ ಮಾತ್ರ ಸದಾ ಜೀವಂತ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:00 am, Mon, 13 July 26